ಮಾಹಿತಿ ಇರುವಲ್ಲಿ ಹೋಗಲು

ಬೈಬಲಲ್ಲಿ ಇರೋ ವಿಷಯಗಳು ಒಂದೊಂದು ಕಡೆ ಒಂದೊಂದು ತರ ಇದ್ಯಾ?

ಬೈಬಲಲ್ಲಿ ಇರೋ ವಿಷಯಗಳು ಒಂದೊಂದು ಕಡೆ ಒಂದೊಂದು ತರ ಇದ್ಯಾ?

ಬೈಬಲ್‌ ಕೊಡೋ ಉತ್ರ:

 ಇಲ್ಲ, ಬೈಬಲಲ್ಲಿ ಎಲ್ಲೂ ಆ ತರ ಇಲ್ಲ. ಕೆಲವೊಂದು ಘಟನೆಗಳನ್ನ ಮೇಲ್ಮೇಲೆ ಓದಿದಾಗ ನಮಗೆ ಹಾಗನಿಸಬಹುದು. ಆದ್ರೆ ನಾವು ಕೆಲವೊಂದು ವಿಷ್ಯಗಳನ್ನ ಮನಸ್ಸಲ್ಲಿಟ್ಟು ಓದುವಾಗ ಬೈಬಲಲ್ಲಿ ಒಂದೊಂದ್‌ ಕಡೆ ಒಂದೊಂದ್‌ ತರ ಇಲ್ಲ ಅಂತ ಅರ್ಥ ಆಗುತ್ತೆ. ಆ ವಿಷ್ಯಗಳು ಯಾವುದು ಅಂತ ಈಗ ನೋಡೋಣ.

  1.   ಒಂದು ಘಟನೆ ಬಗ್ಗೆ ಓದುವಾಗ ಅಲ್ಲಿ ಯಾವ ವಿಷ್ಯದ ಬಗ್ಗೆ ಮಾತಾಡ್ತಿದ್ದಾರೆ ಅಂತ ಮೊದ್ಲು ಅರ್ಥ ಮಾಡ್ಕೊಬೇಕು. ಅದನ್ನ ಅರ್ಥ ಮಾಡ್ಕೊಳ್ಳಿಲ್ಲಾಂದ್ರೆ ಬೈಬಲನ್ನಷ್ಟೇ ಅಲ್ಲ ಯಾವ ಪುಸ್ತಕ ಓದಿದ್ರೂ ಒಂದೊಂದ್‌ ಕಡೆ ಒಂದೊಂದ್‌ ತರ ಹೇಳ್ತಿದ್ದಾರೆ ಅಂತನೇ ಅನ್ಸುತ್ತೆ.

  2.   ಆ ಘಟನೆನ ಬರೆದವ್ರ ಬಗ್ಗೆನೂ ಯೋಚ್ನೆ ಮಾಡಬೇಕು. ಒಂದೇ ಘಟನೆನ ಇಬ್ರು ಬರಹಗಾರರು ಕಣ್ಣಾರೆ ನೋಡಿದ್ರೂ ಅದನ್ನ ವಿವರಿಸೋ ರೀತಿ ಬೇರೆಬೇರೆ ತರ ಇರುತ್ತೆ. ಇಬ್ರೂ ಒಂದೇ ತರದ ಪದಗಳನ್ನ ಬಳಸಲ್ಲ ಅಥವಾ ಒಂದೇ ತರದ ಮಾಹಿತಿ ಕೊಡಲ್ಲ.

  3.   ಆ ಕಾಲ ಮತ್ತು ಆಗಿನ ಪದ್ಧತಿ ಹೇಗಿತ್ತು, ಯಾವೆಲ್ಲ ಘಟನೆಗಳು ನಡಿತು ಅನ್ನೋದನ್ನ ತಿಳ್ಕೊಬೇಕು.

  4.   ಬೈಬಲಲ್ಲಿ ಕೆಲವು ಪದಗಳನ್ನ ಅಲಂಕಾರಿಕವಾಗಿ ಅಥವಾ ಯಾವುದೋ ಒಂದು ವಿಷ್ಯನ ಸೂಚಿಸೋಕೆ ಬಳಸಿರ್ತಾರೆ. ಅದನ್ನೂ ನಾವು ಗಮನದಲ್ಲಿ ಇಟ್ಕೊಬೇಕು.

  5.   ಒಬ್ಬ ವ್ಯಕ್ತಿ ಒಂದು ಕೆಲಸ ಮಾಡಿದ್ದಾನೆ ಅಂತ ಹೇಳುವಾಗ ಅದನ್ನ ಅವನೇ ಖುದ್ದಾಗಿ ಮಾಡಿರಬೇಕು ಅಂತೇನಿಲ್ಲ. ಅದನ್ನ ಅವನ ಪರವಾಗಿ ಬೇರೆಯವರು ಕೂಡ ಮಾಡಿರಬಹುದು ಅನ್ನೋದನ್ನ ಮನಸ್ಸಲ್ಲಿ ಇಟ್ಕೊಬೇಕು. a

  6.   ಸರಿಯಾಗಿ ಭಾಷಾಂತರ ಆಗಿರೋ ಬೈಬಲನ್ನ ಓದಬೇಕು.

  7.   ಬೈಬಲಲ್ಲಿರೋ ವಿಷ್ಯಗಳಿಗೂ ಜನ್ರು ಇವತ್ತು ನಿಜ ಅಂತ ನಂಬ್ಕೊಂಡಿರೋ ತಪ್ಪಾದ ಬೋಧನೆಗಳಿಗೂ ಸಂಬಂಧ ಕಟ್ಟೋಕೆ ಹೋಗಬಾರದು.

 ಈ 7 ವಿಷ್ಯಗಳನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ಕೆಲವು ಉದಾಹರಣೆಗಳನ್ನ ನೋಡಿ.

1: ವಿಷ್ಯ ಏನು ಅಂತ ತಿಳ್ಕೊಳಿ

ದೇವರು ಏಳನೇ ದಿನ ವಿಶ್ರಾಂತಿ ಪಡ್ಕೊಂಡ್ರೂ ಇವತ್ತಿನ ತನಕ ಕೆಲಸ ಮಾಡ್ತಿದ್ದಾನೆ ಅಂತ ಹೇಗೆ ಹೇಳಬಹುದು? ಆದಿಕಾಂಡ ಪುಸ್ತಕದಲ್ಲಿ ದೇವರು “ಎಲ್ಲ ಕೆಲಸ ಮುಗಿಸಿ ಏಳನೇ ದಿನ ವಿಶ್ರಾಂತಿ ಪಡಿಯೋಕೆ ಶುರು ಮಾಡಿದನು” ಅಂತ ಹೇಳುತ್ತೆ. (ಆದಿಕಾಂಡ 2:2-4) ಯೇಸು ಇನ್ನೊಂದು ಕಡೆ “ನನ್ನ ಅಪ್ಪ ಇವತ್ತಿಗೂ ಕೆಲಸಮಾಡ್ತಾ ಇದ್ದಾನೆ” ಅಂತ ಹೇಳಿದನು. (ಯೋಹಾನ 5:17) ಹಾಗಾದ್ರೆ ಆದಿಕಾಂಡದಲ್ಲಿ ಇರೋದು ತಪ್ಪು ಅಂತ ಯೇಸು ಹೇಳ್ತಿದ್ದಾನಾ? ಇಲ್ಲ. ಆದಿಕಾಂಡ ಪುಸ್ತಕದಲ್ಲಿ ಹೇಳಿರೋ ಕೆಲಸ ಯಾವುದಂದ್ರೆ, ದೇವರು ಈ ಭೂಮಿನ ಮತ್ತು ಅದ್ರಲ್ಲಿರೋದನ್ನ ಸೃಷ್ಟಿ ಮಾಡೋ ಕೆಲಸ. ಆ ಕೆಲಸ ಮುಗಿಸಿ ದೇವರು ಈಗ ವಿಶ್ರಾಂತಿ ಪಡ್ಕೊಂಡಿದ್ದಾನೆ. ಆದ್ರೆ ಯೇಸು ಹೇಳಿದ ಕೆಲ್ಸನೇ ಬೇರೆ. ದೇವರು ಬೈಬಲನ್ನ ಬರೆಸಿದ್ರ ಬಗ್ಗೆ, ಈಗ ತನ್ನ ಜನ್ರನ್ನ ಸರಿ ದಾರಿಯಲ್ಲಿ ನಡಿಸ್ತಿರೋದ್ರ ಬಗ್ಗೆ ಮತ್ತು ಅವ್ರನ್ನ ನೋಡ್ಕೊಳ್ತಿರೋದ್ರ ಬಗ್ಗೆ ಯೇಸು ಇಲ್ಲಿ ಹೇಳ್ತಿದ್ದಾನೆ. (ಕೀರ್ತನೆ 20:6; 105:5; 2 ಪೇತ್ರ 1:21) ಹಾಗಾಗಿ ದೇವರು ಇನ್ನೂ ಕೆಲಸ ಮಾಡ್ತಾ ಇದ್ದಾನೆ.

2 ಮತ್ತು 3: ಯಾರು ಬರೆದ್ರು? ಆ ಕಾಲದಲ್ಲಿ ಏನಾಗಿತ್ತು?

ಯೇಸು ಕುರುಡನನ್ನ ಎಲ್ಲಿ ವಾಸಿಮಾಡಿದನು? ಯೇಸು “ಯೆರಿಕೋ ಹತ್ರ ಬರ್ತಿದ್ದಾಗ” ಒಬ್ಬ ಕುರುಡನನ್ನ ವಾಸಿಮಾಡಿದನು ಅಂತ ಲೂಕ ಹೇಳಿದ. ಇದೇ ವಿಷ್ಯದ ಬಗ್ಗೆ ಮತ್ತಾಯ ಹೇಳುವಾಗ ಯೇಸು “ಯೆರಿಕೋದಿಂದ ಹೋಗ್ತಿರುವಾಗ” ಇಬ್ರು ಕುರುಡರನ್ನ ವಾಸಿಮಾಡಿದನು ಅಂತ ಹೇಳಿದ. (ಲೂಕ 18:35-43; ಮತ್ತಾಯ 20:29-34) ಇವ್ರಿಬ್ರೂ ಹೇಳ್ತಿರೋದು ತಪ್ಪಲ್ಲ. ಒಬ್ರು ಬರಿದೇ ಇರೋ ಮಾಹಿತಿನ ಇನ್ನೊಬ್ರು ಬರೆದಿದ್ದಾರೆ. ಅಂದ್ರೆ ಮತ್ತಾಯ ಎಷ್ಟು ಕುರುಡರು ಇದ್ರು ಅನ್ನೋದಕ್ಕೆ ಗಮನ ಕೊಟ್ಟಿದ್ದಾನೆ. ಆದ್ರೆ ಲೂಕ ಯೇಸು ಯಾರ ಹತ್ರ ಮಾತಾಡಿದನು ಅನ್ನೋದ್ರ ಮೇಲೆ ಗಮನ ಕೊಟ್ಟಿದ್ದಾನೆ ಅಷ್ಟೆ. ಇನ್ನು ಜಾಗದ ವಿಷ್ಯಕ್ಕೆ ಬರೋದಾದ್ರೆ ಆಗಿನ ಕಾಲದಲ್ಲಿ ಏನೇನಾಗಿತ್ತು ಅನ್ನೋದನ್ನೂ ನಾವು ಮನಸ್ಸಲ್ಲಿ ಇಡಬೇಕು. ಭೂಅಗೆತ ತಜ್ಞರು ಏನು ಕಂಡುಹಿಡಿದಿದ್ದಾರಂದ್ರೆ ಯೇಸು ಕಾಲದಲ್ಲಿ 2 ಯೆರಿಕೋ ಪಟ್ಟಣಗಳಿತ್ತು. ಹಳೇ ಪಟ್ಟಣ ಯೆಹೂದ್ಯರಿದ್ದ ನಗರದಲ್ಲಿತ್ತು. ಅಲ್ಲಿಂದ 1.5 ಕಿ.ಮೀ. ದೂರದಲ್ಲಿ ಹೊಸ ಯೆರಿಕೋ ಪಟ್ಟಣ ಇತ್ತು. ಅದು ರೋಮನ್ನರಿದ್ದ ನಗರದಲ್ಲಿತ್ತು. ಯೇಸು ಅದ್ಭುತ ಮಾಡುವಾಗ ಈ ಎರಡೂ ನಗರಗಳ ಮಧ್ಯದಲ್ಲಿ ಇದ್ದಿರಬೇಕು.

4: ಅಲಂಕಾರಿಕ ಮತ್ತು ಸೂಚಕ ಅರ್ಥ ಕೊಡೋ ಪದಗಳು

ಈ ಭೂಮಿ ನಾಶ ಆಗುತ್ತಾ? ಪ್ರಸಂಗಿ 1:4ರಲ್ಲಿ “ಭೂಮಿ ಶಾಶ್ವತವಾಗಿ ಇರುತ್ತೆ” ಅಂತ ಇದೆ. ಆದ್ರೆ 2 ಪೇತ್ರ 3:10ರಲ್ಲಿ “ಭೂಮಿಯೂ ಅದರಲ್ಲಿರುವ ಕೆಲಸಗಳೂ ಸುಟ್ಟುಹೋಗುವವು” ಅಂತ ಇದೆ. (ಸತ್ಯವೇದವು) ಬೈಬಲ್‌ “ಭೂಮಿ” ಅನ್ನೋ ಪದನ ಕೆಲವು ಕಡೆ ಭೂಗ್ರಹಕ್ಕೆ ಇನ್ನು ಕೆಲವು ಕಡೆ ಅದ್ರಲ್ಲಿರೋ ಜನ್ರಿಗೆ ಸೂಚಿಸುತ್ತೆ. (ಆದಿಕಾಂಡ 1:1; 11:1) ಹಾಗಾಗಿ 2 ಪೇತ್ರ 3:10ರಲ್ಲಿ ಭೂಮಿ ಬಗ್ಗೆ ಅಲ್ಲ, ‘ದೇವರ ಮೇಲೆ ಭಕ್ತಿ ಇಲ್ಲದಿರೋ ಮನುಷ್ಯರ’ ಬಗ್ಗೆ ಹೇಳ್ತಿದೆ.—2 ಪೇತ್ರ 3:7.

5: ಒಬ್ಬ ವ್ಯಕ್ತಿ ಒಂದು ಕೆಲಸನ ಬೇರೆಯವ್ರ ಕೈಯಿಂದ ಮಾಡಿಸಿದ್ರೂ ಅದನ್ನ ಅವನೇ ಮಾಡಿದ್ದು ಅಂತ ಅರ್ಥ

ಕಪೆರ್ನೌಮಿನಲ್ಲಿ ಯೇಸು ಹತ್ರ ಬಂದು ಬೇಡ್ಕೊಂಡಿದ್ದು ಯಾರು? ಮತ್ತಾಯ 8:5, 6ರಲ್ಲಿ ಒಬ್ಬ ಸೇನಾಧಿಕಾರಿ ಬಂದು ಯೇಸು ಹತ್ರ ಬೇಡ್ಕೊಂಡ ಅಂತ ಇದೆ. ಆದ್ರೆ ಲೂಕ 7:3ರಲ್ಲಿ ಆ ಸೇನಾಧಿಕಾರಿ ಯೆಹೂದ್ಯರ ಹಿರಿಯರಲ್ಲಿ ಕೆಲವ್ರನ್ನ ಯೇಸು ಹತ್ರ ಕಳಿಸಿದ ಅಂತ ಇದೆ. ಇಲ್ಲಿ ಆ ಸೇನಾಧಿಕಾರಿ ತನ್ನ ಪ್ರತಿನಿಧಿಗಳನ್ನ ಕಳಿಸಿದ್ರೂ ಅವ್ರ ಮೂಲಕ ಅವನೇ ಬೇಡ್ಕೊಳ್ತಿದ್ದಾನೆ ಅಂತ ಅರ್ಥ. ಅದಕ್ಕೇ ಮತ್ತಾಯ ಆ ತರ ಬರೆದ.

6: ಸರಿಯಾದ ಭಾಷಾಂತರ

ನಾವೆಲ್ರೂ ಪಾಪ ಮಾಡ್ತೀವಾ? ಹೌದು, ಮೊದಲನೇ ಮನುಷ್ಯನಾದ ಆದಾಮನಿಂದ ನಮ್ಮೆಲ್ರಿಗೂ ಪಾಪ ಬಂದಿದೆ ಅಂತ ಬೈಬಲ್‌ ಹೇಳುತ್ತೆ. (ರೋಮನ್ನರಿಗೆ 5:12) ಆದ್ರೆ 1 ಯೋಹಾನ 3:6ರಲ್ಲಿ ಒಳ್ಳೆ ವ್ಯಕ್ತಿ “ಪಾಪ ಮಾಡಲ್ಲ” ಅಥವಾ “ಪಾಪಮಾಡನು” ಅಂತ ಹೇಳುತ್ತೆ. (ಸತ್ಯವೇದವು) ಇದನ್ನ ನೋಡಿದಾಗ ಬೈಬಲಲ್ಲಿ ಒಂದೊಂದ್‌ ಕಡೆ ಒಂದೊಂದ್‌ ತರ ಇದೆ ಅಂತ ನಮಗೆ ಅನಿಸಬಹುದು. ಅದಕ್ಕೇ ನಾವು ಸರಿಯಾಗಿ ಭಾಷಾಂತರ ಆಗಿರೋ ಬೈಬಲನ್ನ ಓದಬೇಕು. 1 ಯೋಹಾನ 3:6ರಲ್ಲಿರೋ “ಪಾಪ” ಅನ್ನೋ ಪದಕ್ಕೆ ಗ್ರೀಕ್‌ ಭಾಷೆಯಲ್ಲಿ ವರ್ತಮಾನ ಕಾಲದ ಕ್ರಿಯಾಪದನ ಬಳಸಲಾಗಿದೆ. ಈ ಪದ ಒಂದು ಕ್ರಿಯೆಯನ್ನ ಮಾಡ್ತಾ ಇರೋದಕ್ಕೆ ಸೂಚಿಸುತ್ತೆ. ಹಾಗಾಗಿ 1 ಯೋಹಾನ 3:6ರಲ್ಲಿ ಹೇಳಿರೋ ಪಾಪ ಅನ್ನೋ ಪದ ಆದಾಮನಿಂದ ನಮಗೆ ಬಂದಿರೋ ಪಾಪ ಅಲ್ಲ, ದೇವರ ನಿಯಮಗಳ ಬಗ್ಗೆ ಚೆನ್ನಾಗಿ ಗೊತ್ತಿದ್ರೂ ಬೇಕು ಬೇಕಂತ ಮಾಡೋ ಪಾಪನ ಸೂಚಿಸುತ್ತೆ. ಅದಕ್ಕೇ ಈ ವಚನನ ಕೆಲವೊಂದು ಬೈಬಲ್‌ಗಳಲ್ಲಿ ಒಳ್ಳೆ ವ್ಯಕ್ತಿ “ಪಾಪ ಮಾಡ್ತಾ ಇರಲ್ಲ” ಅಥವಾ “ಪಾಪದಲ್ಲೇ ಮುಂದುವರಿಯುವುದಿಲ್ಲ” ಅಂತ ಸರಿಯಾಗಿ ಭಾಷಾಂತರ ಮಾಡಿದ್ದಾರೆ.—ಹೊಸ ಲೋಕ ಭಾಷಾಂತರ; ಪರಿಶುದ್ಧ ಬೈಬಲ್‌

7: ಜನ್ರು ಕಲಿಸೋದನ್ನ ಅಲ್ಲ ಬೈಬಲನ್ನ ನಂಬಿ

ಯೇಸು ದೇವರಿಗೆ ಸಮಾನನಾ ಅಥವಾ ದೇವರಿಗಿಂತ ಚಿಕ್ಕವನಾ? ಯೇಸು ಬೈಬಲಲ್ಲಿ ಒಂದ್‌ ಕಡೆ “ನಾನೂ ನನ್ನ ಅಪ್ಪ ಒಂದೇ” ಅಂತ ಹೇಳಿದನು. ಇನ್ನೊಂದ್‌ ಕಡೆ “ಅಪ್ಪ ನನಗಿಂತ ದೊಡ್ಡವನು” ಅಂತ ಹೇಳಿದನು. (ಯೋಹಾನ 10:30; 14:28) ಜನ್ರು ಕಲಿಸೋ ತ್ರಯೈಕ್ಯ ಬೋಧನೆನ ಮನ್ಸಲ್ಲಿ ಇಟ್ಕೊಂಡು ನಾವು ಇದನ್ನ ಓದಿದ್ರೆ ಯೇಸು ಒಂದೊಂದ್‌ ಕಡೆ ಒಂದೊಂದ್‌ ತರ ಹೇಳ್ತಿದ್ದಾನೆ ಅಂತ ನಮಗೆ ಅನಿಸಬಹುದು. ಆದ್ರೆ ಬೈಬಲ್‌ ಯಾವತ್ತೂ ನಮಗೆ ತ್ರಯೈಕ್ಯ ಬೋಧನೆನ ಕಲಿಸಲ್ಲ. ಹಾಗಾಗಿ ಈ ವಚನನ ನಾವು ಸರಿಯಾಗಿ ಅರ್ಥ ಮಾಡ್ಕೊಬೇಕಂದ್ರೆ ಯೆಹೋವ ಮತ್ತು ಯೇಸು ಬಗ್ಗೆ ಬೈಬಲ್‌ ನಿಜವಾಗ್ಲೂ ಏನ್‌ ಹೇಳುತ್ತೆ ಅಂತ ಹುಡುಕಬೇಕು. ಹೀಗೆ ನಾವು ಬೈಬಲನ್ನ ಓದುವಾಗ ಯೆಹೋವ ಯೇಸುವಿನ ಅಪ್ಪ ಅಷ್ಟೇ ಅಲ್ಲ ಆತನ ದೇವರು ಮತ್ತು ಯೇಸು ಈಗ್ಲೂ ಯೆಹೋವ ದೇವರನ್ನ ಆರಾಧಿಸ್ತಿದ್ದಾನೆ ಅಂತ ನಿಮಗೆ ಗೊತ್ತಾಗುತ್ತೆ. (ಮತ್ತಾಯ 4:10; ಮಾರ್ಕ 15:34; ಯೋಹಾನ 17:3; 20:17; 2 ಕೊರಿಂಥ 1:3) ಹಾಗಾಗಿ ಯೇಸು ದೇವರಿಗೆ ಸಮಾನ ಅಲ್ಲ.

 “ನಾನೂ ನನ್ನ ಅಪ್ಪ ಒಂದೇ” ಅಂತ ಯೇಸು ಹೇಳ್ದಾಗ ಆತನು ಯಾವ ವಿಷ್ಯದ ಬಗ್ಗೆ ಮಾತಾಡ್ತಿದ್ದನು ಅಂತ ನಾವು ಯೋಚ್ನೆ ಮಾಡಬೇಕು. ಆ ಅಧ್ಯಾಯದಲ್ಲಿ ಮುಂದೆ ಯೇಸು “ನಾನು ಮತ್ತು ಅಪ್ಪ ಆಪ್ತರಾಗಿ ಇದ್ದೀವಿ” ಅಂತ ಹೇಳಿದನು. (ಯೋಹಾನ 10:38) ಅಂದ್ರೆ ಇಲ್ಲಿ ಯೇಸು ‘ನಾನು ಮತ್ತು ಅಪ್ಪ ಯೋಚ್ನೆ ಮಾಡೋ ರೀತಿ ಒಂದೇ, ನಮ್ಮ ಮನಸ್ಸು ಒಂದೇ, ನಮ್ಮ ಉದ್ದೇಶ ಒಂದೇ’ ಅಂತ ಹೇಳ್ತಿದ್ದಾನೆ. ಇದೇ ತರ ತನ್ನ ಶಿಷ್ಯರೂ ಒಂದಾಗಿ ಇರ್ಬೇಕು ಅಂತ ಯೇಸು ಆಸೆಪಟ್ಟನು. ಅದಕ್ಕೇ ಆತನು ದೇವರ ಹತ್ರ “ನೀನು ನನಗೆ ಗೌರವ ಕೊಟ್ಟ ಹಾಗೆ ನಾನೂ ಅವ್ರಿಗೆ ಗೌರವ ಕೊಟ್ಟಿದ್ದೀನಿ. ಯಾಕಂದ್ರೆ ನಮ್ಮಿಬ್ರಲ್ಲೂ ಒಗ್ಗಟ್ಟು ಇರೋ ಹಾಗೆ ಅವ್ರಲ್ಲೂ ಒಗ್ಗಟ್ಟು ಇರಬೇಕು. ಅವ್ರಲ್ಲಿ ಒಡಕು ಅನ್ನೋದೇ ಬರಬಾರದು” ಅಂತ ಪ್ರಾರ್ಥನೆ ಮಾಡಿದನು.—ಯೋಹಾನ 17:22, 23.

a ಉದಾಹರಣೆಗೆ, ಎನ್‌ಸೈಕ್ಲೊಪೀಡಿಯ ಬ್ರಿಟಾನಿಕಾದಲ್ಲಿ ತಾಜ್‌ಮಹಲ್‌ ಬಗ್ಗೆ ಇರೋ ಒಂದು ಲೇಖನ “ಅದನ್ನ ಮೊಘಲರ ಸುಲ್ತಾನ ಶಹಜಹಾನ್‌ ಕಟ್ಟಿದ” ಅಂತ ಹೇಳ್ತು. ಅಂದ್ರೆ ಅದ್ರ ಅರ್ಥ ಅವನೇ ಖುದ್ದಾಗಿ ಅದನ್ನ ಕಟ್ಟಿದ ಅಂತನಾ? ಇಲ್ಲ ತಾನೇ? “ಅವನು 20,000ಕ್ಕಿಂತ ಜಾಸ್ತಿ ಕೆಲಸಗಾರರನ್ನ ಇಟ್ಟು ಅದನ್ನ ಕಟ್ಟಿಸಿದ” ಅಂತ ಆ ಲೇಖನ ಮುಂದಕ್ಕೆ ಹೇಳುತ್ತೆ.