ಮಾಹಿತಿ ಇರುವಲ್ಲಿ ಹೋಗಲು

ಯುವಜನರ ಪ್ರಶ್ನೆಗಳು

ಸೋಶಿಯಲ್‌ ಮೀಡಿಯಾ ಬಳಸೋಕೆ ಅಪ್ಪ-ಅಮ್ಮ ಬಿಟ್ಟಿಲ್ಲ ಅಂದ್ರೆ ನಾನೇನು ಮಾಡ್ಲಿ?

ಸೋಶಿಯಲ್‌ ಮೀಡಿಯಾ ಬಳಸೋಕೆ ಅಪ್ಪ-ಅಮ್ಮ ಬಿಟ್ಟಿಲ್ಲ ಅಂದ್ರೆ ನಾನೇನು ಮಾಡ್ಲಿ?

 ನಿಮ್ಮ ಫ್ರೆಂಡ್ಸೆಲ್ಲಾ ಸೋಶಿಯಲ್‌ ಮೀಡಿಯಾ ಬಳಸ್ತಿರಬಹುದು, ಯಾವಾಗ್ಲೂ ಅದ್ರ ಬಗ್ಗೆನೇ ಮಾತಾಡ್ತಿರಬಹುದು. ನಿಮಗೆ ಸೋಶಿಯಲ್‌ ಮೀಡಿಯಾ ಅಕೌಂಟ್‌ ಇಲ್ಲದೇ ಇರೋದ್ರಿಂದ ನಿಮ್ಮ ಬಗ್ಗೆ ತಮಾಷೆನೂ ಮಾಡಬಹುದು. ಇಂಥ ಪರಿಸ್ಥಿತಿಯಲ್ಲಿ ನೀವು ಇದ್ದೀರಾ? ಮೊದಲು ಈ ವಿಷ್ಯದಲ್ಲಿ ನಿಮಗೆ ಏನು ಗೊತ್ತಿರಬೇಕು ಮತ್ತು ಏನು ಮಾಡಬೇಕು ಅಂತ ತಿಳ್ಕೊಳ್ಳಿ.

ನೀವು ಯಾವ ವಿಷಯ ತಿಳ್ಕೊಳ್ಳಬೇಕು?

 ಸೋಶಿಯಲ್‌ ಮೀಡಿಯಾ ಬಳಸದೆ ಇರೋರು ನೀವೊಬ್ಬರೇ ಅಲ್ಲ. ತುಂಬಾ ಅಪ್ಪ-ಅಮ್ಮ ತಮ್ಮ ಮಕ್ಕಳಿಗೆ ಸೋಶಿಯಲ್‌ ಮೀಡಿಯಾ ಬಳಸೋಕೆ ಬಿಡಲ್ಲ. ಅದಕ್ಕೆ ಈ ಕಾರಣಗಳಿರಬಹುದು:

  •   ಖಿನ್ನತೆ ಅಥವಾ ಇತರ ಮಾನಸಿಕ ಸಮಸ್ಯೆ ಬರಬಹುದು.

  •   ಅಶ್ಲೀಲ ಚಿತ್ರಗಳು, ಅಶ್ಲೀಲ ಮೆಸೆಜ್‌ಗಳು ಹಾಗೂ ಆನ್‌ಲೈನ್‌ ಬೆದರಿಕೆಗೆ ಒಳಗಾಗಬಹುದು.

  •   ಫ್ರೆಂಡ್ಸ್‌ ಮಧ್ಯೆ ಬೇಡದೇ ಇರೋ ಸಮಸ್ಯೆಗಳು ಬರಬಹುದು.

 ತುಂಬಾ ಯುವಜನರು ಸೋಶಿಯಲ್‌ ಮೀಡಿಯಾ ಬಳಸೋದನ್ನ ನಿಲ್ಲಿಸಿದ್ದಾರೆ. ಇದನ್ನ ಬಳಸೋದ್ರಿಂದ ಒಳ್ಳೇದಕ್ಕಿಂತ ಕೆಟ್ಟದ್ದೇ ಜಾಸ್ತಿ ಆಗ್ತಿದೆ ಅಂತ ಗೊತ್ತಾಗಿ ಅವರು ಬಳಸೋದನ್ನ ಬಿಟ್ಟಿದ್ದಾರೆ. ಇದ್ರ ಬಗ್ಗೆ ಕೆಲವು ಯುವಜನರು ತಮ್ಮ ಅಭಿಪ್ರಾಯ ಹೇಳಿದ್ದಾರೆ:

  •   ಸೋಶಿಯಲ್‌ ಮೀಡಿಯಾ ಬಳಸೋದ್ರಿಂದ ಒಳ್ಳೇ ಕೆಲಸ ಮಾಡೋಕೆ ಸಮಯನೇ ಸಿಗಲ್ಲ ಅಂತ ಪ್ರಿಸಿಲ್ಲಾ ಹೇಳ್ತಾರೆ.

  •   ಸೋಶಿಯಲ್‌ ಮೀಡಿಯಾ ಬಳಸ್ತಾ ಇದ್ದಿದ್ರಿಂದ ಕಂಪ್ಯೂಟರ್‌ನಲ್ಲಿ ಬೇಡದೇ ಇರೋ ವಿಷಯಗಳೆಲ್ಲಾ ಬರ್ತಿತ್ತು ಅಂತ ಜೆರೆಮಿ ಹೇಳ್ತಾರೆ.

  •   ನನ್ನ ಗಮನವೆಲ್ಲಾ ಬೇರೆಯವ್ರು ಏನ್‌ ಮಾಡ್ತಾರೆ ಅನ್ನೋದ್ರ ಮೇಲೆನೇ ಇರ್ತಿತ್ತು ಅಂತ ಬೇತನಿ ಹೇಳ್ತಾರೆ.

 “ನಾನು ನನ್ನ ಸೋಶಿಯಲ್‌ ಮೀಡಿಯಾ ಆ್ಯಪ್‌ ಡಿಲೀಟ್‌ ಮಾಡೋ ನಿರ್ಧಾರ ಮಾಡ್ದೆ. ನಾನು ಈ ರೀತಿ ಮಾಡಿದ್ದು ಒಳ್ಳೇದೇ ಆಯ್ತು, ಯಾಕಂದ್ರೆ ಈಗ ನನಗೆ ಪ್ರಾಮುಖ್ಯವಾದ ಕೆಲಸ ಮಾಡೋಕೆ ಸಮಯ ಸಿಗ್ತಿದೆ ಮತ್ತು ನಾನೀಗ ಖುಷಿಯಾಗಿದ್ದೀನಿ. ಇದನ್ನ ಡಿಲೀಟ್‌ ಮಾಡ್ದೆ ಅಂತ ಯಾವತ್ತೂ ಬೇಜಾರ್‌ ಪಡಲ್ಲ.”—ಸಿಯೆರಾ.

 “ಸೋಶಿಯಲ್‌ ಮೀಡಿಯಾ ಬಳಸೋದು ಇಷ್ಟು ದೊಡ್ಡ ಚಟ ಆಗುತ್ತೆ ಅಂತ ನಾನು ಅಂದ್ಕೊಂಡೇ ಇರಲಿಲ್ಲ. ನನ್ನ ಪೋಸ್ಟ್‌ ಬಗ್ಗೆ ಬೇರೆಯವರು ಹೇಗೆ ರಿಯಾಕ್ಟ್‌ ಮಾಡ್ತಾರೆ ಅಂತ ನಾನು ಜಾಸ್ತಿ ತಲೆ ಕೆಡಿಸಿಕೊಂಡಿದ್ದೆ. ಈ ಅಕೌಂಟ್‌ನ ಡಿಲೀಟ್‌ ಮಾಡೋದು ಅಷ್ಟು ಸುಲಭ ಆಗಿರಲಿಲ್ಲ, ಆದ್ರೆ ಡಿಲೀಟ್‌ ಮಾಡಿದ ಮೇಲೆ ನನಗೆ ತುಂಬಾ ಖುಷಿಯಾಯ್ತು. ಈಗ ನಾನು ನೆಮ್ಮದಿಯಿಂದ, ಶಾಂತಿಯಿಂದ ಇದ್ದೀನಿ.”—ಕೇಟ್‌.

ನೀವೇನು ಮಾಡಬಹುದು?

 ಅಪ್ಪ-ಅಮ್ಮ ಇಟ್ಟಿರೋ ರೂಲ್ಸ್‌ನ ಪಾಲಿಸಿ. ಅಪ್ಪ-ಅಮ್ಮ ಇಟ್ಟಿರೋ ರೂಲ್ಸ್‌ನ ಪಾಲಿಸೋವಾಗ ಬೇಜಾರ್‌ ಮಾಡ್ಕೊಬೇಡಿ, ಕೋಪ ಮಾಡ್ಕೊಬೇಡಿ. ಹೀಗೆ ನೀವು ಪ್ರೌಢರಾಗಿದ್ದೀರಾ ಅಂತ ತೋರಿಸಿ.

 ಬೈಬಲ್‌ ಹೇಳೋ ಮಾತು: “ಮೂರ್ಖ ತನ್ನ ಕೋಪವನ್ನೆಲ್ಲ ತೋರಿಸ್ತಾನೆ, ಆದ್ರೆ ವಿವೇಕಿ ಸಮಸ್ಯೆ ಕೊನೆ ಆಗೋ ತನಕ ಶಾಂತವಾಗಿ ಇರ್ತಾನೆ.”—ಜ್ಞಾನೋಕ್ತಿ 29:11.

 ಅಪ್ಪ-ಅಮ್ಮನಿಗೆ ಗೊತ್ತಿಲ್ದೆ ಸೋಶಿಯಲ್‌ ಮೀಡಿಯಾ ಬಳಸಿ ಅಥವಾ ಒಂದು ಸೀಕ್ರೆಟ್‌ ಅಕೌಂಟ್‌ ಓಪನ್‌ ಮಾಡಿ ಅಂತ ಕೆಲವರು ಹೇಳಬಹುದು. ಈ ರೀತಿ ಮಾಡಿದ್ರೆ ನೀವು ದೊಡ್ಡ ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಳ್ತೀರ. ಕದ್ದುಮುಚ್ಚಿ ಸೋಶಿಯಲ್‌ ಮೀಡಿಯಾ ಬಳಸಿದ್ರೆ ನೀವು ಸಮಾಧಾನವಾಗಿ ಇರೋಕಾಗಲ್ಲ. ತಪ್ಪು ಮಾಡ್ತಾ ಇದ್ದೀನಿ ಅಂತ ನಿಮ್ಮ ಮನಸ್ಸು ಚುಚ್ತಾ ಇರುತ್ತೆ. ಒಂದುವೇಳೆ ನಿಮ್ಮ ಅಪ್ಪಅಮ್ಮಗೆ ಈ ವಿಷಯ ಗೊತ್ತಾದ್ರೆ ಅವರು ನಿಮ್ಮ ಮೇಲೆ ಇಟ್ಟಿರೋ ನಂಬಿಕೆನೂ ಕಳ್ಕೊತೀರ.

 ಬೈಬಲ್‌ ಹೇಳೋ ಮಾತು: “ಎಲ್ಲ ವಿಷ್ಯದಲ್ಲೂ ಪ್ರಾಮಾಣಿಕವಾಗಿ ಇರೋಕೆ ಬಯಸ್ತೀವಿ.”—ಇಬ್ರಿಯ 13:18.

 ನೀವೇ ನಿರ್ಧಾರ ಮಾಡಿ. ಸ್ವಲ್ಪ ಯೋಚನೆ ಮಾಡಿ ನೋಡಿದ್ರೆ ಮೇಲೆ ಹೇಳಿದ ಯುವಕರ ತರಾನೇ ಸೋಶಿಯಲ್‌ ಮೀಡಿಯಾ ಬಳಸದೆ ಇರೋಕೆ ನಿಮಗೂ ಕಾರಣಗಳು ಸಿಗಬಹುದು. ಒಂದುವೇಳೆ ಸೋಶಿಯಲ್‌ ಮೀಡಿಯಾ ಬಳಸೋದು ಸರಿಯಲ್ಲ ಅಂತ ನಿಮಗೆ ಅನಿಸಿದ್ರೆ ನಿಮ್ಮ ಅಪ್ಪ ಅಮ್ಮ ಹೇಳ್ತಿದ್ದಾರೆ ಅಂತ ಅಲ್ಲ ನೀವೇ ಬಿಟ್ಟು ಬಿಡೋಕೆ ನಿರ್ಧಾರ ಮಾಡಿ. ಹೀಗೆ ಮಾಡಿದಾಗ ನಿಮ್ಮ ಸ್ನೇಹಿತರು ‘ಯಾಕೆ ನಿಂಗೆ ಸೋಶಿಯಲ್‌ ಮೀಡಿಯಾ ಅಕೌಂಟ್‌ ಇಲ್ಲ’ ಅಂತ ಕೇಳಿದ್ರೆ ಆಗ ನಿಮಗೆ ಬೇಜಾರಾಗಲ್ಲ, ‘ನಾನೇ ಬೇಡ ಅಂತ ತೀರ್ಮಾನ ಮಾಡಿದ್ದೀನಿ’ ಅಂತ ಧೈರ್ಯವಾಗಿ ಹೇಳಬಹುದು. ಆಗ ಅವರು ಗೇಲಿನೂ ಮಾಡಲ್ಲ.

 ನಮಗೆ ಇರೊ ಪಾಠ: ಅಪ್ಪ-ಅಮ್ಮ ಮತ್ತು ನೀವು ಇಬ್ಬರೂ ಸೇರಿ ಒಂದು ನಿರ್ಧಾರಕ್ಕೆ ಬನ್ನಿ. ಸದ್ಯಕ್ಕೆ ನೀವು ಸೋಶಿಯಲ್‌ ಮೀಡಿಯಾ ಇಲ್ಲದೇನೂ ಆರಾಮಾಗಿ ಇರಬಹುದು.