ಕುಟುಂಬಕ್ಕೆ ಬೇಕಾದ ವಿವೇಕ
ಮದುವೆ, ಮಕ್ಕಳು ಸೃಷ್ಟಿಕರ್ತ ದೇವರು ನಮಗೆ ಕೊಟ್ಟಿರೋ ವರ. ಅದಕ್ಕೆ ಪ್ರತಿಯೊಂದು ಕುಟುಂಬ ಸಂತೋಷವಾಗಿ ಇರಬೇಕು ಅಂತ ಪವಿತ್ರ ಗ್ರಂಥದಲ್ಲಿ ಕೆಲವು ಸಲಹೆಗಳನ್ನು ದೇವರು ಕೊಟ್ಟಿದ್ದಾರೆ. ಅದರಲ್ಲಿ ಕೆಲವು ಸಲಹೆಗಳ ಬಗ್ಗೆ ಈಗ ನೋಡೋಣ.
ಹೆಂಡತಿಯನ್ನು ಗಂಡ ಪ್ರೀತಿಸಬೇಕು
“ಗಂಡಂದಿರು ತಮ್ಮ ದೇಹವನ್ನ ಪ್ರೀತಿಸೋ ಹಾಗೆ ತಮ್ಮ ಹೆಂಡತಿಯರನ್ನ ಪ್ರೀತಿಸಬೇಕು. ಹೆಂಡತಿಯನ್ನ ಪ್ರೀತಿಸೋ ಗಂಡ ಅವನನ್ನೇ ಪ್ರೀತಿಸ್ತಾನೆ. ಯಾವನೂ ತನ್ನ ದೇಹವನ್ನ ದ್ವೇಷಿಸಲ್ಲ, ಅದನ್ನ ಪೋಷಿಸಿ ಪ್ರೀತಿಸಿ ಅಮೂಲ್ಯವಾಗಿ ನೋಡ್ತಾನೆ.”—ಎಫೆಸ 5:28, 29.
ಗಂಡ ಕುಟುಂಬದ ಯಜಮಾನ ಆಗಿದ್ದಾನೆ. (ಎಫೆಸ 5:23) ಆದರೆ ಒಬ್ಬ ಒಳ್ಳೇ ಗಂಡ ಒರಟಾಗಿ ನಡ್ಕೊಳಲ್ಲ. ತಾನು ಹೇಳಿದ್ದೆ ನಡೀಬೇಕಂತ ಹಟ ಹಿಡಿಯಲ್ಲ. ಅವನು ಹೆಂಡತಿಯನ್ನು ಚೆನ್ನಾಗಿ ನೋಡ್ಕೊಳ್ತಾನೆ. ಅವಳ ಮನಸ್ಸಿಗೆ ನೋವು ಮಾಡಲ್ಲ. ತನಗೆ ಏನು ಇಷ್ಟನೋ ಅದನ್ನು ಮಾತ್ರ ಮಾಡ್ದೆ ಹೆಂಡತಿಗೆ ಇಷ್ಟ ಆಗಿರೋದನ್ನೂ ಮಾಡ್ತಾನೆ. (ಫಿಲಿಪ್ಪಿ 2:4) ಮನಸ್ಸು ಬಿಚ್ಚಿ ಮಾತಾಡ್ತಾನೆ. ಅವಳು ಮಾತಾಡುವಾಗಲೂ ಚೆನ್ನಾಗಿ ಕೇಳಿಸ್ಕೊಳ್ತಾನೆ. ಅವನು ಹೆಂಡತಿ ಮೇಲೆ “ಕೆಂಡ ಕಾರಲ್ಲ.” ಅವಳಿಗೆ ಹೊಡೆಯೋದು ಬಡಿಯೋದಾಗಲಿ, ಅವಳ ಮನಸ್ಸಿಗೆ ನೋವಾಗೋ ತರ ನಡ್ಕೊಳ್ಳೋದಾಗಲಿ ಮಾಡಲ್ಲ.—ಕೊಲೊಸ್ಸೆ 3:19.
ಗಂಡನಿಗೆ ಹೆಂಡತಿ ಗೌರವ ಕೊಡಬೇಕು
“ಹೆಂಡತಿ ತನ್ನ ಗಂಡನಿಗೆ ಆಳವಾದ ಗೌರವ ಕೊಡಬೇಕು.”—ಎಫೆಸ 5:33.
ಕುಟುಂಬದಲ್ಲಿ ಸಂತೋಷ ಇರಬೇಕಾದರೆ ಹೆಂಡತಿ ಗಂಡನಿಗೆ ಗೌರವ ಕೊಡಬೇಕು. ಗಂಡ ತೀರ್ಮಾನ ತಗೊಳ್ಳುವಾಗ ಅವಳು ಅದಕ್ಕೆ ಬೆಂಬಲ ಕೊಡಬೇಕು. ಒಂದುವೇಳೆ ಗಂಡ ಏನಾದ್ರೂ ತಪ್ಪು ಮಾಡಿದ್ರೆ ಯಾವಾಗ್ಲೂ ಚುಚ್ಚಿ ಚುಚ್ಚಿ ಹೇಳಲ್ಲ ಅಥವಾ ರಂಪಾಟ ಮಾಡಲ್ಲ. ಸಮಾಧಾನವಾಗಿ ಇರ್ತಾಳೆ ಮತ್ತು ಗಂಡನಿಗೆ ಗೌರವ ಕೊಡ್ತಾಳೆ. (1 ಪೇತ್ರ 3:4) ಗಂಡನ ಹತ್ರ ಏನಾದ್ರೂ ಸಮಸ್ಯೆ ಬಗ್ಗೆ ಹೇಳುವಾಗ ಸರಿಯಾದ ಸಮಯ ನೋಡಿ ಮಾತಾಡ್ತಾಳೆ ಮತ್ತೆ ಅದನ್ನ ಗೌರವದಿಂದ ಹೇಳ್ತಾಳೆ.—ಪ್ರಸಂಗಿ 3:7.
ದಾಂಪತ್ಯ ದ್ರೋಹ ಮಾಡಬೇಡಿ
“ಪುರುಷ . . . ಹೆಂಡತಿ ಜೊತೆ ಇರ್ತಾನೆ. ಅವರಿಬ್ರು ಒಂದೇ ದೇಹ ಆಗ್ತಾರೆ.”—ಆದಿಕಾಂಡ 2:24.
ಹುಡುಗ ಹುಡುಗಿ ಮದುವೆ ಆದಾಗ ಅವರ ಮಧ್ಯೆ ಬಲವಾದ ಬಂಧ ಶುರುವಾಗುತ್ತೆ. ಆ ಬಾಂಧವ್ಯ ಹಾಗೇ ಜೀವನ ಪೂರ್ತಿ ಇರಬೇಕಿದ್ರೆ ಅವರು ಮನಸ್ಸು ಬಿಚ್ಚಿ ಮಾತಾಡಬೇಕು ಮತ್ತೆ ಸಣ್ಣಪುಟ್ಟ ವಿಷ್ಯದಲ್ಲೂ ಪ್ರೀತಿಯಿಂದ ನಡ್ಕೊಬೇಕು. ಅವರು ಯಾವತ್ತೂ ಸಂಗಾತಿಗೆ ನಂಬಿಕೆ ದ್ರೋಹ ಮಾಡಲ್ಲ. ಅವರನ್ನ ಬಿಟ್ಟು ಬೇರೆ ಯಾರ ಜೊತೆನೂ ಲೈಂಗಿಕ ಸಂಬಂಧ ಇಟ್ಕೊಳ್ಳಲ್ಲ. ದಾಂಪತ್ಯ ದ್ರೋಹ ಕುಟುಂಬವನ್ನು ಒಡೆದುಹಾಕುತ್ತೆ. ಅವರಿಬ್ಬರ ಮಧ್ಯೆ ಇರೋ ನಂಬಿಕೆಯನ್ನ ಚೂರುಚೂರು ಮಾಡುತ್ತೆ.—ಇಬ್ರಿಯ 13:4.
ಮಕ್ಕಳಿಗೆ ತರಬೇತಿ ಕೊಡಿ
“ಸರಿ ದಾರಿಯಲ್ಲಿ ನಡಿಯೋಕೆ ಮಗುಗೆ ತರಬೇತಿ ಕೊಡು, ವಯಸ್ಸಾದ ಮೇಲೂ ಅವನು ಆ ದಾರಿ ಬಿಟ್ಟು ಹೋಗಲ್ಲ.”—ಜ್ಞಾನೋಕ್ತಿ 22:6, ಪಾದಟಿಪ್ಪಣಿ.
ಮಕ್ಕಳಿಗೆ ತರಬೇತಿ ಕೊಡೋ ಜವಾಬ್ದಾರಿ ದೇವರು ಅಪ್ಪಅಮ್ಮಗೆ ಕೊಟ್ಟಿದ್ದಾರೆ. ಮಕ್ಕಳು ಹೇಗೆ ನಡ್ಕೊಬೇಕು ಅಂತ ಕಲಿಸೋ ಮೊದಲು ಅಪ್ಪಅಮ್ಮ ಅದನ್ನ ಮಾಡಬೇಕು. (ಧರ್ಮೋಪದೇಶಕಾಂಡ 6:6, 7) ಮಕ್ಕಳು ತಪ್ಪು ಮಾಡುವಾಗ ಅಪ್ಪಅಮ್ಮ ಅವರ ಮೇಲೆ ರೇಗಾಡಬಾರದು. ಯಾಕಂದ್ರೆ “ಕೇಳಿಸ್ಕೊಳ್ಳೋದನ್ನ ಜಾಸ್ತಿ ಮಾಡಿ, ಮಾತಾಡೋದನ್ನ ಕಮ್ಮಿ ಮಾಡಿ, ಬೇಗ ಕೋಪ ಮಾಡ್ಕೊಬೇಡಿ” ಅಂತ ಬೈಬಲ್ ಹೇಳುತ್ತೆ. (ಯಾಕೋಬ 1:19) ಅದಕ್ಕೆ ಮಕ್ಕಳು ತಪ್ಪು ಮಾಡಿದಾಗ ಅಪ್ಪಅಮ್ಮ ಕೋಪ ಮಾಡ್ಕೊಳ್ಳದೆ ಪ್ರೀತಿಯಿಂದ ತಿದ್ದಬೇಕು.
ಅಪ್ಪಅಮ್ಮನ ಮಾತು ಕೇಳಿ
“ಮಕ್ಕಳೇ, ನೀವು ನಿಮ್ಮ ಅಪ್ಪಅಮ್ಮನ ಮಾತು ಕೇಳಿ . . . ‘ನಿಮ್ಮ ಅಪ್ಪಅಮ್ಮಗೆ ಗೌರವ ಕೊಡಿ.’”—ಎಫೆಸ 6:1, 2.
ಮಕ್ಕಳು ಅಪ್ಪಅಮ್ಮನ ಮಾತು ಕೇಳಬೇಕು ಮತ್ತು ಅವರಿಗೆ ಗೌರವ ಕೊಡಬೇಕು. ಮಕ್ಕಳು ಹೀಗೆ ಮಾಡುವಾಗ ಅವರ ಕುಟುಂಬದಲ್ಲಿ ಎಲ್ಲರೂ ಸಂತೋಷ ಸಮಾಧಾನದಿಂದ ಇರ್ತಾರೆ. ಕೆಲಸಕ್ಕೆ ಹೋಗ್ತಿರೋ ಮಕ್ಕಳಾಗಿದ್ರೆ ಅವರು ಮನೆ ನೋಡಿಕೊಳ್ಳೋಕೆ ಹಣಸಹಾಯ ಮಾಡುವಾಗ ಅಪ್ಪಅಮ್ಮನಿಗೆ ತುಂಬ ಪ್ರಯೋಜನ ಆಗುತ್ತೆ.—1 ತಿಮೊತಿ 5:3, 4.