ನಾಡು-ನಿವಾಸಿಗಳು | ನ್ಯೂಜಿಲೆಂಡ್
ನ್ಯೂಜಿಲೆಂಡ್ ಸುತ್ತೋಣ ಬನ್ನಿ
ಸುಮಾರು 800 ವರ್ಷಗಳ ಹಿಂದೆ ಮಾವೊರಿ ಬುಡಕಟ್ಟಿನವರು ಸಾಗರದಲ್ಲಿ ಸಾವಿರಾರು ಮೈಲು ಪ್ರಯಾಣ ಮಾಡಿ ನ್ಯೂಜಿಲೆಂಡಿಗೆ ಬಂದು ನೆಲೆಸಿದರು. ತಾವು ಬಿಟ್ಟು ಬಂದ ಉಷ್ಣವಲಯದಲ್ಲಿರುವ ಪಾಲಿನೇಷಿಯದ ದ್ವೀಪಗಳಿಗೆ ಭಿನ್ನವಾದ ಭೂಪ್ರದೇಶವನ್ನು ಅವರಿಲ್ಲಿ ಕಂಡುಕೊಂಡರು. ಈ ಪ್ರದೇಶ ಬೆಟ್ಟ ಮತ್ತು ಹಿಮನದಿಗಳಿಂದ ಆವೃತವಾಗಿದ್ದು ಇಲ್ಲಿ ಹಿಮ ಬೀಳುತ್ತದೆ ಮತ್ತು ಬಿಸಿನೀರಿನ ಬುಗ್ಗೆಗಳಿವೆ. ಸುಮಾರು 500 ವರ್ಷಗಳ ನಂತರ ಇಲ್ಲಿ ದೂರದ ಯುರೋಪಿನಿಂದ ಇನ್ನೊಂದು ಜನಾಂಗದ ಜನರು ಬಂದು ನೆಲೆಸಿದರು. ಇಂದು ನ್ಯೂಜಿಲೆಂಡಿನ ಹೆಚ್ಚಿನವರಲ್ಲಿ ಆಂಗ್ಲೊ-ಸ್ಯಾಕ್ಸನ್ ಮತ್ತು ಪಾಲಿನೇಷಿಯನ್ ಮೂಲದ ಸಂಪ್ರದಾಯಗಳಿವೆ. ಇಲ್ಲಿನ ಶೇ.90ರಷ್ಟು ಜನರು ನಗರವಾಸಿಗಳು. ವೆಲಿಂಗ್ಟನ್ ಪಟ್ಟಣವು ಪ್ರಪಂಚದಲ್ಲೇ ಅತಿ ದಕ್ಷಿಣ ತುದಿಯಲ್ಲಿರುವ ರಾಜಧಾನಿ ಎಂಬ ಹೆಸರು ಪಡೆದಿದೆ.
ನ್ಯೂಜಿಲೆಂಡ್ ಬೇರೆ ದೇಶಗಳಿಂದ ಪ್ರತ್ಯೇಕವಾಗಿದ್ದರೂ ತನ್ನ ವೈವಿಧ್ಯಮಯ ಮತ್ತು ರಮಣೀಯ ಪ್ರಕೃತಿ ಸೌಂದರ್ಯದಿಂದಾಗಿ ಪ್ರತಿವರ್ಷ ಮೂವತ್ತು ಲಕ್ಷದಷ್ಟು ಪ್ರವಾಸಿಗರನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತದೆ.
ಇಲ್ಲಿ ಬಣ್ಣ-ಬಣ್ಣದ, ಭಿನ್ನ ಗಾತ್ರದ ವೈವಿಧ್ಯಮಯ ವನ್ಯಜೀವಿಗಳು ಮತ್ತು ಪ್ರಪಂಚದಲ್ಲೆಲ್ಲೂ ಇಲ್ಲದಷ್ಟು ಜಾತಿಯ ಹಾರಲಾಗದ ಪಕ್ಷಿಗಳಿವೆ. ಟುವಾಟರ ಎಂಬ ಹಲ್ಲಿಯ ಜಾತಿಗೆ ಸೇರಿದ ಸರೀಸೃಪದ ಬೀಡು ಇದೇ ಆಗಿದೆ. ಈ ಸರೀಸೃಪ ನೂರು ವರ್ಷ ಬದುಕುತ್ತದೆ! ನ್ಯೂಜಿಲೆಂಡ್ ಕೆಲವು ಜಾತಿಯ ಬಾವಲಿಗಳು, ಸಮುದ್ರದಲ್ಲಿರುವ ತಿಮಿಂಗಿಲ ಮತ್ತು ಡಾಲ್ಫಿನ್‌ಗಳಂಥ ಸಸ್ತನಿಗಳ ತವರೂರಾಗಿದೆ.
ಸುಮಾರು 120 ವರ್ಷಗಳಿಂದ ನ್ಯೂಜಿಲೆಂಡಿನಲ್ಲಿ ಯೆಹೋವನ ಸಾಕ್ಷಿಗಳಿದ್ದಾರೆ. ಅವರು ಇಲ್ಲಿ ನಿಊಯನ್, ರರಟಾಂಗನ್, ಸಮೋವನ್, ಟಾಂಗನ್ ಮುಂತಾದ ಪಾಲಿನೇಷಿಯನ್ ಭಾಷೆಗಳನ್ನು ಸೇರಿಸಿ ಕಡಿಮೆಪಕ್ಷ 19 ಭಾಷೆಗಳಲ್ಲಿ ಬೈಬಲನ್ನು ಕಲಿಸುತ್ತಾರೆ.