ದಂಪತಿಗಳಿಗಾಗಿ
2: ಸಹಕಾರ
ಅರ್ಥವೇನು?
ಸಹಕಾರದ ಮನೋಭಾವ ಇರುವ ಗಂಡ ಹೆಂಡತಿ, ಒಂದು ವಿಮಾನವನ್ನು ಒಟ್ಟಾಗಿ ಚಲಾಯಿಸುವ ವಿಮಾನ ಚಾಲಕ ಮತ್ತು ಸಹಾಯಕ ಚಾಲಕರಂತೆ ಇದ್ದಾರೆ. ಸಮಸ್ಯೆಗಳು ಎದುರಾದಾಗ ಗಂಡ ಹೆಂಡತಿ ಇಬ್ಬರೂ ಪ್ರತ್ಯೇಕವಾಗಿ ಪರಿಹಾರಗಳನ್ನು ಹುಡುಕುವ ಬದಲಿಗೆ ಒಟ್ಟಿಗೆ ಸೇರಿ ಬಗೆಹರಿಸಲು ಪ್ರಯತ್ನಿಸುತ್ತಾರೆ.
ಬೈಬಲ್ ತತ್ವ: “ಅವರು ಇನ್ನು ಮುಂದೆ ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ.”—ಮತ್ತಾಯ 19:6.
“ಮದುವೆ ಜೀವನ ಏಕಪಾತ್ರ ಅಭಿನಯವಲ್ಲ. ಆ ಜೀವನ ಯಶಸ್ವಿಯಾಗಲು ಗಂಡ ಹೆಂಡತಿ ಇಬ್ಬರೂ ಒಟ್ಟಾಗಿ ಕೆಲಸ ಮಾಡಬೇಕು.” —ಕ್ರಿಸ್ಟಫರ್.
ಯಾಕೆ ಮುಖ್ಯ?
ಗಂಡ ಹೆಂಡತಿ ಮಧ್ಯೆ ಸಹಕಾರ ಇಲ್ಲದಿದ್ದರೆ ಮನಸ್ತಾಪಗಳಾದಾಗ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಗಮನ ಕೊಡದೆ ತಪ್ಪು ಯಾರದ್ದು ಎನ್ನುವುದಕ್ಕೆ ಗಮನ ಹರಿಸುತ್ತಾರೆ. ಆಗ ಚಿಕ್ಕಪುಟ್ಟ ಸಮಸ್ಯೆಗಳು ಬೆಳೆದು ದೊಡ್ಡದಾಗುತ್ತವೆ.
“ಸಹಕಾರ ಮನೋಭಾವ ಮದುವೆ ಜೀವನದ ಜೀವಾಳ. ನಮ್ಮಿಬ್ಬರ ಮಧ್ಯೆ ಸಹಕಾರ ಇಲ್ಲದಿದ್ದರೆ ನಾನೂ ನನ್ನ ಗಂಡ ಮುಖ್ಯ ವಿಷಯಗಳ ಬಗ್ಗೆ ಬೇರೆಬೇರೆ ನಿರ್ಣಯ ಮಾಡುವ ರೂಮ್ಮೇಟ್ಸ್ ಆಗಿರುತ್ತೇವೆ ಅಷ್ಟೇ, ವಿವಾಹ ಸಂಗಾತಿಗಳಲ್ಲ.”—ಅಲೆಕ್ಸಾಂಡ್ರ.
ನೀವೇನು ಮಾಡಬಹುದು?
ನಿಮ್ಮನ್ನೇ ಪರೀಕ್ಷಿಸಿಕೊಳ್ಳಿ
-
ನಾನು ಸಂಪಾದಿಸಿದ ಹಣವೆಲ್ಲಾ “ನನಗೇ ಸೇರಿದ್ದು” ಎಂದು ಎಣಿಸುತ್ತೇನಾ?
-
ನನ್ನ ಸಂಗಾತಿಯಿಂದ ದೂರವಿದ್ದಾಗಲೇ ನನಗೆ ಹಾಯೆನಿಸುತ್ತದಾ?
-
ನನ್ನ ಸಂಗಾತಿಯ ಸಂಬಂಧಿಕರಿಂದ ದೂರವಿರುತ್ತೇನಾ, ಅವನು/ಅವಳು ಅವರಿಗೆ ಆಪ್ತರಾಗಿದ್ದರೂ ಹಾಗೆ ಮಾಡುತ್ತೇನಾ?
ಸಂಗಾತಿಯೊಂದಿಗೆ ಇದನ್ನು ಚರ್ಚಿಸಿ:
-
ನಮ್ಮ ಮದುವೆ ಜೀವನದಲ್ಲಿ ಯಾವ ವಿಷಯವನ್ನು(ಗಳನ್ನು) ಇಬ್ಬರೂ ಚೆನ್ನಾಗಿ ಸಹಕರಿಸಿ ಮಾಡುತ್ತೇವೆ?
-
ಯಾವ ವಿಷಯದಲ್ಲಿ(ಗಳಲ್ಲಿ) ಅಭಿವೃದ್ಧಿ ಮಾಡಿಕೊಳ್ಳಬೇಕಿದೆ?
-
ನಮ್ಮಿಬ್ಬರ ಮಧ್ಯೆ ಸಹಕಾರವನ್ನು ಹೆಚ್ಚಿಸಲಿಕ್ಕಾಗಿ ನಾವು ಯಾವೆಲ್ಲಾ ಹೆಜ್ಜೆಗಳನ್ನು ತೆಗೆದುಕೊಳ್ಳಬಹುದು?
ಕಿವಿಮಾತು
-
ಟೆನಿಸ್ ಆಟದಲ್ಲಿ ನೀವಿಬ್ಬರೂ ಎದುರಾಳಿಗಳಾಗಿದ್ದೀರೆಂದು ನೆನಸಿ. ಆದರೆ ನೀವು ನಿಮ್ಮ ಸಂಗಾತಿಯ ಜೊತೆಯಲ್ಲೇ ಒಂದೇ ತಂಡವಾಗಿ ಆಡಲು ಯಾವ ಹೆಜ್ಜೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ?
-
‘ನಾನು ಹೇಗೆ ಗೆಲ್ಲುವುದು?’ ಎಂದು ಯೋಚಿಸದೆ ‘ನಾವಿಬ್ಬರೂ ಹೇಗೆ ಗೆಲ್ಲುವುದು?’ ಎಂದು ಯೋಚಿಸಿ.
“ಯಾರು ಸರಿ, ಯಾರು ತಪ್ಪು ಎನ್ನುವುದನ್ನು ಮರೆತುಬಿಡಿ. ಅದು ಮುಖ್ಯವಲ್ಲ. ನಿಮ್ಮ ಮದುವೆ ಜೀವನದಲ್ಲಿ ಶಾಂತಿ, ಐಕ್ಯತೆ ಇರುವುದೇ ಮುಖ್ಯ.”—ಈತನ್.
ಬೈಬಲ್ ತತ್ವ: “ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ.”—ಫಿಲಿಪ್ಪಿ 2:3, 4, ಸತ್ಯವೇದವು ಭಾಷಾಂತರ.