ನಿಮಗೆ ಗೊತ್ತಿತ್ತಾ?
ಹಿಂಸೆ ಬಂದಾಗಲೂ ಶಿಷ್ಯನಾದ ಸ್ತೆಫನನು ಹೇಗೆ ಅಷ್ಟು ಶಾಂತವಾಗಿರಲು ಸಾಧ್ಯವಾಯಿತು?
ಸ್ತೆಫನನನ್ನು ಮುಗಿಸಿಬಿಡಬೇಕೆಂದು ಅವನ ಸುತ್ತ ಹದ್ದುಗಳಂತೆ ಜನ ಸುತ್ತಿಕೊಂಡಿದ್ದರು. ಆ ಜನರು ಇಸ್ರಾಯೇಲಿನ ಅತ್ಯುಚ್ಚ ನ್ಯಾಯಾಲಯವಾದ ಹಿರೀಸಭೆಯ ನ್ಯಾಯಾಧೀಶರು. ಒಟ್ಟು 71 ಮಂದಿ ಇದ್ದರು. ಅವರು ದೇಶದಲ್ಲೇ ಅತಿ ಪ್ರಭಾವಶಾಲಿ ವ್ಯಕ್ತಿಗಳು. ಅವರನ್ನು ಮಹಾ ಯಾಜಕನಾದ ಕಾಯಫ ಒಟ್ಟುಸೇರಿಸಿದ್ದನು. ಕೆಲವು ತಿಂಗಳ ಹಿಂದೆ ಇದೇ ಸಭೆ ಯೇಸುವಿಗೆ ಮರಣ ದಂಡನೆ ವಿಧಿಸಿದಾಗ ಈತನು ಮುಂದಾಳುತ್ವ ವಹಿಸಿದ್ದನು. (ಮತ್ತಾ. 26:57, 59; ಅ. ಕಾ. 6:8-12) ಅವರು ಒಬ್ಬರಾದ ಮೇಲೆ ಒಬ್ಬರು ಸುಳ್ಳು ಸಾಕ್ಷಿಗಳನ್ನು ಕರೆಸಿ ವಿಚಾರಣೆ ಮಾಡುತ್ತಾ ಇದ್ದಾಗ, ಸ್ತೆಫನನ ಮುಖ “ಒಬ್ಬ ದೇವದೂತನ ಮುಖದಂತೆ” ಪ್ರಕಾಶಮಾನವಾಗಿರುವುದನ್ನು ಕಂಡು ಆಶ್ಚರ್ಯಪಟ್ಟರು.—ಅ. ಕಾ. 6:13-15.
ಸ್ತೆಫನನು ಹೇಗೆ ಅಂಥ ಉದ್ವಿಗ್ನ ಪರಿಸ್ಥಿತಿಯಲ್ಲೂ ಗಾಬರಿಯಾಗದೆ, ಪ್ರಶಾಂತವಾಗಿ ಇದ್ದನು? ಹಿರೀಸಭೆಯ ಮುಂದೆ ಅವನನ್ನು ಎಳಕೊಂಡು ಬರುವ ಮುಂಚೆ ಅವನು ದೇವರ ಸೇವೆಯಲ್ಲಿ ಸಂಪೂರ್ಣವಾಗಿ ಮುಳುಗಿಹೋಗಿದ್ದನು. ಆಗ ಶಕ್ತಿಶಾಲಿಯಾದ ಪವಿತ್ರಾತ್ಮ ಅವನಿಗೆ ಸಹಾಯ ಮಾಡಿತು. (ಅ. ಕಾ. 6:3-7) ಅದೇ ಪವಿತ್ರಾತ್ಮ ಈ ಸನ್ನಿವೇಶದಲ್ಲೂ ಸಹಾಯ ಮಾಡಿತು. ಅವನು ಪ್ರಶಾಂತವಾಗಿರಲು ಮತ್ತು ದೇವರ ವಾಕ್ಯಗಳನ್ನು ಮನಸ್ಸಿಗೆ ತಂದುಕೊಳ್ಳಲು ಸಹಾಯ ಮಾಡಿತು. (ಯೋಹಾ. 14:16) ಸ್ತೆಫನನು ಹಿರೀಸಭೆಯ ಮುಂದೆ ಧೈರ್ಯವಾಗಿ ಮಾತಾಡಿದ್ದರ ಬಗ್ಗೆ ನಾವು ಅಪೊಸ್ತಲರ ಕಾರ್ಯಗಳು ಪುಸ್ತಕದ 7ನೇ ಅಧ್ಯಾಯದಲ್ಲಿ ಓದಬಹುದು. ಸ್ತೆಫನನು ಮಾತಾಡುವಾಗ ಹೀಬ್ರು ಶಾಸ್ತ್ರಗ್ರಂಥದಿಂದ ಸುಮಾರು 20ಕ್ಕಿಂತ ಹೆಚ್ಚು ಉಲ್ಲೇಖಗಳನ್ನು ಮಾಡುತ್ತಾನೆ. ಇದನ್ನು ನೆನಪಿಗೆ ತಂದುಕೊಳ್ಳಲು ಪವಿತ್ರಾತ್ಮ ಅವನಿಗೆ ಸಹಾಯ ಮಾಡಿತು. (ಯೋಹಾ. 14:26) ದೇವರ ಬಲಗಡೆಯಲ್ಲಿ ಯೇಸು ನಿಂತಿರುವ ದರ್ಶನವನ್ನು ಸ್ತೆಫನನು ಕಂಡಾಗ ಅವನ ನಂಬಿಕೆ ಇನ್ನೂ ಬಲವಾಯಿತು.—ಅ. ಕಾ. 7:54-56, 59, 60.
ಸ್ತೆಫನನಂತೆ ನಮಗೆ ಕೂಡ ಒಂದಿನ ಬೆದರಿಕೆ, ಹಿಂಸೆ ಬರಬಹುದು. (ಯೋಹಾ. 15:20) ಅದಕ್ಕಾಗಿ ನಾವು ದೇವರ ವಾಕ್ಯವನ್ನು ಪ್ರತಿದಿನ ಓದಬೇಕು ಮತ್ತು ಸೇವೆಯಲ್ಲಿ ಕ್ರಿಯಾಶೀಲವಾಗಿ ಪಾಲ್ಗೊಳ್ಳಬೇಕು. ಆಗ ಪವಿತ್ರಾತ್ಮ ನಮ್ಮಲ್ಲಿ ಕೆಲಸ ಮಾಡುತ್ತದೆ, ವಿರೋಧವನ್ನು ಎದುರಿಸಲು ಬಲ ಸಿಗುತ್ತದೆ ಮತ್ತು ನಮ್ಮ ಆಂತರಿಕ ಶಾಂತಿಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.—1 ಪೇತ್ರ 4:12-14.