ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಸೊಲೊಮೋನನ ಆಲಯದ ಮಂಟಪದ ಎತ್ತರ ಎಷ್ಟಿತ್ತು?

ಸೊಲೊಮೋನ ಕಟ್ಟಿದ ಆಲಯದ ಪವಿತ್ರ ಸ್ಥಳಕ್ಕೆ ಹೋಗೋಕೆ ಅದ್ರ ಮುಂದಿನ ಮಂಟಪವನ್ನ ದಾಟ್ಕೊಂಡು ಹೋಗಬೇಕಿತ್ತು. 2023ಕ್ಕಿಂತ ಮುಂಚೆ ಬಿಡುಗಡೆಯಾದ ಪವಿತ್ರ ಬೈಬಲ್‌ ಹೊಸ ಲೋಕ ಭಾಷಾಂತರದ ಆವೃತ್ತಿಗಳಲ್ಲಿ “ಆಲಯದ ಮುಂದಿನ ಮಂಟಪ 20 ಮೊಳ ಉದ್ದ ಇತ್ತು. ಅದು ದೇವಾಲಯದ ಅಗಲದಷ್ಟೇ ಇತ್ತು. ಅದ್ರ ಎತ್ತರ 120 ಇತ್ತು” ಅಂತ ಇದೆ. (2 ಪೂರ್ವ. 3:4) ಬೇರೆ ಭಾಷಾಂತರಗಳಲ್ಲೂ ಈ ಮಂಟಪ “120 ಮೊಳ” ಎತ್ತರ ಇತ್ತು ಅಂತ ಇದೆ. ಅಂದ್ರೆ 53 ಮೀಟರ್‌ ಅಥವಾ 175 ಅಡಿ!

ಆದ್ರೆ 2023ರಲ್ಲಿ ಪ್ರಿಂಟಾದ ಹೊಸ ಲೋಕ ಭಾಷಾಂತರದಲ್ಲಿ ಸೊಲೊಮೋನನ ಆಲಯದ ಮಂಟಪದ “ಎತ್ತರ 20 ಮೊಳ ಇತ್ತು” ಅಂತ ಇದೆ. ಅಂದ್ರೆ 9 ಮೀಟರ್‌ ಅಥವಾ 30 ಅಡಿ ಎತ್ತರ. a 120 ಅಂತ ಇದ್ದಿದ್ದನ್ನ 20 ಅಂತ ಮಾಡೋಕೆ ಕಾರಣಗಳೇನು?

1 ಅರಸು 6:3ರಲ್ಲಿ ಮಂಟಪದ ಎತ್ತರ ಎಷ್ಟಿತ್ತು ಅಂತ ಹೇಳಿಲ್ಲ. ಆ ವಚನದಲ್ಲಿ ಯೆರೆಮೀಯ ಆ ಮಂಟಪದ ಉದ್ದ ಮತ್ತು ಅಗಲ ಎಷ್ಟಿತ್ತು ಅಂತ ಹೇಳಿದ್ದಾನಷ್ಟೆ. ಅದ್ರ ಎತ್ತರ ಎಷ್ಟಿತ್ತು ಅಂತ ಏನೂ ಹೇಳಿಲ್ಲ. ಇದಾದ್ಮೇಲೆ ಅವನು ಮುಂದಿನ ಅಧ್ಯಾಯಗಳಲ್ಲಿ ಅಚ್ಚಲ್ಲಿ ಹೊಯ್ದು ಮಾಡಿದ ಸಮುದ್ರ ಅನ್ನೋ ತಾಮ್ರದ ಪಾತ್ರೆ ಬಗ್ಗೆ, ಹತ್ತು ಬಂಡಿಗಳ ಬಗ್ಗೆ ಮತ್ತು ಮಂಟಪದ ಮುಂದೆ ನಿಲ್ಲಿಸಿದ್ದ ಎರಡು ತಾಮ್ರದ ಕಂಬಗಳ ಬಗ್ಗೆ ತುಂಬ ವಿವರವಾಗಿ ಹೇಳಿದ್ದಾನೆ. (1 ಅರ. 7:15-37) ಇವುಗಳ ಬಗ್ಗೆ ಇಷ್ಟು ವಿವರವಾಗಿ ಹೇಳಿರೋ ಯೆರೆಮೀಯ, ಮಂಟಪದ ಎತ್ತರ ಒಂದುವೇಳೆ 50 ಮೀಟರ್‌ಗಿಂತ ಜಾಸ್ತಿ ಇದ್ದಿದ್ರೆ, ಇಡೀ ಆಲಯಕ್ಕಿಂತ ಅದೇ ದೊಡ್ಡದಾಗಿ ಇದ್ದಿದ್ರೆ, ಅದ್ರ ಬಗ್ಗೆ ಬರಿದೇ ಇರ್ತಿದ್ನಾ? ಇದಷ್ಟೇ ಅಲ್ಲ, ನೂರಾರು ವರ್ಷಗಳಾದ್ಮೇಲೆ ಯೆಹೂದಿ ಬರಹಗಾರರು ಕೂಡ ಸೊಲೊಮೋನ ಕಟ್ಟಿದ ಆಲಯದ ಮಂಟಪ ಆ ಆಲಯಕ್ಕಿಂತ ಎತ್ತರವಾಗಿ ಇರ್ಲಿಲ್ಲ ಅಂತನೇ ಬರೆದಿದ್ದಾರೆ.

ಆಲಯದ ಗೋಡೆಗಳಿಗೆ 120 ಮೊಳ ಎತ್ತರದ ಮಂಟಪನ ಹೊತ್ಕೊಳ್ಳೋಕೆ ಆಗ್ತಿತ್ತಾ ಅಂತ ವಿದ್ವಾಂಸರಿಗೂ ಸಂಶಯ ಬಂದಿದೆ. ಹಿಂದಿನ ಕಾಲದಲ್ಲಿ ಕಲ್ಲುಗಳಿಂದ ಅಥವಾ ಇಟ್ಟಿಗೆಗಳಿಂದ ಎತ್ತರವಾದ ಕಟ್ಟಡಗಳನ್ನ ಕಟ್ಟುವಾಗ ಅದ್ರ ಗೋಡೆಗಳ ತಳ ಅಗಲವಾಗಿ ಇರ್ತಿತ್ತು. ಎತ್ತರಕ್ಕೆ ಹೋದ ಹಾಗೆ ಅದ್ರ ಅಗಲ ಕಮ್ಮಿ ಆಗ್ತಿತ್ತು. ಇದಕ್ಕೊಂದು ಉದಾಹರಣೆ ಈಜಿಪ್ಟಿನಲ್ಲಿದ್ದ ಆಲಯದ ಪ್ರವೇಶ ದ್ವಾರ. ಆದ್ರೆ ಸೊಲೊಮೋನ ಕಟ್ಟಿದ ದೇವಾಲಯ ಆ ತರ ಇರ್ಲಿಲ್ಲ. ಕೆಲವು ವಿದ್ವಾಂಸರು ಆಲಯದ ಗೋಡೆ 6 ಮೊಳ ಅಥವಾ 2.7 ಮೀಟರ್‌ಗಿಂತ (9 ಅಡಿ) ಜಾಸ್ತಿ ದಪ್ಪ ಇರಲಿಲ್ಲ ಅಂತ ಹೇಳ್ತಾರೆ. ಅದಕ್ಕೇ ಕಟ್ಟಡಗಳ ಬಗ್ಗೆ ಚೆನ್ನಾಗಿ ಅಧ್ಯಯನ ಮಾಡೋ ಇತಿಹಾಸಗಾರ ಥಿಯೋಡರ್‌ ಬ್ಯುಸಿಂಕ್‌ “ಆಲಯದ [ಪ್ರವೇಶದ್ವಾರ] ಮಂಟಪದ ಗೋಡೆಯ ದಪ್ಪ ನೋಡೋದಾದ್ರೆ ಅದು 120 ಮೊಳ [ಎತ್ತರ] ಇರೋಕೆ ಸಾಧ್ಯನೇ ಇಲ್ಲ” ಅಂತ ಹೇಳ್ತಾರೆ.

2 ಪೂರ್ವಕಾಲವೃತ್ತಾಂತ 3:4ನ್ನ ನಕಲು ಮಾಡುವಾಗ ತಪ್ಪಾಗಿರಬಹುದು. ಕೆಲವು ಹಿಂದಿನ ಕಾಲದ ಹಸ್ತಪ್ರತಿಗಳಲ್ಲಿ ಈ ವಚನದಲ್ಲಿ “120” ಅಂತ ಇದೆ. ಆದ್ರೆ ಇನ್ನೂ ಕೆಲವು ನಂಬಬಹುದಾದ ಹಸ್ತಪ್ರತಿಗಳಲ್ಲಿ ಉದಾಹರಣೆಗೆ, 5ನೇ ಶತಮಾನದ ಕೋಡೆಕ್ಸ್‌ ಅಲೆಕ್ಸಾಂಡ್ರಿನಸ್‌ ಮತ್ತು 6ನೇ ಶತಮಾನದ ಕೋಡೆಕ್ಸ್‌ ಆ್ಯಂಬ್ರೊಸಿಯನಸ್‌ನಲ್ಲಿ “20 ಮೊಳ” ಅಂತ ಇದೆ. ನಕಲು ಮಾಡುವವರು ಇದನ್ನ ತಪ್ಪಾಗಿ “120” ಅಂತ ಬರೆದಿರೋಕೆ ಕಾರಣ ಏನಿರಬಹುದು? ಹೀಬ್ರು ಭಾಷೆಯಲ್ಲಿ “20 ಮೊಳ” ಅನ್ನೋದನ್ನ “ಮೊಳ ಇಪ್ಪತ್ತು” ಅಂತ ಬರೀತಿದ್ರು. ಆದ್ರೆ ಹೀಬ್ರು ಭಾಷೆಯಲ್ಲಿ “ನೂರು” ಮತ್ತು “ಮೊಳ” ಅನ್ನೋ ಎರಡೂ ಪದನೂ ನೋಡೋಕೆ ಒಂದೇ ತರ ಇದ್ವು. ಅದಕ್ಕೇ ನಕಲು ಮಾಡುವವರು “ಮೊಳ ಇಪ್ಪತ್ತು” ಅಂತ ಹಾಕೋ ಬದಲು “ನೂರಾ ಇಪ್ಪತ್ತು” ಅಂತ ಹಾಕಿರಬಹುದು.

ಸೊಲೊಮೋನ ಕಟ್ಟಿದ್ದ ಆಲಯದ ಬಗ್ಗೆ ನಾವು ವಿವರವಾಗಿ ತಿಳ್ಕೊಳ್ಳೋಕೆ ಪ್ರಯತ್ನ ಮಾಡ್ತಿದ್ದೀವಿ, ನಿಜ. ಆದ್ರೆ ಅದಕ್ಕಿಂತ ಮುಖ್ಯವಾಗಿ ಅದು ಯಾವುದನ್ನ ಸೂಚಿಸುತ್ತೆ ಅನ್ನೋದನ್ನ ನಾವು ನೆನಪಲ್ಲಿ ಇಟ್ಕೊಬೇಕು. ಅದು ಯೆಹೋವನ ಆಧ್ಯಾತ್ಮಿಕ ಆಲಯನ ಸೂಚಿಸುತ್ತೆ. ಯೆಹೋವ ನಮ್ಮನ್ನ ಈ ಆಲಯಕ್ಕೆ ಆಮಂತ್ರಿಸಿ ಆತನನ್ನ ಆರಾಧಿಸೋ ಅವಕಾಶ ಕೊಟ್ಟಿದ್ದಕ್ಕೆ ನಾವು ಯಾವಾಗ್ಲೂ ಋಣಿಗಳಾಗಿರಬೇಕು.—ಇಬ್ರಿ. 9:11-14; ಪ್ರಕ. 3:12; 7:9-17.

a ಈ ವಚನಕ್ಕಿರೋ ಪಾದಟಿಪ್ಪಣಿ ಹೀಗಿದೆ: “ಕೆಲವು ಪ್ರಾಚೀನ ಹಸ್ತಪ್ರತಿಗಳಲ್ಲಿ ‘120’ ಅಂತ ಇದೆ. ಆದ್ರೆ ಬೇರೆ ಹಸ್ತಪ್ರತಿಗಳಲ್ಲಿ ಮತ್ತು ಕೆಲವು ಭಾಷಾಂತರಗಳಲ್ಲಿ ಇಲ್ಲಿ ‘20 ಮೊಳ’ ಅಂತ ಇದೆ.”