ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿನಯಶೀಲತೆಗೆ ಈಗಲೂ ಬೆಲೆ ಇದೆಯಾ?

ವಿನಯಶೀಲತೆಗೆ ಈಗಲೂ ಬೆಲೆ ಇದೆಯಾ?

“ದೀನರಲ್ಲಿ ಜ್ಞಾನ.”—ಜ್ಞಾನೋ. 11:2.

ಗೀತೆಗಳು: 38, 69

1, 2. ದೇವರು ಸೌಲನನ್ನು ತಿರಸ್ಕರಿಸಿದ್ದೇಕೆ? (ಲೇಖನದ ಆರಂಭದ ಚಿತ್ರ ನೋಡಿ.)

ಯೆಹೋವನು ಸೌಲನನ್ನು ಇಸ್ರಾಯೇಲ್ಯರ ರಾಜನಾಗಿ ಆರಿಸಿಕೊಂಡಾಗ ಅವನು ವಿನಯಶೀಲನಾಗಿದ್ದ. (1 ಸಮು. 9:1, 2, 21; 10:20-24) ಆದರೆ ಅವನು ರಾಜನಾದ ಮೇಲೆ ಅಹಂಕಾರಿಯಾಗಿಬಿಟ್ಟ. ಒಮ್ಮೆ, ಸಾವಿರಾರು ಫಿಲಿಷ್ಟಿಯರು ಇಸ್ರಾಯೇಲ್ಯರ ವಿರುದ್ಧ ಯುದ್ಧಕ್ಕೆ ಬಂದಾಗ ಪ್ರವಾದಿಯಾದ ಸಮುವೇಲ ಗಿಲ್ಗಾಲಿಗೆ ಬಂದು ಯೆಹೋವನಿಗೆ ಯಜ್ಞ ಅರ್ಪಿಸುತ್ತೇನೆ ಎಂದು ಸೌಲನಿಗೆ ಹೇಳಿದ್ದ. ಆದರೆ ಸಮುವೇಲ ತಡಮಾಡುತ್ತಿದ್ದಾನೆ ಅಂತ ಅನಿಸಿದಾಗ ಜನ ಹೆದರಿಹೋಗಿ ಸೌಲನನ್ನು ಬಿಟ್ಟು ಹೋಗಲು ಆರಂಭಿಸಿದರು. ಇದರಿಂದ ತಾಳ್ಮೆ ಕಳೆದುಕೊಂಡ ಸೌಲ ತಾನೇ ಯಜ್ಞ ಅರ್ಪಿಸಿಬಿಟ್ಟ. ಇದನ್ನು ಮಾಡುವ ಅಧಿಕಾರ ಸೌಲನಿಗಿರಲಿಲ್ಲ. ಯೆಹೋವನಿಗೆ ಇದು ಇಷ್ಟವಾಗಲಿಲ್ಲ.—1 ಸಮು. 13:5-9.

2 ಸಮುವೇಲ ಗಿಲ್ಗಾಲಿಗೆ ಬಂದಾಗ ಸೌಲ ಮಾಡಿದ ಮೂರ್ಖ ಕೆಲಸವನ್ನು ನೋಡಿ ಅವನನ್ನು ಖಂಡಿಸಿದ. ಆದರೆ ಸೌಲನು ತಾನು ತಪ್ಪೇ ಮಾಡಿಲ್ಲ ಅನ್ನುವ ತರ ಮಾತಾಡಿದ. ನೆಪ ಕೊಟ್ಟ, ತನ್ನ ತಪ್ಪನ್ನು ಜನರ ಮೇಲೆ ಎತ್ತಿಹಾಕಿದ. (1 ಸಮು. 13:10-14) ಇದಾದ ಮೇಲೆ ಸೌಲ ಸೊಕ್ಕಿನಿಂದ ಒಂದರ ಮೇಲೆ ಒಂದು ತಪ್ಪು ಮಾಡುತ್ತಾ ಹೋದ. ಆದ್ದರಿಂದ ಯೆಹೋವನು ಅವನನ್ನು ತಿರಸ್ಕರಿಸಿದ. (1 ಸಮು. 15:22, 23) ಸೌಲನಲ್ಲಿ ಮೊದಮೊದಲು ವಿನಯಶೀಲತೆ ಇತ್ತು. ಆದರೆ ಹೋಗುತ್ತಾ ಹೋಗುತ್ತಾ ಹಮ್ಮುಬಿಮ್ಮಿನ ವ್ಯಕ್ತಿಯಾಗಿ ಬದಲಾದ.—1 ಸಮು. 31:1-6.

3. (ಎ) ವಿನಯಶೀಲರಾಗಿ ಇರುವುದರ ಬಗ್ಗೆ ಜನರು ಏನು ನೆನಸುತ್ತಾರೆ? (ಬಿ) ಯಾವ ಪ್ರಶ್ನೆಗಳಿಗೆ ಉತ್ತರ ತಿಳಿಯಲಿದ್ದೇವೆ?

3 ಈ ಲೋಕದಲ್ಲಿ ಪೈಪೋಟಿ ಜಾಸ್ತಿ. ಒಬ್ಬರಿಗಿಂತ ಒಬ್ಬರು ಮುಂದೆ ಇರಲು ಬಯಸುತ್ತಾರೆ. ತಗ್ಗಿಬಗ್ಗಿ ನಡೆಯುವ ಬದಲು ತಮ್ಮ ಬಗ್ಗೆ ಕೊಚ್ಚಿಕೊಳ್ಳಲು ಬಯಸುತ್ತಾರೆ. ಒಬ್ಬ ಜನಪ್ರಿಯ ನಟ ಮತ್ತು ರಾಜಕಾರಣಿ ತನ್ನ ಬಗ್ಗೆ ಹೀಗಂದನು: “ವಿನಯಶೀಲತೆಗೂ ನನಗೂ ಸಂಬಂಧನೇ ಇಲ್ಲ. ಈ ಗುಣ ನನ್ನಲ್ಲಿಲ್ಲ, ಮುಂದೆನೂ ಬರುವ ಹಾಗೆ ತೋರುವುದಿಲ್ಲ.” ಆದರೆ ಕ್ರೈಸ್ತರಾದ ನಮ್ಮಲ್ಲಿ ವಿನಯಶೀಲತೆ ಇರಲೇಬೇಕು. ವಿನಯಶೀಲತೆ ಯಾಕಷ್ಟು ಪ್ರಾಮುಖ್ಯ? ವಿನಯಶೀಲತೆ ಅಂದರೆ ಏನು, ಏನಲ್ಲ ಎಂದು ಈ ಲೇಖನದಲ್ಲಿ ಕಲಿಯಲಿದ್ದೇವೆ. ಕಷ್ಟವಾದಾಗಲೂ ಈ ಗುಣವನ್ನು ಹೇಗೆ ತೋರಿಸಬಹುದು ಎಂದು ಮುಂದಿನ ಲೇಖನದಲ್ಲಿ ಕಲಿಯಲಿದ್ದೇವೆ.

ವಿನಯಶೀಲತೆ ಯಾಕಷ್ಟು ಪ್ರಾಮುಖ್ಯ?

4. ಹೆಮ್ಮೆಯಿಂದ ನಡೆಯುವುದು ಅಂದರೇನು?

4 ವಿನಯಶೀಲತೆಗೆ ವಿರುದ್ಧವಾದ ಗುಣ ಹೆಮ್ಮೆ ಎನ್ನುತ್ತೆ ಬೈಬಲ್‌. (ಜ್ಞಾನೋಕ್ತಿ 11:2 ಓದಿ.) “ನಿನ್ನ ಸೇವಕನಾದ ನನ್ನನ್ನು ಹೆಮ್ಮೆಯಿಂದ ನಡೆಯದಂತೆ ತಡಿ” ಎಂದು ದಾವೀದ ಯೆಹೋವನನ್ನು ಬೇಡಿಕೊಂಡ. (ಕೀರ್ತ. 19:13, ನೂತನ ಲೋಕ ಭಾಷಾಂತರ) ಹೆಮ್ಮೆಯಿಂದ ನಡೆಯುವುದು ಅಂದರೇನು? ನಮಗೆ ಯಾವುದನ್ನು ಮಾಡುವ ಹಕ್ಕಿಲ್ಲವೋ ಅಂಥ ವಿಷಯವನ್ನು ಮಾಡಿಬಿಡುವುದೇ ಹೆಮ್ಮೆಯಾಗಿದೆ. ಕೆಲವೊಮ್ಮೆ ತಾಳ್ಮೆ ಕಳೆದುಕೊಂಡು ಅಹಂಕಾರದಿಂದ ವರ್ತಿಸಿಬಿಡುತ್ತೇವೆ. ನಾವು ಅಪರಿಪೂರ್ಣರಾದ ಕಾರಣ ಕೆಲವೊಮ್ಮೆ ಈ ಹೆಮ್ಮೆ ತಲೆ ಎತ್ತುತ್ತೆ ನಿಜ. ಆದರೆ ಅದೇ ರೂಢಿಯಾಗಿಬಿಟ್ಟರೆ ಯೆಹೋವನಿಗೆ ಇಷ್ಟವಾಗಲ್ಲ. ಇದೇ ಕಾರಣಕ್ಕೆ ಆತನು ಸೌಲನನ್ನು ತಳ್ಳಿಹಾಕಿದ್ದು. ಆದ್ದರಿಂದ ಕೀರ್ತನೆ 119:21 ಯೆಹೋವನು ‘ಗರ್ವಿಷ್ಠರನ್ನು ಗದರಿಸುತ್ತಾನೆ’ ಎಂದು ಹೇಳುತ್ತದೆ. ಯೆಹೋವನು ಗರ್ವಿಷ್ಠರನ್ನು ಗದರಿಸಲು ಮೂರು ಕಾರಣ ಇದೆ.

5. ನಾವು ಯಾಕೆ ಹೆಮ್ಮೆಯಿಂದ ನಡಕೊಳ್ಳಬಾರದು?

5 ಒಂದನೇ ಕಾರಣ, ನಾವು ಹೆಮ್ಮೆಯಿಂದ ನಡೆದರೆ ನಮ್ಮ ದೇವರೂ ರಾಜನೂ ಆಗಿರುವ ಯೆಹೋವನ ಮೇಲೆ ನಮಗೆ ಗೌರವ ಇಲ್ಲ ಎಂದು ತೋರಿಸಿಕೊಡುತ್ತೇವೆ. ಎರಡನೇ ಕಾರಣ, ನಮಗೆ ಮಾಡಲು ಅನುಮತಿ ಇಲ್ಲದ ವಿಷಯವನ್ನು ಮಾಡಿದರೆ ಜನರ ಜೊತೆ ವಾದವಿವಾದ, ಜಗಳ ಆಗುತ್ತದೆ. (ಜ್ಞಾನೋ. 13:10) ಮೂರನೇ ಕಾರಣ, ನಾವು ಅಹಂಕಾರದಿಂದ ಏನಾದರೂ ಮಾಡಿಬಿಟ್ಟರೆ ಮುಂದೆ ನಮಗೆ ನಾಚಿಕೆ ಅವಮಾನ ಆಗುತ್ತದೆ. (ಲೂಕ 14:8, 9) ಇದರಿಂದಲೇ ನಾವು ಅಹಂಕಾರಿಗಳಾಗಬಾರದು ಎಂದು ಯೆಹೋವನು ಹೇಳುತ್ತಾನೆ.

ವಿನಯಶೀಲತೆ ಅಂದರೆ ಏನು?

6, 7. ವಿನಯಶೀಲತೆಗೂ ದೀನತೆಗೂ ಇರುವ ಸಂಬಂಧವೇನು?

6 ವಿನಯಶೀಲತೆಗೂ ದೀನತೆಗೂ ಸಂಬಂಧ ಇದೆ. ದೀನತೆ ಇರುವ ಒಬ್ಬ ಕ್ರೈಸ್ತನು ಬೇರೆಯವರು ತನಗಿಂತ ಶ್ರೇಷ್ಠರು ಎಂದು ನೆನಸುತ್ತಾನೆ. ಅಹಂಕಾರಕ್ಕೆ ಅವನ ಮನಸ್ಸಿನಲ್ಲಿ ಜಾಗ ಇಲ್ಲ. (ಫಿಲಿ. 2:3) ದೀನನಲ್ಲಿ ಸಾಮಾನ್ಯವಾಗಿ ವಿನಯಶೀಲತೆನೂ ಇರುತ್ತದೆ. ಇಂಥ ವ್ಯಕ್ತಿಗೆ ತನ್ನ ಇತಿಮಿತಿಗಳೇನು ಎಂದು ಚೆನ್ನಾಗಿ ಗೊತ್ತಿರುತ್ತದೆ. ತನ್ನಿಂದ ಏನಾದರೂ ತಪ್ಪಾದರೆ ನಮ್ರತೆಯಿಂದ ಒಪ್ಪಿಕೊಳ್ಳುತ್ತಾನೆ. ಬೇರೆಯವರು ಕೊಡುವ ಸಲಹೆಗಳಿಗೆ ಗಮನಕೊಟ್ಟು ಅನ್ವಯಿಸಿಕೊಳ್ಳುತ್ತಾನೆ. ಯೆಹೋವನು ಇಂಥ ದೀನ ಜನರನ್ನು ತುಂಬ ಇಷ್ಟಪಡುತ್ತಾನೆ.

7 ವಿನಯಶೀಲತೆ ಇರುವ ವ್ಯಕ್ತಿಗೆ ತನ್ನ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ ಎಂದು ಬೈಬಲ್‌ ಹೇಳುತ್ತದೆ. ತನ್ನಿಂದ ಏನು ಮಾಡಕ್ಕಾಗಲ್ಲ ಅಥವಾ ಏನು ಮಾಡಬಾರದು ಎಂದು ಅವನಿಗೆ ಗೊತ್ತಿರುತ್ತದೆ. ಇದರಿಂದ ಬೇರೆಯವರಿಗೆ ಗೌರವ, ಪ್ರೀತಿ ತೋರಿಸಲು ಸಾಧ್ಯವಾಗುತ್ತದೆ.

8. ವಿನಯಶೀಲರಾಗಿದ್ದರೆ ನಾವು ಏನು ಮಾಡುವುದಿಲ್ಲ?

8 ನಮಗೆ ಗೊತ್ತಿಲ್ಲದೇ ನಮ್ಮ ಮನಸ್ಸೊಳಗೆ ಹೆಮ್ಮೆ ನುಸುಳಬಹುದು. ಹೇಗೆ? ನಾವು ಅಥವಾ ನಮ್ಮವರು ಸಭೆಯಲ್ಲಿ ಜವಾಬ್ದಾರಿಯ ಸ್ಥಾನದಲ್ಲಿರುವಾಗ, ಬೇರೆಯವರಿಗಿಂತ ನಾವು ಸ್ವಲ್ಪ ಶ್ರೇಷ್ಠರು ಅನ್ನೋ ಭಾವನೆ ನಮಗೆ ಬರಬಹುದು. (ರೋಮ. 12:16) ಬೇರೆಯವರ ಗಮನವನ್ನು ನಮ್ಮ ಕಡೆ ಸೆಳೆಯಲು ಪ್ರಯತ್ನಿಸಬಹುದು. (1 ತಿಮೊ. 2:9, 10) ಏನು ಮಾಡಬೇಕು, ಏನು ಮಾಡಬಾರದು ಎಂದು ಬೇರೆಯವರಿಗೆ ನಾವು ಸಲಹೆ ಕೊಡಲು ಶುರುಮಾಡಬಹುದು.—1 ಕೊರಿಂ. 4:6.

9. ಕೆಲವರು ಹೆಮ್ಮೆಯಿಂದ ನಡಕೊಳ್ಳಲು ಕಾರಣವೇನು? ಬೈಬಲಿನಿಂದ ಉದಾಹರಣೆ ಕೊಡಿ.

9 ನಮ್ಮಲ್ಲಿ ದುರಾಸೆ ಬಂದುಬಿಟ್ಟರೆ ಎಲ್ಲೆ ಮೀರಿ ವರ್ತಿಸಿಬಿಡುತ್ತೇವೆ. ಬೇರೆಯವರ ಮುಂದೆ ಮಿಂಚಬೇಕು ಎಂಬ ಆಸೆಯಿಂದ ಅಥವಾ ಬೇರೆಯವರ ಬಗ್ಗೆ ಹೊಟ್ಟೆಕಿಚ್ಚಾದಾಗ ಅಥವಾ ಕೋಪವನ್ನು ನಿಯಂತ್ರಿಸಲು ಆಗದಿದ್ದಾಗ ಎಷ್ಟೋ ಜನರು ಹೆಮ್ಮೆಯಿಂದ ನಡಕೊಂಡಿದ್ದಾರೆ. ಅಂಥವರ ಬಗ್ಗೆನೂ ಬೈಬಲಲ್ಲಿ ಇದೆ. ಅಂಥವರಲ್ಲಿ ಕೆಲವರು ಅಬ್ಷಾಲೋಮ, ಉಜ್ಜೀಯ ಮತ್ತು ನೆಬೂಕದ್ನೆಚ್ಚರ. ಇವರು ಹೆಮ್ಮೆಯನ್ನು ಬಿಟ್ಟು ದೀನತೆ ಬೆಳೆಸಿಕೊಳ್ಳಬೇಕು ಎಂದು ಯೆಹೋವನು ಸ್ಪಷ್ಟಪಡಿಸಿದನು.—2 ಸಮು. 15:1-6; 18:9-17; 2 ಪೂರ್ವ. 26:16-21; ದಾನಿ. 5:18-21.

10. ಯಾಕೆ ನಾವು ಬೇರೆಯವರ ಬಗ್ಗೆ ತಪ್ಪು ತೀರ್ಮಾನಕ್ಕೆ ಬರಬಾರದು? ಬೈಬಲಿನಿಂದ ಉದಾಹರಣೆ ಕೊಡಿ.

10 ಜನರು ಹೆಮ್ಮೆಯಿಂದ ನಡಕೊಳ್ಳಲು ಬೇರೆ ಕಾರಣಗಳೂ ಇರಬಹುದು. ಅರಸನಾದ ಅಬೀಮೆಲೆಕ ಮತ್ತು ಅಪೊಸ್ತಲ ಪೇತ್ರನ ಉದಾಹರಣೆ ತೆಗೆದುಕೊಳ್ಳೋಣ. (ಆದಿ. 20:2-7; ಮತ್ತಾ. 26:31-35) ಇವರಲ್ಲಿ ಹೆಮ್ಮೆ ಇತ್ತಾ? ಅಥವಾ ಪೂರ್ತಿ ವಿಷಯ ಗೊತ್ತಿಲ್ಲದೆ ಮತ್ತು ಹಿಂದೆ ಮುಂದೆ ಯೋಚಿಸದೆ ಕೆಲವು ವಿಷಯಗಳನ್ನು ಮಾಡಿಬಿಟ್ಟರಾ? ನಮಗೆ ಬೇರೆಯವರ ಮನಸ್ಸಲ್ಲಿ ಏನಿದೆ ಎಂದು ತಿಳಿದುಕೊಳ್ಳಲು ಆಗಲ್ಲ. ಆದ್ದರಿಂದ ಅವರ ಬಗ್ಗೆ ತಪ್ಪು ತೀರ್ಮಾನಕ್ಕೆ ಬರದಿರೋಣ.ಯಾಕೋಬ 4:12 ಓದಿ.

ಸಂಘಟನೆಯಲ್ಲಿ ನಿಮ್ಮ ಪಾತ್ರವೇನು?

11. ನಾವು ಯಾವುದನ್ನು ಅರ್ಥಮಾಡಿಕೊಳ್ಳಬೇಕು?

11 ನಾವು ವಿನಯಶೀಲರು ಆಗಿದ್ದರೆ ದೇವರ ಸಂಘಟನೆಯಲ್ಲಿ ನಮಗಿರುವ ಪಾತ್ರವನ್ನು ಸರಿಯಾಗಿ ಅರ್ಥಮಾಡಿಕೊಳ್ಳುತ್ತೇವೆ. ಯೆಹೋವನು ಸಭೆಯಲ್ಲಿ ಎಲ್ಲಾ ವ್ಯವಸ್ಥಿತವಾಗಿ ನಡೆಯಬೇಕು ಎಂದು ಬಯಸುತ್ತಾನೆ. ಹಾಗಾಗಿ ಪ್ರತಿಯೊಬ್ಬರಿಗೂ ಒಂದೊಂದು ಪಾತ್ರ ಕೊಟ್ಟಿದ್ದಾನೆ. ಯೆಹೋವನು ಪ್ರತಿಯೊಬ್ಬರಿಗೂ ಬೇರೆ ಬೇರೆ ವರ, ಕೌಶಲ, ಪ್ರತಿಭೆ, ಸಾಮರ್ಥ್ಯ ಕೊಟ್ಟಿದ್ದಾನೆ. ನಾವು ಇದನ್ನೆಲ್ಲಾ ನಮಗೆ ಹೇಗೆ ಬೇಕೋ ಹಾಗೆ ಉಪಯೋಗಿಸಲು ಬಿಡುತ್ತಾನೆ. ನಮ್ಮಲ್ಲಿ ವಿನಯಶೀಲತೆ ಇದ್ದರೆ ಆ ವರಗಳನ್ನು ಯೆಹೋವನು ಇಷ್ಟಪಡುವ ರೀತಿಯಲ್ಲಿ ಬಳಸುತ್ತೇವೆ. (ರೋಮ. 12:4-8) ನಮ್ಮಲ್ಲಿರುವ ಸಾಮರ್ಥ್ಯಗಳನ್ನು ಯೆಹೋವನಿಗೆ ಮಹಿಮೆ ತರಲು ಮತ್ತು ಬೇರೆಯವರಿಗೆ ಸಹಾಯ ಮಾಡಲು ಬಳಸಬೇಕೆಂದು ಅರ್ಥಮಾಡಿಕೊಳ್ಳುತ್ತೇವೆ.1 ಪೇತ್ರ 4:10 ಓದಿ.

ಹೊಸ ನೇಮಕ ಸಿಕ್ಕಿದಾಗ ಏನು ಮಾಡಬೇಕೆಂದು ಯೇಸು ಕ್ರಿಸ್ತನಿಂದ ಕಲಿಯುತ್ತೇವೆ? (ಪ್ಯಾರ 12-14 ನೋಡಿ)

12, 13. ನಮ್ಮ ಜೀವನದಲ್ಲಿ ಆಗುವ ಬದಲಾವಣೆಗೆ ತಕ್ಕಂತೆ ಯೆಹೋವನ ಸೇವೆ ಮಾಡಬೇಕಾಗಿ ಬಂದಾಗ ಏನನ್ನು ಮನಸ್ಸಿನಲ್ಲಿಡಬೇಕು?

12 ಸಮಯ ದಾಟಿದಂತೆ ಸಭೆಯಲ್ಲಿ ಅಥವಾ ಸಂಘಟನೆಯಲ್ಲಿ ನಮ್ಮ ಜವಾಬ್ದಾರಿ ಬದಲಾಗಬಹುದು. ಯೇಸುವಿನ ಬಗ್ಗೆ ಸ್ವಲ್ಪ ಯೋಚಿಸಿ. ಅವನ ಜೀವನದಲ್ಲಿ ಹತ್ತುಹಲವಾರು ಬದಲಾವಣೆಗಳು ಆದವು. ಮೊದಲು, ತನ್ನ ತಂದೆ ಜೊತೆ ಅವನು ಮಾತ್ರ ಇದ್ದ. (ಜ್ಞಾನೋ. 8:22) ಆಮೇಲೆ, ದೇವದೂತರನ್ನು, ವಿಶ್ವವನ್ನು, ಮನುಷ್ಯರನ್ನು ಸೃಷ್ಟಿಮಾಡಲು ಯೆಹೋವನಿಗೆ ಸಹಾಯಮಾಡಿದ. (ಕೊಲೊ. 1:16) ನಂತರ, ದೇವರು ಅವನನ್ನು ಭೂಮಿಗೆ ಕಳುಹಿಸಿದ. ಭೂಮಿಯಲ್ಲಿ ಮಗುವಾಗಿ ಹುಟ್ಟಿ, ಬೆಳೆದು ದೊಡ್ಡವನಾದ. (ಫಿಲಿ. 2:7) ಮನುಷ್ಯರಿಗಾಗಿ ತನ್ನ ಪ್ರಾಣವನ್ನು ಕೊಟ್ಟು ನಂತರ ದೇವದೂತನಾಗಿ ಪುನಃ ಸ್ವರ್ಗಕ್ಕೆ ಹೋದ. ನಂತರ 1914⁠ರಲ್ಲಿ ದೇವರ ರಾಜ್ಯದ ರಾಜನಾದ. (ಇಬ್ರಿ. 2:9) ಮುಂದೆ, ಯೇಸು ಸಾವಿರ ವರ್ಷ ರಾಜನಾಗಿ ಆಳಲಿದ್ದಾನೆ. ಅದರ ನಂತರ “ದೇವರು ಎಲ್ಲರಿಗೂ ಎಲ್ಲವೂ” ಆಗಲು ರಾಜ್ಯವನ್ನು ಯೆಹೋವನಿಗೆ ಹಿಂದೆ ಕೊಡಲಿದ್ದಾನೆ.—1 ಕೊರಿಂ. 15:28.

13 ನಮ್ಮ ಜೀವನದಲ್ಲೂ ಅನೇಕ ಬದಲಾವಣೆಗಳು ಆಗಬಹುದು. ಕೆಲವೊಮ್ಮೆ ನಾವು ತೆಗೆದುಕೊಳ್ಳುವ ತೀರ್ಮಾನಗಳಿಗೆ ಅನುಸಾರ ನಮ್ಮ ಜವಾಬ್ದಾರಿಗಳೂ ಬದಲಾಗುತ್ತವೆ. ಮದುವೆಯಾಗದೇ ಇದ್ದವರು ಮದುವೆಯಾಗುವ ತೀರ್ಮಾನ ಮಾಡುತ್ತಾರೆ ಎಂದು ನೆನಸಿ. ಆಮೇಲೆ ಅವರಿಗೆ ಮಕ್ಕಳೂ ಆಗಬಹುದು. ಆಗಲೂ ಪೂರ್ಣ ಸಮಯದ ಸೇವೆ ಮಾಡುವ ಬಯಕೆಯಿಂದ ಕೆಲವರು ಜೀವನದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬಹುದು. ಆದರೆ ಸನ್ನಿವೇಶ ಇದ್ದ ಹಾಗೇ ಇರುವುದಿಲ್ಲ. ಸನ್ನಿವೇಶ ಏನಾದರೂ ಬದಲಾದಾಗ ನಾವು ಸೇವೆಯನ್ನು ಹೆಚ್ಚು ಮಾಡಲಿಕ್ಕೂ ಆಗಬಹುದು ಅಥವಾ ಅದು ಕಡಿಮೆನೂ ಆಗಬಹುದು. ಏನೇ ಇರಲಿ, ಯೆಹೋವನು ನಾವು ಎಷ್ಟು ಸೇವೆ ಮಾಡುತ್ತಿದ್ದೇವೆ ಅಂತ ನೋಡಲ್ಲ, ನಮ್ಮ ವಯಸ್ಸಿಗೆ ಮತ್ತು ಆರೋಗ್ಯಕ್ಕೆ ತಕ್ಕ ಹಾಗೆ ಅತ್ಯುತ್ತಮ ಸೇವೆ ಮಾಡುತ್ತಿದ್ದೇವಾ ಅಂತ ನೋಡುತ್ತಾನೆ. ನಿಮ್ಮಿಂದ ಆಗುವುದಕ್ಕಿಂತ ಜಾಸ್ತಿ ಮಾಡಿ ಅಂತ ಯೆಹೋವನು ಕೇಳುವುದಿಲ್ಲ. ನಾವು ನಮ್ಮ ಶಕ್ತಿ, ಸಾಮರ್ಥ್ಯ, ಸನ್ನಿವೇಶಕ್ಕನುಸಾರ ಎಷ್ಟು ಸೇವೆ ಮಾಡುತ್ತೇವೋ ಅದನ್ನು ಆತನು ಸಂತೋಷದಿಂದ ಸ್ವೀಕರಿಸುತ್ತಾನೆ.—ಇಬ್ರಿ. 6:10.

14. ಸಂಘಟನೆಯಲ್ಲಿ ಸಂತೋಷದಿಂದ ಸೇವೆ ಮಾಡಲು ವಿನಯಶೀಲತೆ ನಮಗೆ ಹೇಗೆ ಸಹಾಯಮಾಡುತ್ತದೆ?

14 ಯೆಹೋವನು ಯೇಸುವಿಗೆ ಯಾವುದೇ ನೇಮಕ ಕೊಟ್ಟರೂ ಅವನು ಅದನ್ನು ಸಂತೋಷದಿಂದ ಮಾಡಿದನು. ನಾವೂ ಅದೇ ರೀತಿ ಇರಬೇಕು. (ಜ್ಞಾನೋ. 8:30, 31) ನಮ್ಮಲ್ಲಿ ವಿನಯಶೀಲತೆ ಇದ್ದರೆ ಸಭೆಯಲ್ಲಿ ನಮಗೆ ಯಾವುದೇ ನೇಮಕ, ಜವಾಬ್ದಾರಿ ಸಿಕ್ಕಿದರೂ ಸಂತೋಷದಿಂದ ಮಾಡುತ್ತೇವೆ. ಬೇರೆಯವರಿಗೆ ಸಿಕ್ಕಿರುವ ಜವಾಬ್ದಾರಿಯೊಂದಿಗೆ ಅದನ್ನು ಹೋಲಿಸಿ ನೋಡುವುದಿಲ್ಲ. ಯೆಹೋವನ ಸಂಘಟನೆಯಲ್ಲಿ ನಮಗೆ ಸಿಕ್ಕಿರುವ ಪಾತ್ರವನ್ನು ಒಪ್ಪಿಕೊಂಡು ತೃಪ್ತರಾಗಿರುತ್ತೇವೆ. ಆ ಪಾತ್ರ ಯೆಹೋವನಿಂದ ನಮಗೆ ಸಿಕ್ಕಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳುತ್ತೇವೆ. ಬೇರೆಯವರಿಗೂ ಅವರ ಪಾತ್ರವನ್ನು ನಿರ್ವಹಿಸಲು ಸಹಾಯ ಮಾಡುತ್ತೇವೆ. ಆ ಪಾತ್ರವನ್ನು ಅವರಿಗೆ ಕೊಟ್ಟಿರುವುದು ಯೆಹೋವನೇ ಎಂದು ಅರ್ಥಮಾಡಿಕೊಳ್ಳುತ್ತೇವೆ.—ರೋಮ. 12:10.

ವಿನಯಶೀಲತೆ ಅಂದರೆ ಏನಲ್ಲ?

15. ಗಿದ್ಯೋನನಿಂದ ನಾವು ಏನು ಕಲಿಯುತ್ತೇವೆ?

15 ವಿನಯಶೀಲತೆಗೆ ಗಿದ್ಯೋನ ಒಂದು ಅತ್ಯುತ್ತಮ ಉದಾಹರಣೆ. ಇಸ್ರಾಯೇಲ್ಯರನ್ನು ಮಿದ್ಯಾನ್ಯರ ಕೈಯಿಂದ ಕಾಪಾಡುವ ನೇಮಕವನ್ನು ಯೆಹೋವನು ಗಿದ್ಯೋನನಿಗೆ ಕೊಟ್ಟನು. ಆಗ ಗಿದ್ಯೋನ “ಮನಸ್ಸೆ ಕುಲದಲ್ಲಿ ನನ್ನ ಮನೆಯು ಕನಿಷ್ಠವಾದದ್ದು; ಮತ್ತು ನಾನು ನಮ್ಮ ಕುಟುಂಬದಲ್ಲಿ ಅಲ್ಪನು” ಎಂದ. (ನ್ಯಾಯ. 6:15) ಆದರೂ ಗಿದ್ಯೋನ ಯೆಹೋವನ ಮೇಲೆ ಭರವಸೆ ಇಟ್ಟು ಆ ನೇಮಕವನ್ನು ಒಪ್ಪಿಕೊಂಡ. ತಾನು ಏನು ಮಾಡಬೇಕು ಎಂದು ಯೆಹೋವನು ಬಯಸುತ್ತಾನೆ ಎನ್ನುವುದನ್ನು ಗಿದ್ಯೋನ ಚೆನ್ನಾಗಿ ಅರ್ಥಮಾಡಿಕೊಂಡ. ಯೆಹೋವನ ಮಾರ್ಗದರ್ಶನಕ್ಕಾಗಿ ಬೇಡಿದ. (ನ್ಯಾಯ. 6:36-40) ಗಿದ್ಯೋನ ಬಲಶಾಲಿ, ಧೈರ್ಯಶಾಲಿ ಆಗಿದ್ದ. ಆದರೂ ಜಾಣತನ ತೋರಿಸಿದ, ಜಾಗರೂಕತೆಯಿಂದ ಇದ್ದ. (ನ್ಯಾಯ. 6:11, 27) ಮಿದ್ಯಾನ್ಯರ ಕೈಯಿಂದ ಇಸ್ರಾಯೇಲ್ಯರನ್ನು ಬಿಡಿಸಿದಾಗ ಅವರು ಅವನನ್ನು ತಮ್ಮ ರಾಜನಾಗುವಂತೆ ಹೇಳಿದರು. ಅದನ್ನು ಅವನು ಒಪ್ಪಿಕೊಳ್ಳಲಿಲ್ಲ. ದೇವರು ತನಗೆ ಕೊಟ್ಟ ಕೆಲಸವನ್ನು ಮುಗಿಸಿದ ಮೇಲೆ ಮನೆಗೆ ಹೋಗಿಬಿಟ್ಟ.—ನ್ಯಾಯ. 8:22, 23, 29.

16, 17. ಒಬ್ಬ ವಿನಯಶೀಲ ವ್ಯಕ್ತಿ ಹೇಗೆ ಪ್ರಗತಿ ಮಾಡಬಹುದು?

16 ನಾವು ವಿನಯಶೀಲರಾಗಿ ಇರಬೇಕಾದರೆ ಹೊಸ ನೇಮಕಗಳನ್ನು ಸ್ವೀಕರಿಸಬಾರದು ಅಥವಾ ಸಭೆಯಲ್ಲಿ ಹೆಚ್ಚು ಜವಾಬ್ದಾರಿಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಬಾರದು ಅಂತ ಅರ್ಥವಲ್ಲ. ಯೆಹೋವನ ಒಬ್ಬ ಸೇವಕನು ಸಭೆಯಲ್ಲಿ ಸೇವೆ ಮಾಡಲು ಮುಂದೆ ಬರಬೇಕು ಮತ್ತು ಪ್ರಗತಿ ಮಾಡಬೇಕು ಎಂದು ಬೈಬಲೇ ಹೇಳುತ್ತದೆ. (1 ತಿಮೊ. 4:13-15) ಆದರೆ ಒಂದು ಹೊಸ ನೇಮಕ ಸಿಕ್ಕಿದರೆ ಮಾತ್ರ ನಾವು ಪ್ರಗತಿ ಮಾಡುತ್ತಿದ್ದೇವೆ ಅಂತ ಅರ್ಥನಾ? ಹಾಗೇನಿಲ್ಲ. ಒಬ್ಬ ಕ್ರೈಸ್ತನಲ್ಲಿರಬೇಕಾದ ಗುಣಗಳನ್ನು, ಸಾಮರ್ಥ್ಯಗಳನ್ನು ನಾವೆಲ್ಲರೂ ಬೆಳೆಸಿಕೊಳ್ಳುತ್ತಾ ಹೋಗಬೇಕು. ಹೀಗೆ ಮಾಡಿದರೆ ಹೆಚ್ಚು ಸೇವೆ ಮಾಡಲು ಆಗುತ್ತದೆ ಮತ್ತು ಬೇರೆಯವರಿಗೆ ಸಹಾಯ ಮಾಡಲು ಆಗುತ್ತದೆ.

17 ನಾವು ವಿನಯಶೀಲರಾಗಿದ್ದರೆ ಒಂದು ನೇಮಕವನ್ನು ಸ್ವೀಕರಿಸುವ ಮುಂಚೆ ಅದರಲ್ಲಿ ಏನೆಲ್ಲ ಒಳಗೂಡಿದೆ ಎಂದು ತಿಳಿದುಕೊಳ್ಳಬೇಕು. ಅದರ ಬಗ್ಗೆ ಪ್ರಾರ್ಥಿಸಬೇಕು. ಆಮೇಲೆ ನಮ್ಮಿಂದ ಅದನ್ನು ಮಾಡಲು ಆಗುತ್ತದಾ ಇಲ್ಲವಾ ಎಂದು ಯೋಚಿಸಬೇಕು. ಈ ನೇಮಕವನ್ನು ಮಾಡುತ್ತಾ ನಮಗಿರುವ ಬೇರೆ ಜವಾಬ್ದಾರಿಗಳನ್ನು ನಿರ್ವಹಿಸಲು ಆಗುತ್ತಾ ಎಂದೂ ಯೋಚಿಸಬೇಕು. ಒಂದುವೇಳೆ ಆಗುವುದಿಲ್ಲ ಅಂತ ಅನಿಸುವುದಾದರೆ ಈಗಾಗಲೇ ಸಿಕ್ಕಿರುವ ಜವಾಬ್ದಾರಿಗಳನ್ನು ಬೇರೆಯವರಿಗೆ ವಹಿಸಿಕೊಡಬಹುದಾ ಎಂದು ಯೋಚಿಸಬೇಕು. ಇದನ್ನೆಲ್ಲ ಪರಿಗಣಿಸುವಾಗ ನಮ್ಮ ಇತಿಮಿತಿಗಳನ್ನು ಅರ್ಥಮಾಡಿಕೊಂಡು ಬಹುಶಃ ನಾವು ಹೊಸ ನೇಮಕ ಬೇಡ ಅಂತ ತೀರ್ಮಾನಿಸಬಹುದು.

18. (ಎ) ನಮ್ಮಲ್ಲಿ ವಿನಯಶೀಲತೆ ಇದ್ದರೆ ಹೊಸ ನೇಮಕ ಸಿಕ್ಕಿದಾಗ ಏನು ಮಾಡುತ್ತೇವೆ? (ಬಿ) ವಿನಯಶೀಲರಾಗಿರಲು ರೋಮನ್ನರಿಗೆ 12:3 ಹೇಗೆ ಸಹಾಯ ಮಾಡುತ್ತದೆ?

18 ನಾವು ಯೆಹೋವನಿಗೆ ‘ನಮ್ರವಾಗಿ ನಡೆದುಕೊಳ್ಳಬೇಕೆಂದು’ ಆತನು ಬಯಸುತ್ತಾನೆ. (ಮೀಕ 6:8) ಆದ್ದರಿಂದ ಒಂದು ನೇಮಕ ಸಿಕ್ಕಿದರೆ ಗಿದ್ಯೋನನಂತೆ ನಾವು ಮೊದಲು ಯೆಹೋವನ ಮಾರ್ಗದರ್ಶನಕ್ಕಾಗಿ, ಸಹಾಯಕ್ಕಾಗಿ ಬೇಡಿಕೊಳ್ಳಬೇಕು. ಬೈಬಲ್‌ ಮತ್ತು ಸಂಘಟನೆ ಮೂಲಕ ಯೆಹೋವನು ನಮಗೆ ಏನು ಹೇಳುತ್ತಿದ್ದಾನೆ ಎಂದು ತಿಳಿದುಕೊಳ್ಳಬೇಕು. ನಾವು ಯಾವಾಗಲೂ ಒಂದು ವಿಷಯವನ್ನು ಮರೆಯಬಾರದು. ಅದೇನೆಂದರೆ ನಾವು ಏನೇ ಮಾಡಿದರೂ ಅದು ನಮ್ಮ ಸ್ವಂತ ಶಕ್ತಿ, ಸಾಮರ್ಥ್ಯದಿಂದ ಅಲ್ಲ, ಯೆಹೋವನು ಕೊಡುತ್ತಿರುವ ಶಕ್ತಿಯಿಂದ ಮಾಡುತ್ತಿದ್ದೇವೆ. ಯೆಹೋವನು ದೀನನಾಗಿದ್ದಾನೆ ಮತ್ತು ನಮಗೆ ಸಹಾಯ ಮಾಡಲು ಸಿದ್ಧನಾಗಿದ್ದಾನೆ. (ಕೀರ್ತ. 113:6, 7) ಆದ್ದರಿಂದ ನಾವು ವಿನಯಶೀಲರಾಗಿದ್ದರೆ ನಮ್ಮ “ಕುರಿತು ಅಗತ್ಯಕ್ಕಿಂತ ಹೆಚ್ಚಾಗಿ” ಭಾವಿಸಿಕೊಳ್ಳುವುದಿಲ್ಲ.ರೋಮನ್ನರಿಗೆ 12:3 ಓದಿ.

19. ನಾವು ಯಾಕೆ ವಿನಯಶೀಲರು ಆಗಿರಬೇಕು?

19 ಯೆಹೋವನಿಗೆ ಮಾತ್ರ ಎಲ್ಲ ಮಹಿಮೆ ಸಲ್ಲಬೇಕು, ಯಾಕೆಂದರೆ ಆತನು ನಮ್ಮ ಸೃಷ್ಟಿಕರ್ತ ಮತ್ತು ಮಹೋನ್ನತ ಎಂದು ವಿನಯಶೀಲ ವ್ಯಕ್ತಿಗೆ ಗೊತ್ತಿರುತ್ತದೆ. (ಪ್ರಕ. 4:11) ನಾವು ವಿನಯಶೀಲರಾಗಿದ್ದರೆ ಯೆಹೋವನ ಸೇವೆಯಲ್ಲಿ ನಮಗೆ ಎಷ್ಟು ಮಾಡಲು ಆಗುತ್ತದೋ ಅಷ್ಟು ಸೇವೆ ಮಾಡುತ್ತಾ ಸಂತೋಷವಾಗಿರುತ್ತೇವೆ. ನಮ್ಮ ಸಹೋದರ ಸಹೋದರಿಯರ ಭಾವನೆಗಳಿಗೆ, ಅಭಿಪ್ರಾಯಗಳಿಗೆ ಬೆಲೆ ಕೊಡುತ್ತಾ ಒಗ್ಗಟ್ಟಾಗಿ ಇರುತ್ತೇವೆ. ಯಾವುದೇ ಕೆಲಸ ಮಾಡುವ ಮುಂಚೆ ಅದರ ಬಗ್ಗೆ ಚೆನ್ನಾಗಿ ಯೋಚನೆ ಮಾಡುತ್ತೇವೆ. ಆಗ ದೊಡ್ಡ ತಪ್ಪುಗಳು ಆಗುವುದಿಲ್ಲ. ಈ ರೀತಿ ಇದ್ದರೆ ಯೆಹೋವನು ನಮ್ಮನ್ನು ತುಂಬ ಇಷ್ಟಪಡುತ್ತಾನೆ. ಈ ಎಲ್ಲ ಕಾರಣಗಳಿಂದಾಗಿ ವಿನಯಶೀಲತೆ ಎಂಬ ಗುಣವನ್ನು ನಾವೆಲ್ಲರೂ ಬೆಳೆಸಿಕೊಳ್ಳುವುದು ಪ್ರಾಮುಖ್ಯ. ಈ ಗುಣವನ್ನು ತೋರಿಸಲು ಕಷ್ಟವಾದಾಗ ಏನು ಮಾಡಬೇಕೆಂದು ಮುಂದಿನ ಲೇಖನದಲ್ಲಿ ಚರ್ಚಿಸೋಣ.