ನಿಮಗೆ ಗೊತ್ತಿತ್ತಾ?
ಫಿಲಿಪ್ಪ ಇಥಿಯೋಪ್ಯದ ಅಧಿಕಾರಿ ಹತ್ರ ಬಂದಾಗ ಅವನು ಯಾವ ತರದ ರಥದಲ್ಲಿ ಹೋಗ್ತಿದ್ದ?
ಮೂಲ ಭಾಷೆಯಲ್ಲಿ “ರಥ” ಅಂತ ಹೇಳಿರೋ ಪದವನ್ನ ಹೊಸ ಲೋಕ ಭಾಷಾಂತರ ಬೈಬಲಿನಲ್ಲಿ ಬೇರೆಬೇರೆ ತರದ ಗಾಡಿಗಳಿಗೆ ಬಳಸಿದ್ದಾರೆ. (ಅ. ಕಾ. 8:28, 29, 38) ಆದ್ರೆ ಇಥಿಯೋಪ್ಯದ ಅಧಿಕಾರಿ ಹೋಗ್ತಾ ಇದ್ದ ರಥ, ಯುದ್ಧಗಳಲ್ಲಿ ಅಥವಾ ಕುದುರೆ ಓಟದ ಸ್ಪರ್ಧೆಯಲ್ಲಿ ಬಳಸ್ತಿದ್ದ ರಥಕ್ಕಿಂತ ತುಂಬಾ ದೊಡ್ಡದಿತ್ತು. ನಾವು ಯಾಕೆ ಹಾಗೆ ಹೇಳಬಹುದು?
ತುಂಬ ದೂರ ಪ್ರಯಾಣ ಮಾಡಿದ ಆ ವ್ಯಕ್ತಿ ಒಬ್ಬ ದೊಡ್ಡ ಅಧಿಕಾರಿಯಾಗಿದ್ದ. “ಆ ಅಧಿಕಾರಿ ಇಥಿಯೋಪ್ಯದ ರಾಣಿ ಕಂದಾಕೆಯ ಕೆಳಗೆ ಕೆಲಸಮಾಡ್ತಾ ಎಲ್ಲ ಹಣ ವ್ಯವಹಾರಗಳನ್ನ ನೋಡ್ಕೊಳ್ತಿದ್ದ.” (ಅ. ಕಾ. 8:27) ಈಗಿರೋ ಸೂಡಾನ್ ಮತ್ತು ದಕ್ಷಿಣ ಭಾಗದ ಈಜಿಪ್ಟ್ ಮುಂಚೆ ಇಥಿಯೋಪ್ಯಗೆ ಸೇರಿತ್ತು. ಈ ಇಥಿಯೋಪ್ಯದ ಅಧಿಕಾರಿ ತುಂಬ ದೂರ ಪ್ರಯಾಣ ಮಾಡಬೇಕಾಗಿದ್ರಿಂದ ಅವನು ಒಂದೇ ಗಾಡಿಯಲ್ಲಿ ಹೋಗಿರಲ್ಲ ಅನ್ಸುತ್ತೆ. ಆದ್ರೆ ಅವನತ್ರ ತುಂಬ ಲಗೇಜ್ ಅಂತೂ ಇದ್ದೇ ಇರ್ತಿತ್ತು. ಒಂದನೇ ಶತಮಾನದಲ್ಲಿ ಬಳಸ್ತಿದ್ದ ರಥಗಳು ಸಂಪೂರ್ಣವಾಗಿ ಮುಚ್ಚಿರ್ತಿತ್ತು ಮತ್ತು ಅದಕ್ಕೆ ನಾಲ್ಕು ಚಕ್ರಗಳು ಇರ್ತಿತ್ತು. “ಈ ತರ ರಥಗಳಲ್ಲಿ, ತುಂಬ ಲಗೇಜ್‌ಗಳನ್ನ ಇಡಬಹುದಿತ್ತು ಮತ್ತು ಆರಾಮಾಗಿ ಕೂತು ದೂರದೂರ ಪ್ರಯಾಣನೂ ಮಾಡಬಹುದಿತ್ತು” ಅಂತ ಆ್ಯಕ್ಟ್ಸ್—ಆ್ಯನ್ ಎಕ್ಸೆಜೆಟಿಕಲ್ ಕಾಮೆಂಟರಿ ಅನ್ನೋ ಪುಸ್ತಕ ಹೇಳುತ್ತೆ.
ಫಿಲಿಪ್ಪ ಬಂದಾಗ ಇಥಿಯೋಪ್ಯದ ಅಧಿಕಾರಿ ಓದ್ತಾ ಇದ್ದ. “ಫಿಲಿಪ್ಪ ರಥದ ಹತ್ರ ಹೋಗಿ ಅದ್ರ ಪಕ್ಕದಲ್ಲೇ ಓಡೋಕೆ ಶುರುಮಾಡಿದ. ಆ ಅಧಿಕಾರಿ ಯೆಶಾಯನ ಪುಸ್ತಕವನ್ನ ಗಟ್ಟಿಯಾಗಿ ಓದೋದು ಅವನಿಗೆ ಕೇಳಿಸ್ತು” ಅಂತ ಬೈಬಲ್ ಹೇಳುತ್ತೆ. (ಅ. ಕಾ. 8:30) ಇದ್ರಿಂದ ಆ ರಥ ತುಂಬ ನಿಧಾನವಾಗಿ ಓಡ್ತಿತ್ತು ಅಂತ ನಮಗೆ ಗೊತ್ತಾಗುತ್ತೆ. ಅದಕ್ಕೇ ಆ ಅಧಿಕಾರಿಗೆ ಅದ್ರಲ್ಲಿ ಕೂತ್ಕೊಂಡು ಓದೋಕೆ ಆಯ್ತು ಮತ್ತು ಫಿಲಿಪ್ಪನಿಗೆ ಓಡಿ ಹೋಗಿ ಆ ಅಧಿಕಾರಿನ ಮಾತಾಡ್ಸೋಕೆ ಆಯ್ತು.
ಇಥಿಯೋಪ್ಯದ ಅಧಿಕಾರಿ “ತನ್ನ ಜೊತೆ ರಥ ಹತ್ತಿ ಕೂತ್ಕೊಳ್ಳೋಕೆ ಫಿಲಿಪ್ಪನಿಗೆ ಕೇಳ್ಕೊಂಡ.” (ಅ. ಕಾ. 8:31) ಸಾಮಾನ್ಯವಾಗಿ ಸ್ಪರ್ಧೆಯಲ್ಲಿ ಓಡಿಸೋ ರಥದಲ್ಲಿ ಸವಾರರು ನಿಂತ್ಕೊಂಡಿರ್ತಾರೆ. ಆದ್ರೆ ಈ ಅಧಿಕಾರಿ ಫಿಲಿಪ್ಪನಿಗೆ ಬಂದು ಕೂತ್ಕೊಳ್ಳೋಕೆ ಹೇಳಿದ. ಅಂದ್ರೆ ಆ ರಥದಲ್ಲಿ ತುಂಬ ಜಾಗ ಇತ್ತು ಅನ್ಸುತ್ತೆ. ಅಷ್ಟೇ ಅಲ್ಲ ಆ ರಥನ ಪ್ರಯಾಣಕ್ಕಾಗಿನೇ ಬಳಸ್ತಿದ್ರು ಅಂತ ಗೊತ್ತಾಗುತ್ತೆ.
ಅಪೊಸ್ತಲ ಕಾರ್ಯ 8ನೇ ಅಧ್ಯಾಯದಲ್ಲಿರೋ ಮಾಹಿತಿ ಮತ್ತು ಇತಿಹಾಸ ನೋಡಿದಾಗ ನಮಗೇನು ಗೊತ್ತಾಗುತ್ತೆ? ಯುದ್ಧದಲ್ಲಿ ಅಥವಾ ಸ್ಪರ್ಧೆಗಳಲ್ಲಿ ಬಳಸ್ತಿದ್ದ ರಥಕ್ಕಿಂತ ಇಥಿಯೋಪ್ಯದ ಅಧಿಕಾರಿ ಹೋಗ್ತಿದ್ದ ರಥ ದೊಡ್ಡದಾಗಿತ್ತು. ಅದಕ್ಕೇ ನಮ್ಮ ಪ್ರಕಾಶನಗಳಲ್ಲಿ ಇತ್ತೀಚಿಗೆ ಈ ತರದ ಚಿತ್ರಗಳನ್ನ ತೋರಿಸಿದ್ದಾರೆ.