ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಂಗಾತಿಯು ದ್ರೋಹಬಗೆದಾಗ

ಸಂಗಾತಿಯು ದ್ರೋಹಬಗೆದಾಗ

“ನನ್ನ ಗಂಡ ನನಗಿಂತ ಚಿಕ್ಕ ವಯಸ್ಸಿನ ಸ್ತ್ರೀ ಸಿಕ್ಕಿದಳೆಂದು ನನ್ನನ್ನು ಬಿಟ್ಟುಹೋಗುವುದಾಗಿ ಹೇಳಿದಾಗ ನನಗೆ ಸಾಯಬೇಕೆಂದು ಅನಿಸಿತು. ಇದು ಅನ್ಯಾಯ ಅಂತ ಅನಿಸಿತು. ಅದರಲ್ಲೂ ಅವರಿಗಾಗಿ ನಾನು ಮಾಡಿದ ತ್ಯಾಗಗಳನ್ನು ನೆನಪಿಸಿಕೊಂಡಾಗ ತುಂಬನೇ ಅನ್ಯಾಯ ಅನಿಸುತ್ತಿತ್ತು.”—ಸ್ಪೇನಿನ ಮರಿಯ.

“ನನ್ನ ಹೆಂಡತಿ ನನ್ನನ್ನು ಬಿಟ್ಟುಹೋದಾಗ ನನ್ನ ದೇಹದ ಒಂದು ಭಾಗವೇ ಸತ್ತುಹೋದಂತೆ ಅನಿಸಿತು. ನಮ್ಮ ಕನಸುಗಳು, ಆಸೆ, ಮತ್ತು ನಮ್ಮ ಯೋಜನೆಗಳು ಎಲ್ಲಾ ನುಚ್ಚುನೂರಾದವು. ಕೆಲವೊಮ್ಮೆ, ನಾನು ಇದರ ಬಗ್ಗೆ ಚಿಂತೆ ಮಾಡುವುದನ್ನು ಸ್ವಲ್ಪ ಕಡಿಮೆ ಮಾಡಿದ್ದೇನೆ ಅಂತ ಅನಿಸುತ್ತಿತ್ತು. ಆದರೆ ಮರುಕ್ಷಣವೇ ಚಿಂತೆಯಲ್ಲಿ ಮುಳುಗಿರುತ್ತಿದ್ದೆ.”—ಸ್ಪೇನಿನ ಬಿಲ್‌.

ಸಂಗಾತಿ ದ್ರೋಹಬಗೆದಾಗ ಹೃದಯ ಒಡೆದು ಮಾತಿನಲ್ಲಿ ಹೇಳಲಾಗದಷ್ಟು ನೋವಾಗುತ್ತದೆ. ಕೆಲವರು ತಮ್ಮ ಸಂಗಾತಿ ಪಶ್ಚಾತ್ತಾಪಪಟ್ಟು ತಿರುಗಿ ಬಂದಾಗ ಅವರನ್ನು ಕ್ಷಮಿಸಿ ಒಂದಾಗಿದ್ದಾರೆ. * ಅದೇನೇ ಆದರೂ ಸಂಗಾತಿ ದ್ರೋಹ ಮಾಡಿದ್ದಾರೆಂದು ಗೊತ್ತಾದಾಗ ತೀವ್ರ ನೋವಾಗುತ್ತದೆ. ಹೀಗೆ ಮನಸ್ಸು ಛಿದ್ರವಾದರೂ ತಾಳಿಕೊಂಡು ಹೋಗುವುದು ಹೇಗೆ?

ನಿಮಗೆ ಸಹಾಯ ಮಾಡುವ ಬೈಬಲ್‌ ವಚನಗಳು

ಸಂಗಾತಿ ದ್ರೋಹಬಗೆದಾಗ ಹೃದಯದಲ್ಲಿ ತಿವಿದಂತಾದರೂ ಅನೇಕರು ಬೈಬಲ್‌ ವಚನಗಳಿಂದ ಸಾಂತ್ವನ ಪಡೆದಿದ್ದಾರೆ. ದೇವರು ಅವರ ಕಣ್ಣೀರನ್ನು ನೋಡುತ್ತಾನೆ ಮತ್ತು ಅವರಿಗೆ ನೋವಾಗುವಾಗ ಆತನಿಗೂ ನೋವಾಗುತ್ತದೆ ಎಂದು ಅವರು ಕಲಿತಿದ್ದಾರೆ.—ಮಲಾಕಿಯ 2:13-16.

“ನನ್ನಲ್ಲಿ ಅನೇಕ ಚಿಂತೆಗಳಿರುವಾಗ ನಿನ್ನ ಸಂತೈಸುವಿಕೆಯಿಂದಲೇ ನನ್ನ ಪ್ರಾಣಕ್ಕೆ ಸಂತೋಷವುಂಟಾಗುತ್ತದೆ.”ಕೀರ್ತನೆ 94:19.

“ಈ ವಚನ ಓದುವಾಗ, ನೋವಿನಲ್ಲಿರುವ ನನ್ನನ್ನು ಯೆಹೋವನು ಪ್ರೀತಿಯ ತಂದೆಯಂತೆ ಮೃದುವಾಗಿ ಸಂತೈಸುತ್ತಿರುವ ಹಾಗೆ ಚಿತ್ರಿಸಿಕೊಂಡೆ” ಎಂದು ಬಿಲ್‌ ನೆನಪಿಸಿಕೊಳ್ಳುತ್ತಾನೆ.

“ನೀನು ನಿಷ್ಠಾವಂತನೊಂದಿಗೆ ನಿಷ್ಠೆಯಿಂದ ನಡೆದುಕೊಳ್ಳುತ್ತೀ.” ಕೀರ್ತನೆ 18:25, NW.

ಕಾರ್ಮನ್ನಳ ಗಂಡ ಅನೇಕ ತಿಂಗಳುಗಳವರೆಗೆ ಅನೈತಿಕ ಜೀವನ ನಡೆಸಿ ನಂಬಿಕೆ ದ್ರೋಹ ಮಾಡಿದ್ದರು. ಆಕೆ ಹೀಗೆ ಹೇಳುತ್ತಾಳೆ: “ನನ್ನ ಗಂಡ ನನಗೆ ನಿಷ್ಠನಾಗಿರಲಿಲ್ಲ. ಆದರೆ ಯೆಹೋವನು ನಿಷ್ಠನಾಗಿರುತ್ತಾನೆ ಎಂಬ ಭರವಸೆ ನನಗಿದೆ. ಆತನು ಯಾವತ್ತೂ ನನ್ನ ಕೈಬಿಡುವುದಿಲ್ಲ.”

“ಯಾವ ವಿಷಯದ ಕುರಿತಾಗಿಯೂ ಚಿಂತೆಮಾಡಬೇಡಿರಿ; ಎಲ್ಲ ವಿಷಯಗಳಲ್ಲಿ . . . ಪ್ರಾರ್ಥನೆ ಮತ್ತು ಯಾಚನೆಗಳಿಂದ ನಿಮ್ಮ ಬಿನ್ನಹಗಳನ್ನು ದೇವರಿಗೆ ತಿಳಿಯಪಡಿಸಿರಿ. ಆಗ ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ನಿಮ್ಮ ಮಾನಸಿಕ ಶಕ್ತಿಗಳನ್ನೂ ಕ್ರಿಸ್ತ ಯೇಸುವಿನ ಮೂಲಕ ಕಾಯುವುದು.”ಫಿಲಿಪ್ಪಿ 4:6, 7.

“ನಾನು ಈ ವಚನವನ್ನು ಪುನಃ ಪುನಃ ಓದಿದೆ. ನಾನು ಹೆಚ್ಚೆಚ್ಚು ಪ್ರಾರ್ಥಿಸಿದಂತೆ ದೇವರು ನನಗೆ ಶಾಂತಿ, ನೆಮ್ಮದಿಯನ್ನು ನೀಡಿದರು” ಎನ್ನುತ್ತಾಳೆ ಸಾಶ.

ಮೇಲೆ ತಿಳಿಸಲಾದ ಎಲ್ಲರೂ ಕೆಲವೊಮ್ಮೆ ತುಂಬ ನಿರಾಶರಾಗಿದ್ದರು. ಆದರೆ ಅವರು ಯೆಹೋವ ದೇವರ ಮೇಲೆ ಭರವಸೆ ಇಟ್ಟು ಆತನ ವಾಕ್ಯದಿಂದ ಬಲ ಪಡೆದುಕೊಂಡರು. ಬಿಲ್‌ ಹೀಗೆ ಹೇಳುತ್ತಾನೆ: “ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡಾಗ ನನ್ನ ನಂಬಿಕೆಯೇ ನನ್ನ ಜೀವನಕ್ಕೆ ಅರ್ಥ ನೀಡಿತು. ಸ್ವಲ್ಪ ಕಾಲ ನಾನು ‘ಕಾರ್ಗತ್ತಲಿನ ಕಣಿವೆಯಲ್ಲಿ’ ನಡೆಯಬೇಕಾಗಿ ಬಂದರೂ ದೇವರು ನನ್ನೊಂದಿಗಿದ್ದನು.”—ಕೀರ್ತನೆ 23:4.

^ ಸಂಗಾತಿಯನ್ನು ಕ್ಷಮಿಸಬೇಕಾ ಕ್ಷಮಿಸಬಾರದಾ ಎನ್ನುವುದರ ಕುರಿತು ಮಾಹಿತಿಗಾಗಿ ಏಪ್ರಿಲ್‌ 22, 1999​ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯಲ್ಲಿ “ವೆನ್‌ ಎ ಮೇಟ್‌ ಇಸ್‌ ಅನ್‌ಫೇಯ್ತ್‌ಫುಲ್‌” ಎಂಬ ಲೇಖನ ನೋಡಿ.