ಆಶೀರ್ವಾದ ಪಡೆಯಲು ಪ್ರಾರ್ಥನೆ ಮುಖ್ಯ
ದೇವರು ಮಾನವರಿಗೆ ಒಂದು ಅದ್ಭುತ ಉಡುಗೊರೆ ಕೊಟ್ಟಿದ್ದಾನೆ. ಅದೇನು ಗೊತ್ತಾ? ಪ್ರಾರ್ಥನೆ. ಪ್ರಾರ್ಥನೆ ಅಂದ್ರೆ ದೇವರ ಜೊತೆ ಮಾತಾಡೋದು ಮತ್ತು ನಮ್ಮ ಎಲ್ಲಾ ಭಾವನೆಗಳನ್ನ ಅವನೊಟ್ಟಿಗೆ ಹಂಚಿಕೊಳ್ಳೋದೇ ಆಗಿದೆ. “ಪ್ರಾರ್ಥನೆಯನ್ನು ಕೇಳುವವನೇ, ಜನರೆಲ್ಲರು ನಿನ್ನ ಬಳಿಗೆ ಬರುವರು” ಅಂತ ಪ್ರವಾದಿ ದಾವೀದ ಪ್ರಾರ್ಥಿಸಿದ. (ಕೀರ್ತನೆ 65:2) ದೇವರು ನಮ್ಮ ಪ್ರಾರ್ಥನೆಗಳನ್ನ ಕೇಳಿ ನಮ್ಮನ್ನ ಆಶೀರ್ವದಿಸಬೇಕು ಅಂದ್ರೆ ನಾವು ಹೇಗೆ ಪ್ರಾರ್ಥಿಸಬೇಕು?
ಹೃದಯಾಳದಿಂದ ಮನಬಿಚ್ಚಿ ಪ್ರಾರ್ಥಿಸಿ
ದೇವರ ಹತ್ರ ಪ್ರಾರ್ಥಿಸುವಾಗ ಮನಬಿಚ್ಚಿ ನಿಮ್ಮ ಎಲ್ಲಾ ಅನಿಸಿಕೆ ಭಾವನೆಗಳನ್ನ ಹೇಳಿಕೊಳ್ಳಿ. (ಕೀರ್ತನೆ 62:8) ಹೀಗೆ ಹೇಳಿಕೊಂಡ್ರೆ ದೇವರಿಗೆ ತುಂಬ ಖುಷಿ ಆಗುತ್ತೆ.
ದೇವರ ಹೆಸರನ್ನ ಉಪಯೋಗಿಸಿ
ಜನರು ದೇವರನ್ನ ಅಲ್ಲಾ, ಭಗವಂತ, ಪರಮಾತ್ಮ ಅಂತೆಲ್ಲಾ ಕರಿತಾರೆ. ಆದರೆ ಇವೆಲ್ಲಾ ಬರೀ ಬಿರುದುಗಳಾಗಿವೆ. ನಿಜ ಏನು ಗೊತ್ತಾ? ದೇವರಿಗೆ ಒಂದು ಹೆಸರಿದೆ. ‘ನಾನೇ ಯೆಹೋವ; ಇದೇ ನನ್ನ ಹೆಸರು’ ಅಂತ ದೇವರೇ ಹೇಳಿದ್ದಾನೆ. (ಯೆಶಾಯ 42:8) ಪವಿತ್ರ ಗ್ರಂಥದಲ್ಲಿ ದೇವರ ಹೆಸರು ಸುಮಾರು 7000 ಬಾರಿ ಇದೆ. ಪ್ರವಾದಿಗಳು ಸಹ ಪ್ರಾರ್ಥಿಸುವಾಗ ದೇವರ ಹೆಸರನ್ನ ಉಪಯೋಗಿಸಿದ್ರು. ಉದಾಹರಣೆಗೆ, ಪ್ರವಾದಿ ಅಬ್ರಹಾಮ ಕೂಡ ಪ್ರಾರ್ಥಿಸುವಾಗ ದೇವರ ಹೆಸರನ್ನ ಉಪಯೋಗಿಸಿದ. (ಆದಿಕಾಂಡ 15:2) ನಾವು ಅಷ್ಟೆ, ಪ್ರಾರ್ಥಿಸುವಾಗ ದೇವರ ಹೆಸರನ್ನ ಉಪಯೋಗಿಸಬೇಕು.
ನಿಮ್ಮ ಭಾಷೆಯಲ್ಲಿ ಪ್ರಾರ್ಥಿಸಿ
ನಾವು ಯಾವುದೇ ಭಾಷೇಲಿ ಪ್ರಾರ್ಥಿಸಿದ್ರೂ ದೇವರಿಗೆ ನಮ್ಮ ಭಾವನೆ ಯೋಚ್ನೆಗಳು ಅರ್ಥ ಆಗುತ್ತೆ. ದೇವರು ಪಕ್ಷಪಾತಿ ಅಲ್ಲ ಬದಲಿಗೆ “ಯಾವ ಜನಾಂಗದಲ್ಲೇ ಆಗಲಿ ದೇವರಿಗೆ ಭಯಪಟ್ಟು ನೀತಿಯನ್ನು ನಡೆಸುವವನು ಆತನಿಗೆ ಸ್ವೀಕಾರಾರ್ಹನಾಗಿದ್ದಾನೆ” ಅಂತ ಪವಿತ್ರ ಗ್ರಂಥ ಭರವಸೆ ಕೊಡುತ್ತೆ.—ಅಪೊಸ್ತಲರ ಕಾರ್ಯ 10:34, 35.
ಆದ್ರೆ ದೇವರಿಂದ ಆಶೀರ್ವಾದ ಪಡೀಬೇಕಂದ್ರೆ ಬರೀ ಪ್ರಾರ್ಥನೆ ಮಾಡಿದ್ರಷ್ಟೇ ಸಾಕಾಗಲ್ಲ. ಬೇರೊಂದು ವಿಷಯನೂ ಮಾಡಬೇಕು. ಅದನ್ನ ಮುಂದಿನ ಲೇಖನದಲ್ಲಿ ನೋಡೋಣ.