ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಶಾವಾದ ಆರೋಗ್ಯಕ್ಕೆ ಹಿತಕರವೋ?

ಆಶಾವಾದ ಆರೋಗ್ಯಕ್ಕೆ ಹಿತಕರವೋ?

ಆಶಾವಾದ ಆರೋಗ್ಯಕ್ಕೆ ಹಿತಕರವೋ?

“ಹರ್ಷಹೃದಯವು ಒಳ್ಳೇ ಔಷಧ” ಎಂದು ಇಸ್ರಾಯೇಲಿನ ಒಬ್ಬ ಜ್ಞಾನಿಯಾದ ಅರಸನು ಸುಮಾರು 3,000 ವರ್ಷಗಳ ಹಿಂದೆ ಬರೆದನು. (ಜ್ಞಾನೋಕ್ತಿ 17:22) ಅಂದಿನ ಪ್ರೇರಿತ ನುಡಿಗಳಲ್ಲಿ ಅಡಕವಾಗಿರುವ ವಿವೇಕವನ್ನು ಇಂದು ವೈದ್ಯರು ಗ್ರಹಿಸುತ್ತಿದ್ದಾರೆ. ಆದರೆ ನಮ್ಮಲ್ಲಿ ಅನೇಕರಿಗೆ ಸ್ವಾಭಾವಿಕವಾಗಿ “ಹರ್ಷಹೃದಯವು” ಇರುವುದಿಲ್ಲ.

ಹತಾಶೆ ಹಾಗೂ ನಿರಾಶಾವಾದಿ ಹೊರನೋಟಕ್ಕೆ ನಡೆಸುವ ದಿನನಿತ್ಯದ ಒತ್ತಡಗಳಿಂದ ತಪ್ಪಿಸಿಕೊಳ್ಳಲು ನಮ್ಮಲ್ಲಿ ಕೆಲವರೇ ಶಕ್ತರಾಗಿದ್ದೇವೆ. ಹಾಗಿದ್ದರೂ, ತೊಂದರೆಗಳ ನಡುವೆಯೂ ಆಶಾವಾದದ ಮನೋಭಾವವನ್ನು ಬೆಳೆಸಿಕೊಳ್ಳುವುದು ಸಾರ್ಥಕ ಎಂದು ಇತ್ತೀಚಿನ ಅಧ್ಯಯನಗಳು ಸೂಚಿಸುತ್ತವೆ.

ಆಶಾವಾದ ಎಂದರೆ, “ನಿರೀಕ್ಷೆಯುಳ್ಳ ನೋಟ ಇಲ್ಲವೆ ಮನೋವೃತ್ತಿ; ಒಳ್ಳೆಯದಾಗುತ್ತದೆ ಎನ್ನುವ ಭರವಸೆಯನ್ನು ಇಟ್ಟುಕೊಳ್ಳುವುದು.” ಯೋಚಿಸಿದ ಹಾಗೆ ಆಗದಿರುವಾಗ ಒಬ್ಬ ಆಶಾವಾದಿಗೆ ಹೇಗನಿಸುತ್ತದೆ? ಅವನದನ್ನು ಒಂದು ಶಾಶ್ವತ ಸೋಲಾಗಿ ನೋಡುವುದಿಲ್ಲ. ಇದರರ್ಥ ಅವನು ವಾಸ್ತವಿಕತೆಯನ್ನು ಅಲ್ಲಗಳೆಯುತ್ತಾನೆಂದಲ್ಲ. ಬದಲಿಗೆ, ಅವನು ವಿಷಯವನ್ನು ಸ್ವೀಕರಿಸಿ ಅದನ್ನು ಪರೀಕ್ಷಿಸುತ್ತಾನೆ. ತದನಂತರ, ಪರಿಸ್ಥಿತಿ ಅನುಮತಿಸುವಂತೆ ಸನ್ನಿವೇಶವನ್ನು ಬದಲಾಯಿಸಲು ಅಥವಾ ಅದನ್ನು ಉತ್ತಮಗೊಳಿಸಲು ಅವನು ಕ್ರಿಯೆಗೈಯುತ್ತಾನೆ.

ಇನ್ನೊಂದು ಕಡೆ ಒಬ್ಬ ನಿರಾಶಾವಾದಿಯಾದರೊ, ನಡೆದ ವಿಪತ್ತಿಗೆ ಹೆಚ್ಚಾಗಿ ತನ್ನನ್ನೇ ಹೊಣೆಗಾರನನ್ನಾಗಿ ಮಾಡುತ್ತಾನೆ. ಆಗಬಾರದ ವಿಷಯವು ಸಂಭವಿಸುವಾಗ ಅದು ಶಾಶ್ವತವಾದ ಸೋಲೆಂದೂ ತನ್ನ ಸ್ವಂತ ಮೂರ್ಖತನ, ಅಸಾಮರ್ಥ್ಯ ಮತ್ತು ತನ್ನ ಅಂದಗೆಟ್ಟ ರೂಪದ ಕಾರಣದಿಂದಲೂ ಆಗಿದೆ ಎಂದವನು ಊಹಿಸುತ್ತಾನೆ. ಇದರ ಫಲಿತಾಂಶವಾಗಿ ಅವನು ಸೋಲಿಗೆ ಶರಣಾಗತನಾಗುತ್ತಾನೆ.

ಆಶಾವಾದವು ನಮ್ಮ ಆರೋಗ್ಯಕ್ಷೇಮವನ್ನು ಪ್ರಭಾವಿಸುತ್ತದೊ? ಹೌದು. ಯು.ಎಸ್‌.ಎಯ ಮಿನೆಸೊಟದ ರೊಚೆಸ್ಟರ್‌ನಲ್ಲಿರುವ ಮೆಯೋ ಚಿಕಿತ್ಸಾಲಯದಲ್ಲಿ 30 ವರ್ಷಗಳ ಕಾಲಾವಧಿಯಲ್ಲಿ 800ಕ್ಕಿಂತಲೂ ಹೆಚ್ಚು ರೋಗಿಗಳ ಅಧ್ಯಯನ ನಡೆಸಲಾಯಿತು. ಆಶಾವಾದಿಗಳಿಗೆ ಉತ್ತಮ ಆರೋಗ್ಯವಿತ್ತು ಮತ್ತು ಗಮನಾರ್ಹವಾಗಿ ಅವರು ಇತರರಿಗಿಂತ ಹೆಚ್ಚು ಕಾಲ ಜೀವಿಸಿದರು ಎಂದು ವಿಜ್ಞಾನಿಗಳು ಈ ಅಧ್ಯಯನದಿಂದ ಕಂಡುಕೊಂಡರು. ಆಶಾವಾದಿಗಳು ಒತ್ತಡವನ್ನು ಹೆಚ್ಚು ಉತ್ತಮವಾಗಿ ನಿಭಾಯಿಸಿದರು ಮತ್ತು ಅವರು ಖಿನ್ನತೆಗೊಳಗಾಗುವ ಸಂಭಾವ್ಯತೆ ತೀರ ಕಡಿಮೆ ಎಂಬುದನ್ನೂ ಸಂಶೋಧಕರು ಗಮನಿಸಿದರು.

ಸಮಸ್ಯೆಗಳು ಹೆಚ್ಚುತ್ತಿರುವಂತೆ ತೋರುವ ಲೋಕವೊಂದರಲ್ಲಿ ಆಶಾವಾದಿಗಳಾಗಿರುವುದು ಸುಲಭಸಾಧ್ಯವಲ್ಲ. ಹಾಗಾಗಿ, ಅನೇಕರಿಗೆ ಧನಾತ್ಮಕವಾಗಿ ಯೋಚಿಸುವುದು ಕಷ್ಟಕರವಾಗುತ್ತಿರುವುದು ಅಚ್ಚರಿಯೇನಲ್ಲ. ಈ ಸಮಸ್ಯೆಯನ್ನು ಬಗೆಹರಿಸಲು ಏನು ಮಾಡಬಹುದು? ಇಲ್ಲಿ ಕೊಡಲಾಗಿರುವ ಚೌಕದಲ್ಲಿರುವ ಕೆಲವು ಸಲಹೆಗಳಿಂದ ನಿಮಗೆ ಸಹಾಯ ಸಿಗಬಹುದು.

ಹರ್ಷಭರಿತ ಮನೋವೃತ್ತಿಯು ಎಲ್ಲ ಕಾಯಿಲೆಗಳನ್ನು ಗುಣಪಡಿಸದಿದ್ದರೂ ಹೆಚ್ಚು ಆರೋಗ್ಯದಾಯಕ ಹಾಗೂ ಹೆಚ್ಚು ಸಂತೃಪ್ತಿಯ ಜೀವನ ನಡೆಸುವುದಕ್ಕೆ ನೆರವಾಗುತ್ತದೆ. ಬೈಬಲ್‌ ಹೇಳುವುದು: “ದೀನನ ದಿನಗಳೆಲ್ಲಾ ದುಃಖಭರಿತ; ಹರ್ಷಹೃದಯನಿಗೆ ನಿತ್ಯವೂ ಔತಣ.”​—⁠ಜ್ಞಾನೋಕ್ತಿ 15:15. (g 9/07)

[ಪುಟ 22ರಲ್ಲಿರುವ ಚೌಕ/ಚಿತ್ರ]

ಹೆಚ್ಚು ಆಶಾವಾದಿಗಳಾಗಿರಲು ಕೆಲವು ಸಲಹೆಗಳು *

◼ ನೀವು ಯಾವುದೋ ಒಂದು ವಿಷಯವನ್ನು ಆನಂದಿಸಲಿಕ್ಕಿಲ್ಲ ಅಥವಾ ಒಂದು ಯೋಜನೆಯಲ್ಲಿ ವಿಫಲರಾಗುವಿರಿ ಎಂಬಂಥ ಆಲೋಚನೆಗಳು ನಿಮ್ಮ ಮನಸ್ಸಿಗೆ ಬಂದಾಗ ಒಡನೆ ಅವನ್ನು ತಳ್ಳಿಹಾಕಿರಿ. ಧನಾತ್ಮಕ ಅಂಶಗಳ ಮೇಲೆ ಗಮನ ಕೇಂದ್ರೀಕರಿಸಿರಿ.

◼ ನಿಮ್ಮ ಕೆಲಸದಲ್ಲಿ ಆನಂದಿಸಲು ಪ್ರಯತ್ನಿಸಿ. ನೀವು ಯಾವುದೇ ಕೆಲಸವನ್ನು ಮಾಡುತ್ತಿರುವುದಾದರೂ ನಿಮಗೆ ತೃಪ್ತಿ ತರುವ ಅಂಶಗಳತ್ತ ನೋಡಿರಿ.

◼ ಬದುಕಿನತ್ತ ಧನಾತ್ಮಕ ನೋಟವಿರುವ ಸ್ನೇಹಿತರನ್ನು ಆರಿಸಿರಿ.

◼ ನಿಮ್ಮ ಹತೋಟಿಯಲ್ಲಿರುವ ಸನ್ನಿವೇಶಗಳನ್ನು ನಿಭಾಯಿಸಿರಿ; ಇಲ್ಲದವುಗಳನ್ನು ಸಹಿಸಿಕೊಳ್ಳಲು ಪ್ರಯತ್ನಿಸಿರಿ.

◼ ಪ್ರತಿದಿನ ನೀವು ಅನುಭವಿಸಿದ ಮೂರು ಒಳ್ಳೇ ವಿಷಯಗಳನ್ನು ಬರೆದಿಡಿ.

[ಪಾದಟಿಪ್ಪಣಿ]

^ ಮೇಲಿನ ಪಟ್ಟಿಯು ಮೆಯೋ ಚಿಕಿತ್ಸಾಲಯವು ತಯಾರಿಸಿದ ಪ್ರಕಾಶನವೊಂದರ ಮೇಲೆ ಅಂಶಿಕವಾಗಿ ಆಧರಿತವಾಗಿದೆ.