ನಿಮ್ಮ ಮಕ್ಕಳ ಭಾವನೆಗಳನ್ನು ಅಂಗೀಕರಿಸಿರಿ
ಹೆಜ್ಜೆ 6
ನಿಮ್ಮ ಮಕ್ಕಳ ಭಾವನೆಗಳನ್ನು ಅಂಗೀಕರಿಸಿರಿ
ಏಕೆ ಅಗತ್ಯ? ಮಕ್ಕಳ ಜೀವನದಲ್ಲಿ ಹೆತ್ತವರೇ ಅತಿ ಪ್ರಾಮುಖ್ಯ ವ್ಯಕ್ತಿಗಳಾಗಿರುವುದರಿಂದ ತಮ್ಮ ಅನಿಸಿಕೆಗಳು ಹಾಗೂ ಭಾವನೆಗಳು ಹೆತ್ತವರಿಗೆ ತಿಳಿದಿರಬೇಕೆಂಬುದೇ ಅವರ ಅಪೇಕ್ಷೆ ಮತ್ತು ಅಗತ್ಯತೆ ಆಗಿದೆ. ಮಕ್ಕಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದಾಗಲೆಲ್ಲ ಹೆತ್ತವರು ಅವುಗಳನ್ನು ಯಾವಾಗಲೂ ತಳ್ಳಿಹಾಕುತ್ತಾ ಇರುವಲ್ಲಿ, ಮಕ್ಕಳು ಮನಬಿಚ್ಚಿ ಮಾತಾಡುವ ಸಂಭಾವ್ಯತೆ ಕಡಿಮೆಯಾಗುವುದು. ಅಲ್ಲದೆ, ಅವರು ತಮ್ಮ ಸ್ವಂತ ಅನಿಸಿಕೆ ಹಾಗೂ ಯೋಚನಾ ಸಾಮರ್ಥ್ಯದ ಮೇಲೆ ನಂಬಿಕೆ ಕಳೆದುಕೊಳ್ಳಬಹುದು.
ಸಮಸ್ಯೆ: ಮಕ್ಕಳಿಗೆ ತಮ್ಮ ಯೋಚನೆಗಳಿಗೆ ಹಾಗೂ ಭಾವನೆಗಳಿಗೆ ಬಣ್ಣಹಚ್ಚಿ ಹೇಳುವ ಸ್ವಭಾವವಿರುತ್ತದೆ. ಕೆಲವೊಮ್ಮೆ ಅವರು ಹೇಳುವಂಥ ಮಾತುಗಳು ಹೆತ್ತವರನ್ನು ಚಿಂತೆಗೀಡು ಮಾಡಲೂಬಹುದು. ಉದಾಹರಣೆಗಾಗಿ, ತುಂಬ ಹತಾಶೆಗೊಂಡ ಮಗ/ಮಗಳು, ‘ನನಗೆ ಜೀವಿಸುವುದೇ ಬೇಡವೆನಿಸುತ್ತದೆ’ ಎಂದು ಹೇಳಬಹುದು. * ಆಗ ತಂದೆ ಇಲ್ಲವೇ ತಾಯಿ ಆ ಭಾವನೆಯನ್ನು ತಳ್ಳಿಹಾಕುತ್ತಾ ಕೂಡಲೇ, ‘ಸುಮ್ಮನೆ ಹುಚ್ಚುಚ್ಚಾಗಿ ಏನೇನೋ ಹೇಳಬೇಡ’ ಎಂದು ಹೇಳಿಬಿಟ್ಟಾರು. ಅಂಥ ಋಣಾತ್ಮಕ ಯೋಚನೆ ಇಲ್ಲವೆ ಭಾವನೆ ತಮ್ಮ ಮಕ್ಕಳಿಗಿದೆಯೆಂದು ಒಪ್ಪಿಕೊಂಡರೆ, ಅವರಿಗೆ ಪ್ರೋತ್ಸಾಹ ಕೊಟ್ಟಂತಾಗುತ್ತದೆಂದು ಹೆತ್ತವರು ಯೋಚಿಸಬಹುದು.
ಪರಿಹಾರ: “ಪ್ರತಿಯೊಬ್ಬನು ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ ಇರಲಿ. ಕೋಪಿಸುವದರಲ್ಲಿಯೂ ನಿಧಾನವಾಗಿರಲಿ” ಎಂಬ ಬೈಬಲ್ ಬುದ್ಧಿವಾದವನ್ನು ಅನ್ವಯಿಸಿರಿ. (ಯಾಕೋಬ 1:19) ಯೆಹೋವ ದೇವರು ತನ್ನ ಅನೇಕ ನಂಬಿಗಸ್ತ ಸೇವಕರ ಋಣಾತ್ಮಕ ಭಾವನೆಗಳನ್ನು ಅಂಗೀಕರಿಸಿದನು. ಆದುದರಿಂದಲೇ ಅವುಗಳನ್ನು ಬೈಬಲ್‌ನಲ್ಲಿ ದಾಖಲಿಸಿಟ್ಟನು ಎಂಬುದನ್ನು ಗಮನಿಸಿ. (ಆದಿಕಾಂಡ 27:46; ಕೀರ್ತನೆ 73:12, 13) ಇದಕ್ಕೆ ಒಂದು ಉದಾಹರಣೆ, ಯೋಬನು ಕಠಿನ ಪರೀಕ್ಷೆಗಳನ್ನು ಅನುಭವಿಸುತ್ತಿದ್ದಾಗ ತಾನು ಸಾಯಲು ಇಚ್ಛಿಸುತ್ತೇನೆಂದು ಹೇಳಿರುವ ದಾಖಲೆ ಆಗಿದೆ.—ಯೋಬ 14:13.
ಯೋಬನ ಯೋಚನೆ ಹಾಗೂ ಅನಿಸಿಕೆಗಳಲ್ಲಿ ಕೆಲವೊಂದನ್ನು ತಿದ್ದುವ ಆವಶ್ಯಕತೆಯಿತ್ತೆಂಬುದು ಸುವ್ಯಕ್ತ. ಆದರೆ ಯೆಹೋವನು, ಯೋಬನ ಅನಿಸಿಕೆಗಳನ್ನು ತಳ್ಳಿಹಾಕಲಿಲ್ಲ ಅಥವಾ ಅವನು ಮಾತಾಡುವುದನ್ನು ತಡೆಗಟ್ಟಲಿಲ್ಲ. ಅದರ ಬದಲು ಅವನು ತನ್ನ ಮನಸ್ಸಿನಲ್ಲಿದ್ದ ಎಲ್ಲವನ್ನೂ ಹೇಳಿಬಿಡುವಂತೆ ಅನುಮತಿಸುವ ಮೂಲಕ ಯೆಹೋವನು ಅವನಿಗೆ ಮಾನಕೊಟ್ಟನು. ತದನಂತರವೇ ಯೆಹೋವನು ಅವನನ್ನು ದಯೆಯಿಂದ ತಿದ್ದಿದನು. ಒಬ್ಬ ಕ್ರೈಸ್ತ ತಂದೆ ಈ ವಿಷಯವನ್ನು ಹೀಗೆ ವ್ಯಕ್ತಪಡಿಸಿದನು: “ನಾನು ಯೆಹೋವನಿಗೆ ನನ್ನ ಮನಸ್ಸಿನಲ್ಲಿದ್ದದ್ದೆಲ್ಲವನ್ನೂ ಹೇಳಿಬಿಡುವಂತೆ ಆತನು ಅನುಮತಿಸುವುದರಿಂದ, ನನ್ನ ಮಕ್ಕಳು ಸಹ ತಮ್ಮ ಧನಾತ್ಮಕ ಹಾಗೂ ಋಣಾತ್ಮಕ ಭಾವನೆಗಳನ್ನು ನನ್ನಲ್ಲಿ ತೋಡಿಕೊಳ್ಳುವಂತೆ ಅನುಮತಿಸುವುದು ಸಮಂಜಸವೆಂದು ನಾನೆಣಿಸುತ್ತೇನೆ.”
“ನಿನಗೆ ನಿಜವಾಗಿಯೂ ಹಾಗನಿಸುವುದಿಲ್ಲ” ಇಲ್ಲವೇ “ನೀನು ಹಾಗೆ ನೆನಸಲೇಬಾರದು” ಎಂಬ ಮಾತುಗಳು ಮುಂದಿನ ಸಲ ನಿಮ್ಮ ಬಾಯಿಗೆ ಬಂದರೂ ಯೇಸುವಿನ ಈ ಪ್ರಸಿದ್ಧ ನಿಯಮವನ್ನು ನೆನಪಿನಲ್ಲಿಡಿರಿ: “ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ, ಅಂಥದನ್ನೇ ನೀವು ಅವರಿಗೆ ಮಾಡಿರಿ.” (ಲೂಕ 6:31) ದೃಷ್ಟಾಂತಕ್ಕಾಗಿ, ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮೊಂದಿಗೆ ಯಾರೋ ಕಠೋರವಾಗಿ ವರ್ತಿಸಿದ್ದಾರೆ ಇಲ್ಲವೇ ಬಹುಶಃ ನಿಮ್ಮ ಸ್ವಂತ ತಪ್ಪಿನಿಂದಾಗಿ ನಿಮಗೆ ಹತಾಶೆಯಾಗಿದೆ ಎಂದಿಟ್ಟುಕೊಳ್ಳಿ. ನಿಮಗಾಗಿರುವ ಹತಾಶೆಯನ್ನು ನಿಮ್ಮ ಆಪ್ತ ಮಿತ್ರನಿಗೆ ತಿಳಿಸುವಾಗ, ‘ನಾನು ಇನ್ನು ಮುಂದೆ ಈ ಉದ್ಯೋಗ ಮಾಡಲಾರೆ’ ಎಂದು ಹೇಳುತ್ತೀರಿ. ಆಗ ನಿಮ್ಮ ಸ್ನೇಹಿತನು ಏನು ಹೇಳುವಂತೆ ಬಯಸುವಿರಿ? ಅವನು ಆ ಕೂಡಲೇ ‘ಇಲ್ಲ, ನಿನಗೆ ನಿಜವಾಗಿ ಹಾಗನಿಸುವುದಿಲ್ಲ’ ಎನ್ನುತ್ತಾ, “ತಪ್ಪು ನಿನ್ನದೇ” ಎಂದು ಹೇಳುವಂತೆ ಬಯಸುವಿರೊ? ಇಲ್ಲವೇ, “ನಿನಗೆ ತುಂಬ ಕಷ್ಟವಾಗಿದ್ದಿರಬಹುದಲ್ಲ. ನಿನ್ನ ಇಡೀ ದಿನ ಹಾಳಾಗಿರಬಹುದು” ಎಂದು ಅವನು ನಿಮಗೆ ಹೇಳುವಂತೆ ಇಷ್ಟಪಡುವಿರೊ?
ಎದುರಿಗಿರುವ ವ್ಯಕ್ತಿ ತಮ್ಮನ್ನೂ ತಾವು ಎದುರಿಸುತ್ತಿರುವಂಥ ಕಷ್ಟಗಳನ್ನೂ ನಿಜವಾಗಿ ಅರ್ಥಮಾಡಿಕೊಳ್ಳುತ್ತಿದ್ದಾನೆಂದು ಮಕ್ಕಳಿಗಾಗಲಿ ವಯಸ್ಕರಿಗಾಗಲಿ ಭಾಸವಾದಾಗ ಅವರು ಸಲಹೆಸೂಚನೆಯನ್ನು ಸ್ವೀಕರಿಸುವ ಸಾಧ್ಯತೆ ಹೆಚ್ಚು. “ಜ್ಞಾನಿಯ ಹೃದಯವು ಅವನ ಬಾಯಿಗೆ ಜಾಣತನವನ್ನೂ ಅವನ ತುಟಿಗಳಿಗೆ ಉಪದೇಶಶಕ್ತಿಯನ್ನೂ ಹೆಚ್ಚಿಸುವದು” ಎಂದು ದೇವರ ವಾಕ್ಯವು ಹೇಳುತ್ತದೆ.—ಜ್ಞಾನೋಕ್ತಿ 16:23.
ನೀವು ಕೊಡುವ ಯಾವುದೇ ಬುದ್ಧಿವಾದವನ್ನು ಮಕ್ಕಳು ಗಂಭೀರವಾಗಿ ತೆಗೆದುಕೊಳ್ಳುವುದನ್ನು ನೀವು ಹೇಗೆ ಖಚಿತಪಡಿಸಿಕೊಳ್ಳಬಲ್ಲಿರಿ? (g 8/07)
[ಪಾದಟಿಪ್ಪಣಿ]
^ ಸಾಯುವುದರ ಬಗ್ಗೆ ನಿಮ್ಮ ಮಕ್ಕಳು ಹೇಳುವ ಯಾವುದೇ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳಿ.
[ಪುಟ 8ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಸಂಗತಿಯನ್ನು ಕೇಳುವುದಕ್ಕೆ ಮುಂಚೆ ಉತ್ತರಕೊಡುವವರಿಗೆ ಅದು ಮೂರ್ಖತನವೂ ಅವಮಾನವೂ ಆಗಿದೆ.” —ಜ್ಞಾನೋಕ್ತಿ 18:13