ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸ್ವಲ್ಪ ಪೆನ್ಸಿಲ್‌ ಕೊಡುತ್ತೀರಾ?

ಸ್ವಲ್ಪ ಪೆನ್ಸಿಲ್‌ ಕೊಡುತ್ತೀರಾ?

ಸ್ವಲ್ಪ ಪೆನ್ಸಿಲ್‌ ಕೊಡುತ್ತೀರಾ?

ಬ್ರಿಟನಿನ ಎಚ್ಚರ! ಲೇಖಕರಿಂದ

ಬೆಲೆ ತೀರ ಅಗ್ಗ, ತಕ್ಷಣ ಸಿದ್ಧ, ಭಾರವೇ ಇಲ್ಲ. ಅದು ಜೇಬಿನೊಳಗೆ ಅಚ್ಚುಕಟ್ಟಾಗಿ ಕೂರುತ್ತದೆ. ಅದಕ್ಕೆ ವಿದ್ಯುತ್‌ ಬೇಡವೆ ಬೇಡ. ಅದು ಎಂದಿಗೂ ಸೋರುವುದಿಲ್ಲ ಮತ್ತು ಅದರ ಕಲೆಯನ್ನು ಅಳಿಸಸಾಧ್ಯ. ಮಕ್ಕಳು ಬರೆಯಲು ಕಲಿಯುವುದು ಅದರಿಂದಲೇ. ನುರಿತ ಕಲಾಕಾರರು ಅದರಿಂದ ನಾಯಕಕೃತಿಯನ್ನೇ ಸೃಷ್ಟಿಸುತ್ತಾರೆ. ಟಿಪ್ಪಣಿಗಳನ್ನು ಬರೆಯುವುದಕ್ಕಾಗಿ ಅದನ್ನು ಕೈಗೆಟಕುವಂತೆ ಇಡುತ್ತೇವೆ. ಹೌದು, ಎಲ್ಲರಿಂದಲೂ ಕೊಳ್ಳಸಾಧ್ಯವಿರುವ ಹಾಗೂ ಪ್ರಪಂಚದಲ್ಲೆಲ್ಲಾ ಹೆಚ್ಚು ಬಳಕೆಯಲ್ಲಿರುವ ಆ ಸಾಮಾನ್ಯ ಲೇಖನಿಯೇ ಪೆನ್ಸಿಲ್‌. ಅದು ಹುಟ್ಟಿಬೆಳೆದುಬಂದ ರೋಚಕ ಕಥೆ ಇಂಗ್ಲೆಂಡ್‌ನ ಒಂದು ಹಳ್ಳಿಗಾಡಿನಲ್ಲಿ ಸಂಭವಿಸಿದ ಆಕಸ್ಮಿಕ ಅವಿಷ್ಕಾರದಿಂದ ಆರಂಭಗೊಳ್ಳುತ್ತದೆ.

ಕಪ್ಪು ಸೀಸ

ಉತ್ತರ ಇಂಗ್ಲೆಂಡ್‌ನ ಲೇಕ್‌ ಜಿಲ್ಲೆಯಲ್ಲಿ ಬಾರೋಡೇಲ್‌ ಎಂಬ ಕಣಿವೆ ಪ್ರದೇಶವಿದೆ. ಆ ಬಾರೋಡೇಲ್‌ನ ತಪ್ಪಲಿನಲ್ಲಿ, ಒಂದು ರೀತಿಯ ಕಪ್ಪು ಪದಾರ್ಥದ ಗುಪ್ಪೆಯನ್ನು ಹದಿನಾರನೆಯ ಶತಮಾನದಲ್ಲಿ ಕಂಡುಕೊಳ್ಳಲಾಯಿತು. ಆ ಖನಿಜ ವಸ್ತು ನೋಡಲು ಕಲ್ಲಿದ್ದಲಿನಂತೆ ಇತ್ತಾದರೂ ಉರಿಯಲಿಲ್ಲ. ಅದನ್ನು ಗೀಚಿದಾಗ ಮಿರ್ರನೆ ಮಿರುಗಿದ, ಕಪ್ಪು ಬಣ್ಣದ ಆದರೆ ಸುಲಭವಾಗಿ ಅಳಿಸಬಲ್ಲ ಕಲೆಯನ್ನು ಉಂಟುಮಾಡಿತು. ಆರಂಭದಲ್ಲಿ ಈ ಪದಾರ್ಥವು ಕಪ್ಪು ಸೀಸ, ವಾಡ್‌ ಮತ್ತು ಪ್ಲಂಬೇಗೋ ಎಂಬ ಬೇರೆ ಬೇರೆ ಹೆಸರುಗಳನ್ನು ಹೊಂದಿತ್ತು. ಪ್ಲಂಬೇಗೋ ಅಂದರೆ “ಸೀಸದಂತೆ ವರ್ತಿಸುವಂಥದ್ದು” ಎಂದರ್ಥ. ಅದು ಜಿಡ್ಡು ಜಿಡ್ಡಾಗಿದ್ದ ಕಾರಣ, ಜನರು ಅದರ ತುಂಡುಗಳನ್ನು ಕುರಿಯ ಚರ್ಮದಲ್ಲಿ ಸುತ್ತಿಡುತ್ತಿದ್ದರು ಅಥವಾ ಅದರ ಸಣ್ಣ ಕಡ್ಡಿಗಳನ್ನು ದಾರದಿಂದ ಸುತ್ತಿಡುತ್ತಿದ್ದರು. ಈ ಕಪ್ಪು ಸೀಸವನ್ನು ಮರದ ಕೊಳವೆಯೊಳಗೆ ಸೇರಿಸಲು ಮೊಟ್ಟಮೊದಲು ಯೋಚಿಸಿದವರು ಯಾರು ಎಂಬುದು ಇನ್ನೂ ನಿಗೂಢ. ಆದರೆ 1560ರಷ್ಟಕ್ಕೆ ಪ್ರಾಚೀನ ಪೆನ್ಸಿಲ್‌ಗಳು ಯುರೋಪ್‌ ಖಂಡವನ್ನೂ ತಲಪಿದ್ದವು.

ಸ್ವಲ್ಪದರಲ್ಲಿಯೇ, ಚಿತ್ರಕಾರರ ಬೇಡಿಕೆಯನ್ನು ಪೂರೈಸುವುದಕ್ಕಾಗಿ ಕಪ್ಪು ಸೀಸವನ್ನು ಗಣಿ ಕೊರೆದು ತೆಗೆಯಲಾಯಿತು ಮತ್ತು ರಫ್ತುಮಾಡಲಾಯಿತು. 17ನೇ ಶತಮಾನದಲ್ಲಿ, ಅದು ಹೆಚ್ಚುಕಡಿಮೆ ಎಲ್ಲೆಲ್ಲೂ ಉಪಯೋಗಕ್ಕೆ ಬಂತು. ಅದೇ ಸಮಯದಲ್ಲಿ, ಪೆನ್ಸಿಲ್‌ ಉತ್ಪಾದಕರು ಒಂದು ಉತ್ತಮ ಲೇಖನ ಸಾಮಗ್ರಿಯನ್ನು ತಯಾರಿಸಲಿಕ್ಕಾಗಿ ಕಪ್ಪು ಸೀಸದ ಮೇಲೆ ಪ್ರಯೋಗ ನಡೆಸಿದರು. ಬಾರೋಡೇಲ್‌ ಪದಾರ್ಥವು ಅಮಿಶ್ರವೂ ಸುಲಭವಾಗಿ ಬೇರ್ಪಡಿಸುವಂಥದ್ದೂ ಆಗಿರಲಾಗಿ ಅದರ ಮೇಲೆ ಕಳ್ಳರ ಮತ್ತು ಕಾಳಸಂತೆಯವರ ಕಣ್ಣು ಬಿತ್ತು. ಅದಕ್ಕಾಗಿಯೇ ಬ್ರಿಟಿಷ್‌ ಪಾರ್ಲಿಮೆಂಟ್‌ 1752ರಲ್ಲಿ ಒಂದು ಕಾನೂನನ್ನು ಜಾರಿಗೆ ತಂದಿತು. ಇದರ ಪ್ರಕಾರ ಕಪ್ಪು ಸೀಸವನ್ನು ಕದ್ದವರಿಗೆ ಸೆರೆಮನೆವಾಸ ಇಲ್ಲವೆ ದಂಡನೆಯ ನೆಲೆಗಳಿಗೆ ಗಡಿಪಾರು ಮಾಡುವ ಶಿಕ್ಷೆಯನ್ನು ವಿಧಿಸಲಾಗುತ್ತಿತ್ತು.

ಇಸವಿ 1779ರಲ್ಲಿ ಸ್ವೀಡಿಷ್‌ನ ರಸಾಯನ ವಿಜ್ಞಾನಿಯಾದ ಕಾರ್ಲ್‌ ಡಬ್ಲ್ಯೂ. ಷೇಲ ಎಂಬವನು ಆಶ್ಚರ್ಯಕರವಾದ ವಿಷಯವನ್ನು ಪತ್ತೆಹಚ್ಚಿದನು. ಆ ಅವಿಷ್ಕಾರದಿಂದ ಕಪ್ಪು ಸೀಸವು ನಿಜವಾದ ಸೀಸವಲ್ಲ, ಮೃದು ರೂಪದಲ್ಲಿರುವ ಶುದ್ಧವಾದ ಕಾರ್ಬನ್‌ ಎಂದು ತಿಳಿದುಬಂತು. ಹತ್ತು ವರ್ಷಗಳ ನಂತರ ಜರ್ಮನ್‌ ಭೂವಿಜ್ಞಾನಿ ಏಬ್ರಹಾಮ್‌ ಜಿ. ವರ್ನರ್‌ ಅದಕ್ಕೆ ಗ್ರಾಫೈಟ್‌ ಎಂದು ಹೆಸರಿಟ್ಟನು. ಇದು “ಬರೆಯಲು” ಎಂಬ ಅರ್ಥವಿರುವ ಗ್ರೀಕ್‌ ಪದವಾದ ಗ್ರಾಫೆನ್‌ನಿಂದ ಬಂದಿದೆ. ಹೌದು, “ಸೀಸದ ಕಡ್ಡಿ” ಎಂಬ ಹೆಸರು ಅದಕ್ಕಿದ್ದರೂ, ಅದರಲ್ಲಿ ಸೀಸದ ಅಂಶವೇ ಇಲ್ಲ!

ಪೆನ್ಸಿಲ್‌ ಬೆಳೆದುಬಂದ ರೀತಿ

ಹಲವಾರು ವರ್ಷಗಳ ವರೆಗೆ ಇಂಗ್ಲೆಂಡ್‌ನಲ್ಲಿ ತೆಗೆಯಲ್ಪಟ್ಟ ಗ್ರಾಫೈಟ್‌, ಪೆನ್ಸಿಲ್‌ ಉತ್ಪಾದನೆಯ ಉದ್ಯಮದಲ್ಲಿ ಏಕಸ್ವಾಮ್ಯವನ್ನು ಹೊಂದಿತ್ತು. ಏಕೆಂದರೆ, ಅದು ಶುದ್ಧವಾಗಿತ್ತು ಮತ್ತು ಯಾವುದೇ ಹೆಚ್ಚಿನ ಪ್ರಕ್ರಿಯೆ ಅದಕ್ಕೆ ಬೇಕಾಗಿರಲಿಲ್ಲ. ಯೂರೋಪಿನ ಗ್ರಾಫೈಟ್‌ ಗುಣಮಟ್ಟದಲ್ಲಿ ಕೆಳದರ್ಜೆಯಾಗಿದ್ದುದರಿಂದ, ಅಲ್ಲಿನ ಪೆನ್ಸಿಲ್‌ ತಯಾರಕರು ಪೆನ್ಸಿಲ್‌ನ ಸೀಸದ ಗುಣಮಟ್ಟವನ್ನು ಉತ್ತಮಗೊಳಿಸಲು ಸಂಶೋಧನೆ ನಡಿಸಿದರು. ಫ್ರೆಂಚ್‌ ಇಂಜಿನಿಯರ್‌ ನಿಕೋಲಾ-ಝಾಕ್‌ ಕಾಂಟೆ ಎಂಬವನು ಗ್ರಾಫೈಟ್‌ ಪುಡಿಯನ್ನು ಜೇಡಿಮಣ್ಣಿನೊಂದಿಗೆ ಬೆರಸಿ, ಆ ಮಿಶ್ರಣವನ್ನು ತೆಳುಕಡ್ಡಿಗಳಾಗಿ ಮಾಡಿ ಒಲೆಯಲ್ಲಿ ಸುಟ್ಟನು. ಜೇಡಿಮಣ್ಣಿನೊಂದಿಗೆ ಗ್ರಾಫೈಟ್‌ ಅನ್ನು ಸೇರಿಸುವ ಪ್ರಮಾಣವನ್ನು ಹೆಚ್ಚುಕಡಿಮೆ ಮಾಡಿದ ಮೂಲಕ ಕಪ್ಪು ಬಣ್ಣದಲ್ಲಿ ವಿವಿಧ ಛಾಯೆಯುಳ್ಳ ಸೀಸದ ಕಡ್ಡಿಗಳನ್ನು ಉತ್ಪಾದಿಸಿದನು. ಇಂದಿಗೂ ಅದೇ ಕಾರ್ಯವಿಧಾನ ಬಳಕೆಯಲ್ಲಿದೆ. 1795ರಲ್ಲಿ ಕಾಂಟೆ ತನ್ನ ಸಂಶೋಧನೆಯ ಒಡೆತನದ ದಾಖಲೆಯನ್ನು (ಪೇಟೆಂಟ್‌) ಪಡೆದನು.

ಹತ್ತೊಂಬತ್ತನೆಯ ಶತಮಾನದಲ್ಲಿ ಪೆನ್ಸಿಲ್‌ ಉತ್ಪಾದನೆಯು ಒಂದು ಲಾಭದಾಯಕ ಉದ್ಯಮವಾಗಿ ಬೆಳೆಯಿತು. ಸೈಬೀರಿಯ, ಜರ್ಮನಿ ಮತ್ತು ಈಗ ಚೆಕ್‌ ರಿಪಬ್ಲಿಕ್‌ ಎಂದು ಕರೆಯಲ್ಪಡುತ್ತಿರುವ ದೇಶಗಳನ್ನು ಒಳಗೂಡಿಸಿ ಲೋಕದ ವಿವಿದೆಡೆಗಳಲ್ಲಿ ಗ್ರಾಫೈಟ್‌ ಅನ್ನು ಕಂಡುಹಿಡಿಯಲಾಯಿತು. ಜರ್ಮನಿಯಲ್ಲಿ ಮತ್ತು ಅನಂತರ ಅಮೆರಿಕದಲ್ಲಿ ಅನೇಕ ಕಾರ್ಖಾನೆಗಳು ತೆರೆಯಲ್ಪಟ್ಟವು. ಯಂತ್ರೀಕರಣ ಮತ್ತು ಭಾರಿ ಪ್ರಮಾಣದ ಉತ್ಪಾದನೆಯು ಪೆನ್ಸಿಲ್‌ಗಳ ಬೆಲೆಯನ್ನು ಗಣನೀಯವಾಗಿ ತಗ್ಗಿಸಿತು. 20ನೇ ಶತಮಾನದ ಆರಂಭದೊಳಗೆ ಶಾಲಾಮಕ್ಕಳು ಸಹ ಪೆನ್ಸಿಲನ್ನು ಉಪಯೋಗಿಸುತ್ತಿದ್ದರು. ಬಣ್ಣವಿಲ್ಲದ ಅಂಥ ಪೆನ್ಸಿಲ್‌ಗಳನ್ನು ಅಮೆರಿಕದಲ್ಲಿ “ಪೆನ್ನಿ ಪೆನ್ಸಿಲ್‌” ಎಂದು ಕರೆಯುತ್ತಿದ್ದರು.

ನವೀನ ಪೆನ್ಸಿಲ್‌

ಪ್ರಪಂಚದಾದ್ಯಂತ ಪ್ರತಿವರ್ಷ ಕೋಟಿಗಟ್ಟಲೆ ಪೆನ್ಸಿಲ್‌ಗಳು ಉತ್ಪಾದನೆಯಾಗುತ್ತಿರುವುದರಿಂದ, ಅವು ಬರೆವಣಿಗೆ ಮತ್ತು ಚಿತ್ರಕಲೆಯ ನವನವೀನ ಬಹುಪಯೋಗಿ ಸಾಧನವಾಗಿ ಪರಿಣಮಿಸಿವೆ. ಸಾಮಾನ್ಯವಾಗಿ ಬಳಸಲಾಗುವ ಒಂದು ಮರದ ಪೆನ್ಸಿಲ್‌ನಿಂದ 56 ಕಿ.ಮೀ. ಉದ್ದದ ಗೆರೆಯನ್ನು ಎಳೆಯಬಹುದು. 45,000 ಪದಗಳನ್ನು ಬರೆಯಬಹುದು. ಲೋಹದಿಂದಲೋ ಪ್ಲಾಸ್ಟಿಕ್‌ನಿಂದಲೋ ತಯಾರಿಸಿರುವ ಮಿಕ್ಯಾನಿಕ್‌ ಪೆನ್ಸಿಲ್‌ ತೆಳುವಾದ ಸೀಸದ ಕಡ್ಡಿಯನ್ನು ಹೊಂದಿದ್ದು, ಅದನ್ನು ಮೊನಚುಗೊಳಿಸುವ ಅವಶ್ಯವೇ ಇಲ್ಲ. ಕಲರ್‌ ಪೆನ್ಸಿಲ್‌ಗಳು ಗ್ರಾಫೈಟ್‌ನ ಸ್ಥಾನದಲ್ಲಿ ಬಣ್ಣಬಣ್ಣದ ಕಡ್ಡಿಗಳನ್ನು ಹೊಂದಿರುತ್ತವೆ. ಇಂದು, ಅಂಥ ಹಲವಾರು ಕಲರ್‌ ಪೆನ್ಸಿಲ್‌ಗಳು ಲಭ್ಯ.

ಎಲ್ಲ ಸಮಯಗಳಲ್ಲೂ ಬಹುಪಯೋಗಿ, ದಿಟ್ಟ, ಸರಳ ಮತ್ತು ಕಾರ್ಯಕಾರಿ ಆಗಿರುವ ಸಾಧಾರಣ ಪೆನ್ಸಿಲ್‌ ತನ್ನ ಬಳಕೆ ನಿಂತು ಹೋಗುವ ಯಾವುದೇ ಸೂಚನೆಯನ್ನು ಕೊಡುತ್ತಿಲ್ಲ. ಆದುದರಿಂದ, ಮುಂಬರುವ ದಿನಗಳಲ್ಲಿ, ಮನೆಯಲ್ಲಾಗಲಿ ಕೆಲಸದ ಸ್ಥಳದಲ್ಲಾಗಲಿ ಯಾರಾದರೂ “ಸ್ವಲ್ಪ ಪೆನ್ಸಿಲ್‌ ಕೊಡುತ್ತೀರಾ?” ಎಂದು ಕೇಳಿದರೆ ಅದೇನೂ ಆಶ್ಚರ್ಯವಲ್ಲ. (g 7/07)

[ಪುಟ 19ರಲ್ಲಿರುವ ಚೌಕ/ಚಿತ್ರ]

ಪೆನ್ಸಿಲ್‌ನೊಳಗೆ ಸೀಸದ ಕಡ್ಡಿ ಹೊಕ್ಕಿದ್ದು ಹೇಗೆ?

ನುಣ್ಣಗೆ ಪುಡಿ ಮಾಡಿದ ಗ್ರಾಫೈಟ್‌, ಜೇಡಿಮಣ್ಣು ಮತ್ತು ನೀರು ಮಿಶ್ರಿತ ದ್ರಾವಣವನ್ನು ಕಿರಿದಾಗಿರುವ ಲೋಹದ ಕೊಳವೆಯೊಳಗೆ ಭರದಿಂದ ಹೊಗಿಸಲಾಗುತ್ತದೆ. ಆ ದ್ರಾವಣ ಹೊರಗೆ ಬರುವಾಗ ಉದ್ದವಾಗಿ ಸೇವಿಗೆಯಾಕಾರದಲ್ಲಿ ಇರುತ್ತದೆ. ಈ ಸೀಸವನ್ನು ಒಣಗಿಸಿ, ಕತ್ತರಿಸಿ, ಒಲೆಯಲ್ಲಿ ಸುಟ್ಟನಂತರ ಬಿಸಿಯಾದ ಎಣ್ಣೆ ಮತ್ತು ಮೇಣದಲ್ಲಿ ಮುಳುಗಿಸಿ ತೆಗೆಯುತ್ತಾರೆ. ಸಾಮಾನ್ಯವಾಗಿ ದೇವದಾರುವಿನಂಥ ಸುಲಭವಾಗಿ ಚೂಪು ಮಾಡಬಲ್ಲ ಮರವನ್ನು ಹಲಗೆಗಳಾಗಿ ಸಿಗಿದು ಅದನ್ನು ಒಂದು ಪೆನ್ಸಿಲ್‌ನಷ್ಟು ಉದ್ದದಲ್ಲಿ ಮತ್ತು ಪೆನ್ಸಿಲ್‌ನ ಅರ್ಧ ಭಾಗದಷ್ಟು ದಪ್ಪದಲ್ಲಿ ಕಿಸೂಲಿ ಹಾಕಿ ನಯಗೊಳಿಸುತ್ತಾರೆ. ಅನಂತರ ಆ ಹಲಗೆಯಲ್ಲಿ ಸೀಸದ ಕಡ್ಡಿಯನ್ನು ಇಡಲಿಕ್ಕಾಗಿ ಗಾಡಿ ಕೊರೆಯುತ್ತಾರೆ. ಗಾಡಿ ಕೊರೆದಿರುವ ಪೆನ್ಸಿಲ್‌ನ ಅರ್ಧಭಾಗದಲ್ಲಿ ಸೀಸದ ಕಡ್ಡಿಗಳನ್ನು ಕೂಡಿಸಿ, ಅದರ ಮೇಲೆ ಇನ್ನೊಂದು ಅರ್ಧಭಾಗವನ್ನು ಸೇರಿಸಿ ಅಂಟಿಸುತ್ತಾರೆ. ಅಂಟು ಒಣಗಿದಾಗ, ಒಂದೊಂದು ಪೆನ್ಸಿಲನ್ನು ಪ್ರತ್ಯೇಕವಾಗಿ ಕತ್ತರಿಸಿ ತೆಗೆಯುತ್ತಾರೆ. ಅದಕ್ಕೆ ಆಕಾರ ರೂಪಿಸಿದ ಮೇಲೆ ಸ್ಯಾಂಡ್‌ಪೇಪರ್‌ನಿಂದ ತಿಕ್ಕಿ ನುಣುಪು ಮಾಡಿ ಬಣ್ಣ ಕೊಡುತ್ತಾರೆ. ಬಳಿಕ ಅದರ ಮೇಲೆ ತಯಾರಕರ ಟ್ರೇಡ್‌ಮಾರ್ಕ್‌ ಮತ್ತು ಇತರ ವಿವರಗಳನ್ನು ಮುದ್ರಿಸುತ್ತಾರೆ. ಈಗ ನಯವಾದ ಪೆನ್ಸಿಲ್‌ ರೆಡಿ. ಕೆಲವೊಮ್ಮೆ ಅಳಿಸುವ ರಬ್ಬರನ್ನು ಒಂದು ಕೊನೆಯಲ್ಲಿ ಜೋಡಿಸುತ್ತಾರೆ.

[ಕೃಪೆ]

Faber-Castell AG

[ಪುಟ 20ರಲ್ಲಿರುವ ಚೌಕ/ಚಿತ್ರ]

ಯಾವ ಪೆನ್ಸಿಲನ್ನು ನಾನು ಉಪಯೋಗಿಸಬೇಕು?

ನಿಮಗೆ ಅಗತ್ಯವಿರುವ ಪೆನ್ಸಿಲನ್ನು ಆಯ್ಕೆಮಾಡಲಿಕ್ಕಾಗಿ, ಅದರ ಬದಿಯಲ್ಲಿ ಮುದ್ರಿಸಿರುವ ಅಕ್ಷರಗಳನ್ನು ಮತ್ತು ಅಂಕಿಗಳನ್ನು ನೋಡಿರಿ. ಇವು ಪೆನ್ಸಿಲ್‌ನ ಕಾಠಿನ್ಯ ಮತ್ತು ಮೃದುತ್ವದ ಪ್ರಮಾಣವನ್ನು ಸೂಚಿಸುತ್ತವೆ. ಮೃದು ಪೆನ್ಸಿಲ್‌ಗಳ ಬರಹ ದಟ್ಟ ಕಪ್ಪು.

HB ಎಂಬುದು ಬಹುಪಯೋಗಿಯಾದ ಮಧ್ಯಮ ವರ್ಗದ ಸೀಸ.

B ಮೃದು ಸೀಸವನ್ನು ಸೂಚಿಸುತ್ತದೆ. 2B ಅಥವಾ 6B ಎಂಬುದು ಮೃದುತ್ವದ ಪ್ರಮಾಣವನ್ನು ಸೂಚಿಸುತ್ತದೆ. ಅಂಕಿ ಏರಿದಷ್ಟು ಸೀಸದ ಮೃದುತ್ವವು ಹೆಚ್ಚುತ್ತದೆ.

H ಸೀಸದ ಗಡುಸನ್ನು ಸೂಚಿಸುತ್ತದೆ. 2H, 4H, 6H ಹೀಗೆ ಅಂಕಿ ಏರಿದಂತೆ ಸೀಸದ ಗಡುಸಿನ ಪ್ರಮಾಣ ಹೆಚ್ಚು.

F ಎಂಬುದು ಸೀಸದ ನವಿರನ್ನು ಸೂಚಿಸುತ್ತದೆ.

ಕೆಲವು ದೇಶಗಳು ಬೇರೆ ಬೇರೆ ವಿಧಾನಗಳನ್ನು ಉಪಯೋಗಿಸುತ್ತವೆ. ಉದಾಹರಣೆಗೆ, ಅಮೆರಿಕದಲ್ಲಿ ಅಂಕಿ 2ನ್ನು ಹೊಂದಿರುವ ಪೆನ್ಸಿಲ್‌ HBಗೆ ಸಮವಾಗಿದೆ. ಆ ವಿಧಾನದಲ್ಲಿ ಅಂಕಿ ಏರಿದಂತೆ ಸೀಸದ ಗಡಸು ಹೆಚ್ಚು.