ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಂಟಿ ಹೆತ್ತವರಾಗಿದ್ದರೂ ಯಶಸ್ಸು ಸಾಧ್ಯ

ಒಂಟಿ ಹೆತ್ತವರಾಗಿದ್ದರೂ ಯಶಸ್ಸು ಸಾಧ್ಯ

ಒಂಟಿ ಹೆತ್ತವರಾಗಿದ್ದರೂ ಯಶಸ್ಸು ಸಾಧ್ಯ

ತಂದೆತಾಯಿ ಜೊತೆಯಾಗಿ ಬಾಳುತ್ತಿರುವ ಸಂಸಾರಗಳ ಸಂಖ್ಯೆ ಅಳಿವಿನಂಚಿನಲ್ಲಿರುವ ಜೀವಿಗಳ ಸಂಖ್ಯೆಯಂತೆ ಇಳಿಮುಖವಾಗುತ್ತಿದೆ ಎಂದು ಹೇಳಲಾಗಿದೆ. ಉದಾಹರಣೆಗೆ, ಯುನೈಟೆಡ್‌ ಸ್ಟೇಟ್ಸ್‌ ಒಂದರಲ್ಲೇ ಒಂಟಿ ಹೆತ್ತವರ ಸಂಖ್ಯೆ 1 ಕೋಟಿ 30 ಲಕ್ಷಕ್ಕಿಂತಲೂ ಹೆಚ್ಚು. ಅವರಲ್ಲಿ ಅಧಿಕಾಂಶ ಮಂದಿ ಒಂಟಿ ತಾಯಂದಿರು. ಸಂಶೋಧನೆಗನುಸಾರ ಆ ದೇಶದಲ್ಲಿ ಅರ್ಧದಷ್ಟು ಮಕ್ಕಳು ತಮ್ಮ ಯೌವನದ ಸ್ವಲ್ಪಾಂಶವನ್ನಾದರೂ ಒಂಟಿ ಹೆತ್ತವರೊಂದಿಗೆ ಕಳೆಯುವರು.

ನೀವೊಬ್ಬ ಒಂಟಿ ಹೆತ್ತವರಾಗಿರುವಲ್ಲಿ ನಿಮ್ಮ ಕುಟುಂಬ ಜೀವನ ಖಂಡಿತ ಯಶಸ್ವಿ ಆಗಬಲ್ಲದೆಂಬ ಆಶ್ವಾಸನೆ ನಿಮಗಿರಲಿ. ಈ ಸಲಹೆಸೂಚನೆಗಳನ್ನು ಅಳವಡಿಸಲು ಪ್ರಯತ್ನಿಸಿ.

ನಿರಾಶಾವಾದಿಗಳಾಗಬೇಡಿ. “ಬಾಧಿತರ ದಿನಗಳೆಲ್ಲವೂ ಕೆಟ್ಟವುಗಳೇ. ಆದರೆ ಸಂತೋಷ ಹೃದಯವುಳ್ಳವನಿಗೆ ನಿತ್ಯವೂ ಔತಣ” ಎನ್ನುತ್ತದೆ ಬೈಬಲ್‌. (ಜ್ಞಾನೋಕ್ತಿ 15:15, NIBV) ನಿಮ್ಮ ಬದುಕು ಔತಣಕೂಟದಲ್ಲಿರುವಂತೆ ಸದಾ ಹರ್ಷದಿಂದ ತುಂಬಿರಲಿಕ್ಕಿಲ್ಲ ನಿಜ. ಆದರೆ ಈ ವಚನ ಸೂಚಿಸುವಂತೆ ಸಂತೋಷವು ಒಬ್ಬನ ಪರಿಸ್ಥಿತಿಗಿಂತಲೂ ಹೆಚ್ಚಾಗಿ ಅವನ ಹೃದಯ ಅಂದರೆ ಮನಃಸ್ಥಿತಿಯ ಮೇಲೆ ಹೊಂದಿಕೊಂಡಿರುತ್ತದೆ. (ಜ್ಞಾನೋಕ್ತಿ 17:22) ‘ಮಕ್ಕಳ ಭವಿಷ್ಯ ಹಾಳಾಯಿತು,’ ‘ಸಂಸಾರ ಮುಳುಗಿಹೋಯಿತು’ ಎಂದೆಲ್ಲ ಯೋಚಿಸುವುದರಿಂದ ಸ್ವಲ್ಪವೂ ಒಳಿತಾಗದು. ಇಂಥ ಯೋಚನೆಗಳು ನಿಮ್ಮ ಮನಗುಂದಿಸಿ, ಹೆತ್ತವರಾಗಿ ನಿಮಗಿರುವ ಕರ್ತವ್ಯಗಳನ್ನು ಪೂರೈಸಲು ಇನ್ನಷ್ಟು ಕಷ್ಟಕರವಾಗಿ ಮಾಡುವುದಷ್ಟೇ.—ಜ್ಞಾನೋಕ್ತಿ 24:10.

ಸಲಹೆ: ನಿಮ್ಮ ಪರಿಸ್ಥಿತಿಯನ್ನು ವರ್ಣಿಸಲು ನೀವು ಬಳಸುವಂಥ ಯಾವುದೇ ನಕಾರಾತ್ಮಕ ಹೇಳಿಕೆಗಳ ಪಟ್ಟಿಮಾಡಿ. ನಂತರ ಪ್ರತಿಯೊಂದು ಹೇಳಿಕೆಯ ಪಕ್ಕದಲ್ಲಿ ನೀವು ಯಾವ ಸಕಾರಾತ್ಮಕ ಹೇಳಿಕೆಯನ್ನು ಬಳಸಬಹುದೆಂದು ಬರೆಯಿರಿ. ಉದಾಹರಣೆಗೆ, “ನನಗಿನ್ನು ಸಹಿಸಲು ಆಗುವುದಿಲ್ಲ” ಎಂಬ ಹೇಳಿಕೆಯ ಪಕ್ಕದಲ್ಲಿ “ಒಂಟಿ ಹೆತ್ತವನಾಗಿ/ಳಾಗಿ ನನಗಿರುವ ಜವಾಬ್ದಾರಿ ಹೊರಲು ನನ್ನಿಂದ ಆಗುತ್ತದೆ. ಬೇಕಾದ ಸಹಾಯ ಪಡೆದುಕೊಳ್ಳಬಲ್ಲೆ” ಎಂದು ಬರೆಯಿರಿ. —ಫಿಲಿಪ್ಪಿ 4:13.

ಬಜೆಟ್‌ ಮಾಡಿ. ಅನೇಕ ಒಂಟಿ ಹೆತ್ತವರನ್ನು ಅದರಲ್ಲೂ ಒಂಟಿ ತಾಯಂದಿರನ್ನು ಅತಿ ಹೆಚ್ಚಾಗಿ ಬಾಧಿಸುವುದು ಹಣದ ಸಮಸ್ಯೆಯೇ. ಆದರೆ ಕೆಲವರಿಗೆ, ಪರಿಣಾಮಕಾರಿ ಬಜೆಟ್‌ ಮಾಡುವ ಮೂಲಕ ಆರ್ಥಿಕ ಒತ್ತಡವನ್ನು ತಗ್ಗಿಸಸಾಧ್ಯ. “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು” ಎನ್ನುತ್ತದೆ ಒಂದು ಬೈಬಲ್‌ ನಾಣ್ಣುಡಿ. (ಜ್ಞಾನೋಕ್ತಿ 22:3) ಹಣಕಾಸಿನ “ಕೇಡನ್ನು” ತಪ್ಪಿಸಲು ಪೂರ್ವಯೋಜನೆ ಮತ್ತು ಮುಂದಾಲೋಚನೆ ಅತ್ಯಗತ್ಯ.

ಸಲಹೆ: ಬಜೆಟನ್ನು ತಯಾರಿಸಿ ಬರೆದಿಡಿ. ಒಂದು ತಿಂಗಳ ಮಟ್ಟಿಗೆ ನೀವು ಮಾಡುವ ಎಲ್ಲ ಖರ್ಚನ್ನು ಬರೆದಿಟ್ಟು, ನಿಮ್ಮ ಹಣ ಯಾವುದಕ್ಕೆಲ್ಲ ವ್ಯಯವಾಗುತ್ತಿದೆ ಎಂದು ತಿಳಿದುಕೊಳ್ಳಿ. ನೀವು ಹೇಗೆ ಹಣ ಖರ್ಚು ಮಾಡುತ್ತೀರೆಂದು ವಿಶ್ಲೇಷಿಸಿ. ವಸ್ತುಗಳನ್ನು ಹೆಚ್ಚಾಗಿ ಸಾಲದ ಮೇಲೆ ಖರೀದಿಸುತ್ತೀರೋ? ಮಕ್ಕಳಿಗೆ ಅಪ್ಪ/ಅಮ್ಮ ಇಲ್ಲವೆಂಬ ಕೊರಗು ಬಾರದಂತೆ ಕಂಡಕಂಡದ್ದನ್ನೆಲ್ಲ ಖರೀದಿಸಿಕೊಡುತ್ತೀರೋ? ನಿಮ್ಮ ಮಕ್ಕಳು ಸಾಕಷ್ಟು ದೊಡ್ಡವರಾಗಿರುವಲ್ಲಿ, ಅವರೊಂದಿಗೆ ಕುಳಿತು ಹೇಗೆ ಹಣ ಉಳಿತಾಯ ಮಾಡುವುದೆಂದು ಚರ್ಚಿಸಿ. ಇದರಿಂದ ಅವರಿಗೂ ಒಳ್ಳೇ ತರಬೇತಿ ಸಿಗುತ್ತದೆ. ಅವರು ಕೆಲವು ವ್ಯಾವಹಾರಿಕ ಸಲಹೆಗಳನ್ನು ಕೊಟ್ಟಾರು!

ಮಾಜಿ ಸಂಗಾತಿಯೊಂದಿಗೆ ಶಾಂತಿಯಿಂದ ವ್ಯವಹರಿಸಿ. ನಿಮ್ಮ ಮಗುವಿನ ಪಾಲನೆಮಾಡುವ ಹಕ್ಕನ್ನು ಕೋರ್ಟು ನಿಮಗಿಬ್ಬರಿಗೂ ಹಂಚಿರುವಲ್ಲಿ ನಿಮ್ಮ ಸಂಗಾತಿಯ ಬಗ್ಗೆ ಮಗುವಿನ ಕಿವಿಯೂದಬೇಡಿ. ಮಾಜಿ ಸಂಗಾತಿಯ ಬದುಕಿನ ಆಗುಹೋಗುಗಳ ಬಗ್ಗೆ ಪತ್ತೇದಾರಿ ಕೆಲಸಮಾಡಲಿಕ್ಕೂ ಉಪಯೋಗಿಸಬೇಡಿ. ಹಾಗೆ ಮಾಡುವುದು ಒಳ್ಳೇದಲ್ಲ. * ಆದರೆ ಶಿಸ್ತಿನ ಕುರಿತೋ ನಿಮ್ಮ ಮಗುವಿನ ಯೋಗಕ್ಷೇಮಕ್ಕೆ ಸಂಬಂಧಪಟ್ಟ ಇನ್ನಾವುದೇ ವಿಷಯದ ಕುರಿತೋ ನಿಮ್ಮ ಮಾಜಿ ಸಂಗಾತಿಯೊಂದಿಗೆ ಮಾತಾಡಲು ಬೇಕಾದಷ್ಟು ಒಳ್ಳೇ ಸಂಬಂಧ ಇಡುವುದು ಉತ್ತಮ. “ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರೊಂದಿಗೆ ಶಾಂತಿಶೀಲರಾಗಿರಿ” ಎಂದು ಬೈಬಲ್‌ ಹೇಳುತ್ತದೆ. “ಎಲ್ಲರೊಂದಿಗೆ” ಎಂಬ ಮಾತು ನಿಮ್ಮ ಮಾಜಿ ಸಂಗಾತಿಯನ್ನೂ ಒಳಗೂಡಿಸುತ್ತದೆ.—ರೋಮನ್ನರಿಗೆ 12:18.

ಸಲಹೆ: ಮುಂದಿನ ಸಲ ನಿಮ್ಮ ಮತ್ತು ನಿಮ್ಮ ಮಾಜಿ ಸಂಗಾತಿಯ ಮಧ್ಯೆ ಯಾವುದೇ ಮನಸ್ತಾಪವೇಳುವಲ್ಲಿ, ಒಬ್ಬ ಸಹೋದ್ಯೋಗಿಯೊಂದಿಗೆ ನಡೆದುಕೊಳ್ಳುವ ರೀತಿಯಲ್ಲೇ ಅವರೊಂದಿಗೆ ವರ್ತಿಸಿ. ಉದ್ಯೋಗದ ಸ್ಥಳದಲ್ಲಿ ಎಲ್ಲರೊಂದಿಗೆ, ನಿಮಗೆ ಹಿಡಿಸದವರೊಂದಿಗೂ ಸ್ನೇಹಭಾವದಿಂದಿರಲು ಪ್ರಯತ್ನಿಸುತ್ತೀರಲ್ಲವೇ? ನಿಮ್ಮ ಮಾಜಿ ಸಂಗಾತಿಯೊಂದಿಗೂ ಹಾಗೆಯೇ ನಡೆದುಕೊಳ್ಳಿ. ನಿಮ್ಮಿಬ್ಬರ ಅಭಿಪ್ರಾಯ ಯಾವಾಗಲೂ ಒಂದೇ ಆಗಿರಲಿಕ್ಕಿಲ್ಲವಾದರೂ ಚಿಕ್ಕಚಿಕ್ಕ ವಿಷಯಗಳನ್ನು ಹಿಡಿದು ದೊಡ್ಡ ರಾದ್ಧಾಂತ ಮಾಡಬೇಕಾಗಿಲ್ಲ.—ಲೂಕ 12:58.

ಒಳ್ಳೇ ಮಾದರಿಯಾಗಿರಿ. ‘ನನ್ನ ಮಕ್ಕಳಲ್ಲಿ ಯಾವ ಮೌಲ್ಯಗಳೂ ಮನೋಭಾವಗಳೂ ಇರುವಂತೆ ಆಶಿಸುತ್ತೇನೆ? ಅದೇ ಮೌಲ್ಯಗಳೂ ಮನೋಭಾವಗಳೂ ನನ್ನಲ್ಲಿವೆಯೋ?’ ಎಂದು ನಿಮ್ಮನ್ನು ಕೇಳಿಕೊಳ್ಳಿ. ಉದಾಹರಣೆಗೆ, ನೀವು ಒಂಟಿ ಹೆತ್ತವರಾಗಿದ್ದರೂ ನಗುನಗುತ್ತಾ ಇರುತ್ತೀರೋ? ಅಥವಾ ನಿಮ್ಮ ಪರಿಸ್ಥಿತಿಗಳನ್ನೇ ನೆನಸಿ ಗೊಣಗುತ್ತಾ ಯಾವಾಗಲೂ ಸಪ್ಪೆಮೋರೆ ಹಾಕಿಕೊಂಡಿರುತ್ತೀರೋ? ನಿಮ್ಮ ಮಾಜಿ ಸಂಗಾತಿ ನಿಮ್ಮನ್ನು ಉಪಚರಿಸಿದ ವಿಧದ ಬಗ್ಗೆ ಸಿಟ್ಟಿನಿಂದ ಕುದಿಯುತ್ತಿರುತ್ತೀರೋ? ಇಲ್ಲವೆ, ಈಗ ನಿಮ್ಮ ನಿಯಂತ್ರಣದಲ್ಲಿಲ್ಲದ ಅನ್ಯಾಯಗಳನ್ನು ಮೆಟ್ಟಿನಿಂತು ಮುಂದೆ ಸಾಗುತ್ತೀರೋ? (ಜ್ಞಾನೋಕ್ತಿ 15:18) ಇವೆಲ್ಲವೂ ಸುಲಭವಾಗಿ ಎದುರಿಸಬಹುದಾದ ಸನ್ನಿವೇಶಗಳಲ್ಲ ಎಂಬುದು ಒಪ್ಪತಕ್ಕ ಮಾತು. ನೀವು ಅವುಗಳನ್ನು ಸ್ವಲ್ಪವೂ ತಪ್ಪಿಲ್ಲದೆ ನಿರ್ವಹಿಸಲಿಕ್ಕೂ ಸಾಧ್ಯವಾಗದಿರಬಹುದು. ಹಾಗಿದ್ದರೂ ಇಂಥ ಸನ್ನಿವೇಶಗಳಲ್ಲಿ ನಿಮಗೆ ಬದುಕಿನ ಬಗ್ಗೆ ಯಾವ ಮನೋಭಾವವಿದೆಯೋ ಅದನ್ನೇ ನಿಮ್ಮ ಮಕ್ಕಳು ಹೀರಿಕೊಳ್ಳುವರು.

ಸಲಹೆ: ನಿಮ್ಮ ಮಕ್ಕಳು ದೊಡ್ಡವರಾದಾಗ ಒಬ್ಬೊಬ್ಬರಲ್ಲೂ ಯಾವ ಗುಣಗಳಿರಬೇಕೆಂದು ಇಷ್ಟಪಡುತ್ತೀರೋ ಅವುಗಳಲ್ಲಿ ಮೂರನ್ನು ಬರೆಯಿರಿ. * ಪ್ರತಿಯೊಂದರ ಪಕ್ಕದಲ್ಲಿ, ಆ ಗುಣವನ್ನು ಬೆಳೆಸಲು ನೀವು ಈಗ ಯಾವ ಮಾದರಿ ಇಡಬಲ್ಲಿರೆಂದು ಬರೆಯಿರಿ.

ನಿಮ್ಮ ಜಾಗ್ರತೆ ವಹಿಸಿ. ನಿಮ್ಮ ತರಾತುರಿಯ ಜೀವನಶೈಲಿಯಿಂದಾಗಿ ನಿಮ್ಮ ಶಾರೀರಿಕ ಮತ್ತು ಭಾವನಾತ್ಮಕ ಆರೋಗ್ಯವನ್ನು ನಿರ್ಲಕ್ಷಿಸಬೇಡಿ! ನಿಮ್ಮ ‘ಆಧ್ಯಾತ್ಮಿಕ ಅಗತ್ಯವನ್ನು’ ಪೂರೈಸುವುದು ಅತ್ಯಗತ್ಯ. (ಮತ್ತಾಯ 5:3) ನೆನಪಿಡಿ, ಇಂಧನ ಇಲ್ಲದ ವಾಹನ ಮುಂದೆ ಹೋಗಲಾರದು. ನೀವು ಕೂಡ ಒಂದರ್ಥದಲ್ಲಿ ‘ಇಂಧನ ತುಂಬಿಸಲು’ ಸಮಯ ಮಾಡಿಕೊಳ್ಳದಿದ್ದರೆ ನಿಮಗೂ ಹಾಗಾಗುವುದು.

“ನಗುವ ಸಮಯ” ಮತ್ತು “ಕುಣಿದಾಡುವ ಸಮಯ” ಸಹ ಇದೆ. (ಪ್ರಸಂಗಿ 3:4) ಮನೋರಂಜನೆಯಲ್ಲಿ ಕಳೆಯುವ ಸಮಯ ವ್ಯರ್ಥವಲ್ಲ. ಅದು ಒಂಟಿ ಹೆತ್ತವರಾದ ನಿಮಗೆ ಮುಂದೆ ಸಾಗಲು ನವಚೈತನ್ಯ ಮತ್ತು ನವಬಲವನ್ನು ಕೊಡುತ್ತದೆ.

ಸಲಹೆ: ಇತರ ಒಂಟಿ ಹೆತ್ತವರು ಹೇಗೆ ತಮ್ಮ ಬಗ್ಗೆ ಜಾಗ್ರತೆ ವಹಿಸುತ್ತಾರೆಂದು ಅವರೊಟ್ಟಿಗೆ ಮಾತಾಡಿ ನೋಡಿ. ನೀವು ‘ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳಬೇಕು’ ನಿಜ. ಅದೇ ಸಮಯದಲ್ಲಿ, ನಿಮಗಿಷ್ಟವಾದ ಚಟುವಟಿಕೆಯಲ್ಲಿ ಪ್ರತಿ ವಾರ ಸ್ವಲ್ಪ ಸಮಯವನ್ನಾದರೂ ಕಳೆಯಿರಿ. (ಫಿಲಿಪ್ಪಿ 1:10) ನೀವೇನು ಮಾಡಲು ಇಚ್ಛಿಸುತ್ತೀರಿ ಮತ್ತು ಯಾವಾಗ ಮಾಡುವಿರಿ ಎಂಬುದನ್ನು ಬರೆದಿಡಿ. (g09-E 10)

[ಪಾದಟಿಪ್ಪಣಿಗಳು]

^ ಹೆಚ್ಚಿನ ಮಾಹಿತಿಗಾಗಿ ಈ ಪುತ್ರಿಕೆಯ ಪುಟ 18-21ರಲ್ಲಿರುವ “ಒಡೆದ ಸಂಸಾರ—ಹೈರಾಣಾಗುವ ಹದಿಹರೆಯದವರು” ಲೇಖನ ನೋಡಿ.

^ ಉದಾಹರಣೆಗೆ, ಈ ಪತ್ರಿಕೆಯ ಪುಟ 6-8ರಲ್ಲಿ ಚರ್ಚಿಸಲಾದ ‘ಗೌರವ,’ ‘ಮಣಿಯುವ ಸ್ವಭಾವ’ ಮತ್ತು ‘ಕ್ಷಮೆ’ ಇತ್ಯಾದಿ ಗುಣಗಳು.