ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಶಸ್ವಿಯಾದವರ ಕಿರುಪರಿಚಯ ಭಾಗ - II

ಯಶಸ್ವಿಯಾದವರ ಕಿರುಪರಿಚಯ ಭಾಗ - II

ಯಶಸ್ವಿಯಾದವರ ಕಿರುಪರಿಚಯ ಭಾಗ - II

“ಯಶಸ್ವಿಯಾದವರ ಕಿರುಪರಿಚಯ—ಭಾಗ-I”ರಲ್ಲಿ ನೋಡಿದಂತೆ ತೊಂದರೆಗಳು ತುಫಾನಿನಂತೆ ಏಳುವಾಗ ಬೈಬಲ್‌ ಸೂತ್ರಗಳು ಕುಟುಂಬಕ್ಕೆ ಲಂಗರಿನಂತಿರುತ್ತವೆ. * ಯೆಹೋವ ದೇವರು ತನ್ನ ನೀತಿನಿಯಮಗಳನ್ನು ಪಾಲಿಸುವವರಿಗೆ, “ನಿನ್ನನ್ನು ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವೆನು; ನಿನ್ನನ್ನು ಕಟಾಕ್ಷಿಸಿ ಆಲೋಚನೆಹೇಳುವೆನು” ಎಂದು ಮಾತುಕೊಡುತ್ತಾನೆ.—ಕೀರ್ತನೆ 32:8.

ಹಣದ ತಾಪತ್ರಯ ನಿಭಾಯಿಸುವುದು. ಗಂಡಹೆಂಡಿರ ನಡುವೆ ವಾದವಿವಾದ ಆಗುವುದು ಹೆಚ್ಚಾಗಿ ಹಣದ ವಿಚಾರದಲ್ಲೇ. ಇಂಥ ಸಂದರ್ಭಗಳಲ್ಲಿ ಹಣದ ಕುರಿತು ಯೋಗ್ಯ ದೃಷ್ಟಿಕೋನ ಇಟ್ಟುಕೊಳ್ಳಲು ಬೈಬಲ್‌ ಸೂತ್ರಗಳು ಸಹಾಯಮಾಡುತ್ತವೆ. ಯೇಸು ಹೇಳಿದ್ದು: “ನಿಮ್ಮ ಪ್ರಾಣಗಳ ಕುರಿತು ನೀವು ಏನು ಊಟಮಾಡುವಿರಿ, ಏನು ಕುಡಿಯುವಿರಿ ಅಥವಾ ನಿಮ್ಮ ದೇಹಗಳಿಗೆ ಏನು ಧರಿಸಿಕೊಳ್ಳುವಿರಿ ಎಂದು ಚಿಂತೆಮಾಡುವುದನ್ನು ನಿಲ್ಲಿಸಿರಿ. . . . ಇವು ನಿಮಗೆ ಬೇಕಾಗಿವೆ ಎಂಬುದು ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ತಿಳಿದಿದೆ.”—ಮತ್ತಾಯ 6:25, 32.

ಪುಟ 23ರಲ್ಲಿ, ಯುನೈಟೆಡ್‌ ಸ್ಟೇಟ್ಸ್‌ನ ಇಸ್ಸಕಾರ್‌ ಎಂಬವರು ಕತ್ರೀನಾ ಚಂಡಮಾರುತದಿಂದ ತಮ್ಮ ಮನೆ ನೆಲಸಮವಾದಾಗ ಎದುರಿಸಿದ ಹಣಕಾಸಿನ ತೊಂದರೆಯನ್ನು ಕುಟುಂಬ ಸಮೇತ ಹೇಗೆ ನಿಭಾಯಿಸಿದರೆಂದು ಹೇಳುತ್ತಾರೆ.

ಕುಟುಂಬದಲ್ಲೊಬ್ಬರು ಕಾಯಿಲೆ ಬೀಳುವಾಗ. ಎಲ್ಲ ಮಾನವರು ಕಾಯಿಲೆ ಬೀಳುತ್ತಾರೆ. ಹೆಚ್ಚಿನವರು ಬೇಗನೆ ಗುಣಮುಖರಾಗುತ್ತಾರೆ. ಆದರೆ ನಮ್ಮ ಮನೆಯಲ್ಲಿ ಒಬ್ಬರು ದೀರ್ಘಕಾಲ ಕಾಯಿಲೆಯಿಂದ ನರಳುವುದಾದರೆ ಆಗೇನು? ಅಂಥವರಿಗೆ ಯೆಹೋವ ದೇವರು ಆಸರೆಯಾಗಿರಬಲ್ಲನೆಂದು ಬೈಬಲ್‌ ಹೇಳುತ್ತದೆ. (ಕೀರ್ತನೆ 41:1-3) ಆತನು ಅಂಥ ಆರೈಕೆಯನ್ನು ಒದಗಿಸುವುದು ಹೆಚ್ಚಾಗಿ ಕುಟುಂಬದವರ ಮೂಲಕವೇ. ಹಾಗಾಗಿ ಕುಟುಂಬದವರು ಹೇಗೆ ಸಹಕರಿಸಬಹುದು?

ಪುಟ 24ರಲ್ಲಿ, ಜಪಾನಿನ ಹಾಜೀಮೆ ಎಂಬವರು ತಮ್ಮ ಪತ್ನಿ ನೋರಿಕೋ ಘೋರ ರೋಗಕ್ಕೆ ತುತ್ತಾದಾಗ ತಮ್ಮಿಬ್ಬರು ಹೆಣ್ಣುಮಕ್ಕಳ ಸಹಕಾರದೊಂದಿಗೆ ಹೇಗೆ ಅವರ ಆರೈಕೆಮಾಡಿದರೆಂದು ಹೇಳುತ್ತಾರೆ.

ಮಗು ಸಾವನ್ನಪ್ಪಿದಾಗ. ಮಗುವಿನ ದುರ್ಮರಣ ಒಂದು ಕುಟುಂಬಕ್ಕೆ ದೊಡ್ಡ ಆಘಾತವನ್ನು ಉಂಟುಮಾಡುತ್ತದೆ. ಇಂಥ ದುಃಖದ ಕಣ್ಣೀರನ್ನು ಒರಸಿಬಿಡುವೆನೆಂದು ಯೆಹೋವ ದೇವರು ಮಾತುಕೊಟ್ಟಿದ್ದಾನೆ. (ಪ್ರಕಟನೆ 21:1-4) ಅಲ್ಲದೆ ಈಗಲೂ ಆತನು ವಿಯೋಗಿಗಳಿಗೆ ಸಾಂತ್ವನ ಕೊಡುತ್ತಾನೆ.—ಕೀರ್ತನೆ 147:3.

ಪುಟ 25ರಲ್ಲಿ, ಯುನೈಟೆಡ್‌ ಸ್ಟೇಟ್ಸ್‌ನ ಫರ್ನಾಂಡೋ ಮತ್ತು ಡಿಲ್ಮ ತಮ್ಮ ಪುಟ್ಟ ಕಂದಮ್ಮ ಸಾವನ್ನಪ್ಪಿದಾಗ ತಮಗಾದ ನೋವನ್ನು ಬೈಬಲ್‌ ಹೇಗೆ ಶಮನಗೊಳಿಸಿತೆಂದು ತಿಳಿಸುತ್ತಾರೆ.

ಮುಂದಿನ ಪುಟಗಳಲ್ಲಿ ನಾವು ಓದಲಿರುವ ನೈಜಕಥೆಗಳು ತೋರಿಸುವಂತೆ ಜೀವನದಲ್ಲಿ ಕಷ್ಟಗಳನ್ನು ಎದುರಿಸುತ್ತಿರುವ ಕುಟುಂಬಗಳಿಗೆ ಬೈಬಲ್‌ ಭರವಸಾರ್ಹ ಮಾರ್ಗಸೂಚಿ ಆಗಿರುತ್ತದೆ. (g09-E 10)

[ಪಾದಟಿಪ್ಪಣಿ]

^ ಈ ಪತ್ರಿಕೆಯ ಪುಟ 14-17 ನೋಡಿ.

[ಪುಟ 23ರಲ್ಲಿರುವ ಚೌಕ/ಚಿತ್ರಗಳು]

ಹಣದ ತಾಪತ್ರಯ ನಿಭಾಯಿಸುವುದು

ಯುನೈಟೆಡ್‌ ಸ್ಟೇಟ್ಸ್‌ನ ಇಸ್ಸಕಾರ್‌ ನಿಕಲ್ಸ್‌ ಹೇಳಿದಂತೆ

“ಕತ್ರೀನಾ ಚಂಡಮಾರುತ ನಮ್ಮ ಮನೆಯನ್ನು ಧ್ವಂಸಮಾಡಿತು. ಮನೆಯ ನೆಲ ಬಿಟ್ಟು ಮತ್ತೇನೂ ಉಳಿದಿರಲಿಲ್ಲ. ನಾನು ಕೆಲಸಮಾಡುತ್ತಿದ್ದ ಶಾಲೆಯಲ್ಲಿ ಒಂದೂವರೆ ತಿಂಗಳ ವರೆಗೆ ನೀರು ತುಂಬಿಕೊಂಡಿತ್ತು.”

ಇಸವಿ 2005ರ ಬೇಸಗೆ ಸಮಯ. ನಾನು, ನನ್ನ ಪತ್ನಿ ಮಿಷೆಲ್‌ ಮತ್ತು ನಮ್ಮ ಎರಡು ವರ್ಷದ ಮಗಳು ಸಿಡ್ನಿ ಯು.ಎಸ್‌.ಎ. ಮಿಸ್ಸಿಸಿಪ್ಪಿ ನದಿತೀರದಲ್ಲಿದ್ದ ಸೇಂಟ್‌ ಲೂಯಿಸ್‌ ಪಟ್ಟಣದಲ್ಲಿ ವಾಸವಾಗಿದ್ದೆವು. ನಾವು ಯೆಹೋವನ ಸಾಕ್ಷಿಗಳು. ಇತರರಿಗೆ ಬೈಬಲಿನ ಕುರಿತು ಬೋಧಿಸುವ ಕ್ರೈಸ್ತ ಶುಶ್ರೂಷೆಗೆ ಸಾಧ್ಯವಾದಷ್ಟು ಹೆಚ್ಚು ಸಮಯ ಕೊಡುವುದು ನಮ್ಮಿಬ್ಬರ ಗುರಿಯಾಗಿತ್ತು. ಸಮೀಪದ ಲೂಸಿಯಾನದ ನ್ಯೂ ಓರ್ಲಿಯನ್ಸ್‌ನಲ್ಲಿದ್ದ ಒಂದು ಶಾಲೆಯಲ್ಲಿ ನಾನು ಕಂಪ್ಯೂಟರ್‌ ಶಿಕ್ಷಕನಾಗಿದ್ದೆ. ನನ್ನ ಕೆಲಸ ವಾರದಲ್ಲಿ ಮೂರು ದಿನ. ಉಳಿದ ದಿನ ಕ್ರೈಸ್ತ ಶುಶ್ರೂಷೆಯಲ್ಲಿ ನಿರತನಾಗಿರುತ್ತಿದ್ದೆ. ನಮ್ಮ ಈ ದಿನಚರಿ ಸುಗಮವಾಗಿ ಸಾಗುತ್ತಿತ್ತು. ಒಂದು ದಿನ, ಕತ್ರೀನಾ ಚಂಡಮಾರುತ ಅಪ್ಪಳಿಸಲಿದೆ ಎಂಬ ಸುದ್ದಿ ಬಂತು. ಕೂಡಲೆ ನಾವು ಬೇರೆಡೆಗೆ ಸ್ಥಳಾಂತರಿಸಿದೆವು.

ಚಂಡಮಾರುತವು ಸೇಂಟ್‌ ಲೂಯಿಸ್‌ನಲ್ಲಿದ್ದ ನಮ್ಮ ಮನೆಯನ್ನೂ ನ್ಯೂ ಓರ್ಲಿಯನ್ಸ್‌ನಲ್ಲಿ ನಾನು ಕಲಿಸುತ್ತಿದ್ದ ಶಾಲೆಯನ್ನೂ ಹಾಳುಗೆಡವಿತು. ವಿಮೆ ಹಣ ಮತ್ತು ಸರ್ಕಾರ ಕೊಟ್ಟ ಪರಿಹಾರ ಹಣದಿಂದ ನಾವೊಂದು ಅಪಾರ್ಟ್‌ಮೆಂಟ್‌ ಅನ್ನು ಬಾಡಿಗೆಗೆ ಪಡೆದೆವು. ಆದರೆ ನನಗೊಂದು ಖಾಯಂ ಕೆಲಸ ಸಿಗಲಿಲ್ಲ. ಅದರ ಜೊತೆಗೆ, ಕಲುಷಿತ ನೀರಿನಿಂದಾಗಿ ನನ್ನ ಪತ್ನಿ ಅಸ್ವಸ್ಥಳಾದಳು. ಅವಳ ರೋಗನಿರೋಧಕ ಶಕ್ತಿ ಕುಂದಿತ್ತು. ಸೊಳ್ಳೆ ಕಡಿತದಿಂದ ಬರುವ ‘ವೆಸ್ಟ್‌ ನೈಲ್‌ ವೈರಸ್‌’ ರೋಗಕ್ಕೂ ತುತ್ತಾದಳು. ಈ ಮಧ್ಯೆ ವಿಮೆಗೆ ಕಟ್ಟಬೇಕಾದ ಹಣ ಮತ್ತು ನಮ್ಮ ದಿನನಿತ್ಯದ ಖರ್ಚುಗಳು ಏರುತ್ತಾ ಇತ್ತು.

ಈ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ನಾವು ಇನ್ನಷ್ಟು ಮಿತವ್ಯಯಿಗಳಾದೆವು. ಅಗತ್ಯ ವಸ್ತುಗಳನ್ನು ಕೊಳ್ಳುವಾಗಲೂ ಎರಡೆರಡು ಸಲ ಯೋಚಿಸುತ್ತಿದ್ದೆವು. ನನಗೆ ಇಂಥದ್ದೇ ಕೆಲಸ ಬೇಕೆಂದು ಕೂರದೆ ಸಿಕ್ಕಿದ ಕೆಲಸಮಾಡಿದೆ.

ನಮ್ಮೆಲ್ಲ ಸೊತ್ತುಗಳನ್ನು ಕಳಕೊಂಡಾಗ ನಮಗೆ ಸ್ವಲ್ಪ ದುಃಖವಾಯಿತೆಂದು ಒಪ್ಪಿಕೊಳ್ಳುತ್ತೇನೆ. ಆದರೆ ನಮ್ಮ ಜೀವ ಉಳಿದದ್ದಕ್ಕೆ ನಾವು ಸಂತೋಷಪಟ್ಟೆವು. ಈ ಅನುಭವವು ಭೌತಿಕ ವಸ್ತುಗಳು ಹೆಚ್ಚಿನ ಪ್ರಯೋಜನ ತರಲಾರವೆಂದು ತೋರಿಸಿಕೊಟ್ಟಿತು. ಯೇಸುವಿನ ಈ ಮಾತುಗಳು ನಮ್ಮ ನೆನಪಿಗೆ ಬಂತು: “ಒಬ್ಬನಿಗೆ ಹೇರಳವಾಗಿ ಆಸ್ತಿಯಿರುವುದಾದರೂ ಅವನು ಹೊಂದಿರುವ ಆಸ್ತಿಯಿಂದ ಅವನಿಗೆ ಜೀವವು ದೊರಕಲಾರದು.”—ಲೂಕ 12:15.

ನಮಗೆ ಭಾರಿ ನಷ್ಟವಾಗಿದೆ ಎಂದನಿಸಿತಾದರೂ ಅನೇಕರು ನಮಗಿಂತಲೂ ಹೆಚ್ಚನ್ನು ಕಳೆದುಕೊಂಡಿದ್ದರು. ಕೆಲವರಂತೂ ಜೀವವನ್ನೂ ಕಳೆದುಕೊಂಡಿದ್ದರು. ಆದುದರಿಂದ ಆ ಕೂಡಲೆ ಪರಿಹಾರಕಾರ್ಯದಲ್ಲಿ ನಾನು ಜೊತೆಗೂಡಿದೆ. ನಷ್ಟಗೊಂಡವರಿಗೆ ಭಾವನಾತ್ಮಕ ಬೆಂಬಲ ಕೊಡುವುದರಲ್ಲಿ ನಿರತನಾದೆ.

ಇಂಥ ಕಷ್ಟದ ಸಮಯದಲ್ಲಿ ಕೀರ್ತನೆ 102:15 ನಮಗೆ ತುಂಬ ಸಾಂತ್ವನ ಕೊಟ್ಟಿದೆ. ಯೆಹೋವ ದೇವರು ‘ಗತಿಹೀನರ ಮೊರೆಯನ್ನು ತಿರಸ್ಕರಿಸದೆ ನೆರವೇರಿಸುವನು’ ಎಂದು ಆ ವಚನ ಹೇಳುತ್ತದೆ. ನಿಜವಾಗಿಯೂ ಒಂದು ಕುಟುಂಬವಾಗಿ ನಾವಾತನ ಬೆಂಬಲವನ್ನು ಅನುಭವಿಸಿದ್ದೇವೆ! (g09-E 10)

[ಪುಟ 23ರಲ್ಲಿರುವ ಚೌಕ]

2005ರಲ್ಲಿ ಯುನೈಟೆಡ್‌ ಸ್ಟೇಟ್ಸ್‌ನ ಕೊಲ್ಲಿ ಪ್ರದೇಶದ ಮೇಲೆ ಕತ್ರೀನಾ ಮತ್ತು ರೀಟಾ ಚಂಡಮಾರುತಗಳು ಅಪ್ಪಳಿಸಿದ ಬಳಿಕ ಯೆಹೋವನ ಸಾಕ್ಷಿಗಳು 13 ಪರಿಹಾರ ಕೇಂದ್ರಗಳನ್ನು, 9 ಉಗ್ರಾಣಗಳನ್ನು ಮತ್ತು 4 ಇಂಧನ-ಡಿಪೋಗಳನ್ನು ಸ್ಥಾಪಿಸಿದರು. ಯುನೈಟೆಡ್‌ ಸ್ಟೇಟ್ಸ್‌ ಮತ್ತು ಇತರ 13 ದೇಶಗಳಿಂದ ಬಂದ ಸುಮಾರು 17,000 ಸಾಕ್ಷಿಗಳು ಪರಿಹಾರಕಾರ್ಯದಲ್ಲಿ ಸ್ವಯಂಸೇವಕರಾಗಿ ಕೆಲಸಮಾಡಿದರು. ಅವರು ಸಾವಿರಾರು ಮನೆಗಳನ್ನು ರಿಪೇರಿಮಾಡಿದರು.

[ಪುಟ 24ರಲ್ಲಿರುವ ಚೌಕ/ಚಿತ್ರಗಳು]

ಕುಟುಂಬದಲ್ಲೊಬ್ಬರು ಕಾಯಿಲೆ ಬೀಳುವಾಗ

ಜಪಾನಿನ ಹಾಜೀಮೆ ಇಟೋ ಹೇಳಿದಂತೆ

“ಸಮಯ ಸಿಕ್ಕಿದಾಗೆಲ್ಲ ಒಟ್ಟಿಗೆ ಅಡುಗೆಮಾಡುವುದೆಂದರೆ ನನಗೂ ನನ್ನ ಹೆಂಡತಿ ನೋರಿಕೋಗೂ ತುಂಬ ಖುಷಿ. ಆದರೆ ಆಕೆ ಕಾಯಿಲೆ ಬಿದ್ದಾಗ ಅದೆಲ್ಲ ನಿಂತುಹೋಯಿತು. ಈಗ ಅವಳಿಗೆ ತಿನ್ನಲು, ಕುಡಿಯಲು ಮತ್ತು ಮಾತಾಡಲಿಕ್ಕೂ ಆಗುವುದಿಲ್ಲ. ಗಾಲಿಕುರ್ಚಿಯಲ್ಲೇ ಆಕೆ ಆಚೀಚೆ ಹೋಗಬೇಕು. ಉಸಿರಾಡಲು ಕೃತಕ ಉಪಕರಣ ಬೇಕು.”

ನನ್ನ ಪತ್ನಿಗೆ ಮೊದಲು 2006ರ ಮೇ ತಿಂಗಳಲ್ಲಿ ಮಾತಾಡಲು ತೊಂದರೆಯಾಗ ತೊಡಗಿತು. ದಿನಗಳು ಉರುಳಿದಂತೆ ಆಕೆಗೆ ತಿನ್ನಲು ಕುಡಿಯಲು ಕಷ್ಟವಾಯಿತು. ಆಕೆಗೆ ಏಮೈಯಟ್ರೋಫಿಕ್‌ ಲ್ಯಾಟೆರಲ್‌ ಸ್ಕ್ಲಿರೋಸಿಸ್‌ (ALS) ಎಂಬ ರೋಗವಿದೆಯೆಂದು ಸೆಪ್ಟೆಂಬರ್‌ನಲ್ಲಿ ತಿಳಿದುಬಂತು. ಇದು ಮಿದುಳಿನಲ್ಲಿರುವ ಮತ್ತು ಬೆನ್ನುಹುರಿಯ ನರಕೋಶಗಳನ್ನು ಹಂತಹಂತವಾಗಿ ಹಾನಿಮಾಡುವ ಭೀಕರ ಕಾಯಿಲೆ. ನಾಲ್ಕೇ ತಿಂಗಳಲ್ಲಿ ನಮ್ಮ ಬದುಕು ಬುಡಮೇಲಾಯಿತು. ಇದೆಲ್ಲ ಅವಳ ಆರೋಗ್ಯ ಸಮಸ್ಯೆಗಳ ಆರಂಭವಾಗಿತ್ತಷ್ಟೆ.

ಸ್ವಲ್ಪ ಸಮಯದಲ್ಲಿ ಆಕೆಯ ನಾಲಗೆ ಮತ್ತು ಬಲಗೈಗೆ ಲಕ್ವಹೊಡೆಯಿತು. ಆದುದರಿಂದ ಒಂದು ಟ್ಯೂಬ್‌ ಮೂಲಕ ಅವಳಿಗೆ ಆಹಾರ ಕೊಡಲು ಸಾಧ್ಯವಾಗುವಂತೆ ಗ್ಯಾಸ್ಟ್ರೋಸ್ಟಮಿ ಎಂಬ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಬಳಿಕ ಟ್ರೇಕ್ಯಾಸ್ಟಮಿ ಎಂಬ ಶಸ್ತ್ರಚಿಕಿತ್ಸೆಯಿಂದ ಗಂಟಲಲ್ಲಿ ಮಾಡಲಾದ ರಂಧ್ರದ ಮೂಲಕ ಶ್ವಾಸನಾಳಕ್ಕೆ ಗಾಳಿ ಹೋಗಲು ಸಾಧ್ಯವಾಯಿತು. ಆದರೆ ಅಂದಿನಿಂದ ಅವಳು ಮಾತಾಡುವ ಸಾಮರ್ಥ್ಯ ಕಳಕೊಂಡಳು. ಯಾವಾಗಲೂ ಚುರುಕಾಗಿ ಓಡಾಡುತ್ತಿದ್ದ ನೋರಿಕೋಗೆ ಇದೆಲ್ಲವೂ ಎಷ್ಟು ದೊಡ್ಡ ಆಘಾತ ಆಗಿದ್ದಿರಬಹುದೆಂದು ನನ್ನಿಂದ ಊಹಿಸಲೂ ಆಗುತ್ತಿಲ್ಲ. ನಾವು ಯೆಹೋವನ ಸಾಕ್ಷಿಗಳು. ನೋರಿಕೋ ಮತ್ತು ನಮ್ಮಿಬ್ಬರು ಹೆಣ್ಣುಮಕ್ಕಳು ಪೂರ್ಣ ಸಮಯದ ಕ್ರೈಸ್ತ ಶುಶ್ರೂಷೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಈಗಲಾದರೋ ನೋರಿಕೋಗೆ ಉಸಿರಾಡಲು ಕೃತಕ ಯಂತ್ರವೇ ಆಸರೆ ಮತ್ತು ಹೆಚ್ಚಾಗಿ ಹಾಸಿಗೆಗೇ ಅಂಟಿಕೊಂಡಿರುತ್ತಾಳೆ.

ಇಷ್ಟೆಲ್ಲ ತೊಂದರೆಗಳಿದ್ದರೂ ಆಕೆ ಸುಮ್ಮನಿರುವುದಿಲ್ಲ! ಆಕೆ ಉಸಿರಾಟದ ಕೃತಕ ಯಂತ್ರದೊಂದಿಗೇ ಗಾಲಿಕುರ್ಚಿಯಲ್ಲಿ ಕ್ರೈಸ್ತ ಕೂಟಗಳಿಗೆ ಹಾಜರಾಗುತ್ತಾಳೆ. ಅವಳ ಶ್ರವಣಶಕ್ತಿ ಕಡಿಮೆಯಾಗಿರುವುದರಿಂದ ಕೂಟಗಳಲ್ಲಿ ಹೇಳಲಾಗುವ ವಿಷಯಗಳನ್ನು ನಮ್ಮ ಮಗಳು ದೊಡ್ಡ ದೊಡ್ಡ ಅಕ್ಷರಗಳಲ್ಲಿ ಬರೆದು ತೋರಿಸುತ್ತಾಳೆ. ಹೀಗೆ ನೋರಿಕೋ ಕೂಟಗಳಿಂದ ಪ್ರಯೋಜನ ಪಡೆಯುತ್ತಾಳೆ. ಪೂರ್ಣ ಸಮಯದ ಕ್ರೈಸ್ತ ಶುಶ್ರೂಷೆಯನ್ನು ನಿಲ್ಲಿಸಬೇಕಾಯಿತಾದರೂ ಕಂಪ್ಯೂಟರ್‌ಗೆ ಅಳವಡಿಸಿರುವ ವಿಶೇಷ ಸಾಧನ ಬಳಸಿ ಆಕೆ ಈಗಲೂ ಬೇರೆಯವರಿಗೆ ಬೈಬಲಿನಲ್ಲಿರುವ ನಿರೀಕ್ಷೆಯ ಸಂದೇಶವನ್ನು ಪತ್ರ ಮೂಲಕ ತಿಳಿಸುತ್ತಾಳೆ.—2 ಪೇತ್ರ 3:13; ಪ್ರಕಟನೆ 21:1-4.

ನೋರಿಕೋಗೆ ಸಹಾಯಮಾಡಲು ಕುಟುಂಬವಾಗಿ ಸಹಕರಿಸುತ್ತೇವೆ. ಮನೆಯಲ್ಲಿ ಹೆಚ್ಚು ಸಹಾಯಮಾಡಲಿಕ್ಕಾಗಿ ನನ್ನ ಪುತ್ರಿಯರು ಬೇರೆ ಉದ್ಯೋಗಕ್ಕೆ ಸೇರಿದರು. ನೋರಿಕೋ ಮಾಡುತ್ತಿದ್ದ ದಿನನಿತ್ಯದ ಹತ್ತಾರು ಕೆಲಸಗಳನ್ನು ಈಗ ನಾವು ಮೂವರು ಮಾಡುತ್ತಿದ್ದೇವೆ.

ಕೆಲಮೊಮ್ಮೆ ಬೆಳಗ್ಗೆ ನೋಡುವಾಗ ನೋರಿಕೋ ತುಂಬ ಸುಸ್ತಾಗಿರುವ ಹಾಗೆ ಕಾಣುತ್ತಾಳೆ. ‘ನೀನಿವತ್ತು ಏನೂ ಮಾಡಬೇಡ, ಸುಮ್ಮನೆ ರೆಸ್ಟ್‌ ತಗೋ’ ಎಂದು ಹೇಳಲು ಮನಸ್ಸಾಗುತ್ತದೆ. ಆಕೆಯಾದರೋ ಬೈಬಲ್‌ ಸಂದೇಶವನ್ನು ಇತರರಿಗೆ ತಿಳಿಸಲು ತವಕಿಸುತ್ತಾಳೆ. ಅವಳಿಗಾಗಿ ನಾನು ಕಂಪ್ಯೂಟರನ್ನು ಸಿದ್ಧಮಾಡುವಾಗ ಅವಳ ಕಣ್ಣುಗಳು ಹೊಳೆಯುತ್ತಿರುತ್ತವೆ. ಅವಳು ಪತ್ರ ಬರೆಯುತ್ತಿದ್ದಂತೆ ಅವಳ ಸ್ಥಿತಿಯೂ ಸುಧಾರಿಸುತ್ತದೆ. ಇದನ್ನು ನೋಡಿ, ‘ಕರ್ತನ ಕೆಲಸವನ್ನು ಯಾವಾಗಲೂ ಹೇರಳವಾಗಿ ಮಾಡುವುದರ’ ಮಹತ್ತ್ವ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದೆ.—1 ಕೊರಿಂಥ 15:58.

ಇದೇ ರೋಗದಿಂದ ಬಳಲುತ್ತಿರುವ ಜೇಸನ್‌ ಸ್ಟುವರ್ಟ್‌ ಎಂಬವರ ಮನಕಲಕುವ ಕಥೆ ಜನವರಿ 2006ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದು ನೋರಿಕೋಗೆ ಮನಗುಂದದಂತೆ ತುಂಬ ಸಹಾಯಮಾಡಿದೆ. ಅವಳಿಗೆ ಚಿಕಿತ್ಸೆಕೊಡುತ್ತಿದ್ದ ಆಸ್ಪತ್ರೆಯ ಸಿಬ್ಬಂದಿ ನೋರಿಕೋಳ ಸಕಾರಾತ್ಮಕ ಮನೋಭಾವ ನೋಡಿ ಅದಕ್ಕೆ ಕಾರಣವೇನೆಂದು ಯೋಚಿಸುತ್ತಿದ್ದರು. ಆಗ ನೋರಿಕೋ ಆ ಲೇಖನದ ಬಗ್ಗೆ ಅವರಿಗೆ ತಿಳಿಸಿದಳು. ಅಷ್ಟೇ ಅಲ್ಲದೆ ನಾವು ಆ ಲೇಖನದ ಪ್ರತಿಗಳನ್ನು ಅವರೆಲ್ಲರಿಗೆ ಕೊಟ್ಟೆವು. ತನ್ನ ನಂಬಿಕೆಯ ಬಗ್ಗೆ ಇತರರಿಗೆ ತಿಳಿಸುವುದೇ ನನ್ನ ಪತ್ನಿಗೆ ರೋಗವನ್ನು ತಾಳಿಕೊಳ್ಳುವ ಮನೋಬಲ ಕೊಟ್ಟಿದೆ.

ನಮ್ಮ ಮದುವೆಯಾಗಿ 30 ವರ್ಷಗಳಾಗಿವೆ. ಮುಂಚೆ ನಾನು ಆಕೆಯ ವಿಷಯದಲ್ಲಿ ಮಾಮೂಲಿಯೆಂದು ಎಣಿಸುತ್ತಿದ್ದ ಸಂಗತಿಗಳನ್ನು ಈ 3 ವರ್ಷಗಳಲ್ಲಿ ಹೆಚ್ಚು ಗಣ್ಯಮಾಡಿದ್ದೇನೆ. ನೋರಿಕೋಳನ್ನು ನನ್ನ ಪತ್ನಿಯಾಗಿ ಪಡೆದದ್ದಕ್ಕಾಗಿ ನನಗೆ ತುಂಬ ಸಂತೋಷ! (g09-E 10)

[ಪುಟ 25ರಲ್ಲಿರುವ ಚೌಕ/ಚಿತ್ರಗಳು]

ಮಗು ಸಾವನ್ನಪ್ಪಿದಾಗ

ಯುನೈಟೆಡ್‌ ಸ್ಟೇಟ್ಸ್‌ನ ಫರ್ನಾಂಡೋ ಮತ್ತು ಡಿಲ್ಮ ಫ್ರೀಟಾಸ್‌ ಹೇಳಿದಂತೆ

“ಮಗು ಸತ್ತಾಗ ಆಗುವ ನೋವು ಮಾತಿನಲ್ಲಿ ವರ್ಣಿಸಲಸಾಧ್ಯ. ಅದಕ್ಕಿಂತ ದೊಡ್ಡ ನೋವು ಬೇರಾವುದೂ ಇಲ್ಲ.”

ಅಂದು ಏಪ್ರಿಲ್‌ 16, 2006. ನಮ್ಮ ಮಗಳು ‘ಪ್ರೆಶ್ಯಸ್‌’ ನಮ್ಮೆಲ್ಲರನ್ನು ಅಗಲಿದ ದಿನ. ಆಗ ಅವಳು ಬರೀ ಹತ್ತು ದಿನದ ಹಸುಳೆ. ಅವಳು ಗರ್ಭದಲ್ಲಿದ್ದಾಗ ಮೂರನೇ ತಿಂಗಳಲ್ಲೇ ಅವಳಿಗೆ ಒಂದು ವಿಧದ ಗಂಭೀರ ಹೃದಯ-ಸಮಸ್ಯೆ ಇದೆಯೆಂದು ಡಾಕ್ಟರರು ಪತ್ತೆಹಚ್ಚಿದರು. ಹೆರಿಗೆ ಸಮಯ ಹತ್ತರಿಸುತ್ತಿದ್ದಂತೆ, ಅವಳು ಒಂದುವೇಳೆ ಜೀವಂತವಾಗಿ ಹುಟ್ಟಿದರೂ ಕೆಲವೇ ದಿನಗಳಲ್ಲಿ ಸಾಯುವಳೆಂದು ನಮಗೆ ತಿಳಿದುಬಂತು. ಆ ಮಾತನ್ನು ಅರಗಿಸಿಕೊಳ್ಳಲು ನಮ್ಮಿಂದ ಆಗಲಿಲ್ಲ. ಏಕೆಂದರೆ ಈಗಾಗಲೇ ನಮಗಿದ್ದ ಮೂವರು ಹೆಣ್ಮಕ್ಕಳು ಆರೋಗ್ಯವಂತರಾಗಿದ್ದರು. ಆದರೆ ನಮ್ಮ ಈ ಮಗು ಸಾಯಲಿದ್ದಾಳೆ ಅನ್ನುವುದನ್ನು ನಂಬಲಿಕ್ಕೇ ಆಗಲಿಲ್ಲ.

ಪ್ರೆಶ್ಯಸ್‌ ಹುಟ್ಟಿದ ಬಳಿಕ ಅನುಭವಸ್ಥ ತಜ್ಞರೊಬ್ಬರು ಆಕೆಗೆ ‘ಟ್ರೈಸೊಮಿ 18’ ಎಂಬ ಅಪರೂಪದ ಕಾಯಿಲೆ ಇದೆಯೆಂದು ಪತ್ತೆಹಚ್ಚಿದರು. 5,000 ಹಸುಳೆಗಳಲ್ಲಿ ಕೇವಲ ಒಂದು ಕೂಸು ಇದರಿಂದ ಬಾಧಿಸಲ್ಪಡುತ್ತದೆ. ಅವಳು ಹೆಚ್ಚು ದಿನ ಬದುಕುವುದಿಲ್ಲ ಎಂಬುದು ಸ್ಪಷ್ಟವಾಯಿತು. ನಾವು ಅವಳಿಗಾಗಿ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದೆವು. ನಮ್ಮ ಕೈಕಟ್ಟಿಹಾಕಿದ ಹಾಗನಿಸಿತು. ಆದರೆ ಅವಳಿಗಾಗಿ ಒಂದೇ ಒಂದು ಸಂಗತಿಯನ್ನು ಮಾಡಸಾಧ್ಯವಿತ್ತು. ಏನೆಂದರೆ, ಆ ಅಲ್ಪ ಜೀವಿತಾವಧಿಯಲ್ಲಿ ಸದಾ ಅವಳೊಂದಿಗೆ ಇರುವುದೇ. ನಾವು ಮಾಡಿದ್ದೂ ಅದನ್ನೇ.

ಪ್ರೆಶ್ಯಸ್‌ ಒಟ್ಟಿಗೆ ಹತ್ತು ದಿನಗಳನ್ನಾದರೂ ಕಳೆದೆವೆಂಬ ನೆಮ್ಮದಿ ನಮಗಿದೆ. ಆ ಸಮಯದಲ್ಲಿ ನಾವು ಮತ್ತು ನಮ್ಮ ಮೂವರು ಪುತ್ರಿಯರು ಅವಳನ್ನು ತುಂಬ ಹಚ್ಚಿಕೊಂಡೆವು. ಅವಳನ್ನು ಎತ್ತಿಕೊಂಡೆವು, ಅವಳೊಟ್ಟಿಗೆ ಮಾತಾಡಿದೆವು, ತಬ್ಬಿಕೊಂಡೆವು, ಮುದ್ದಿಸಿದೆವು ಮತ್ತು ಆದಷ್ಟು ಹೆಚ್ಚು ಫೋಟೋಗಳನ್ನು ತೆಗೆದೆವು. ನಮ್ಮ ಕುಟುಂಬದಲ್ಲಿ ಅವಳು ಯಾರನ್ನು ಹೆಚ್ಚು ಹೋಲುತ್ತಾಳೆ ಎಂದೆಲ್ಲಾ ಮಾತಾಡಿಕೊಂಡೆವು. ಅವಳಿಗಿದ್ದ ರೋಗವನ್ನು ಪತ್ತೆಹಚ್ಚಿದ ತಜ್ಞರು ಆಸ್ಪತ್ರೆಯಲ್ಲಿ ಪ್ರತಿದಿನ ಬಂದು ನಮ್ಮನ್ನು ನೋಡುತ್ತಿದ್ದರು. ಅವರೂ ನಮ್ಮೊಟ್ಟಿಗೆ ಅತ್ತುಬಿಟ್ಟರು. ತಮ್ಮಿಂದ ಏನೂ ಮಾಡಲಾಗಲಿಲ್ಲವೆಂದು ವಿಷಾದ ವ್ಯಕ್ತಪಡಿಸಿದರು. ನಮ್ಮೊಂದಿಗೆ ಮಾತಾಡುತ್ತಾ ಮಾತಾಡುತ್ತಾ ಅವಳ ನೆನಪಿಗಾಗಿ ಅವಳ ಚಿತ್ರವನ್ನೂ ಬಿಡಿಸಿದರು. ನಮಗೂ ಒಂದು ಪ್ರತಿ ಕೊಟ್ಟರು.

ಬೈಬಲ್‌ ತಿಳಿಸುವಂತೆ, ದೇವರು ಭೂಮಿ ಮೇಲೆ ಪರದೈಸ್‌ ಅಂದರೆ ಉದ್ಯಾನವನದಂಥ ಪರಿಸ್ಥಿತಿಗಳನ್ನು ತರುವನೆಂದು ಯೆಹೋವನ ಸಾಕ್ಷಿಗಳಾದ ನಮಗೆ ಪೂರ್ಣ ನಂಬಿಕೆಯಿದೆ. ಅಂಥ ಪರಿಸ್ಥಿತಿಗಳಲ್ಲಿ ಬದುಕಲು ಸಾಧ್ಯವಾಗುವಂತೆ ಸತ್ತವರೆಲ್ಲರಿಗೆ ಪುನಃ ಜೀವ ಕೊಡಲು ದೇವರು ಹಂಬಲಿಸುತ್ತಾನೆ. ಅವರಲ್ಲಿ ಸತ್ತುಹೋದ ಕೂಸುಗಳು ಮತ್ತು ನಮ್ಮ ಮಗಳು ಪ್ರೆಶ್ಯಸ್‌ ಕೂಡ ಇರುವಳು. (ಯೋಬ 14:14, 15; ಯೋಹಾನ 5:28, 29) ‘ಪರದೈಸ್‌’ ಎಂಬ ಪದವನ್ನು ಕೇಳಿದಾಗಲೆಲ್ಲ ನಾವು ಪುಳಕಿತರಾಗುತ್ತೇವೆ. ನಾವು ಅವಳನ್ನು ಪುನಃ ಕೈಯಲ್ಲಿ ಎತ್ತಿ ಅಪ್ಪಿ ಮುದ್ದಿಸುವ ಆ ದಿನಕ್ಕಾಗಿ ಕಾತರದಿಂದ ಕಾಯುತ್ತಿದ್ದೇವೆ. ಆ ವರೆಗೆ, ದೇವರ ಸ್ಮರಣೆಯಲ್ಲಿರುವ ಪ್ರೆಶ್ಯಸ್‌ ನರಳುತ್ತಿಲ್ಲ ಎಂಬ ನಿಜಾಂಶವು ನಮ್ಮನ್ನು ಸಂತೈಸುತ್ತದೆ.—ಪ್ರಸಂಗಿ 9:5, 10. (g09-E 10)