ಮುಂಬೈಯಲ್ಲಿ ಮನೆಯಿಂದ ಆಫೀಸಿಗೆ ಬಿಸಿಬಿಸಿ ಊಟ
ಮುಂಬೈಯಲ್ಲಿ ಮನೆಯಿಂದ ಆಫೀಸಿಗೆ ಬಿಸಿಬಿಸಿ ಊಟ
ಕೆಲಸಕ್ಕೆಂದು ಎಂದಿನಂತೆ ಬೆಳಗ್ಗೆ ಐದು ಘಂಟೆಗೆ ಹೊರಟ ನಿಮಗೆ ಮಧ್ಯಾಹ್ನ ಹೊಟ್ಟೆ ತಾಳಹಾಕುತ್ತಿರುವಾಗ, ಹುಳಿ-ಖಾರ ಇರುವ ರುಚಿರುಚಿಯಾದ ಮನೆಯೂಟ ನಿಮ್ಮ ಮುಂದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತೆಂದು ಅನಿಸುವುದಿಲ್ಲವೇ? ಮುಂಬೈ ನಗರಿಯಲ್ಲಿ ಸಾವಿರಾರು ಮಂದಿ ಆಫೀಸ್ ಉದ್ಯೋಗಿಗಳು ಅಂಥ ಊಟ ಸವಿಯುತ್ತಾರೆ. ಇದರ ಶ್ರೇಯ ಮನೆಅಡಿಗೆಯನ್ನು ಆಫೀಸಿಗೆ ತಲಪಿಸುವ ಡಬ್ಬಾವಾಲಾಗಳಿಗೆ ಸಲ್ಲುತ್ತದೆ!
ಅವಕಾಶದ ಸದ್ಬಳಕೆ
19ನೇ ಶತಮಾನದ ಕೊನೆಯಷ್ಟಕ್ಕೆ ಮುಂಬೈ (ಆಗ ‘ಬಾಂಬೇ’) ನಗರಿಯು ಬೆಳೆಯುತ್ತಿದ್ದ ವಾಣಿಜ್ಯ ಕೇಂದ್ರವಾಗಿತ್ತು. ಅಲ್ಲಿದ್ದ ಬ್ರಿಟಿಷ್ ಹಾಗೂ ಭಾರತೀಯ ವ್ಯಾಪಾರಿಗಳು ದೂರ ದೂರ ಪ್ರಯಾಣಿಸಿ ತಮ್ಮ ಆಫೀಸುಗಳಿಗೆ ಹೋಗುತ್ತಿದ್ದರು. ಸಾರಿಗೆ ಆಮೆಗತಿಯಲ್ಲಿ ಸಾಗುತ್ತಿತ್ತು. ಹೋಟೆಲುಗಳು ಅಲ್ಲೊ ಇಲ್ಲೋ ಕೆಲವೊಂದು ಮಾತ್ರ ಇದ್ದವು. ಹಾಗಾಗಿ ಮನೆಯೂಟ ತರಿಸುವುದೇ ಹೆಚ್ಚು ಪ್ರಾಯೋಗಿಕವಾಗಿತ್ತು. ಮನೆಯೂಟವನ್ನು ಧಣಿಗಳ ಆಫೀಸಿಗೆ ತಲಪಿಸಲು ಆಳುಗಳನ್ನು ಇಡಲಾಗುತ್ತಿತ್ತು. ಇದನ್ನೇ ಒಂದು ವ್ಯಾಪಾರವಾಗಿ ಮಾಡಬಹುದೆಂದು ನೆನಸಿದ ದೂರದೃಷ್ಟಿಯ ಉದ್ಯಮಿಯೊಬ್ಬ ಹಳ್ಳಿಗಳಿಂದ ನಿರುದ್ಯೋಗಿ ಯುವಕರನ್ನು ನಗರಕ್ಕೆ ತರಿಸಿ, ಮನೆಯಿಂದ ಆಫೀಸುಗಳಿಗೆ ನಿತ್ಯವೂ ಊಟ ತಲಪಿಸುವ ಕಾಯಕವನ್ನು ಆರಂಭಿಸಿದ. ಹೀಗೆ ಚಿಕ್ಕದ್ದಾಗಿ ಆರಂಭವಾದ ಈ ಉದ್ಯಮವು ಹೆಚ್ಚುತ್ತಾ ಭರಾಟೆಯಿಂದ ನಡೆಯತೊಡಗಿತು.
ಮನೆಅಡಿಗೆ ಅಂದರೆ ಈಗಲೂ ಜನರ ಬಾಯಲ್ಲಿ ನೀರೂರುತ್ತದೆ. ಇಂದು ಎಲ್ಲೆಂದರಲ್ಲಿ ಹೋಟೆಲುಗಳಿವೆ ನಿಜ. ಆದರೆ ಮನೆಯೂಟಕ್ಕಾಗುವ ಖರ್ಚು ಕಡಿಮೆ, ಅದನ್ನು ಇಷ್ಟಪಡುವವರೂ ಹೆಚ್ಚು. ಅಲ್ಲದೆ ಅನೇಕರಿಗೆ ಆರೋಗ್ಯ ಸಮಸ್ಯೆಗಳಿರುವುದರಿಂದ ವಿಶೇಷ ಪಥ್ಯ ಮಾಡಬೇಕಾಗುತ್ತದೆ. ಇನ್ನಿತರರಿಗೆ ತಮ್ಮ ಧರ್ಮದ ನಿಮಿತ್ತ ಕೆಲವೊಂದು ಪದಾರ್ಥಗಳು ಉದಾಹರಣೆಗೆ ಈರುಳ್ಳಿಯೊ ಬೆಳುಳ್ಳಿಯೊ ವರ್ಜ್ಯ. ಇಂಥ ಎಷ್ಟೋ ಪದಾರ್ಥಗಳು ಹೋಟೆಲ್ ಊಟದಲ್ಲಿರುತ್ತವೆ. ಆದ್ದರಿಂದ ಮನೆಯಿಂದ ಊಟ ತರಿಸುವುದೇ ಇಂಥ ಸಮಸ್ಯೆಗಳಿಗೆ ಉತ್ತಮ ಪರಿಹಾರ.
ಅತ್ಯಂತ ಭರವಸಾರ್ಹ ಸೇವೆ
ಬಹುಮಟ್ಟಿಗೆ ಸರಳವೆಂದೇ ಹೇಳಬಹುದಾದ ಈ ಉದ್ಯಮದ ಸರಬರಾಯಿ ವಿಧಾನವು ಇಷ್ಟು ವರ್ಷಗಳಲ್ಲಿ ಹೆಚ್ಚೇನೂ ಬದಲಾಗಿಲ್ಲ. ಸರಬರಾಯಿಯ ಪ್ರಮಾಣ ಮಾತ್ರ ಜಾಸ್ತಿಯಾಗಿದೆ. ಈಗ ಈ ಉದ್ಯಮದಲ್ಲಿ ಕೆಲಸಮಾಡುತ್ತಿರುವ 5,000ಕ್ಕಿಂತ ಹೆಚ್ಚು
ಪುರುಷರು ಮತ್ತು ಕೆಲವು ಸ್ತ್ರೀಯರು ಪ್ರತಿದಿನ 2 ಲಕ್ಷ ಊಟದ ಕ್ಯಾರಿಯರ್‌ಗಳನ್ನು ತಲಪಿಸುತ್ತಾರೆ. ಇವರು ತಮ್ಮ ವಠಾರದಲ್ಲಿರುವ ಮನೆಗಳಿಂದ ಮಧ್ಯಾಹ್ನದೂಟವನ್ನು ತೆಗೆದುಕೊಂಡು 2 ಕೋಟಿಗಿಂತಲೂ ಹೆಚ್ಚು ಜನರಿರುವ ಈ ಬೃಹತ್ ನಗರದಾದ್ಯಂತ ಚದರಿರುವ ಆಫೀಸುಗಳಿಗೆ ತಲಪಿಸುತ್ತಾರೆ. ಸುಮಾರು 60 ಕಿ.ಮೀ. ವ್ಯಾಪ್ತಿಯ ಕ್ಷೇತ್ರವನ್ನು ಆವರಿಸುವ ಈ ಎಲ್ಲ ಡಬ್ಬಾವಾಲಾಗಳಲ್ಲಿ ಕೆಲವರು ನಡೆದುಕೊಂಡೇ ಕೈಬಂಡಿಗಳಲ್ಲಿ 30 ಇಲ್ಲವೆ 40 ಟಿಫಿನ್ ಕ್ಯಾರಿಯರ್‌ಗಳನ್ನು ರವಾನಿಸುತ್ತಾರೆ. ಇನ್ನಿತರರು ಸೈಕಲಿನಲ್ಲೊ, ಉಪನಗರಗಳಿಂದ ಬರುವ ರೈಲುಗಳಲ್ಲೊ ಪ್ರಯಾಣಿಸಿ ಊಟ ರವಾನಿಸುತ್ತಾರೆ. ಹೇಗೂ ಇರಲಿ, ಊಟದ ಕ್ಯಾರಿಯರನ್ನು ಸರಿಯಾದ ವ್ಯಕ್ತಿಗೆ ಸರಿಯಾದ ಸಮಯಕ್ಕೆ ತಲಪಿಸುತ್ತಾರೆ. ಇದರಲ್ಲಿ ತಪ್ಪಾಗುವ ಸಂಭವ 60,00,000ದಲ್ಲಿ 1 ಸಲವಂತೆ! ಅವರು ಇಷ್ಟು ಉತ್ತಮ ದಾಖಲೆಯನ್ನು ಕಾಪಾಡಿಕೊಂಡಿರುವುದು ಹೇಗೆ?1956ರಲ್ಲಿ ಡಬ್ಬಾವಾಲಾಗಳ ಸಂಘಟನೆಯು ಒಂದು ಚ್ಯಾರಿಟೇಬಲ್ ಟ್ರಸ್ಟ್ ಆಗಿ ನೋಂದಾವಣೆಗೊಂಡಿತು. ಅದರಲ್ಲಿ ಒಂದು ಕಾರ್ಯನಿರ್ವಾಹಕ ಸಮಿತಿ ಮತ್ತು ಇತರ ಆಫೀಸರುಗಳಿದ್ದಾರೆ. ಕಾರ್ಮಿಕರ ಅನೇಕ ಗುಂಪುಗಳಿದ್ದು ಪ್ರತಿಯೊಂದು ಗುಂಪಿಗೆ ಒಬ್ಬೊಬ್ಬ ಸೂಪರ್‌ವೈಸರ್ ಇರುತ್ತಾನೆ. ಈ ಗುಂಪುಗಳು ಪ್ರತ್ಯೇಕವಾಗಿ ಕೆಲಸಮಾಡುತ್ತವೆ. ಆದರೆ ಕಾರ್ಮಿಕರೆಲ್ಲರೂ ಈ ಸಂಘಟನೆಯಲ್ಲಿ ಪಾಲುದಾರರೂ ಷೇರುದಾರರೂ ಆಗಿದ್ದಾರೆ. ಇದೇ ಅವರ ಈ ಸೇವೆಯ ಯಶಸ್ಸಿನ ಹಿಂದಿರುವ ಗುಟ್ಟೆಂದು ಹೇಳುತ್ತಾರೆ. ಈ ಸೇವೆ ಆರಂಭವಾಗಿ 100ಕ್ಕಿಂತ ಹೆಚ್ಚು ವರ್ಷಗಳು ಸಂದರೂ ಈ ವರೆಗೂ ಒಂದೇ ಒಂದು ಮುಷ್ಕರ ನಡೆದಿಲ್ಲ!
ಡಬ್ಬಾವಾಲಾಗಳ ಬಳಿ ಒಂದು ಗುರುತು ಚೀಟಿ ಇರುತ್ತದೆ. ಅಲ್ಲದೆ, ಅವರು ಎಲ್ಲಿದ್ದರೂ ಅವರ ಬಿಳಿ ಶರ್ಟು, ದೊಗಲೆ ಪ್ಯಾಂಟುಗಳು, ಬಿಳಿ ಟೋಪಿಯಿಂದ ಅವರನ್ನು
ಗುರುತಿಸಬಹುದು. ಅವರು ಆ ಟೋಪಿ ಹಾಕದಿದ್ದರೆ, ಸರಿಯಾದ ಕಾರಣವಿಲ್ಲದೆ ತಡಮಾಡಿದರೆ ಇಲ್ಲವೆ ಗೈರುಹಾಜರಾದರೆ, ಕರ್ತವ್ಯನಿರತರಾಗಿರುವಾಗ ಮದ್ಯಪಾನ ಮಾಡಿ ಸಿಕ್ಕಿಬಿದ್ದರೆ ದಂಡ ತೆರಬೇಕಾಗುತ್ತದೆ.ದಿನಚರಿ
ಬೆಳಗ್ಗೆ 8:30ರಷ್ಟಕ್ಕೆ ಗಿರಾಕಿಯ ಪತ್ನಿ ಅಥವಾ ಇನ್ಯಾರಾದರೂ ಊಟ ತಯಾರಿಸಿ ಅದನ್ನು ಲಂಚ್ ಬಾಕ್ಸಲ್ಲೊ, ಟಿಫಿನ್ ಕ್ಯಾರಿಯರ್‌ನಲ್ಲೊ (ಡಬ್ಬಾ) ತುಂಬಿಸಿ ಕೊಡುತ್ತಾರೆ. ಡಬ್ಬಾವಾಲಾ ಒಂದು ವಠಾರದಿಂದ ಇಂಥ ಹಲವಾರು ಡಬ್ಬಾಗಳನ್ನು ಶೇಖರಿಸಿ ತನ್ನ ಸೈಕಲ್ ಇಲ್ಲವೆ ಬಂಡಿ ಮೇಲೆ ಹೇರಿ ಕೂಡಲೇ ರೈಲ್ವೇ ಸ್ಟೇಷನ್‌ಗೆ ತೆಗೆದುಕೊಂಡು ಹೋಗುತ್ತಾನೆ. ಅಲ್ಲಿ ತನ್ನ ಗುಂಪಿನವರನ್ನು ಭೇಟಿಯಾಗುತ್ತಾನೆ. ಅವರೆಲ್ಲರು ಸೇರಿ, ಅಂಚೆಯವರು ಟಪಾಲನ್ನು ಬೇರೆಬೇರೆ ಮಾಡುವಂತೆ ಊಟದ ಕ್ಯಾರಿಯರ್‌ಗಳನ್ನು ಅವು ತಲಪಬೇಕಾದ ಸ್ಥಳಕ್ಕನುಸಾರ ವಿಂಗಡಿಸುತ್ತಾರೆ.
ಪ್ರತಿಯೊಂದು ಊಟದ ಕ್ಯಾರಿಯರ್ ಮೇಲೆ ನಿರ್ದಿಷ್ಟ ಅಕ್ಷರಗಳು, ಸಂಖ್ಯೆಗಳು, ಬಣ್ಣಗಳಿಂದ ಕೂಡಿದ ಸಂಕೇತ ಇರುತ್ತದೆ. ಇವು ಆ ಊಟ ಯಾವ ನಿವೇಶನದಿಂದ ಬಂದಿದೆ, ಹತ್ತಿರದ ರೈಲ್ವೇ ಸ್ಟೇಷನ್ ಯಾವುದು, ತಲಪಬೇಕಾದ ಸ್ಟೇಷನ್, ಕಟ್ಟಡದ ಹೆಸರು ಹಾಗೂ ಮಾಳಿಗೆ ಸಂಖ್ಯೆಯನ್ನು ಸೂಚಿಸುತ್ತವೆ. ಒಂದು ನಿರ್ದಿಷ್ಟ ವಠಾರಕ್ಕೆ ತಲಪಿಸಬೇಕಾದ ಕ್ಯಾರಿಯರ್‌ಗಳನ್ನೆಲ್ಲಾ ಸೇರಿಸಿ ಉದ್ದವಾದ ಮರದ ಚೌಕಟ್ಟುಗಳಲ್ಲಿ ಇರಿಸಲಾಗುತ್ತದೆ. ಒಂದು ಚೌಕಟ್ಟಿನಲ್ಲಿ 48 ಕ್ಯಾರಿಯರ್‌ಗಳನ್ನು ಇಡಬಹುದು. ಇವುಗಳನ್ನು ರೈಲಿನಲ್ಲಿ, ಚಾಲಕನ ಕ್ಯಾಬಿನಿನ ಪಕ್ಕದಲ್ಲಿರುವ ವಿಶೇಷ ಕಂಪಾರ್ಟ್‌ಮೆಂಟಿನಲ್ಲಿ ಇಡಲಾಗುತ್ತದೆ. ನಂತರ ಆ ರೈಲು ಒಂದು ದೊಡ್ಡ ಸ್ಟೇಷನನ್ನು ತಲಪಿದಾಗ ಅಲ್ಲಿ ಪುನಃ ಒಮ್ಮೆ ಕ್ಯಾರಿಯರ್‌ಗಳನ್ನು ವಿಂಗಡಿಸಲಾಗುತ್ತದೆ ಮತ್ತು ಅವು ತಲಪಬೇಕಾದ ಸ್ಟೇಷನ್ನಿಗೆ ಒಯ್ಯಲಾಗುತ್ತದೆ. ಅಲ್ಲಿಂದ ಕೊನೆಯ ಬಾರಿ ಅವುಗಳನ್ನು ಪುನಃ ವಿಂಗಡಿಸಿ, ಸೈಕಲಿನಲ್ಲೊ ಕೈಬಂಡಿಯಲ್ಲೊ ರವಾನಿಸಿ, ಗಿರಾಕಿಗೆ ತಲಪಿಸಲಾಗುತ್ತದೆ.
ಸಾರಿಗೆಯ ಈ ಮಾಧ್ಯಮಗಳು ಕಾರ್ಯಸಾಧಕವೂ ಅಗ್ಗವೂ ಆಗಿವೆ. ಅಷ್ಟುಮಾತ್ರವಲ್ಲ ಡಬ್ಬಾವಾಲಾಗೆ ಯಾವತ್ತೂ ಟ್ರ್ಯಾಫಿಕ್ ಜ್ಯಾಮ್‌ಗಳಿಂದಾಗಿ ಅಡಚಣೆಯಾಗುವುದಿಲ್ಲ. ಏಕೆಂದರೆ ಅವನು ಕಾರುಗಳ ಉದ್ದುದ್ದ ಸಾಲುಗಳ ಮಧ್ಯೆ ಇಲ್ಲವೇ ಒಳಹಾದಿಗಳಲ್ಲಿ ಸೈಕಲ್ ತುಳಿಯುತ್ತಾ ಹೋಗುತ್ತಾನೆ. ಹೀಗೆ, ಊಟವನ್ನು ಸರಿಯಾದ ಆಫೀಸಿಗೆ ಮಧ್ಯಾಹ್ನ 12:30ರೊಳಗೆ ತಲಪಿಸಲು ಸಾಧ್ಯವಾಗುತ್ತದೆ. ಆಮೇಲೆ ಶ್ರಮಜೀವಿಯಾದ ಈ ಡಬ್ಬಾವಾಲಾ ತನ್ನ ಊಟಮಾಡುತ್ತಾನೆ. ನಂತರ ಮಧ್ಯಾಹ್ನ 1:15 ಹಾಗೂ 2:00ರ ಮಧ್ಯೆ ಎಲ್ಲ ಖಾಲಿ ಡಬ್ಬಾಗಳನ್ನು ಒಟ್ಟುಗೂಡಿಸಿ ಗಿರಾಕಿಗಳ ಮನೆಗಳಿಗೆ ಹಿಂದಿರುಗಿಸುತ್ತಾನೆ. ಮನೆಮಂದಿಯಲ್ಲಿ ಯಾರಾದರೂ ಅದನ್ನು ತೊಳೆದು, ಮರುದಿನಕ್ಕಾಗಿ ಸಿದ್ಧವಾಗಿಡುತ್ತಾರೆ. ಹೀಗೆ ಆರಂಭದಿಂದ ಹಿಡಿದು ಕೊನೆ ವರೆಗೂ ಈ ಕೆಲಸವು ಬೇಗಬೇಗನೆ, ದಕ್ಷವಾಗಿ ನಡೆಯುತ್ತದೆ, ಬಹುಮಟ್ಟಿಗೆ ಒಂದು ರಿಲೇ ಓಟದ ಹಾಗೆ.
ಕಾರ್ಯ ಚಿಕ್ಕದಾದರೂ ಕೀರ್ತಿ ದೊಡ್ಡದು
ಈ ಡಬ್ಬಾವಾಲಾಗಳ ಉತ್ತಮ ದಾಖಲೆಯು ಅಂತಾರಾಷ್ಟ್ರೀಯ ಗಮನಸೆಳೆದಿದೆ. ಇತರ ಸಂಘಟನೆಗಳು ತಮ್ಮ ಉದ್ಯಮಗಳಲ್ಲಿ ಬಳಸಬಹುದಾದ ವಿಷಯಗಳನ್ನು ಅವರಿಂದ ಕಲಿತುಕೊಳ್ಳಲು ಅವರ ಕಾರ್ಯವಿಧಾನವನ್ನು ವಿಶ್ಲೇಷಿಸಿದ್ದಾರೆ. ಡಬ್ಬಾವಾಲಾಗಳ ಬಗ್ಗೆ ಸಾಕ್ಷ್ಯಚಿತ್ರಗಳನ್ನು ತಯಾರಿಸಲಾಗಿದೆ. ಬಹುಮಟ್ಟಿಗೆ ಚ್ಯುತಿಯಿಲ್ಲದ ಅವರ ದಾಖಲೆಗಾಗಿ ಫೋರ್ಬ್ಸ್ ಗ್ಲೋಬಲ್ ಮ್ಯಾಗಸಿನ್ ಪ್ರತಿಷ್ಠಿತ ಸರ್ಟಿಫಿಕೇಟೊಂದನ್ನು ಕೊಟ್ಟಿದೆ. ಅವರ ಸಾಧನೆಯ ಬಗ್ಗೆ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ತಿಳಿಸಲಾಗಿದೆ ಹಾಗೂ ಅಮೆರಿಕದ ಹಾರ್ವರ್ಡ್ ಬಿಸ್‌ನೆಸ್ ಸ್ಕೂಲ್‌ನಲ್ಲೂ ಅಧ್ಯಯನ ಮಾಡಲಾಗುತ್ತದೆ. ಡಬ್ಬಾವಾಲಾಗಳನ್ನು ಭೇಟಿಮಾಡುವುದರಲ್ಲಿ ಗಣ್ಯಾತಿಗಣ್ಯರೂ ಹಿಂದೆಬಿದ್ದಿಲ್ಲ. ಬ್ರಿಟನಿನ ಒಬ್ಬ ರಾಜಕುಮಾರ ಈ ಸಾಲಿಗೆ ಸೇರಿದವನು. ಅವರ ಕೆಲಸ ನೋಡಿ ಅವನೆಷ್ಟು ಪ್ರಭಾವಿತನಾದನೆಂದರೆ ಡಬ್ಬಾವಾಲಾಗಳಲ್ಲಿ ಕೆಲವರನ್ನು ಇಂಗ್ಲೆಂಡಿನಲ್ಲಿ ತನ್ನ ಮದುವೆಗೂ ಆಮಂತ್ರಿಸಿದನು.
ಇಂದು ಡಬ್ಬಾವಾಲಾಗಳು ಆರ್ಡರ್‌ಗಳನ್ನು ತೆಗೆದುಕೊಳ್ಳಲು ಮತ್ತು ಲೆಕ್ಕವಿಡಲು ಕಂಪ್ಯೂಟರ್, ಮೊಬೈಲ್ ಬಳಸುತ್ತಾರೆ. ಆದರೆ ಊಟ ತಲಪಿಸುವ ಅವರ ಕಾರ್ಯವಿಧಾನದಲ್ಲಿ ಏನೂ ಬದಲಾವಣೆಯಾಗಿಲ್ಲ. ಮಧ್ಯಾಹ್ನದೂಟದ ಸಮಯ ಹತ್ತಿರವಾಗುತ್ತಿದ್ದಂತೆ ಮುಂಬೈಯ ಅನೇಕ ಆಫೀಸ್ ಕೆಲಸಗಾರರ ಹೊಟ್ಟೆ ಚುರುಗುಟ್ಟುವಾಗ, ಮನೆಯಿಂದ ಬಿಸಿಬಿಸಿ ಊಟದ ಕ್ಯಾರಿಯರ್ ಒಂದು ನಿಮಿಷವೂ ತಡವಾಗದೆ ತಮ್ಮ ಮುಂದಿರುತ್ತದೆಂದು ನಿಶ್ಚಿಂತೆಯಿಂದಿರುತ್ತಾರೆ! (g10-E 11)
[ಪುಟ 21ರಲ್ಲಿರುವ ಚಿತ್ರ]
“ಡಬ್ಬಾಗಳನ್ನು” ರೈಲಿನೊಳಗೆ ಕೊಂಡೊಯ್ಯುವುದು
[ಪುಟ 21ರಲ್ಲಿರುವ ಚಿತ್ರ]
ಊಟದ ಕ್ಯಾರಿಯರ್
[ಪುಟ 22ರಲ್ಲಿರುವ ಚಿತ್ರ]
ಅನೇಕ ವ್ಯಾಪಾರ ಸಂಘಟನೆಗಳು “ಡಬ್ಬಾವಾಲಾಗಳ” ಪರಿಣಾಮಕಾರಿ ಕಾರ್ಯವಿಧಾನದಿಂದ ಹಲವಾರು ಸಂಗತಿಗಳನ್ನು ಕಲಿತಿವೆ