ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೋಪದ ತಾಪ

ಕೋಪದ ತಾಪ

ಕೋಪದ ತಾಪ

ಒಬ್ಬ ವ್ಯಕ್ತಿ ಫಾಸ್ಟ್‌-ಫುಡ್‌ ರೆಸ್ಟಾರೆಂಟ್‌ ಹೊರಗೆ ನಿಂತು ಸ್ಯಾಂಡ್‌ವಿಚ್‌ ಆರ್ಡರ್‌ ಮಾಡಿದ. ಅದು ಸಿಗಲು ತಡವಾಗುತ್ತಿದೆ ಎಂದು ಅವನಿಗೆ ಅನಿಸಿದಾಗ ಕುಪಿತನಾಗಿ ರೆಸ್ಟಾರೆಂಟ್‌ನ ಒಳ ನುಗ್ಗಿದ. ಅಲ್ಲಿದ್ದ ಕೆಲಸಗಾರನನ್ನು ಬೈದು, ಥಳಿಸಿ, ಅವನ ಕೈಯಿಂದ ಸ್ಯಾಂಡ್‌ವಿಚ್‌ ಅನ್ನು ಕಸಿದು ಅಲ್ಲಿಂದ ಹೊರಟುಹೋದ.

ಕೋಪ ಎಲ್ಲರಲ್ಲೂ ಇರುವ ಸ್ವಾಭಾವಿಕ ಗುಣ. ಪ್ರೀತಿ, ನಿರೀಕ್ಷೆ, ಚಿಂತೆ, ದುಃಖ, ಭಯ ಮುಂತಾದ ಭಾವನೆಗಳಂತೆ ಕೋಪವೂ ಒಂದು. ಸಿಟ್ಟನ್ನು ನಿಯಂತ್ರಣದಲ್ಲಿಟ್ಟು ಸರಿಯಾದ ರೀತಿಯಲ್ಲಿ ವ್ಯಕ್ತಪಡಿಸಿದರೆ ಅದರಿಂದ ಪ್ರಯೋಜನವಿದೆ. ಉದಾಹರಣೆಗೆ ಅಡೆತಡೆ, ಸಮಸ್ಯೆಗಳನ್ನು ಜಯಿಸುವ ಛಲವನ್ನು ಅದು ನಮ್ಮಲ್ಲಿ ಹುಟ್ಟಿಸುವುದಾದರೆ ಅಂಥ ಸಿಟ್ಟು ಫಲಕಾರಿ.

ಆದರೆ ಆರಂಭದ ಉದಾಹರಣೆ ತೋರಿಸುವಂತೆ ಕೋಪಕ್ಕೆ ಕರಾಳ ಮುಖವೂ ಇದೆ. ಕೆಲವರಿಗೆ ಕೋಪ ಮೂಗಿನ ತುದಿಯಲ್ಲೇ ಇರುತ್ತದೆ. ಪದೇ ಪದೇ ಸಿಟ್ಟುಗೊಳ್ಳುತ್ತಾರೆ. ವಿಪರೀತ ಕೋಪ ತೋರಿಸುತ್ತಾರೆ. ಅವರ ಸಿಟ್ಟು ಕೆರಳಿದರೆ ಸಾಕು ಕೆಟ್ಟಕೆಟ್ಟ ಮಾತುಗಳು ಬಾಣದಂತೆ ತೂರಿಬರುತ್ತವೆ. ಅಥವಾ ಶಾರೀರಿಕ ಹಲ್ಲೆ ಮಾಡುತ್ತಾರೆ. ಸಿಟ್ಟನ್ನು ಅವರು ನಿಯಂತ್ರಿಸುವ ಬದಲು ಸಿಟ್ಟು ಅವರನ್ನು ತನ್ನ ಬೆರಳಲ್ಲಿ ಕುಣಿಸುತ್ತದೆ. ಕಡಿವಾಣವಿಲ್ಲದ ಅಂಥ ಕೋಪ ಹಾನಿಕರ. ಅದು ವ್ಯಕ್ತಿಯ ಜೀವನದಲ್ಲಿ ದೊಡ್ಡ ತೊಂದರೆಗಳನ್ನು ತಂದೊಡ್ಡುತ್ತದೆ. ಅವರ ಆಲೋಚನಾ ರೀತಿ, ಭಾವನೆ, ವರ್ತನೆ ಮತ್ತು ಸಂಬಂಧಗಳ ಮೇಲೂ ಪ್ರಭಾವಬೀರುತ್ತದೆ.

ಕೋಪಿಷ್ಠರು ತಮಗೆ ಮಾತ್ರವಲ್ಲ ತಮ್ಮ ಸುತ್ತಲಿರುವವರಿಗೂ ನೋವನ್ನು ಉಂಟುಮಾಡುತ್ತಾರೆ. ಕೋಪಿಷ್ಠರಿಗೆ ಕ್ಷುಲ್ಲಕ ವಿಚಾರ ಸಿಕ್ಕಿದರೆ ಸಾಕು ಹಾರಿಬಿದ್ದು ಹಿಂಸಾತ್ಮಕವಾಗಿ ವರ್ತಿಸುತ್ತಾರೆ. ಅದರ ಪರಿಣಾಮ ಭೀಕರವಾಗಿರುತ್ತದೆ. ಮುಂದಿನ ಉದಾಹರಣೆಗಳನ್ನು ಗಮನಿಸಿ:

ಜನಜಂಗುಳಿಯ ರಸ್ತೆಯಲ್ಲಿ ಕೆಲ ಸ್ನೇಹಿತರು ನಡೆದುಕೊಂಡು ಹೋಗುತ್ತಿದ್ದರು. ಅವರಲ್ಲೊಬ್ಬನ ಸ್ಪೋರ್ಟ್ಸ್‌ ಬ್ಯಾಗ್‌ ದಾರಿಹೋಕನಿಗೆ ಸ್ವಲ್ಪ ತಾಗಿತು. ಅಷ್ಟಕ್ಕೆ ಕುಪಿತನಾದ ಆತ ಗುಂಡು ಹಾರಿಸಿ ಬಿಟ್ಟ. ಅದು ಗುಂಪಿನಲ್ಲೊಬ್ಬನ ಕತ್ತಿಗೆ ಹೊಕ್ಕು ಅವನ ಪ್ರಾಣವನ್ನೇ ಬಲಿತೆಗೆದುಕೊಂಡಿತು.

19 ವರ್ಷದ ಹುಡುಗನೊಬ್ಬ ತನಗೆ ನಿಶ್ಚಯವಾಗಿದ್ದ ಹುಡುಗಿಯ 11 ತಿಂಗಳಿನ ಮಗುವಿನ ಪ್ರಾಣಕ್ಕೆ ಕಂಟಕವಾದ. ಆದದ್ದು ಇಷ್ಟೇ: ಅವನು ಹಿಂಸಾತ್ಮಕ ವಿಡಿಯೊ ಗೇಮ್‌ ಆಡುತ್ತಿದ್ದಾಗ ಆ ಮಗು ಬಂದು ಸಾಧನವನ್ನು ಮುಟ್ಟಿದ್ದರಿಂದ ಗೇಮ್‌ ಹಾಳಾಯಿತು. ರೊಚ್ಚಿಗೆದ್ದ ಅವನು ಮಗುವಿಗೆ ಎಷ್ಟು ಜೋರಾಗಿ ಹೊಡೆದನೆಂದರೆ ಮಗು ಸತ್ತೇ ಹೋಯಿತು.

ಲೋಕಾದ್ಯಂತ ಇಂಥ ಅನೇಕ ಘಟನೆಗಳು ನಡೆಯುತ್ತಲೇ ಇವೆ. ಕೋಪ ದೈತ್ಯಾಕಾರದ ಸಮಸ್ಯೆಯಾಗಿ ಬೆಳೆದುಬಿಟ್ಟಿದೆ. ಆದರೆ ಕೋಪದ ತಾಪ ಏಕಿಷ್ಟು ಏರುತ್ತಿದೆ? (g12-E 03)

[ಪುಟ 3ರಲ್ಲಿರುವ ಚೌಕ]

ಕೋಪ ನಮ್ಮ ಭಾವನೆಗಳಲ್ಲಿ ಒಂದು. ಹಾಗಾಗಿ ನಿಯಂತ್ರಣದಲ್ಲಿಟ್ಟು ವ್ಯಕ್ತಪಡಿಸುವ ಸಿಟ್ಟು ತಪ್ಪಲ್ಲ. ಆದರೆ ಈ ಲೇಖನಗಳಲ್ಲಿ ಅನಿಯಂತ್ರಿತ ಕೋಪದ ಬಗ್ಗೆ ತಿಳಿಸಲಾಗಿದೆ. ಇದು ನಮಗೂ ಇತರರಿಗೂ ಭಾವನಾತ್ಮಕ, ಶಾರೀರಿಕ ಹಾಗೂ ಆಧ್ಯಾತ್ಮಿಕ ಹಾನಿಮಾಡುತ್ತದೆ.