ಹದಿವಯಸ್ಸಿನ ಮಕ್ಕಳ ಜೊತೆ ಹೇಗೆ ಮಾತಾಡಬೇಕು?
ಸುಖೀ ಸಂಸಾರಕ್ಕೆ ಸಲಹೆಗಳು | ಮಕ್ಕಳ ಪಾಲನೆ
ಹದಿವಯಸ್ಸಿನ ಮಕ್ಕಳ ಜೊತೆ ಹೇಗೆ ಮಾತಾಡಬೇಕು?
ಕಷ್ಟದ ಕೆಲಸ
ಚಿಕ್ಕವರಿದ್ದಾಗ ಮಕ್ಕಳು ಅವರಾಗಿಯೇ ನಿಮ್ಮ ಹತ್ತಿರ ಎಲ್ಲ ವಿಷಯ ಹೇಳ್ತಾರೆ. ಹರೆಯಕ್ಕೆ ಕಾಲಿಟ್ಟಂತೆ ಮಾತೇ ಇರಲ್ಲ. ಅವರನ್ನು ಮಾತಿಗೆಳೆದರೆ ಹತ್ತಕ್ಕೊಂದು ಮಾತಾಡುತ್ತಾರೆ ಅಷ್ಟೇ. ಇಲ್ಲದಿದ್ದರೆ ಮಾತಿಗೆ ಮಾತು ಬೆಳೆಸಿ ಮನೆಯನ್ನು ರಣರಂಗ ಮಾಡಿಬಿಡುತ್ತಾರೆ.
ಈ ಕಷ್ಟದ ಕೆಲಸವನ್ನು ನಿಮ್ಮಿಂದ ಸುಲಭವಾಗಿ ಮಾಡಕ್ಕಾಗುತ್ತೆ. ಆದರೆ ಇದನ್ನು ಕಷ್ಟದ ಕೆಲಸವನ್ನಾಗಿ ಮಾಡುವಂಥ ಎರಡು ಸಂಗತಿಗಳನ್ನು ನಾವೀಗ ನೋಡೋಣ.
ಯಾಕೆ ಹೀಗಾಗುತ್ತೆ?
ಸ್ವಾತಂತ್ರ್ಯ ಸಮರ. ಮಕ್ಕಳು ಕಿಶೋರಾವಸ್ಥೆಯಿಂದ ಯೌವ್ವನಾವಸ್ಥೆ ತಲುಪುವಾಗ ಜೀವನದಲ್ಲಿ ಬರುವ ಸಮಸ್ಯೆ ಸವಾಲುಗಳನ್ನು ಜಯಿಸಲು ಕಲಿಯುತ್ತಾರೆ. ಆದರೆ ಇದೆಲ್ಲ ಒಂದು ದಿನದಲ್ಲಿ ಆಗುವ ಸಂಗತಿಯಲ್ಲ. ಇನ್ನು ಸ್ವಾತಂತ್ರ್ಯದ ವಿಷಯಕ್ಕೆ ಬರೋದಾದರೆ ಕೆಲವು ಹದಿಹರೆಯದ ಮಕ್ಕಳು ತಮಗೆ ಸಿಗಬೇಕಾದಷ್ಟು ಸ್ವಾತಂತ್ರ್ಯ ಸಿಕ್ಕಿದರೂ ಇನ್ನೂ ಹೆಚ್ಚು ಬೇಕು ಅಂತಾರೆ. ಅದೇ ರೀತಿ ಸ್ವಾತಂತ್ರ್ಯ ಕೊಡೋ ವಿಷಯದಲ್ಲಿ ಜಿಪುಣತನ ತೋರಿಸುವ ಹೆತ್ತವರೂ ಇದ್ದಾರೆ. ಈ ರೀತಿ ಆದಾಗಲೇ ಹೆತ್ತವರ ಮಕ್ಕಳ ನಡುವೆ ಸಮರ ಶುರುವಾಗೋದು. ಕೊನೆಗೆ ಮನೆ ಗೊಂದಲದ ಗೂಡಾಗಿ ಬಿಡುತ್ತೆ. “ನನ್ನ ಅಪ್ಪಅಮ್ಮ ಚಿಕ್‌ಚಿಕ್ಕ ವಿಷ್ಯಕ್ಕೂ ಅದೂ ಇದೂ ಅಂತ ರೂಲ್ಸ್ ಹಾಕ್ತಾ ಇರ್ತಾರೆ” ಎಂದು ದೂರುತ್ತಾ 16ರ ತರುಣ ಭರತ್ * ಹೇಳೋದು “ನಂಗೆ 18 ವರ್ಷ ಆಗೋದರೊಳಗೆ ಬೇಕಾಗಿರೋ ಸ್ವಾತಂತ್ರ್ಯ ಕೊಟ್ಟಿಲ್ಲ ಅಂದ್ರೆ ಮನೆ ಬಿಟ್ಟು ಹೋಗ್ತೀನಿ ಅಷ್ಟೇ!”
ಗಹನ ಚಿಂತನೆ. ಚಿಕ್ಕ ಮಕ್ಕಳು ಜಾಸ್ತಿ ಯೋಚನೆ ಮಾಡಲ್ಲ, ಯಾವುದೇ ವಿಷಯವಾದರೂ ಒಂದಿಲ್ಲ ಅದು ಸರಿ ಇಲ್ಲ ತಪ್ಪು ಇದಷ್ಟೇ ಗೊತ್ತಿರುತ್ತೆ. ಆದರೆ ಹದಿಹರೆಯದ ಮಕ್ಕಳು ಅದಕ್ಕಿಂತಲೂ ಜಾಸ್ತಿ ಯೋಚಿಸುತ್ತಾರೆ. ಗಹನ ಚಿಂತನೆಯ ಪರಿಯಿದು. ಇದು ಯುವ ಮಕ್ಕಳ ಬುದ್ಧಿಯನ್ನು ಹರಿತಗೊಳಿಸಿ ಸರಿಯಾದ ತೀರ್ಮಾನ ತೆಗೆದುಕೊಳ್ಳಲು ನೆರವಾಗುತ್ತೆ. ಉದಾಹರಣೆಗೆ, ಒಂದು ಚಿಕ್ಕ ಮಗುವಿನ ದೃಷ್ಟಿಯಲ್ಲಿ ನ್ಯಾಯ ಎಂದರೆ ಒಂದು ಸರಳ ಲೆಕ್ಕ ಇದ್ದ ಹಾಗೆ. ಒಂದು ಚಾಕಲೇಟಿದ್ದರೆ ಅದನ್ನು ಅಮ್ಮ ಸಮಭಾಗವಾಗಿ ಕತ್ತರಿಸಿ ಒಂದು ತುಂಡನ್ನು ತನಗೆ ಇನ್ನೊಂದನ್ನು ಅಣ್ಣನಿಗೆ ಕೊಡುವುದೇ ನ್ಯಾಯ. ಆದರೆ ಹರೆಯದ ಮಕ್ಕಳು ಈ ರೀತಿ ಯೋಚಿಸುವುದಿಲ್ಲ. ನ್ಯಾಯವಾಗಿ ನಡೆದುಕೊಳ್ಳುವುದು ಅಂದರೆ ಎಲ್ಲರ ಜತೆನೂ ಒಂದೇ ರೀತಿ ನಡೆದುಕೊಳ್ಳುವುದು ಎಂದಲ್ಲ ಅಂತ ತಿಳಿದುಕೊಂಡಿರುತ್ತಾರೆ. ಹಾಗಾಗಿ ಅವರ ಒಳಗೆ ಸಂಘರ್ಷ ನಡೆಯುತ್ತಲೇ ಇರುತ್ತೆ. ಪರಿಣಾಮ? ಅವರ ಅಭಿಪ್ರಾಯಕ್ಕೂ ನಿಮ್ಮ ಅಭಿಪ್ರಾಯಕ್ಕೂ ಘರ್ಷಣೆ ಉಂಟಾಗಿ ಕಾಳಗ ಶುರುವಾಗುತ್ತೆ.
ಇದಕ್ಕೇನು ಪರಿಹಾರ?
ಸುಮ್ಮನೆ ಹರಟೆ ಹೊಡಿರಿ. ಅವಕಾಶ ಸಿಕ್ಕಾಗೆಲ್ಲ ಮಕ್ಕಳನ್ನು ಮಾತಿಗೆಳೆಯಿರಿ. ಕೆಲವು ಹೆತ್ತವರ ಅನುಭವಕ್ಕೆ ಬಂದ ಹಾಗೆ ಪೊಲೀಸ್ ತರ ಎದುರು-ಬದುರು ಕೂತು ಮಾತಾಡುವುದು ಮಕ್ಕಳಿಗೆ ಇಷ್ಟ ಆಗಲ್ಲ. ಆದರೆ ಸ್ನೇಹಿತನ ತರ ಅಕ್ಕಪಕ್ಕ ಕೂತು ಮಾತಾಡಿದರೆ ಇಷ್ಟಪಡುತ್ತಾರೆ. ಮನೆಕೆಲಸ ಮಾಡುತ್ತಿರುವಾಗ, ಗಾಡಿಯಲ್ಲಿ ಪ್ರಯಾಣ ಮಾಡುತ್ತಿರುವಾಗ ಮಾತಾಡಿದರೆ ಹದಿವಯಸ್ಸಿನ ಮಕ್ಕಳು ಮನಬಿಚ್ಚಿ ಮಾತಾಡುತ್ತಾರೆ.—ಬೈಬಲ್ ತತ್ವ: ಧರ್ಮೋಪದೇಶಕಾಂಡ 6:6, 7.
ಚುಟುಕಾಗಿ ಹೇಳಿ ಮುಗಿಸಿ. ಪ್ರತಿಯೊಂದಕ್ಕೂ ವಾದಮಾಡಬೇಡಿ. ಹೇಳಬೇಕಾಗಿರುವುದನ್ನು ನೇರವಾಗಿ ಹೇಳಿ ಸುಮ್ಮನಿದ್ದುಬಿಡಿ. ಅದನ್ನು ಮಗ/ಮಗಳು ಕಿವಿಗೇ ಹಾಕಿಕೊಂಡಿಲ್ಲ ಅಂತ ನಿಮಗನಿಸಬಹುದು. ಆದರೆ ನೀವು ಹೇಳಿದ ವಿಷಯದ ಬಗ್ಗೆ ಅವರೊಬ್ಬರೇ ಇರುವಾಗ ಯೋಚಿಸುತ್ತಾರೆ, ಅರ್ಥಮಾಡಿಕೊಳ್ಳುತ್ತಾರೆ. ನೀವು ಅವರಿಗೆ ಒಂದು ಚಾನ್ಸ್ ಕೊಡಬೇಕಷ್ಟೇ.—ಬೈಬಲ್ ತತ್ವ: ಜ್ಞಾನೋಕ್ತಿ 1:1-4.
ಕಿವಿಗೊಡಿ ಮತ್ತು ಮಣಿಯಿರಿ. ಮಕ್ಕಳು ಮಾತಾಡುವಾಗ ತಾಳ್ಮೆಯಿಂದ ಕೇಳಿ. ಮಧ್ಯೆ ಮಾತಾಡಲು ಹೋಗಬೇಡಿ. ಆಗ ಮಾತ್ರ ಸಮಸ್ಯೆಯ ಇಡೀ ಚಿತ್ರಣ ನಿಮಗೆ ಸಿಗುತ್ತೆ. ಕೆಲವೊಮ್ಮೆ ಮಣಿಯಿರಿ. ನೀವು ಹೇಳಿದಂತೇ ಆಗಬೇಕಂತ ನಿರ್ಬಂಧಿಸಿದರೆ ನಿಮ್ಮ ಮಾತುಮೀರುವುದಲ್ಲದೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ದಾರಿಹುಡುಕುತ್ತಾರೆ. “ಇಬ್ಬಗೆಯ ಜೀವನ ನಡೆಸುತ್ತಾರೆ. ತಂದೆತಾಯಿಗಳ ಮುಂದೆ ಮಾತ್ರ ಅವರು ಹೇಳೋ ರೀತಿ ನಡೆದುಕೊಳ್ಳುತ್ತಾರೆ. ಆದರೆ ಹಿಂದೆ ತಮಗೆ ಬೇಕಾದ ಹಾಗೆ ಜೀವಿಸುತ್ತಾರೆ” ಅಂತ ಹೇಳುತ್ತೆ ಸ್ಟೇಯಿಂಗ್ ಕನೆಕ್ಟೆಡ್ ಟು ಯುವರ್ ಟೀನೇಜರ್ ಅನ್ನೋ ಪುಸ್ತಕ.—ಬೈಬಲ್ ತತ್ವ: ಫಿಲಿಪ್ಪಿ 4:5.
ಶಾಂತವಾಗಿರಿ. “ಏನಾದರೂ ಭಿನ್ನಾಭಿಪ್ರಾಯ ಇತ್ತು ಅಂದ್ರೆ ಸಾಕು ನಾನ್ ಏನೇ ಹೇಳಿದ್ರೂ ಅಮ್ಮ ತಪ್ಪಾಗಿ ತಗೋತಾರೆ. ಆಗ ನಂಗೆ ತುಂಬ ಬೇಜಾರಾಗುತ್ತೆ. ಮಾತಿಗೆ ಮಾತು ಬೆಳಿತಾ ಹೋಗುತ್ತೆ” ಎನ್ನುತ್ತಾಳೆ ಹದಿಹರೆಯದ ಕಂಗನಾ. ಅತಿಯಾಗಿ ವರ್ತಿಸಬೇಡಿ. ನಿಮ್ಮ ಮಾತುಗಳು ನಿಮ್ಮ ಮಕ್ಕಳ ಭಾವನೆಗಳನ್ನು ಪ್ರತಿಧ್ವನಿಸಲಿ. ಉದಾಹರಣೆಗೆ, “ಅದರಲ್ಲೇನಿದೆ ಚಿಂತೆ ಮಾಡುವಂಥದ್ದು?” ಅಂತ ಹೇಳದೆ “ನಿನಗೆಷ್ಟು ಕಷ್ಟ ಆಗ್ತಿದೆ ಅಂತ ನನಗೆ ಅರ್ಥ ಆಗುತ್ತೆ” ಅಂತ ಹೇಳಿ.—ಬೈಬಲ್ ತತ್ವ: ಜ್ಞಾನೋಕ್ತಿ 17:27.
ಅಭಿಪ್ರಾಯ ತಿಳಿಸಿ, ಅಪ್ಪಣೆ ಮಾಡಬೇಡಿ. ನಿಮ್ಮ ಮಗನ ಮಾಂಸಖಂಡಗಳು, ಸ್ನಾಯುಗಳು ಬಲಗೊಳ್ಳಬೇಕಾದರೆ ಅವನೇ ವ್ಯಾಯಾಮ ಮಾಡಬೇಕು. ಅವನಿಗೋಸ್ಕರ ನೀವು ವ್ಯಾಯಾಮ ಮಾಡಕ್ಕಾಗಲ್ಲ. ಅದೇ ರೀತಿ ನಿಮ್ಮ ಮಗನ ಬುದ್ಧಿಸಾಮರ್ಥ್ಯ ಪಕ್ವಗೊಳ್ಳಬೇಕಾದರೆ ಅವನೇ ಯೋಚಿಸಿ ನಿರ್ಣಯಗಳನ್ನು ಮಾಡಬೇಕು. ನೀವು ಅವನಿಗೋಸ್ಕರ ನಿರ್ಣಯ ತೆಗೆದುಕೊಳ್ಳುವುದು ಸರಿಯಲ್ಲ. ಅವನಿಗೇನಾದರೂ ಗೊಂದಲವಿದ್ದರೆ ಆ ವಿಷಯದ ಬಗ್ಗೆ ಅವನೊಂದಿಗೆ ಚರ್ಚೆ ಮಾಡಿ ಅವನೇ ಪರಿಹಾರ ಕಂಡುಹಿಡಿಯುವಂತೆ ಹೇಳಿ. ಆಮೇಲೆ, ನಿಮ್ಮ ಕೆಲವು ಅಭಿಪ್ರಾಯಗಳನ್ನು ತಿಳಿಸಿ “ಇವು ಕೆಲವು ಸಲಹೆಗಳಷ್ಟೆ. ಒಂದೆರಡು ದಿನ ಸಮಯ ತಗೊಂಡು ಚೆನ್ನಾಗಿ ಯೋಚ್ನೆ ಮಾಡು. ಆಮೇಲೆ ನೀನು ಏನು ಮಾಡಬೇಕಂತ ನಿರ್ಧರಿಸಿದ್ಯ, ಯಾಕೆ ಆ ನಿರ್ಣಯ ತಗೊಂಡಿದಿಯಾ ಅಂತ ಮಾತಾಡೋಣ” ಅಂತ ಹೇಳಿ.—ಬೈಬಲ್ ತತ್ವ: ಇಬ್ರಿಯ 5:14.◼ (g13-E 01)
[ಪಾದಟಿಪ್ಪಣಿ]
^ ಈ ಲೇಖನದಲ್ಲಿ ಹೆಸರುಗಳನ್ನು ಬದಲಿಸಲಾಗಿದೆ.
[ಪುಟ 5ರಲ್ಲಿರುವ ಚೌಕ]
ಬೈಬಲಿನ ನುಡಿಮುತ್ತುಗಳು
“ಪ್ರತಿಯೊಬ್ಬನು ಕಿವಿಗೊಡುವುದರಲ್ಲಿ ಶೀಘ್ರನೂ ಮಾತಾಡುವುದರಲ್ಲಿ ದುಡುಕದವನೂ ಕೋಪಿಸುವುದರಲ್ಲಿ ನಿಧಾನಿಯೂ ಆಗಿರಬೇಕು.”—ಯಾಕೋಬ 1:19.
“ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವದು; ಬಿರುನುಡಿಯು ಸಿಟ್ಟನ್ನೇರಿಸುವದು.”—ಜ್ಞಾನೋಕ್ತಿ 15:1.
“ತಂದೆಗಳೇ, ನಿಮ್ಮ ಮಕ್ಕಳನ್ನು ಸಿಟ್ಟಿಗೆಬ್ಬಿಸದೆ ಕರ್ತನ ಶಿಸ್ತಿನಲ್ಲಿಯೂ ಉಪದೇಶದಲ್ಲಿಯೂ ಅವರನ್ನು ಬೆಳೆಸಿರಿ.”—ಎಫೆಸ 6:4, ಪವಿತ್ರ ಗ್ರಂಥ ಭಾಷಾಂತರ.
[ಪುಟ 5ರಲ್ಲಿರುವ ಚೌಕ]
ಹದಿವಯಸ್ಕರಿಗೆ ಕಿವಿಮಾತು
ನಿಮಗೆ ಇನ್ನೂ ಹೆಚ್ಚು ಸ್ವಾತಂತ್ರ್ಯ ಬೇಕಾ? ನಿಮ್ಮ ಅಪ್ಪಅಮ್ಮ ನಿಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು ಅಂತ ಇಷ್ಟಪಡ್ತಿರಾ? ಎಲ್ಲ ನಿಮ್ಮ ಕೈಯಲ್ಲಿದೆ. ನೀವು ದಾರಿಮಾಡಿಕೊಡಬೇಕು. ನಿಮ್ಮ ಜೀವನದಲ್ಲಿ ಏನು ನಡಿತಿದೆ ಎನ್ನುವುದನ್ನೆಲ್ಲ ನೀವೇ ಹೋಗಿ ಅಪ್ಪಅಮ್ಮ ಹತ್ರ ಹೇಳಿ. ಮುಚ್ಚುಮರೆ ಮಾಡಬೇಡಿ. ಅರೆಬರೆ ವಿಷಯಗಳನ್ನು ಹೇಳಿದರೆ ಹೆತ್ತವರಿಗೆ ನಿಮ್ಮ ಮೇಲೆ ಪೂರ್ತಿ ಭರವಸೆ ಬರಲ್ಲ. ನಿಮ್ಮ ಮೇಲೆ ಹೆತ್ತವರಿಗೆ ನಂಬಿಕೆ ಬಂದರೆ ಮಾತ್ರ ಸ್ವಾತಂತ್ರ್ಯ ಕೊಡುತ್ತಾರೆ.
ಅಪ್ಪಅಮ್ಮನೇ ಬಂದು ಮಾತಾಡಲಿ, ಕೇಳಲಿ ಅಂತ ನೆನಸಬೇಡಿ. ಇಡೀ ದಿನ ಏನು ಮಾಡಿದ್ರಿ ಅಂತ ನೀವಾಗಿಯೇ ಹೇಳಿ. ಅದು ನಿಮ್ಮ ಕೆಲಸ. ಅವರ ಬಗ್ಗೆನೂ ಕೇಳಿ. ಅವರು ಮಾಡಿದ್ದು ಅಥವಾ ಹೇಳಿದ್ದು ಏನಾದರೂ ಇಷ್ಟ ಆಗಿಲ್ಲ ಅಂದ್ರೆ ಅದನ್ನು ಗೌರವದಿಂದ ಹೇಳಲು ಕಲಿಯಿರಿ. ಈ ಸಂವಹನ ಕಲೆ ಯೌವ್ವನ ಪ್ರಾಯದಲ್ಲಿ ನಿಮಗೆ ಬಹು ಉಪಯುಕ್ತ. ಅದನ್ನು ನೀವೀಗಲೇ ಯಾಕೆ ಕಲಿತುಕೊಳ್ಳಬಾರದು?
[ಪುಟ 4ರಲ್ಲಿರುವ ಚಿತ್ರ]
[ಪುಟ 4ರಲ್ಲಿರುವ ಚಿತ್ರ]