ಸುಖೀ ಸಂಸಾರಕ್ಕೆ ಸಲಹೆಗಳು | ವೈವಾಹಿಕ ಜೀವನ
ಅಸಮಾಧಾನದ ಹೊರೆ ಬಂಧನಕ್ಕೆ ಬರೆ
ಸಮಸ್ಯೆ
ಎಷ್ಟೇ ಪ್ರಯತ್ನಿಸಿದರೂ ನಿಮ್ಮ ಸಂಗಾತಿ ಆಡಿದ ಮಾತನ್ನು ಅಥವಾ ಮಾಡಿದ ತಪ್ಪನ್ನು ನಿಮ್ಮಿಂದ ಮರೆಯಲಿಕ್ಕೇ ಆಗದಿರಬಹುದು. ಇದರಿಂದ ನಿಮಗೆ ಅವರ ಮೇಲಿದ್ದ ಪ್ರೀತಿ ಕಡಿಮೆಯಾಗಿ ಅಸಮಾಧಾನ ಮನೆಮಾಡಿರಬಹುದು. ‘ಆ ಕಡೆ ಸಮಸ್ಯೆಯನ್ನು ಸರಿಪಡಿಸಲಿಕ್ಕೂ ಆಗದೆ ಈ ಕಡೆ ಸಂಗಾತಿಯನ್ನು ಬಿಡಲಿಕ್ಕೂ ಆಗದೆ’ ನೀವು ಒದ್ದಾಡುತ್ತಿರಬಹುದು. ಇಷ್ಟಕ್ಕೆಲ್ಲಾ ನಿಮ್ಮ ಸಂಗಾತಿಯೇ ಕಾರಣ ಎಂದು ಅವರ ಮೇಲೆ ಕೋಪ ಕೂಡ ಬರಬಹುದು.
ಎಲ್ಲಾ ಮುಗಿದು ಹೋಯ್ತು ಅಂತ ಅಂದುಕೊಳ್ಳಬೇಡಿ. ಈಗಲೂ ಪರಿಸ್ಥಿತಿಯನ್ನು ಸರಿಪಡಿಸಲು ಸಾಧ್ಯ. ಅದು ಹೇಗೆ ಎಂದು ತಿಳಿದುಕೊಳ್ಳುವ ಮೊದಲು ನೀವು ನೆನಪಿನಲ್ಲಿಡಲೇಬೇಕಾದ ಕೆಲವು ವಿಷಯಗಳನ್ನು ನೋಡೋಣ.
ಇದನ್ನು ನೆನಪಿನಲ್ಲಿಡಿ
ಅಸಮಾಧಾನ ನಿಮ್ಮ ಮದುವೆಯನ್ನು ಮುರಿಯಬಹುದು. ಮದುವೆಯ ಬಂಧಕ್ಕೆ ಪ್ರೀತಿ, ನಂಬಿಕೆ, ನಿಷ್ಠೆಯೇ ಆಧಾರ. ನಿಮ್ಮಲ್ಲಿ ಕೋಪ ಇದ್ದರೆ ಈ ಗುಣಗಳನ್ನು ತೋರಿಸಲು ಸಾಧ್ಯವಿಲ್ಲ. ಗಂಡ-ಹೆಂಡತಿ ಮಧ್ಯೆ ಸಮಸ್ಯೆಗಳಿದ್ದರೆ ಅವರಲ್ಲಿ ಅಸಮಾಧಾನ ಇರುತ್ತದೆ ಎಂದು ಜನರು ನೆನಸುತ್ತಾರೆ. ನಿಜ ಏನೆಂದರೆ, ಅಸಮಾಧಾನವೇ ಗಂಡ-ಹೆಂಡತಿ ಮಧ್ಯೆ ಬರುವ ಒಂದು ದೊಡ್ಡ ಸಮಸ್ಯೆ. ಆದ್ದರಿಂದ “ಸಕಲ ವಿಧವಾದ ಕೆಟ್ಟತನವನ್ನು ನಿಮ್ಮಿಂದ ತೆಗೆದುಹಾಕಿರಿ” ಎಂದು ಬೈಬಲ್ ಹೇಳುತ್ತದೆ.—ಎಫೆಸ 4:31.
ಕೋಪವನ್ನು ಬಿಟ್ಟುಬಿಡದೇ ಇದ್ದರೆ ನೋವಾಗುವುದು ನಿಮಗೇನೆ. ಇದು ನಿಮ್ಮ ಕೆನ್ನೆಗೆ ನೀವೇ ಹೊಡೆದು ಬೇರೆಯವರಿಗೆ ನೋವಾಗಬೇಕು ಅಂತ ಬಯಸುವ ಹಾಗೆ ಇರುತ್ತದೆ. “ನಿಮಗೆ ಯಾರ ಮೇಲೆ ಕೋಪ ಇದೆಯೋ ಅವರು ಚೆನ್ನಾಗೇ ಇರಬಹುದು, ಸಂತೋಷವಾಗಿರಬಹುದು ಅಥವಾ ಏನೂ ಆಗಲೇ ಇಲ್ಲ ಅನ್ನೋ ಥರ ಇರಬಹುದು” ಎಂದು ಮಾರ್ಕ್ ಸಿಕೆಲ್‌ರವರು ತಮ್ಮ ಹೀಲಿಂಗ್ ಫ್ರಮ್ ಫ್ಯಾಮಿಲಿ ರಿಫ್ಟ್ಸ್ ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. ಇದರರ್ಥ “ಮನಸ್ತಾಪ ಅಥವಾ ಕೋಪ ಇಟ್ಟುಕೊಳ್ಳುವುದರಿಂದ ನಿಮಗೆ ಯಾರ ಮೇಲೆ ಕೋಪ ಇದೆಯೋ ಅವರಿಗಿಂತ ಹೆಚ್ಚು ನಿಮಗೇ ನೋವು ಆಗುತ್ತದೆ” ಎಂದು ಸಿಕೆಲ್‌ರವರು ತಿಳಿಸುತ್ತಾರೆ.
ಮನಸ್ಸಿನಲ್ಲಿ ಅಸಮಾಧಾನ ಇಟ್ಟುಕೊಳ್ಳುವುದು, ನಿಮ್ಮ ಕೆನ್ನೆಗೆ ನೀವೇ ಹೊಡೆದು ಬೇರೆಯವರಿಗೆ ನೋವಾಗಬೇಕು ಅಂತ ಬಯಸುವ ಹಾಗೆ ಇರುತ್ತದೆ.
ಕೋಪ ಮಾಡಿಕೊಳ್ಳುವುದು, ಮಾಡಿಕೊಳ್ಳದೇ ಇರುವುದು ನಿಮ್ಮ ಕೈಯಲ್ಲೇ ಇದೆ. ಕೆಲವರು ಇದನ್ನು ಒಪ್ಪದೇ ಇರಬಹುದು. ‘ಕೋಪ ಬರೋ ಥರ ಮಾಡ್ತಾರೆ’ ಅಂತ ತಮ್ಮ ಸಂಗಾತಿಯನ್ನೇ ದೂರಬಹುದು. ಈ ರೀತಿ ಯೋಚಿಸಿದ್ರೆ ‘ತಪ್ಪು ಅವರದ್ದೇ/ಳದ್ದೇ, ನಾನೇನೂ ಮಾಡಲಿಕ್ಕಾಗುವುದಿಲ್ಲ’ ಎಂಬ ಭಾವನೆ ಮೂಡುತ್ತದೆ. ಆದರೆ ಬೈಬಲ್ ಏನು ಹೇಳುತ್ತದೆಂದು ಒಮ್ಮೆ ನೋಡಿ: “ಪ್ರತಿಯೊಬ್ಬನು ತನ್ನ ಸ್ವಂತ ಕೆಲಸವನ್ನು ಪರೀಕ್ಷಿಸಿಕೊಳ್ಳಲಿ.” (ಗಲಾತ್ಯ 6:4) ಬೇರೆಯವರನ್ನು ಬದಲಾಯಿಸೋದು ನಮ್ಮ ಕೈಲಿಲ್ಲ. ಆದರೆ ಬೇರೆಯವರು ಏನಾದರೂ ತಪ್ಪು ಮಾಡಿದಾಗ ಅಥವಾ ಏನಾದರೂ ಅಂದಾಗ ನಾವು ಹೇಗೆ ಪ್ರತಿಕ್ರಿಯಿಸುತ್ತೇವೋ ಅದರಲ್ಲಿ ಬದಲಾವಣೆ ಮಾಡಿಕೊಳ್ಳುವುದಕ್ಕೆ ನಮ್ಮಿಂದ ಸಾಧ್ಯ. ಆದ್ದರಿಂದ ಕೋಪ ಮಾಡಿಕೊಳ್ಳುವುದು ಮಾಡಿಕೊಳ್ಳದೇ ಇರುವುದು ನಮ್ಮ ಕೈಯಲ್ಲೇ ಇದೆ.
ಇದಕ್ಕೇನು ಪರಿಹಾರ?
ಆದಷ್ಟು ಬೇಗ ಕ್ಷಮಿಸಿಬಿಡಿ. ‘ತಪ್ಪೆಲ್ಲಾ ಅವರದ್ದೇ’ ಎಂದು ಹೇಳುವುದು ಸುಲಭ. ಕೋಪ ಮಾಡಿಕೊಳ್ಳುವುದು ಮಾಡಿಕೊಳ್ಳದೇ ಇರುವುದು ಹೇಗೆ ನಿಮ್ಮ ಕೈಯಲ್ಲಿದೆಯೋ ಅದೇ ರೀತಿ ಕ್ಷಮಿಸುವುದೂ ಕ್ಷಮಿಸದೇ ಇರುವುದು ಸಹ ನಿಮ್ಮ ಕೈಯಲ್ಲೇ ಇದೆ ಎನ್ನುವುದನ್ನು ಮರೆಯಬೇಡಿ. “ಸೂರ್ಯನು ಮುಳುಗುವುದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ” ಎಂದು ಬೈಬಲ್ ಹೇಳುತ್ತದೆ. (ಎಫೆಸ 4:26) ಆದ್ದರಿಂದ ಆದಷ್ಟು ಬೇಗ ಕ್ಷಮಿಸಿಬಿಡಿ. ನಿಮ್ಮಲ್ಲಿ ಕ್ಷಮಿಸುವ ಗುಣ ಇರುವುದಾದರೆ ಸಮಸ್ಯೆಗಳನ್ನು ಉತ್ತಮ ರೀತಿಯಲ್ಲಿ ಬಗೆಹರಿಸಲು ಸಾಧ್ಯವಾಗುತ್ತದೆ.—ಬೈಬಲ್ ತತ್ವ: ಕೊಲೊಸ್ಸೆ 3:13.
ಸ್ವಪರೀಕ್ಷೆ ಮಾಡಿಕೊಳ್ಳಿ. ಕೆಲವರು ‘ಕೋಪಿಷ್ಠರು’ ‘ಕ್ರೋಧಶೀಲರು’ ಆಗಿರುತ್ತಾರೆ ಎಂದು ಬೈಬಲ್ ತಿಳಿಸುತ್ತದೆ. (ಜ್ಞಾನೋಕ್ತಿ 29:22) ನಿಮ್ಮಲ್ಲೂ ಈ ವ್ಯಕ್ತಿತ್ವ ಇದೆಯಾ ಎಂದು ಯೋಚಿಸಿ. ಹಾಗಿರೋದಾದರೆ ಹೀಗೆ ಕೇಳಿಕೊಳ್ಳಿ: ‘ನಾನು ತಪ್ಪುಗಳನ್ನು ಮಾತ್ರ ಬೇಗ ಕಂಡುಹಿಡಿಯುತ್ತೇನಾ? ಬೇಗ ಕೋಪ ಮಾಡಿಕೊಳ್ಳುತ್ತೇನಾ? ಚಿಕ್ಕ ಪುಟ್ಟ ವಿಷಯಗಳಿಗೂ ದೊಡ್ಡ ರಂಪ ಮಾಡುತ್ತೇನಾ?’. ಬೈಬಲ್‌ಹೇಳುತ್ತದೆ, “ಎತ್ತಿ ಆಡುತ್ತಿರುವವನು ಸ್ನೇಹವನ್ನು ಕಳೆದುಕೊಳ್ಳುವನು.” (ಜ್ಞಾನೋಕ್ತಿ 17:9; ಪ್ರಸಂಗಿ 7:9) ಈ ರೀತಿ ನೀವೂ ಎತ್ತಿ ಆಡುವುದಾದರೆ ನಿಮ್ಮ ವೈವಾಹಿಕ ಬಂಧನ ಸಹ ಮುರಿದುಹೋಗಬಹುದು. ಹಾಗಾಗಿ, ಚಿಕ್ಕ ಪುಟ್ಟ ವಿಷಯಗಳಿಗೂ ಕೋಪ ಮಾಡಿಕೊಳ್ಳುವ ರೂಢಿ ನಿಮಗಿದ್ದರೆ, ‘ತಾಳ್ಮೆಯಿಂದ ಇರಲಿಕ್ಕೆ ನನ್ನಿಂದ ಸಾಧ್ಯನೇ ಇಲ್ವಾ?’ ಎಂದು ಕೇಳಿಕೊಳ್ಳಿ. —ಬೈಬಲ್ ತತ್ವ: 1 ಪೇತ್ರ 4:8.
ವಿವಾಹ ಬಂಧಕ್ಕೆ ಪ್ರಾಮುಖ್ಯತೆ ಕೊಡಿ. “ಸುಮ್ಮನಿರುವ ಸಮಯ, ಮಾತಾಡುವ ಸಮಯ” ಹೀಗೆ ಎಲ್ಲದಕ್ಕೂ ಒಂದು ಸರಿಯಾದ ಸಮಯ ಇದೆ ಎಂದು ಬೈಬಲ್ ಹೇಳುತ್ತದೆ. (ಪ್ರಸಂಗಿ 3:7) ತಪ್ಪು ನಡೆದ ಪ್ರತಿಸಾರಿ ಮಾತಾಡಿ ಇತ್ಯರ್ಥ ಮಾಡಲೇಬೇಕೆಂದೇನಿಲ್ಲ. ಕೆಲವೊಮ್ಮೆ “ಮೌನವಾಗಿರಿ, ಹಾಸಿಗೆಯ ಮೇಲೆ ಇರುವಾಗ ಹೃದಯದಲ್ಲೇ ಆಲೋಚಿಸಿಕೊಳ್ಳಿರಿ.” (ಕೀರ್ತನೆ 4:4) ನಿಮಗೆ ನೋವಾದ ವಿಷಯದ ಬಗ್ಗೆ ಹೇಳಲೇಬೇಕೆನಿಸಿದರೆ, ಮೊದಲು ನಿಮ್ಮ ಕೋಪ ತಣ್ಣಗಾಗುವವರೆಗೆ ಕಾಯಿರಿ. ಬೆಯಾಟ್ರೀಸ್ ಎಂಬ ಸ್ತ್ರೀ ಹೇಳುವುದು: “ನನಗೇನಾದ್ರೂ ಅವರಿಂದ ನೋವಾದರೆ ಮೊದಲು ನಾನು ನನ್ನ ಕೋಪ ತಣ್ಣಗಾಗುವವರೆಗೆ ಕಾಯ್ತೇನೆ. ಕೋಪ ಹೋದ ಮೇಲೆ ಅದು ಅಂಥ ದೊಡ್ಡ ತಪ್ಪೇನಲ್ಲ ಅಂತ ಕೆಲವೊಮ್ಮೆ ಅನಿಸುತ್ತದೆ. ಆಗ ನನಗೆ ಸಮಾಧಾನವಾಗಿ ಮಾತಾಡಲಿಕ್ಕೆ ಸಾಧ್ಯವಾಗುತ್ತದೆ”.—ಬೈಬಲ್ ತತ್ವ: ಜ್ಞಾನೋಕ್ತಿ 19:11.
‘ಕ್ಷಮಿಸುವುದು’ ಹೇಗೆಂದು ತಿಳಿದುಕೊಳ್ಳಿ. ‘ಕ್ಷಮಿಸುವುದು’ ಎಂಬ ಪದಕ್ಕೆ ಬೈಬಲಿನ ಮೂಲ ಭಾಷೆಯಲ್ಲಿ “ಕೋಪವನ್ನು ಬಿಟ್ಟುಬಿಡುವುದು” ಎಂಬರ್ಥವಿದೆ. ಆದ್ದರಿಂದ ಕ್ಷಮಿಸುವುದು ಅಂದರೆ ಕೋಪ ಮಾಡಿಕೊಳ್ಳುವುದನ್ನು ಕಡಿಮೆ ಮಾಡುವುದು ಅಥವಾ ಏನೂ ಆಗೇ ಇಲ್ಲ ಎಂಬಂತೆ ನಟಿಸುವುದಲ್ಲ. ಅದರ ನಿಜವಾದ ಅರ್ಥ, ಆದದ್ದನ್ನು ಬಿಟ್ಟುಬಿಡುವುದೇ ಆಗಿದೆ. ನಿಮ್ಮ ಸಂಗಾತಿ ಆಡಿದ ಮಾತು ಅಥವಾ ಮಾಡಿದ ತಪ್ಪಿನಿಂದ ನಿಮ್ಮ ವಿವಾಹ ಬಂಧಕ್ಕೆ ಹಾನಿ ಆಗಬಹುದು. ಆದರೆ ಅದಕ್ಕಿಂತ ಹೆಚ್ಚಿನ ಹಾನಿ ನೀವು ಕೋಪ ಮಾಡಿಕೊಳ್ಳುವಾಗ ಆಗುತ್ತದೆ. ನಿಮ್ಮ ಆರೋಗ್ಯ ಕೂಡ ಕೆಡುತ್ತದೆ. ▪ (g14-E 09)