ಸುಖೀ ಸಂಸಾರಕ್ಕೆ ಸಲಹೆಗಳು | ಯುವಜನರು
ಕೋಪವನ್ನು ನಿಯಂತ್ರಣದಲ್ಲಿಡುವುದು ಹೇಗೆ?
ಸಮಸ್ಯೆ
“ನಾನು ಅಕ್ಕನ ಮೇಲೆ ರೇಗಾಡುತ್ತಾ ಕೋಪದಲ್ಲಿ ಬಾಗಿಲನ್ನು ಜೋರಾಗಿ ತಳ್ಳಿದೆ. ನಾನು ತಳ್ಳಿದ ರಭಸಕ್ಕೆ ಬಾಗಿಲಿನ ಚಿಲಕ ಗೋಡೆಯಲ್ಲಿ ತೂತನ್ನೇ ಮಾಡಿತು. ಆ ತೂತನ್ನು ನೋಡಿದಾಗೆಲ್ಲಾ ನನಗೆ ನನ್ನ ಬಗ್ಗೆನೇ ನಾಚಿಕೆ ಆಗುತ್ತಿತ್ತು.”—ದೀಕ್ಷಾ. *
“‘ನೀನೂ ಒಬ್ಬ ಅಪ್ಪನಾ!’ಅಂತ ನನ್ನ ಅಪ್ಪನನ್ನು ಬೈದುಬಿಟ್ಟು ರೂಮಿನ ಬಾಗಿಲನ್ನು ಧಡಾರನೆ ಹಾಕಿಕೊಂಡೆ. ಹಾಗೆ ಬಾಗಿಲನ್ನು ಹಾಕುವಾಗ ಬಾಡಿ ಹೋದ ಅಪ್ಪನ ಮುಖ ನೋಡಿದೆ. ನಾನು ಆ ರೀತಿ ನಡೆದುಕೊಳ್ಳಬಾರದಿತ್ತು, ಹಾಗೆ ಮಾತಾಡಬಾರದಿತ್ತು ಅಂತ ನನಗೆ ಆಗ ಅನಿಸಿತು.”—ಲಹರಿ.
ನೀವೂ ದೀಕ್ಷಾ ಮತ್ತು ಲಹರಿಯಂತೆ ನಡೆದುಕೊಂಡಿದ್ದೀರಾ? ಹಾಗಾದರೆ ಈ ಲೇಖನ ಓದಿ, ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯವಾಗುವ ಅಂಶಗಳನ್ನು ಕಂಡುಕೊಳ್ಳಿ.
ನಿಮಗಿದು ತಿಳಿದಿರಲಿ
ಕೋಪದಿಂದ ಕಿರಿಚಾಡಿದರೆ ನಿಮ್ಮ ಗೌರವನೇ ಮಣ್ಣು ಪಾಲಾಗುತ್ತದೆ. “ಕೋಪ ನನ್ನ ಹುಟ್ಟು ಗುಣ, ಎಲ್ಲರೂ ಅದನ್ನು ಅರ್ಥ ಮಾಡಿಕೊಳ್ಳಬೇಕು ಅಂತ ನಾನು ಅಂದುಕೊಳ್ಳುತ್ತಿದ್ದೆ. ಆದರೆ ಬೇರೆಯವರು ಕೋಪ ಮಾಡಿಕೊಳ್ಳುವುದನ್ನು ನೋಡುವಾಗ ‘ಇವರೇನು ಬುದ್ಧಿ ಇಲ್ಲದಿರುವವರ ಥರ ನಡೆದುಕೊಳ್ಳುತ್ತಾರಲ್ಲಾ!’ ಅಂತ ಅನಿಸುತ್ತಿತ್ತು. ಆಮೇಲೆ ಯೋಚಿಸಿದರೆ, ‘ನಾನೂ ಹಾಗೇ ಇದ್ದೀನಲ್ಲ, ಅಂದರೆ ಬೇರೆಯವರೂ ನನ್ನ ಬಗ್ಗೆ ಹೀಗೆಯೇ ಯೋಚಿಸುತ್ತಿರುತ್ತಾರೆ’ ಅಂತ ಅರ್ಥ ಆಯಿತು” ಎಂದು ಹೇಳುತ್ತಾಳೆ 21 ವರ್ಷದ ಭಾವನಾ.
ಬೈಬಲಿನ ಬುದ್ಧಿವಾದ: “ಮುಂಗೋಪಿಯು ಬುದ್ಧಿಗೆಡುವನು.”—ಜ್ಞಾನೋಕ್ತಿ 14:17.
ಕೋಪಿಷ್ಠರನ್ನು ಜನ ದೂರ ಮಾಡುತ್ತಾರೆ. “ತಾಳ್ಮೆ ಕಳೆದುಕೊಂಡು ಕೋಪದಿಂದ ನಡೆದುಕೊಂಡರೆ ಜನರಿಗೆ ನಿಮ್ಮ ಮೇಲಿರುವ ಗೌರವ ಕಡಿಮೆಯಾಗುತ್ತದೆ” ಎನ್ನುತ್ತಾನೆ 18 ವರ್ಷದ ದೀಪಕ್. ಇದೇ ಪ್ರಾಯದ ಇಂಚರ, “ಮಾತಿಗೆ ಮುಂಚೆ ಕೋಪ ಮಾಡಿಕೊಳ್ಳುವವರ ಹತ್ತಿರ ಜನ ಮಾತಾಡೋಕೆ ಹೆದರುತ್ತಾರೆ” ಅಂತ ಹೇಳುತ್ತಾಳೆ.
ಬೈಬಲಿನ ಬುದ್ಧಿವಾದ: “ಕೋಪಿಷ್ಠನ ಸಂಗಡ ಸ್ನೇಹ ಬೆಳೆಸಬೇಡ; ಸಿಟ್ಟುಗಾರನ ಸಹವಾಸ ಮಾಡಬೇಡ.”—ಜ್ಞಾನೋಕ್ತಿ 22:24.
ಕೋಪವನ್ನು ನಿಯಂತ್ರಣದಲ್ಲಿಡಲು ಸಾಧ್ಯ. “ಕೋಪಕ್ಕೆ ಕಾರಣವಾಗುವ ಪರಿಸ್ಥಿತಿಯನ್ನು ನಿಯಂತ್ರಿಸುವುದು ನಿಮ್ಮ ಕೈಯಲ್ಲಿರುವುದಿಲ್ಲ, ಆದರೆ ಕೋಪವನ್ನು ನಿಯಂತ್ರಿಸುವುದು ನಿಮ್ಮ ಕೈಯಲ್ಲೇ ಇದೆ, ಇಂಥ ಪರಿಸ್ಥಿತಿಯಲ್ಲಿ ರಂಪಾಟ ಮಾಡುವ ಅಗತ್ಯ ಇಲ್ಲ, ಸಮಾಧಾನದಿಂದ ಮಾತಾಡಿ” ಎನ್ನುತ್ತಾಳೆ 15 ವರ್ಷದ ಸಂಜನಾ.
ಬೈಬಲಿನ ಬುದ್ಧಿವಾದ: “ಶೂರನಾಗಿರುವುದಕ್ಕಿಂತ ತಾಳ್ಮೆಯಿಂದಿರುವುದೇ ಶ್ರೇಷ್ಠ; ಪಟ್ಟಣವನ್ನು ವಶಪಡಿಸಿಕೊಳ್ಳುವುದಕ್ಕಿಂತ ನಿಮ್ಮ ಕೋಪವನ್ನು ಸ್ವಾಧೀನದಲ್ಲಿಟ್ಟುಕೊಳ್ಳುವುದೇ ಉತ್ತಮ.”—ಜ್ಞಾನೋಕ್ತಿ 16:32, ಪರಿಶುದ್ಧ ಬೈಬಲ್. *
ಇದಕ್ಕೇನು ಪರಿಹಾರ
ಗುರಿ ಇಡಿ. “ನಾನಿರೋದೇ ಹೀಗೆ” ಅಂತ ಹೇಳುವ ಬದಲು ಕೋಪವನ್ನು ನಿಯಂತ್ರಣದಲ್ಲಿಡಲು ಪ್ರಯತ್ನಿಸಿ. ಮೊದಲು ಕನಿಷ್ಠ ಪಕ್ಷ ಆರು ತಿಂಗಳಾದರೂ ನಿಯಂತ್ರಣದಲ್ಲಿಡುವ ಗುರಿ ಇಡಿ. ನಿಮಗೆ ಕೋಪ ಬಂದ ಪ್ರತಿ ಬಾರಿ (1) ಯಾಕೆ ಕೋಪ ಬಂತು? (2) ಅದನ್ನು ನಿಯಂತ್ರಣದಲ್ಲಿಡಲು ನೀವೇನು ಮಾಡಿದಿರಿ? (3) ಇನ್ನೂ ಏನು ಮಾಡಬಹುದಿತ್ತು? ಮತ್ತು ಯಾಕೆ? ಅಂತ ಬರೆದಿಡಿ. ಏನು ಮಾಡಬಹುದಿತ್ತು ಅಂತ ಬರೆದಿಟ್ಟಿದ್ದೀರೋ ಅದನ್ನು ಮುಂದಿನ ಬಾರಿ ಮಾಡಿ. ಕಿವಿಮಾತು: ನೀವು ಮಾಡಿರುವ ಪ್ರಗತಿಯನ್ನೂ, ತಾಳ್ಮೆ ತೋರಿಸಿದ್ದಕ್ಕಾಗಿ ನಿಮಗೆ ಹೇಗೆ ಅನಿಸಿತು ಅನ್ನುವುದನ್ನೂ ಬರೆದಿಡಿ.—ಬೈಬಲ್ ತತ್ವ: ಕೊಲೊಸ್ಸೆ 3:8.
ಮಾತಾಡುವ ಮುಂಚೆ ಯೋಚಿಸಿ. ಯಾರಾದರೂ ನಿಮಗೆ ಕೋಪ ಬರುವ ಥರ ಮಾಡಿದರೆ ತಕ್ಷಣ ನಿಮ್ಮ ಮನಸ್ಸಿಗೆ ಬಂದದ್ದನ್ನು ಹೇಳಿಬಿಡಬೇಡಿ. ಸ್ವಲ್ಪ ತಾಳ್ಮೆಯಿಂದಿದ್ದು ಒಮ್ಮೆ ದೀರ್ಘವಾಗಿ ಉಸಿರೆಳೆದುಕೊಳ್ಳಿ. “ದೀರ್ಘವಾಗಿ ಉಸಿರೆಳೆಯುವಾಗ ನಾನು ಏನು ಮಾತಾಡಬೇಕಂತ ಯೋಚಿಸುತ್ತೇನೆ, ಹೀಗೆ ಯೋಚಿಸಿ ಮಾತಾಡುವುದರಿಂದ ಆಮೇಲೆ ನನಗೆ ಬೇಜಾರಾಗುವುದಿಲ್ಲ” ಎಂದು 15 ವರ್ಷದ ಎರಿಕ್ ಹೇಳುತ್ತಾನೆ.—ಬೈಬಲ್ ತತ್ವ: ಜ್ಞಾನೋಕ್ತಿ 21:23.
ಇತರರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಿ. ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳದೆ ಕೆಲವೊಮ್ಮೆ ನೀವು ಕೋಪ ಮಾಡಿಕೊ0ಡಿರಬಹುದು. ಆದ್ದರಿಂದ ಕೇವಲ ನಿಮ್ಮ ಬಗ್ಗೆಯೇ ಯೋಚಿಸದೆ ಇತರರಿಗೆ ಹೇಗನಿಸುತ್ತದೆ ಅಂತ ಯೋಚಿಸಿ. “ಜನ ಎಷ್ಟೇ ಕಟುವಾಗಿ ಪ್ರತಿಕ್ರಿಯಿಸಿ, ಕೋಪ ಬರುವ ಹಾಗೆ ಮಾತಾಡಿದರೂ ಅವರು ಆ ರೀತಿ ಮಾಡಲು ಕಾರಣವೇನು ಅಂತ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೀನಿ” ಎನ್ನುತ್ತಾರೆ ಜೆಸಿಕಾ ಎಂಬ ಮಹಿಳೆ.—ಬೈಬಲ್ ತತ್ವ: ಜ್ಞಾನೋಕ್ತಿ 19:11.
ಪರಿಸ್ಥಿತಿ ನಿಯಂತ್ರಣ ತಪ್ಪುವಂತಿದ್ದರೆ ಅಲ್ಲಿಂದ ಹೊರಟು ಬಿಡಿ. ‘ಸಿಟ್ಟೇರುವುದಕ್ಕೆ ಮುಂಚೆ ವಾದವನ್ನು ನಿಲ್ಲಿಸು’ ಎನ್ನುತ್ತದೆ ಬೈಬಲ್. (ಜ್ಞಾನೋಕ್ತಿ 17:14) ಇಲ್ಲಿ ಹೇಳುವಂತೆ ಕೈ ಮೀರಿ ಹೋಗುವ ಸಂದರ್ಭ ಎದುರಾದಾಗ ಅಲ್ಲಿಂದ ಹೊರಟು ಹೋಗುವುದೇ ಒಳ್ಳೆಯದು. ಅದರ ಬಗ್ಗೆಯೇ ಯೋಚಿಸಿ ಇನ್ನಷ್ಟು ಕೋಪಿಸಿಕೊಳ್ಳುವ ಬದಲು ಬೇರೆ ಕೆಲಸದಲ್ಲಿ ಮಗ್ನರಾಗಿ. “ಒತ್ತಡ ಮತ್ತು ಕೋಪದಿಂದ ಹೊರಬಂದು ಸಮಾಧಾನದಿಂದ ಇರಲು ವ್ಯಾಯಾಮ ನನಗೆ ಸಹಾಯ ಮಾಡುತ್ತದೆ” ಎನ್ನುತ್ತಾಳೆ ದೀಪಾ.
ನಡೆದದ್ದನ್ನು ಮರೆತುಬಿಡಿ. “ನೀವು ಕೋಪಗೊಂಡರೂ ಪಾಪಮಾಡಬೇಡಿರಿ” ಎಂದು ಬೈಬಲ್ ಹೇಳುತ್ತದೆ. (ಎಫೆಸ 4:26) ಇದರರ್ಥ ಕೋಪ ಬರುವುದು ಸಾಮಾನ್ಯ. ಆದರೆ ಕೋಪ ಬಂದಾಗ ನಾವು ಹೇಗೆ ನಡೆದುಕೊಳ್ಳುತ್ತೇವೆ ಅನ್ನುವುದು ಮುಖ್ಯ. ಅಂಥ ಸಂದರ್ಭದಲ್ಲಿ “ಮೌನವಾಗಿರಿ, ಹೃದಯದಲ್ಲೇ . . . ಆಲೋಚಿಸಿಕೊಳ್ಳಿರಿ” ಎಂದು ಬೈಬಲ್ ಪ್ರೋತ್ಸಾಹಿಸುತ್ತದೆ. (ಕೀರ್ತನೆ 4:4) “ಇತರರು ಏನಾದರೂ ಹೇಳಿದರೆ ಅಥವಾ ಮಾಡಿದರೆ ನೀವು ಕೋಪದಿಂದ ಪ್ರತಿಕ್ರಿಯಿಸಬೇಡಿ. ಹಾಗೆ ಮಾಡಿದರೆ ನೀವು ಅವರ ಕೈಗೊಂಬೆಯಾಗಿ ಬಿಡುತ್ತೀರಿ. ಆದ್ದರಿಂದ ಕೋಪ ಮಾಡಿಕೊಳ್ಳದೆ ನಡೆದದ್ದನ್ನು ಮರೆತುಬಿಟ್ಟು ನೀವೊಬ್ಬ ಪ್ರೌಢ ವ್ಯಕ್ತಿ ಅಂತ ತೋರಿಸಿಕೊಡಿ” ಎಂದು ರೋಶನ್ ಎಂಬ ಯುವಕ ಹೇಳುತ್ತಾನೆ. ಹೀಗೆ ಮಾಡಿದರೆ ಕೋಪಕ್ಕೆ ನಿಮ್ಮ ಮೇಲಲ್ಲ, ನಿಮಗೆ ಕೋಪದ ಮೇಲೆ ನಿಯಂತ್ರಣ ಇರುತ್ತದೆ. ▪ (g15-E 01)
^ ಪ್ಯಾರ. 4 ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.
^ ಪ್ಯಾರ. 13 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.