ಸುಖೀ ಸಂಸಾರಕ್ಕೆ ಸಲಹೆಗಳು | ಮಕ್ಕಳ ಪಾಲನೆ
ಮಕ್ಕಳಿಗೆ ಸ್ವನಿಯಂತ್ರಣ ಕಲಿಸಿ
ಸಮಸ್ಯೆ
ನಿಮ್ಮ ಆರು ವರ್ಷದ ಮಗನಿಗೆ ತಾಳ್ಮೆ, ಸಮಾಧಾನ ಅಥವಾ ಸ್ವನಿಯಂತ್ರಣ ಅನ್ನೋದು ಒಂಚೂರು ಇಲ್ಲ. ಅವನಿಗೆ ಏನಾದರೂ ಬೇಕಂದ್ರೆ ಆಗಿಂದಾಗಲೇ ಕೊಡಬೇಕು! ಕೋಪ ಬಂದರೆ ಗಂಟಲು ಕಿತ್ತು ಹೋಗೋ ಥರ ಕಿರಿಚಾಡುತ್ತಾನೆ. ‘ಇವನು ಯಾಕೆ ಹೀಗೆ ಆಡುತ್ತಾನೆ? ದೊಡ್ಡವನಾಗುತ್ತಾ ಹೋದಂತೆ ಸರಿ ಹೋಗ್ತಾನಾ? ಅಥವಾ ಈಗಿನಿಂದಲೇ ತಾಳ್ಮೆಯನ್ನು ಇವನಿಗೆ ಕಲಿಸಬೇಕಾ? ಎಂದು ನೀವು ಯೋಚಿಸುತ್ತೀರಿ. *
ಇದನ್ನು ನೆನಪಿನಲ್ಲಿಡಿ
ಸ್ವನಿಯಂತ್ರಣಕ್ಕೆ ನಯಾಪೈಸೆ ಬೆಲೆಯಿಲ್ಲ. “ಇಂದಿನ ಸಮಾಜದಲ್ಲಿ ‘ಮನಸ್ಸಿಗೆ ಬಂದಿದ್ದನ್ನು ಮಾಡಿ ಬಿಡಬೇಕು’ ಎಂಬ ಮಾತು ದೊಡ್ಡವರು, ಚಿಕ್ಕವರು ಎನ್ನದೇ ಎಲ್ಲರ ಕಿವಿಗೂ ಬೀಳುತ್ತಲೇ ಇದೆ. ಜನರಿಗೆ ನೀತಿಪಾಠಗಳನ್ನು ಹೇಳಿಕೊಡುವ ಗುರುಗಳಿಂದ ಹಿಡಿದು ಮೂಟೆಗಟ್ಟಲೆ ಹಣದೋಚುವ ಸಲಹೆಗಾರರವರೆಗೂ ಎಲ್ಲರೂ ‘ನಿಮಗೆ ಇಷ್ಟಬಂದಂತೆ ಇರಿ’ ಅಂತಾನೇ ಹೇಳುತ್ತಾರೆ” * ಎಂದು ಡಾ. ಡೇವಿಡ್ ವೋಲ್ಶ್ ತಿಳಿಸಿದ್ದಾರೆ.
ಸ್ವನಿಯಂತ್ರಣವನ್ನು ಬಾಲ್ಯದಲ್ಲೇ ಕಲಿಸುವುದು ಪ್ರಾಮುಖ್ಯ. ದೀರ್ಘ ಸಮಯದ ಅಧ್ಯಯನವೊಂದರಲ್ಲಿ ಸಂಶೋಧಕರು ನಾಲ್ಕು ವರ್ಷದ ಕೆಲವು ಮಕ್ಕಳಿಗೆ ಒಂದೊಂದು ಮಿಠಾಯಿಯನ್ನು ಕೊಟ್ಟರು. ‘ಈ ಮಿಠಾಯಿಯನ್ನು ಈಗಲೇ ತಿನ್ನಬಹುದು. ಆದರೆ ಇನ್ನು ಸ್ವಲ್ಪ ಸಮಯ ಅದನ್ನು ತಿನ್ನದೇ ಹಾಗೇ ಇಟ್ಟುಕೊಂಡರೆ ಇನ್ನೊಂದು ಮಿಠಾಯಿಯನ್ನು ಬಹುಮಾನವಾಗಿ ಕೊಡುತ್ತೇವೆ’ ಎಂದು ಹೇಳಲಾಯಿತು. ಯಾರು ಈ ವಿಷಯದಲ್ಲಿ ತಾಳ್ಮೆಯನ್ನು ತೋರಿಸಿದರೋ ಅವರು ಮುಂದೆ ಹೈಸ್ಕೂಲಿಗೆ ಬಂದಾಗಲೂ ಇತರರಿಗಿಂತ ಭಾವನಾತ್ಮಕವಾಗಿ ದೃಢರಾಗಿದ್ದರು, ವಿದ್ಯಾಭ್ಯಾಸದಲ್ಲೂ ಮತ್ತು ಇತರ ವಿಷಯದಲ್ಲೂ ಮುಂದೆ ಇದ್ದರು ಎಂದು ಕಂಡುಕೊಳ್ಳಲಾಯಿತು.
ಸ್ವನಿಯಂತ್ರಣವನ್ನು ಕಲಿಸದಿದ್ದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಬಾಲ್ಯದಲ್ಲಾಗುವ ಅನುಭವಗಳಿಗೆ ತಕ್ಕಂತೆ ಮಗುವಿನ ಮೆದುಳು ವಿಕಸನವಾಗುತ್ತದೆ ಎನ್ನುವುದು ಸಂಶೋಧಕರ ಅಭಿಪ್ರಾಯ. ಇದರರ್ಥವನ್ನು ಡಾ. ಡ್ಯಾನ್ ಕಿಂಡ್ಲೊನ್ ಹೀಗೆ ವಿವರಿಸಿದ್ದಾರೆ: “ಮಕ್ಕಳು ಕೇಳಿದ್ದನ್ನೆಲ್ಲ ಕೊಡಿಸುತ್ತಿದ್ದರೆ, ತಾಳ್ಮೆ ಅಂದರೆ ಏನೆಂದು ಕಲಿಸದಿದ್ದರೆ, ಆಸೆಗಳನ್ನು ಹತೋಟಿಯಲ್ಲಿಡಲು ಹೇಳಿಕೊಡದಿದ್ದರೆ ದೊಡ್ಡವರಾದ ಮೇಲೆ ಕಷ್ಟಗಳು-ಒತ್ತಡಗಳು ಬಂದಾಗ ಅದನ್ನು ಎದುರಿಸುವ ಮನೋಬಲ ಅವರಲ್ಲಿ ಇರುವುದಿಲ್ಲ.” *
ಇದಕ್ಕೇನು ಪರಿಹಾರ?
ನೀವು ಮಾದರಿಯಾಗಿರಿ. ಸ್ವನಿಯಂತ್ರಣವನ್ನು ನೀವು ತೋರಿಸುತ್ತಿದ್ದೀರಾ ಎಂದು ಪರೀಕ್ಷಿಸಿಕೊಳ್ಳಿ. ಟ್ರಾಫಿಕ್ ಜಾಮ್ ಆದಾಗ ನಿಮಗೆ ಕೋಪ ಬರುತ್ತಾ? ಕ್ಯೂನಲ್ಲಿ ನಿಂತು ಕಾಯೋಕ್ಕಾಗದೆ ಮಧ್ಯದಲ್ಲೇ ನುಗ್ಗಿ ಬಿಡುತ್ತೀರಾ? ಇಬ್ಬರು ಮಾತಾಡುತ್ತಿರುವಾಗ ನೀವು ಮಧ್ಯದಲ್ಲಿ ಹೋಗಿ ಮಾತಾಡುತ್ತೀರಾ? ಹುಷಾರು! ಇವನ್ನೆಲ್ಲ ನಿಮ್ಮ ಮಗು ಗಮನಿಸುತ್ತದೆ. “ಮಕ್ಕಳಿಗೆ ಸ್ವನಿಯಂತ್ರಣ ಕಲಿಸುವ ಸರಳ ವಿಧಾನ ಸ್ವತಃ ನೀವು ಸ್ವನಿಯಂತ್ರಣ ತೋರಿಸುವುದೇ ಆಗಿದೆ” ಎಂದು ಡಾ. ಕಿಂಡ್ಲಾನ್ ಹೇಳುತ್ತಾರೆ.—ಬೈಬಲ್ ತತ್ವ: ರೋಮನ್ನರಿಗೆ 12:9.
ಸ್ವನಿಯಂತ್ರಣದಿಂದ ಯಾವ ಪ್ರಯೋಜನಗಳಿವೆ ಎಂದು ಕಲಿಸಿ. ನಿಮ್ಮ ಮಗನು ತನ್ನ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟರೆ ಯಾವ ಪ್ರಯೋಜನಗಳಿವೆ ಮತ್ತು ನಿಯಂತ್ರಣದಲ್ಲಿಡದಿದ್ದರೆ ಯಾವ ಅಪಾಯಗಳಿವೆ ಎನ್ನುವುದರ ಕುರಿತು ಅವನ ವಯಸ್ಸಿಗೆ ತಕ್ಕಂತೆ ಕಲಿಸಿ. ಉದಾಹರಣೆಗೆ, ನಿಮ್ಮ ಮಗನೊಂದಿಗೆ ಯಾರೋ ಸರಿಯಾಗಿ ನಡೆದುಕೊಳ್ಳಲಿಲ್ಲವೆಂದು ಅವನು ಕೋಪ ಮಾಡಿಕೊಂಡಿದ್ದಾನೆ ಎಂದಿಟ್ಟುಕೊಳ್ಳಿ. ಆಗ ಅವನು ಕಿರಿಚಾಡದೆ ಈ ಪ್ರಶ್ನೆಗಳ ಕುರಿತು ಯೋಚಿಸಲು ಸಹಾಯ ಮಾಡಿ: ‘ಸೇಡು ತೀರಿಸಿಕೊಳ್ಳುವುದರಿಂದ ಸಮಸ್ಯೆಗೆ ಪರಿಹಾರ ಸಿಗುತ್ತಾ? ಅದರ ಬದಲು ಒಂದರಿಂದ ಹತ್ತನ್ನು ಎಣಿಸಿ ಕೋಪ ತಣ್ಣಗಾಗುವವರೆಗೆ ಕಾಯುವುದು ಸೂಕ್ತವಾಗಿರುತ್ತಾ? ಇಲ್ಲವೇ ಅಲ್ಲಿಂದ ಹೋಗಿಬಿಡುವುದು ಸರೀನಾ?’—ಬೈಬಲ್ ತತ್ವ: ಗಲಾತ್ಯ 6:7.
ಮನಸಾರೆ ಹೊಗಳಿ. ನಿಮ್ಮ ಮಗ ಸ್ವನಿಯಂತ್ರಣ ತೋರಿಸಿದಾಗ ಅವನನ್ನು ಹೊಗಳಿ. ಆಸೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಯಾವಾಗಲೂ ಸುಲಭವಾಗಿರುವುದಿಲ್ಲ. ಆದರೆ ಆ ರೀತಿ ನಡೆದುಕೊಂಡಾಗ ಅದು ಮನೋಬಲವನ್ನು ತೋರಿಸುತ್ತದೆ ಎಂದು ನಿಮ್ಮ ಮಗನಿಗೆ ತಿಳಿಸಿ. ಕೋಪವನ್ನು “ಸ್ವಾಧೀನಮಾಡಿಕೊಳ್ಳದವನು ಗೋಡೆ ಬಿದ್ದ ಹಾಳೂರಿಗೆ ಸಮ,” ಆದರೆ “ದೀರ್ಘಶಾಂತನು ಶೂರನಿಗಿಂತಲೂ ಶ್ರೇಷ್ಠ” ಎಂದು ಬೈಬಲ್ ಸಹ ಹೇಳುತ್ತದೆ.—ಜ್ಞಾನೋಕ್ತಿ 25:28; 16:32.
ಸ್ವನಿಯಂತ್ರಣ ತೋರಿಸುವ ರೂಢಿ ಮಾಡಿಸಿ. ಕೆಲವು ಸನ್ನಿವೇಶಗಳನ್ನು ಸೃಷ್ಟಿಸಿ ನಿಮ್ಮ ಮಗ ಆ ಸನ್ನಿವೇಶದಲ್ಲಿ ಏನು ಮಾಡುವನೆಂದು ನಟಿಸುವಂತೆ ಹೇಳಿ ಅಥವಾ ಅವನಿಗೆ ಎದುರಾಗಬಹುದಾದ ಸನ್ನಿವೇಶಗಳಲ್ಲಿ ಹೇಗೆಲ್ಲ ಪ್ರತಿಕ್ರಿಯಿಸಬಹುದು ಎಂದು ಹೇಳಿ ‘ಯಾವುದು ಸರಿ? ಯಾವುದು ತಪ್ಪು?’ ಎಂದು ಕೇಳಿ. ಈ ಆಟದಲ್ಲಿ ಗೊಂಬೆಗಳನ್ನು, ಚಿತ್ರಗಳನ್ನು ಅಥವಾ ಇನ್ನಿತರ ವಿಷಯಗಳನ್ನು ಸೇರಿಸಿ ಆಸಕ್ತಿ ಬರುವಂತೆ ಮಾಡಿ. ಒಟ್ಟಾರೆ, ಎಲ್ಲ ವಿಷಯಕ್ಕೂ ತಕ್ಷಣ ಪ್ರತಿಕ್ರಿಯಿಸುವ ಬದಲು ಸ್ವನಿಯಂತ್ರಣ ತೋರಿಸುವುದು ಎಷ್ಟು ಉತ್ತಮ ಎಂದು ಈ ಆಟದಿಂದ ನಿಮ್ಮ ಮಗನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿ.—ಬೈಬಲ್ ತತ್ವ: ಜ್ಞಾನೋಕ್ತಿ 29:11.
ತಾಳ್ಮೆಯಿಂದಿರಿ. “ಮೂರ್ಖತನವು ಹುಡುಗನ ಮನಸ್ಸಿಗೆ ಸಹಜ” ಎಂದು ಬೈಬಲ್ ಹೇಳುತ್ತದೆ. (ಜ್ಞಾನೋಕ್ತಿ 22:15) ಸ್ವನಿಯಂತ್ರಣವನ್ನು ನಿಮ್ಮ ಮಗ ಈಗಿಂದೀಗಲೇ ಬೆಳೆಸಿಕೊಳ್ಳಬೇಕು ಅಂತ ನಿರೀಕ್ಷಿಸಬೇಡಿ. ಏಕೆಂದರೆ ‘ಅದನ್ನು ಕಲಿಯಲು ಸಾಕಷ್ಟು ಸಮಯ ಬೇಕು, ಸ್ವಲ್ಪ ಸ್ವಲ್ಪಾನೇ ಕಲಿಯಬೇಕು, ಏಳು-ಬೀಳುಗಳೂ ಇರುತ್ತವೆ. ಆದರೂ ಸ್ವನಿಯಂತ್ರಣ ತೋರಿಸುವುದಕ್ಕೆ ಕಲಿತೇ ಕಲಿಯುತ್ತಾರೆ’ ಎಂದು ಟೀಚ್ ಯುವರ್ ಚಿಲ್ಡ್ರನ್ ವೆಲ್ ಎಂಬ ಪುಸ್ತಕ ತಿಳಿಸುತ್ತದೆ. ಈ ಪ್ರಯತ್ನದಿಂದ ಪ್ರತಿಫಲವಂತೂ ಖಂಡಿತ. ‘ಯಾವ ಮಗು ಸ್ವನಿಯಂತ್ರಣ ತೋರಿಸುತ್ತದೋ ಆ ಮಗು ತನ್ನ 12ನೇ ವಯಸ್ಸಿನಲ್ಲಿ ಡ್ರಗ್ಸ್ ತೆಗೆದುಕೊಳ್ಳುವ ಪ್ರಲೋಭನೆ ಬಂದರೂ ಮಣಿಯುವುದಿಲ್ಲ ಅಥವಾ 14ನೇ ವಯಸ್ಸಿನಲ್ಲಿ ಲೈಂಗಿಕತೆಯಲ್ಲಿ ಒಳಗೂಡಬೇಕೆಂಬ ಪ್ರಲೋಭನೆ ಬಂದರೂ ಮಣಿಯುವುದಿಲ್ಲ’ ಎಂದು ಆ ಪುಸ್ತಕ ತಿಳಿಸುತ್ತದೆ. ▪ (g15-E 08)
^ ಪ್ಯಾರ. 4 ಈ ಲೇಖನದಲ್ಲಿ ಮಗ ಎಂದು ಹೇಳಿರುವುದಾದರೂ ಇಲ್ಲಿ ನೀಡಲಾಗಿರುವ ಸಲಹೆಗಳು ಮಗಳಿಗೂ ಅನ್ವಯವಾಗುತ್ತವೆ.
^ ಪ್ಯಾರ. 6 ಈ ಮಾಹಿತಿ ನೋ: ವೈ ಕಿಡ್ಸ್—ಆಫ್ ಆಲ್ ಏಜಸ್—ನೀಡ್ ಟು ಹಿಯರ್ ಇಟ್ ಆ್ಯಂಡ್ ವೇಸ್ ಪೇರೆಂಟ್ಸ್ ಕ್ಯಾನ್ ಸೇ ಇಟ್ ಎಂಬ ಪುಸ್ತಕದಲ್ಲಿದೆ.
^ ಪ್ಯಾರ. 8 ಈ ಮಾಹಿತಿ ಟೂ ಮಚ್ ಆಫ್ ಎ ಗುಡ್ ಥಿಂಗ್—ರೈಸಿಂಗ್ ಚಿಲ್ಡ್ರನ್ ಆಫ್ ಕ್ಯಾರಕ್ಟರ್ ಇನ್ ಆ್ಯನ್ ಇಂಡಲ್ಜೆ೦ಟ್ ಏಜ್ ಎಂಬ ಪುಸ್ತಕದಲ್ಲಿದೆ.