ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಚಿಕ್ಕವನಿಂದ ಒಂದು ಕುಲ”ವಾಗಿದೆ

“ಚಿಕ್ಕವನಿಂದ ಒಂದು ಕುಲ”ವಾಗಿದೆ

“ಚಿಕ್ಕವನಿಂದ ಒಂದು ಕುಲ”ವಾಗಿದೆ

“ಚಿಕ್ಕವನಿಂದ ಒಂದು ಕುಲವಾಗುವದು, ಅಲ್ಪನಿಂದ ಬಲವಾದ ಜನಾಂಗವಾಗುವದು.”—ಯೆಶಾಯ 60:22.

1, 2. (ಎ) ಇಂದು ಭೂಮಿಯನ್ನು ಕತ್ತಲೆಯು ಆವರಿಸಿರುವುದು ಏಕೆ? (ಬಿ) ಯಾವ ರೀತಿಯಲ್ಲಿ ಯೆಹೋವನ ಬೆಳಕು ಆತನ ಜನರ ಮೇಲೆ ಪ್ರಗತಿಪರವಾಗಿ ಪ್ರಕಾಶಿಸಿದೆ?

“ಕತ್ತಲು ಭೂಮಿಯನ್ನು ಆವರಿಸಿದೆ, ಕಾರ್ಗತ್ತಲು ಜನಾಂಗಗಳನ್ನು ಮುಚ್ಚಿದೆ; ನಿನ್ನ ಮೇಲಾದರೋ ಯೆಹೋವನು ಉದಯಿಸುವನು, ಆತನ ತೇಜಸ್ಸು ನಿನ್ನಲ್ಲಿ ಕಾಣಿಸುವದು.” (ಯೆಶಾಯ 60:2) 1919ರಿಂದ ಭೂಮಿಯ ಮೇಲಿರುವ ಪರಿಸ್ಥಿತಿಯನ್ನು ಈ ಮಾತುಗಳು ಚೆನ್ನಾಗಿ ವರ್ಣಿಸುತ್ತವೆ. ಕ್ರೈಸ್ತಪ್ರಪಂಚವು ಈ ‘ಲೋಕದ ಬೆಳಕಾಗಿರುವ’ ಯೇಸು ಕ್ರಿಸ್ತನ ರಾಜಸದೃಶ ಸನ್ನಿಧಿಯ ಸೂಚನೆಯನ್ನು ತಿರಸ್ಕರಿಸಿದೆ. (ಯೋಹಾನ 8:12; ಮತ್ತಾಯ 24:3) “ಈ ಅಂಧಕಾರದ ಲೋಕಾಧಿಪತಿ”ಯಾದ ಸೈತಾನನ “ಮಹಾ ರೌದ್ರ”ದಿಂದಾಗಿ ಈ 20ನೇ ಶತಮಾನವು, ಮಾನವ ಇತಿಹಾಸದಲ್ಲೇ ಅತ್ಯಂತ ಕ್ರೂರವಾದ ಮತ್ತು ಅತ್ಯಂತ ವಿಧ್ವಂಸಕವಾದ ಸಮಯವಾಗಿತ್ತು. (ಪ್ರಕಟನೆ 12:12; ಎಫೆಸ 6:12) ಅಧಿಕಾಂಶ ಜನರು ಆತ್ಮಿಕ ಅಂಧಕಾರದಲ್ಲಿ ಜೀವಿಸುತ್ತಿದ್ದಾರೆ.

2 ಹಾಗಿದ್ದರೂ, ಇಂದು ಬೆಳಕು ಪ್ರಕಾಶಿಸುತ್ತಿದೆ. ಯೆಹೋವನು ತನ್ನ ಸೇವಕರ ಮೇಲೆ, ಅಂದರೆ ತನ್ನ ಸ್ವರ್ಗೀಯ “ಸ್ತ್ರೀ”ಯ ಭೂಪ್ರತಿನಿಧಿಗಳಾಗಿರುವ ಅಭಿಷಿಕ್ತ ಉಳಿಕೆಯವರ ಮೇಲೆ ‘ಪ್ರಕಾಶಿಸುತ್ತಾನೆ.’ (ಯೆಶಾಯ 60:1, NW) ಇವರು ಬಾಬೆಲಿನ ಸೆರೆಯಿಂದ 1919ರಲ್ಲಿ ಮುಕ್ತರಾದ ಸಮಯದಿಂದಲೂ ದೇವರ ಮಹಿಮೆಯನ್ನು ಪ್ರತಿಬಿಂಬಿಸಿದ್ದಾರೆ ಮತ್ತು ‘ಜನರ ಮುಂದೆ ತಮ್ಮ ಬೆಳಕನ್ನು ಪ್ರಕಾಶಿಸಿದ್ದಾರೆ.’ (ಮತ್ತಾಯ 5:16) 1919ರಿಂದ 1931ರ ಅವಧಿಯ ವರೆಗೆ, ಇವರು ಬಾಬೆಲಿನ ವಿಚಾರಗಳಿಂದ ಮುಕ್ತರಾಗುತ್ತಾ ಬಂದಂತೆ ರಾಜ್ಯದ ಬೆಳಕು ಇನ್ನೂ ಪ್ರಕಾಶಮಾನವಾಗಿ ಬೆಳಗಿತು. ಯೆಹೋವನು ತನ್ನ ವಾಗ್ದಾನವನ್ನು ನೆರವೇರಿಸಿದಂತೆ ಇವರ ಸಂಖ್ಯೆಯು ಹತ್ತಾರು ಸಾವಿರಕ್ಕೆ ಏರಿತು. “ಇಸ್ರಾಯೇಲಿನ ಜನಶೇಷವನ್ನು ಸೇರಿಸೇ ಸೇರಿಸುವೆನು, ಅವರನ್ನು ಹಟ್ಟಿಯಲ್ಲಿನ ಕುರಿಗಳಂತೆ ಒಟ್ಟಿಗಿಡುವೆನು, ಕಾವಲ ಮಧ್ಯದಲ್ಲಿನ ಮಂದೆಯ ಹಾಗೆ ಗುಂಪು ಹಾಕುವೆನು; ಜನರು ಗಿಜಿಗುಟ್ಟುವರು.” (ಮೀಕ 2:12) 1931ರಲ್ಲಿ ಯೆಹೋವನ ಜನರು ಯೆಹೋವನ ಸಾಕ್ಷಿಗಳು ಎಂಬ ಹೆಸರನ್ನು ಸ್ವೀಕರಿಸಿದಾಗ ಅವರ ಮೇಲಿದ್ದ ಆತನ ಮಹಿಮೆಯು ಮತ್ತಷ್ಟೂ ವ್ಯಕ್ತವಾಯಿತು.—ಯೆಶಾಯ 43:10, 12.

3. ಯೆಹೋವನ ಬೆಳಕು ಅಭಿಷಿಕ್ತರ ಜೊತೆಗೆ ಇತರರ ಮೇಲೂ ಪ್ರಕಾಶಿಸುವುದೆಂಬುದು ಹೇಗೆ ವ್ಯಕ್ತವಾಯಿತು?

3 ಯೆಹೋವನು ‘ಚಿಕ್ಕ ಹಿಂಡಿನ’ ಉಳಿಕೆಯವರ ಮೇಲೆ ಮಾತ್ರ ಪ್ರಕಾಶಿಸಲಿದ್ದನೊ? (ಲೂಕ 12:32) ಇಲ್ಲ. ಸೆಪ್ಟೆಂಬರ್‌ 1, 1931ರ ದ ವಾಚ್‌ ಟವರ್‌ ಸಂಚಿಕೆಯು ಮತ್ತೊಂದು ಗುಂಪಿನ ಕಡೆಗೆ ಸೂಚಿಸಿತು. ಯೆಹೆಜ್ಕೇಲ 9:1-11 ವಚನಗಳ ಒಳ್ಳೆಯ ವಿವರಣೆಯನ್ನು ನೀಡುತ್ತಾ, ಆ ವಚನಗಳಲ್ಲಿ ಉಲ್ಲೇಖಿಸಲ್ಪಟ್ಟಂತಹ ಲೇಖಕನ ದೌತಿಯುಳ್ಳ ಮನುಷ್ಯನು ಅಭಿಷಿಕ್ತ ಉಳಿಕೆಯವರನ್ನು ಪ್ರತಿನಿಧಿಸಿದನು ಎಂಬುದನ್ನು ತೋರಿಸಿತು. ಆ “ಪುರುಷನು” ಯಾರ ಹಣೆಗಳ ಮೇಲೆ ಗುರುತು ಹಾಕಿದನು? ಪ್ರಮೋದವನ ಭೂಮಿಯ ಮೇಲೆ ಎಂದೆಂದಿಗೂ ಜೀವಿಸುವ ನಿರೀಕ್ಷೆಯುಳ್ಳ “ಬೇರೆ ಕುರಿಗಳ” ಮೇಲೆಯೇ. (ಯೋಹಾನ 10:16; ಕೀರ್ತನೆ 37:29) ‘ಬೇರೆ ಕುರಿಗಳನ್ನು’ ಒಳಗೊಂಡ ಈ ಗುಂಪು ಅಪೊಸ್ತಲ ಯೋಹಾನನು ನೋಡಿದ ದರ್ಶನದಲ್ಲಿನ ‘ಸಕಲ ಜನಾಂಗದಿಂದ ಬಂದ . . . ಮಹಾ ಸಮೂಹ’ವಾಗಿದೆಯೆಂದು 1935ರಲ್ಲಿ ಗ್ರಹಿಸಲಾಯಿತು. (ಪ್ರಕಟನೆ 7:9-14) 1935ರಿಂದ ಈಗಿನ ವರೆಗೂ ಮಹಾ ಸಮೂಹದ ಒಟ್ಟುಗೂಡಿಸುವಿಕೆಯ ಮೇಲೆಯೇ ಹೆಚ್ಚಿನ ಗಮನವು ಕೇಂದ್ರೀಕರಿಸಲ್ಪಟ್ಟಿದೆ.

4. ಯೆಶಾಯ 60:3​ರಲ್ಲಿ ಸೂಚಿಸಲ್ಪಟ್ಟ “ಅರಸರು” ಮತ್ತು “ಜನಾಂಗಗಳು” ಯಾರು?

4 ಈ ಒಟ್ಟುಗೂಡಿಸುವಿಕೆಯ ಕುರಿತೇ ಯೆಶಾಯನ ಪ್ರವಾದನೆಯು ತಿಳಿಸುತ್ತದೆ. ಅದು ಹೇಳುವುದು, “ಜನಾಂಗಗಳು ನಿನ್ನ ಬೆಳಕಿಗೆ ನೆರೆಯುವವು, ಅರಸರು ನಿನ್ನಲ್ಲಿನ ಉದಯಪ್ರಕಾಶಕ್ಕೆ ಬರುವರು.” (ಯೆಶಾಯ 60:3) ಇಲ್ಲಿ ಉಲ್ಲೇಖಿಸಲ್ಪಟ್ಟ “ಅರಸರು” ಯಾರು? ಇವರು ಯೇಸು ಕ್ರಿಸ್ತನೊಂದಿಗೆ ಸ್ವರ್ಗೀಯ ರಾಜ್ಯದಲ್ಲಿ ಸಹಬಾಧ್ಯಸ್ಥರಾಗಿರುವ 1,44,000 ಮಂದಿಯಲ್ಲಿ ಉಳಿಕೆಯವರಾಗಿದ್ದಾರೆ. ಮತ್ತು ಸಾಕ್ಷಿಕಾರ್ಯದಲ್ಲಿ ನಾಯಕತ್ವವನ್ನು ವಹಿಸಿದವರೂ ಆಗಿದ್ದಾರೆ. (ರೋಮಾಪುರ 8:17; ಪ್ರಕಟನೆ 12:17; 14:1) ಇಂದು “ಜನಾಂಗ”ಗಳಿಂದ ಯೆಹೋವನ ಕಡೆಗೆ ಉಪದೇಶಕ್ಕಾಗಿ ಬರುತ್ತಿರುವ ಮತ್ತು ಇತರರನ್ನೂ ಆಮಂತ್ರಿಸುತ್ತಿರುವ ಈ ಭೂನಿರೀಕ್ಷೆಯುಳ್ಳವರ ಸಂಖ್ಯೆಯು, ಭೂಮಿಯಲ್ಲಿ ಉಳಿದಿರುವ ಕೆಲವೇ ಸಾವಿರ ಅಭಿಷಿಕ್ತರ ಸಂಖ್ಯೆಯನ್ನು ಬಹಳವಾಗಿ ಮೀರಿದೆ.—ಯೆಶಾಯ 2:3.

ಯೆಹೋವನ ಹುರುಪುಳ್ಳ ಸೇವಕರು

5. (ಎ) ಯೆಹೋವನ ಜನರ ಹುರುಪು ಕುಂದಿಹೋಗಿಲ್ಲವೆಂಬುದನ್ನು ಯಾವ ನಿಜಾಂಶಗಳು ತೋರಿಸುತ್ತವೆ? (ಬಿ) ಯಾವ ದೇಶಗಳು 1999ರಲ್ಲಿ ಎದ್ದುಕಾಣುವ ಅಭಿವೃದ್ಧಿಯನ್ನು ಪಡೆದಿದ್ದವು? (17-20ನೇ ಪುಟಗಳಲ್ಲಿರುವ ರೇಖಾಚೌಕವನ್ನು ನೋಡಿರಿ.)

5 ಈ 20ನೇ ಶತಮಾನದ ಉದ್ದಕ್ಕೂ ಯೆಹೋವನ ಆಧುನಿಕ ದಿನದ ಸಾಕ್ಷಿಗಳು ಎಂತಹ ಹುರುಪನ್ನು ತೋರಿಸಿದ್ದಾರೆ! ಮತ್ತು ಇಸವಿ 2000ವು ಸಮೀಪಿಸಿದಂತೆ, ಹೆಚ್ಚುತ್ತಿರುವ ಒತ್ತಡಗಳ ಎದುರಿನಲ್ಲೂ ಅವರ ಹುರುಪು ಕುಂದಿಹೋಗಿಲ್ಲ. “ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ” ಎಂಬ ಯೇಸುವಿನ ಆಜ್ಞೆಯನ್ನು ಅವರು ಈಗಲೂ ಗಂಭೀರವಾಗಿಯೇ ತೆಗೆದುಕೊಂಡರು. (ಮತ್ತಾಯ 28:19, 20) ಈ 20ನೇ ಶತಮಾನದ ಕೊನೆಯ ಸೇವಾ ವರ್ಷದಲ್ಲಿ ಸುವಾರ್ತೆಯನ್ನು ಸಾರುವ ಸಕ್ರಿಯ ಪ್ರಚಾರಕರ ಸಂಖ್ಯೆಯು 59,12,492ರ ಹೊಸ ಉಚ್ಚಾಂಕವನ್ನು ತಲಪಿತು. ಅವರು ಇತರರಿಗೆ ದೇವರ ಕುರಿತು ಮತ್ತು ಆತನ ಉದ್ದೇಶಗಳ ಕುರಿತು ತಿಳಿಯಪಡಿಸುತ್ತಾ ಒಟ್ಟು 1,14,45,66,849 ತಾಸುಗಳನ್ನು ಕಳೆದರು. ಅವರು ಆಸಕ್ತ ಜನರನ್ನು ಸಂಧಿಸುತ್ತಾ 42,00,47,796 ಪುನರ್ಭೇಟಿಗಳನ್ನು ಮಾಡಿ, 44,33,884 ಉಚಿತ ಮನೆ ಬೈಬಲ್‌ ಅಧ್ಯಯನಗಳನ್ನು ನಡೆಸಿದರು. ಹುರುಪುಳ್ಳ ಸೇವೆಯ ಎಂತಹ ಅದ್ಭುತ ದಾಖಲೆ!

6. ಪಯನೀಯರರಿಗಾಗಿ ಯಾವ ಹೊಸ ಏರ್ಪಾಡನ್ನು ಮಾಡಲಾಯಿತು, ಮತ್ತು ಈ ಬದಲಾವಣೆಗೆ ಯಾವ ರೀತಿಯ ಪ್ರತಿಕ್ರಿಯೆಯು ಸಿಕ್ಕಿತು?

6 ಪಯನೀಯರರು ಸೇವೆಯಲ್ಲಿ ಕಳೆಯಬೇಕಾದ ತಾಸುಗಳಲ್ಲಾದ ಬದಲಾವಣೆಯ ಕುರಿತು ಆಡಳಿತ ಮಂಡಲಿಯು ಕಳೆದ ಜನವರಿ ತಿಂಗಳಿನಲ್ಲಿ ಒಂದು ಪ್ರಕಟನೆಯನ್ನು ಮಾಡಿತು. ಇಂತಹ ಬದಲಾವಣೆಯ ಸದುಪಯೋಗ ಮಾಡಿಕೊಂಡ ಅನೇಕರು ರೆಗ್ಯುಲರ್‌ ಮತ್ತು ಆಕ್ಸಿಲಿಯರಿ ಪಯನೀಯರ್‌ ಸೇವೆಯನ್ನು ಆರಂಭಿಸಶಕ್ತರಾದರು. ದೃಷ್ಟಾಂತಕ್ಕೆ, 1999ರ ಮೊದಲ ನಾಲ್ಕು ತಿಂಗಳುಗಳಲ್ಲಿ ನೆದರ್ಲೆಂಡ್ಸ್‌ ಬ್ರಾಂಚ್‌ ಆಫೀಸಿಗೆ ದೊರೆತಂತಹ ರೆಗ್ಯುಲರ್‌ ಪಯನೀಯರರ ಅರ್ಜಿಗಳ ಸಂಖ್ಯೆಯು, ಹಿಂದಿನ ವರ್ಷ ಅವೇ ನಾಲ್ಕು ತಿಂಗಳುಗಳಲ್ಲಿ ದೊರೆತಂತಹ ಅರ್ಜಿಗಳಿಗಿಂತಲೂ ನಾಲ್ಕು ಪಟ್ಟು ಹೆಚ್ಚಾಗಿತ್ತು. ಘಾನ ದೇಶವು ವರದಿಸುವುದು: “ಪಯನೀಯರರು ಕಳೆಯಬೇಕಾದ ತಾಸುಗಳಲ್ಲಿ ಹೊಸ ಬದಲಾವಣೆಯಾದಂದಿನಿಂದ, ನಮ್ಮ ರೆಗ್ಯುಲರ್‌ ಪಯನೀಯರರ ಸಂಖ್ಯೆಯು ಒಂದೇಸಮನೆ ಹೆಚ್ಚಿದೆ.” 1999ರ ಸೇವಾ ವರ್ಷದಲ್ಲಿ, ಲೋಕವ್ಯಾಪಕವಾಗಿ ಪಯನೀಯರರ ಸಂಖ್ಯೆಯು 7,38,343 ಆಗಿತ್ತು. ಇದು ‘ಸತ್ಕ್ರಿಯೆಗಳಿಗಾಗಿರುವ ಹುರುಪಿನ’ ಅದ್ಭುತಕರವಾದ ಪ್ರದರ್ಶನವಾಗಿದೆ.—ತೀತ 2:14, NW.

7. ಯೆಹೋವನು ತನ್ನ ಸೇವಕರ ಹುರುಪುಳ್ಳ ಚಟುವಟಿಕೆಯನ್ನು ಯಾವ ರೀತಿಯಲ್ಲಿ ಆಶೀರ್ವದಿಸಿದ್ದಾನೆ?

7 ಯೆಹೋವನು ಈ ಹುರುಪಿನ ಚಟುವಟಿಕೆಯನ್ನು ಆಶೀರ್ವದಿಸಿದ್ದಾನೊ? ಹೌದು. ಯೆಶಾಯನ ಮೂಲಕ ಆತನು ಹೇಳುವುದು: “ಕಣ್ಣೆತ್ತಿ ಸುತ್ತಲು ನೋಡು, ನಿನ್ನ ಮಕ್ಕಳೆಲ್ಲರೂ ಗುಂಪುಕೂಡಿ ನಿನ್ನ ಬಳಿಗೆ ಸೇರುತ್ತಿದ್ದಾರೆ; ಗಂಡುಮಕ್ಕಳು ದೂರದಿಂದ ಸಮೀಪಿಸುತ್ತಾರೆ, ಹೆಣ್ಣುಮಕ್ಕಳು ಕಂಕುಳಿನಲ್ಲಿ ಕುಳಿತು ಬರುತ್ತಾರೆ.” (ಯೆಶಾಯ 60:4) ಒಟ್ಟುಗೂಡಿಸಲ್ಪಟ್ಟಿರುವ ಅಭಿಷಿಕ್ತ “ಗಂಡುಮಕ್ಕಳು” ಮತ್ತು “ಹೆಣ್ಣುಮಕ್ಕಳು” ಇಂದಿನ ವರೆಗೂ ಹುರುಪಿನಿಂದ ದೇವರ ಸೇವೆಮಾಡುತ್ತಿದ್ದಾರೆ. ಮತ್ತು ಈಗ 234 ದೇಶಗಳು ಮತ್ತು ದ್ವೀಪಗಳಿಂದ ಒಟ್ಟುಗೂಡಿಸಲ್ಪಡುತ್ತಿರುವ ಯೇಸುವಿನ ಬೇರೆ ಕುರಿಗಳು ಯೆಹೋವನ ಅಭಿಷಿಕ್ತ “ಗಂಡುಮಕ್ಕಳು” ಮತ್ತು “ಹೆಣ್ಣುಮಕ್ಕಳ” ಜೊತೆಗೆ ಸೇರಿಸಲ್ಪಡುತ್ತಿದ್ದಾರೆ.

“ಸಕಲಸತ್ಕಾರ್ಯ”

8. ಯಾವ ‘ಸತ್ಕಾರ್ಯಗಳನ್ನು’ ಮಾಡುವುದರಲ್ಲಿ ಯೆಹೋವನ ಸಾಕ್ಷಿಗಳು ಸಕ್ರಿಯರಾಗಿದ್ದಾರೆ?

8 ರಾಜ್ಯದ ಸುವಾರ್ತೆಯನ್ನು ಸಾರುವ ಮತ್ತು ಆಸಕ್ತ ಜನರು ಶಿಷ್ಯರಾಗುವಂತೆ ಸಹಾಯ ಮಾಡುವ ಜವಾಬ್ದಾರಿ ಕ್ರೈಸ್ತರಿಗಿದೆ. ಅಷ್ಟುಮಾತ್ರವಲ್ಲ ಅವರು “ಸಕಲಸತ್ಕಾರ್ಯಕ್ಕೆ ಸನ್ನದ್ಧ”ರಾಗಿದ್ದಾರೆ. (2 ತಿಮೊಥೆಯ 3:17) ಹೀಗೆ, ಅವರು ಪ್ರೀತಿಪರವಾಗಿ ತಮ್ಮ ಕುಟುಂಬಗಳನ್ನು ಪರಾಮರಿಸುತ್ತಾರೆ, ಅತಿಥಿಸತ್ಕಾರ ಮಾಡುತ್ತಾರೆ, ಮತ್ತು ಅಸ್ವಸ್ಥರನ್ನು ಭೇಟಿಮಾಡುತ್ತಾರೆ. (1 ತಿಮೊಥೆಯ 5:8; ಇಬ್ರಿಯ 13:16) ಇವರು ರಾಜ್ಯ ಸಭಾಗೃಹಗಳನ್ನು ಕಟ್ಟುವಂತಹ ಕಾರ್ಯಗಳಲ್ಲೂ ಸ್ವಯಂಸೇವಕರಾಗಿ ಸೇವೆಸಲ್ಲಿಸುತ್ತಾರೆ. ಈ ಕೆಲಸವು ಕೂಡ ಒಂದು ಸಾಕ್ಷಿಯನ್ನು ನೀಡುತ್ತದೆ. ಟೋಗೊ ದೇಶದಲ್ಲಿ ಒಂದು ಸಭಾಗೃಹವನ್ನು ಕಟ್ಟಿ ಮುಗಿಸಿದ್ದನ್ನು ಸ್ಥಳಿಕ ಕ್ಯಾರಿಸ್‌ಮ್ಯಾಟಿಕ್‌ ಚರ್ಚಿನ ಮುಖಂಡರು ನೋಡಿದರು. ಯೆಹೋವನ ಸಾಕ್ಷಿಗಳು ಸ್ವಯಂಸೇವಕರ ಸಹಾಯದಿಂದ ತಮ್ಮ ಸ್ವಂತ ಕಟ್ಟಡಗಳನ್ನು ಕಟ್ಟಿಕೊಳ್ಳಲು ಶಕ್ತರಾಗಿರುವಾಗ, ಚರ್ಚು ಅದೇ ಕೆಲಸವನ್ನು ಮಾಡಿಮುಗಿಸಲು ಕಾರ್ಮಿಕರಿಗೆ ಏಕೆ ಹಣಕೊಡಬೇಕಾಗುತ್ತದೆ ಎಂಬುದನ್ನು ತಿಳಿದುಕೊಳ್ಳಲು ಅವರು ಬಯಸಿದರು. ನೆರೆಹೊರೆಯಲ್ಲಿ ಒಳ್ಳೆಯ ಗುಣಮಟ್ಟದ ರಾಜ್ಯ ಸಭಾಗೃಹಗಳ ನಿರ್ಮಾಣವು ಎಷ್ಟೊಂದು ಸಕಾರಾತ್ಮಕವಾದ ಪ್ರಭಾವವನ್ನು ಬೀರಿದೆಯೆಂದರೆ, ಸಭಾಗೃಹಗಳನ್ನು ಕಟ್ಟಲಿರುವ ಕ್ಷೇತ್ರಗಳಲ್ಲೇ ಜನರು ಮನೆಗಳನ್ನು ಕಟ್ಟಿಕೊಳ್ಳಲು ಇಲ್ಲವೆ ಬಾಡಿಗೆಗೆ ತೆಗೆದುಕೊಳ್ಳಲು ಬಯಸುತ್ತಾರೆಂದು ಟೋಗೊ ದೇಶ ವರದಿಸುತ್ತದೆ.

9. ವಿಪತ್ತುಗಳ ಸಮಯದಲ್ಲಿ ಯೆಹೋವನ ಸಾಕ್ಷಿಗಳು ಹೇಗೆ ಪ್ರತಿಕ್ರಿಯಿಸಿದ್ದಾರೆ?

9 ಕೆಲವೊಮ್ಮೆ ಬೇರೊಂದು ರೀತಿಯ ಸತ್ಕಾರ್ಯವನ್ನು ಮಾಡುವ ಸಂದರ್ಭವು ಒದಗಿಬರುತ್ತದೆ. ಕಳೆದ ಸೇವಾ ವರ್ಷದಲ್ಲಿ ಅನೇಕ ದೇಶಗಳು ನೈಸರ್ಗಿಕ ವಿಪತ್ತುಗಳಿಂದ ಬಾಧಿಸಲ್ಪಟ್ಟವು. ಇಂತಹ ಸಂದರ್ಭಗಳಲ್ಲಿ ಸಹಾಯವನ್ನು ನೀಡಲು ಪ್ರಪ್ರಥಮವಾಗಿ ಅಲ್ಲಿಗೆ ಧಾವಿಸಿದವರು ಯೆಹೋವನ ಸಾಕ್ಷಿಗಳೇ. ಉದಾಹರಣೆಗೆ, ಮಿಚ್‌ ಎಂಬ ಹೆಸರಿನ ಬಿರುಗಾಳಿಯಿಂದಾಗಿ ಹಾಂಡ್ಯುರಸ್‌ನ ಹೆಚ್ಚಿನ ಭಾಗವು ಧ್ವಂಸಗೊಂಡಿತು. ಪರಿಹಾರ ಸಹಾಯಗಳನ್ನು ಸಂಘಟಿಸಲು ಬ್ರಾಂಚ್‌ ಆಫೀಸು ಬೇಗನೆ ತುರ್ತು ಪರಿಹಾರ ಕಮಿಟಿಗಳನ್ನು ರಚಿಸಿತು. ಹಾಂಡ್ಯುರಸ್‌ ಮತ್ತು ಇತರ ಅನೇಕ ದೇಶಗಳಿಂದ ಸಾಕ್ಷಿಗಳು, ಬಟ್ಟೆಬರೆ, ಆಹಾರ, ಔಷಧ ಮತ್ತು ಮೂಲಭೂತ ಆವಶ್ಯಕತೆಗಳನ್ನು ದಾನವಾಗಿ ನೀಡಿದರು. ರೀಜನಲ್‌ ಬಿಲ್ಡಿಂಗ್‌ ಕಮಿಟಿಗಳು ತಮ್ಮ ಕೌಶಲಗಳನ್ನು ಉಪಯೋಗಿಸಿ ಮನೆಗಳನ್ನು ನಿರ್ಮಿಸಿದವು. ಹೀಗೆ, ಈ ವಿಪತ್ತಿಗೆ ತುತ್ತಾಗಿದ್ದ ನಮ್ಮ ಸಹೋದರರಿಗೆ ತಮ್ಮ ದಿನನಿತ್ಯದ ಚಟುವಟಿಕೆಗಳನ್ನು ಪುನಃ ಆರಂಭಿಸುವಂತೆ ಸಹಾಯವು ದೊರಕಿತು. ಎಕ್ವಡಾರ್‌ನಲ್ಲಿ ಭಾರಿ ನೆರೆಹಾವಳಿಯ ಕಾರಣ ಕೆಲವೊಂದು ಮನೆಗಳು ಧ್ವಂಸವಾದಾಗ ಯೆಹೋವನ ಸಾಕ್ಷಿಗಳು ತಮ್ಮ ಸಹೋದರರ ಸಹಾಯಕ್ಕೆ ಬಂದರು. ಆ ಸನ್ನಿವೇಶವನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದನ್ನು ನೋಡಿ ಒಬ್ಬ ಸರಕಾರಿ ಅಧಿಕಾರಿಯು ಹೇಳಿದ್ದು: “ಈ ಗುಂಪನ್ನು ನನ್ನ ಕೈಕೆಳಗೆ ಕೆಲಸಕ್ಕಿಟ್ಟುಕೊಳ್ಳಲು ಸಾಧ್ಯವಿದ್ದಿದ್ದರೆ ನಾನು ಏನೆಲ್ಲ ಸಾಧಿಸಬಹುದಿತ್ತು! ನಿಮ್ಮಂತಹ ಜನರು ಲೋಕದ ಎಲ್ಲೆಡೆಯೂ ಇರತಕ್ಕದ್ದು.” ಇಂತಹ ಸತ್ಕಾರ್ಯಗಳು ಯೆಹೋವ ದೇವರಿಗೆ ಸ್ತುತಿಯನ್ನು ತರುತ್ತವೆ ಮತ್ತು ‘ಎಲ್ಲಾ ವಿಧದಲ್ಲಿ ಪ್ರಯೋಜನವನ್ನು ತರುವ ಭಕ್ತಿಯ’ ಪುರಾವೆಯಾಗಿದೆ.—1 ತಿಮೊಥೆಯ 4:8.

ಅವರು ‘ಮೇಘದೋಪಾದಿಯಲ್ಲಿ . . . ಹಾರಿ ಬರುತ್ತಾ’ ಇದ್ದಾರೆ

10. ಅಭಿಷಿಕ್ತರ ಸಂಖ್ಯೆಯು ಕ್ಷೀಣಿಸುತ್ತಿದ್ದರೂ, ಯೆಹೋವನ ನಾಮವು ಹಿಂದೆಂದಿಗಿಂತಲೂ ಹೆಚ್ಚು ವ್ಯಾಪಕವಾಗಿ ಘೋಷಿಸಲ್ಪಡುತ್ತಿದೆ ಏಕೆ?

10 ಯೆಹೋವನು ಈಗ ಕೇಳುವುದು: “ಆಹಾ, ದ್ವೀಪನಿವಾಸಿಗಳೂ ನನ್ನನ್ನು ನಿರೀಕ್ಷಿಸುವವರಾಗಿದ್ದಾರೆ! ಮೇಘದೋಪಾದಿಯಲ್ಲಿಯೂ ಗೂಡುಗಳಿಗೆ ತ್ವರೆಪಡುವ ಪಾರಿವಾಳಗಳಂತೆಯೂ ಹಾರಿ ಬರುತ್ತಿರುವ ಇವರು ಯಾರು? . . . ತಾರ್ಷೀಷಿನ ಹಡಗುಗಳು . . . ನಿನ್ನ ಮಕ್ಕಳನ್ನು . . . ದೂರದಿಂದ ತರುವದರಲ್ಲಿ ಮುಂದಾಗುತ್ತಿವೆ. ವಿದೇಶೀಯರು ನಿನ್ನ ಪೌಳಿಗೋಡೆಗಳನ್ನು ಕಟ್ಟುವರು, ಅವರ ಅರಸರು ನಿನ್ನನ್ನು ಸೇವಿಸುವರು.” (ಯೆಶಾಯ 60:8-10) ಯೆಹೋವನ “ಉದಯಪ್ರಕಾಶಕ್ಕೆ” ಪ್ರಥಮವಾಗಿ ಪ್ರತಿಕ್ರಿಯಿಸಿದವರು ಆತನ “ಮಕ್ಕಳು” ಅಂದರೆ ಅಭಿಷಿಕ್ತ ಕ್ರೈಸ್ತರು. ಆಮೇಲೆ ಬಂದವರು “ವಿದೇಶೀಯರು” ಅಂದರೆ ಮಹಾ ಸಮೂಹದವರು. ಇವರು ಸುವಾರ್ತೆಯನ್ನು ಸಾರುವ ಕೆಲಸದಲ್ಲಿ ತಮ್ಮ ಅಭಿಷಿಕ್ತ ಸಹೋದರರ ನಾಯಕತ್ವವನ್ನು ಅನುಸರಿಸಿ ಅವರಿಗೆ ನಿಷ್ಠೆಯಿಂದ ಸಹಾಯ ಮಾಡುತ್ತಾರೆ. ಹೀಗೆ, ಅಭಿಷಿಕ್ತರ ಸಂಖ್ಯೆಯು ಕಡಿಮೆಯಾಗುತ್ತಿದ್ದರೂ ಭೂಮಿಯ ಆದ್ಯಂತ ಯೆಹೋವನ ನಾಮವು ಹಿಂದೆಂದಿಗಿಂತಲೂ ಹೆಚ್ಚು ವ್ಯಾಪಕವಾಗಿ ಘೋಷಿಸಲ್ಪಡುತ್ತಿದೆ.

11. (ಎ) ಯಾವ ಕಾರ್ಯವು ಈಗಲೂ ಮುಂದುವರಿಯುತ್ತಿದೆ ಮತ್ತು 1999ರಲ್ಲಾದ ಫಲಿತಾಂಶವೇನು? (ಬಿ) ಯಾವ ದೇಶಗಳು 1999ರಲ್ಲಿ ಎದ್ದುಕಾಣುವ ದೀಕ್ಷಾಸ್ನಾನದ ಸಂಖ್ಯೆಗಳನ್ನು ಹೊಂದಿದ್ದವು? (17-20ನೇ ಪುಟಗಳಲ್ಲಿರುವ ರೇಖಾಚೌಕವನ್ನು ನೋಡಿರಿ.)

11 ಈ ಕಾರಣ ಲಕ್ಷಾಂತರ ಜನರು ಕ್ರೈಸ್ತ ಸಭೆಯಲ್ಲಿ ಆಶ್ರಯವನ್ನು ಕಂಡುಕೊಳ್ಳುತ್ತಾ “ಗೂಡುಗಳಿಗೆ ತ್ವರೆಪಡುವ ಪಾರಿವಾಳಗಳಂತೆ” ಹಾರಿ ಬರುತ್ತಿದ್ದಾರೆ. ಪ್ರತಿ ವರ್ಷ ನೂರಾರು ಸಾವಿರ ಜನರು ಸೇರಿಸಲ್ಪಡುತ್ತಿದ್ದಾರೆ ಮತ್ತು ಈ ಬಾಗಿಲು ಇನ್ನೂ ಅನೇಕರಿಗಾಗಿ ಈಗಲೂ ತೆರೆದುಕೊಂಡೇ ಇದೆ. ಯೆಶಾಯನು ಹೇಳುವುದು: “ಜನಾಂಗಗಳ ಐಶ್ವರ್ಯವನ್ನು ನಿನ್ನಲ್ಲಿಗೆ ತರುತ್ತಿರುವರು, . . . ಇದರಿಂದ ನಿನ್ನ ಬಾಗಿಲುಗಳು ಹಗಲಿರುಳೂ ಮುಚ್ಚದೆ ಸದಾ ತೆರೆದಿರುವವು.” (ಯೆಶಾಯ 60:11) ಯೆಹೋವನಿಗೆ ಮಾಡಿದ ಸಮರ್ಪಣೆಯ ಸಂಕೇತವಾಗಿ ಕಳೆದ ವರ್ಷ 3,23,439 ಜನರು ದೀಕ್ಷಾಸ್ನಾನ ಪಡೆದುಕೊಂಡರು. ಮತ್ತು ಆತನು ಬಾಗಿಲುಗಳನ್ನು ಇನ್ನೂ ತೆರೆದೇ ಇಟ್ಟಿದ್ದಾನೆ. “ಸಮಸ್ತಜನಾಂಗಗಳ ಇಷ್ಟವಸ್ತು”ಗಳಾಗಿರುವ ಮಹಾ ಸಮೂಹದ ಸದಸ್ಯರು ಆ ಬಾಗಿಲುಗಳ ಮೂಲಕ ಈಗಲೂ ಪ್ರವೇಶಿಸುತ್ತಿದ್ದಾರೆ. (ಹಗ್ಗಾಯ 2:7) ಕತ್ತಲೆಯನ್ನು ಬಿಟ್ಟುಬರುವ ಯಾರೊಬ್ಬರೂ ನಿರಾಶರಾಗಿ ಹಿಂದಿರುಗುವುದಿಲ್ಲ. (ಯೋಹಾನ 12:46) ಬೆಳಕಿನ ಪರವಾಗಿ ಇಂತಹವರಲ್ಲಿರುವ ಗಣ್ಯತಾಭಾವವು ಎಂದಿಗೂ ಕಡಿಮೆಯಾಗದೇ ಇರುವಂತಾಗಲಿ!

ವಿರೋಧದ ಎದುರಿನಲ್ಲಿ ಧೈರ್ಯವಂತರು

12. ಕತ್ತಲೆಯನ್ನು ಪ್ರೀತಿಸುವವರು ಯಾವ ರೀತಿಯಲ್ಲಿ ಬೆಳಕನ್ನು ನಂದಿಸಲು ಪ್ರಯತ್ನಿಸಿದ್ದಾರೆ?

12 ಕತ್ತಲೆಯನ್ನು ಪ್ರೀತಿಸುವವರು ಯೆಹೋವನ ಬೆಳಕನ್ನು ದ್ವೇಷಿಸುತ್ತಾರೆ. (ಯೋಹಾನ 3:19) ಕೆಲವರು ಆ ಬೆಳಕನ್ನು ನಂದಿಸಲು ಕೂಡ ಪ್ರಯತ್ನಿಸುತ್ತಾರೆ. ಇದು ಅನಿರೀಕ್ಷಿತವಾದ ಸಂಗತಿಯಲ್ಲ. ‘ಪ್ರತಿ ಮನುಷ್ಯನಿಗೂ ಬೆಳಕನ್ನು ಕೊಡುವಂಥ . . . ನಿಜವಾದ ಬೆಳಕು’ ಆಗಿರುವ ಯೇಸುವಿಗೆ ಸಹ ಗೇಲಿಮಾಡಲಾಯಿತು, ವಿರೋಧಿಸಲಾಯಿತು, ಮತ್ತು ಕೊನೆಗೆ ತನ್ನ ದೇಶದವರಿಂದಲೇ ಅವನು ಕೊಲ್ಲಲ್ಪಟ್ಟನು. (ಯೋಹಾನ 1:9) ಈ 20ನೇ ಶತಮಾನದ ಉದ್ದಕ್ಕೂ, ಯೆಹೋವನ ಸಾಕ್ಷಿಗಳು ದೇವರ ಬೆಳಕನ್ನು ನಂಬಿಗಸ್ತಿಕೆಯಿಂದ ಪ್ರತಿಬಿಂಬಿಸುತ್ತಾ ಮುಂದುವರಿದಂತೆ ಅವರನ್ನು ಸಹ ಗೇಲಿಮಾಡಲಾಗಿದೆ, ಸೆರೆಯಲ್ಲಿ ಹಾಕಲಾಗಿದೆ, ನಿಷೇಧಿಸಲಾಗಿದೆ ಮತ್ತು ಕೊಲ್ಲಲಾಗಿದೆ. ಇತ್ತೀಚಿನ ವರ್ಷಗಳಲ್ಲಿ, ದೇವರ ಬೆಳಕನ್ನು ಪ್ರತಿಬಿಂಬಿಸುವವರ ಕುರಿತು ವಿರೋಧಿಗಳು ವಾರ್ತಾಮಾಧ್ಯಮದಲ್ಲಿ ಸುಳ್ಳನ್ನು ಹಬ್ಬಿಸುತ್ತಿದ್ದಾರೆ. ಯೆಹೋವನ ಸಾಕ್ಷಿಗಳು ಅಪಾಯಕರ ಜನರಾಗಿರುವುದರಿಂದ ಅವರನ್ನು ನಿರ್ಬಂಧಿಸಬೇಕು ಇಲ್ಲವೆ ನಿಷೇಧಿಸಬೇಕೆಂದು ಜನರು ನಂಬುವಂತೆ ಮಾಡಲು ಕೆಲವರು ಬಯಸುತ್ತಾರೆ. ಇಂತಹ ವಿರೋಧಿಗಳು ಯಶಸ್ಸನ್ನು ಕಂಡಿದ್ದಾರೊ?

13. ವಿವೇಕಯುತವಾಗಿ ನಮ್ಮ ಕೆಲಸದ ಬಗ್ಗೆ ನಿಜಾಂಶಗಳನ್ನು ವಾರ್ತಾಮಾಧ್ಯಮಕ್ಕೆ ತಿಳಿಸುವುದರ ಪರಿಣಾಮವೇನಾಗಿದೆ?

13 ಇಲ್ಲ. ಸೂಕ್ತವಾದಲ್ಲಿ ಯೆಹೋವನ ಸಾಕ್ಷಿಗಳು ವಾರ್ತಾಮಾಧ್ಯಮದ ಮೂಲಕ ನಿಜಾಂಶಗಳನ್ನು ವಿವರಿಸಿ ಹೇಳಲು ಪ್ರಯತ್ನಿಸಿದ್ದಾರೆ. ಈ ಕಾರಣ ಯೆಹೋವನ ನಾಮವು ವಾರ್ತಾ ಪತ್ರಿಕೆಗಳು, ಮ್ಯಾಗಸಿನ್‌ಗಳು, ರೇಡಿಯೊ ಮತ್ತು ಟೆಲಿವಿಷನ್‌ ಕಾರ್ಯಕ್ರಮಗಳ ಮೂಲಕ ವ್ಯಾಪಕವಾಗಿ ಹಬ್ಬಿದೆ. ಇದರಿಂದ ಸಾರುವ ಕೆಲಸದಲ್ಲಿ ಒಳ್ಳೆಯ ಪ್ರತಿಫಲಗಳು ದೊರೆತಿವೆ. ಉದಾಹರಣೆಗೆ ಡೆನ್ಮಾರ್ಕ್‌ ದೇಶದಲ್ಲಿ, “ಡೆನ್ಮಾರ್ಕ್‌ ವಾಸಿಗಳ ನಂಬಿಕೆಯು ಏಕೆ ಇಳಿಮುಖವಾಗುತ್ತಿದೆ” ಎಂಬ ವಿಷಯದ ಮೇಲೆ ನ್ಯಾಷನಲ್‌ ಟಿವಿಯಲ್ಲಿ ಒಂದು ಕಾರ್ಯಕ್ರಮವು ತೋರಿಸಲ್ಪಟ್ಟಿತು. ಇತರ ಧರ್ಮಗಳ ಪ್ರತಿನಿಧಿಗಳೊಂದಿಗೆ ಯೆಹೋವನ ಸಾಕ್ಷಿಗಳನ್ನು ಸಹ ಇಂಟರ್‌ವ್ಯೂ ಮಾಡಲಾಯಿತು. ಈ ಕಾರ್ಯಕ್ರಮವನ್ನು ವೀಕ್ಷಿಸಿದ್ದ ಒಬ್ಬಾಕೆ ಹೆಂಗಸು ತದನಂತರ ಹೇಳಿದ್ದು: “ಯಾವ ಗುಂಪಿನ ಜನರಲ್ಲಿ ದೇವರಾತ್ಮವು ಇತ್ತೆಂಬುದು ತೀರ ಸ್ಪಷ್ಟವಾಗಿ ತೋರಿಬರುತ್ತಿತ್ತು.” ಆಕೆಯೊಂದಿಗೆ ಬೈಬಲ್‌ ಅಧ್ಯಯನವನ್ನು ಆರಂಭಿಸಲಾಯಿತು.

14. ವಿರೋಧಿಗಳಿಗೆ ಮುಖಭಂಗವಾಗುವ ರೀತಿಯಲ್ಲಿ ಅವರು ಯಾವುದನ್ನು ಗ್ರಹಿಸುವಂತೆ ಬೇಗನೆ ಒತ್ತಾಯಿಸಲ್ಪಡುವರು?

14 ಲೋಕದಲ್ಲಿ ಅನೇಕರು ತಮ್ಮನ್ನು ವಿರೋಧಿಸುವರೆಂದು ಯೆಹೋವನ ಸಾಕ್ಷಿಗಳಿಗೆ ಗೊತ್ತಿದೆ. (ಯೋಹಾನ 17:14) ಆದರೂ, ಅವರು ಯೆಶಾಯನ ಪ್ರವಾದನೆಯಿಂದ ಬಲಗೊಳಿಸಲ್ಪಟ್ಟಿದ್ದಾರೆ: “ನಿನ್ನನ್ನು ಕುಗ್ಗಿಸಿದವರ ಸಂತಾನದವರು ನಿನ್ನ ಬಳಿಗೆ ತಗ್ಗಿಬಗ್ಗಿ ಬರುವರು; ನಿನ್ನನ್ನು ಅಸಡ್ಡೆಮಾಡಿದವರೆಲ್ಲರೂ ನಿನ್ನ ಕಾಲಕೆಳಗೆ ಅಡ್ಡಬಿದ್ದು ನೀನು ಯೆಹೋವನ ಪಟ್ಟಣ, ಇಸ್ರಾಯೇಲಿನ ಸದಮಲಸ್ವಾಮಿಯ ಚೀಯೋನ್‌ ಎಂದು ಕೊಂಡಾಡುವರು.” (ಯೆಶಾಯ 60:14) ಸ್ವತಃ ದೇವರ ವಿರುದ್ಧ ತಾವು ಹೋರಾಡುತ್ತಿದ್ದೇವೆಂದು ಈ ವಿರೋಧಿಗಳು ಬೇಗನೆ ಗ್ರಹಿಸಿಕೊಂಡು ಮುಖಭಂಗವನ್ನು ಅನುಭವಿಸಲಿರುವರು. ಇಂತಹ ಹೋರಾಟವನ್ನು ಯಾರು ಜಯಿಸಬಲ್ಲರು?

15. ಯಾವ ರೀತಿಯಲ್ಲಿ ಯೆಹೋವನ ಸಾಕ್ಷಿಗಳು ‘ಜನಾಂಗಗಳ ಮೊಲೆಕೂಸಾಗುವರು,’ ಮತ್ತು ಇದು ಅವರ ಕಲಿಸುವ ಮತ್ತು ಸಾರುವ ಕೆಲಸದಲ್ಲಿ ಹೇಗೆ ಪ್ರತಿಬಿಂಬಿಸಲ್ಪಟ್ಟಿದೆ?

15 ಯೆಹೋವನು ಮತ್ತೆ ವಾಗ್ದಾನಿಸುವುದು: “ನಿನಗೆ ನಾನು ನಿತ್ಯಶ್ರೇಷ್ಠತೆಯನ್ನು ದಯಪಾಲಿಸಿ ನಿನ್ನನ್ನು ತಲತಲಾಂತರಗಳವರಿಗೆ ಉಲ್ಲಾಸಕರವಾಗುವಂತೆ ಮಾಡುವೆನು. ನೀನು ಜನಾಂಗಗಳ ಮೊಲೆಕೂಸಾಗುವಿ, ರಾಜರು ನಿನಗೆ ಮೊಲೆಯೂಡಿಸುವರು; ಆಗ ಯೆಹೋವನಾದ ನಾನೇ ನಿನ್ನ ರಕ್ಷಕನು . . . ಎಂದು ನೀನು ತಿಳಿದುಕೊಳ್ಳುವಿ.” (ಯೆಶಾಯ 60:15, 16) ಹೌದು, ಯೆಹೋವನು ತನ್ನ ಜನರ ರಕ್ಷಕನಾಗಿದ್ದಾನೆ. ಅವರು ಆತನ ಮೇಲೆ ಆತುಕೊಂಡರೆ “ತಲತಲಾಂತರಗಳ” ವರೆಗೆ ಬದುಕಿ ಉಳಿಯಬಲ್ಲರು. ಮತ್ತು ಸತ್ಯಾರಾಧನೆಯ ಏಳಿಗೆಗಾಗಿ ಲಭ್ಯವಿರುವ ಕೆಲವು ಸಂಪನ್ಮೂಲಗಳನ್ನು ಉಪಯೋಗಿಸುವ ಮೂಲಕ ಅವರು ‘ಜನಾಂಗಗಳ ಮೊಲೆಕೂಸಾಗುವರು.’ ಉದಾಹರಣೆಗೆ, ಕಂಪ್ಯೂಟರ್‌ ಮತ್ತು ಸಂಪರ್ಕ ತಂತ್ರಜ್ಞಾನದ ವಿವೇಕಯುತ ಬಳಕೆಯು 121 ಭಾಷೆಗಳಲ್ಲಿ ಕಾವಲಿನಬುರುಜು ಪತ್ರಿಕೆಯನ್ನು ಮತ್ತು 62 ಭಾಷೆಗಳಲ್ಲಿ ಎಚ್ಚರ! ಪತ್ರಿಕೆಯನ್ನು ಪಾಕ್ಷಿಕವಾಗಿ ಪ್ರಕಟಿಸಲು ಸಹಾಯಮಾಡುತ್ತಿದೆ. ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಷನ್‌ ಅನ್ನು ಹೊಸ ಭಾಷೆಗಳಲ್ಲಿ ಭಾಷಾಂತರಿಸಲು ಸಹಾಯವಾಗುವಂತೆ ನಿರ್ದಿಷ್ಟವಾದ ಕಂಪ್ಯೂಟರ್‌ ಸಾಫ್ಟ್‌ವೇರ್‌ ಕಾರ್ಯಕ್ರಮಗಳು ವಿನ್ಯಾಸಿಸಲ್ಪಟ್ಟಿವೆ, ಮತ್ತು ಇಂತಹ ಭಾಷಾಂತರವು ಅತ್ಯಂತ ಆನಂದವನ್ನು ಕೊಡುತ್ತದೆ. 1999ರಲ್ಲಿ ಕ್ರೈಸ್ತ ಗ್ರೀಕ್‌ ಶಾಸ್ತ್ರಗಳ ಕ್ರೊಏಷನ್‌ ತರ್ಜುಮೆಯು ಹೊರಬಂದಾಗ, ಸಾವಿರಾರು ಜನರು ಆನಂದಬಾಷ್ಪವನ್ನು ಸುರಿಸಿದರು. ಒಬ್ಬ ವೃದ್ಧ ಸಹೋದರನು ಹೇಳಿದ್ದು: “ಈ ಬೈಬಲಿಗಾಗಿ ನಾನು ಎಷ್ಟು ಸಮಯದಿಂದ ಕಾದುಕೊಂಡಿದ್ದೆ. ಈಗ ನಾನು ನೆಮ್ಮದಿಯಿಂದ ಸಾಯಬಲ್ಲೆ!” ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಷನ್‌ ಅನ್ನು ಇಡೀಯಾಗಿ ಇಲ್ಲವೆ ಭಾಗಶಃ 34 ಭಾಷೆಗಳಲ್ಲಿ 10 ಕೋಟಿಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ವಿತರಿಸಲಾಗಿದೆ.

ಉನ್ನತ ನೈತಿಕ ಮಟ್ಟಗಳು

16, 17. (ಎ) ಕಷ್ಟಕರವಾಗಿದ್ದರೂ ಯೆಹೋವನ ಉನ್ನತ ಮಟ್ಟಗಳನ್ನು ಕಾಪಾಡಿಕೊಳ್ಳುವುದು ಏಕೆ ಅತ್ಯಾವಶ್ಯಕವಾಗಿದೆ? (ಬಿ) ಈ ಲೋಕದಿಂದ ಕಲುಷಿತರಾಗುವುದನ್ನು ಯುವ ಜನರು ತಡೆಯಬಲ್ಲರೆಂದು ಯಾವ ಅನುಭವವು ದೃಷ್ಟಾಂತಿಸುತ್ತದೆ?

16 ಯೇಸು ಹೇಳಿದ್ದು: “ಕೆಟ್ಟದ್ದನ್ನು ಮಾಡುವವರು ಬೆಳಕನ್ನು ಸಹಿಸುವದಿಲ್ಲ.” (ಯೋಹಾನ 3:20) ಮತ್ತೊಂದು ಕಡೆಯಲ್ಲಿ, ಬೆಳಕಿನಲ್ಲಿ ಇರಲು ಬಯಸುವವರು ಯೆಹೋವನ ಉನ್ನತ ಮಟ್ಟಗಳನ್ನು ಪ್ರೀತಿಸುತ್ತಾರೆ. ಯೆಶಾಯನ ಮೂಲಕ ಯೆಹೋವನು ಹೇಳುವುದು: “ನಿನ್ನ ಜನರೆಲ್ಲಾ ಸದ್ಧರ್ಮಿಗಳಾಗಿರುವರು.” (ಯೆಶಾಯ 60:21ಎ) ಲೈಂಗಿಕ ಅನೈತಿಕತೆ, ಸುಳ್ಳಾಡುವಿಕೆ, ಲೋಭ ಮತ್ತು ಅಹಂಕಾರವೆಂಬ ಗುಣಗಳು ಬಹಳಷ್ಟು ವ್ಯಾಪಕವಾಗಿ ಹಬ್ಬಿರುವ ಲೋಕದಲ್ಲಿ, ನೀತಿಯ ಮಟ್ಟಗಳನ್ನು ಕಾಪಾಡಿಕೊಳ್ಳುವುದು ಒಂದು ಸವಾಲಾಗಿದೆ. ದೃಷ್ಟಾಂತಕ್ಕೆ, ಆರ್ಥಿಕವಾಗಿ ಏಳಿಗೆ ಹೊಂದುತ್ತಿರುವ ಕೆಲವು ದೇಶಗಳಲ್ಲಿ ಐಶ್ವರ್ಯವನ್ನು ಸಂಗ್ರಹಿಸುವ ಪರಮೋದ್ದೇಶದಿಂದ ತಪ್ಪು ದಾರಿಗಿಳಿಯುವುದು ತುಂಬ ಸುಲಭವಾದ ವಿಷಯವಾಗಿದೆ. ಆದರೆ, ಪೌಲನು ಎಚ್ಚರಿಸಿದ್ದು: “ಐಶ್ವರ್ಯವಂತರಾಗಬೇಕೆಂದು ಮನಸ್ಸು ಮಾಡುವವರು ದುಷ್ಪ್ರೇರಣೆಯೆಂಬ ಉರ್ಲಿನಲ್ಲಿ ಸಿಕ್ಕಿಕೊಂಡು ಬುದ್ಧಿವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಶೆಗಳಲ್ಲಿ ಬೀಳುತ್ತಾರೆ. ಇಂಥ ಆಶೆಗಳು ಮನುಷ್ಯರನ್ನು ಸಂಹಾರನಾಶನಗಳಲ್ಲಿ ಮುಳುಗಿಸುತ್ತವೆ.” (1 ತಿಮೊಥೆಯ 6:9) ವ್ಯಾಪಾರೋದ್ಯಮಗಳಲ್ಲಿ ತಲ್ಲೀನನಾಗುವ ಒಬ್ಬ ವ್ಯಕ್ತಿಯು, ಕ್ರೈಸ್ತ ಸಹವಾಸ, ಪವಿತ್ರ ಸೇವೆ, ನೈತಿಕ ತತ್ವಗಳು ಮತ್ತು ಕುಟುಂಬ ಜವಾಬ್ದಾರಿಗಳಂತಹ ಪ್ರಮುಖವಾದ ವಿಷಯಗಳನ್ನೇ ತೊರೆದುಬಿಡುವುದು ಎಷ್ಟು ದುರಂತಮಯ!

17 ತಮ್ಮ ಸಮವಯಸ್ಕರಲ್ಲಿ ಅನೇಕರು ಅಮಲೌಷಧದ ದುರುಪಯೋಗ ಮತ್ತು ಅನೈತಿಕತೆಯಲ್ಲಿ ಒಳಗೂಡಿರುವಾಗ ನೀತಿಯ ಮಟ್ಟಗಳನ್ನು ಕಾಪಾಡಿಕೊಳ್ಳುವುದು ಯುವ ಜನರಿಗೆ ಕಷ್ಟಕರವಾಗಿರಸಾಧ್ಯವಿದೆ. ಸುರಿನಾಮ್‌ ಎಂಬ ಪ್ರದೇಶದಲ್ಲಿ ಒಬ್ಬ ಸುಂದರ ಹುಡುಗನು 14 ವರ್ಷ ಪ್ರಾಯದ ಹುಡುಗಿಯೊಬ್ಬಳನ್ನು ಸಮೀಪಿಸಿ ತನ್ನೊಂದಿಗೆ ಲೈಂಗಿಕ ಸಂಬಂಧವನ್ನು ಇಟ್ಟುಕೊಳ್ಳುವಂತೆ ಕೇಳಿಕೊಂಡನು. ವಿವಾಹದ ಹೊರಗೆ ಇಂತಹ ವಿಷಯಗಳಲ್ಲಿ ಒಳಗೂಡುವುದನ್ನು ಬೈಬಲು ನಿಷೇಧಿಸುತ್ತದೆಂದು ವಿವರಿಸುತ್ತಾ ಅವಳು ನಿರಾಕರಿಸಿದಳು. ಬೇರೆ ಹುಡುಗಿಯರು ಅವಳಿಗೆ ಗೇಲಿಮಾಡಿದರು. ವಿಶೇಷವಾಗಿ ಆ ಹುಡುಗನೊಂದಿಗೆ ಲೈಂಗಿಕ ಸಂಬಂಧಗಳನ್ನು ಇಟ್ಟುಕೊಳ್ಳಲು ಎಲ್ಲರೂ ಬಯಸುತ್ತಾರೆಂದು ಹೇಳುವ ಮೂಲಕ ಅವಳ ಮನಸ್ಸನ್ನು ಕೆಡಿಸಲು ಅವರು ಬಹಳವಾಗಿ ಪ್ರಯತ್ನಿಸಿದರು. ಆ ಸಂದರ್ಭದಲ್ಲೂ ಈ ಯುವತಿಯು ತನ್ನ ನಿರ್ಧಾರದಲ್ಲಿ ಸ್ಥಿರವಾಗಿದ್ದಳು. ಕೆಲವು ವಾರಗಳ ನಂತರ ಆ ಹುಡುಗನು ಬಹಳ ಅಸ್ವಸ್ಥನಾದನು ಮತ್ತು ಅವನಲ್ಲಿ ಏಚ್‌ಐವಿ ರೋಗಾಣುವಿರುವುದಾಗಿ ಕಂಡುಹಿಡಿಯಲಾಯಿತು. ‘ಹಾದರವನ್ನು ವಿಸರ್ಜಿಸು’ ಎಂಬ ಯೆಹೋವನ ಆಜ್ಞೆಗೆ ವಿಧೇಯಳಾದುದಕ್ಕೆ ಈ ಹುಡುಗಿಯು ಸಂತೋಷಪಟ್ಟಳು. (ಅ. ಕೃತ್ಯಗಳು 15:28, 29) ಯೋಗ್ಯವಾದ ವಿಷಯಗಳಿಗೆ ದೃಢವಾಗಿ ನಿಲ್ಲುವ ತಮ್ಮ ಯುವ ಜನರ ವಿಷಯದಲ್ಲಿ ಯೆಹೋವನ ಸಾಕ್ಷಿಗಳು ತುಂಬ ಹೆಮ್ಮೆಪಡುತ್ತಾರೆ. ಅವರ ಮತ್ತು ಅವರ ಹೆತ್ತವರ ನಂಬಿಕೆಯು ಯೆಹೋವ ದೇವರ ನಾಮವನ್ನು ‘ಸುಂದರಗೊಳಿಸಿದೆ’ ಅಂದರೆ ಘನಪಡಿಸಿದೆ.—ಯೆಶಾಯ 60:21ಬಿ, NW.

ಯೆಹೋವನೇ ಅಭಿವೃದ್ಧಿಯನ್ನು ನೀಡಿದ್ದಾನೆ

18. (ಎ) ಯೆಹೋವನು ತನ್ನ ಜನರಿಗಾಗಿ ಯಾವ ಮಹತ್ತರವಾದ ವಿಷಯಗಳನ್ನು ಮಾಡಿದ್ದಾನೆ? (ಬಿ) ಈ ಅಭಿವೃದ್ಧಿಯು ಮುಂದುವರಿಯುತ್ತಾ ಹೋಗುವುದು ಎಂಬುದಕ್ಕೆ ಯಾವ ಪುರಾವೆಗಳಿವೆ, ಮತ್ತು ಬೆಳಕಿನಲ್ಲಿ ಇರುವವರಿಗೆ ಯಾವ ಮಹಿಮಾಭರಿತ ಪ್ರತೀಕ್ಷೆಗಳು ಕಾದಿವೆ?

18 ಹೌದು, ಯೆಹೋವನು ತನ್ನ ಜನರ ಮೇಲೆ ಬೆಳಕನ್ನು ಪ್ರಕಾಶಿಸುತ್ತಾ ಅವರನ್ನು ಆಶೀರ್ವದಿಸುತ್ತಾನೆ, ಮಾರ್ಗದರ್ಶಿಸುತ್ತಾನೆ ಮತ್ತು ಬಲಪಡಿಸುತ್ತಾನೆ. ಇವರು 20ನೇ ಶತಮಾನದಲ್ಲಿ ಯೆಶಾಯನ ಮಾತುಗಳ ನೆರವೇರಿಕೆಯನ್ನು ಕಂಡವರಾಗಿದ್ದಾರೆ: “ಚಿಕ್ಕವನಿಂದ ಒಂದು ಕುಲವಾಗುವದು, ಅಲ್ಪನಿಂದ ಬಲವಾದ ಜನಾಂಗವಾಗುವದು; ಯೆಹೋವನೆಂಬ ನಾನು ಕ್ಲುಪ್ತಕಾಲದಲ್ಲಿ ಇದನ್ನು ಬಲುಬೇಗನೆ ಉಂಟುಮಾಡುವೆನು.” (ಯೆಶಾಯ 60:22) 1919ರಲ್ಲಿ ಒಂದಿಷ್ಟು ಜನರಿಂದ ಕೂಡಿದ್ದ ಈ ‘ಚಿಕ್ಕವನು’ ಇಂದು ಒಂದು “ಬಲವಾದ ಜನಾಂಗ”ವಾಗಿದ್ದಾನೆ. ಮತ್ತು ಇಂತಹ ಬೆಳವಣಿಗೆಯ ಅಂತ್ಯವು ಇನ್ನೂ ಬಂದಿಲ್ಲ! ಕಳೆದ ವರ್ಷ 1,40,88,751 ಜನರು ಯೇಸುವಿನ ಮರಣದ ಜ್ಞಾಪಕಾಚರಣೆಗೆ ಹಾಜರಾದರು. ಇವರಲ್ಲಿ ಅನೇಕರು ಸಕ್ರಿಯ ಸಾಕ್ಷಿಗಳಾಗಿರಲಿಲ್ಲ. ಆ ಮಹತ್ತರವಾದ ಆಚರಣೆಗೆ ಅವರು ಹಾಜರಾದುದಕ್ಕೆ ನಾವು ಹರ್ಷಿಸುತ್ತೇವೆ ಮತ್ತು ಬೆಳಕಿನ ಕಡೆಗೆ ಮುಂದುವರಿಯುತ್ತಾ ಇರುವಂತೆ ನಾವು ಅವರನ್ನು ಆಮಂತ್ರಿಸುತ್ತೇವೆ. ಯೆಹೋವನು ಈಗಲೂ ತನ್ನ ಜನರ ಮೇಲೆ ಬೆಳಕನ್ನು ಉಜ್ವಲವಾಗಿ ಪ್ರಕಾಶಿಸುತ್ತಿದ್ದಾನೆ. ಆತನ ಸಂಸ್ಥೆಯ ಬಾಗಿಲುಗಳು ಈಗಲೂ ತೆರೆದುಕೊಂಡೇ ಇವೆ. ಹಾಗಾದರೆ ನಾವೆಲ್ಲರೂ ಯೆಹೋವನ ಬೆಳಕಿನಲ್ಲಿ ಉಳಿಯಲು ನಿಶ್ಚಯಿಸಿಕೊಳ್ಳೋಣ. ಅದು ನಮಗೆ ಈಗಲೂ ಎಂತಹ ಆಶೀರ್ವಾದಗಳನ್ನು ತರುತ್ತದೆ! ಮತ್ತು ಭವಿಷ್ಯತ್ತಿನಲ್ಲಿ ಸಕಲ ಸೃಷ್ಟಿಯು ಯೆಹೋವನನ್ನು ಸ್ತುತಿಸಿ ಆತನ ಮಹಿಮೆಯ ವೈಭವದಲ್ಲಿ ಹರ್ಷಿಸುವಾಗ ಅದು ಎಂತಹ ಆನಂದವನ್ನು ತರಲಿರುವುದು!—ಪ್ರಕಟನೆ 5:13, 14.

ನೀವು ವಿವರಿಸಬಲ್ಲಿರೊ?

ಈ ಕಡೇ ದಿವಸಗಳಲ್ಲಿ ಯೆಹೋವನ ಮಹಿಮೆಯನ್ನು ಯಾರು ಪ್ರತಿಬಿಂಬಿಸಿದ್ದಾರೆ?

ಯೆಹೋವನ ಜನರ ಹುರುಪು ಕುಂದಿಹೋಗಿಲ್ಲ ಎಂಬುದನ್ನು ಯಾವುದು ಸೂಚಿಸುತ್ತದೆ?

ಯೆಹೋವನ ಸಾಕ್ಷಿಗಳು ಕಾರ್ಯಮಗ್ನರಾಗಿರುವ ಸತ್ಕಾರ್ಯಗಳಲ್ಲಿ ಕೆಲವು ಯಾವುವು?

ಉಗ್ರವಾದ ವಿರೋಧದ ಎದುರಿನಲ್ಲೂ ನಾವು ಯಾವ ವಿಷಯದ ಕುರಿತು ಭರವಸೆಯುಳ್ಳವರಾಗಿದ್ದೇವೆ?

[ಅಧ್ಯಯನ ಪ್ರಶ್ನೆಗಳು]

[ಪುಟ 17-20ರಲ್ಲಿರುವ ಚಾರ್ಟು]

ಲೋಕವ್ಯಾಪಕವಾಗಿರುವ ಯೆಹೋವನ ಸಾಕ್ಷಿಗಳ1999ನೆಯ ಸೇವಾ ವರ್ಷದ ವರದಿ

[ಪುಟ 15ರಲ್ಲಿರುವ ಚಿತ್ರಗಳು]

ಜನರು ಯೆಹೋವನ ಸಂಸ್ಥೆಗೆ ಈಗಲೂ ಬರುತ್ತಿದ್ದಾರೆ

[ಪುಟ 16ರಲ್ಲಿರುವ ಚಿತ್ರ]

ಬೆಳಕನ್ನು ಪ್ರೀತಿಸುವವರಿಗಾಗಿ ಯೆಹೋವನು ಈಗಲೂ ಬಾಗಿಲನ್ನು ಅಗಲವಾಗಿ ತೆರೆದಿಟ್ಟಿರುವುದಕ್ಕೆ ನಾವು ಹರ್ಷಿಸುತ್ತೇವೆ