ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಂಬಿಕೆಯು ನಿಮ್ಮ ಜೀವಿತವನ್ನು ಬದಲಾಯಿಸಬಲ್ಲದು

ನಂಬಿಕೆಯು ನಿಮ್ಮ ಜೀವಿತವನ್ನು ಬದಲಾಯಿಸಬಲ್ಲದು

ನಂಬಿಕೆಯು ನಿಮ್ಮ ಜೀವಿತವನ್ನು ಬದಲಾಯಿಸಬಲ್ಲದು

“ದೇವರಲ್ಲಿ ನಂಬಿಕೆಯಿಡದೇ ನಾವು ಒಳ್ಳೆಯ ನೈತಿಕ ಮೌಲ್ಯಗಳನ್ನು ಪಡೆಯಸಾಧ್ಯವಿದೆ ಎಂಬುದಂತೂ ಖಂಡಿತ.” ಇದು ಒಬ್ಬ ಆಜ್ಞೇಯತಾವಾದಿಯ ಪ್ರತಿಪಾದನೆಯಾಗಿತ್ತು. ನನ್ನ ಮಕ್ಕಳನ್ನು ನಾನು ಉಚ್ಚ ನೈತಿಕ ಮಟ್ಟಗಳೊಂದಿಗೆ ಬೆಳೆಸಿದ್ದೆ, ಮತ್ತು ಅವರು ಸಹ ತಮ್ಮ ಮಕ್ಕಳನ್ನು ತದ್ರೀತಿಯ ಉಚ್ಚ ಮಟ್ಟಗಳೊಂದಿಗೇ ಬೆಳೆಸಿದರು. ಆದರೆ ದೇವರಲ್ಲಿ ನಂಬಿಕೆಯನ್ನು ಇಡದೇ ಇದನ್ನೆಲ್ಲ ಮಾಡಿದೆವು ಎಂದು ಅವಳು ಹೇಳಿದಳು.

ದೇವರಲ್ಲಿ ನಂಬಿಕೆಯಿಡುವ ಆವಶ್ಯಕತೆಯಿಲ್ಲ ಎಂಬುದು ಇದರ ಅರ್ಥವೊ? ಈ ವ್ಯಕ್ತಿಯ ಅಭಿಪ್ರಾಯ ಅದೇ ಆಗಿತ್ತೆಂಬುದು ಅವಳ ಮಾತಿನಿಂದ ಸ್ಪಷ್ಟವಾಗುತ್ತದೆ. ಹಾಗೂ ದೇವರಲ್ಲಿ ನಂಬಿಕೆಯಿಡದವರೆಲ್ಲರೂ ಕೆಟ್ಟ ವ್ಯಕ್ತಿಗಳಲ್ಲ ಎಂಬುದಂತೂ ಸತ್ಯ. ದೇವರನ್ನು ಅರಿಯದವರಾಗಿದ್ದರೂ “ಧರ್ಮಪ್ರಮಾಣವಾಗಿ” ನಡೆಯುವಂತಹ ‘ಅನ್ಯಜನರ’ ಕುರಿತಾಗಿ ಅಪೊಸ್ತಲ ಪೌಲನು ಮಾತಾಡಿದನು. (ರೋಮಾಪುರ 2:14) ಆಜ್ಞೇಯತಾವಾದಿಗಳನ್ನೂ ಸೇರಿಸಿ ಎಲ್ಲರಿಗೂ ಜನ್ಮತಃ ಒಂದು ಮನಸ್ಸಾಕ್ಷಿಯಿದೆ. ಒಳ್ಳೇದರ ಹಾಗೂ ಕೆಟ್ಟದ್ದರ ನಡುವಿನ ಭೇದವನ್ನು ಗ್ರಹಿಸುವ ಸ್ವಭಾವಸಿದ್ಧ ಪ್ರಜ್ಞೆಯನ್ನು ತಮಗೆ ಕೊಟ್ಟಿರುವ ದೇವರಲ್ಲಿ ಅನೇಕರು ನಂಬಿಕೆಯಿಡದಿದ್ದರೂ, ತಮ್ಮ ಮನಸ್ಸಾಕ್ಷಿಯ ಆಜ್ಞೆಗಳನ್ನು ಪಾಲಿಸಲು ಅವರು ಪ್ರಯತ್ನಿಸುತ್ತಾರೆ.

ಆದರೂ, ದೇವರಲ್ಲಿನ ಸದೃಢವಾದ ನಂಬಿಕೆ, ಅಂದರೆ ಬೈಬಲಿನ ಮೇಲಾಧಾರಿತವಾದ ನಂಬಿಕೆಯು, ಬೇರೆ ಯಾವುದರ ಸಹಾಯವಿಲ್ಲದೆ ಮನಸ್ಸಾಕ್ಷಿಯು ಕೊಡುವಂತಹ ಮಾರ್ಗದರ್ಶನಕ್ಕಿಂತಲೂ ಅತ್ಯಂತ ಪ್ರಬಲವಾದ ಮಾರ್ಗದರ್ಶನವನ್ನು ಒದಗಿಸುತ್ತದೆ. ದೇವರ ವಾಕ್ಯವಾದ ಬೈಬಲಿನ ಮೇಲಾಧಾರಿತವಾದ ನಂಬಿಕೆಯು, ಮನಸ್ಸಾಕ್ಷಿಗೆ ಸೂಚನೆ ನೀಡುತ್ತದೆ ಮತ್ತು ಒಳ್ಳೇದರ ಕೆಟ್ಟದ್ದರ ಭೇದವನ್ನು ವಿವೇಚಿಸಿ ತಿಳಿದುಕೊಳ್ಳುವುದರಲ್ಲಿ ಅದು ಚುರುಕಾಗಿರುವಂತೆ ಮಾಡುತ್ತದೆ. (ಇಬ್ರಿಯ 5:14) ಇದಲ್ಲದೆ, ಸಹಿಸಲಸಾಧ್ಯವಾದ ಒತ್ತಡದ ಎದುರಿನಲ್ಲೂ ಉಚ್ಚ ಮಟ್ಟಗಳನ್ನು ಕಾಪಾಡಿಕೊಳ್ಳುವಂತೆ ನಂಬಿಕೆಯು ಜನರನ್ನು ಬಲಪಡಿಸುತ್ತದೆ. ಉದಾಹರಣೆಗೆ, 20ನೆಯ ಶತಮಾನದಲ್ಲಿ ಅನೇಕ ದೇಶಗಳು ಭ್ರಷ್ಟ ರಾಜಕೀಯ ಆಳ್ವಿಕೆಯ ಹಿಡಿತದ ಕೆಳಗೆ ಬಂದವು. ಸಭ್ಯರೆಂದು ತೋರಿಬಂದ ಜನರು ಭೀಕರವಾದ ದುರಾಚಾರಗಳನ್ನು ನಡಿಸುವಂತೆ ಈ ರಾಜಕೀಯ ಆಳ್ವಿಕೆಗಳು ಒತ್ತಾಯಿಸಿದವು. ಆದರೂ, ಯಾರು ದೇವರಲ್ಲಿ ನಿಜವಾದ ನಂಬಿಕೆಯನ್ನಿಟ್ಟಿದ್ದರೋ ಅವರು ತಮ್ಮ ಮೂಲತತ್ವಗಳನ್ನು ರಾಜಿಮಾಡಿಕೊಳ್ಳಲು ನಿರಾಕರಿಸಿದರು, ಮತ್ತು ತಮ್ಮ ಜೀವಗಳನ್ನೇ ಅಪಾಯಕ್ಕೊಡ್ಡಿದರು. ಅಷ್ಟುಮಾತ್ರವಲ್ಲ, ಬೈಬಲ್‌ ಆಧಾರಿತವಾದ ನಂಬಿಕೆಯು ಜನರನ್ನು ಬದಲಾಯಿಸಬಲ್ಲದು. ತಮಗೆ ಯಾವುದೇ ನಿರೀಕ್ಷೆಯಿಲ್ಲ ಎಂದು ಭಾವಿಸುವ ಜನರಿಗೆ ಅದು ವಿಮೋಚನೆಯನ್ನು ನೀಡಬಲ್ಲದು ಮತ್ತು ಗಂಭೀರವಾದ ತಪ್ಪುಗಳನ್ನು ಮಾಡದಂತೆ ಜನರಿಗೆ ಸಹಾಯ ಮಾಡಬಲ್ಲದು. ಕೆಲವೊಂದು ಉದಾಹರಣೆಗಳನ್ನು ಪರಿಗಣಿಸಿರಿ.

ನಂಬಿಕೆಯು ಕುಟುಂಬ ಜೀವನವನ್ನು ಬದಲಾಯಿಸಬಲ್ಲದು

“ನಿಮ್ಮ ನಂಬಿಕೆಯ ಮೂಲಕ ನೀವು ಅಸಾಧ್ಯವಾದುದನ್ನು ಸಾಧಿಸಿದ್ದೀರಿ.” ಜಾನ್‌ ಮತ್ತು ಟಾನ್ಯರ ಮಕ್ಕಳನ್ನು ಯಾರ ಸಂರಕ್ಷಣೆಗೆ ಒಪ್ಪಿಸಬೇಕು ಎಂಬ ತೀರ್ಮಾನವನ್ನು ಇಂಗ್ಲಿಷ್‌ ನ್ಯಾಯಾಧೀಶನೊಬ್ಬನು ಕೊಟ್ಟಾಗ, ಈ ಮಾತುಗಳನ್ನು ಹೇಳಿದನು. ಜಾನ್‌ ಮತ್ತು ಟಾನ್ಯರು ಅಧಿಕಾರಿಗಳ ಗಮನವನ್ನು ಸೆಳೆದಾಗ ಅವರಿಗಿನ್ನೂ ವಿವಾಹವಾಗಿರಲಿಲ್ಲ ಮತ್ತು ಅವರ ಮನೆಯ ವಾತಾವರಣವು ತುಂಬ ಬಿಗಡಾಯಿಸಿತ್ತು. ಜಾನ್‌ಗೆ ಅಮಲೌಷಧವನ್ನು ಸೇವಿಸುವ ಮತ್ತು ಜೂಜಾಡುವ ಚಟವಿತ್ತು. ತನ್ನ ದುರ್ಗುಣಗಳಿಗಾಗಿ ಹಣವನ್ನು ಒಟ್ಟುಗೂಡಿಸಲು ಅವನು ದುಷ್ಕೃತ್ಯವನ್ನು ಮಾಡಲಾರಂಭಿಸಿದ್ದನು. ಅವನು ತನ್ನ ಹೆಂಡತಿ ಮಕ್ಕಳನ್ನು ನಿರ್ಲಕ್ಷಿಸಿದನು. ಹಾಗಾದರೆ, ಯಾವ “ಅದ್ಭುತ”ವು ನಡೆದಿತ್ತು?

ಒಂದು ದಿನ, ತನ್ನ ಅಣ್ಣನ ಮಗನು ಪ್ರಮೋದವನದ ಕುರಿತು ಮಾತಾಡುತ್ತಿರುವುದನ್ನು ಜಾನ್‌ ಕೇಳಿಸಿಕೊಂಡನು. ಕುತೂಹಲಗೊಂಡವನಾಗಿ ಅವನು ಆ ಹುಡುಗನ ಹೆತ್ತವರನ್ನು ಪ್ರಶ್ನಿಸಿದನು. ಅವರು ಯೆಹೋವನ ಸಾಕ್ಷಿಗಳಾಗಿದ್ದರು, ಮತ್ತು ಬೈಬಲಿನಿಂದ ಅದರ ಕುರಿತು ಕಲಿತುಕೊಳ್ಳುವಂತೆ ಅವರು ಜಾನ್‌ಗೆ ಸಹಾಯ ಮಾಡಿದರು. ಕ್ರಮೇಣವಾಗಿ ಜಾನ್‌ ಮತ್ತು ಟಾನ್ಯರು ಬೈಬಲ್‌ ಆಧಾರಿತ ನಂಬಿಕೆಯನ್ನು ಬೆಳೆಸಿಕೊಂಡರು ಮತ್ತು ಇದು ಅವರ ಜೀವಿತಗಳನ್ನು ಬದಲಾಯಿಸಿತು. ಅವರು ತಮ್ಮ ವಿವಾಹವನ್ನು ಕಾನೂನುಬದ್ಧಗೊಳಿಸಿದರು ಮತ್ತು ತಮ್ಮ ದುರ್ಗುಣಗಳನ್ನು ಬಿಟ್ಟುಬಿಟ್ಟರು. ಅವರ ಮನೆವಾರ್ತೆಯ ತನಿಖೆಮಾಡಿದ ಅಧಿಕಾರಿಗಳು, ಸ್ವಲ್ಪ ಕಾಲದ ಹಿಂದೆ ಅಸಾಧ್ಯವಾಗಿ ತೋರಿದ ಯಾವುದೋ ಬದಲಾವಣೆಯನ್ನು ಈಗ ಕಂಡುಕೊಂಡರು. ಈಗ ಒಂದು ಸ್ವಚ್ಛವಾದ ಮನೆಯಲ್ಲಿ ಒಂದು ಸುಖೀ ಕುಟುಂಬವಿತ್ತು, ಮತ್ತು ಮಕ್ಕಳನ್ನು ಬೆಳೆಸಲು ಯೋಗ್ಯವಾದ ಒಂದು ವಾತಾವರಣವು ಅಲ್ಲಿತ್ತು. ಈ “ಅದ್ಭುತ”ದ ಕೀರ್ತಿಯು ಜಾನ್‌ ಮತ್ತು ಟಾನ್ಯರು ಹೊಸದಾಗಿ ಕಂಡುಕೊಂಡ ನಂಬಿಕೆಗೆ ಸಲ್ಲತಕ್ಕದ್ದಾಗಿದೆ ಎಂದು ನ್ಯಾಯಾಧೀಶನು ಹೇಳಿದ್ದು ಯುಕ್ತವಾಗಿತ್ತು.

ಇಂಗ್ಲೆಂಡ್‌ನಿಂದ ಸಾವಿರಾರು ಕಿಲೊಮೀಟರ್‌ಗಳಷ್ಟು ದೂರದಲ್ಲಿ, ಸಮೀಪ ಪೂರ್ವ ದೇಶದಲ್ಲಿ ವಾಸಿಸುತ್ತಿದ್ದ ಒಬ್ಬ ಯುವ ಪತ್ನಿಯು ತುಂಬ ದುಃಖಕರವಾದ ಸಂಖ್ಯಾಸಂಗ್ರಹಣದಲ್ಲಿ ಒಬ್ಬಳಾಗಲಿದ್ದಳು. ಪ್ರತಿ ವರ್ಷ ಯಾರ ವಿವಾಹಗಳು ವಿಚ್ಛೇದದಲ್ಲಿ ಕೊನೆಗೊಳ್ಳುತ್ತಿವೆಯೋ ಅಂತಹ ಲಕ್ಷಾಂತರ ಮಂದಿಯಲ್ಲಿ ಒಬ್ಬಳಾಗಲು ಅವಳು ಯೋಜಿಸುತ್ತಿದ್ದಳು. ಅವಳಿಗೆ ಒಂದು ಮಗುವಿತ್ತು, ಆದರೆ ಅವಳ ಪತಿ ಅವಳಿಗಿಂತ ತುಂಬ ವಯಸ್ಸಾದವನಾಗಿದ್ದನು. ಈ ಕಾರಣದಿಂದ ವಿಚ್ಛೇದ ನೀಡುವಂತೆ ಅವಳ ಸಂಬಂಧಿಕರು ಅವಳನ್ನು ಒತ್ತಾಯಿಸುತ್ತಿದ್ದರು, ಮತ್ತು ಹೀಗೆ ಮಾಡಲಿಕ್ಕಾಗಿ ಅವಳು ಏರ್ಪಾಡುಗಳನ್ನು ಸಹ ಮಾಡಲಾರಂಭಿಸಿದ್ದಳು. ಆದರೂ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬರೊಂದಿಗೆ ಅವಳು ಬೈಬಲ್‌ ಅಭ್ಯಾಸ ಮಾಡುತ್ತಿದ್ದಳು. ಈ ಸನ್ನಿವೇಶದ ಕುರಿತು ಈ ಸಾಕ್ಷಿಗೆ ಗೊತ್ತಾದಾಗ, ವಿವಾಹದ ಕುರಿತು ಬೈಬಲು ಏನು ಹೇಳುತ್ತದೆ ಎಂಬುದನ್ನು ಅವಳು ವಿವರಿಸಿದಳು. ಉದಾಹರಣೆಗೆ, ವಿವಾಹವು ದೇವರ ವರದಾನವಾಗಿದೆ, ಆದುದರಿಂದ ಚಿಕ್ಕಪುಟ್ಟ ಕಾರಣಗಳಿಗಾಗಿ ಅದನ್ನು ಮುರಿಯಲು ಪ್ರಯತ್ನಿಸಬಾರದು ಎಂದು ಹೇಳಿದಳು. (ಮತ್ತಾಯ 19:4-6, 9) ‘ನನಗೆ ಆಪ್ತರಾಗಿರುವ ಜನರು ನನ್ನ ಕುಟುಂಬವನ್ನು ವಿಭಾಗಿಸಲು ಪ್ರಯತ್ನಿಸುತ್ತಿರುವಾಗ, ನನಗೆ ಅಪರಿಚಿತಳಾಗಿರುವ ಈ ಸ್ತ್ರೀ ನಮ್ಮ ಕುಟುಂಬವನ್ನು ಕಾಪಾಡಲು ಪ್ರಯತ್ನಿಸುತ್ತಿರುವುದು ಅಸಾಮಾನ್ಯ ಸಂಗತಿಯಾಗಿದೆ’ ಎಂದು ಆ ಸ್ತ್ರೀಯು ತನ್ನಲ್ಲೇ ಆಲೋಚಿಸಿದಳು. ಹೊಸದಾಗಿ ಕಂಡುಕೊಂಡಿದ್ದ ಅವಳ ನಂಬಿಕೆಯು, ವಿವಾಹವನ್ನು ಕಾಪಾಡಿಕೊಳ್ಳಲು ಅವಳಿಗೆ ಸಹಾಯ ಮಾಡಿತು.

ವಿಷಾದಕರವಾದ ಇನ್ನೊಂದು ಸಂಖ್ಯಾಸಂಗ್ರಹಣವು ಗರ್ಭಪಾತಕ್ಕೆ ಸಂಬಂಧಿಸಿದ್ದಾಗಿದೆ. ವಿಶ್ವಸಂಸ್ಥೆಯ ಒಂದು ವರದಿಯು ಅಂದಾಜುಮಾಡಿದ್ದೇನೆಂದರೆ, ಪ್ರತಿ ವರ್ಷ ಕಡಿಮೆಪಕ್ಷ 4.5 ಕೋಟಿ ಅಜಾತ ಶಿಶುಗಳು ಉದ್ದೇಶಪೂರ್ವಕವಾಗಿ ಗರ್ಭಪಾತಕ್ಕೆ ತುತ್ತಾಗುತ್ತಿವೆ. ಇಂತಹ ಪ್ರತಿಯೊಂದು ಘಟನೆಯು ಒಂದು ದುರಂತವಾಗಿದೆ. ಫಿಲಿಪ್ಪೀನ್ಸ್‌ನಲ್ಲಿರುವ ಒಬ್ಬ ಸ್ತ್ರೀಯು ಆ ಸಂಖ್ಯಾಸಂಗ್ರಹಣದ ಭಾಗವಾಗದಂತೆ ಬೈಬಲ್‌ ಜ್ಞಾನವು ಅವಳಿಗೆ ಸಹಾಯ ಮಾಡಿತು.

ಈ ಸ್ತ್ರೀಯು ಯೆಹೋವನ ಸಾಕ್ಷಿಗಳನ್ನು ಭೇಟಿಯಾಗಿ, ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? * ಎಂಬ ಶೀರ್ಷಿಕೆಯಿರುವ ಬೈಬಲ್‌ ಅಭ್ಯಾಸದ ಬ್ರೋಷರನ್ನು ಸ್ವೀಕರಿಸಿದಳು ಮತ್ತು ಬೈಬಲನ್ನು ಅಭ್ಯಾಸಿಸಲು ಆರಂಭಿಸಿದಳು. ಕೆಲವು ತಿಂಗಳುಗಳ ಬಳಿಕ, ತಾನು ಬೈಬಲ್‌ ಅಭ್ಯಾಸವನ್ನು ಏಕೆ ಆರಂಭಿಸಿದೆ ಎಂಬುದನ್ನು ಅವಳು ವಿವರಿಸಿದಳು. ಸಾಕ್ಷಿಗಳು ಮೊದಲ ಬಾರಿ ಅವಳನ್ನು ಭೇಟಿಯಾದಾಗ ಈ ಸ್ತ್ರೀ ಗರ್ಭವತಿಯಾಗಿದ್ದಳು, ಆದರೆ ಅವಳ ಪತಿ ಹಾಗೂ ಅವಳು ಗರ್ಭಪಾತಮಾಡುವ ನಿರ್ಧಾರವನ್ನು ಮಾಡಿದ್ದರು. ಆದರೂ, ಆ ಬ್ರೋಷರ್‌ನ 24ನೆಯ ಪುಟದಲ್ಲಿದ್ದ ಅಜಾತ ಶಿಶುವಿನ ಚಿತ್ರವು ಈ ಸ್ತ್ರೀಯ ಮನಸ್ಸಿನ ಮೇಲೆ ಪ್ರಭಾವ ಬೀರಿತು. ‘ದೇವರ ಬಳಿಯಲ್ಲಿ ಜೀವದ ಬುಗ್ಗೆ’ ಇರುವುದರಿಂದ ಜೀವವು ಪವಿತ್ರವಾಗಿದೆ ಎಂಬ ಈ ಚಿತ್ರದ ಜೊತೆಗಿದ್ದ ಬೈಬಲ್‌ ಆಧಾರಿತ ವಿವರವು, ತನ್ನ ಮಗುವನ್ನು ಉಳಿಸಿಕೊಳ್ಳುವಂತೆ ಈ ಸ್ತ್ರೀಯನ್ನು ಒತ್ತಾಯಿಸಿತು. (ಕೀರ್ತನೆ 36:9) ಈಗ ಅವಳು ಸುಂದರವೂ ಆರೋಗ್ಯಭರಿತವೂ ಆಗಿರುವ ಒಂದು ಶಿಶುವಿನ ತಾಯಿಯಾಗಿದ್ದಾಳೆ.

ನಿರ್ಲಕ್ಷಿಸಲ್ಪಟ್ಟಿರುವವರಿಗೆ ನಂಬಿಕೆಯು ಸಹಾಯ ಮಾಡುತ್ತದೆ

ಇಥಿಯೋಪಿಯದಲ್ಲಿ, ಹರುಕಲಾದ ಬಟ್ಟೆಯನ್ನು ಧರಿಸಿದ ಇಬ್ಬರು ಪುರುಷರು ಯೆಹೋವನ ಸಾಕ್ಷಿಗಳಿಂದ ನಡೆಸಲ್ಪಡುತ್ತಿದ್ದ ಆರಾಧನಾ ಕೂಟಕ್ಕೆ ಬಂದರು. ಕೂಟವು ಮುಗಿದಾಗ ಒಬ್ಬ ಸಾಕ್ಷಿಯು ಅವರ ಬಳಿಗೆ ಹೋಗಿ ಸ್ನೇಹಪರವಾದ ರೀತಿಯಲ್ಲಿ ತನ್ನನ್ನು ಪರಿಚಯಿಸಿಕೊಂಡನು. ಆಗ ಇವರು ಆ ಸಾಕ್ಷಿಯ ಬಳಿ ಹಣವನ್ನು ಕೇಳಿದರು. ಈ ಸಾಕ್ಷಿಯು ಹಣವನ್ನಲ್ಲ, ಇನ್ನೂ ಉತ್ತಮವಾದದ್ದೇನನ್ನೋ ಅವರಿಗೆ ಕೊಟ್ಟನು. ಅಂದರೆ, “ಭಂಗಾರಕ್ಕಿಂತ ಅಮೂಲ್ಯ”ವಾಗಿರುವ ದೇವರಲ್ಲಿ ನಂಬಿಕೆಯನ್ನು ಬೆಳೆಸಿಕೊಳ್ಳುವಂತೆ ಅವನು ಅವರನ್ನು ಉತ್ತೇಜಿಸಿದನು. (1 ಪೇತ್ರ 1:7) ಅವರಲ್ಲಿ ಒಬ್ಬನು ಇದಕ್ಕೆ ಪ್ರತಿಕ್ರಿಯಿಸಿ, ಬೈಬಲನ್ನು ಅಭ್ಯಾಸಿಸಲು ಆರಂಭಿಸಿದನು. ಇದು ಅವನ ಜೀವಿತವನ್ನು ಬದಲಾಯಿಸಿತು. ಅವನು ನಂಬಿಕೆಯಲ್ಲಿ ಪ್ರಗತಿಮಾಡುತ್ತಾ ಹೋದಂತೆ, ಧೂಮಪಾನ, ಕುಡಿಕತನ, ಅನೈತಿಕತೆ, ಮತ್ತು ಕಾಟ್‌ (ಚಟವನ್ನು ಹಿಡಿಸುವಂತಹ ಮಾದಕವಸ್ತು)ನ ಉಪಯೋಗವನ್ನು ನಿಲ್ಲಿಸಿಬಿಟ್ಟನು.

ಇಟಲಿಯಲ್ಲಿ 47 ವರ್ಷ ವಯಸ್ಸಿನ ಒಬ್ಬ ವ್ಯಕ್ತಿಗೆ ಹತ್ತು ವರ್ಷಗಳ ಸೆರೆಮನೆ ಶಿಕ್ಷೆಯು ವಿಧಿಸಲ್ಪಟ್ಟಿತ್ತು ಮತ್ತು ಅವನು ನ್ಯಾಯಾಂಗ ಇಲಾಖೆಯ ಮನೋರೋಗದ ಆಸ್ಪತ್ರೆಯಲ್ಲಿ ಬಂಧನದಲ್ಲಿಡಲ್ಪಟ್ಟಿದ್ದನು. ಆತ್ಮಿಕವಾಗಿ ನೆರವು ನೀಡಲಿಕ್ಕಾಗಿ ಸೆರೆಮನೆಯ ಕಟ್ಟಡಗಳನ್ನು ಪ್ರವೇಶಿಸುವ ಅಧಿಕೃತ ಒಪ್ಪಿಗೆಯನ್ನು ಪಡೆದಿದ್ದ ಯೆಹೋವನ ಸಾಕ್ಷಿಯೊಬ್ಬನು ಅವನೊಂದಿಗೆ ಬೈಬಲ್‌ ಅಭ್ಯಾಸವನ್ನು ಮಾಡಿದನು. ಈ ವ್ಯಕ್ತಿಯು ಬೇಗನೆ ಪ್ರಗತಿಯನ್ನು ಮಾಡಿದನು. ನಂಬಿಕೆಯು ಅವನ ಜೀವಿತವನ್ನು ಎಷ್ಟರ ಮಟ್ಟಿಗೆ ಬದಲಾಯಿಸಿತೆಂದರೆ, ತಮ್ಮ ಸಮಸ್ಯೆಗಳೊಂದಿಗೆ ಹೇಗೆ ವ್ಯವಹರಿಸುವುದು ಎಂಬುದರ ಕುರಿತು ಸಲಹೆಯನ್ನು ಪಡೆದುಕೊಳ್ಳಲಿಕ್ಕಾಗಿ ಈಗ ಇತರ ಸೆರೆವಾಸಿಗಳು ಈ ವ್ಯಕ್ತಿಯ ಬಳಿಗೆ ಹೋಗುತ್ತಾರೆ. ತನ್ನ ಬೈಬಲ್‌ ಆಧಾರಿತ ನಂಬಿಕೆಯಿಂದಾಗಿ ಅವನು ಸೆರೆಮನೆಯ ಅಧಿಕಾರಿಗಳ ಗೌರವ, ಘನತೆ ಮತ್ತು ವಿಶ್ವಾಸವನ್ನು ಗಳಿಸಿದ್ದಾನೆ.

ಇತ್ತೀಚಿನ ವರ್ಷಗಳಲ್ಲಿ ಆಫ್ರಿಕದಲ್ಲಿನ ಆಂತರಿಕ ಯುದ್ಧಗಳ ಕುರಿತು ವಾರ್ತಾಪತ್ರಿಕೆಗಳು ವರದಿಸಿವೆ. ಸೈನಿಕರಾಗಿ ತರಬೇತಿ ಪಡೆದುಕೊಳ್ಳುತ್ತಿರುವಂತಹ ಚಿಕ್ಕ ಪ್ರಾಯದ ಹುಡುಗರ ವೃತ್ತಾಂತಗಳು ತುಂಬ ಭೀತಿದಾಯಕವಾಗಿವೆ. ಈ ಮಕ್ಕಳಿಗೆ ಅಮಲೌಷಧವನ್ನು ಕೊಡಲಾಗುತ್ತದೆ, ಅವರೊಂದಿಗೆ ನಿರ್ದಯವಾಗಿ ವರ್ತಿಸಲಾಗುತ್ತದೆ. ಅಷ್ಟುಮಾತ್ರವಲ್ಲ, ತಾವು ಹೋರಾಡುತ್ತಿರುವ ಪಕ್ಷಕ್ಕೆ ಅವರು ಸಂಪೂರ್ಣವಾಗಿ ನಿಷ್ಠರಾಗಿದ್ದಾರೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ, ತಮ್ಮ ಸಂಬಂಧಿಕರ ವಿರುದ್ಧ ಅಮಾನವೀಯ ನಡವಳಿಕೆಯನ್ನು ತೋರಿಸುವಂತೆ ಅವರನ್ನು ಒತ್ತಾಯಿಸಲಾಗುತ್ತದೆ. ಹಾಗಾದರೆ, ಬೈಬಲ್‌ ಆಧಾರಿತವಾದ ನಂಬಿಕೆಯು ಇಂತಹ ಚಿಕ್ಕ ಪ್ರಾಯದ ಹುಡುಗರ ಜೀವಿತಗಳನ್ನು ಬದಲಾಯಿಸುವಷ್ಟು ಪ್ರಬಲವಾದದ್ದಾಗಿದೆಯೊ? ಹೌದು, ಕಡಿಮೆಪಕ್ಷ ಇಬ್ಬರ ಜೀವಿತಗಳಲ್ಲಿ ಇದು ನಿಜವಾಗಿ ಕಂಡುಬಂತು.

ಲೈಬಿರೀಯದ ಕ್ಯಾತೊಲಿಕ್‌ ಚರ್ಚಿನಲ್ಲಿ ಆ್ಯಲಿಕ್ಸ್‌ನು ಬಲಿಪೀಠದ ಸಹಾಯಕ (ಆ್ಯಲ್ಟರ್‌ ಬಾಯ್‌)ನಾಗಿ ಕೆಲಸಮಾಡುತ್ತಿದ್ದನು. ಆದರೆ 13 ವರ್ಷ ಪ್ರಾಯದವನಾಗಿದ್ದಾಗ ಅವನು ಒಂದು ಸೈನ್ಯಕ್ಕೆ ಸೇರಿದನು ಮತ್ತು ಕುಪ್ರಸಿದ್ಧ ಬಾಲಸೈನಿಕನಾಗಿ ಪರಿಣಮಿಸಿದನು. ಕದನದಲ್ಲಿ ಹೆಚ್ಚು ಧೈರ್ಯಶಾಲಿಯಾಗಿ ಹೋರಾಡಲಿಕ್ಕಾಗಿ ಅವನು ಮಾಟಮಂತ್ರಗಳನ್ನು ಅವಲಂಬಿಸತೊಡಗಿದನು. ತನ್ನ ಜೊತೆಯಲ್ಲಿದ್ದ ಅನೇಕರು ಕೊಲ್ಲಲ್ಪಟ್ಟದ್ದನ್ನು ಆ್ಯಲಿಕ್ಸ್‌ ನೋಡಿದನು, ಆದರೆ ಅವನು ಮಾತ್ರ ಬದುಕಿ ಉಳಿದನು. 1997ರಲ್ಲಿ ಅವನು ಯೆಹೋವನ ಸಾಕ್ಷಿಗಳನ್ನು ಭೇಟಿಯಾದನು ಮತ್ತು ಅವರು ತನ್ನನ್ನು ಕೀಳಾಗಿ ನೋಡಲಿಲ್ಲ ಎಂಬುದು ಅವನ ಅರಿವಿಗೆ ಬಂತು. ಹಿಂಸಾಚಾರದ ಕುರಿತು ಬೈಬಲು ಏನು ಹೇಳುತ್ತದೆ ಎಂಬುದನ್ನು ತಿಳಿದುಕೊಳ್ಳುವಂತೆ ಅವರು ಅವನಿಗೆ ಸಹಾಯ ಮಾಡಿದರು. ತದನಂತರ ಆ್ಯಲಿಕ್ಸ್‌ ಸೇನೆಯನ್ನು ಬಿಟ್ಟುಬಿಟ್ಟನು. ಅವನ ನಂಬಿಕೆಯು ಹೆಚ್ಚಾಗತೊಡಗಿದಂತೆ ಅವನು ಬೈಬಲಿನ ಈ ಆಜ್ಞೆಯನ್ನು ಅನುಸರಿಸಿದನು: “ಅವನು ಕೆಟ್ಟದ್ದನ್ನು ಬಿಟ್ಟು ಒಳ್ಳೇದನ್ನು ಮಾಡಲಿ; ಸಮಾಧಾನವನ್ನು ಹಾರೈಸಿ ಅದಕ್ಕೋಸ್ಕರ ಪ್ರಯತ್ನಪಡಲಿ.”—1 ಪೇತ್ರ 3:11.

ಈ ಮಧ್ಯೆ, ಈ ಮುಂಚೆ ಬಾಲಸೈನಿಕನಾಗಿದ್ದ ಸ್ಯಾಮ್‌ಸನ್‌ ಎಂಬ ಹೆಸರಿನ ಹುಡುಗನೊಬ್ಬನು ಆ್ಯಲಿಕ್ಸ್‌ ವಾಸಿಸುತ್ತಿದ್ದ ಪಟ್ಟಣಕ್ಕೆ ಬಂದನು. ಮೊದಲು ಅವನು ಚರ್ಚಿನ ಗಾಯಕ ವೃಂದದಲ್ಲಿ ಹಾಡುವವನಾಗಿದ್ದನು, ಆದರೆ 1993ರಲ್ಲಿ ಒಬ್ಬ ಸೈನಿಕನಾದನು ಮತ್ತು ಅಮಲೌಷಧದ ದುರುಪಯೋಗದಲ್ಲಿ, ಪ್ರೇತಾತ್ಮವಾದದಲ್ಲಿ, ಮತ್ತು ಅನೈತಿಕತೆಯಲ್ಲಿ ಒಳಗೂಡಿದನು. 1997ರಲ್ಲಿ ಅವನನ್ನು ಸೇನಾದಳದಿಂದ ತೆಗೆದುಹಾಕಲಾಯಿತು. ಆಗ ವಿಶೇಷವಾದ ಭದ್ರತಾ ಸೇನೆಗೆ ಸೇರಿಕೊಳ್ಳಲಿಕ್ಕಾಗಿ ಸ್ಯಾಮ್‌ಸನ್‌ ಮನ್‌ರೋವಿಯಕ್ಕೆ ಹೋಗುತ್ತಿದ್ದಾಗ, ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸುವಂತೆ ಒಬ್ಬ ಸ್ನೇಹಿತನು ಅವನನ್ನು ಒತ್ತಾಯಿಸಿದನು. ಇದರ ಫಲಿತಾಂಶವಾಗಿ ಸ್ಯಾಮ್‌ಸನ್‌ ಬೈಬಲ್‌ ಆಧಾರಿತವಾದ ನಂಬಿಕೆಯನ್ನು ಬೆಳೆಸಿಕೊಂಡನು. ಇದು ಅವನಿಗೆ ತನ್ನ ಯುದ್ಧಪ್ರಿಯ ಮಾರ್ಗಗಳನ್ನು ತೊರೆಯುವಂತಹ ಧೈರ್ಯವನ್ನು ನೀಡಿತು. ಈಗ ಆ್ಯಲಿಕ್ಸ್‌ ಮತ್ತು ಸ್ಯಾಮ್‌ಸನ್‌ ಇಬ್ಬರೂ ಶಾಂತಿಭರಿತವಾದ ನೈತಿಕ ಜೀವನಗಳನ್ನು ನಡೆಸುತ್ತಿದ್ದಾರೆ. ಬೈಬಲ್‌ ಆಧಾರಿತವಾದ ನಂಬಿಕೆಯನ್ನು ಬಿಟ್ಟು ಇನ್ನಾವ ಸಂಗತಿಯು ಅಷ್ಟೊಂದು ಕ್ರೌರ್ಯದಿಂದ ತುಂಬಿದ್ದ ಜೀವಿತಗಳಲ್ಲಿ ಬದಲಾವಣೆಗಳನ್ನು ಉಂಟುಮಾಡಸಾಧ್ಯವಿತ್ತು?

ಯೋಗ್ಯವಾದ ರೀತಿಯ ನಂಬಿಕೆ

ಬೈಬಲಿನ ಮೇಲಾಧಾರಿತವಾದ ನಿಜ ನಂಬಿಕೆಯ ಶಕ್ತಿಯನ್ನು ದೃಷ್ಟಾಂತಿಸಲಿಕ್ಕಾಗಿ ಉಲ್ಲೇಖಿಸಸಾಧ್ಯವಿರುವ ಅನೇಕಾನೇಕ ಉದಾಹರಣೆಗಳಲ್ಲಿ ಇವು ಕೆಲವೇ ಆಗಿವೆ. ದೇವರಲ್ಲಿ ನಂಬಿಕೆಯಿದೆ ಎಂದು ಹೇಳಿಕೊಳ್ಳುವವರೆಲ್ಲರೂ ಬೈಬಲಿನ ಉಚ್ಚ ಮಟ್ಟಗಳಿಗನುಸಾರ ಜೀವಿಸುವುದಿಲ್ಲ ಎಂಬುದಂತೂ ಸತ್ಯ. ವಾಸ್ತವದಲ್ಲಿ, ಕ್ರೈಸ್ತರೆಂದು ಹೇಳಿಕೊಳ್ಳುವಂತಹ ಜನರಿಗಿಂತಲೂ ಕೆಲವು ನಾಸ್ತಿಕರು ಹೆಚ್ಚು ಉತ್ತಮ ಜೀವಿತಗಳನ್ನು ನಡೆಸಬಹುದು. ಏಕೆಂದರೆ ದೇವರಲ್ಲಿ ನಂಬಿಕೆಯಿದೆ ಎಂದು ಹೇಳಿಕೊಳ್ಳುವುದಕ್ಕಿಂತಲೂ ಹೆಚ್ಚಿನದ್ದು ಬೈಬಲ್‌ ಆಧಾರಿತ ನಂಬಿಕೆಯಲ್ಲಿ ಒಳಗೂಡಿದೆ.

ನಂಬಿಕೆಯು “ನಾವು ನಿರೀಕ್ಷಿಸುವವುಗಳ ವಿಷಯವಾಗಿ ಭರವಸದಿಂದಿರುವದೂ ಕಣ್ಣಿಗೆ ಕಾಣದವುಗಳನ್ನು ನಿಜವೆಂದು ತಿಳುಕೊಳ್ಳುವದೂ ಆಗಿದೆ” ಎಂದು ಅಪೊಸ್ತಲ ಪೌಲನು ಹೇಳಿದನು. (ಇಬ್ರಿಯ 11:1) ಆದುದರಿಂದ, ನಿರಾಕರಿಸಲು ಅಸಾಧ್ಯವಾದ ಪುರಾವೆಯ ಮೇಲಾಧಾರಿತವಾದ ಅದೃಶ್ಯ ವಿಚಾರಗಳಲ್ಲಿ ದೃಢ ವಿಶ್ವಾಸವನ್ನು ತೋರಿಸುವುದು ನಂಬಿಕೆಯಲ್ಲಿ ಒಳಗೂಡಿದೆ. ಅದರಲ್ಲೂ ದೇವರು ಅಸ್ತಿತ್ವದಲ್ಲಿದ್ದಾನೆ, ಆತನಿಗೆ ನಮ್ಮಲ್ಲಿ ಆಸಕ್ತಿಯಿದೆ, ಮತ್ತು ಯಾರು ದೇವರ ಚಿತ್ತವನ್ನು ಮಾಡುತ್ತಾರೋ ಅವರನ್ನು ಆತನು ಆಶೀರ್ವದಿಸುವನು ಎಂಬ ವಿಚಾರಗಳಲ್ಲಿ ಯಾವುದೇ ಸಂಶಯವನ್ನು ವ್ಯಕ್ತಪಡಿಸದಿರುವುದು ಇದರಲ್ಲಿ ಸೇರಿದೆ. ಅಪೊಸ್ತಲನು ಹೇಳಿದ್ದು: “ದೇವರ ಬಳಿಗೆ ಬರುವವನು ದೇವರು ಇದ್ದಾನೆ, ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅವಶ್ಯ.”—ಇಬ್ರಿಯ 11:6.

ಈ ರೀತಿಯ ನಂಬಿಕೆಯೇ ಜಾನ್‌, ಟಾನ್ಯ, ಹಾಗೂ ಈ ಲೇಖನದಲ್ಲಿ ತಿಳಿಸಲ್ಪಟ್ಟಿರುವ ಇನ್ನಿತರರ ಜೀವಿತಗಳನ್ನು ಬದಲಾಯಿಸಿತು. ನಿರ್ಣಯಗಳನ್ನು ಮಾಡುವುದರಲ್ಲಿ ಮಾರ್ಗದರ್ಶನವನ್ನು ಪಡೆದುಕೊಳ್ಳಲಿಕ್ಕಾಗಿ ದೇವರ ವಾಕ್ಯವಾದ ಬೈಬಲಿನ ಮೇಲೆ ಪೂರ್ಣ ಭರವಸೆಯಿಂದ ಆತುಕೊಳ್ಳುವಂತೆ ಈ ನಂಬಿಕೆಯು ಅವರನ್ನು ಪ್ರಚೋದಿಸಿತು. ಅನುಕೂಲಕರವಾದರೂ ತಪ್ಪಾದ ಒಂದು ಜೀವನ ಕ್ರಮವನ್ನು ಅನುಸರಿಸುವುದಕ್ಕೆ ಬದಲಾಗಿ, ತಾತ್ಕಾಲಿಕ ತ್ಯಾಗಗಳನ್ನು ಮಾಡಲು ಇದೇ ನಂಬಿಕೆಯು ಅವರಿಗೆ ಸಹಾಯ ಮಾಡಿತು. ಪ್ರತಿಯೊಂದು ಅನುಭವವು ಭಿನ್ನವಾಗಿರುವುದಾದರೂ, ಇವು ಒಂದೇ ರೀತಿಯಲ್ಲಿ ಆರಂಭವಾದವು. ಯೆಹೋವನ ಸಾಕ್ಷಿಗಳಲ್ಲಿ ಒಬ್ಬರು ಈ ವ್ಯಕ್ತಿಗಳೊಂದಿಗೆ ಬೈಬಲಭ್ಯಾಸವನ್ನು ಮಾಡಿದರು ಮತ್ತು ಇವರು ಬೈಬಲು ಹೇಳುವ ಮಾತಿನ ಸತ್ಯತೆಯನ್ನು ಸ್ವತಃ ಅನುಭವಿಸಿದರು: “ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು.” (ಇಬ್ರಿಯ 4:12) ಪ್ರತಿಯೊಬ್ಬ ವ್ಯಕ್ತಿಯು, ತನ್ನ ಜೀವಿತವನ್ನು ಬದಲಾಯಿಸಿದ ದೃಢ ನಂಬಿಕೆಯನ್ನು ತನ್ನಲ್ಲಿ ಬೆಳೆಸಿಕೊಳ್ಳುವಂತೆ ದೇವರ ವಾಕ್ಯದ ಶಕ್ತಿಯು ಸಹಾಯ ಮಾಡಿತು.

ಯೆಹೋವನ ಸಾಕ್ಷಿಗಳು 230ಕ್ಕಿಂತಲೂ ಹೆಚ್ಚಿನ ದೇಶದ್ವೀಪಗಳಲ್ಲಿ ಕ್ರಿಯಾಶೀಲರಾಗಿದ್ದಾರೆ. ಒಂದು ಬೈಬಲ್‌ ಅಭ್ಯಾಸವನ್ನು ಆರಂಭಿಸುವಂತೆ ಅವರು ನಿಮಗೆ ಕರೆಕೊಡುತ್ತಾರೆ. ಏಕೆ? ಏಕೆಂದರೆ ಬೈಬಲ್‌ ಆಧಾರಿತವಾದ ನಂಬಿಕೆಯು ನಿಮ್ಮ ಜೀವಿತಗಳಲ್ಲೂ ಮಹತ್ತರ ಬದಲಾವಣೆಗಳನ್ನು ತರಬಲ್ಲದು ಎಂಬ ವಿಷಯದಲ್ಲಿ ಅವರು ದೃಢನಿಶ್ಚಿತರಾಗಿದ್ದಾರೆ.

[ಪಾದಟಿಪ್ಪಣಿಗಳು]

^ ಪ್ಯಾರ. 10 ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟದ್ದು.

[ಪುಟ 3ರಲ್ಲಿರುವ ಚಿತ್ರಗಳು]

ಬೈಬಲ್‌ ಆಧಾರಿತ ನಂಬಿಕೆಯು ಜೀವಿತಗಳನ್ನು ಹೆಚ್ಚು ಉತ್ತಮಗೊಳಿಸುತ್ತದೆ

[ಪುಟ 2ರಲ್ಲಿರುವ ಚಿತ್ರ ಕೃಪೆ]

Title card of Biblia nieświeska by Szymon Budny, 1572