ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಹಕಾರ—ಆಧ್ಯಾತ್ಮಿಕ ಪ್ರಗತಿಗೆ ಪೂರಕ

ಸಹಕಾರ—ಆಧ್ಯಾತ್ಮಿಕ ಪ್ರಗತಿಗೆ ಪೂರಕ

ಸಹಕಾರ—ಆಧ್ಯಾತ್ಮಿಕ ಪ್ರಗತಿಗೆ ಪೂರಕ

ಆಧ್ಯಾತ್ಮಿಕ-ಮನಸ್ಸಿನ ಕುಟುಂಬವನ್ನು ರೂಪಿಸಲು ಸಹಕಾರ ಮನೋಭಾವ ಅತ್ಯಗತ್ಯ. ಯೆಹೋವನು ಪ್ರಥಮ ಮಾನವ ದಂಪತಿಯನ್ನು ಸೃಷ್ಟಿಸಿದಾಗ ಈ ಸಹಕಾರ ಮನೋಭಾವಕ್ಕೆ ಒತ್ತುಕೊಟ್ಟನು. ಹವ್ವಳು ಆದಾಮನಿಗೆ “ಸಹಕಾರಿ” ಆಗಿ ಅವನ ಜೊತೆ ಕೆಲಸಮಾಡಬೇಕಿತ್ತು. (ಆದಿ. 2:18) ವಿವಾಹಜೀವನವು ಒಂದು ಪಾಲುದಾರಿಕೆಯಾಗಿದ್ದು, ಪುರುಷ ಮತ್ತು ಸ್ತ್ರೀ ಪಾಲುದಾರರಂತೆ ಪರಸ್ಪರರನ್ನು ಬೆಂಬಲಿಸಬೇಕು. (ಪ್ರಸಂ. 4:9-12) ಯೆಹೋವನು ಹೆತ್ತವರಿಗೆ ಮತ್ತು ಮಕ್ಕಳಿಗೆ ನೇಮಿಸಿರುವ ಪಾತ್ರವನ್ನು ಪೂರೈಸಲಿಕ್ಕೂ ಸಹಕಾರ ಅತ್ಯಗತ್ಯ.

ಕುಟುಂಬ ಆರಾಧನೆ

ಬ್ಯಾರಿ ಮತ್ತು ಹೈಡಿ ಎಂಬ ದಂಪತಿಗೆ ಐದು ಮಂದಿ ಮಕ್ಕಳು. ಕುಟುಂಬ ಬೈಬಲ್‌ ಅಧ್ಯಯನವನ್ನು ಎಲ್ಲರ ಸಹಕಾರದಿಂದ ನಡೆಸುವಾಗ ಪ್ರಗತಿಮಾಡಲಿಕ್ಕಾಗುತ್ತದೆಂದು ಅವರು ಕಂಡುಕೊಂಡಿದ್ದಾರೆ. ಬ್ಯಾರಿ ವಿವರಿಸುವುದು: “ಕುಟುಂಬ ಅಧ್ಯಯನದ ಮುಂಚೆ ಮಕ್ಕಳಿಗೆ ಆಗಾಗ್ಗೆ ಚಿಕ್ಕಪುಟ್ಟ ನೇಮಕಗಳನ್ನು ಕೊಡುತ್ತೇನೆ. ಕೆಲವೊಮ್ಮೆ ಅವರಿಗೆ ಎಚ್ಚರ! ಪತ್ರಿಕೆಯಲ್ಲಿನ ಒಂದು ಲೇಖನವನ್ನು ಓದುವ ನೇಮಕ ಕೊಟ್ಟು, ಅದರಿಂದ ಅವರೇನು ಕಲಿತುಕೊಂಡರು ಎಂಬುದನ್ನು ಆಮೇಲೆ ಕುಟುಂಬಕ್ಕೆ ಹೇಳುವಂತೆ ಕೇಳಿಕೊಳ್ಳುತ್ತೇನೆ. ಕ್ಷೇತ್ರ ಸೇವೆಯಲ್ಲಿ ಹೇಗೆ ಮಾತಾಡಬೇಕೆಂಬುದನ್ನೂ ಅಭ್ಯಾಸಮಾಡುತ್ತೇವೆ. ಹೀಗೆ ಮಕ್ಕಳಲ್ಲಿ ಪ್ರತಿಯೊಬ್ಬರೂ ನಿರೂಪಣೆಯೊಂದಿಗೆ ಸೇವೆಗಾಗಿ ತಯಾರಾಗಿರುತ್ತಾರೆ.” ಹೈಡಿ ಕೂಡಿಸಿ ಹೇಳುವುದು: “ನಮ್ಮಲ್ಲಿ ಒಬ್ಬೊಬ್ಬರಿಗೂ ಆಧ್ಯಾತ್ಮಿಕ ಗುರಿಗಳ ಒಂದು ಪಟ್ಟಿಯಿದೆ. ಅವುಗಳನ್ನು ಸಾಧಿಸುವ ದಿಕ್ಕಿನಲ್ಲಿ ಎಷ್ಟು ಪ್ರಗತಿ ಮಾಡಿದ್ದೇವೆಂಬುದನ್ನು ನೋಡಲು ಆಗಿಂದಾಗ್ಗೆ ಕುಟುಂಬ ಅಧ್ಯಯನದಲ್ಲಿ ಆ ಗುರಿಗಳನ್ನು ಪರಿಶೀಲಿಸುತ್ತೇವೆ.” ಕ್ರಮವಾಗಿ ವಾರದ ನಿರ್ದಿಷ್ಟ ರಾತ್ರಿಗಳಂದು ಟಿ.ವಿ. ನೋಡದೆ ಇರುವುದರಿಂದಲೂ, ಇಡೀ ಕುಟುಂಬಕ್ಕೆ ಮೌನವಾಗಿ ಏನನ್ನಾದರೂ ಓದಲು ಅವಕಾಶ ಲಭಿಸುತ್ತದೆಂದು ಈ ದಂಪತಿ ಕಂಡುಕೊಂಡಿದ್ದಾರೆ.

ಸಭಾ ಕೂಟಗಳು

ಮೈಕ್‌ ಮತ್ತು ಡೆನಿಜ್‌ ಎಂಬವರಿಗೆ ನಾಲ್ಕು ಮಕ್ಕಳಿದ್ದಾರೆ. ಪರಸ್ಪರ ಸಹಕರಿಸುವುದರಿಂದ ಅವರ ಕುಟುಂಬಕ್ಕೆ ಯಾವ ಪ್ರಯೋಜನವಾಗಿದೆ? ಮೈಕ್‌ ಹೇಳುವುದು: “ಸರಿಯಾದ ಸಮಯಕ್ಕೆ ಕೂಟಗಳಲ್ಲಿ ಉಪಸ್ಥಿತರಿರಬೇಕೆಂದು ಚೆನ್ನಾಗಿ ಯೋಜನೆಮಾಡಿದರೂ ಕೆಲವೊಮ್ಮೆ ತಡವಾಗುತ್ತಿತ್ತು. ಆದರೆ ನಾವು ಪರಸ್ಪರ ಸಹಕರಿಸುವಾಗ ಸರಿಯಾದ ಸಮಯಕ್ಕೆ ಅಲ್ಲಿರಲು ಸಾಧ್ಯವಾಗುತ್ತದೆಂದು ತಿಳಿದುಕೊಂಡೆವು.” ಡೆನಿಜ್‌ ವಿವರಿಸುವುದು: “ಮಕ್ಕಳು ದೊಡ್ಡವರಾಗುತ್ತಿದ್ದಾಗ, ಅವರಿಗೆ ಒಂದೊಂದು ಕೆಲಸ ಮಾಡಲಿಕ್ಕಿತ್ತು. ನಮ್ಮ ಮಗಳಾದ ಕಿಮ್‌ ಅಡಿಗೆಮಾಡಲು ಮತ್ತು ಊಟದ ಮೇಜನ್ನು ಸಿದ್ಧಗೊಳಿಸಲು ಸಹಾಯಮಾಡುತ್ತಿದ್ದಳು.” ಅವರ ಮಗ ಮೈಕಲ್‌ ನೆನಪಿಸಿಕೊಳ್ಳುವುದು: “ಮಂಗಳವಾರ ರಾತ್ರಿ ನಮ್ಮ ಮನೆಯಲ್ಲಿ ಒಂದು ಸಭಾ ಕೂಟ ನಡೆಯುತ್ತಿತ್ತು. ಅದಕ್ಕಾಗಿ ನಾವು ಕೋಣೆಯನ್ನು ಶುಚಿಗೊಳಿಸಿ, ನೆಲವನ್ನು ವ್ಯಾಕ್ಯೂಮ್‌ ಮಾಡಿ, ಕುರ್ಚಿಗಳನ್ನು ಜೋಡಿಸಿಡುತ್ತಿದ್ದೆವು.” ಮ್ಯಾಥ್ಯೂ ಎಂಬ ಇನ್ನೊಬ್ಬ ಮಗ ಕೂಡಿಸಿ ಹೇಳಿದ್ದು: “ಕೂಟಗಳಿದ್ದ ಸಾಯಂಕಾಲಗಳಂದು ಅಪ್ಪ ಕೆಲಸದಿಂದ ಬೇಗ ಮನೆಗೆ ಬಂದು, ಕೂಟಕ್ಕೆ ಸಿದ್ಧರಾಗಲು ನಮಗೆ ಸಹಾಯಮಾಡುತ್ತಿದ್ದರು.” ಫಲಿತಾಂಶಗಳೇನಾಗಿದ್ದವು?

ಶ್ರಮ ಸಾರ್ಥಕ

ಮೈಕ್‌ ತಿಳಿಸುವುದು: “1987ರಲ್ಲಿ ಡೆನಿಜ್‌ ಮತ್ತು ನಾನು ಪಯನೀಯರರಾದೆವು. ಆಗ ನಮ್ಮ ಮಕ್ಕಳಲ್ಲಿ ಮೂವರು ನಮ್ಮೊಟ್ಟಿಗೇ ಇದ್ದರು. ಅವರಲ್ಲಿಬ್ಬರು ಆಮೇಲೆ ಪಯನೀಯರರಾದರು. ಇಬ್ಬರು ಪುತ್ರರು ಬೆತೆಲ್‌ ನಿರ್ಮಾಣಕಾರ್ಯ ಯೋಜನೆಗಳಲ್ಲಿ ಕೆಲಸಮಾಡಿದ್ದಾರೆ. ನಮ್ಮ ಕುಟುಂಬಕ್ಕೆ ಸಿಕ್ಕಿರುವ ಹೆಚ್ಚಿನ ಆನಂದವೇನೆಂದರೆ, 40 ವ್ಯಕ್ತಿಗಳು ಸಮರ್ಪಣೆ ಮಾಡಿ ದೀಕ್ಷಾಸ್ನಾನ ಹೊಂದುವಂತೆ ನಾವು ಸಹಾಯಮಾಡಿದ್ದೇವೆ. ಒಂದು ಕುಟುಂಬವಾಗಿ ನಿರ್ಮಾಣಕಾರ್ಯ ಯೋಜನೆಗಳಲ್ಲಿ, ವಿದೇಶಗಳಲ್ಲೂ ಕೆಲಸಮಾಡುವ ಸುಯೋಗ ನಮಗೆ ಸಿಕ್ಕಿದೆ.”

ಕುಟುಂಬದ ಪ್ರತಿಯೊಬ್ಬರೂ ಸಹಕರಿಸಲು ಪಡುವ ಶ್ರಮ ಸಾರ್ಥಕ. ಕುಟುಂಬದಲ್ಲಿ ಪರಸ್ಪರ ಸಹಕರಿಸಬಹುದಾದ ಇತರ ವಿಧಗಳನ್ನು ನೀವು ಕಂಡುಹಿಡಿಯಬಲ್ಲಿರೋ? ಸಹಕಾರ ಮನೋಭಾವವಿದ್ದರೆ ನಿಮ್ಮ ಕುಟುಂಬಕ್ಕೆ ಹೆಚ್ಚಿನ ಆಧ್ಯಾತ್ಮಿಕ ಪ್ರಗತಿ ಮಾಡಲು ಖಂಡಿತ ಸಾಧ್ಯವಾಗುವುದೆಂಬ ಖಾತ್ರಿ ನಿಮಗಿರಲಿ.

[ಪುಟ 28ರಲ್ಲಿರುವ ಚಿತ್ರ]

ಪ್ರ್ಯಾಕ್ಟಿಸ್‌ ಸೆಷನ್‌ಗಳು ಕ್ಷೇತ್ರ ಸೇವೆಯಲ್ಲಿ ಪ್ರಗತಿಮಾಡಲು ಪೂರಕವಾಗಿರುತ್ತವೆ