ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು “ಸುರಕ್ಷಿತವಾಗಿ” ಇರುವುದೇ ಯೆಹೋವನ ಅಪೇಕ್ಷೆ

ನೀವು “ಸುರಕ್ಷಿತವಾಗಿ” ಇರುವುದೇ ಯೆಹೋವನ ಅಪೇಕ್ಷೆ

ನೀವು “ಸುರಕ್ಷಿತವಾಗಿ” ಇರುವುದೇ ಯೆಹೋವನ ಅಪೇಕ್ಷೆ

ಇತಿಹಾಸದಲ್ಲೇ ಅತಿ ಅಪಾಯಕಾರಿ ಘಟನೆ ತಟ್ಟನೆ ಸಂಭವಿಸುವಾಗ ಸರ್ವಶಕ್ತನಾದ ದೇವರು ತನ್ನ ಮೆಚ್ಚುಗೆ ಪಡೆದಿರುವವರೆಲ್ಲರಿಗೂ “ಸುರಕ್ಷಿತವಾಗಿ ಪಾರಾಗುವ” ಖಾಚಿತ್ಯ ವಹಿಸುತ್ತಾನೆ. (ಯೋವೇ. 2:32, NW) ಆದರೆ ಯೆಹೋವನು ಯಾವಾಗಲೂ ಜನರನ್ನು ಕೇಡಿನಿಂದ ಕಾಪಾಡಲು ಬಯಸಿದ್ದನೆಂಬುದು ದಿಟ. ಆತನ “ಬಳಿಯಲ್ಲಿ ಜೀವದ ಬುಗ್ಗೆ” ಇರಲಾಗಿ ಆತನು ಮಾನವರೆಲ್ಲರನ್ನು ಅಮೂಲ್ಯರನ್ನಾಗಿ, ಕಾಪಾಡಲು ಅರ್ಹರನ್ನಾಗಿ ಪರಿಗಣಿಸುತ್ತಾನೆ.—ಕೀರ್ತ. 36:9.

ದೇವರ ಪುರಾತನ ನಂಬಿಗಸ್ತ ಸೇವಕರು ಸಹ ಜೀವದ ಬಗ್ಗೆ ಇದೇ ನೋಟವನ್ನು ತೋರಿಸಿದ್ದರು. ಯಾಕೋಬನು ಮತ್ತು ಅವನ ಕುಟುಂಬ ಒಂದು ಅಪಾಯಕಾರಿ ಪ್ರಯಾಣವನ್ನು “ಸುರಕ್ಷಿತವಾಗಿ” ಮಾಡಿ ಮುಗಿಸಿದರೆಂಬುದಾಗಿ ಆದಿಕಾಂಡ 33:18 ಹೇಳುತ್ತದೆ. ಯಾಕೋಬನು ಯೆಹೋವನ ರಕ್ಷಣಾಹಸ್ತದಲ್ಲಿ ಆತುಕೊಂಡನಾದರೂ, ತನ್ನೊಂದಿಗೆ ಪ್ರಯಾಣಿಸಿದ ಎಲ್ಲರನ್ನು ಸುರಕ್ಷಿತವಾಗಿ ಇಡಲು ವ್ಯಾವಹಾರಿಕ ಹೆಜ್ಜೆಗಳನ್ನು ಸಹ ತಕ್ಕೊಂಡನು. (ಆದಿ. 32:7, 8; 33:14, 15) ಬೈಬಲಿನ ಮೂಲತತ್ತ್ವಗಳನ್ನು ಅನ್ವಯಿಸುವ ಮೂಲಕ ನೀವು ನಿಮ್ಮ ಹಾಗೂ ಇತರರ ಸುರಕ್ಷೆಯನ್ನು ಹೆಚ್ಚಿಸಬಲ್ಲಿರಿ. ಈ ಸತ್ಯವು, ರಾಜ್ಯ ಸಭಾಗೃಹಗಳನ್ನು ಕಟ್ಟುವವರಿಗೆ, ತದ್ರೀತಿಯ ಯೋಜನೆಗಳಲ್ಲಿ ಕೆಲಸಮಾಡುವವರಿಗೆ ಮತ್ತು ವಿಪತ್ತು ಪರಿಹಾರವನ್ನು ಒದಗಿಸುವವರಿಗೆ ಹೇಗೆ ಅನ್ವಯಿಸುತ್ತದೆ ಎಂಬುದನ್ನು ನಾವೀಗ ನೋಡೋಣ.

ಮೋಶೆಯ ಧರ್ಮಶಾಸ್ತ್ರದ ಕೆಳಗೆ ಸುರಕ್ಷಿತತೆ

ಮೋಶೆಯ ಧರ್ಮಶಾಸ್ತ್ರವು ಸುರಕ್ಷಿತತೆಯನ್ನು ದೇವಜನರ ಅಧಿಕೃತ ಕಾರ್ಯನೀತಿಯನ್ನಾಗಿ ಮಾಡಿತು. ಉದಾಹರಣೆಗೆ, ಇಸ್ರಾಯೇಲ್ಯನೊಬ್ಬನು ಮನೆಯನ್ನು ಕಟ್ಟಿಸಿಕೊಳ್ಳುವಾಗ ಅದರ ಚಪ್ಪಟೆ ಮಾಡಿನ ಅಂಚಿನ ಸುತ್ತಲು ಒಂದು ದಂಡೆಯನ್ನು, ತಗ್ಗುಗೋಡೆ ಅಥವಾ ಕಂಬಿಕಟ್ಟೆಯನ್ನು ಕಟ್ಟಿಸಬೇಕಿತ್ತು. ಯಾಕೆಂದರೆ ಜನರು ತಮ್ಮ ಮನೆಗಳ ಮಾಡುಗಳ ಮೇಲೆ ಹೆಚ್ಚಾಗಿ ಹತ್ತುತ್ತಿದ್ದ ಕಾರಣ ಅವುಗಳ ಅಂಚಿನ ಸುತ್ತಲಿನ ಗೋಡೆಯು ಅವರನ್ನು ಕೆಳಗೆ ಬೀಳುವುದರಿಂದ ಕಾಪಾಡುತ್ತಿತ್ತು. (1 ಸಮು. 9:26; ಮತ್ತಾ. 24:17) ಒಂದುವೇಳೆ ಈ ಸುರಕ್ಷಾ ನಿಯಮಪಾಲನೆಯ ಉಲ್ಲಂಘನೆಯಿಂದಾಗಿ ಅಪಘಾತ ಸಂಭವಿಸುವಲ್ಲಿ ಯೆಹೋವನು ಮನೆಯ ಒಡೆಯನನ್ನು ಅದಕ್ಕೆ ಜವಾಬ್ದಾರನನ್ನಾಗಿ ಮಾಡುತ್ತಿದ್ದನು.—ಧರ್ಮೋ. 22:8.

ಸಾಕುಪ್ರಾಣಿಗಳಿಂದಾಗಿ ಹಾನಿಯುಂಟಾದರೆ ಸಹ ಧರ್ಮಶಾಸ್ತ್ರ ಶಿಕ್ಷೆಗಳನ್ನು ವಿಧಿಸುತ್ತಿತ್ತು. ಒಂದು ಎತ್ತು ಒಬ್ಬನನ್ನು ಹಾದು ಕೊಂದರೆ ಇತರರನ್ನು ಸುರಕ್ಷಿತವಾಗಿ ಇಡಲಿಕ್ಕಾಗಿ ಆ ಎತ್ತನ್ನು ಒಡೆಯನು ಕೊಂದುಹಾಕಬೇಕಿತ್ತು. ಅವನು ಅದರ ಮಾಂಸವನ್ನು ತಿನ್ನಬಾರದಿತ್ತು ಮತ್ತು ಇತರರಿಗೆ ಆಹಾರವಾಗಿ ಮಾರಲೂಬಾರದಿತ್ತು. ಆದ್ದರಿಂದ ಆ ಪ್ರಾಣಿಯನ್ನು ಕೊಲ್ಲುವುದರಿಂದ ಅವನಿಗೆ ತುಂಬ ನಷ್ಟವಾಗುತ್ತಿತ್ತು. ಆದರೆ ಒಂದು ಎತ್ತು ಒಬ್ಬನನ್ನು ಗಾಯಗೊಳಿಸಿದ ನಂತರವೂ ಆ ಎತ್ತಿನ ಒಡೆಯನು ಅದನ್ನು ಕಟ್ಟಿ ಇಡದಿದ್ದಲ್ಲಿ ಆಗೇನು? ಅದೇ ಎತ್ತು ಅನಂತರ ಬೇರೊಬ್ಬನನ್ನು ಹಾದು ಕೊಂದಲ್ಲಿ ಆ ಎತ್ತನ್ನೂ ಅದರ ಒಡೆಯನನ್ನೂ ಕೊಲ್ಲಬೇಕಿತ್ತು. ಆ ನಿಯಮವು, ತಮ್ಮ ಸಾಕುಪ್ರಾಣಿಗಳೊಂದಿಗೆ ದುರ್ಲಕ್ಷ್ಯದಿಂದ ವರ್ತಿಸುವ ಯಾವನಿಗಾದರೂ ತನ್ನ ವರ್ತನೆಯನ್ನು ಸರಿಪಡಿಸುವಂತೆ ಅವಕಾಶ ಕೊಟ್ಟಿತು.—ವಿಮೋ. 21:28, 29.

ಧರ್ಮಶಾಸ್ತ್ರವು ಕೆಲಸದ ಉಪಕರಣಗಳ ಯೋಗ್ಯ ಬಳಸುವಿಕೆಯನ್ನು ಸಹ ಪ್ರೋತ್ಸಾಹಿಸಿತು. ಹೆಚ್ಚಿನ ಇಸ್ರಾಯೇಲ್ಯರು ಕಟ್ಟಿಗೆಯನ್ನು ಕಡಿಯಲಿಕ್ಕಾಗಿ ಕೊಡಲಿಯನ್ನು ಉಪಯೋಗಿಸುತ್ತಿದ್ದರು. ಒಂದುವೇಳೆ ಕೊಡಲಿಯು ಅದರ ಹಿಡಿಯಿಂದ ಜಾರಿ ಬಳಿಯಲ್ಲಿ ನಿಂತವನಿಗೆ ಗಾಯವಾಗಿ ಅವನು ಸಾಯುವಲ್ಲಿ ಕಟ್ಟಿಗೆ ಕಡಿಯುತ್ತಿದ್ದವನು ಒಂದು ಆಶ್ರಯನಗರಕ್ಕೆ ಓಡಿಹೋಗಬೇಕಿತ್ತು. ಅಲ್ಲಿ ಅವನು ಮಹಾಯಾಜಕನು ತೀರಿಹೋಗುವ ತನಕ ಉಳಿದುಕೊಳ್ಳುವುದು ಅವಶ್ಯವಾಗಿತ್ತು. ಅದರ ಅರ್ಥವೇನೆಂದರೆ ಕೈತಪ್ಪಿ ಮಾಡಿದ ಕೊಲೆಯಿಂದಾಗಿ ವರ್ಷಗಟ್ಟಲೆ ಅವನು ತನ್ನ ಕುಟುಂಬದಿಂದ ಮತ್ತು ಮನೆಯಿಂದ ಪ್ರತ್ಯೇಕವಾಗಿಡಲ್ಪಡುತ್ತಿದ್ದನು. ಆ ಏರ್ಪಾಡು ಯೆಹೋವನು ಜೀವವನ್ನು ಅಮೂಲ್ಯವಾಗಿ ಎಣಿಸುತ್ತಾನೆ ಎಂಬ ಪಾಠವನ್ನು ಜನಾಂಗಕ್ಕೆ ಕಲಿಸಿತು. ಜೀವದ ಕಡೆಗೆ ದೇವರ ನೋಟವನ್ನು ಇಟ್ಟಿರುವ ಮನುಷ್ಯನು ತನ್ನ ಉಪಕರಣಗಳನ್ನು ಒಳ್ಳೇ ದುರಸ್ತಿಯಲ್ಲಿಟ್ಟು ಅವನ್ನು ನಿರಪಾಯವಾಗಿ ಉಪಯೋಗಿಸುತ್ತಿದ್ದನು.—ಅರ. 35:25; ಧರ್ಮೋ. 19:4-6.

ಅಂಥ ನಿಯಮಗಳಿದ್ದಿರಲಾಗಿ, ಮನೆಯ ಒಳಗೂ ಹೊರಗೂ ಸುರಕ್ಷಿತವಾದ ಕ್ರಮಗಳನ್ನು ಪಾಲಿಸುವಂತೆ ಯೆಹೋವನು ತನ್ನ ಜನರಿಂದ ಬಯಸಿದ್ದನೆಂಬುದು ಸ್ಪಷ್ಟ. ಇತರರಿಗೆ ಮರಣ ಅಥವಾ ಗಾಯವನ್ನು ಆಗಿಸಿದವರು ಅದನ್ನು ಅಕಸ್ಮಾತ್ತಾಗಿ ಮಾಡಿದರೂ ಕೂಡ ಯೆಹೋವನ ಮುಂದೆ ಲೆಕ್ಕ ಕೊಡಬೇಕಿತ್ತು. ಸುರಕ್ಷಿತತೆಯ ವಿಷಯದಲ್ಲಿ ಯೆಹೋವನ ಯೋಚನಾಧಾಟಿ ಬದಲಾಗಿಲ್ಲ. (ಮಲಾ. 3:6) ಜನರು ತಮ್ಮನ್ನು ಹಾಗೂ ಇತರರನ್ನು ಗಾಯಗೊಳಿಸುವುದರಿಂದ ದೂರವಿರಬೇಕೆಂದು ಆತನು ಇನ್ನೂ ಬಯಸುತ್ತಾನೆ. ಇದು ವಿಶೇಷವಾಗಿ ಆತನ ಸತ್ಯಾರಾಧನೆಗಾಗಿ ಸಮರ್ಪಿತವಾದ ಕಟ್ಟಡಗಳನ್ನು ನಾವು ಕಟ್ಟುವಾಗ ಮತ್ತು ದುರಸ್ತಿಮಾಡುವಾಗ ಸತ್ಯ.

ನಿರ್ಮಾಣ ಯೋಜನೆಗಳಲ್ಲಿ ಸುರಕ್ಷೆ

ರಾಜ್ಯ ಸಭಾಗೃಹಗಳು, ಅಸೆಂಬ್ಲಿ ಹಾಲ್‌ಗಳು ಮತ್ತು ಬ್ರಾಂಚ್‌ ಸೌಕರ್ಯಗಳನ್ನು ಕಟ್ಟುವ ಹಾಗೂ ದುರಸ್ತಿಮಾಡುವ ಕೆಲಸವನ್ನು ನಾವು ಒಂದು ಮಹಾ ಸುಯೋಗವಾಗಿ ನೆನಸುತ್ತೇವೆ. ವಿಪತ್ತು ಪರಿಹಾರ ಯೋಜನೆಗಳಲ್ಲಿ ಕೆಲಸವನ್ನು ನಾವು ನಡೆಸುವಾಗಲೂ ಇದು ಸತ್ಯ. ಎಲ್ಲ ಸಮಯದಲ್ಲಿ ನಾವು ಕೌಶಲ್ಯಪೂರ್ವಕವಾಗಿ ನಮ್ಮ ಕೆಲಸವನ್ನು ನಡೆಸಲು ಬಯಸುತ್ತೇವೆ. ಏಕೆಂದರೆ ಚಿಕ್ಕ ಚಿಕ್ಕ ಕೆಲಸಗಳನ್ನು ನಡೆಸುವಾಗಲೂ ಕುಶಲತೆಯಿಲ್ಲದಿದ್ದಲ್ಲಿ ಅದು ನಮಗೂ ಇತರರಿಗೂ ಹಾನಿಕರವಾಗಿರಬಲ್ಲದು. (ಪ್ರಸಂ. 10:9) ಸುರಕ್ಷಿತವಾಗಿ ಕೆಲಸ ನಡೆಸುವ ಹವ್ಯಾಸವನ್ನು ಬೆಳೆಸಿಕೊಳ್ಳುವ ಮೂಲಕ ನಾವು ಅಪಾಯಗಳನ್ನು ವರ್ಜಿಸಬಲ್ಲೆವು ನಿಶ್ಚಯ.

ಬೈಬಲನ್ನುವುದು: “ಯುವಕರಿಗೆ ಬಲವು ಭೂಷಣ, ಮುದುಕರಿಗೆ ನರೆಯು ಒಡವೆ.” (ಜ್ಞಾನೋ. 20:29) ಶ್ರಮಕಾರಿ ಕೆಲಸಗಳನ್ನು ಮಾಡಿ ಮುಗಿಸಲು ಯೌವನದ ಶಕ್ತಿ ಅಗತ್ಯ. ಆದರೆ ಕಟ್ಟಡ ಕೆಲಸಗಳಲ್ಲಿ ಅನುಭವಸ್ಥರಾದ ನರೆಗೂದಲಿನ ಕೆಲಸಗಾರರು ತಮ್ಮ ಕೈಚಳಕ ಮತ್ತು ಸಲಕರಣೆಗಳಿಂದ ಕಟ್ಟಡಕ್ಕೆ ಶೋಭೆಯನ್ನು ತರುತ್ತಾರೆ. ಈಗ ಹಳಬರಾಗಿರುವ ಇವರು ಒಂದು ಸಮಯದಲ್ಲಿ ಯುವ ಪ್ರಾಯದವರಾಗಿದ್ದು ತಮ್ಮ ಯೌವನದ ಶಕ್ತಿಯನ್ನು ಶ್ರಮಕಾರಕ ಕೆಲಸವನ್ನು ನಿರ್ವಹಿಸುವುದರಲ್ಲಿ ಉಪಯೋಗಿಸಿದ್ದರು. ನೀವೀಗ ಹೊಸ ಸ್ವಯಂ ಸೇವಕರಾಗಿರುವಲ್ಲಿ ಆ ಅನುಭವಸ್ಥ ಕೆಲಸಗಾರರು ಕೆಲಸಮಾಡುವುದನ್ನು ಅವಲೋಕಿಸಿ ಅವರ ಸಲಹೆಗಳನ್ನು ಹಿಂಬಾಲಿಸಿರಿ. ನೀವು ಕಲಿಯಲು ಬಯಸುವುದಾದರೆ ಕಟ್ಟಡ ಕೆಲಸದಲ್ಲಿ ಅನುಭವಸ್ಥರಾದ ಸಹೋದರರು ನಿಮಗೆ ಅನೇಕ ವಿಷಯಗಳನ್ನು ಕಲಿಸಿಕೊಡುವರು. ಅಪಾಯಕರ ಸಲಕರಣೆಗಳನ್ನು ನಿರ್ವಹಿಸುವ ಹಾಗೂ ಭಾರವಾದ ಸಾಮಾನುಗಳನ್ನು ಎತ್ತುವ ಸುರಕ್ಷಿತ ವಿಧಾನ ಹೇಗೆಂಬುದು ಅದರಲ್ಲಿ ಸೇರಿದೆ. ಹೀಗೆ ನೀವು ಫಲದಾಯಕವಾಗಿ, ನಿರಪಾಯವಾಗಿ ಮತ್ತು ಸಂತೋಷದಿಂದ ಕೆಲಸಮಾಡುವಿರಿ.

ಕಟ್ಟಡ ನಿರ್ಮಾಣ ನಿವೇಶನದಲ್ಲಿ ಕೆಲಸಮಾಡುವವರು ಯಾವಾಗಲೂ ಎಚ್ಚರಿಕೆ ವಹಿಸಬೇಕು. ಸನ್ನಿವೇಶಗಳು ಬೇಗನೆ ಬದಲಾಗಬಲ್ಲವು. ಗಟ್ಟಿಯೂ ಸುದೃಢವೂ ಆಗಿದ್ದ ನೆಲದಲ್ಲಿ ಈಗ ಗುಂಡಿಯಿರಬಹುದು. ಕೆಲಸಗಾರರಲ್ಲಿ ಇತರರು ಒಂದು ಏಣಿಯನ್ನು ಅಥವಾ ಹಲಗೆಯನ್ನು ಅಥವಾ ಪೇಂಟಿನ ಬಕೆಟನ್ನು ಆಚಿಂದೀಚೆ ಸರಿಸಿದ್ದಿರಬಹುದು. ನೀವದನ್ನು ಗಮನಿಸದೇ ಇದ್ದಲ್ಲಿ ಸುಲಭವಾಗಿ ಬಿದ್ದುಬೀಳಸಾಧ್ಯವಿದೆ. ಸುರಕ್ಷಾ ಕ್ರಮಗಳು ಸಾಮಾನ್ಯವಾಗಿ ಕೆಲಸಗಾರರು ಕೆಲಸದ ನಿವೇಶನದಲ್ಲಿ ತಮ್ಮ ವೈಯಕ್ತಿಕ ರಕ್ಷಣಾ ಉಪಕರಣಗಳನ್ನು ಬಳಸುವಂತೆ ಅಪೇಕ್ಷಿಸುತ್ತವೆ. ಸುರಕ್ಷಾ ಕನ್ನಡಕಗಳು, ತಲೆಕಾಪು, ಸೂಕ್ತವಾದ ಪಾದರಕ್ಷೆಗಳು ಕಟ್ಟಡ ನಿವೇಶನದಲ್ಲಿ ಬರುವ ಅನೇಕ ಅಪಾಯಗಳಿಂದ ನಿಮ್ಮನ್ನು ಕಾಪಾಡಬಲ್ಲವು. ಆದರೆ ಆ ಉಪಕರಣಗಳನ್ನು ದುರಸ್ತಿಯಲ್ಲಿಟ್ಟು ಧರಿಸಿದ್ದಲ್ಲಿ ಮಾತ್ರ ನಿಮ್ಮನ್ನು ಅಪಾಯದಿಂದ ಕಾಪಾಡಿಕೊಳ್ಳಬಲ್ಲಿರಿ.

ಅನೇಕ ಉಪಕರಣಗಳು ಬಳಸಲು ಸುಲಭವಾಗಿ ಕಂಡುಬಂದರೂ ಅವನ್ನು ನಿರಪಾಯವಾಗಿ ಮತ್ತು ಕೌಶಲದಿಂದ ನಿರ್ವಹಿಸಲು ತರಬೇತಿ ಮತ್ತು ಅನುಭವವು ಅವಶ್ಯಕ. ನಿಮಗೆ ಬೇಕಾದ ಒಂದು ಉಪಕರಣವನ್ನು ಉಪಯೋಗಿಸುವ ಅನುಭವವು ನಿಮಗಿಲ್ಲವಾದರೆ ಉಸ್ತುವಾರಿ ವಹಿಸುವ ಸಹೋದರರಿಗೆ ಅದನ್ನು ತಿಳಿಸಿರಿ. ನಿಮಗೆ ತಕ್ಕದಾದ ತರಬೇತಿಯನ್ನು ಕೊಡುವಂತೆ ಅವರು ಏರ್ಪಡಿಸುವರು. ದೀನತೆ ಅಥವಾ ನಿಮ್ಮ ಇತಿಮಿತಿಗಳನ್ನು ಅರಿತುಕೊಳ್ಳುವುದು ಒಂದು ಅಪೇಕ್ಷಣೀಯ ಗುಣ. ವಾಸ್ತವದಲ್ಲಿ ನಿಮ್ಮನ್ನೂ ಇತರರನ್ನೂ ಕಟ್ಟಡ ನಿವೇಶನದಲ್ಲಿ ಸಂಭವಿಸಬಹುದಾದ ಅಪಾಯದಿಂದ ತಪ್ಪಿಸಬೇಕಾದರೆ ಅದೊಂದು ಅವಶ್ಯಕತೆ.—ಜ್ಞಾನೋ. 11:2

ಅಕಸ್ಮಾತ್ತಾಗಿ ಬೀಳುವುದು ಕಟ್ಟಡ ನಿರ್ಮಾಣ ಕೆಲಸಗಳಲ್ಲಿ ಆಗುವ ಜಖಂಗಳಿಗೆ ಮುಖ್ಯ ಕಾರಣ. ಏಣಿಗಳನ್ನು ಏರುವ ಮುಂಚೆ ಅಥವಾ ಸಾರುವೆಕಟ್ಟಿನ ಮೇಲೆ ಕಾಲಿಡುವ ಮುಂಚೆ ಆ ಉಪಕರಣವು ಸುರಕ್ಷಿತವಾಗಿ ಜೋಡಿಸಲ್ಪಟ್ಟಿದೆ ಮತ್ತು ಸುದೃಢವಾಗಿದೆ ಎಂಬ ಖಾತ್ರಿಯಿರಲಿ. ನಿಮಗೆ ಮಾಡಿನ ಮೇಲೆ ಅಥವಾ ಸಾರುವೆಕಟ್ಟಿನ ಮೇಲೆ ನಿಂತು ಕೆಲಸ ಮಾಡಲಿಕ್ಕಿದ್ದರೆ ನಿಮ್ಮನ್ನು ನಿರಪಾಯವಾಗಿ ಮೇಲೆ ಕೆಳಗೆ ಇಳಿಸುವ ಸುರಕ್ಷಾ ಸರಂಜಾಮು ಧರಿಸುವಂತೆ ಅಥವಾ ಆಸರೆಗಾಗಿ ಕಂಬಿಗಳಿರುವಂತೆ ನಿರ್ದೇಶಕಗಳು ಅವಶ್ಯಪಡಿಸ್ಯಾವು. ಎತ್ತರದ ನಿವೇಶನಗಳಲ್ಲಿ ಕೆಲಸಮಾಡುವ ವಿಷಯದಲ್ಲಿ ನಿಮಗೇನಾದರೂ ಪ್ರಶ್ನೆಗಳಿದ್ದಲ್ಲಿ ಕೆಲಸದ ಉಸ್ತುವಾರಿ ವಹಿಸುವವರನ್ನು ಕೇಳಿ. *

ಯೆಹೋವನನ್ನು ಸೇವಿಸುವ ಜನರ ಸಂಖ್ಯೆಯು ಭೂವ್ಯಾಪಕವಾಗಿ ಹೆಚ್ಚುತ್ತಾ ಬರುವಾಗ ಸತ್ಯಾರಾಧನೆಯ ಪ್ರವರ್ಧನೆಗಾಗಿ ಉಪಯೋಗಿಸಲ್ಪಡುವ ರಾಜ್ಯ ಸಭಾಗೃಹಗಳನ್ನು ಹಾಗೂ ಇತರ ಸೌಕರ್ಯಗಳನ್ನು ಕಟ್ಟುವ ಅವಶ್ಯಕತೆಯು ಹೆಚ್ಚುತ್ತಾ ಬರುತ್ತದೆ. ರಾಜ್ಯ ಸಭಾಗೃಹದ ಕಟ್ಟುವ ನಿವೇಶನದಲ್ಲಿ ಹಾಗೂ ತದ್ರೀತಿಯ ಯೋಜನೆಗಳಲ್ಲಿ ಕೆಲಸದ ಉಸ್ತುವಾರಿ ವಹಿಸುವವರು ತಮ್ಮ ಮಾರ್ಗದರ್ಶನೆಯ ಕೆಳಗೆ ಕೆಲಸಮಾಡುವ ಯೆಹೋವನ ಅಮೂಲ್ಯ ಕುರಿಗಳನ್ನು ಅಪಾಯದಿಂದ ಕಾಪಾಡುವ ಹೊಣೆಯನ್ನು ಹೊತ್ತಿರುತ್ತಾರೆ. (ಯೆಶಾ. 32:1, 2) ಕಟ್ಟಡ ನಿರ್ಮಾಣ ಯೋಜನೆಯಲ್ಲಿ ನಿಮ್ಮ ಸಹೋದರ ಸಹೋದರಿಯರನ್ನು ಮಾರ್ಗದರ್ಶಿಸುವ ಸುಯೋಗವನ್ನು ನೀವು ಪಡೆದಿರುವುದಾದರೆ ಸುರಕ್ಷಿತತೆಯ ಪ್ರಾಮುಖ್ಯತೆಯನ್ನು ಎಂದೂ ಮರೆಯದಿರಿ. ಆ ನಿವೇಶನವು ನಿರ್ಮಲವೂ, ಅನಾವಶ್ಯಕ ವಸ್ತುಗಳಿಂದ ತುಂಬಿರದ್ದೂ ಆಗಿರುವಂತೆ ನೋಡಿಕೊಳ್ಳಿರಿ. ಮರುಜ್ಞಾಪನಗಳು ಯಾರಿಗೆ ಬೇಕೋ ಅವರಿಗೆ ದಯೆಯಿಂದ ಆದರೆ ದೃಢತೆಯಿಂದ ಸುರಕ್ಷಾಕ್ರಮಗಳನ್ನು ತಿಳಿಸಿ. ಯುವ ಜನರೂ ಅನುಭವವಿಲ್ಲದವರೂ ಆದ ಕೆಲಸಗಾರರು ಹೆಚ್ಚು ಅಪಾಯ ಸಂಭವಿಸಬಹುದಾದ ಕ್ಷೇತ್ರಗಳನ್ನು ಪ್ರವೇಶಿಸುವಂತೆ ಬಿಡಬೇಡಿ. ಕೆಲಸಗಾರರು ಎದುರಿಸಬಹುದಾದ ಅಪಾಯಗಳನ್ನು ಮುನ್ನೋಡಿ ನಿರಪಾಯವಾಗಿ ಕೆಲಸಮಾಡುವಂತೆ ಅವರನ್ನು ಸಿದ್ಧಗೊಳಿಸಿ. ನೆನಪಿಡಿರಿ, ನಮ್ಮ ಗುರಿಯು ನಿರ್ಮಾಣ ಯೋಜನೆಯನ್ನು ಅಪಾಯರಹಿತವಾಗಿ ಮುಗಿಸುವುದೇ ಆಗಿದೆ.

ಪ್ರೀತಿಯ ಪಾತ್ರ

ಸತ್ಯಾರಾಧನೆಯಲ್ಲಿ ಉಪಯೋಗಿಸಲ್ಪಡುವ ರಾಜ್ಯ ಸಭಾಗೃಹಗಳನ್ನು ಹಾಗೂ ಇತರ ಕಟ್ಟಡಗಳನ್ನು ಕಟ್ಟುವುದರಲ್ಲಿ ಅಪಾಯದ ಸಂಭಾವ್ಯತೆಯು ಕೂಡಿರುವ ಕೆಲಸವಿರುತ್ತದೆ. ಆದ್ದರಿಂದ ಅಂಥ ಯೋಜನೆಗಳಲ್ಲಿ ಭಾಗವಹಿಸುವವರು ಜಾಗರೂಕತೆ ವಹಿಸಬೇಕು. ಬೈಬಲ್‌ ಮೂಲತತ್ತ್ವಗಳನ್ನು ಗೌರವಿಸುವ, ಕೆಲಸಕ್ಕಾಗಿ ನೇಮಿತ ಮಾರ್ಗದರ್ಶನೆಗಳನ್ನು ಪಾಲಿಸುವ ಹಾಗೂ ಒಳ್ಳೇ ತೀರ್ಮಾನವನ್ನು ಮಾಡುವ ಮೂಲಕ ನೀವು ಅಪಾಯದಿಂದ ದೂರವಿರುವಿರಿ ಮಾತ್ರವಲ್ಲ ನಿಮ್ಮ ಜೊತೆಕೆಲಸಗಾರರನ್ನೂ ಅಪಾಯದಿಂದ ತಪ್ಪಿಸುವಿರಿ.

ಸುರಕ್ಷಿತತೆಯ ವಿಷಯದಲ್ಲಿ ತುಂಬ ಕಾಳಜಿ ವಹಿಸಲು ನಮಗಿರುವ ಪ್ರಾಮುಖ್ಯ ಹೇತುವೇನು? ಅದು ಪ್ರೀತಿಯೇ ಆಗಿದೆ. ಹೌದು, ಯೆಹೋವನಲ್ಲಿ ನಮಗಿರುವ ಪ್ರೀತಿಯು ಆತನಂತೆ ಜೀವವನ್ನು ಅಮೂಲ್ಯವಾಗಿ ಪರಿಗಣಿಸುವಂತೆ ನಮ್ಮನ್ನು ಪ್ರೇರೇಪಿಸುತ್ತದೆ. ಅಲ್ಲದೆ ಜನರಿಗೆ ನಾವು ತೋರಿಸುವ ಪ್ರೀತಿಯು ಅವರಿಗೆ ಅಪಾಯಕರವಾಗಿರುವ ಯಾವುದನ್ನೂ ದುರ್ಲಕ್ಷ್ಯದಿಂದ ನಡಿಸುವುದರಿಂದ ನಮ್ಮನ್ನು ದೂರವಿರಿಸುತ್ತದೆ. (ಮತ್ತಾ. 22:37-39) ಆದ್ದರಿಂದ ನಮ್ಮ ಕಟ್ಟಡ ನಿರ್ಮಾಣ ಯೋಜನೆಗಳಲ್ಲಿ ಕೆಲಸಮಾಡುವವರನ್ನು “ಸುರಕ್ಷಿತವಾಗಿ” ಇರಿಸಲು ನಮ್ಮಿಂದಾದದ್ದೆಲ್ಲವನ್ನು ಮಾಡೋಣ.

[ಪಾದಟಿಪ್ಪಣಿ]

^ ಪ್ಯಾರ. 14 ಪುಟ 30ರಲ್ಲಿರುವ, “ಏಣಿ ಮೇಲೆ ಸುರಕ್ಷಿತವಾಗಿ ಕೆಲಸಮಾಡುವ ವಿಧ” ಎಂಬ ಚೌಕ ನೋಡಿ.

[ಪುಟ 30ರಲ್ಲಿರುವ ಚೌಕ/ಚಿತ್ರ]

ಏಣಿ ಮೇಲೆ ಸುರಕ್ಷಿತವಾಗಿ ಕೆಲಸಮಾಡುವ ವಿಧ

ಅಮೆರಿಕದಲ್ಲಿ ಇತ್ತೀಚಿಗಿನ ವರ್ಷವೊಂದರಲ್ಲಿ 1,60,000ಕ್ಕಿಂತಲೂ ಹೆಚ್ಚು ಕಾರ್ಮಿಕರು ಏಣಿಗಳಿಂದ ಅಕಸ್ಮಾತ್ತಾಗಿ ಬಿದ್ದು ಗಾಯಗೊಂಡರು. ಅದಲ್ಲದೆ ಅಂಥ ಬೀಳುವಿಕೆಯಿಂದಾಗಿ ಸುಮಾರು 150 ಮಂದಿ ಸತ್ತರು ಸಹ. ನೀವೆಲ್ಲಿಯೇ ಜೀವಿಸಲಿ ಅಥವಾ ಕೆಲಸಮಾಡಲಿ, ಏಣಿಯಿಂದ ಕೆಳಗೆ ಬಿದ್ದು ಗಾಯಗೊಳ್ಳುವುದನ್ನು ತಪ್ಪಿಸಲು ಕೆಲವು ಸಹಾಯಕಾರಿ ಮಾರ್ಗದರ್ಶಿಗಳು ಇಲ್ಲಿವೆ.

◇ ಹರಕುಮುರುಕಾಗಿ ಸಡಿಲಗೊಂಡಿರುವ ಏಣಿಯನ್ನು ಬಳಸಬೇಡಿ. ಅಂಥ ಏಣಿಯ ದುರಸ್ತಿಯನ್ನೂ ಮಾಡಬೇಡಿ, ಅದನ್ನು ನಾಶಮಾಡಿ.

◇ ಎಲ್ಲ ಏಣಿಗಳು ಒಂದು ನಿರ್ದಿಷ್ಟ ಭಾರವನ್ನು ಹೊರುವಂತೆ ರಚಿಸಲ್ಪಟ್ಟಿವೆ. ನಿಮ್ಮ ಸ್ವಂತ ತೂಕ ಹಾಗೂ ನೀವು ಒಯ್ಯುವ ಉಪಕರಣಗಳು ಮತ್ತು ಸಾಮಾನುಗಳ ಭಾರವು ನೀವು ಬಳಸಲಿರುವ ಏಣಿಯ ಶಕ್ತಿಯನ್ನು ಮೀರಿಹೋಗದಂತೆ ಖಾತ್ರಿಮಾಡಿರಿ.

◇ ನಿಮ್ಮ ಏಣಿಯನ್ನು ಸಮತಟ್ಟಾದ ಗಟ್ಟಿ ಮೇಲ್ಮೈಯ ಮೇಲೆ ಇಡಿ. ಸಾರುವೆಕಟ್ಟೆ ಅಥವಾ ಬಕೆಟ್‌ ಮತ್ತು ಪೆಟ್ಟಿಗೆಗಳಂಥ ಅಲುಗಾಡುವ ಅಡ್ಡದಿಡ್ಡ ತಳದ ಮೇಲೆ ಅದನ್ನಿಡಬೇಡಿ.

◇ ಏಣಿಯನ್ನು ಹತ್ತುವಾಗ ಮತ್ತು ಇಳಿಯುವಾಗ ಯಾವಾಗಲೂ ಏಣಿಗೆ ಮುಖಮಾಡಿ.

◇ ಯಾವುದೇ ಏಣಿಯ ಮೇಲಿನ ಎರಡು ಮೆಟ್ಟಲುಗಳ ಮೇಲೆ ನಿಲ್ಲಬೇಡಿ ಅಥವಾ ಕೂತುಕೊಳ್ಳಬೇಡಿ.

◇ ಒಂದು ಛಾವಣಿ ಅಥವಾ ಲ್ಯಾಂಡಿಂಗ್‌ ಮೇಲೆ ಹತ್ತಲು ಅಥವಾ ಇಳಿಯಲು ಒಂದು ಏಣಿಯನ್ನು ಉಪಯೋಗಿಸುವುದಾದರೆ ಅದರ ಸೈಡ್‌ ರೇಲ್‌ಗಳು ಏಣಿಯನ್ನು ಒರಗಿಸಿಟ್ಟಿರುವ ಛಾವಣಿ ಅಥವಾ ಲ್ಯಾಂಡಿಂಗ್‌ಗಿಂತ ಕಡಿಮೆಪಕ್ಷ ಮೂರು ಅಡಿ ಮೇಲಕ್ಕೆ ಚಾಚಿರಬೇಕು. ಏಣಿಯ ಕಾಲುಗಳು ಜಾರದಂತೆ ಅವನ್ನು ಕಟ್ಟಿಡಿ ಅಥವಾ ಅವುಗಳ ಮುಂಭಾಗದಲ್ಲಿ ಒಂದು ಹಲಗೆಯನ್ನು ಜಡಿಯಿರಿ. ಏಣಿಯನ್ನು ಈ ವಿಧಗಳಲ್ಲಿ ಭದ್ರಪಡಿಸಲು ಸಾಧ್ಯವಾಗದಿದ್ದಲ್ಲಿ, ನೀವು ಅದರ ಮೇಲೆ ಹತ್ತಿ ಕೆಲಸಮಾಡುವಾಗ ಯಾರಾದರೂ ಅದನ್ನು ಹಿಡಿದಿಡುವಂತೆ ಹೇಳಿ. ಏಣಿ ಪಕ್ಕಕ್ಕೆ ಸರಿಯದಂತೆ ಅದರ ತುದಿಯನ್ನು ಭದ್ರವಾಗಿ ಕಟ್ಟಿ.

◇ ಹಲಗೆಗಳಿಂದ ಮಾಡಿದ ನಿಲುಗಡೆಗೆ ಏಣಿಯ ಮೆಟ್ಟಲುಗಳನ್ನು ಆಧಾರವಾಗಿ ಉಪಯೋಗಿಸಬೇಡಿ.

◇ ಎತ್ತರದಲ್ಲಿ ಕೆಲಸಮಾಡುವಾಗ ನಿಮ್ಮ ತೋಳುಗಳನ್ನು ಅಥವಾ ಕಾಲುಗಳನ್ನು ಹಿಂದೆಮುಂದೆ ಚಾಚಿ ಎಟಕುವಲ್ಲಿ ಏಣಿಯು ಅಲುಗಾಡಬಹುದು. ಅಂಥ ಅಪಾಯಕರ ಎಟಕುವಿಕೆಯನ್ನು ವರ್ಜಿಸಿರಿ. ಏಣಿಯು ನಿಮ್ಮ ಕೆಲಸಕ್ಕೆ ಹತ್ತಿರವಾಗಿಯೇ ಇರುವಂತೆ ಅವಶ್ಯವಾದಷ್ಟು ಸಾರಿ ಅದನ್ನು ಸ್ಥಳಾಂತರಿಸಿ.

◇ ಮುಚ್ಚಿದ ಬಾಗಿಲಿನ ಎದುರಲ್ಲಿ ಏಣಿಯಿಟ್ಟು ಕೆಲಸಮಾಡುವುದು ಅವಶ್ಯವಾಗಿದ್ದರೆ ಬಾಗಲ ಮೇಲೆ ಎಚ್ಚರಿಕೆಯ ಸೂಚನೆಯನ್ನು ಬರೆದಿಟ್ಟು ಬಾಗಿಲಿಗೆ ಕದಹಾಕಿರಿ. ಕದಹಾಕುವುದು ಅಸಾಧ್ಯವಾಗಿದ್ದರೆ ದಾಟಿಹೋಗುವವರನ್ನು ಎಚ್ಚರಿಸುವಂತೆ ಯಾರನ್ನಾದರೂ ಕಾವಲಿಡಿ.

◇ ಏಣಿಯು ಇಬ್ಬರು ಕೆಲಸಗಾರರ ಭಾರವನ್ನು ಹೊರಲು ರಚಿಸಲ್ಪಟ್ಟಿಲ್ಲದಿದ್ದಲ್ಲಿ ಅದರಲ್ಲಿ ಒಬ್ಬನು ಮಾತ್ರ ಕೆಲಸ ಮಾಡಬೇಕು. *

[ಪಾದಟಿಪ್ಪಣಿ]

^ ಪ್ಯಾರ. 33 ಏಣಿ ಮೇಲೆ ಕೆಲಸ ಮಾಡುವ ಕುರಿತಾದ ಹೆಚ್ಚಿನ ಮರುಜ್ಞಾಪನಗಳ ಪಟ್ಟಿಯನ್ನು 1999, ಸೆಪ್ಟೆಂಬರ್‌ 8ರ ಎಚ್ಚರ! ಪತ್ರಿಕೆಯ ಪುಟ 26-28ರಲ್ಲಿ ನೋಡಬಹುದು.

[ಪುಟ 29ರಲ್ಲಿರುವ ಚಿತ್ರ]

ಚಪ್ಪಟೆ ಮಾಡುಗಳ ಸುತ್ತಲೂ ಸಣ್ಣ ಗೋಡೆಯನ್ನು ನಿರ್ಮಿಸುವಂತೆ ಮೋಶೆಯ ಧರ್ಮಶಾಸ್ತ್ರ ಅವಶ್ಯಪಡಿಸಿತು