ನಮ್ಮ ಪ್ರಾಚೀನ ನಿಕ್ಷೇಪಗಳ ಜೋಪಾನ
ನಮ್ಮ ಸಂಗ್ರಹಾಲಯ
ನಮ್ಮ ಪ್ರಾಚೀನ ನಿಕ್ಷೇಪಗಳ ಜೋಪಾನ
ಯೆಹೋವನ ಸಾಕ್ಷಿಗಳ ಆಧ್ಯಾತ್ಮಿಕ ಪರಂಪರೆ ತುಂಬಾ ಸಮೃದ್ಧ. ಅದರ ವೈಭವವನ್ನು ಕೇವಲ ಸಾಹಿತ್ಯವಷ್ಟೇ ಅಲ್ಲ, ಫೋಟೋಗಳು, ಪತ್ರಗಳು, ವೈಯಕ್ತಿಕ ದಾಖಲೆಗಳು ಹಾಡಿ ಹೊಗಳುತ್ತವೆ. ಈ ಪಟ್ಟಿಯಲ್ಲಿ ಆರಾಧನೆಗೆ, ಸಾಕ್ಷಿಕಾರ್ಯಕ್ಕೆ ಮತ್ತು ಇತಿಹಾಸಕ್ಕೆ ಸಂಬಂಧಪಟ್ಟ ವೈವಿಧ್ಯಮಯ ವಸ್ತುಗಳನ್ನು ಸೇರಿಸಬಹುದು. ಇಂಥ ಸಂಗ್ರಹಗಳನ್ನು ಜೋಪಾನವಾಗಿ ಇಡುವುದರಿಂದ ಇಲ್ಲವೇ ನಮ್ಮ ಇತಿಹಾಸದ ಪುಟಗಳನ್ನು ತಿರುವಿಹಾಕಿ ನೋಡುವುದರಿಂದ ಪ್ರಯೋಜನ ಇದೆಯೇ? ಇದೆ. ಉದಾಹರಣೆಗೆ, ಪ್ರಾಚೀನ ಇಸ್ರಾಯೇಲಿನ ಕುಟುಂಬದ ಶಿರಸ್ಸುಗಳು ತಮ್ಮ ಮಕ್ಕಳಿಗೆ ಯೆಹೋವನ ನಿಯಮಗಳನ್ನು ಹೇಳಿಕೊಡಬೇಕಿತ್ತು. ಆತನು ಹಿಂದೆ ನಡೆಸಿದ ಮಹತ್ಕಾರ್ಯಗಳನ್ನು ವರ್ಣಿಸಬೇಕಿತ್ತು. ಅದು ಆತನಲ್ಲಿನ ಅವರ ಭರವಸೆಯನ್ನು ಹೆಚ್ಚಿಸುತ್ತಿತ್ತು.—ಕೀರ್ತ. 78:1-8.
ಯೆಹೋವ ದೇವರ ಉದ್ದೇಶವನ್ನು ಪೂರೈಸುವುದರಲ್ಲಿ ಪ್ರಾಚೀನ ದಾಖಲೆಗಳು ಮಹತ್ತರ ಪಾತ್ರ ವಹಿಸಿವೆ. ಯೆರೂಸಲೇಮಿನ ಆಲಯದ ಜೀರ್ಣೋದ್ಧಾರ ಕೆಲಸಕ್ಕೆ ವಿರೋಧಿಗಳು ಅಡ್ಡಿ ತಂದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಮೇದ್ಯ ಸಂಸ್ಥಾನದ ರಾಜಧಾನಿಯಾದ ಅಹ್ಮೆತಾದಲ್ಲಿ ಅರಮನೆಯ ದಾಖಲೆಪತ್ರಗಳನ್ನು ಪರಿಶೋಧಿಸಲಾಯಿತು. ಆಗ ಸಾಮ್ರಾಟ ಕೋರೆಷನು ಆ ಕೆಲಸಕ್ಕೆ ಅನುಮತಿ ನೀಡಿರುವುದು ಬೆಳಕಿಗೆ ಬಂತು. (ಎಜ್ರ 6:1-4, 12) ಅನಂತರ ದೇವರ ಚಿತ್ತದಂತೆ ದೇವಾಲಯದ ಪುನರ್‌ನಿರ್ಮಾಣ ಕೆಲಸ ಸುಗಮವಾಗಿ ಮುಂದೆ ಸಾಗಿತು. ಸುವಾರ್ತಾ ಪುಸ್ತಕವನ್ನು ಬರೆದ ಲೂಕನು ಸಹ “ಆರಂಭದಿಂದ ಎಲ್ಲ ಸಂಗತಿಗಳನ್ನು ನಿಷ್ಕೃಷ್ಟವಾಗಿ ಪತ್ತೆಹಚ್ಚಿ” ಬರೆಯಲಿಕ್ಕಾಗಿ ಪ್ರಾಚೀನ ದಾಖಲೆಗಳ ಪ್ರಯೋಜನ ಪಡೆದನು.—ಲೂಕ 1:1-4.
ನಮ್ಮ ದೇವಪ್ರಭುತ್ವಾತ್ಮಕ ಇತಿಹಾಸದ ಕುರಿತು ಆಡಳಿತ ಮಂಡಲಿಗೆ ತೀವ್ರ ಆಸಕ್ತಿಯಿದೆ. ಆಧ್ಯಾತ್ಮಿಕ ಪರಂಪರೆಗೆ ಸಂಬಂಧಿಸಿದ ದಾಖಲೆ-ವಸ್ತುಗಳನ್ನೆಲ್ಲಾ ವ್ಯವಸ್ಥಿತ ರೀತಿಯಲ್ಲಿ ಸಂರಕ್ಷಿಸಿಟ್ಟು ಮುಂದಿನ ಪೀಳಿಗೆಗೆ
ದಾಟಿಸುವ ಮಹತ್ವದ ಕುರಿತು ಆಡಳಿತ ಮಂಡಲಿಯ ಸದಸ್ಯರೊಬ್ಬರು ನೀಡಿದ ಹೇಳಿಕೆಯನ್ನು ಗಮನಿಸಿ: “ಇತಿಹಾಸದೆಡೆಗೆ ಹಿನ್ನೋಟ ಬೀರುವುದು ನವಚೈತನ್ಯದಿಂದ ಮುಂದಡಿಯಿಡಲು ನಮ್ಮಲ್ಲಿ ಭರವಸೆ ಮೂಡಿಸುತ್ತದೆ.” ಈ ಉದ್ದೇಶದಿಂದಲೇ ನ್ಯೂಯಾರ್ಕಿನ ಬ್ರೂಕ್ಲಿನ್‌ನಲ್ಲಿರುವ ಮುಖ್ಯ ಕಾರ್ಯಾಲಯದಲ್ಲಿ ‘ರೈಟಿಂಗ್ ಸಂಗ್ರಹಾಲಯ’ (Writing Archives) ಎಂಬ ಹೊಸ ಇಲಾಖೆಯು ಸ್ಥಾಪನೆಗೊಂಡಿದೆ. ಇದು ರೈಟಿಂಗ್ ಕಮಿಟಿಯ ನಿರ್ದೇಶನದಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.ನಮ್ಮ “ಫ್ಯಾಮಿಲಿ ಆಲ್ಬಮ್” ಮತ್ತು “ಪಾರಂಪರ್ಯ ಸ್ವತ್ತು”
ಕಾಲ ಉರುಳಿದಾಗ ನಾವೆಲ್ಲರೂ ಇತಿಹಾಸದಲ್ಲಿ ಮಾಸಿದ ನೆನಪುಗಳನ್ನು ಕಣ್ಮುಂದೆ ತರಲು ಕುಟುಂಬ ದಾಖಲೆಯೊಂದಿದ್ದರೆ ಎಷ್ಟು ಚೆಂದ ಎಂದು ಆಶಿಸುವುದು ಸಹಜ. ಆ ರೀತಿಯ ದಾಖಲೆಯೊಂದನ್ನು ಅಂದರೆ ದಿನದಿಂದ ದಿನಕ್ಕೆ ಹಿಗ್ಗುತ್ತಿರುವ ನಮ್ಮ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸಿ ಜೋಕೆ ಮಾಡಲು ರೈಟಿಂಗ್ ಸಂಗ್ರಹಾಲಯದಲ್ಲಿ ಭಾರಿ ಚಟುವಟಿಕೆ ನಡೆಯುತ್ತಿದೆ. ಅಲ್ಲಿ ಸಂಗ್ರಹವಾಗುತ್ತಿರುವ ನೂರಾರು ಫೋಟೋಗಳನ್ನು ನಮ್ಮ “ಫ್ಯಾಮಿಲಿ ಆಲ್ಬಮ್” ಎಂದೇ ಹೇಳಬಹುದು. ಆರಂಭದಲ್ಲಿ ಪ್ರಕಟಗೊಂಡ ಸಾಹಿತ್ಯ, ಘಟನೆಗಳ ಪ್ರತ್ಯಕ್ಷ ವರದಿ-ಹೇಳಿಕೆಗಳು, ಬೆಲೆಕಟ್ಟಲಾಗದ ಚಿರಸ್ಮರಣೀಯ ವಸ್ತುಗಳು ಸಂಗ್ರಹಾಲಯವನ್ನು ಅಲಂಕರಿಸುತ್ತಿರುವ ಕೆಲವು ಅಮೂಲ್ಯ ರತ್ನಗಳಾಗಿವೆ. ಇಂಥ “ಪಾರಂಪರ್ಯ ಸ್ವತ್ತು” ದೇವಪ್ರಭುತ್ವಾತ್ಮಕ ಪರಂಪರೆ ಹಾದು ಬಂದ ದಾರಿಯ ಮೇಲೆ ಬೆಳಕು ಚೆಲ್ಲುವುದಲ್ಲದೆ ನಮ್ಮ ಆಧ್ಯಾತ್ಮಿಕ ಕುಟುಂಬದ ಭವಿಷ್ಯತ್ತನ್ನು ಭರವಸೆಯ ನೇತ್ರಗಳಿಂದ ನೋಡಲು ನೆರವಾಗುತ್ತದೆ.
“ನಮ್ಮ ಸಂಗ್ರಹಾಲಯ” ಎಂಬ ಈ ಹೊಸ ಲೇಖನದ ಮೂಲಕ ರೈಟಿಂಗ್ ಸಂಗ್ರಹಾಲಯವನ್ನು ನೋಡಿ ಕಣ್ತುಂಬಿಕೊಳ್ಳುವಂತೆ ನಿಮ್ಮನ್ನು ಆಮಂತ್ರಿಸುತ್ತೇವೆ. ಈ ಹೊಸ ವೈಶಿಷ್ಟ್ಯವನ್ನು ಆಗಾಗ ಕಾವಲಿನಬುರುಜು ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು. ಮುಂಬರುವ ಒಂದು ಸಂಚಿಕೆಯಲ್ಲಿ ಈ ಮುಂದಿನ ಪ್ರಶ್ನೆಗಳಿಗೆ ಚಿತ್ರ ಸಮೇತ ಉತ್ತರಗಳನ್ನು ನೀಡಲಾಗುವುದು: ‘ಅರುಣೋದಯ ಬಂಡಿ’ ಎಂದರೇನು? ಯಾರು ಬಳಸಿದರು? ಯಾವಾಗ ಬಳಸಲಾಯಿತು? ಉದ್ದೇಶವೇನು?
ನೆನಪಿನ ಪುಟಗಳನ್ನು ತೆರೆದಿಡುವ ಫ್ಯಾಮಿಲಿ ಆಲ್ಬಮ್‌ನಂತೆ ಸಂಗ್ರಹಾಲಯದ ವಿಷಯಗಳು ನಮ್ಮ ಕುರಿತು ಹಾಗೂ ನಮ್ಮ ಆಧ್ಯಾತ್ಮಿಕ ಪೂರ್ವಿಕರ ಕುರಿತು ಬಹಳಷ್ಟನ್ನು ತಿಳಿಸುತ್ತವೆ. ಅವರು ತೋರಿಸಿದ ನಿಷ್ಠೆ, ಧೈರ್ಯ, ಯೆಹೋವ ದೇವರ ಸೇವೆಯಲ್ಲಿ ಅವರು ಎದುರಿಸಿದ ಸವಾಲು, ಸವಿದ ಆನಂದ, ತನ್ನ ಜನರಿಗೆ ದೇವರು ನೀಡಿದ ಮಾರ್ಗದರ್ಶನೆ, ಬೆಂಬಲ ಮುಂತಾದ ರೋಚಕ ವಿಷಯಗಳನ್ನು ನಾವು ಕಂಡು ಕೇಳಿ ಆನಂದಿಸಲಿದ್ದೇವೆ. (ಧರ್ಮೋ. 33:27) ನಮ್ಮ ಆಧ್ಯಾತ್ಮಿಕ ಇತಿಹಾಸವನ್ನು ಸಂರಕ್ಷಿಸಿ ಜೋಕೆ ಮಾಡಲು ತೆಗೆದುಕೊಳ್ಳುವ ಶ್ರಮವನ್ನು ಯೆಹೋವನು ಹರಸುವನು ಎಂಬ ವಿಶ್ವಾಸ ನಮಗಿದೆ. ಇದರಿಂದ ನಮ್ಮ ಐಕ್ಯ ಇನ್ನಷ್ಟು ಬಲಗೊಂಡು ದೇವರ ಚಿತ್ತವನ್ನು ಮಾಡಲು ಪುಷ್ಠಿಗೊಳ್ಳುವೆವು!
[ಪುಟ 31ರಲ್ಲಿರುವ ಚೌಕ/ಚಿತ್ರ]
ಒಂದು ಇಣುಕು ನೋಟ!
ಕ್ರೈಸ್ತ ಪ್ರಕಾಶನ, ಡಿವಿಡಿ ಮುಂತಾದ ಬೈಬಲಾಧರಿತ ಸಾಹಿತ್ಯವನ್ನು ಸಿದ್ಧಪಡಿಸಲಿಕ್ಕಾಗಿ ನಮ್ಮ ಲೇಖಕರು, ಕಲಾಕಾರರು, ಸಂಶೋಧಕರು ಮತ್ತಿತರರು ಪ್ರಾಚೀನ ಸಂಗ್ರಹಗಳ ಹೆಚ್ಚಿನ ಬಳಕೆ ಮಾಡುತ್ತಾರೆ. ಹಾಗಾಗಿ ಐತಿಹಾಸಿಕ ಮಹತ್ವವುಳ್ಳ ವಸ್ತುಗಳನ್ನು, ದಾಖಲೆಗಳನ್ನು ರೈಟಿಂಗ್ ಸಂಗ್ರಹಾಲಯವು ಬಹಳ ಜೋಕೆಯಿಂದ ಸಂರಕ್ಷಿಸಿ, ಸುಲಭವಾಗಿ ಅವಲೋಕಿಸುವ ರೀತಿಯಲ್ಲಿ ಜೋಡಿಸಿಡುತ್ತದೆ. ಅಂಥ ಸಂಗ್ರಹಗಳನ್ನು ಬ್ರಾಂಚ್ ಆಫೀಸ್, ಬೆತೆಲಿನ ವಿವಿಧ ಇಲಾಖೆ, ಸಭೆ, ಸಹೋದರರು ಹಾಗೂ ಸಂಸ್ಥೆಗಳಿಂದ ಒಟ್ಟುಗೂಡಿಸಲಾಗುತ್ತದೆ. ಈ ಕಾರ್ಯದ ನಸುನೋಟ ಕೆಳಗಿದೆ:
ಸಂಗ್ರಹಣೆ ಮತ್ತು ವಿಶ್ಲೇಷಣೆ: ಅಪರೂಪದ ವಸ್ತುಗಳನ್ನು ಸಂಗ್ರಹಿಸುವ ಕೆಲಸ ನಿರಂತರವಾಗಿ ನಡೆಯುತ್ತದೆ. ಇಂಥ ಅನೇಕ ವಸ್ತುಗಳು ಯೆಹೋವನ ಸೇವೆಯಲ್ಲಿ ಅನೇಕ ವರ್ಷಗಳಿಂದ ನಿಷ್ಠಾವಂತರಾಗಿ ದುಡಿದ ವ್ಯಕ್ತಿಗಳ ಅಥವಾ ಕುಟುಂಬಗಳ ಕೊಡುಗೆಯಾಗಿವೆ. ಕೆಲವೊಂದು ಅಪರೂಪದ ವಸ್ತುಗಳನ್ನು ಎರವಲು ಪಡೆಯಲಾಗುತ್ತದೆ. ಈ ಸಂಗ್ರಹಗಳ ವಿಶ್ಲೇಷಣೆಯು ಇತಿಹಾಸದ ಒಳಹೊಕ್ಕು ನೋಡುವಂತೆ ಮತ್ತು ಆ ಕಾಲದಲ್ಲಿ ಜೀವಿಸಿದ ವ್ಯಕ್ತಿಗಳ ಸುಪರಿಚಯ ಮಾಡಿಕೊಳ್ಳುವಂತೆ ನೆರವಾಗುತ್ತದೆ.
ಅನುಕ್ರಮಣಿಕೆ: ರೈಟಿಂಗ್ ಸಂಗ್ರಹಾಲಯದಲ್ಲಿ ಸಾವಿರಾರು ವಸ್ತುಗಳು ಶೇಖರಣೆಗೊಂಡಿವೆ. ಕೆಲವು ನೂರಕ್ಕಿಂತಲೂ ಹೆಚ್ಚು ವರ್ಷ ಹಳೆಯವು. ನಾನಾ ಆಕಾರ, ಗಾತ್ರದಲ್ಲಿರುವ ಅವುಗಳ ಕುರಿತ ಮಾಹಿತಿಯನ್ನು ಕ್ರಮಬದ್ಧವಾಗಿ ರಿಜಿಸ್ಟ್ರಿಯಲ್ಲಿ ದಾಖಲಿಸಿ ಇಡಲಾಗಿದೆ. ಬೇಕೆಂದಾಗ ಸಂಶೋಧನೆಗೆ ಉಪಯೋಗಿಸಲು ಸುಲಭವಾಗುತ್ತದೆ.
ದುರಸ್ತಿ ಹಾಗೂ ಸಂರಕ್ಷಣೆ: ತುಂಬಾ ಹಳೆಯದಾಗಿರುವ ಮತ್ತು ಜೀರ್ಣ ಸ್ಥಿತಿಯಲ್ಲಿರುವ ಪುಸ್ತಕ ಮತ್ತಿತರ ವಸ್ತುಗಳನ್ನು ಬಹಳ ಕುಶಲತೆಯಿಂದ ದುರಸ್ತಿ ಮಾಡಿ ಜೋಪಾನವಾಗಿ ಇಡಲಾಗಿದೆ. ಕಾಗದಪತ್ರ, ಫೋಟೋ, ವಾರ್ತಾಪತ್ರಿಕೆಗಳ ಲೇಖನ ತುಣುಕುಗಳು, ಫಿಲ್ಮ್ ಹಾಗೂ ಧ್ವನಿ ಸುರುಳಿಗಳನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸಲಾಗುತ್ತದೆ. ಅವಶ್ಯ ಬಿದ್ದಾಗ ಈ ಡಿಜಿಟಲ್ ರೂಪಗಳನ್ನೇ ಬಳಸಲಾಗುತ್ತದೆ. ಹೀಗೆ ಐತಿಹಾಸಿಕ ಮೌಲ್ಯದ ಮೂಲಪ್ರತಿಗಳಿಗೆ ಕಿಂಚಿತ್ತೂ ಧಕ್ಕೆ ಬರದಂತೆ ನೋಡಿಕೊಳ್ಳಲಾಗುತ್ತದೆ.
ಶೇಖರಣೆ ಮತ್ತು ಬಳಕೆ: ಸಂಗ್ರಹಾಲಯದ ವಸ್ತುಗಳನ್ನು ಸುರಕ್ಷಿತವಾಗಿ ವ್ಯವಸ್ಥಿತ ರೀತಿಯಲ್ಲಿ ಶೇಖರಿಸಿ ಇಡಲಾಗಿದೆ. ಬೆಳಕು ಹಾಗೂ ತೇವಾಂಶದಿಂದ ಹಾನಿ ಉಂಟಾಗದಂತೆ ಜಾಗ್ರತೆ ವಹಿಸಲಾಗಿದೆ. ಈ ಪ್ರಾಚೀನ ನಿಕ್ಷೇಪಗಳನ್ನು ಸಂಶೋಧನೆಗೆ ಬಳಸಲು ಅನುಕೂಲವಾಗುವಂತೆ ಕಂಪ್ಯೂಟರ್ ಪ್ರೋಗ್ರ್ಯಾಮನ್ನು ಸಹ ಸಿದ್ಧಪಡಿಸಲಾಗಿದೆ.
[ಪುಟ 32ರಲ್ಲಿರುವ ಚಿತ್ರಗಳು]
1. “ಫೋಟೋ-ಡ್ರಾಮ ಆಫ್ ಕ್ರಿಏಷನ್” ಭಿತ್ತಿಪತ್ರ. 2. ಚಂದಾ ರಿಜಿಸ್ಟ್ರಿ. 3. ಸೌಂಡ್ ಕಾರ್. 4. ಏಪ್ರಿಲ್ 15, 1912ರ ವಾಚ್ ಟವರ್ ಪತ್ರಿಕೆಯ ಮುಖಪುಟ. 5. ಜೆ. ಎಫ್. ರದರ್‌ಫರ್ಡ್‌ರ ಜೈಲುಶಿಕ್ಷೆಯ ನೋಟಿಸ್. 6. WBBR ಮೈಕ್ರೋಫೋನ್. 7. ಫೋನೋಗ್ರಾಫ್. 8. ಪುಸ್ತಕಗಳನ್ನಿಡುವ ಸೂಟ್‌ಕೇಸ್. 9. ವೈಯಕ್ತಿಕ ಟಿಪ್ಪಣಿಗಳು. 10. ಪೊಲೀಸ್ ಟೆಲಿಗ್ರಾಮ್.