ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಳ್ಳೇದನ್ನು ಮಾಡುವುದರಲ್ಲಿ ದಣಿಯದಿರಿ

ಒಳ್ಳೇದನ್ನು ಮಾಡುವುದರಲ್ಲಿ ದಣಿಯದಿರಿ

ಒಳ್ಳೇದನ್ನು ಮಾಡುವುದರಲ್ಲಿ ದಣಿಯದಿರಿ

“ಒಳ್ಳೇದನ್ನು ಮಾಡುವುದನ್ನು ನಿಲ್ಲಿಸದಿರೋಣ.”—ಗಲಾ. 6:9.

ಉತ್ತರ ಕೊಡುವಿರಾ?

ಸತ್ಯದ ಕಡೆಗೆ ಪ್ರೀತಿಯನ್ನು ಕಾಪಾಡಿಕೊಳ್ಳಲು ಯಾವ ಒದಗಿಸುವಿಕೆಗಳಿವೆ?

ಯೆಹೋವನ ಆರಾಧನೆಯ ಮೇಲೆ ಗಮನ ಕೇಂದ್ರೀಕರಿಸುವುದಾದರೆ ಕೂಟಗಳ ನಮ್ಮ ಹಾಜರಿ ಹೇಗಿರುತ್ತದೆ?

ದೇವರ ಸೇವೆಯನ್ನು ಕೊನೇ ವರೆಗೆ ಮಾಡುತ್ತಾ ಇರಬೇಕಾದರೆ ನಾವೇನು ಮಾಡಬೇಕು?

1, 2. ಯೆಹೋವನ ವಿಶ್ವವ್ಯಾಪಿ ಸಂಘಟನೆಯ ಕುರಿತು ಆಲೋಚಿಸುವುದು ಅದರ ಕಡೆಗಿನ ನಮ್ಮ ಭರವಸೆಯನ್ನು ಹೇಗೆ ಹೆಚ್ಚಿಸುತ್ತದೆ?

ಯೆಹೋವ ದೇವರ ಮಹಾ ವಿಶ್ವವ್ಯಾಪಿ ಸಂಘಟನೆಯಲ್ಲಿ ನಾವೂ ಒಬ್ಬರಾಗಿರುವುದು ನಿಜವಾಗಿಯೂ ರೋಮಾಂಚಕ! ನಾವು ಈಗಾಗಲೇ, ಯೆಹೆಜ್ಕೇಲ 1ನೇ ಅಧ್ಯಾಯ ಹಾಗೂ ದಾನಿಯೇಲ 7ನೇ ಅಧ್ಯಾಯದಲ್ಲಿ, ಯೆಹೋವನು ತನ್ನ ಉದ್ದೇಶವನ್ನು ಪೂರೈಸಲು ಏನೆಲ್ಲ ಮಾಡುತ್ತಿದ್ದಾನೆ ಎಂಬುದರ ಕಣ್ಣಿಗೆ ಕಟ್ಟುವಂಥ ವರ್ಣನೆ ಬಗ್ಗೆ ಕಲಿತೆವು. ಯೆಹೋವನ ಸಂಘಟನೆಯ ಭೂಭಾಗವನ್ನು ಯೇಸು ನಡೆಸುತ್ತಿದ್ದಾನೆ. ಸುವಾರ್ತೆ ಸಾರುವ ಕೆಲಸದಲ್ಲಿ, ಸಾರುವವರ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸುವುದರಲ್ಲಿ, ಸತ್ಯಾರಾಧನೆಯನ್ನು ಅಭಿವೃದ್ಧಿಪಡಿಸುವುದರಲ್ಲಿ ಈ ಭೂಭಾಗ ಲಕ್ಷ್ಯವಿಟ್ಟಿದೆ. ಇದನ್ನು ತಿಳಿದಿರುವುದು ಯೆಹೋವನ ಸಂಘಟನೆಯಲ್ಲಿ ನಮ್ಮ ಭರವಸೆಯನ್ನು ಕಟ್ಟುತ್ತದಲ್ಲವೆ!—ಮತ್ತಾ. 24:45.

2 ಹಾಗಾದರೆ ನಾನು ಯೆಹೋವನ ಸಂಘಟನೆಯ ಜೊತೆಜೊತೆಗೆ ಹೆಜ್ಜೆಹಾಕುತ್ತಿದ್ದೇನಾ? ದೇವರ ಸೇವೆಯಲ್ಲಿ ನನ್ನ ಹುರುಪು ಹೆಚ್ಚಾಗಿದೆಯಾ ಅಥವಾ ಕಡಿಮೆಯಾಗಿದೆಯಾ? ಕೆಲವೊಮ್ಮೆ ದೇವರ ಸೇವೆಯಲ್ಲಿ ನಿಧಾನಗೊಳ್ಳುವ, ಹುರುಪು ಕಡಿಮೆಯಾಗುವ ಸಾಧ್ಯತೆಯಿದೆ. ಆದ್ದರಿಂದಲೇ ಅಪೊಸ್ತಲ ಪೌಲನು ಜೊತೆ ಕ್ರೈಸ್ತರಿಗೆ ಯೇಸುವಿನ ಹುರುಪಿನ ಮಾದರಿಯನ್ನು ಅನುಕರಿಸುವಂತೆ ಪ್ರೋತ್ಸಾಹಿಸಿದನು. ಹೀಗೆ ಅವರು “ಬಳಲಿದವರಾಗದಂತೆ ಮತ್ತು ನಿರುತ್ಸಾಹಗೊಳ್ಳದಂತೆ” ಸಹಾಯವಾಗುತ್ತಿತ್ತು. (ಇಬ್ರಿ. 12:3) ಅದೇರೀತಿ ಯೆಹೋವನ ಸಂಘಟನೆ ಹೇಗೆ ಕೆಲಸಮಾಡುತ್ತಿದೆ ಎನ್ನುವುದನ್ನು ಸವಿವರವಾಗಿ ಕಲಿತಿರುವುದು ದೇವರ ಸೇವೆಯಲ್ಲಿ ನಮ್ಮ ಉತ್ಸಾಹ ಹೆಚ್ಚಿಸುತ್ತದೆ. ಅದರಲ್ಲೇ ಮುಂದುವರಿಯಲು ಸಹಾಯ ಮಾಡುತ್ತದೆ.

3. (1) ದಣಿಯಬಾರದಾದರೆ ನಾವೇನು ಮಾಡಬೇಕು? (2) ಈ ಲೇಖನದಲ್ಲಿ ನಾವೇನನ್ನು ಚರ್ಚಿಸಲಿದ್ದೇವೆ?

3 ನಮಗೆ ದೇವರ ಸೇವೆಯಲ್ಲಿ ಹುರುಪು ಕಡಿಮೆಯಾಗಬಾರದಾದರೆ ಇನ್ನೊಂದು ವಿಷಯವನ್ನು ಮಾಡಬೇಕೆಂದು ಪೌಲ ಹೇಳಿದನು. ನಾವು “ಒಳ್ಳೇದನ್ನು ಮಾಡುವುದನ್ನು” ಹೆಚ್ಚಿಸಬೇಕು. (ಗಲಾ. 6:9) ಇದು ನಮ್ಮಿಂದ ಕ್ರಿಯೆಯನ್ನು ಕೇಳಿಕೊಳ್ಳುತ್ತದೆ. ಹುರುಪನ್ನು ಕಳಕೊಳ್ಳದೆ ಯೆಹೋವನ ಸಂಘಟನೆಯೊಂದಿಗೆ ಹೆಜ್ಜೆಹಾಕಲು ಕ್ರಿಯೆಗೈಯಬೇಕಾದ ಐದು ಕ್ಷೇತ್ರಗಳನ್ನು ಈ ಲೇಖನದಲ್ಲಿ ಚರ್ಚಿಸೋಣ. ಯಾವ ಕ್ಷೇತ್ರದಲ್ಲಿ ನಾವು ಮತ್ತು ನಮ್ಮ ಕುಟುಂಬ ಪ್ರಗತಿ ಮಾಡಬೇಕಿದೆ ಎಂದು ಪರೀಕ್ಷಿಸೋಣ.

ಪರಸ್ಪರ ಪ್ರೋತ್ಸಾಹ ಆರಾಧನೆಗಾಗಿ ಕೂಡಿಬನ್ನಿ

4. ಒಟ್ಟಾಗಿ ಕೂಡಿಬರುವುದು ನಮ್ಮ ಆರಾಧನೆಯ ಮುಖ್ಯ ಭಾಗವಾಗಿದೆ ಎಂದು ಹೇಗೆ ಹೇಳಬಹುದು?

4 ಒಟ್ಟಾಗಿ ಕೂಡಿಬರುವುದು ಮುಂಚಿನಿಂದಲೂ ದೇವಸೇವಕರ ರೂಢಿ. ಸ್ವರ್ಗದಲ್ಲಿ ಆತ್ಮಜೀವಿಗಳು ಸಹ ತಕ್ಕ ಸಮಯಗಳಲ್ಲಿ ಯೆಹೋವನ ಸಮ್ಮುಖದಲ್ಲಿ ಕೂಡಿಬರುತ್ತಾರೆ. (1 ಅರ. 22:19; ಯೋಬ 1:6; 2:1; ದಾನಿ. 7:10) ಇಸ್ರಾಯೇಲ್‌ ಜನಾಂಗದವರು ಸಹ ‘ಧರ್ಮಶಾಸ್ತ್ರವನ್ನು ಕೇಳಿ ತಿಳಿದುಕೊಳ್ಳಲು’ ಕೂಡಿಬರಬೇಕಿತ್ತು. (ಧರ್ಮೋ. 31:10-12) ಒಂದನೇ ಶತಮಾನದ ಯೆಹೂದಿಗಳಲ್ಲೂ ಸಭಾಮಂದಿರಕ್ಕೆ ಹೋಗಿ ಶಾಸ್ತ್ರಗ್ರಂಥವನ್ನು ಓದುವ ರೂಢಿಯಿತ್ತು. (ಲೂಕ 4:16; ಅ. ಕಾ. 15:21) ಕ್ರೈಸ್ತ ಸಭೆಗಳು ಸ್ಥಾಪನೆಯಾದ ನಂತರವೂ ಒಟ್ಟಾಗಿ ಕೂಡಿಬರುವುದಕ್ಕೆ ಮಹತ್ವ ಕೊಡಲಾಯಿತು. ಈಗಲೂ ಅದು ನಮ್ಮ ಆರಾಧನೆಯ ಮುಖ್ಯ ಭಾಗವಾಗಿದೆ. ನಿಜ ಕ್ರೈಸ್ತರು ಒಬ್ಬರನ್ನೊಬ್ಬರು “ಪ್ರೀತಿಸುವಂತೆಯೂ ಸತ್ಕಾರ್ಯಗಳನ್ನು ಮಾಡುವಂತೆಯೂ” ಪ್ರೇರೇಪಿಸುತ್ತಾರೆ. ಹಾಗಾಗಿ ನಾವು ಒಬ್ಬರನ್ನೊಬ್ಬರು ‘ಪ್ರೋತ್ಸಾಹಿಸುತ್ತಾ ಇರಬೇಕು.’ ‘ಯೆಹೋವನ ದಿನವು ಸಮೀಪಿಸುತ್ತಾ ಇರುವುದರಿಂದ ಇದನ್ನು ಇನ್ನಷ್ಟು ಹೆಚ್ಚು ಮಾಡಬೇಕು.’—ಇಬ್ರಿ. 10:24, 25.

5. ಕೂಟಗಳಲ್ಲಿ ನಾವು ಹೇಗೆ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಬಹುದು?

5 ಒಬ್ಬರನ್ನೊಬ್ಬರು ಪ್ರೋತ್ಸಾಹಿಸುವ ಒಂದು ವಿಧ, ಕೂಟಗಳಲ್ಲಿ ಭಾಗವಹಿಸುವುದು. ನಾವಿದನ್ನು ಮುದ್ರಿತ ಪ್ರಶ್ನೆಗೆ ಉತ್ತರ ಕೊಡುವ ಮೂಲಕ, ವಚನವನ್ನು ಅನ್ವಯಿಸಿ ಹೇಳಿಕೆ ನೀಡುವ ಮೂಲಕ ಅಥವಾ ಒಂದು ಬೈಬಲ್‌ ತತ್ವ ನಮಗೆ ಹೇಗೆ ಪ್ರಯೋಜನಕಾರಿ ಎಂದು ತೋರಿಸುವ ಅನುಭವವನ್ನು ಹಂಚಿಕೊಳ್ಳುವ ಮೂಲಕ ಮಾಡಬಹುದು. (ಕೀರ್ತ. 22:22; 40:9) ಹೀಗೆ ಮಾಡುವಾಗೆಲ್ಲ ನಾವು ನಮ್ಮ ನಂಬಿಕೆಯನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತೇವೆ. ನಾವು ಎಷ್ಟೇ ವರ್ಷಗಳಿಂದ ಕೂಟಗಳಿಗೆ ಹಾಜರಾಗುತ್ತಿರಲಿ ಒಂದಂತೂ ನಿಜ, ಏನೆಂದರೆ ಸಹೋದರ ಸಹೋದರಿಯರು, ದೊಡ್ಡವರಾಗಿರಲಿ ಚಿಕ್ಕವರಾಗಿರಲಿ ಅವರು ಕೊಡುವ ಹೃದಯದಾಳದ ಉತ್ತರಗಳು ನಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸುತ್ತವೆ.

6. ಆಧ್ಯಾತ್ಮಿಕವಾಗಿ ಕ್ರಿಯಾಶೀಲರಾಗಿ ಉಳಿಯಲು ಕೂಟಗಳು ಹೇಗೆ ಸಹಾಯಮಾಡುತ್ತವೆ?

6 ನಾವು ಸಭೆಯಾಗಿ ಕೂಡಿಬರುವುದಕ್ಕೆ ಯೆಹೋವ ದೇವರು ಇಷ್ಟು ಮಹತ್ವ ಕೊಡಲು ಇನ್ಯಾವ ಕಾರಣಗಳಿವೆ? ಕೂಟಗಳು, ಸಮ್ಮೇಳನ, ಅಧಿವೇಶನಗಳು ನಾವು ಧೈರ್ಯದಿಂದ ಸುವಾರ್ತೆ ಸಾರಲು, ಜನರು ಆಸಕ್ತಿ ತೋರಿಸದ ಅಥವಾ ವಿರೋಧಿಸುವ ಸನ್ನಿವೇಶಗಳನ್ನು ನಿಭಾಯಿಸಲು ಸಹಾಯಮಾಡುತ್ತವೆ. (ಅ. ಕಾ. 4:23, 31) ಅಲ್ಲಿ ನಡೆಯುವ ಬೈಬಲಾಧರಿತ ಚರ್ಚೆಗಳು ನಮ್ಮ ನಂಬಿಕೆಯನ್ನು ಬಲಗೊಳಿಸುತ್ತವೆ. (ಅ. ಕಾ. 15:32; ರೋಮ. 1:11, 12) ಅಲ್ಲಿ ಆಲಿಸುವ ಬೋಧನೆ, ಪ್ರೋತ್ಸಾಹ ವಿನಿಮಯ ನಮ್ಮ ಸಂತೋಷವನ್ನು ನೂರ್ಮಡಿಗೊಳಿಸಿ ‘ಆಪತ್ತಿನಲ್ಲಿ ಸಮಾಧಾನಪಡಿಸುತ್ತದೆ.’ (ಕೀರ್ತ. 94:12, 13) ಲೋಕವ್ಯಾಪಕವಾಗಿ ಎಲ್ಲ ದೇವಜನರಿಗೆ ಕೊಡಲಾಗುವ ಆಧ್ಯಾತ್ಮಿಕ ಆಹಾರದ ತಯಾರಿಯನ್ನು ಆಡಳಿತ ಮಂಡಲಿಯ ಟೀಚಿಂಗ್‌ ಕಮಿಟಿ ನೋಡಿಕೊಳ್ಳುತ್ತದೆ. ವರ್ಷದ ಪ್ರತಿ ವಾರ ನಾವು ಇಂಥ ಅತ್ಯುತ್ತಮ ಬೋಧನೆಯನ್ನು ಆಲಿಸಿ ಆನಂದಿಸುವಂತೆ ಏರ್ಪಾಡು ಮಾಡಿರುವುದಕ್ಕೆ ನಾವೆಷ್ಟು ಕೃತಜ್ಞರು!

7, 8. (1) ಸಭಾ ಕೂಟಗಳ ಮುಖ್ಯ ಉದ್ದೇಶವೇನು? (2) ಕೂಟಗಳು ನಿಮಗೆ ಹೇಗೆ ಸಹಾಯಮಾಡುತ್ತವೆ?

7 ಕೂಟಗಳಿಗೆ ಕೂಡಿಬರಲು, ನಮಗೆ ಸಿಗುವ ಪ್ರಯೋಜನಗಳಷ್ಟೇ ಕಾರಣವಲ್ಲ. ಅದಕ್ಕಿಂತ ಮುಖ್ಯವಾದ ಇನ್ನೊಂದು ಕಾರಣವಿದೆ. ಅದೇನೆಂದರೆ ನಾವು ಸಭಾ ಕೂಟಗಳಲ್ಲಿ ಯೆಹೋವನನ್ನು ಆರಾಧಿಸುತ್ತೇವೆ. (ಕೀರ್ತನೆ 95:6 ಓದಿ.) ಮಹೋನ್ನತ ದೇವರಾದ ಯೆಹೋವನನ್ನು ಆರಾಧಿಸುವುದು ಎಂಥ ದೊಡ್ಡ ಸುಯೋಗ! (ಕೊಲೊ. 3:16) ಯೆಹೋವನು ನಮ್ಮ ಆರಾಧನೆಗೆ ಅರ್ಹನು. ಸಭೆಯಾಗಿ ಕೂಡಿಬಂದು, ಕೂಟಗಳಲ್ಲಿ ಭಾಗವಹಿಸುವ ಮೂಲಕ ನಾವು ಆತನನ್ನು ಆರಾಧಿಸುತ್ತೇವೆ. (ಪ್ರಕ. 4:11) ‘ಸಭೆಯಾಗಿ ಕೂಡಿಬರುವುದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದಂತೆ’ ಬೈಬಲ್‌ ಉತ್ತೇಜಿಸುವುದು ಇದೇ ಕಾರಣಕ್ಕೆ.—ಇಬ್ರಿ. 10:25.

8 ಯೆಹೋವನು ಈ ದುಷ್ಟ ಲೋಕಕ್ಕೆ ಅಂತ್ಯ ತರುವ ವರೆಗೆ ತಾಳಿಕೊಂಡಿರಲು ಕ್ರೈಸ್ತ ಕೂಟಗಳು ಸಹಾಯ ಮಾಡುತ್ತವೆಂದು ನಾವು ನಂಬುತ್ತೇವೋ? ಹಾಗಿದ್ದಲ್ಲಿ ಕಾರ್ಯನಿರತ ಜೀವನದಲ್ಲೂ ನಮಗೆ ಕೂಟಗಳು “ಹೆಚ್ಚು ಪ್ರಮುಖವಾದ ವಿಷಯ” ಆಗಿದ್ದು ಅದಕ್ಕಾಗಿ ಸಮಯ ಮಾಡಿಕೊಳ್ಳಬೇಕು. (ಫಿಲಿ. 1:10) ಯಾವುದಾದರೂ ಗಂಭೀರ ಕಾರಣವೊಂದು ಬಿಟ್ಟರೆ ಬೇರೆ ಯಾವುದೂ ನಮ್ಮ ಕೂಟದ ಹಾಜರಿಯನ್ನು ತಪ್ಪಿಸಬಾರದು.

ಯಥಾರ್ಥ ಹೃದಯದ ಜನರಿಗಾಗಿ ಹುಡುಕಿ

9. ಸುವಾರ್ತೆ ಸಾರುವುದು ಪ್ರಾಮುಖ್ಯ ಕೆಲಸ ಎಂದು ನಾವು ಏಕೆ ಹೇಳಬಹುದು?

9 ಸುವಾರ್ತೆ ಸಾರುವ ಕೆಲಸದಲ್ಲಿ ಪೂರ್ಣವಾಗಿ ಪಾಲ್ಗೊಳ್ಳುವುದು ಸಹ ಸಂಘಟನೆಯೊಂದಿಗೆ ಹೆಜ್ಜೆಹಾಕಲು ನಮಗೆ ಸಹಾಯಮಾಡುತ್ತದೆ. ಯೇಸು ಭೂಮಿಯಲ್ಲಿದ್ದಾಗ ಸಾರುವ ಕೆಲಸವನ್ನು ಪ್ರಾರಂಭಿಸಿದನು. (ಮತ್ತಾ. 28:19, 20) ಆಗಿನಿಂದ ಯೆಹೋವನ ಸಂಘಟನೆ ಸಾರುವ ಹಾಗೂ ಶಿಷ್ಯರನ್ನಾಗಿ ಮಾಡುವ ಕೆಲಸದ ಮೇಲೆ ಗಮನ ಕೇಂದ್ರೀಕರಿಸಿದೆ. ಈ ಕೆಲಸವನ್ನು ದೇವದೂತರು ಸಹ ಬೆಂಬಲಿಸುತ್ತಾರೆ, ನಮ್ಮನ್ನು ‘ನಿತ್ಯಜೀವಕ್ಕಾಗಿ ಯೋಗ್ಯವಾದ ಮನೋಭಾವವಿರುವ’ ಜನರ ಕಡೆಗೆ ಮಾರ್ಗದರ್ಶಿಸುತ್ತಾರೆ. ಇದಕ್ಕೆ ಅನೇಕ ಅನುಭವಗಳು ಸಾಕ್ಷಿಯಾಗಿವೆ. (ಅ. ಕಾ. 13:48; ಪ್ರಕ. 14:6, 7) ಯೆಹೋವನ ಸಂಘಟನೆಯ ಭೂಭಾಗವು ಇಂದು ಅತಿ ಪ್ರಾಮುಖ್ಯವಾಗಿರುವ ಈ ಕೆಲಸವನ್ನು ಸಂಘಟಿಸಿ, ಬೆಂಬಲಿಸುವುದರಲ್ಲಿ ಕಾರ್ಯಮಗ್ನವಾಗಿದೆ. ನಿಮ್ಮ ವಿಷಯದಲ್ಲೇನು? ಸುವಾರ್ತೆ ಸಾರುವುದಕ್ಕೆ ನಿಮ್ಮ ಜೀವನದಲ್ಲೂ ಪ್ರಮುಖ ಸ್ಥಾನವಿದೆಯಾ?

10. (1) ಸತ್ಯದ ಕಡೆಗೆ ಪ್ರೀತಿಯನ್ನು ಹೇಗೆ ಹೆಚ್ಚಿಸಬಹುದು ಎನ್ನುವುದಕ್ಕೆ ಉದಾಹರಣೆ ಕೊಡಿ. (2) ಸತ್ಯದ ಮೇಲಿನ ನಿಮ್ಮ ಪ್ರೀತಿಯನ್ನು ನಿಮ್ಮ ಸೇವೆಯು ಹೇಗೆ ಹೆಚ್ಚಿಸಿದೆ?

10 ಸುವಾರ್ತೆಯನ್ನು ಹುರುಪಿನಿಂದ ಸಾರುವುದು ಸತ್ಯದ ಕಡೆಗಿನ ನಮ್ಮ ಪ್ರೀತಿಯನ್ನು ಹೆಚ್ಚಿಸುತ್ತದೆ. ತುಂಬ ಸಮಯದಿಂದ ಹಿರಿಯರಾಗಿ ಮತ್ತು ರೆಗ್ಯುಲರ್‌ ಪಯನೀಯರರಾಗಿ ಸೇವೆ ಮಾಡುತ್ತಿರುವ ಮಿಚಲ್‌ ಎಂಬ ಸಹೋದರ ಏನನ್ನುತ್ತಾರೆ ಕೇಳಿ. “ಜನರಿಗೆ ಸುವಾರ್ತೆ ಸಾರುವುದೆಂದರೆ ನನಗೆ ತುಂಬ ಇಷ್ಟ. ನಾನು ಮೊದಲು ಹೊಸದಾಗಿ ಬಂದಿರುವ ಕಾವಲಿನಬುರುಜು ಅಥವಾ ಎಚ್ಚರ! ಪತ್ರಿಕೆಯಲ್ಲಿರುವ ಯಾವುದಾದರೊಂದು ಲೇಖನದ ಕುರಿತು ಯೋಚಿಸುತ್ತೇನೆ. ಅದರಲ್ಲಿ ಅಡಗಿರುವ ವಿವೇಕ, ಆಳವಾದ ಜ್ಞಾನ, ಪ್ರತಿ ಸಂಚಿಕೆಯಲ್ಲಿ ವಿಷಯಗಳನ್ನು ಸಮತೋಲನದಿಂದ ಪ್ರಸ್ತುತಪಡಿಸಿರುವುದು ಒಂದು ಅದ್ಭುತವೆನಿಸುತ್ತದೆ! ಇದರ ಬಗ್ಗೆ ಜನರಿಗೆ ಹೇಗನಿಸಬಹುದು, ಅವರ ಆಸಕ್ತಿಯನ್ನು ನಾನು ಹೇಗೆ ಕೆರಳಿಸಬಹುದು ಎಂದು ನೋಡಲು ಸೇವೆಗೆ ಹೋಗುತ್ತೇನೆ. ಈ ಸೇವೆ ನನಗೆ ಜೀವನದಲ್ಲಿ ಪ್ರಾಮುಖ್ಯ ವಿಷಯಗಳ ಮೇಲೆ ಗಮನ ನೆಡಲು ಸಹಾಯಮಾಡುತ್ತದೆ. ಯಾವುದೇ ಕಾರಣಕ್ಕೂ ಸೇವೆಗೆಂದು ಬದಿಗಿರಿಸಿದ ಸಮಯದಲ್ಲಿ ಬೇರೆ ಯಾವ ಕೆಲಸವೂ ಬಾರದಂತೆ ನೋಡಿಕೊಳ್ಳುತ್ತೇನೆ. ಅದೇನಿದ್ದರೂ ಸೇವೆಯ ಮುಂಚೆ ಇಲ್ಲವೆ ನಂತರ.” ಈ ಸಹೋದರನಂತೆ ನಾವು ಸಹ ನಮ್ಮ ಪವಿತ್ರ ಸೇವೆಯಲ್ಲಿ ನಿರತರಾಗಿದ್ದರೆ ಈ ಕಡೇ ದಿವಸಗಳಲ್ಲಿ ನಂಬಿಗಸ್ತರಾಗಿ ಉಳಿಯುತ್ತೇವೆ.1 ಕೊರಿಂಥ 15:58 ಓದಿ.

ಆಧ್ಯಾತ್ಮಿಕ ಏರ್ಪಾಡುಗಳಿಂದ ಪ್ರಯೋಜನ ಪಡೆಯಿರಿ

11. ಯೆಹೋವನು ಕೊಡುವ ಆಧ್ಯಾತ್ಮಿಕ ಆಹಾರದಿಂದ ಪೂರ್ಣ ಪ್ರಯೋಜನ ಪಡೆಯಬೇಕು ಏಕೆ?

11 ನಾವು ಆಧ್ಯಾತ್ಮಿಕವಾಗಿ ಬಲವಾಗಿರಲು ಯೆಹೋವನು ಆಧ್ಯಾತ್ಮಿಕ ಆಹಾರವನ್ನು ಭರಪೂರವಾಗಿ ಕೊಡುತ್ತಿದ್ದಾನೆ. ನೀವು ಯಾವುದಾದರೊಂದು ಲೇಖನವನ್ನು ಓದಿದಾಗ ‘ನನಗೆ ಬೇಕಾದದ್ದೇ ಇದರಲ್ಲಿದೆ’ ‘ಇದನ್ನು ಯೆಹೋವನು ನನಗಾಗಿಯೇ ಬರೆದಿರೋ ಹಾಗಿದೆ’ ಎಂದು ಒಮ್ಮೆಯಾದರೂ ಅನಿಸಿರಲೇಬೇಕು. ಇದು ಆಕಸ್ಮಿಕವಲ್ಲ. ಯೆಹೋವನು ನಿಜವಾಗಿಯೂ ಇಂಥ ಒದಗಿಸುವಿಕೆಗಳ ಮೂಲಕ ನಮ್ಮನ್ನು ಉಪದೇಶಿಸುತ್ತಾನೆ, ಮಾರ್ಗದರ್ಶಿಸುತ್ತಾನೆ. ಏಕೆಂದರೆ “ನಿನ್ನನ್ನು ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವೆನು; ನಿನ್ನನ್ನು ಕಟಾಕ್ಷಿಸಿ ಆಲೋಚನೆಹೇಳುವೆನು” ಎಂದು ಯೆಹೋವನೇ ಅಂದಿದ್ದಾನೆ. (ಕೀರ್ತ. 32:8) ಆದರೆ ನಮ್ಮ ಕುರಿತೇನು? ಯೆಹೋವನು ಕೊಡುವ ಎಲ್ಲ ಆಧ್ಯಾತ್ಮಿಕ ಆಹಾರದಿಂದ ನಾವು ಪ್ರಯೋಜನ ಪಡೆದುಕೊಳ್ಳುತ್ತಿದ್ದೇವಾ? ಅದರ ಕುರಿತು ಧ್ಯಾನಿಸುತ್ತೇವಾ? ಹಾಗೆ ಮಾಡುವಲ್ಲಿ ನಾವು ಈ ಕಷ್ಟಕರ ಸಮಯದಲ್ಲಿ ಆಧ್ಯಾತ್ಮಿಕವಾಗಿ ಸೊರಗಿ ಹೋಗೆವು. ದೇವರ ಸೇವೆ ಮಾಡುತ್ತಾ ಮುಂದುವರಿಯುವೆವು.ಕೀರ್ತನೆ 1:1-3; 35:28; 119:97 ಓದಿ.

12. ನಮಗೆ ಸಿಗುವ ಆಧ್ಯಾತ್ಮಿಕ ಆಹಾರವನ್ನು ಮಾಮೂಲಿಯದ್ದಾಗಿ ನೋಡದಂತೆ ಯಾವುದು ಸಹಾಯಮಾಡುತ್ತದೆ?

12 ನಮಗೆ ನಿಯತವಾಗಿ ಸಮೃದ್ಧ ಆಧ್ಯಾತ್ಮಿಕ ಆಹಾರ ಸಿಗಬೇಕಾದರೆ ಅದರ ಹಿಂದೆ ತುಂಬ ಕೆಲಸ ನಡೆಯುತ್ತದೆ. ಅದನ್ನು ತಿಳಿದುಕೊಳ್ಳುವುದರಿಂದ ಅದರ ಕಡೆಗೆ ನಮ್ಮ ಗಣ್ಯತೆ ಹೆಚ್ಚಾಗುತ್ತದೆ. ಪ್ರಕಾಶನಗಳನ್ನು ಮುದ್ರಿಸಬೇಕಾದರೆ ಹಾಗೂ ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ಹಾಕಬೇಕಾದರೆ ಮೊದಲು ಸಂಶೋಧನೆ, ಲೇಖನಗಳನ್ನು ಬರೆಯುವುದು, ಅದು ಸರಿಯಾಗಿದೆಯಾ ಎಂದು ನೋಡಿ ತಿದ್ದುವುದು, ಚಿತ್ರಗಳನ್ನು ಅದಕ್ಕೆ ಸೇರಿಸುವುದು, ಭಾಷಾಂತರ ಇದೆಲ್ಲವನ್ನು ಮಾಡಲಾಗುತ್ತದೆ. ಇದರ ಉಸ್ತುವಾರಿ ಆಡಳಿತ ಮಂಡಲಿಯ ರೈಟಿಂಗ್‌ ಕಮಿಟಿಯದ್ದು. ಅನಂತರ ಪ್ರಿಂಟಿಂಗ್‌ ಬ್ರಾಂಚ್‌ ಅದನ್ನು ಹತ್ತಿರದ ಮತ್ತು ದೂರದ ಸಭೆಗಳಿಗೆ ರವಾನಿಸುತ್ತದೆ. ಇಷ್ಟೆಲ್ಲ ಕೆಲಸ ಯಾಕೆ ಮಾಡಲಾಗುತ್ತದೆ? ಯೆಹೋವನ ಜನರು ಹೇರಳವಾಗಿ ಆಧ್ಯಾತ್ಮಿಕ ಆಹಾರ ಪಡೆಯಬೇಕೆಂಬುದೇ ಇದರ ಉದ್ದೇಶ. (ಯೆಶಾ. 65:13) ಹಾಗಾದರೆ ನಾವೇನು ಮಾಡಬೇಕು? ಯೆಹೋವನ ಸಂಘಟನೆಯಿಂದ ಬರುವ ಎಲ್ಲ ಆಧ್ಯಾತ್ಮಿಕ ಆಹಾರದ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು.—ಕೀರ್ತ. 119:27.

ಸಂಘಟನೆಯ ಏರ್ಪಾಡುಗಳನ್ನು ಬೆಂಬಲಿಸಿ

13, 14. (1) ಯೆಹೋವನ ಏರ್ಪಾಡುಗಳನ್ನು ಸ್ವರ್ಗದಲ್ಲಿ ಯಾರು ಬೆಂಬಲಿಸುತ್ತಿದ್ದಾರೆ? (2) ಅಂಥದ್ದೇ ಬೆಂಬಲವನ್ನು ನಾವು ಹೇಗೆ ಕೊಡಬಹುದು?

13 ಅಪೊಸ್ತಲ ಯೋಹಾನನು ದರ್ಶನದಲ್ಲಿ ಬಿಳೀ ಕುದುರೆಯ ಮೇಲೆ ಸವಾರಿ ಮಾಡುತ್ತಿರುವ ಯೇಸುವನ್ನು ನೋಡಿದನು. ಯೆಹೋವನ ವಿರುದ್ಧ ದಂಗೆಯೆದ್ದವರನ್ನು ಸದೆಬಡಿಯಲು ಅವನು ಮುನ್ನುಗ್ಗುತ್ತಿದ್ದನು. (ಪ್ರಕ. 19:11-15) ನಂಬಿಗಸ್ತ ದೇವದೂತರು ಹಾಗೂ ಪುನರುತ್ಥಾನವಾಗಿ ಸ್ವರ್ಗದಲ್ಲಿರುವ ಅಭಿಷಿಕ್ತರು ಅವನನ್ನು ಹಿಂಬಾಲಿಸುತ್ತಿದ್ದರು. ಹೀಗೆ ತಮ್ಮ ಸಂಪೂರ್ಣ ಬೆಂಬಲವನ್ನು ತಮ್ಮ ನಾಯಕನಿಗೆ ತೋರಿಸುತ್ತಿದ್ದರು. (ಪ್ರಕ. 19:11-15) ಯೆಹೋವನ ಏರ್ಪಾಡುಗಳಿಗೆ ಬೆಂಬಲ ನೀಡುವುದರಲ್ಲಿ ಇವರು ಎಂಥ ಉತ್ಕೃಷ್ಟ ಮಾದರಿ!

14 ಅದೇ ರೀತಿಯಲ್ಲಿ ಮಹಾ ಸಮೂಹದವರು ಭೂಮಿಯಲ್ಲಿರುವ ಅಭಿಷಿಕ್ತ ಕ್ರೈಸ್ತರ ಕೆಲಸಕ್ಕೆ ಬೆಂಬಲ ಕೊಡುತ್ತಿದ್ದಾರೆ. (ಜೆಕರ್ಯ 8:23 ಓದಿ.) ಹಾಗಾದರೆ ವೈಯಕ್ತಿಕವಾಗಿ ನಾವು ಹೇಗೆ ಯೆಹೋವನು ಮಾಡಿರುವ ಏರ್ಪಾಡುಗಳಿಗೆ ಬೆಂಬಲ ಕೊಡುವುದು? ಒಂದು ವಿಧ ಸಂಘಟನೆಯ ಕೆಲಸದಲ್ಲಿ ಮುಂದಾಳತ್ವ ವಹಿಸುತ್ತಿರುವವರಿಗೆ ಅಧೀನತೆ ತೋರಿಸುವುದು. (ಇಬ್ರಿ. 13:7, 17) ಅದನ್ನು ಮಾಡಲು ಮೊದಲು ಅವಕಾಶ ಸಿಗುವದು ನಮ್ಮ ಸಭೆಗಳಲ್ಲಿ. ಹಿರಿಯರ ಬಗ್ಗೆ ನಾವಾಡುವ ಮಾತುಗಳು, ಅವರ ಕಡೆಗೂ ಅವರು ಮಾಡುವ ಕೆಲಸದ ಕಡೆಗೂ ನಮಗೆ ಗೌರವವಿದೆಯೆಂದು ತೋರಿಸುತ್ತವಾ? ಹೆತ್ತವರೇ, ಹಿರಿಯರನ್ನು ಗೌರವಿಸುವಂತೆ ಹಾಗೂ ಅವರಿಂದ ಸಲಹೆಗಳನ್ನು ಪಡೆಯುವಂತೆ ನೀವು ನಿಮ್ಮ ಮಕ್ಕಳನ್ನು ಪ್ರೋತ್ಸಾಹಿಸುತ್ತೀರಾ? ಲೋಕವ್ಯಾಪಕವಾಗಿ ನಡೆಯುತ್ತಿರುವ ಕೆಲಸಕ್ಕೆ ಬೆಂಬಲ ನೀಡಲು ಕಾಣಿಕೆ ಕೊಡುವುದರ ಕುರಿತು ನಾವು ಕುಟುಂಬವಾಗಿ ಚರ್ಚಿಸುತ್ತೇವಾ? (ಜ್ಞಾನೋ. 3:9; 1 ಕೊರಿಂ. 16:2; 2 ಕೊರಿಂ. 8:12) ರಾಜ್ಯ ಸಭಾಗೃಹವನ್ನು ಸುಸ್ಥಿತಿಯಲ್ಲಿಡುವ ಕೆಲಸದಲ್ಲಿ ಭಾಗಿಗಳಾಗುವ ಸುಯೋಗವನ್ನು ಅಮೂಲ್ಯವಾಗಿ ಎಣಿಸುತ್ತೇವಾ? ಎಲ್ಲಿ ಗೌರವ, ಐಕ್ಯತೆ ಇರುತ್ತದೋ ಅಲ್ಲಿ ಪವಿತ್ರಾತ್ಮ ಸರಾಗವಾಗಿ ಕೆಲಸಮಾಡುತ್ತದೆ. ಪವಿತ್ರಾತ್ಮವು ನಾವು ಈ ಕಡೇ ದಿವಸಗಳಲ್ಲಿ ದೇವರ ಸೇವೆ ಮಾಡುತ್ತಾ ಮುಂದುವರಿಯಲು ಸಹಾಯಮಾಡುತ್ತದೆ.—ಯೆಶಾ. 40:29-31.

ಸಾರುವ ಸಂದೇಶಕ್ಕೆ ಅನುಗುಣವಾಗಿ ಜೀವಿಸಿ

15. ಯೆಹೋವನ ಮಹಾನ್‌ ಉದ್ದೇಶಕ್ಕನುಸಾರ ಜೀವಿಸಲು ನಾವು ನಿರಂತರ ಹೋರಾಟ ಮಾಡಬೇಕು ಏಕೆ?

15 ನಾವು ದೇವರ ಸೇವೆಯನ್ನು ಮಾಡುತ್ತಾ ಇದ್ದು ಸಂಘಟನೆಯೊಂದಿಗೆ ಹೆಜ್ಜೆ ಹಾಕಲು ಮಾಡಬೇಕಾದ ಇನ್ನೊಂದು ವಿಷಯ, ಸಾರುವ ಸಂದೇಶಕ್ಕೆ ಅನುಗುಣವಾಗಿ ಜೀವಿಸುವುದೇ. ಇದನ್ನು ಮಾಡುವುದು ಹೇಗೆ? ‘ಕರ್ತನಿಗೆ ಅಂಗೀಕಾರಾರ್ಹವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವ’ ಮೂಲಕ. (ಎಫೆ. 5:10, 11) ಇದು ಸುಲಭವಲ್ಲ. ಏಕೆಂದರೆ ನಮ್ಮ ಅಪರಿಪೂರ್ಣ ಶರೀರ, ಸೈತಾನ ಹಾಗೂ ಈ ಲೋಕ ತರುವ ಒತ್ತಡಗಳ ವಿರುದ್ಧ ನಾವು ಹೋರಾಡುತ್ತಲೇ ಇರಬೇಕು. ನಮ್ಮಲ್ಲಿ ಕೆಲವು ಸಹೋದರ ಸಹೋದರಿಯರಂತೂ ಯೆಹೋವನೊಂದಿಗೆ ಒಳ್ಳೇ ಸಂಬಂಧವನ್ನು ಕಾಪಾಡಿಕೊಳ್ಳಲು ಪ್ರತಿದಿನ ಕಠಿನ ಹೋರಾಟ ಮಾಡುತ್ತಿದ್ದಾರೆ. ಅವರು ಒಳ್ಳೇದನ್ನು ಮಾಡಲು ಹೋರಾಡುತ್ತಿರುವುದರಿಂದ ಯೆಹೋವನು ಅವರನ್ನು ತುಂಬ ಪ್ರೀತಿಸುತ್ತಾನೆ. ಹಾಗಾಗಿ ಪ್ರಯತ್ನವನ್ನು ಎಂದೂ ಬಿಟ್ಟುಕೊಡಬೇಡಿ. ಯೆಹೋವನ ಚಿತ್ತಕ್ಕನುಸಾರ ಜೀವಿಸುವುದರಿಂದ ನಮಗೆ ತುಂಬ ತೃಪ್ತಿ ಸಿಗುತ್ತದೆ, ನಾವು ಮಾಡುವ ಆರಾಧನೆ ವ್ಯರ್ಥವಲ್ಲ ಎಂಬ ಆಶ್ವಾಸನೆಯನ್ನೂ ಕೊಡುತ್ತದೆ.—1 ಕೊರಿಂ. 9:24-27.

16, 17. (1) ನಾವು ಗಂಭೀರ ಪಾಪ ಮಾಡಿರುವಲ್ಲಿ ಏನು ಮಾಡಬೇಕು? (2) ಅನಿತಾಳ ಉದಾಹರಣೆಯಿಂದ ನಾವೇನು ಕಲಿಯಬಹುದು?

16 ಒಂದು ವೇಳೆ ನಾವು ಗಂಭೀರ ಪಾಪವನ್ನು ಮಾಡಿರುವಲ್ಲಿ? ಸಾಧ್ಯವಾದಷ್ಟು ತ್ವರಿತವಾಗಿ ನೆರವು ಪಡೆಯಿರಿ. ತಪ್ಪನ್ನು ಮುಚ್ಚಿಟ್ಟರೆ ಪರಿಸ್ಥಿತಿ ಇನ್ನಷ್ಟು ಹದಗೆಡುವುದು. ದಾವೀದನು ಏನೆಂದನು ಜ್ಞಾಪಿಸಿಕೊಳ್ಳಿ. ಪಾಪವನ್ನು ಮುಚ್ಚಿಟ್ಟಾಗ ‘ದಿನವೆಲ್ಲಾ ನರಳುವದರಿಂದ ನನ್ನ ಎಲುಬುಗಳು ಸವೆದುಹೋಗುತ್ತಿದ್ದವು’ ಎಂದನು. (ಕೀರ್ತ. 32:3) ಹೌದು, ಪಾಪವನ್ನು ಮುಚ್ಚಿಡುವಲ್ಲಿ ನಾವು ಭಾವನಾತ್ಮಕವಾಗಿಯೂ ಆಧ್ಯಾತ್ಮಿಕವಾಗಿಯೂ ಬಳಲಿಹೋಗುತ್ತೇವೆ. ಅದರ ಬದಲು ‘ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವುದಾದರೆ ಕರುಣೆ ದೊರೆಯುವದು.’—ಜ್ಞಾನೋ. 28:13.

17 ಅನಿತಾ ಎಂಬವರ ಉದಾಹರಣೆ ನೋಡಿ. * ಹದಿವಯಸ್ಸಿನಲ್ಲೇ ಪಯನೀಯರ್‌ ಆಗಿದ್ದ ಆಕೆ ಇಬ್ಬಗೆಯ ಜೀವನ ನಡೆಸತೊಡಗಿದಳು. ಇದು ಅವಳ ಮೇಲೆ ಯಾವ ಪರಿಣಾಮ ಬೀರಿತು? “ನನ್ನ ಮನಸ್ಸಾಕ್ಷಿ ನನ್ನನ್ನು ಚುಚ್ಚುತ್ತಿತ್ತು. ನನಗೆ ಸಂತೋಷವೇ ಇರಲಿಲ್ಲ. ಯಾವಾಗಲೂ ಖಿನ್ನಳಾಗಿರುತ್ತಿದ್ದೆ” ಎನ್ನುತ್ತಾಳೆ ಆಕೆ. ಅನಂತರ ಏನು ಮಾಡಿದಳು? ಒಂದು ದಿನ ಕೂಟದಲ್ಲಿ ಯಾಕೋಬ 5:14, 15ನ್ನು ಚರ್ಚಿಸಲಾಯಿತು. ಆಗ ತನಗೆ ಹಿರಿಯರ ಸಹಾಯ ಬೇಕು ಎನ್ನುವುದು ಅನಿತಾಳ ಅರಿವಿಗೆ ಬಂತು. ಹಿರಿಯರ ಸಹಾಯವನ್ನು ಕೇಳಿಕೊಂಡಳು. ಈಗ ಆಕೆ ಹೀಗನ್ನುತ್ತಾಳೆ: “ಆ ವಚನಗಳು ಆಧ್ಯಾತ್ಮಿಕವಾಗಿ ವಾಸಿಯಾಗಲು ಯೆಹೋವನು ಬರೆದುಕೊಟ್ಟ ಔಷಧಿಯಂತಿವೆ. ಔಷಧಿ ತಿನ್ನೋದು ಸುಲಭವಲ್ಲ. ಆದರೆ ಗುಣವಾಗೋದು ಗ್ಯಾರಂಟಿ. ಆ ವಚನಗಳಲ್ಲಿರುವ ಸಲಹೆಯಂತೆ ಮಾಡಿದೆ. ಅದರಿಂದ ನನಗೆ ಸಹಾಯವಾಯಿತು.” ಇದಾಗಿ ಈಗ ಕೆಲವು ವರ್ಷಗಳು ಕಳೆದಿವೆ. ಅನಿತಾ ಈಗ ಶುದ್ಧ ಮನಸ್ಸಾಕ್ಷಿಯೊಂದಿಗೆ ಹುರುಪಿನಿಂದ ಯೆಹೋವನ ಸೇವೆ ಮಾಡುತ್ತಿದ್ದಾರೆ.

18. ಏನು ಮಾಡುವ ಸಂಕಲ್ಪ ನಮ್ಮದಾಗಿರಬೇಕು?

18 ಈ ಕಡೇ ದಿವಸಗಳಲ್ಲಿ ಯೆಹೋವನ ಅಪ್ರತಿಮ ಸಂಘಟನೆಯ ಭಾಗವಾಗಿರುವುದು ನಮಗೆ ಎಂಥ ದೊಡ್ಡ ಸುಯೋಗ! ಅದನ್ನು ಮಾಮೂಲಿಯದ್ದಾಗಿ ಎಂದಿಗೂ ಪರಿಗಣಿಸದಿರೋಣ. ಅದಕ್ಕೆ ಬದಲು ಕುಟುಂಬವಾಗಿ ಕೂಟಗಳಿಗೆ ತಪ್ಪದೆ ಹಾಜರಾಗೋಣ. ಯಥಾರ್ಥ ಹೃದಯದ ಜನರನ್ನು ಹುಡುಕೋಣ. ನಿಯತವಾಗಿ ಸಿಗುವ ಆಧ್ಯಾತ್ಮಿಕ ಆಹಾರದಿಂದ ಪೂರ್ಣ ಪ್ರಯೋಜನ ಪಡೆಯೋಣ. ಮುಂದಾಳತ್ವ ವಹಿಸುವವರಿಗೆ ಬೆಂಬಲ ಕೊಡೋಣ. ಸಾರುವ ಸಂದೇಶಕ್ಕೆ ಅನುಗುಣವಾಗಿ ಜೀವಿಸೋಣ. ಹೀಗೆ ಮಾಡುವುದಾದರೆ ನಾವು ಯೆಹೋವನ ಸಂಘಟನೆಯ ಜೊತೆಜೊತೆಗೆ ಹೆಜ್ಜೆಹಾಕುವೆವು, ಮಾತ್ರವಲ್ಲ ಒಳ್ಳೇದನ್ನು ಮಾಡುವುದರಲ್ಲಿ ಯಾವತ್ತೂ ದಣಿಯೆವು!

[ಪಾದಟಿಪ್ಪಣಿ]

^ ಪ್ಯಾರ. 17 ಹೆಸರನ್ನು ಬದಲಾಯಿಸಲಾಗಿದೆ.

[ಅಧ್ಯಯನ ಪ್ರಶ್ನೆಗಳು]

[ಪುಟ 27ರಲ್ಲಿರುವ ಚಿತ್ರ]

[ಪುಟ 29ರಲ್ಲಿರುವ ಚಿತ್ರ]

[ಪುಟ 29ರಲ್ಲಿರುವ ಚೌಕ]

ಯೆಹೋವನ ಸಂಘಟನೆಯ ಭೂಭಾಗದಲ್ಲಿ . . .

1. ಆಡಳಿತ ಮಂಡಲಿ

2. ಬ್ರಾಂಚ್‌ ಕಮಿಟಿಗಳು

3. ಸಂಚರಣ ಮೇಲ್ವಿಚಾರಕರು

4. ಹಿರಿಯರ ಮಂಡಲಿಗಳು

5. ಸಭೆಗಳು

6. ಪ್ರಚಾರಕರು

[ಚಿತ್ರ]

[ಪುಟ 31ರಲ್ಲಿರುವ ಚಿತ್ರ]

ಯೆಹೋವನ ಮಹಾನ್‌ ಸಂಘಟನೆಯ ಭಾಗವಾಗುವ ಅವಕಾಶ ಎಲ್ಲರಿಗೂ ಇದೆ ಎಂದು ಮನಗಾಣಿಸಿ