ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವವುಳ್ಳ ದೇವರ ಕುರಿತು ತಿಳಿಸುವ ಸೃಷ್ಟಿ

ಜೀವವುಳ್ಳ ದೇವರ ಕುರಿತು ತಿಳಿಸುವ ಸೃಷ್ಟಿ

“ಯೆಹೋವನೇ, ನಮ್ಮ ದೇವರೇ, ನೀನು ಮಹಿಮೆ . . . ಪಡೆಯಲು ಯೋಗ್ಯನಾಗಿದ್ದೀ; ಏಕೆಂದರೆ ಎಲ್ಲವನ್ನೂ ನೀನೇ ಸೃಷ್ಟಿಸಿದಿ.”—ಪ್ರಕ. 4:11.

1. ನಮ್ಮ ನಂಬಿಕೆ ದೃಢವಾಗಿರಲು ಏನು ಮಾಡಬೇಕು?

ನೋಡಿದ್ದನ್ನು ಮಾತ್ರ ನಂಬುತ್ತೇವೆ ಎಂದು ಅನೇಕರು ಹೇಳುತ್ತಾರೆ. “ಯಾವ ಮನುಷ್ಯನೂ ಎಂದಿಗೂ ದೇವರನ್ನು ಕಂಡಿಲ್ಲ” ಎಂದು ಬೈಬಲ್‌ ಹೇಳುತ್ತದೆ. (ಯೋಹಾ. 1:18) ಹಾಗಿರುವಾಗ ಇಂಥವರು ಯೆಹೋವ ದೇವರನ್ನು ನಂಬುವಂತೆ ನಾವು ಹೇಗೆ ಸಹಾಯಮಾಡಬಲ್ಲೆವು? ‘ಅದೃಶ್ಯ ದೇವರಾಗಿರುವ’ ಯೆಹೋವನಲ್ಲಿ ನಮ್ಮ ನಂಬಿಕೆ ಬಲವಾಗಿರಬೇಕಾದರೆ ಏನು ಮಾಡಬೇಕು? (ಕೊಲೊ. 1:15) ಮೊದಲಾಗಿ ಯೆಹೋವ ದೇವರ ಕುರಿತಾದ ಸತ್ಯಗಳನ್ನು ಮಸುಕುಗೊಳಿಸುವ ಬೋಧನೆಗಳನ್ನು ನಾವು ಗುರುತಿಸಬೇಕು. ಅವು “ದೇವರ ಜ್ಞಾನಕ್ಕೆ ವಿರುದ್ಧವಾಗಿ” ಇವೆಯೆಂದು ರುಜುಪಡಿಸಲು ಬೈಬಲನ್ನು ಕುಶಲತೆಯಿಂದ ಬಳಸಬೇಕು.—2 ಕೊರಿಂ. 10:4, 5.

2, 3. ದೇವರ ಕುರಿತಾದ ಸತ್ಯಗಳು ತಿಳಿಯದಂತೆ ಜನರನ್ನು ಕುರುಡು ಮಾಡುವ ಎರಡು ಬೋಧನೆಗಳಾವುವು?

2 ದೇವರ ಕುರಿತಾದ ಸತ್ಯದ ಕಡೆಗೆ ಜನರನ್ನು ಕುರುಡಾಗಿಸುವ, ಎಲ್ಲ ಕಡೆ ಹರಡಿರುವ ಒಂದು ಸುಳ್ಳು ಬೋಧನೆ ವಿಕಾಸವಾದ. ಈ ಮಾನವ ತರ್ಕ ಬೈಬಲಿಗೆ ವಿರುದ್ಧವಾಗಿದೆ. ಜನರಿಗೆ ನಿರೀಕ್ಷೆ ಇಲ್ಲದಂತೆ ಮಾಡುತ್ತದೆ. ಎಲ್ಲ ಜೀವಿಗಳು ತಾನಾಗಿಯೇ ಅಸ್ತಿತ್ವಕ್ಕೆ ಬಂದವೆಂದು ವಿಕಾಸವಾದ ಹೇಳುತ್ತದೆ. ಇದು ಒಂದು ರೀತಿಯಲ್ಲಿ ಮನುಷ್ಯನ ಜೀವನಕ್ಕೆ ಒಂದು ಉದ್ದೇಶವೇ ಇಲ್ಲವೆಂದು ಹೇಳಿದಂತಿದೆ.

3 ಇನ್ನೊಂದು ಕಡೆ ಕ್ರೈಸ್ತಪ್ರಪಂಚದ ಕೆಲವರು ಬೈಬಲನ್ನು ಗೌರವಿಸುತ್ತಾರಾದರೂ, ದೇವರು ನಮ್ಮ ಭೂಮಿ ಹಾಗೂ ಅದರಲ್ಲಿರುವ ಎಲ್ಲವನ್ನು ಅಕ್ಷರಾರ್ಥಕ 24 ತಾಸುಗಳ ಆರು ದಿನಗಳಲ್ಲಿ ಸೃಷ್ಟಿಸಿದನು ಮತ್ತು ಈ ಸೃಷ್ಟಿಯಾಗಿ ಕೆಲವೇ ಸಾವಿರ ವರ್ಷಗಳು ಕಳೆದಿವೆ ಎಂದು ವಾದಿಸುತ್ತಾರೆ. ಈ ವಾದವನ್ನು ಸೃಷ್ಟಿವಾದ ಎಂದು ಕರೆಯಲಾಗುತ್ತದೆ. ಅವರ ದೃಷ್ಟಿಕೋನವನ್ನು ತಪ್ಪೆಂದು ತೋರಿಸುವ ಎಲ್ಲ ವೈಜ್ಞಾನಿಕ ಪುರಾವೆಗಳನ್ನು ಅವರು ತಳ್ಳಿಹಾಕುತ್ತಾರೆ. ಹೀಗೆ ಇತರರು ಬೈಬಲಿನ ಬೋಧನೆ ಅಸಮ್ಮತ, ಅನಿಷ್ಕೃಷ್ಟ ಎಂದು ನೆನಸುವಂತೆ ಅವರು ಮಾಡುತ್ತಾರೆ. ಈ ಮೂಲಕ ಬೈಬಲಿಗೆ ಅಗೌರವ ತರುತ್ತಾರೆ. ಇಂಥ ಬೋಧನೆ ಮಾಡುವವರು ಒಂದನೆಯ ಶತಮಾನದಲ್ಲಿ ಇದ್ದ ಕೆಲವರನ್ನು ಹೋಲುತ್ತಾರೆ. ಅವರಿಗೆ ದೇವರ ವಿಷಯದಲ್ಲಿ ಹುರುಪಿತ್ತು. ಆದರೆ ಅದು “ನಿಷ್ಕೃಷ್ಟ ಜ್ಞಾನಕ್ಕನುಸಾರ” ಇರಲಿಲ್ಲ. (ರೋಮ. 10:2) ಹಾಗಾದರೆ, ವಿಕಾಸವಾದ ಹಾಗೂ ಸೃಷ್ಟಿವಾದದಂತಹ “ಬಲವಾಗಿ ಬೇರೂರಿರುವ” ಬೋಧನೆಗಳನ್ನು ಸುಳ್ಳೆಂದು ನಾವು ಹೇಗೆ ರುಜುಪಡಿಸಬಲ್ಲೆವು? * ನಾವು ದೇವರ ವಾಕ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಲು ಶ್ರಮ ಹಾಕುವಲ್ಲಿ ಮಾತ್ರ ಇದನ್ನು ರುಜುಪಡಿಸಲು ಸಾಧ್ಯ.

ನಂಬಿಕೆಯು ರುಜುವಾತು ಮತ್ತು ಸರಿಯಾದ ತರ್ಕದ ಮೇಲೆ ಆಧರಿತ

4. ನಮ್ಮ ನಂಬಿಕೆ ಯಾವುದರ ಮೇಲೆ ಆಧರಿಸಿರಬೇಕು?

4 ಜ್ಞಾನವನ್ನು ಅಮೂಲ್ಯವಾಗಿ ಪರಿಗಣಿಸಬೇಕೆಂದು ಬೈಬಲ್‌ ಹೇಳುತ್ತದೆ. (ಜ್ಞಾನೋ. 10:14) ನಾವು ಯೆಹೋವನ ಮೇಲಿಟ್ಟಿರುವ ನಂಬಿಕೆ, ಮಾನವ ತತ್ವಜ್ಞಾನ ಅಥವಾ ಧಾರ್ಮಿಕ ಸಂಪ್ರದಾಯಗಳ ಮೇಲಲ್ಲ, ರುಜುವಾತು ಹಾಗೂ ಸರಿಯಾದ ತರ್ಕದ ಮೇಲೆ ಆಧರಿತವಾಗಿರಬೇಕೆಂದು ಆತನು ಬಯಸುತ್ತಾನೆ. (ಇಬ್ರಿಯ 11:1 ಓದಿ.) ಯೆಹೋವನಲ್ಲಿ ಬಲವಾದ ನಂಬಿಕೆ ಬೆಳೆಯಬೇಕಾದರೆ ಆತನು ಅಸ್ತಿತ್ವದಲ್ಲಿದ್ದಾನೆಂದು ನಮಗೆ ಮೊದಲು ನಿಶ್ಚಯವಿರಬೇಕು. (ಇಬ್ರಿಯ 11:6 ಓದಿ.) ನಾವು ಯಾವುದೋ ಒಂದು ವಿಷಯದಲ್ಲಿ ನಂಬಿಕೆಯಿಡಬೇಕು ಎಂಬ ಕಾರಣದಿಂದ ದೇವರು ಇದ್ದಾನೆಂದು ನಂಬುತ್ತಿಲ್ಲ, ಬದಲಿಗೆ ನಿಜತ್ವಗಳನ್ನು ಪರಿಶೋಧಿಸಿ, “ವಿವೇಚನಾಶಕ್ತಿ” ಬಳಸಿ ಈ ನಿರ್ಧಾರಕ್ಕೆ ಬಂದಿದ್ದೇವೆ.—ರೋಮ. 12:1.

5. ದೇವರು ಅಸ್ತಿತ್ವದಲ್ಲಿದ್ದಾನೆ ಎಂದು ನಂಬಲು ಒಂದು ಕಾರಣ ಯಾವುದು?

5 ನಾವು ದೇವರನ್ನು ನೋಡಿಲ್ಲವಾದರೂ ಆತನು ಅಸ್ತಿತ್ವದಲ್ಲಿದ್ದಾನೆಂದು ನಿಶ್ಚಯದಿಂದಿರಲು ಇರುವ ಒಂದು ಕಾರಣ ಅಪೊಸ್ತಲ ಪೌಲನ ಮಾತುಗಳಲ್ಲಿದೆ. ಅವನು ಬರೆದದ್ದು: “[ಯೆಹೋವನ] ಅದೃಶ್ಯ ಗುಣಗಳು ಲೋಕವು ಸೃಷ್ಟಿಯಾದಂದಿನಿಂದ ಸ್ಪಷ್ಟವಾಗಿ ಕಂಡುಬರುತ್ತವೆ. ಏಕೆಂದರೆ ಸೃಷ್ಟಿಮಾಡಲ್ಪಟ್ಟವುಗಳಿಂದ ಆತನ ಅನಂತ ಶಕ್ತಿ ಮತ್ತು ದೇವತ್ವವನ್ನು ಸಹ ಗ್ರಹಿಸಲಾಗುತ್ತದೆ.” (ರೋಮ. 1:20) ದೇವರು ಇರುವುದರ ಬಗ್ಗೆ ಸಂದೇಹ ಪಡುವ ವ್ಯಕ್ತಿಗೆ ಪೌಲನ ಈ ಪ್ರೇರಿತ ಮಾತುಗಳಲ್ಲಿರುವುದನ್ನು ಸತ್ಯವೆಂದು ನಂಬಲು ನೀವು ಹೇಗೆ ಸಹಾಯಮಾಡಬಹುದು? ದೇವರ ಶಕ್ತಿ ಮತ್ತು ವಿವೇಕಗಳನ್ನು ತೋರ್ಪಡಿಸುವ ಅದ್ಭುತ ಸೃಷ್ಟಿಯ ಕೆಲವು ಪುರಾವೆಗಳನ್ನು ನೀವು ಅವರೊಂದಿಗೆ ಪರಿಗಣಿಸಬಹುದು. ಅವುಗಳಲ್ಲಿ ಕೆಲವನ್ನು ನಾವೀಗ ನೋಡೋಣ.

ಸೃಷ್ಟಿಯಲ್ಲಿ ದೇವರ ಶಕ್ತಿಗೆ ಪುರಾವೆ

6, 7. ನಮ್ಮನ್ನು ಸುರಕ್ಷಿತವಾಗಿಡುವ ಎರಡು ರಕ್ಷಣಾಕವಚಗಳಿಂದ ಯೆಹೋವನ ಶಕ್ತಿ ಹೇಗೆ ತಿಳಿದುಬರುತ್ತದೆ?

6 ನಮ್ಮನ್ನು ಸುರಕ್ಷಿತವಾಗಿಡುವ ಎರಡು ರಕ್ಷಣಾಕವಚಗಳು ಯೆಹೋವನ ಶಕ್ತಿಯನ್ನು ತಿಳಿಯಪಡಿಸುತ್ತವೆ. ಅವು, ಭೂಮಿಯ ವಾಯುಮಂಡಲ ಮತ್ತು ಅಯಸ್ಕಾಂತ ಕ್ಷೇತ್ರ. ಉದಾಹರಣೆಗೆ, ವಾಯುಮಂಡಲ ನಮಗೆ ಉಸಿರಾಡಲು ಗಾಳಿಯನ್ನು ಕೊಡುವುದಷ್ಟೇ ಅಲ್ಲ, ನಮ್ಮನ್ನು ಜೋಪಾನವಾಗಿಡುತ್ತದೆ. ಅಂತರಿಕ್ಷದಲ್ಲಿ ವೇಗವಾಗಿ ಸುತ್ತುತ್ತಿರುವ ದೊಡ್ಡ ದೊಡ್ಡ ಬಂಡೆಕಲ್ಲುಗಳು ಭೂಮಿಗೆ ಬಂದು ಅಪ್ಪಳಿಸಿ ನಮಗೆ ಭಾರೀ ಹಾನಿಮಾಡಬಲ್ಲವು. ಆದರೆ ಇವು ಭೂಮಿಯ ವಾಯುಮಂಡಲದೊಳಗೆ ಪ್ರವೇಶಿಸಿದ ಕೂಡಲೆ ಸುಟ್ಟುಹೋಗುತ್ತವೆ. ಇದು ರಾತ್ರಿ ಸಮಯದಲ್ಲಾದರೆ ಆಕಾಶದಲ್ಲಿ ವೇಗವಾಗಿ ಚಲಿಸುವ ಮಿಂಚುವ ಬೆಳಕನ್ನು ಉಂಟುಮಾಡುತ್ತವೆ.

7 ಭೂಮಿಯ ಅಯಸ್ಕಾಂತ ಕ್ಷೇತ್ರ ಸಹ ನಮ್ಮನ್ನು ಸುರಕ್ಷಿತವಾಗಿಡುತ್ತದೆ. ಈ ಕ್ಷೇತ್ರದ ಮೂಲ ಭೂಮಿಯ ಕೇಂದ್ರದಲ್ಲಿದೆ. ಭೂಮಿಯ ಈ ಕೇಂದ್ರದ ಹೊರಭಾಗ ಅಧಿಕಾಂಶ ದ್ರವರೂಪದ ಕಬ್ಬಿಣದಿಂದ ಮಾಡಲ್ಪಟ್ಟಿದೆ. ಇದು ಶಕ್ತಿಯುತ ಆಯಸ್ಕಾಂತ ಕ್ಷೇತ್ರವನ್ನು ಉಂಟುಮಾಡುತ್ತದೆ. ಅದು ಇಡೀ ಭೂಮಿಯನ್ನು ಆವರಿಸಿ ಅಂತರಿಕ್ಷದ ವರೆಗೂ ಚಾಚಿದೆ. ಇದು ಸೂರ್ಯ ಹೊರಸೂಸುವ ವಿಕಿರಣಗಳಿಂದ ಹಾಗೂ ಸ್ಫೋಟಗಳಿಂದ ನಮ್ಮನ್ನು ರಕ್ಷಿಸುತ್ತದೆ. ಹೀಗಾಗಿ ನಮ್ಮ ಭೂಗೋಳದ ಮೇಲಿರುವ ಜೀವರಾಶಿ ಸುಟ್ಟುಹೋಗುವುದಿಲ್ಲ. ಅಯಸ್ಕಾಂತ ಕ್ಷೇತ್ರ ಈ ವಿಕಿರಣ ಹಾಗೂ ಸ್ಫೋಟಗಳನ್ನು ಹೀರಿಕೊಳ್ಳುತ್ತದೆ ಅಥವಾ ಅಂತರಿಕ್ಷಕ್ಕೆ ವಾಪಸ್ಸು ಕಳುಹಿಸುತ್ತದೆ. ಉತ್ತರಧ್ರುವ ಮತ್ತು ದಕ್ಷಿಣಧ್ರುವಗಳ ಹತ್ತಿರ ಆಕಾಶದಲ್ಲಿ ಉಂಟಾಗುವ ಬೆರಗುಗೊಳಿಸುವ ವರ್ಣರಂಜಿತ ಬೆಳಕಿನ ಪ್ರದರ್ಶನ ಇದಕ್ಕೆ ಪುರಾವೆ. ಯೆಹೋವನು ‘ಮಹಾಶಕ್ತನು’ ಎಂಬುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.ಯೆಶಾಯ 40:26 ಓದಿ.

ಸೃಷ್ಟಿಯಲ್ಲಿ ದೇವರ ವಿವೇಕದ ಪುರಾವೆ

8, 9. ಜೀವವನ್ನು ಪೋಷಿಸುವ ಚಕ್ರಗಳಿಂದ ಯೆಹೋವನ ವಿವೇಕ ಹೇಗೆ ತಿಳಿದುಬರುತ್ತದೆ?

8 ಭೂಜೀವಿಗಳನ್ನು ಪೋಷಿಸುತ್ತಿರುವ ನಿಸರ್ಗ ಚಕ್ರಗಳು ಯೆಹೋವನ ವಿವೇಕವನ್ನು ತೋರಿಸುತ್ತವೆ. ಉದಾಹರಣೆಗೆ, ಸುತ್ತಲೂ ಗೋಡೆಯಿರುವ ಒಂದು ಜನನಿಬಿಡ ಪಟ್ಟಣದಲ್ಲಿ ನೀವು ವಾಸಿಸುತ್ತಿದ್ದೀರೆಂದು ಭಾವಿಸಿ. ಆ ಪಟ್ಟಣದಲ್ಲಿ ಇರುವ ನೀರನ್ನೇ ನೀವು ಬಳಸಬೇಕು. ಹೊರಗಿನಿಂದ ಶುದ್ಧ ನೀರನ್ನು ತರಲೂ ಆಗುವುದಿಲ್ಲ, ತ್ಯಾಜ್ಯವನ್ನು ಹೊರಹಾಕಲೂ ಆಗುವುದಿಲ್ಲ. ಅಂಥ ಪಟ್ಟಣ ಬೇಗನೆ ಕೊಳಚೆಯಿಂದ ತುಂಬಿ ವಾಸಿಸಲು ಯೋಗ್ಯವಾಗಿರುವುದಿಲ್ಲ ಅಲ್ವೆ? ಒಂದು ಥರ ನಮ್ಮ ಭೂಮಿ ಸಹ ಸುತ್ತಲೂ ಗೋಡೆಯಿರುವ ಆ ಪಟ್ಟಣದಂತಿದೆ. ಅದರಲ್ಲಿ ಒಂದು ನಿಶ್ಚಿತ ಪ್ರಮಾಣದ ಶುದ್ಧ ನೀರಿದೆ. ತ್ಯಾಜ್ಯವನ್ನು ಹೊರಗೆ ಕಳುಹಿಸಲು ಸಹ ಸಾಧ್ಯವಿಲ್ಲ. ಆದರೂ ಈ ಭೂಮಿ ನಿರಂತರವಾಗಿ ಕೋಟಿಗಟ್ಟಲೆ ಜೀವರಾಶಿಯನ್ನು ಪೋಷಿಸುತ್ತಾ ಬಂದಿದೆ. ಅದು ಹೇಗೆ ಸಾಧ್ಯ? ಜೀವನಕ್ಕೆ ಅವಶ್ಯವಾಗಿರುವ ವಿಷಯಗಳನ್ನು ಮರುಬಳಕೆಮಾಡುವ ಅಥವಾ ಪರಿವರ್ತಿಸುವ ಅದ್ಭುತಕರ ಸಾಮರ್ಥ್ಯ ನಮ್ಮ ಭೂಮಿಗಿದೆ.

9 ಗಾಳಿಚಕ್ರದ ಕುರಿತು ಯೋಚಿಸಿ. ಕೋಟಿಗಟ್ಟಲೆ ಜೀವಿಗಳು ಉಸಿರಾಡುವಾಗ ಆಮ್ಲಜನಕ ಸೇವಿಸಿ ಇಂಗಾಲದ ಡೈ ಆಕ್ಸೈಡನ್ನು ಹೊರಹಾಕುತ್ತವೆ. ಹೀಗಿದ್ದರೂ ಆಮ್ಲಜನಕ ಖಾಲಿಯಾಗುವುದಿಲ್ಲ. ಇಂಗಾಲದ ಡೈಆಕ್ಸೈಡ್‌ ವಾತಾವರಣದಲ್ಲಿ ತುಂಬಿ ನಮ್ಮನ್ನು ಉಸಿರುಗಟ್ಟಿಸುವುದೂ ಇಲ್ಲ. ಅದು ಹೇಗೆ? ಇದಕ್ಕೆ ಉತ್ತರ ದ್ಯುತಿಸಂಶ್ಲೇಷಣೆ (ಫೋಟೋಸಿಂತಿಸಿಸ್‌) ಎಂಬ ಕಾರ್ಯವಿಧಾನದಲ್ಲಿದೆ. ಈ ಕಾರ್ಯವಿಧಾನದಲ್ಲಿ ಹಸಿರು ಸಸ್ಯಗಳು ಇಂಗಾಲದ ಡೈಆಕ್ಸೈಡ್‌, ನೀರು, ಸೂರ್ಯನ ಬೆಳಕು, ಪೌಷ್ಟಿಕಾಂಶಗಳನ್ನು ಉಪಯೋಗಿಸಿ ಆಹಾರ ಮತ್ತು ಆಮ್ಲಜನಕವನ್ನು ಉತ್ಪಾದಿಸುತ್ತವೆ. ನಾವು ಉಸಿರಾಡುವಾಗ ಈ ಆಮ್ಲಜನಕವನ್ನು ಒಳತಕ್ಕೊಳ್ಳುತ್ತೇವೆ. ಹೀಗೆ ಆ ಗಾಳಿಚಕ್ರ ಪೂರ್ತಿಗೊಳ್ಳುತ್ತದೆ. ಅಕ್ಷರಾರ್ಥದಲ್ಲಿ ಯೆಹೋವನು ತಾನು ರಚಿಸಿದ ಸಸ್ಯರಾಶಿಯನ್ನು ಬಳಸಿ “ಎಲ್ಲ ಮನುಷ್ಯರಿಗೆ ಜೀವವನ್ನೂ ಶ್ವಾಸವನ್ನೂ” ಕೊಡುತ್ತಾನೆ. (ಅ. ಕಾ. 17:25) ಎಷ್ಟೊಂದು ಅಗಾಧ ವಿವೇಕ ಯೆಹೋವನಲ್ಲಿದೆ!

10, 11. ರಾಜಪತಂಗ ಮತ್ತು ಒಂದು ಜಾತಿಯ ದುಂಬಿ ಯೆಹೋವನ ವಿವೇಕವನ್ನು ಹೇಗೆ ತಿಳಿಸುತ್ತವೆ?

10 ನಮ್ಮ ಅಸಾಮಾನ್ಯ ಗ್ರಹದಲ್ಲಿರುವ ಜೀವರಾಶಿಯಿಂದಲೂ ಯೆಹೋವನ ಬುದ್ಧಿಶಕ್ತಿಯನ್ನು ತಿಳಿಯಬಹುದು. ಒಂದು ಅಂದಾಜಿನ ಪ್ರಕಾರ, ಭೂಮಿಯ ಮೇಲೆ 20 ಲಕ್ಷದಿಂದ 10 ಕೋಟಿ ಜೀವವರ್ಗಗಳಿವೆ. (ಕೀರ್ತನೆ 104:24 ಓದಿ.) ಇವುಗಳಲ್ಲಿ ಕೆಲವು ಜೀವಿಗಳ ಕುರಿತು ನಾವೀಗ ಪರಿಗಣಿಸೋಣ. ಅವುಗಳ ವಿನ್ಯಾಸದ ಹಿಂದಿರುವ ವಿವೇಕವನ್ನು ಗಮನಿಸಿ.

ಹಾರುಹುಳದ ಕಣ್ಣಿನ ವಿನ್ಯಾಸದಲ್ಲಿ ದೇವರ ವಿವೇಕ ಕಾಣುತ್ತದೆ; ಚಿತ್ರದಲ್ಲಿ ಕಣ್ಣನ್ನು ದೊಡ್ಡದಾಗಿ ಮಾಡಿ ತೋರಿಸಲಾಗಿದೆ (ಪ್ಯಾರ 11)

11 ರಾಜಪತಂಗದ ಮಿದುಳಿನ ಗಾತ್ರ ಒಂದು ಬಾಲ್‌ಪಾಯಿಂಟ್‌ ಪೆನ್ನಿನ ತುದಿಯಷ್ಟಿದೆ. ಆದರೂ ಈ ಪತಂಗಕ್ಕೆ ಕೆನಡದಿಂದ ಸುಮಾರು 3,000 ಕಿ.ಮೀ. ದೂರದ ಮೆಕ್ಸಿಕೊ ದೇಶದ ಒಂದು ನಿರ್ದಿಷ್ಟ ಕಾಡಿಗೆ ವಲಸೆಹೋಗುವ ಸಾಮರ್ಥ್ಯ ಹಾಗೂ ಕೌಶಲವಿದೆ. ಹೀಗೆ ಹೋಗಲು ಅದು ಸೂರ್ಯನ ಸಹಾಯ ಪಡೆದುಕೊಳ್ಳುತ್ತದೆ. ಆದರೆ ಸೂರ್ಯ ಆಕಾಶದಲ್ಲಿ ತನ್ನ ಸ್ಥಾನವನ್ನು ಬದಲಾಯಿಸುವಾಗ ಅದಕ್ಕೆ ದಾರಿತಪ್ಪುವುದಿಲ್ಲವೆ? ಸೂರ್ಯನ ಚಲನೆಯೊಂದಿಗೆ ತನ್ನ ಚಲನೆಯನ್ನು ಸರಿದೂಗಿಸುವ ಸಾಮರ್ಥ್ಯ ಈ ಸೂಕ್ಷ್ಮ ಮಿದುಳಿಗೆ ಯೆಹೋವನು ಕೊಟ್ಟಿದ್ದಾನೆ. ಒಂದು ದುಂಬಿಯ (ಡ್ರ್ಯಾಗನ್‌ ಫ್ಲೈ) ಬಗ್ಗೆ ಯೋಚಿಸಿ. ಈ ಕೀಟದ ಕಣ್ಣಿನ ವಿನ್ಯಾಸ ಜಟಿಲ. ಪ್ರತಿಯೊಂದು ಕಣ್ಣಿನಲ್ಲಿ ಸುಮಾರು 30 ಸಾವಿರ ಲೆನ್ಸ್‌ಗಳಿವೆ. ಈ ಹಾರುಹುಳುವಿನ ಸೂಕ್ಷ್ಮ ಮಿದುಳು ಆ ಎಲ್ಲ ಲೆನ್ಸ್‌ಗಳಿಂದ ಬರುವ ಸಂಕೇತಗಳನ್ನು ಅರ್ಥಮಾಡಿಕೊಂಡು ತನ್ನ ಸುತ್ತಮುತ್ತಲು ಆಗುವ ಅತಿ ಸೂಕ್ಷ್ಮ ಚಲನೆಯನ್ನೂ ಕಂಡುಹಿಡಿಯುತ್ತದೆ.

12, 13. ನಿಮ್ಮ ದೇಹದ ಜೀವಕೋಶಗಳನ್ನು ಯೆಹೋವನು ವಿನ್ಯಾಸಿಸಿರುವ ರೀತಿಯ ಬಗ್ಗೆ ಯಾವುದು ನಿಮ್ಮ ಮನಸ್ಪರ್ಶಿಸುತ್ತದೆ?

12 ಇದಕ್ಕಿಂತಲೂ ಹೆಚ್ಚು ಭಾವಪ್ರಚೋದಕ ವಿಷಯ ಎಲ್ಲ ಜೀವಿಗಳಲ್ಲಿರುವ ಜೀವಕೋಶಗಳನ್ನು ಯೆಹೋವನು ವಿನ್ಯಾಸಿಸಿರುವ ರೀತಿ. ಉದಾಹರಣೆಗೆ, ನಿಮ್ಮ ದೇಹದಲ್ಲಿ ಸುಮಾರು 100 ಲಕ್ಷ ಕೋಟಿ ಜೀವಕೋಶಗಳಿವೆ. ಪ್ರತಿಯೊಂದು ಜೀವಕೋಶದೊಳಗೆ ಡಿಎನ್‌ಎ (ಡಿಆಕ್ಸಿರೈಬೋನ್ಯೂಕ್ಲಿಕ್‌ ಆ್ಯಸಿಡ್‌) ಎಂಬ ಹಗ್ಗದಂತಿರುವ ರಚನೆಯಿದೆ. ನಿಮ್ಮ ಇಡೀ ದೇಹ ಬೆಳೆಯಲು ಬೇಕಾದ ಹೆಚ್ಚಿನಾಂಶ ಮಾಹಿತಿ ಇದರಲ್ಲಿ ಶೇಖರವಾಗಿರುತ್ತದೆ.

13 ಡಿಎನ್‌ಎ ಎಷ್ಟು ಮಾಹಿತಿ ಶೇಖರಿಸಬಲ್ಲದು? ಒಂದು ಗ್ರಾಮ್‌ ಡಿಎನ್‌ಎಗಿರುವ ಶೇಖರಣಾ ಸಾಮರ್ಥ್ಯವನ್ನು ಒಂದು ಸಿಡಿಯ ಶೇಖರಣಾ ಸಾಮರ್ಥ್ಯಕ್ಕೆ ಹೋಲಿಸಿ. ಒಂದು ನಿಘಂಟು ಅಥವಾ ಪದಕೋಶದಲ್ಲಿರುವ ಎಲ್ಲ ಮಾಹಿತಿಯನ್ನು ಒಂದು ಸಿಡಿ ಶೇಖರಿಸಿಡಬಲ್ಲದು. ಆ ಸಿಡಿ ಪ್ಲ್ಯಾಸ್ಟಿಕ್‌ನ ಒಂದು ತೆಳ್ಳಗಿನ ಬಿಲ್ಲೆಯಾಗಿರುವುದಾದರೂ ಅಷ್ಟು ಮಾಹಿತಿಯನ್ನು ಶೇಖರಿಸಿಡುವುದು ಆಶ್ಚರ್ಯಕರವೇ. ಆದರೆ ಕೇವಲ ಒಂದು ಗ್ರಾಮ್‌ ಡಿಎನ್‌ಎ ಒಂದು ಲಕ್ಷ ಕೋಟಿ ಸಿಡಿಗಳಲ್ಲಿ ಹಿಡಿಸುವಷ್ಟು ಮಾಹಿತಿಯನ್ನು ಸಂಗ್ರಹಿಸಿಡಬಲ್ಲದು. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಒಣಗಿದ ಒಂದು ಚಮಚ ಡಿಎನ್‌ಎ ಇಂದು ಜೀವಿಸುತ್ತಿರುವ ಮನುಷ್ಯರ ಸಂಖ್ಯೆಯ 350 ಪಟ್ಟು ಮನುಷ್ಯರ ಮಾಹಿತಿಯನ್ನು ಶೇಖರಿಸಿಡಬಲ್ಲದು!

14. ವಿಜ್ಞಾನಿಗಳು ಮಾಡಿರುವ ಆವಿಷ್ಕಾರಗಳನ್ನು ನೋಡಿ ಯೆಹೋವನ ಬಗ್ಗೆ ನಿಮಗೆ ಹೇಗನಿಸುತ್ತದೆ?

14 ಮಾನವ ದೇಹವನ್ನು ರಚಿಸಲು ಬೇಕಾಗುವ ಮಾಹಿತಿಯನ್ನು ಯೆಹೋವನು ಒಂದು ಪುಸ್ತಕದಲ್ಲಿ ಬರೆದಂತಿದೆ ಎಂದು ರಾಜ ದಾವೀದ ಹೇಳಿದನು. ಯೆಹೋವ ದೇವರ ಬಗ್ಗೆ ಮಾತಾಡುತ್ತಾ ಅವನಂದದ್ದು: “ನಾನು ಇನ್ನೂ ಕೇವಲ ಪಿಂಡವಾಗಿರುವಾಗ ನಿನ್ನ ಕಣ್ಣುಗಳು ನನ್ನನ್ನು ನೋಡಿದವು; ನನ್ನ ಆಯುಷ್ಕಾಲದ ಪ್ರಥಮದಿನವು ಪ್ರಾರಂಭವಾಗುವ ಮೊದಲೇ ಅದರ ಎಲ್ಲಾ ದಿನಗಳು ನಿನ್ನ ಪುಸ್ತಕದಲ್ಲಿ ಬರೆಯಲ್ಪಟ್ಟವು.” (ಕೀರ್ತ. 139:16) ದಾವೀದನು ತನ್ನ ದೇಹದ ರಚನೆಯ ಬಗ್ಗೆ ಯೋಚಿಸಿದಾಗ ಯೆಹೋವನನ್ನು ಸ್ತುತಿಸುವಂತೆ ಪ್ರಚೋದಿಸಲ್ಪಟ್ಟನು. ನಾವು ಸಹ ಯೆಹೋವನು ನಮ್ಮನ್ನು ನಿರ್ಮಿಸಿದ ವಿಧದ ಬಗ್ಗೆ ಯೋಚಿಸುವಾಗ ವಿಸ್ಮಯಗೊಳ್ಳುತ್ತೇವೆ. ಇತ್ತೀಚಿಗಿನ ವರ್ಷಗಳಲ್ಲಿ ವಿಜ್ಞಾನಿಗಳು ನಮ್ಮ ದೇಹರಚನೆಯ ಕುರಿತು ಕಂಡುಹಿಡಿದಿರುವ ವಿಷಯಗಳು ನಮ್ಮ ವಿಸ್ಮಯವನ್ನು ಇನ್ನೂ ಹೆಚ್ಚಿಸಿವೆ. ಈ ಆವಿಷ್ಕಾರಗಳು, ಯೆಹೋವನ ಬಗ್ಗೆ ಕೀರ್ತನೆಗಾರನು ಬರೆದ ಈ ಮಾತುಗಳೊಂದಿಗೆ ಸಮ್ಮತಿಸುವಂತೆ ಮಾಡುತ್ತವೆ: “ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ. ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆಯೆಂದು ನನ್ನ ಹೃದಯವು ಚೆನ್ನಾಗಿ ಗ್ರಹಿಸಿಕೊಂಡಿದೆ.” (ಕೀರ್ತ. 139:14) ಸೃಷ್ಟಿಯು ಜೀವವುಳ್ಳ ದೇವರ ಅಸ್ತಿತ್ವವನ್ನು ಇಷ್ಟು ಚೆನ್ನಾಗಿ ತಿಳಿಯಪಡಿಸುತ್ತಿರುವಾಗ ಜನರದನ್ನು ಗ್ರಹಿಸದಿರಲು ಹೇಗೆ ತಾನೇ ಸಾಧ್ಯ?

ಜೀವವುಳ್ಳ ದೇವರನ್ನು ಮಹಿಮೆಪಡಿಸುವಂತೆ ಇತರರಿಗೆ ಸಹಾಯಮಾಡಿ

15, 16. (1) ಯೆಹೋವನ ಸೃಷ್ಟಿಕಾರ್ಯದ ಕಡೆಗೆ ಗಣ್ಯತೆಯನ್ನು ನಮ್ಮ ಪ್ರಕಾಶನಗಳು ಹೇಗೆ ಹೆಚ್ಚಿಸಿವೆ? (2) “ವಿಕಾಸವೇ? ವಿನ್ಯಾಸವೇ?” ಲೇಖನ ಸರಣಿಯಲ್ಲಿ ನಿಮ್ಮ ಮೇಲೆ ತುಂಬ ಪ್ರಭಾವ ಬೀರಿದ ಲೇಖನ ಯಾವುದು?

15 ಅನೇಕ ವರ್ಷಗಳಿಂದ ಎಚ್ಚರ! ಪತ್ರಿಕೆ ಸೃಷ್ಟಿಯ ಮೂಲಕ ಜೀವವುಳ್ಳ ದೇವರ ಬಗ್ಗೆ ತಿಳಿಯಲು ಲಕ್ಷಗಟ್ಟಲೆ ಜನರಿಗೆ ಸಹಾಯಮಾಡಿದೆ. ಉದಾಹರಣೆಗೆ, 2006ರ ಅಕ್ಟೋಬರ್‌-ಡಿಸೆಂಬರ್‌ ಸಂಚಿಕೆ “ಒಬ್ಬ ಸೃಷ್ಟಿಕರ್ತನು ಇದ್ದಾನೋ?” ಎಂಬ ಶೀರ್ಷಿಕೆಯೊಂದಿಗೆ ಪ್ರಕಟವಾಯಿತು. ವಿಕಾಸವಾದ ಮತ್ತು ಸೃಷ್ಟಿವಾದಗಳಿಂದ ಕುರುಡಾಗಿರುವ ಜನರ ಕಣ್ಣುಗಳನ್ನು ತೆರೆಯುವುದೇ ಈ ಸಂಚಿಕೆಯ ಉದ್ದೇಶವಾಗಿತ್ತು. ಈ ವಿಶೇಷ ಸಂಚಿಕೆಯ ಬಗ್ಗೆ ಒಬ್ಬ ಸಹೋದರಿ ಅಮೆರಿಕದ ಬ್ರಾಂಚ್‌ ಆಫೀಸಿಗೆ ಹೀಗೆ ಬರೆದರು: “ಈ ವಿಶೇಷ ಸಂಚಿಕೆಯನ್ನು ನೀಡುವ ಕಾರ್ಯಾಚರಣೆ ಅತ್ಯುತ್ತಮವಾಗಿ ನಡೆಯಿತು. ಒಬ್ಬಾಕೆ ಸ್ತ್ರೀ 20 ಪ್ರತಿಗಳನ್ನು ಕೇಳಿ ತೆಗೆದುಕೊಂಡಳು. ಆಕೆ ಜೀವಶಾಸ್ತ್ರ ಶಿಕ್ಷಕಿ. ತನ್ನ ವಿದ್ಯಾರ್ಥಿಗಳಿಗೂ ಒಂದೊಂದು ಪ್ರತಿಯನ್ನು ಕೊಡಬೇಕೆಂಬುದು ಆಕೆಯ ಇಚ್ಛೆಯಾಗಿತ್ತು.” ಒಬ್ಬ ಸಹೋದರ ಬರೆದುದು: “ನಾನು 1946ರ ಆಸುಪಾಸಿನಲ್ಲಿ ಕ್ಷೇತ್ರ ಸೇವೆಯಲ್ಲಿ ಭಾಗವಹಿಸಲು ಪ್ರಾರಂಭಿಸಿದೆ. ಈಗ ನನಗೆ 75 ವರ್ಷ. ಆದರೆ ಈ ವಿಶೇಷ ಸಂಚಿಕೆಯನ್ನು ವಿತರಿಸಿದಾಗ ಆದಷ್ಟು ಆನಂದ ಇದುವರೆಗೆ ಎಂದಿಗೂ ಆಗಿರಲಿಲ್ಲ.”

16 ಇಸವಿ 2008ರಿಂದ ಆರಂಭಿಸಿ ಎಚ್ಚರ! ಪತ್ರಿಕೆಯ ಅನೇಕ ಸಂಚಿಕೆಗಳಲ್ಲಿ “ವಿಕಾಸವೇ? ವಿನ್ಯಾಸವೇ?” ಎಂಬ ಲೇಖನ ಪ್ರಕಟವಾಗುತ್ತಿದೆ. ಈ ಚಿಕ್ಕ ಲೇಖನಗಳು ಸೃಷ್ಟಿಯಲ್ಲಿ ಕಂಡುಬರುವ ಬೆರಗುಗೊಳಿಸುವ ವಿನ್ಯಾಸದ ಕಡೆಗೆ ಗಮನಸೆಳೆದು, ಮನುಷ್ಯನು ಮಹಾ ವಿನ್ಯಾಸಕನ ವಿನ್ಯಾಸವನ್ನು ನಕಲು ಮಾಡಲು ಪ್ರಯತ್ನಿಸಿದ ವಿಧಗಳ ಕುರಿತು ತಿಳಿಸುತ್ತವೆ. ಜೀವವು ಸೃಷ್ಟಿಸಲ್ಪಟ್ಟಿತೋ? (ಇಂಗ್ಲಿಷ್‌) ಎಂಬ ಕಿರುಹೊತ್ತಗೆಯನ್ನು ನಾವು 2010ರಲ್ಲಿ ಪಡೆದೆವು. ಅದರಲ್ಲಿರುವ ಸುಂದರ ಚಿತ್ರಗಳನ್ನು ಮತ್ತು ಬೋಧನಾ ರೇಖಾಚಿತ್ರಗಳನ್ನು, ಯೆಹೋವನ ಸೃಷ್ಟಿಕಾರ್ಯದ ಕಡೆಗೆ ನಮ್ಮ ಗಣ್ಯತೆಯನ್ನು ಹೆಚ್ಚಿಸುವಂತೆ ವಿನ್ಯಾಸಿಸಲಾಗಿವೆ. ಪ್ರತಿ ವಿಭಾಗದ ಕೊನೆಯಲ್ಲಿರುವ ಪ್ರಶ್ನೆಗಳು ವಾಚಕನು ಆಗತಾನೆ ಓದಿದ ಮಾಹಿತಿಯ ಕುರಿತು ಯೋಚಿಸುವಂತೆ ಸಹಾಯಮಾಡುತ್ತವೆ. ಮನೆಮನೆ ಸೇವೆಯಲ್ಲಿ, ಸಾರ್ವಜನಿಕ ಇಲ್ಲವೆ ಅನೌಪಚಾರಿಕ ಸಾಕ್ಷಿಕಾರ್ಯದಲ್ಲಿ ಬಳಸಲು ಈ ಕಿರುಹೊತ್ತಗೆ ತುಂಬ ಚೆನ್ನಾಗಿದೆ!

17, 18. (1) ಹೆತ್ತವರೇ, ನಿಮ್ಮ ಮಕ್ಕಳು ತಾವು ಸೃಷ್ಟಿಕರ್ತನಲ್ಲಿ ನಂಬಿಕೆಯಿಡಲು ಕಾರಣವೇನೆಂದು ಭರವಸೆಯಿಂದ ವಿವರಿಸಲು ಹೇಗೆ ಸಹಾಯಮಾಡಬಲ್ಲಿರಿ? (2) ಸೃಷ್ಟಿಯ ಬಗ್ಗೆ ಇರುವ ಕಿರುಹೊತ್ತಗೆಗಳನ್ನು ನಿಮ್ಮ ಕುಟುಂಬ ಆರಾಧನೆಯಲ್ಲಿ ಹೇಗೆ ಬಳಸಿದ್ದೀರಿ?

17 ಹೆತ್ತವರೇ, ಈ ವರ್ಣರಂಜಿತ ಕಿರುಹೊತ್ತಗೆಯನ್ನು ಕುಟುಂಬ ಆರಾಧನೆಯಲ್ಲಿ ನಿಮ್ಮ ಮಕ್ಕಳೊಂದಿಗೆ ಚರ್ಚಿಸಿದ್ದೀರಾ? ಹಾಗೆ ಮಾಡುವಲ್ಲಿ ಜೀವವುಳ್ಳ ದೇವರಿಗೆ ಹೆಚ್ಚು ಗಣ್ಯತೆಯನ್ನು ತೋರಿಸಲು ನೀವು ಅವರಿಗೆ ಸಹಾಯಮಾಡುವಿರಿ. ನಿಮ್ಮ ಮಕ್ಕಳು ಪ್ರೌಢಶಾಲೆಗೆ ಹೋಗುವ ಹದಿಹರೆಯದವರಾಗಿದ್ದರೆ, ವಿಕಾಸವಾದವನ್ನು ಕಲಿಸುವವರಿಗೆ ಅವರು ಗುರಿಹಲಗೆಯಾಗಿದ್ದಾರೆ. ಪ್ರಕೃತಿಯ ಬಗ್ಗೆ ಇರುವ ಟಿವಿ ಕಾರ್ಯಕ್ರಮಗಳು, ಚಲನಚಿತ್ರಗಳು ಹಾಗೂ ವಿಜ್ಞಾನಿಗಳು, ಶಾಲಾ ಅಧ್ಯಾಪಕರು ವಿಕಾಸವಾದ ನೈಜವಾದದ್ದು ಎಂಬಂತೆ ತೋರಿಸುತ್ತಾರೆ. ನಿಮ್ಮ ಮಕ್ಕಳು ಇದನ್ನು ಎದುರಿಸುವಂತೆ ಸಹಾಯ ಮಾಡಲು ನೀವು “ಜೀವದ ಉಗಮ—ಕೇಳಲು ಯೋಗ್ಯವಾದ ಐದು ಪ್ರಶ್ನೆಗಳು” ಎಂಬ ಕಿರುಹೊತ್ತಗೆಯನ್ನು ಉಪಯೋಗಿಸಬಹುದು. ಇದನ್ನು ಸಹ 2010ರಲ್ಲಿ ಬಿಡುಗಡೆ ಮಾಡಲಾಯಿತು. ಜೀವವು ಸೃಷ್ಟಿಸಲ್ಪಟ್ಟಿತೋ? ಎಂಬ ಕಿರುಹೊತ್ತಗೆಯಂತೆ ಇದು ಸಹ ಎಳೆಯರು ತಮ್ಮ “ಬುದ್ಧಿ”ಯನ್ನು ಅಥವಾ ಯೋಚನಾ ಸಾಮರ್ಥ್ಯವನ್ನು ಬೆಳೆಸಲು ಸಹಾಯಮಾಡುತ್ತದೆ. (ಜ್ಞಾನೋ. 2:10, 11) ಶಾಲೆಯಲ್ಲಿ ಅವರು ಕಲಿಯುವ ವಿಷಯಗಳಲ್ಲಿ ತಿರುಳಿದೆಯೋ ಇಲ್ಲವೋ ಎಂದು ಪರೀಕ್ಷಿಸಲು ಇದು ಅವರಿಗೆ ಕಲಿಸುತ್ತದೆ.

ಹೆತ್ತವರೇ, ತಮ್ಮ ನಂಬಿಕೆಯನ್ನು ಸಮರ್ಥಿಸುವಂತೆ ಮಕ್ಕಳನ್ನು ಸಿದ್ಧಗೊಳಿಸಿ (ಪ್ಯಾರ 17)

18 ವಿಕಾಸವಾದ ಸತ್ಯವಾದದ್ದು ಎಂದು ರುಜುಪಡಿಸುವ ಪಳೆಯುಳಿಕೆಗಳು ವಿಜ್ಞಾನಿಗಳಿಗೆ ಸಿಕ್ಕಿವೆ ಎಂದು ಅಥವಾ ಜೀವ ಅಕಸ್ಮಾತ್ತಾಗಿ ಬರಬಲ್ಲದೆಂದು ವಿಜ್ಞಾನಿಗಳು ಪ್ರಯೋಗಶಾಲೆಗಳಲ್ಲಿ ರುಜುಪಡಿಸಿದ್ದಾರೆಂಬ ಸುದ್ದಿಗಳನ್ನು ಆಗಾಗ ಕೇಳುತ್ತೇವೆ. ಅಂಥ ಸುದ್ದಿಗಳನ್ನು ನಂಬಬೇಕೋ ಬೇಡವೋ ಎಂದು ನಿರ್ಣಯಿಸಲು ಸಹಾಯಮಾಡಲಿಕ್ಕಾಗಿ ಈ ಕಿರುಹೊತ್ತಗೆ ವಿನ್ಯಾಸಿಸಲ್ಪಟ್ಟಿದೆ. ಹೆತ್ತವರೇ, ನಿಮ್ಮ ಮಕ್ಕಳು ತಾವು ಸೃಷ್ಟಿಕರ್ತನಲ್ಲಿ ನಂಬಿಕೆಯಿಡಲು ಕಾರಣವೇನೆಂದು ಧೈರ್ಯದಿಂದ ವಿವರಿಸುವಂತೆ ಈ ಕಿರುಹೊತ್ತಗೆಗಳ ಮೂಲಕ ಅವರಲ್ಲಿ ಭರವಸೆ ತುಂಬಿ.1 ಪೇತ್ರ 3:15 ಓದಿ.

19. ನಮಗೆಲ್ಲರಿಗೆ ಯಾವ ಸದವಕಾಶವಿದೆ?

19 ಯೆಹೋವನ ಸಂಘಟನೆಯಿಂದ ಬರುವ ಸಾಹಿತ್ಯದಲ್ಲಿ ಉತ್ತಮವಾಗಿ ಸಂಶೋಧನೆ ಮಾಡಿರುವ ಮಾಹಿತಿಯಿರುತ್ತದೆ. ಇದು ನಮ್ಮ ಸುತ್ತಲಿರುವ ಸೃಷ್ಟಿಯ ಮೂಲಕ ದೇವರ ಸೊಗಸಾದ ಗುಣಗಳನ್ನು ಗ್ರಹಿಸುವಂತೆ ನಮಗೆ ಸಹಾಯ ಮಾಡುತ್ತವೆ. ಈ ರುಜುವಾತುಗಳು ನಾವು ನಮ್ಮ ದೇವರನ್ನು ತುಂಬಿದ ಹೃದಯದಿಂದ ಸ್ತುತಿಸುವಂತೆ ಮಾಡುತ್ತವೆ. (ಕೀರ್ತ. 19:1, 2) ಎಲ್ಲವುಗಳ ಸೃಷ್ಟಿಕರ್ತನಾದ ಯೆಹೋವನು ಮಾನ, ಮಹಿಮೆಗಳನ್ನು ಪಡೆಯಲು ಅತ್ಯರ್ಹನು. ಅದನ್ನು ಸಲ್ಲಿಸುವುದು ನಮಗಿರುವ ಬಹುಮೂಲ್ಯ ಸದವಕಾಶ!—1 ತಿಮೊ. 1:17.

^ ಪ್ಯಾರ. 3 ಸೃಷ್ಟಿವಾದಿಗಳೊಂದಿಗೆ ಹೇಗೆ ತರ್ಕಿಸಬಹುದೆಂಬ ಮಾಹಿತಿಗಾಗಿ ಜೀವವು ಸೃಷ್ಟಿಸಲ್ಪಟ್ಟಿತೊ? (ಇಂಗ್ಲಿಷ್‌) ಎಂಬ ಕಿರುಹೊತ್ತಗೆಯ ಪುಟ 24-28 ನೋಡಿ.