ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನಿನ್ನ ರಾಜ್ಯವು ಬರಲಿ”—ಆದರೆ ಯಾವಾಗ?

“ನಿನ್ನ ರಾಜ್ಯವು ಬರಲಿ”—ಆದರೆ ಯಾವಾಗ?

“ಈ ಎಲ್ಲ ಸಂಗತಿಗಳನ್ನು ನೀವು ನೋಡುವಾಗ ಅವನು ಬಾಗಿಲ ಹತ್ತಿರದಲ್ಲೇ ಇದ್ದಾನೆ ಎಂಬುದನ್ನು ತಿಳಿದುಕೊಳ್ಳಿರಿ.”ಮತ್ತಾ. 24:33.

1, 2. (1) ಯಾವ ಕಾರಣದಿಂದಾಗಿ ನಮಗೆ ಒಂದು ರೀತಿಯ ಕುರುಡುತನ ಉಂಟಾಗಬಹುದು? (2) ದೇವರ ರಾಜ್ಯದ ವಿಷಯದಲ್ಲಿ ಯಾವ ಖಾತ್ರಿ ನಮಗಿದೆ?

ನೀವು ಗಮನಿಸಿರಬಹುದು, ಒಂದು ಘಟನೆಗೆ ಪ್ರತ್ಯಕ್ಷಸಾಕ್ಷಿಗಳಾಗಿದ್ದವರು ನಂತರ ಆ ಬಗ್ಗೆ ನೆನಪಿಸಿಕೊಳ್ಳುವಾಗ ವಿವರಗಳು ಒಬ್ಬರಿಂದೊಬ್ಬರಿಗೆ ವ್ಯತ್ಯಾಸವಾಗಿರುತ್ತವೆ. ಒಬ್ಬ ರೋಗಿಗೆ ಡಾಕ್ಟರ್‌ ರೋಗನಿದಾನ ಮಾಡಿ ವಿವರಿಸಿದ ಬಳಿಕವೂ ಅದನ್ನು ಸರಿಯಾಗಿ ನೆನಪಿನಲ್ಲಿಟ್ಟುಕೊಳ್ಳಲು ಕಷ್ಟವಾಗುತ್ತದೆ. ಒಬ್ಬನು ಬೀಗದ ಕೈ ಅಥವಾ ಕನ್ನಡಕ ಎದುರಿಗೇ ಇದ್ದರೂ ಅದನ್ನು ಗಮನಿಸದೆ ಎಲ್ಲೆಲ್ಲೂ ಹುಡುಕಾಡುತ್ತಿರುತ್ತಾನೆ. ಹೀಗೇಕೆ? ಸಂಶೋಧಕರ ಪ್ರಕಾರ ಇದೊಂದು ರೀತಿಯ ಕುರುಡುತನ. ಅಂದರೆ ಮನಸ್ಸು ಬೇರೆ ವಿಷಯಗಳ ಮೇಲೆ ಇರುವುದರಿಂದ ಕಣ್ಣ ಮುಂದೆ ಇರುವುದನ್ನೂ ಗಮನಿಸದೆ ಹೋಗುವುದು, ಕೇಳಿಸಿಕೊಂಡಿರುವುದನ್ನೂ ಮರೆತುಬಿಡುವುದು ಆಗಿದೆ. ನಮ್ಮ ಮಿದುಳು ಒಮ್ಮೆಗೆ ಒಂದು ವಿಷಯದ ಮೇಲೆ ಮಾತ್ರ ಪೂರ್ಣ ಗಮನ ಕೇಂದ್ರೀಕರಿಸಬಲ್ಲದು ಎಂದು ಹೇಳಲಾಗುತ್ತದೆ.

2 ಇಂದು ಅನೇಕರಿಗೆ ಲೋಕ ಘಟನೆಗಳ ವಿಷಯದಲ್ಲಿ ತದ್ರೀತಿಯ ಕುರುಡುತನ ಇದೆ. ಇಸವಿ 1914ರಿಂದ ಲೋಕವು ತುಂಬ ಬದಲಾಗಿದೆ ಎಂದು ಅವರು ಒಪ್ಪಬಹುದಾದರೂ ಆ ಘಟನೆಗಳ ನಿಜಾರ್ಥಕ್ಕೆ ಗಮನ ಕೊಡುವುದಿಲ್ಲ. ಬೈಬಲ್‌ ವಿದ್ಯಾರ್ಥಿಗಳಾದ ನಮಗೆ ಗೊತ್ತಿದೆ ಏನೆಂದರೆ 1914ರಲ್ಲಿ ಯೇಸು ಸ್ವರ್ಗದಲ್ಲಿ ರಾಜನಾದಾಗ ದೇವರ ರಾಜ್ಯ ಒಂದರ್ಥದಲ್ಲಿ ಬಂದಿದೆ ಎಂದು. ಆದರೆ, “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಸ್ವರ್ಗದಲ್ಲಿ ನೆರವೇರುವ ಪ್ರಕಾರ ಭೂಮಿಯಲ್ಲಿಯೂ ನೆರವೇರಲಿ” ಎಂಬ ಪ್ರಾರ್ಥನೆಗೆ ಸಂಪೂರ್ಣ ಉತ್ತರ ಸಿಗುವುದು ಈ ದುಷ್ಟ ವ್ಯವಸ್ಥೆ ನಾಶವಾಗುವಾಗ ಎಂದೂ ನಮಗೆ ಗೊತ್ತಿದೆ. (ಮತ್ತಾ. 6:10) ದೇವರ ಚಿತ್ತವು ಈಗ ಸ್ವರ್ಗದಲ್ಲಿ ನೆರವೇರುತ್ತಿರುವ ಪ್ರಕಾರ ಆ ಸಮಯದಲ್ಲಿ ಭೂಮಿಯಲ್ಲಿಯೂ ನೆರವೇರುವುದು.

3. ದೇವರ ವಾಕ್ಯದ ಅಧ್ಯಯನ ಮಾಡುವುದರಿಂದ ನಮಗೆ ಏನನ್ನು ನೋಡಲು ಸಾಧ್ಯವಾಗಿದೆ?

 3 ನಾವು ದೇವರ ವಾಕ್ಯವನ್ನು ನಿಯತವಾಗಿ ಅಧ್ಯಯನ ಮಾಡುವುದರಿಂದ ಪ್ರವಾದನೆಗಳು ನಮ್ಮ ಕಣ್ಮುಂದೆಯೇ ನೆರವೇರುತ್ತಿವೆ ಎಂದು ಗ್ರಹಿಸಲು ಸಾಧ್ಯವಾಗಿದೆ. ನಮಗೂ ಲೋಕದ ಜನರಿಗೂ ಎಷ್ಟೊಂದು ವ್ಯತ್ಯಾಸ! ಅವರು ತಮ್ಮ ಜೀವನದ ಕೆಲಸಕಾರ್ಯಗಳಲ್ಲಿ ಎಷ್ಟು ಮುಳುಗಿದ್ದಾರೆಂದರೆ ಕ್ರಿಸ್ತನು 1914ರಿಂದ ರಾಜನಾಗಿ ಆಳುತ್ತಿದ್ದಾನೆ, ಈ ದುಷ್ಟಲೋಕವನ್ನು ಬೇಗನೆ ನಾಶಮಾಡಲಿದ್ದಾನೆ ಎನ್ನುವುದಕ್ಕೆ ಸ್ಪಷ್ಟ ಪುರಾವೆಗಳು ಕಣ್ಣೆದುರಿಗೇ ಇದ್ದರೂ ಅವರದನ್ನು ನೋಡುತ್ತಿಲ್ಲ. ನೀವು ದಶಕಗಳಿಂದ ಸೇವೆ ಮಾಡುತ್ತಿರುವಲ್ಲಿ ಹೀಗೆ ಕೇಳಿಕೊಳ್ಳಿ: ‘ಈ ಲೋಕದ ನಾಶನ ತುಂಬ ಹತ್ತಿರದಲ್ಲಿದೆ ಎಂದು ಈಗಲೂ ನಾನು ಮನಸ್ಸಿನಲ್ಲಿಟ್ಟಿದ್ದೇನಾ? ಅದನ್ನು ಲೋಕ ಘಟನೆಗಳು ದೃಢಪಡಿಸುತ್ತಿವೆ ಎಂಬುದಕ್ಕೆ ಗಮನಕೊಡುತ್ತಿದ್ದೇನಾ?’ ಒಂದುವೇಳೆ ನೀವು ಇತ್ತೀಚೆಗೆ ಸಾಕ್ಷಿಯಾಗಿರುವಲ್ಲಿ, ‘ನನ್ನ ಗಮನ ಯಾವುದರ ಮೇಲೆ ಕೇಂದ್ರಿತವಾಗಿದೆ?’ ಎಂದು ಕೇಳಿಕೊಳ್ಳಿ. ಭೂಮಿಯ ಮೇಲೆ ದೇವರ ಚಿತ್ತವನ್ನು ನೆರವೇರಿಸಲಿಕ್ಕಾಗಿ ದೇವರ ಅಭಿಷಿಕ್ತ ರಾಜನು ಮುಂದಿನ ಹೆಜ್ಜೆಗಳನ್ನು ಅತಿ ಬೇಗನೆ ತಕ್ಕೊಳ್ಳಲಿದ್ದಾನೆಂದು ರುಜುಪಡಿಸುವ ಮೂರು ಪ್ರಮುಖ ಕಾರಣಗಳನ್ನು ನಾವೀಗ ನೋಡೋಣ.

ಕುದುರೆ ಸವಾರರು ಬಂದಾಗಿದೆ!

4, 5. (1) ಇಸವಿ 1914ರಿಂದ ಯೇಸು ಏನು ಮಾಡುತ್ತಿದ್ದಾನೆ? (ಲೇಖನದ ಆರಂಭದಲ್ಲಿರುವ ಚಿತ್ರ ನೋಡಿ.) (2) ಮೂರು ಕುದುರೆ ಸವಾರರು ಏನನ್ನು ಚಿತ್ರಿಸುತ್ತಾರೆ? (3) ಈ ಸವಾರರ ಕುರಿತ ಪ್ರವಾದನೆ ಹೇಗೆ ನೆರವೇರಿದೆ?

4 ಇಸವಿ 1914ರಲ್ಲಿ ಯೇಸು ಕ್ರಿಸ್ತನಿಗೆ ಸ್ವರ್ಗದಲ್ಲಿ ಕಿರೀಟಧಾರಣೆ ಆಯಿತು. ಪ್ರಕಟನೆ ಪುಸ್ತಕದಲ್ಲಿ ಯೇಸುವನ್ನು ಬಿಳೀ ಕುದುರೆಯ ಮೇಲೆ ಸವಾರಿ ಮಾಡುತ್ತಿರುವವನಾಗಿ ವರ್ಣಿಸಲಾಗಿದೆ. ಅವನು ರಾಜನಾದ ಕೂಡಲೆ ಸೈತಾನನ ದುಷ್ಟ ಲೋಕದ ಮೇಲೆ ವಿಜಯವನ್ನು ಪೂರ್ಣಗೊಳಿಸಲು ಹೊರಟನು. (ಪ್ರಕಟನೆ 6:1, 2 ಓದಿ.) ಪ್ರಕಟನೆ 6ನೇ ಅಧ್ಯಾಯದಲ್ಲಿರುವ ಆ ವರ್ಣನಾತ್ಮಕ ಪ್ರವಾದನೆಯು ದೇವರ ರಾಜ್ಯ ಸ್ಥಾಪನೆಯಾದ ಬಳಿಕ ಭೂಮಿಯಲ್ಲಿ ಪರಿಸ್ಥಿತಿ ಅಧೋಗತಿಗೆ ಇಳಿಯುವುದೆಂದು ಮುಂತಿಳಿಸಿತು. ಯುದ್ಧ, ಆಹಾರ ಕೊರತೆ, ವ್ಯಾಧಿಗಳು, ಮಾನವ ಜೀವಗಳನ್ನು ಆಹುತಿ ತಕ್ಕೊಳ್ಳುವ ಇತರ ಸಂಗತಿಗಳು ಹಿಂದೆಂದಿಗಿಂತಲೂ ಹೆಚ್ಚಾಗಿ ಸಂಭವಿಸುವವೆಂದು ಅದು ಮುಂತಿಳಿಸಿತು. ಇಂಥ ವಿಪತ್ತುಗಳು ಯೇಸು ಕ್ರಿಸ್ತನ ಹಿಂದೆ ಧಾವಿಸಿ ಬರುತ್ತಿರುವ ಮೂರು ಕುದುರೆ ಸವಾರರಿಂದ ಚಿತ್ರಿಸಲ್ಪಟ್ಟಿವೆ.—ಪ್ರಕ. 6:3-8.

5 ಮುಂತಿಳಿಸಲಾದಂತೆ ಯುದ್ಧವು ‘ಭೂಮಿಯಿಂದ ಶಾಂತಿಯನ್ನು ತೆಗೆದುಹಾಕಿತು.’ ಅನೇಕ ರಾಷ್ಟ್ರಗಳು ಕೈಜೋಡಿಸಿ ಶಾಂತಿ ತರುವ ನಿಟ್ಟಿನಲ್ಲಿ ಒಂದರ ಮೇಲೊಂದು ವಾಗ್ದಾನಗಳನ್ನು ಮಾಡಿದ್ದವಾದರೂ ಶಾಂತಿ ತರುವುದು ಅಸಾಧ್ಯವಾಯಿತು. ಭೂಮಿಯಲ್ಲಿ ಶಾಂತಿಯನ್ನು ತೆಗೆದುಹಾಕಿದ ಯುದ್ಧಗಳಲ್ಲಿ ಒಂದನೇ ಮಹಾಯುದ್ಧವು ಕೇವಲ ಮೊದಲಿನದ್ದು. ಅಷ್ಟಲ್ಲದೆ, 1914ರಿಂದ ಈವರೆಗೆ ಆರ್ಥಿಕ ಮತ್ತು ವೈಜ್ಞಾನಿಕ ರಂಗಗಳಲ್ಲಿ ತುಂಬ ಪ್ರಗತಿಯಾಗಿದ್ದರೂ ಲೋಕದ ಭದ್ರತೆಗೆ ಬೆದರಿಕೆಯೊಡ್ಡುತ್ತಿರುವ ಆಹಾರ ಕೊರತೆ ನಿವಾರಣೆಯಾಗಿಲ್ಲ. ಜೊತೆಗೆ ನಾನಾ ತರದ ಅಂಟುರೋಗಗಳು, ನೈಸರ್ಗಿಕ ವಿಪತ್ತುಗಳು, ‘ಮಾರಕ ವ್ಯಾಧಿಗಳು’ ಪ್ರತಿ ವರ್ಷ ಮಿಲ್ಯಾಂತರ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿವೆ. ಅದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಈ ಎಲ್ಲ ಸಂಗತಿಗಳು ಮಾನವ ಇತಿಹಾಸದಲ್ಲಿ ಹಿಂದೆಂದಿಗಿಂತಲೂ ಇಂದು ಹೆಚ್ಚು ವ್ಯಾಪಕವಾಗಿವೆ, ಪುನರಾವರ್ತನೆಗೊಳ್ಳುತ್ತಿವೆ, ತೀವ್ರತೆಯೂ ಅಧಿಕವಾಗಿದೆ. ಕುದುರೆ ಸವಾರರ ಕುರಿತ ಬೈಬಲ್‌ ಪ್ರವಾದನೆಯ ಈ ನೆರವೇರಿಕೆಯು ದೇವರ ರಾಜ್ಯ ಭೂಮಿಯ ಮೇಲೆ ಆಳ್ವಿಕೆ ಮಾಡುವ ಸಮಯ ತುಂಬ ಹತ್ತಿರವಿದೆ ಎಂದು ನಂಬಲು ಒಂದು ಕಾರಣವಾಗಿದೆ. ನೀವಿದನ್ನು ಗ್ರಹಿಸುತ್ತೀರೊ?

ಕುದುರೆ ಸವಾರರು ಸವಾರಿ ಮಾಡುತ್ತಿರುವ ಈ ಸಮಯದಲ್ಲಿ ಲೋಕದ ಪರಿಸ್ಥಿತಿಗಳು ಹೆಚ್ಚೆಚ್ಚು ಕೆಟ್ಟದಾಗುತ್ತಾ ಇವೆ (ಪ್ಯಾರ 4, 5 ನೋಡಿ)

6. (1) ಬೈಬಲ್‌ ಪ್ರವಾದನೆಯ ನೆರವೇರಿಕೆಗೆ ಯಾರು ಗಮನಕೊಟ್ಟಿದ್ದರು? (2) ಹಾಗಾಗಿ ಅವರೇನು ಮಾಡಿದರು?

6 ಒಂದನೇ ಮಹಾಯುದ್ಧ ಸ್ಫೋಟಿಸಿದಾಗ ಮತ್ತು ಸ್ಪ್ಯಾನಿಷ್‌ ಇನ್ಫ್ಲುಯೆಂಜಾ ರೋಗ ಎಲ್ಲೆಲ್ಲೂ ಹರಡಿದಾಗ ಬಹುಮಂದಿಯ ಗಮನವೆಲ್ಲ ಅವುಗಳ ಕಡೆಗೇ ಹೋಯಿತು. ಪ್ರವಾದನೆಯ ನೆರವೇರಿಕೆಯ ಕಡೆಗೆ ಹೋಗಲಿಲ್ಲ. ಆದರೆ ಅಭಿಷಿಕ್ತ ಕ್ರೈಸ್ತರು ಮುಂಚಿನಿಂದಲೂ “ಅನ್ಯಜನಾಂಗಗಳ ನೇಮಿತ ಕಾಲಗಳು” 1914ರಲ್ಲಿ ಕೊನೆಗೊಳ್ಳಲಿವೆ ಎಂದು ಆಸಕ್ತಿಯಿಂದ ಎದುರುನೋಡುತ್ತಿದ್ದರು. (ಲೂಕ 21:24) ಆ ವರ್ಷದಲ್ಲಿ ನಿಖರವಾಗಿ ಏನು ಸಂಭವಿಸಲಿದೆ ಎಂದು ಅವರಿಗೆ ಪೂರ್ಣವಾಗಿ ಗೊತ್ತಿರಲಿಲ್ಲವಾದರೂ ದೈವಿಕ ಆಳ್ವಿಕೆಯ ಸಂಬಂಧದಲ್ಲಿ 1914ನೇ ವರ್ಷವು ಒಂದು ತಿರುಗುಬಿಂದುವಾಗಲಿದೆ ಎಂದು ತಿಳಿದಿತ್ತು. ಬೈಬಲ್‌ ಪ್ರವಾದನೆ ನೆರವೇರಿಕೆ ಹೊಂದುತ್ತಿರುವುದನ್ನು ಅಭಿಷಿಕ್ತ ಕ್ರೈಸ್ತರು ಗ್ರಹಿಸಿದ ಕೂಡಲೆ ದೇವರ ರಾಜ್ಯವು ಆಳ್ವಿಕೆಯನ್ನು ಪ್ರಾರಂಭಿಸಿದೆ ಎಂದು ಧೈರ್ಯದಿಂದ ಸಾರಿದರು. ರಾಜ್ಯದ ಸಂದೇಶವನ್ನು ಸಾರಿದವರಲ್ಲಿ ಅನೇಕರು ಕ್ರೂರ ಹಿಂಸೆಯನ್ನು ಅನುಭವಿಸಬೇಕಾಯಿತು. ಸಾರುವ ಕಾರ್ಯಕ್ಕೆ ಅನೇಕ ದೇಶಗಳಲ್ಲಿ ಎದುರಾದ ಹಿಂಸೆಯು ತಾನೇ ಬೈಬಲ್‌ ಪ್ರವಾದನೆಯ ನೆರವೇರಿಕೆಯಾಗಿತ್ತು. ಅನಂತರದ ವರ್ಷಗಳಲ್ಲಿ ದೇವರ ರಾಜ್ಯದ ವಿರೋಧಿಗಳು ಕಾನೂನನ್ನು ಬಳಸಿ  ಕೂಡ ತೊಂದರೆಗಳನ್ನು ತರಲು ಮುಂದಾದರು. ಜೊತೆಗೆ ಸಾರುವ ಕಾರ್ಯವನ್ನು ನಿಲ್ಲಿಸಲಿಕ್ಕಾಗಿ ಸಹೋದರರನ್ನು ಹಿಂಸಿಸಿದರು, ಸೆರೆಮನೆಗೆ ಹಾಕಿದರು. ಅಷ್ಟೇ ಅಲ್ಲ, ನೇಣುಹಾಕಿ, ಗುಂಡಿಕ್ಕಿ ಅಥವಾ ಶಿರಚ್ಛೇದನ ಮಾಡಿ ಅವರನ್ನು ಕೊಂದರು.—ಕೀರ್ತ. 94:20; ಪ್ರಕ. 12:15.

7. ಬಹುತೇಕ ಮಂದಿ ಲೋಕದ ಘಟನೆಗಳ ಅರ್ಥವನ್ನು ಏಕೆ ಗ್ರಹಿಸುತ್ತಿಲ್ಲ?

7 ದೇವರ ರಾಜ್ಯವು ಈಗಾಗಲೇ ಸ್ವರ್ಗದಲ್ಲಿ ಸ್ಥಾಪನೆಯಾಗಿದೆ ಎಂಬುದಕ್ಕೆ ಕಣ್ಣಿಗೆ ಕಟ್ಟುವಂಥ ಸಾಕ್ಷ್ಯಗಳು ಇರುವುದಾದರೂ ಬಹುತೇಕ ಜನರಿಗೆ ಅದೇಕೆ ಕಾಣುತ್ತಿಲ್ಲ? ವರ್ಷಾನುವರ್ಷಗಳಿಂದ ದೇವಜನರು ಸಾರುತ್ತಿರುವಂತೆ ಲೋಕದಲ್ಲಿ ಸಂಭವಿಸುತ್ತಿರುವ ವಿಷಯಗಳು ಬೈಬಲ್‌ ಪ್ರವಾದನೆಯ ನೆರವೇರಿಕೆಯೆಂದು ಜನರು ಏಕೆ ಅರಿತುಕೊಳ್ಳುತ್ತಿಲ್ಲ? ತಮ್ಮ ಕಣ್ಣಿಗೆ ಕಾಣುವುದರ ಮೇಲಷ್ಟೇ ಅವರು ಗಮನ ನೆಟ್ಟಿರುವುದರಿಂದಲೊ? (2 ಕೊರಿಂ. 5:7) ದೇವರು ಈಗ ಏನು ಮಾಡುತ್ತಿದ್ದಾನೋ ಅದು ಕಾಣದಷ್ಟರ ಮಟ್ಟಿಗೆ ಅವರು ತಮ್ಮ ಜೀವನದಲ್ಲಿ ಮುಳುಗಿ ಹೋಗಿರುವುದರಿಂದಲೊ? (ಮತ್ತಾ. 24:37-39) ಸೈತಾನನ ಲೋಕ ಏನು ಹೇಳುತ್ತದೋ ಅದು ಮಾತ್ರ ಅವರ ಕಿವಿಯಲ್ಲಿ ಮೊಳಗುತ್ತಿದ್ದು ಬೇರೇನೂ ಅವರಿಗೆ ಕೇಳಿಸದೇ ಇರುವುದರಿಂದಲೊ? (2 ಕೊರಿಂ. 4:4) ದೇವರ ರಾಜ್ಯವು ಏನು ಮಾಡುತ್ತಿದೆ ಎಂದು ನೋಡಲು ನಮಗೆ ನಂಬಿಕೆ ಮತ್ತು ಆಧ್ಯಾತ್ಮಿಕ ಗ್ರಹಿಕೆ ಬೇಕು. ಲೋಕದ ಜನರಿಗಿರುವ ಈ ಕುರುಡುತನ ನಮಗೆ ಇಲ್ಲದಿರುವುದಕ್ಕೆ ನಾವು ಎಷ್ಟೊಂದು ಸಂತೋಷಿತರು!

ದುಷ್ಟತನ ಇನ್ನೂ ಹೆಚ್ಚೆಚ್ಚಾಗುತ್ತಿದೆ

8-10. (1) ಎರಡನೇ ತಿಮೊಥೆಯ 3:1-5 ಹೇಗೆ ನೆರವೇರುತ್ತಿದೆ? (2) ಕೆಟ್ಟತನವು ದಿನದಿಂದ ದಿನಕ್ಕೆ ಹೆಚ್ಚೆಚ್ಚಾಗುತ್ತಿದೆ ಎಂದು ನಾವೇಕೆ ಹೇಳಬಲ್ಲೆವು?

8 ದೇವರ ರಾಜ್ಯ ಭೂಮಿಯನ್ನು ತನ್ನ ವಶಕ್ಕೆ ತಕ್ಕೊಳ್ಳಲು ಇನ್ನು ಹೆಚ್ಚು ಸಮಯ ಉಳಿದಿಲ್ಲವೆಂದು ನಂಬಲು ಇನ್ನೊಂದು ಕಾರಣ, ಲೋಕದಲ್ಲಿ ಇಂದು ದುಷ್ಟತನ ದಿನದಿಂದ ದಿನಕ್ಕೆ ಹೆಚ್ಚೆಚ್ಚಾಗುತ್ತಿರುವುದೇ. ಸುಮಾರು ನೂರು ವರ್ಷಗಳಿಂದಲೂ 2 ತಿಮೊಥೆಯ 3:1-5ರ ಪ್ರವಾದನೆ ನೆರವೇರಿಕೆ ಹೊಂದುತ್ತಾ ಇದೆ. ಮಾತ್ರವಲ್ಲ ಅಲ್ಲಿ ತಿಳಿಸಲಾಗಿರುವ ನಡವಳಿಕೆ ಪ್ರಪಂಚದ ಎಲ್ಲ ಕಡೆಗಳಿಗೂ ಹಬ್ಬುತ್ತಿದೆ. ಈ ಪ್ರವಾದನೆ ತೀವ್ರಗತಿಯಲ್ಲಿ ನೆರವೇರಿಕೆ ಹೊಂದುತ್ತಿರುವುದಕ್ಕೆ ನೀವು ಗಮನ ಕೊಡುತ್ತಿದ್ದೀರೊ? ಇದನ್ನು ದೃಢಪಡಿಸುವ ಕೆಲವು ಉದಾಹರಣೆಗಳನ್ನು ನೋಡೋಣ.—2 ತಿಮೊಥೆಯ 3:1, 13 ಓದಿ.

9 ಈ ಕುರಿತು ಯೋಚಿಸಿ. ಹಿಂದೆ 1940ರ ಅಥವಾ 1950ರ ದಶಕಗಳಲ್ಲಿ ಯಾವುದು ಜನರನ್ನು ದಂಗಾಗಿಸುತ್ತಿತ್ತೊ ಆ ಹಿಂಸಾಕೃತ್ಯ, ಅನೈತಿಕತೆ ಇಂದು ಕೆಲಸದ ಸ್ಥಳದಲ್ಲಿ ಮತ್ತು ಮನರಂಜನೆ, ಕ್ರೀಡೆ, ಫ್ಯಾಶನ್‌ ಜಗತ್ತಿನಲ್ಲಿ ಹೀಗೆ ಎಲ್ಲೆಡೆ ಸರ್ವೇಸಾಮಾನ್ಯವಾಗಿದೆ. ಮಾತ್ರವಲ್ಲ ವಿಪರೀತಕ್ಕೆ ಹೋಗಿದೆ. ಕ್ರೂರತೆ, ಅಸಭ್ಯತೆ, ಹಿಂಸಾಚಾರದಲ್ಲಿ ಬೇರೆಯವರನ್ನು ಮೀರಿಸಲು ಜನರು ಪೈಪೋಟಿಗೆ ನಿಲ್ಲುತ್ತಾರೆ. 1950ರ ದಶಕದಲ್ಲಿ ಟಿವಿ ಕಾರ್ಯಕ್ರಮಗಳಲ್ಲಿ ಯಾವುದನ್ನು ಅತಿರೇಕವೆಂದು ಎಣಿಸಲಾಗುತ್ತಿತ್ತೊ ಅದೀಗ ಕುಟುಂಬವಾಗಿ ಕೂತು ನೋಡುವ ಮನರಂಜನೆಯಾಗಿದೆ. ಮನರಂಜನೆ ಮತ್ತು ಫ್ಯಾಶನ್‌ ರಂಗಗಳಲ್ಲಿ  ಸಲಿಂಗಕಾಮಿಗಳು ಬಲವಾದ ಪ್ರಭಾವ ಬೀರುತ್ತಾ ಸಮಾಜದಲ್ಲಿ ತಮ್ಮ ಜೀವನಶೈಲಿಯನ್ನು ಪ್ರವರ್ಧಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಈ ಎಲ್ಲ ದುರ್ನಡತೆಗಳನ್ನು ದೇವರು ಹೇಗೆ ವೀಕ್ಷಿಸುತ್ತಾನೆಂದು ಅರಿತಿರುವುದಕ್ಕೆ ನಾವು ನಿಜಕ್ಕೂ ಕೃತಜ್ಞರು.—ಯೂದ 14, 15 ಓದಿ.

10 ಯುವ ಜನರಲ್ಲಿ ಯಾವುದನ್ನು ದಂಗೆಕೋರ ಗುಣವೆಂದು 1950ರ ದಶಕದಲ್ಲಿ ಎಣಿಸಲಾಗುತ್ತಿತ್ತೊ ಅದನ್ನೂ ಇಂದಿನ ಯುವಜನರು ವರ್ತಿಸುವ ವಿಧವನ್ನೂ ಹೋಲಿಸಿನೋಡಿ. ಆಗೆಲ್ಲಾ ಹೆತ್ತವರು ತಮ್ಮ ಮಕ್ಕಳು ಬೀಡಿ-ಸಿಗರೇಟು ಸೇದಿದರೆ, ಮದ್ಯಪಾನ ಮಾಡಿದರೆ, ಅಸಭ್ಯವಾಗಿ ಡ್ಯಾನ್ಸ್‌ ಮಾಡಿದರೆ ತುಂಬ ಚಿಂತೆಗೀಡಾಗುತ್ತಿದ್ದರು. ಆದರೆ ಇಂದು ಬೆಚ್ಚಿಬೀಳಿಸುವ ಸುದ್ದಿಗಳು ದಿನಬೆಳಗಾದರೆ ಕೇಳಸಿಗುತ್ತವೆ. ‘15 ವರ್ಷದ ವಿದ್ಯಾರ್ಥಿ ಸಹಪಾಠಿಗಳ ಮೇಲೆ ಗುಂಡುಹಾರಿಸಿದ್ದರ ಪರಿಣಾಮ ಇಬ್ಬರು ಮೃತಪಟ್ಟರೆ 13 ಮಂದಿ ಗಾಯಗೊಂಡಿದ್ದಾರೆ.’ ‘ಕುಡಿದು ಅಮಲಿನಲ್ಲಿದ್ದ ಕೆಲವು ಹದಿವಯಸ್ಸಿನವರು 9 ವರ್ಷದ ಬಾಲಕಿಯನ್ನು ಕ್ರೂರವಾಗಿ ಸಾಯಿಸಿ ಅವಳ ತಂದೆ ಮತ್ತು ಸಂಬಂಧಿಕನನ್ನು ಥಳಿಸಿದ್ದಾರೆ’ ಇತ್ಯಾದಿ. ಇನ್ನೊಂದು ವಾರ್ತಾ ವರದಿಗನುಸಾರ, ಏಷ್ಯಾದ ಒಂದು ದೇಶದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ನಡೆದ ಪಾತಕಗಳಲ್ಲಿ ಅರ್ಧಕರ್ಧ ಯುವಜನರಿಂದಲೇ ನಡೆದಿವೆ. ಇಂದು ಪರಿಸ್ಥಿತಿ ಹೆಚ್ಚೆಚ್ಚು ಕೆಟ್ಟದ್ದಾಗುತ್ತಿದೆ ಎಂಬುದನ್ನು ಯಾರಾದರೂ ಒಪ್ಪದಿರಲು ಸಾಧ್ಯವೇ?

11. ಪರಿಸ್ಥಿತಿ ಹೆಚ್ಚೆಚ್ಚು ಕೆಟ್ಟದಾಗುತ್ತಿರುವುದು ಜನರ ಗಮನಕ್ಕೆ ಏಕೆ ಬರುತ್ತಿಲ್ಲ?

11 ಅಪೊಸ್ತಲ ಪೇತ್ರನು ಕರಾರುವಕ್ಕಾಗಿ ಹೇಳಿದ್ದು: “ಕಡೇ ದಿವಸಗಳಲ್ಲಿ ಕುಚೋದ್ಯಗಾರರು ತಮ್ಮ ಕುಚೋದ್ಯದ ಮಾತುಗಳೊಂದಿಗೆ ಬರುವರು ಎಂಬುದನ್ನು ನೀವು ಮೊದಲು ತಿಳಿದುಕೊಳ್ಳಿರಿ; ಅವರು ತಮ್ಮ ಸ್ವಂತ ಇಚ್ಛೆಗಳಿಗನುಸಾರ ನಡೆಯುತ್ತಾ ‘ಅವನ ವಾಗ್ದತ್ತ ಸಾನ್ನಿಧ್ಯವು ಎಲ್ಲಿದೆ? ನಮ್ಮ ಪೂರ್ವಜರು ಮರಣದಲ್ಲಿ ನಿದ್ರೆಹೋದ ದಿನದಿಂದ ಎಲ್ಲವೂ ಸೃಷ್ಟಿಯ ಆರಂಭದಿಂದಿದ್ದ ಹಾಗೆಯೇ ಮುಂದುವರಿಯುತ್ತಿದೆಯಲ್ಲಾ’ ಎಂದು ಹೇಳುವರು.” (2 ಪೇತ್ರ 3:3, 4) ಜನರು ಹೀಗೇಕೆ ವರ್ತಿಸುತ್ತಾರೆ? ಯಾವಾಗಲೂ ನೋಡುತ್ತಾ ಕೇಳುತ್ತಾ ಇರುವ ಸಂಗತಿಗಳಿಗೆ ಜನರು ಹೆಚ್ಚು ಗಮನ ಕೊಡುವುದಿಲ್ಲ ಎಂದು ತೋರುತ್ತದೆ. ಉದಾಹರಣೆಗೆ, ಮಿತ್ರರೊಬ್ಬರ ವರ್ತನೆ ಇದ್ದಕ್ಕಿದ್ದ ಹಾಗೆ ಬದಲಾದರೆ ಅದು ಆಘಾತಕಾರಿಯಾಗಿರಬಹುದು. ಆದರೆ ಸಮಾಜದ ನೈತಿಕ ಮಟ್ಟ ಮತ್ತು ವರ್ತನೆಯು ದಿನ ದಿನವೂ ಸ್ವಲ್ಪ ಸ್ವಲ್ಪವಾಗಿ ಬದಲಾದರೆ ಅದು ಗಮನಕ್ಕೆ ಬಾರದೆ ಹೋಗಬಹುದು. ಹಾಗಿದ್ದರೂ ಮೆಲ್ಲಮೆಲ್ಲನೆ ಆಗುವ ಈ ನೈತಿಕ ಅಧಃಪತನ ತುಂಬ ಅಪಾಯಕಾರಿ.

12, 13. (1) ಲೋಕದಲ್ಲಿ ಸಂಭವಿಸುತ್ತಿರುವ ವಿಷಯಗಳನ್ನು ನೋಡಿ ನಾವು ನಿರಾಶೆಗೊಳ್ಳಬಾರದೇಕೆ? (2) ಏನನ್ನು ತಿಳಿದಿರುವುದು “ನಿಭಾಯಿಸಲು ಕಷ್ಟಕರವಾದ” ಪರಿಸ್ಥಿತಿಗಳನ್ನು ತಾಳಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ?

12 ಅಪೊಸ್ತಲ ಪೌಲನು ನಮ್ಮನ್ನು ಎಚ್ಚರಿಸಿದಂತೆ “ಕಡೇ ದಿವಸಗಳಲ್ಲಿ” ಪರಿಸ್ಥಿತಿಗಳು ‘ನಿಭಾಯಿಸಲು ಕಷ್ಟಕರವಾಗಿರುತ್ತವೆ’ ನಿಜ. (2 ತಿಮೊ. 3:1) ಆದರೆ ಅವು ನಿಭಾಯಿಸಲು ಅಸಾಧ್ಯವಾದವುಗಳಲ್ಲ. ಅವುಗಳಿಗೆ ಹೆದರಿ ನಾವು ಅಡಗಿ ಕೂರಬೇಕಾಗಿಲ್ಲ. ಏಕೆಂದರೆ ಭಯ, ನಿರಾಶೆ ಏನೇ ಎದುರಾದರೂ ನಾವದನ್ನು ಯೆಹೋವನ ಸಹಾಯದಿಂದ, ಆತನ ಪವಿತ್ರಾತ್ಮ ಮತ್ತು ಕ್ರೈಸ್ತ ಸಭೆಯ ನೆರವಿನಿಂದ ನಿಭಾಯಿಸಲು ಸಾಧ್ಯವಿದೆ. ಯೆಹೋವನಿಗೆ ನಂಬಿಗಸ್ತರಾಗಿ ಉಳಿಯಸಾಧ್ಯವಿದೆ. ದೇವರು ನಮಗೆ “ಸಹಜ ಶಕ್ತಿಗಿಂತ ಹೆಚ್ಚಿನ ಶಕ್ತಿ” ಕೊಡುವನು.—2 ಕೊರಿಂ. 4:7-10.

13 ಕಡೇ ದಿವಸಗಳ ಕುರಿತ ಪ್ರವಾದನೆಯ ಆರಂಭದಲ್ಲೇ ಪೌಲನು “ತಿಳಿದುಕೊ” ಎಂದು ಹೇಳಿರುವುದನ್ನು ಗಮನಿಸಿ. ಈ ಮಾತು, ಪ್ರವಾದನೆಯಲ್ಲಿರುವ ಎಲ್ಲ ವಿಷಯಗಳು ಖಂಡಿತ ನೆರವೇರುವವು ಎಂಬ ಖಾತರಿ ಕೊಡುತ್ತದೆ. ಯೆಹೋವನು ಹಸ್ತಕ್ಷೇಪ ಮಾಡಿ ಈ ಭಕ್ತಿಹೀನ ಲೋಕಕ್ಕೆ ಅಂತ್ಯ ತರುವ ವರೆಗೂ ಪರಿಸ್ಥಿತಿಗಳು ಹೆಚ್ಚೆಚ್ಚು ಕೆಟ್ಟದಾಗುವುದು ನಿಸ್ಸಂಶಯ. ನೈತಿಕ ಮಟ್ಟಗಳು ತೀರಾ ಅವನತಿಗಿಳಿದಾಗ ಕೆಲವು ಸಮಾಜ ಇಲ್ಲವೆ ದೇಶಗಳು ಪೂರ್ತಿ ಅಳಿದು ಹೋಗಿವೆ ಎಂಬುದಕ್ಕೆ ಇತಿಹಾಸದಲ್ಲಿ ದಾಖಲೆಯಿದೆ. ಆದರೆ ಇಂದು ಪ್ರಪಂಚದೆಲ್ಲೆಡೆ ನೈತಿಕ ಮಟ್ಟಗಳು ಅಧಃಪತನಕ್ಕೆ ಇಳಿದಿವೆ. ಇಷ್ಟರ ಮಟ್ಟಿಗೆ ಹಿಂದೆಂದೂ ಆಗಿರಲಿಲ್ಲ. ಇವುಗಳು ಏನನ್ನು ಸೂಚಿಸುತ್ತವೆ ಎಂಬುದಕ್ಕೆ ಬಹು ಜನರು ಗಮನ ಕೊಡದಿರಬಹುದು. ಆದರೆ 1914ರಿಂದ ನಡೆಯುತ್ತಿರುವ ಈ ಎಲ್ಲ ಸಂಗತಿಗಳು ದೇವರ ರಾಜ್ಯ ಅತಿ ಶೀಘ್ರದಲ್ಲೇ ನಿರ್ಣಾಯಕ ಹೆಜ್ಜೆ ತಕ್ಕೊಳ್ಳಲಿದೆ ಎಂದು ನಮಗೆ ಸ್ಪಷ್ಟವಾಗಿ ತೋರಿಸುತ್ತವೆ.

ಈ ಸಂತತಿ ಅಳಿದುಹೋಗುವುದೇ ಇಲ್ಲ

14-16. ದೇವರ ರಾಜ್ಯವು ಬೇಗನೆ ‘ಬರಲಿದೆ’ ಎಂದು ನಾವು ನಂಬಲು ಮೂರನೇ ಕಾರಣ ಯಾವುದು?

14 ಅಂತ್ಯವು ಹತ್ತಿರವಿದೆ ಎಂದು ನಂಬಲು ನಮಗೆ ಮೂರನೇ ಕಾರಣವೂ ಇದೆ. ದೇವಜನರ ಮಧ್ಯೆ ಆಗಿರುವ ಬೆಳವಣಿಗೆಯು ಅಂತ್ಯ ತುಂಬ ಹತ್ತಿರದಲ್ಲಿದೆ ಎಂಬುದಕ್ಕೆ ಬೊಟ್ಟುಮಾಡುತ್ತದೆ. ಉದಾಹರಣೆಗೆ, ದೇವರ ರಾಜ್ಯ ಸ್ವರ್ಗದಲ್ಲಿ ಸ್ಥಾಪನೆಯಾಗುವುದಕ್ಕೆ ಮುಂಚೆ ನಂಬಿಗಸ್ತ ಅಭಿಷಿಕ್ತ ಸಹೋದರರ ಒಂದು ಗುಂಪು ದೇವರ ಸೇವೆಯನ್ನು ಸಕ್ರಿಯವಾಗಿ ಮಾಡುತ್ತಿತ್ತು. 1914ರಲ್ಲಿ ಸಂಭವಿಸಬಹುದೆಂದು ಅವರೆಣಿಸಿದ ಕೆಲವು ಘಟನೆಗಳು ನೆರವೇರದಿದ್ದಾಗ ಅವರೇನು ಮಾಡಿದರು? ಹೆಚ್ಚಿನವರು  ನಿರಾಶೆಗೊಳ್ಳದೆ ದೇವರ ಸೇವೆಯನ್ನು ಮಾಡುತ್ತಾ ಹೋದರು. ಕಷ್ಟಪರೀಕ್ಷೆ, ಹಿಂಸೆಯ ಮಧ್ಯೆಯೂ ಸಮಗ್ರತೆಯನ್ನು ಕಾಪಾಡಿಕೊಂಡರು. ಆ ನಂಬಿಗಸ್ತ ಅಭಿಷಿಕ್ತರಲ್ಲಿ ಎಲ್ಲರಲ್ಲದಿದ್ದರೂ ಹೆಚ್ಚಿನವರು ತಮ್ಮ ಭೂಜೀವನವನ್ನು ಮುಗಿಸಿದ್ದಾರೆ.

15 ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಕುರಿತ ಸವಿವರ ಪ್ರವಾದನೆಯಲ್ಲಿ ಯೇಸು ಹೀಗಂದನು: “ಈ ಎಲ್ಲ ಸಂಗತಿಗಳು ಸಂಭವಿಸುವ ತನಕ ಈ ಸಂತತಿಯು ಅಳಿದು ಹೋಗುವುದೇ ಇಲ್ಲ.” (ಮತ್ತಾಯ 24:33-35 ಓದಿ.) ಯೇಸು “ಈ ಸಂತತಿ” ಎಂದು ಹೇಳಿದಾಗ ಅಭಿಷಿಕ್ತ ಕ್ರೈಸ್ತರ ಎರಡು ಗುಂಪುಗಳಿಗೆ ಸೂಚಿಸಿದನೆಂದು ಗೊತ್ತಾಗುತ್ತದೆ. ಮೊದಲನೇ ಗುಂಪು 1914ರಲ್ಲಿ ಇತ್ತು ಮತ್ತು ಕ್ರಿಸ್ತನು ಆ ವರ್ಷ ರಾಜನಾಗಿ ಆಳ್ವಿಕೆಯನ್ನು ಶುರುಮಾಡಿದ್ದಾನೆಂದು ಆ ಗುಂಪಿನವರು ಗ್ರಹಿಸಿದ್ದರು. ಅವರು 1914ರಲ್ಲಿ ಜೀವಂತವಾಗಿದ್ದದ್ದು ಮಾತ್ರವಲ್ಲ ಆ ವರ್ಷ ಅಥವಾ ಅದಕ್ಕೂ ಮುಂಚೆಯೇ ದೇವರ ಪುತ್ರರಾಗಿ ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟವರಾಗಿದ್ದರು.—ರೋಮ. 8:14-17.

16 ‘ಈ ಸಂತತಿಯ’ ಎರಡನೇ ಗುಂಪಿನಲ್ಲಿರುವವರು ಯಾರು? ಅವರು ಮೊದಲನೇ ಗುಂಪಿನಲ್ಲಿದ್ದ ಅಭಿಷಿಕ್ತರ ಸಮಕಾಲೀನರಾಗಿದ್ದಾರೆ ಅಂದರೆ ಅವರು ಮೊದಲನೇ ಗುಂಪಿನಲ್ಲಿದ್ದ ಅಭಿಷಿಕ್ತರ ಜೀವಮಾನಕಾಲದಲ್ಲಿ ಜೀವಿಸಿದ್ದವರು ಅಷ್ಟೇ ಅಲ್ಲ ಮೊದಲನೇ ಗುಂಪಿನಲ್ಲಿದ್ದವರು ಭೂಮಿಯ ಮೇಲೆ ಬದುಕಿದ್ದಾಗಲೇ ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟವರು ಆಗಿದ್ದಾರೆ. ಆದ್ದರಿಂದ ಇಂದಿರುವ ಪ್ರತಿಯೊಬ್ಬ ಅಭಿಷಿಕ್ತನೂ ಯೇಸು ಹೇಳಿದ ‘ಈ ಸಂತತಿಯಲ್ಲಿ’ ಒಳಗೂಡಿಲ್ಲ. ಇಂದು ಆ ಎರಡನೇ ಗುಂಪಿನ ಅಭಿಷಿಕ್ತರಲ್ಲಿ ಹೆಚ್ಚಿನವರು ವೃದ್ಧರಾಗುತ್ತಿದ್ದಾರೆ. ಹಾಗಿದ್ದರೂ ‘ಈ ಸಂತತಿಯಲ್ಲಿ’ ಕೆಲವರಾದರೂ ಮಹಾ ಸಂಕಟದ ಆರಂಭವನ್ನು ಕಾಣುವ ಮುಂಚೆ “ಅಳಿದು ಹೋಗುವುದೇ ಇಲ್ಲ” ಎಂದು ಮತ್ತಾಯ 24:34ರಲ್ಲಿರುವ ಯೇಸುವಿನ ಮಾತುಗಳು ನಮಗೆ ಭರವಸೆ ಕೊಡುತ್ತವೆ. ಇದು ದೇವರ ರಾಜ್ಯದ ಅರಸನು ದುಷ್ಟರನ್ನು ನಾಶಮಾಡಿ ನೀತಿಯ ಹೊಸ ಲೋಕವನ್ನು ತರಲು ಉಳಿದಿರುವ ಸಮಯ ಕೊಂಚವೆಂದು ನಮಗೆ ಇನ್ನೂ ಹೆಚ್ಚಾಗಿ ದೃಢಪಡಿಸುತ್ತದೆ.—2 ಪೇತ್ರ 3:13.

ಕ್ರಿಸ್ತನು ಶೀಘ್ರದಲ್ಲೇ ತನ್ನ ವಿಜಯವನ್ನು ಪೂರ್ಣಗೊಳಿಸುವನು

17. ನಾವು ಪರಿಗಣಿಸಿದ ಮೂರು ರುಜುವಾತುಗಳಿಂದ ಯಾವ ಸಮಾಪ್ತಿಗೆ ಬರಬಲ್ಲೆವು?

17 ಈಗ ಪರಿಗಣಿಸಿದ ಮೂರು ರುಜುವಾತುಗಳಿಂದ ನಾವು ಯಾವ ನಿರ್ಧಾರಕ್ಕೆ ಬರಬಲ್ಲೆವು? ಅಂತ್ಯವು ಬರುವ ನಿರ್ದಿಷ್ಟ ದಿನ ಮತ್ತು ಗಳಿಗೆ ನಮಗೆ ತಿಳಿದಿರುವುದಿಲ್ಲ ಎಂದು ಯೇಸು ಎಚ್ಚರಿಸಿದನು. (ಮತ್ತಾ. 24:36; 25:13) ಆದರೆ ಪೌಲನು ಹೇಳಿದ ಪ್ರಕಾರ ನಾವು ಅದರ “ಕಾಲ”ವನ್ನು ತಿಳಿಯಲು ಸಾಧ್ಯವಿದೆ. ನಾವು ಆ ಕಾಲವನ್ನು ತಿಳಿದಿದ್ದೇವೆ ಸಹ. (ರೋಮನ್ನರಿಗೆ 13:11 ಓದಿ.) ನಾವೀಗ ಆ ಕಾಲದಲ್ಲೇ ಅಂದರೆ ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆ. ನಾವು ಬೈಬಲ್‌ ಪ್ರವಾದನೆಗೆ ಮತ್ತು ಯೆಹೋವನೂ ಯೇಸು ಕ್ರಿಸ್ತನೂ ಮಾಡುತ್ತಿರುವ ಸಂಗತಿಗಳಿಗೆ ಪೂರ್ಣ ಗಮನ ಕೊಟ್ಟರೆ ಅಂತ್ಯವು ಸ್ವಲ್ಪದರಲ್ಲೇ ಬರಲಿದೆ ಎಂಬುದಕ್ಕಿರುವ ಮನಗಾಣಿಸುವ ರುಜುವಾತುಗಳು ನಮಗೆ ಕಾಣಿಸದೆ ಹೋಗುವುದಿಲ್ಲ.

18. ಯೇಸು ಕ್ರಿಸ್ತನನ್ನು ರಾಜನಾಗಿ ಅಂಗೀಕರಿಸದವರಿಗೆ ಏನಾಗುವುದು?

18 ಬಿಳೀ ಕುದುರೆಯ ವಿಜೇತ ಸವಾರನಾದ ಯೇಸು ಕ್ರಿಸ್ತನಿಗೆ ಕೊಡಲಾಗಿರುವ ಮಹಾ ಅಧಿಕಾರವನ್ನು ಒಪ್ಪಿಕೊಳ್ಳದಿರುವವರು ತಾವು ಮಾಡಿದ್ದು ಎಷ್ಟು ದೊಡ್ಡ ತಪ್ಪೆಂದು ಬೇಗನೆ ಒಪ್ಪಿಕೊಳ್ಳಲೇಬೇಕಾಗುತ್ತದೆ. ತಮ್ಮ ಮೇಲೆ ಬರಲಿರುವ ನ್ಯಾಯತೀರ್ಪಿನಿಂದ ಅವರು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಆಗ ಬಹುಮಂದಿ ಭೀತಿಯಿಂದ “ಯಾರು ನಿಲ್ಲಶಕ್ತರು?” ಎಂದು ಅರಚುವರು. (ಪ್ರಕ. 6:15-17) ಆ ಪ್ರಶ್ನೆಗೆ ಉತ್ತರವನ್ನು ಪ್ರಕಟನೆ 7ನೇ ಅಧ್ಯಾಯ ನೀಡುತ್ತದೆ. ಅಭಿಷಿಕ್ತರು ಮತ್ತು ಭೂನಿರೀಕ್ಷೆಯಿರುವವರು ದೇವರ ಅನುಗ್ರಹ ಪಡೆದಿರುವ ಕಾರಣ ನಿಶ್ಚಯವಾಗಿ ‘ನಿಲ್ಲುವರು.’ ಬಳಿಕ ಬೇರೆ ಕುರಿಗಳ ಆ ‘ಮಹಾ ಸಮೂಹದವರು’ ಮಹಾಸಂಕಟವನ್ನು ಪಾರಾಗುವರು.—ಪ್ರಕ. 7:9, 13-15.

19. ಕಡೇ ದಿವಸಗಳು ಬೇಗನೆ ಕೊನೆಗೊಳ್ಳಲಿವೆ ಎಂಬುದರ ಸ್ಪಷ್ಟ ಪುರಾವೆಗಳನ್ನು ಅರಿತು, ಅಂಗೀಕರಿಸಿ, ಅದಕ್ಕೆ ಪ್ರತಿಕ್ರಿಯಿಸುವ ನೀವು ಏನನ್ನು ಎದುರುನೋಡುತ್ತಿದ್ದೀರಿ?

19 ನಾವೀಗ ಏನು ಮಾಡಬೇಕು? ಈ ರೋಮಾಂಚಕ ಸಮಯದಲ್ಲಿ ನೆರವೇರುತ್ತಿರುವ ಬೈಬಲ್‌ ಪ್ರವಾದನೆಗೆ ನಿಕಟವಾಗಿ ಗಮನಕೊಡಬೇಕು. ಆಗ ಸೈತಾನನ ಲೋಕದ ಕಡೆಗೆ ನಾವು ಆಕರ್ಷಿತರಾಗುವುದೂ ಇಲ್ಲ, ಲೋಕ ಘಟನೆಗಳು ಯಾವುದನ್ನು ಸೂಚಿಸುತ್ತವೆಂಬ ವಿಷಯದಲ್ಲಿ ಕುರುಡರಾಗಿರುವುದೂ ಇಲ್ಲ. ಅತಿ ಬೇಗನೆ ಕ್ರಿಸ್ತನು ನೀತಿಯಿಂದ ಅಂತಿಮ ಯುದ್ಧವನ್ನು ನಡೆಸುವ ಮೂಲಕ ಈ ಭಕ್ತಿಹೀನ ಲೋಕವನ್ನು ನಾಶಮಾಡುವನು. ಹೀಗೆ ತನ್ನ ವಿಜಯವನ್ನು ಪೂರ್ಣಗೊಳಿಸುವನು. (ಪ್ರಕ. 19:11, 19-21) ಬಳಿಕ ನಮಗಾಗಿ ಕಾದಿರಿಸಲಾಗಿರುವ ಆಶೀರ್ವಾದಗಳು ನಮ್ಮ ಪಾಲಾಗುವವು. ಆಗ ನಮ್ಮ ಸಂತೋಷಕ್ಕೆ ಎಣೆಯಿರದು!—ಪ್ರಕ. 20:1-3, 6; 21:3, 4.