ವಾಚಕರಿಂದ ಪ್ರಶ್ನೆಗಳು
ಸುಗಂಧದ್ರವ್ಯಗಳಿಂದ (ಸೆಂಟ್) ತೊಂದರೆಯಾಗುವ ಸಹೋದರ—ಸಹೋದರಿಯರಿಗೆ ನಾವು ಹೇಗೆ ಸಹಾಯ ಮಾಡಬಹುದು?
ಕೆಲವರಿಗೆ ಸುಗಂಧದ್ರವ್ಯಗಳ ಪರಿಮಳದಿಂದ ತೊಂದರೆಯಾಗುತ್ತದೆ. ತಲೆನೋವು, ಅಲರ್ಜಿಯಂಥ ಸಮಸ್ಯೆಗಳು ಬರುತ್ತವೆ. ಇಂಥವರು ಹೊರಗಿನ ಜನರೊಟ್ಟಿಗೆ ವ್ಯವಹರಿಸುವಾಗ ಪರಿಗಣನೆ ತೋರಿಸುವಂತೆ ಕೇಳಿಕೊಳ್ಳಲು ಆಗುವುದಿಲ್ಲ. ಆದರೆ ಸಭೆ, ಸಮ್ಮೇಳನ—ಅಧಿವೇಶನಗಳಿಗೆ ಬರುವವರನ್ನು ಸುಗಂಧದ್ರವ್ಯ ಬಳಸದಿರುವಂತೆ ವಿನಂತಿಸಲು ಆಗುತ್ತಾ ಎಂದು ಇಂಥ ಸಮಸ್ಯೆಯಿರುವ ಕೆಲವರು ಕೇಳಿದ್ದಾರೆ.
ಬೇರೆಯವರಿಗೆ ಸಭಾಕೂಟಗಳಿಗೆ ಬರಲು ತೊಂದರೆ ಆಗುವಂಥ ರೀತಿಯಲ್ಲಿ ನಡೆದುಕೊಳ್ಳಲು ಯಾರೂ ಇಷ್ಟಪಡಲ್ಲ. ಕೂಟಗಳಿಂದ ಎಲ್ಲರೂ ಪ್ರಯೋಜನ ಪಡೆಯಬೇಕು ಅನ್ನೋದೇ ನಮ್ಮೆಲ್ಲರ ಆಸೆ. (ಇಬ್ರಿ. 10:24, 25) ಒಂದುವೇಳೆ ಸುಗಂಧದ್ರವ್ಯದ ಪರಿಮಳದಿಂದ ತೊಂದರೆಯಾಗಿ ಯಾರಿಗಾದರೂ ಸಭೆಗೆ ಬರುವುದಕ್ಕೂ ಆಗುತ್ತಿಲ್ಲವಾದರೆ ಅವರು ಸಭಾ ಹಿರಿಯರಿಗೆ ತಿಳಿಸಬಹುದು. ಹಾಗಂತ ಸಭಾ ಕೂಟಗಳಲ್ಲಿ ಸೆಂಟ್ ಬಳಸುವುದರ ಕುರಿತು ಹಿರಿಯರು ನಿಯಮಗಳನ್ನು ಮಾಡಲು ಆಗುವುದಿಲ್ಲ. ಬದಲಿಗೆ ಸಭಿಕರಲ್ಲಿ ಕೆಲವರಿಗೆ ಆಗುತ್ತಿರುವ ತೊಂದರೆ ಕುರಿತು ಸಭೆಗೆ ತಿಳಿಸಬಹುದು. ಈ ಬಗ್ಗೆ ಸಂಘಟನೆಯಿಂದ ಈಗಾಗಲೇ ಬಂದಿರುವ ಮಾಹಿತಿಯನ್ನು ಹಿರಿಯರು ಸನ್ನಿವೇಶ ನೋಡಿ ಸೇವಾ ಕೂಟದ ಸ್ಥಳೀಯ ಅಗತ್ಯಗಳಲ್ಲಿ ಚರ್ಚಿಸಬಹುದು, ಅಗತ್ಯ ಬಿದ್ದರೆ ಯಾರ ಮನಸ್ಸಿಗೂ ನೋವಾಗದ ರೀತಿಯಲ್ಲಿ ಒಂದು ಚಿಕ್ಕ ಪ್ರಕಟಣೆ ಮಾಡಬಹುದು. * ಹಾಗಂತ ಈ ತರಹದ ಪ್ರಕಟಣೆಗಳನ್ನು ಪದೇಪದೇ ಮಾಡುವುದು ಚೆನ್ನಾಗಿರಲ್ಲ. ಏಕೆಂದರೆ ಕೂಟಗಳಿಗೆ ಹೊಸಬರೂ ಬಂದಿರುತ್ತಾರೆ. ಅವರಿಗೆ ಈ ಸಮಸ್ಯೆ ಬಗ್ಗೆ ಗೊತ್ತಿರಲ್ಲ. ಅವರಿಗೆ ಕೂಟಗಳಿಗೆ ಮತ್ತೆ ಬರಲು ಪ್ರೋತ್ಸಾಹ ಸಿಗಬೇಕು ಮತ್ತು ಮಿತವಾಗಿ ಸುಗಂಧದ್ರವ್ಯ ಬಳಸುವವರಿಗೆ ಮುಜುಗರವಾಗಬಾರದು.
ಈ ಸಮಸ್ಯೆ ಇರುವವರು ಸಭಾಗೃಹದಲ್ಲೇ ಸ್ವಲ್ಪ ದೂರದಲ್ಲಿ ಕೂತುಕೊಳ್ಳುವಂತೆ ಹಿರಿಯರು ಏರ್ಪಾಡು ಮಾಡಬಹುದು. ಉದಾಹರಣೆಗೆ, ಸಭಾಗೃಹದಲ್ಲಿ ಎರಡನೇ ಕೋಣೆಯಿದ್ದು ಕಾರ್ಯಕ್ರಮವನ್ನು ಕೇಳುವ ವ್ಯವಸ್ಥೆಯಿರುವಲ್ಲಿ ಅವರು ಅಲ್ಲಿ ಕೂತುಕೊಳ್ಳಬಹುದು. ಆಗಲೂ ಸಮಸ್ಯೆ ಬಗೆಹರಿಯದಿದ್ದರೆ ಅವರಿಗಾಗಿ ಕೂಟದ ಕಾರ್ಯಕ್ರಮವನ್ನು ರೆಕಾರ್ಡ್ ಮಾಡಿ ಕೊಡಬಹುದು, ಅಥವಾ ಫೋನ್ ಮೂಲಕ ಕೂಟಗಳನ್ನು ಕೇಳಲು ಕೆಲವರಿಗೆ ಏರ್ಪಾಡು ಮಾಡಿರುವಂತೆಯೇ ಇವರಿಗಾಗಿಯೂ ಏರ್ಪಾಡು ಮಾಡಬಹುದು.
ಅಧಿವೇಶನಗಳಿಗೆ ಹಾಜರಾಗುವ ಸಹೋದರ-ಸಹೋದರಿಯರು ಈ ವಿಷಯದ ಕುರಿತು ಜಾಗ್ರತೆ ವಹಿಸುವಂತೆ ಇತ್ತೀಚಿನ ವರ್ಷಗಳಲ್ಲಿ ನಮ್ಮ ರಾಜ್ಯ ಸೇವೆಯಲ್ಲಿ ಹೇಳಲಾಗಿತ್ತು. ಸಾಮಾನ್ಯವಾಗಿ ಅಧಿವೇಶನಗಳನ್ನು ಮುಚ್ಚಿದ ಸಭಾಂಗಣದಲ್ಲಿ ನಡೆಸಲಾಗುತ್ತದೆ. ಹಾಗಾಗಿ ಹಾಜರಾಗುವವರು ಗಾಢ ಪರಿಮಳವಿರುವ ಸುಗಂಧದ್ರವ್ಯವನ್ನು ಹೆಚ್ಚು ಹಾಕಿಕೊಂಡು ಬಾರದಂತೆ ಕೇಳಿಕೊಳ್ಳಲಾಗುತ್ತದೆ. ಏಕೆಂದರೆ ಇಂಥ ಸಂದರ್ಭದಲ್ಲಿ ಸುಗಂಧ ದ್ರವ್ಯಗಳಿಂದ ತೊಂದರೆ ಇರುವವರನ್ನು ಅಧಿವೇಶನದ ಸಭಾಂಗಣದೊಳಗೆ ದೂರದಲ್ಲಿ ಕೂರಿಸಲು ಪ್ರತ್ಯೇಕ ಸ್ಥಳ ಇರುವುದಿಲ್ಲ. ಅಧಿವೇಶನಗಳಿಗಾಗಿ ನಮ್ಮ ರಾಜ್ಯ ಸೇವೆಯಲ್ಲಿ ಬರುವ ಸೂಚನೆ ಸಭಾ ಕೂಟಗಳಿಗೆ ಅನ್ವಯ ಆಗುವುದಿಲ್ಲ. ಹಾಗಾಗಿ ಆ ಸೂಚನೆ ವಾರದ ಕೂಟಗಳಿಗೂ ಅನ್ವಯ ಆಗುತ್ತದೆಂದು ಹೇಳಬಾರದು.
ಈ ಕಡೇ ದಿನಗಳಲ್ಲಿ ಜೀವಿಸುವಾಗ ನಾವೆಲ್ಲರೂ ಅಪರಿಪೂರ್ಣತೆಯ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ನಮಗಿರುವ ತೊಂದರೆ ಕಷ್ಟಗಳನ್ನು ಕಡಿಮೆ ಮಾಡಲು ಇತರರು ಪ್ರಯತ್ನಿಸುವಾಗ ನಾವದಕ್ಕೆ ಕೃತಜ್ಞರಾಗಿರುತ್ತೇವೆ. ಸುಗಂಧದ್ರವ್ಯದಿಂದಾಗಿ ಕೂಟಗಳಿಗೆ ಹಾಜರಾಗಲು ಸಹೋದರ ಸಹೋದರಿಯರಿಗೆ ತೊಂದರೆ ಆಗುತ್ತಿರುವುದಾದರೆ ನಾವದನ್ನು ಬಳಸದೇ ಇರುವ ನಿರ್ಧಾರಮಾಡಬಹುದು. ಅಂತಹ ತ್ಯಾಗ ಮಾಡುವಂತೆ ಇತರರ ಮೇಲಿರುವ ಪ್ರೀತಿ ನಮ್ಮನ್ನು ಪ್ರಚೋದಿಸುತ್ತದೆ.
ಪೊಂತ್ಯ ಪಿಲಾತ ನಿಜವಾಗಲೂ ಇದ್ದನು ಅನ್ನುವುದಕ್ಕೆ ಏನಾದರೂ ಪುರಾವೆ ಇದೆಯಾ?
ಯೇಸುವನ್ನು ವಿಚಾರಣೆಮಾಡಿ ಮರಣದಂಡನೆ ವಿಧಿಸಿದ ವ್ಯಕ್ತಿ ಪೊಂತ್ಯ ಪಿಲಾತ ಎಂದು ಬೈಬಲ್ ಓದಿದವರಿಗೆ ಗೊತ್ತು. (ಮತ್ತಾ. 27:1, 2, 24-26) ಈ ವ್ಯಕ್ತಿಯ ಹೆಸರು ಬೈಬಲಿನಲ್ಲಿ ಮಾತ್ರವಲ್ಲ, ಅನೇಕ ಐತಿಹಾಸಿಕ ದಾಖಲೆಗಳಲ್ಲೂ ಇದೆ. ಆ್ಯಂಕರ್ ಬೈಬಲ್ ಶಬ್ದಕೋಶ (ಇಂಗ್ಲಿಷ್) ಹೇಳುವುದೇನೆಂದರೆ, ರಾಜ್ಯಪಾಲನಾಗಿದ್ದ ಪೊಂತ್ಯ ಪಿಲಾತನ ಕುರಿತು ಇರುವಷ್ಟು ಇತಿಹಾಸದ ಬರಹಗಳು ಮತ್ತು ವಿವರಣೆ “ಯೂದಾಯದ ಇನ್ಯಾವ ರಾಜ್ಯಪಾಲರ ಬಗ್ಗೆಯೂ ಇಲ್ಲ.”
ಯೆಹೂದಿ ಇತಿಹಾಸಕಾರ ಜೋಸೀಫಸನು ತುಂಬ ಸಾರಿ ಪೊಂತ್ಯ ಪಿಲಾತನ ಬಗ್ಗೆ ಬರೆದಿದ್ದಾನೆ. ಯೂದಾಯದ ರಾಜ್ಯಪಾಲನಾಗಿದ್ದಾಗ ಪೊಂತ್ಯ ಪಿಲಾತನಿಗೆ ಬಂದ ಸಮಸ್ಯೆಗಳನ್ನು ಜೋಸೀಫಸನು ತಿಳಿಸುವಾಗ ಮೂರು ಘಟನೆಗಳ ಕುರಿತು ವಿವರಿಸಿದ್ದಾನೆ. ಇಂಥದ್ದೇ ಇನ್ನೊಂದು ಘಟನೆಯನ್ನು ಯೆಹೂದಿ ಇತಿಹಾಸಕಾರ ಫೀಲೊ ಬರೆದಿದ್ದಾನೆ. ರೋಮ್‍ನ ಸಾಮ್ರಾಟರ ಇತಿಹಾಸವನ್ನು ದಾಖಲೆ ಮಾಡಿರುವ ರೋಮನ್ ಬರಹಗಾರ ಟ್ಯಾಸಿಟಸ್ ಕೂಡ ಪೊಂತ್ಯ ಪಿಲಾತನ ಕುರಿತು ಬರೆದಿದ್ದಾನೆ. ತಿಬೇರಿಯನ ಆಳ್ವಿಕೆಯ ಸಮಯದಲ್ಲಿ ಯೇಸುವಿಗೆ ಮರಣದಂಡನೆ ವಿಧಿಸಿದವನು ಪೊಂತ್ಯ ಪಿಲಾತನೇ ಎಂದು ಟ್ಯಾಸಿಟಸ್ ಹೇಳಿದ್ದಾನೆ.
ಪುರಾತನ ವಿಷಯಗಳನ್ನು ಸಂಶೋಧನೆ ಮಾಡುತ್ತಿದ್ದವರಿಗೆ 1961ರಲ್ಲಿ ಇಸ್ರೇಲಿನ ಕೈಸರೈಯ ಪಟ್ಟಣದ ಪುರಾತನ ಚಿತ್ರಮಂದಿರದಲ್ಲಿ ಪುನರ್ಬಳಕೆ ಮಾಡಲಾಗಿದ್ದ ಚಪ್ಪಡಿ ಕಲ್ಲು ಸಿಕ್ಕಿತು. ಅದರಲ್ಲಿ ಪಿಲಾತನ ಹೆಸರನ್ನು ಲ್ಯಾಟಿನ್ ಭಾಷೆಯಲ್ಲಿ ಕೆತ್ತಲಾಗಿತ್ತು. (ಇಲ್ಲಿ ತೋರಿಸಲಾಗಿರುವ) ಈ ಕಲ್ಲು ಸ್ವಲ್ಪ ಒಡೆದು ಹೋಗಿದೆಯಾದರೂ ಅದರಲ್ಲಿ ಹೀಗೆ ಬರೆದಿತ್ತು ಎಂದು ಹೇಳುತ್ತಾರೆ: “ತಿಬೇರಿಯಮ್ ಪೊಂತ್ಯ ಪಿಲಾತ, ಯೂದಾಯದ ಮುಖ್ಯಾಧಿಕಾರಿಯು (ಇದನ್ನು) ಗೌರವಾರ್ಹ ದೇವರುಗಳಿಗೆ ಸಮರ್ಪಿಸಿದ್ದು.” ಆ ಕಲ್ಲಿನ ಮೇಲೆ ಬರೆದಿರುವುದು ರೋಮ್‍ನ ಸಾಮ್ರಾಟ ತಿಬೇರಿಯನ ಗೌರವಾರ್ಥವಾಗಿ ಕಟ್ಟಲಾಗಿದ್ದ ದೇವಾಲಯದ ಬಗ್ಗೆ ಇರಬೇಕು.
ಒಬ್ಬ ಸಹೋದರಿ ಬೈಬಲ್ ಅಧ್ಯಯನ ನಡೆಸುವಾಗ ಸಹೋದರನು ಜೊತೆಯಲ್ಲಿದ್ದರೆ ಅಥವಾ ಸಮೀಪದಲ್ಲಿದ್ದರೆ ಅವಳು ಮುಸುಕು ಹಾಕಿಕೊಳ್ಳಬೇಕಾ?
ಜುಲೈ 15, 2002 ರ ಕಾವಲಿನಬುರುಜುವಿನ “ವಾಚಕರಿಂದ ಪ್ರಶ್ನೆಗಳು” ಲೇಖನದಲ್ಲಿ ಇದರ ಕುರಿತು ಮಾಹಿತಿ ಬಂದಿತ್ತು. ಒಬ್ಬ ಸಹೋದರಿ ಬೈಬಲ್ ಅಧ್ಯಯನವನ್ನು ನಡೆಸುವಾಗ ದೀಕ್ಷಾಸ್ನಾನವಾಗದ ಪ್ರಚಾರಕನು ಅವಳೊಟ್ಟಿಗೆ ಇರುವುದಾದರೂ ಅವಳು ಮುಸುಕು ಹಾಕಬೇಕು ಎಂದು ಅದರಲ್ಲಿ ಹೇಳಿತ್ತು. ಆದರೆ ಈ ವಿಷಯದ ಕುರಿತು ಹೆಚ್ಚು ಪರಿಶೀಲಿಸಿದಾಗ ಇದರಲ್ಲಿ ಸ್ವಲ್ಪ ಬದಲಾವಣೆ ಮಾಡುವ ಅವಶ್ಯಕತೆಯಿದೆ ಎಂದು ತಿಳಿದುಬಂದಿದೆ.
ಒಂದುವೇಳೆ ಸಹೋದರಿಯೊಬ್ಬಳು ಕ್ರಮವಾಗಿ ನಡೆಯುವ ಬೈಬಲ್ ಅಧ್ಯಯನಕ್ಕೆ ದೀಕ್ಷಾಸ್ನಾನ ಪಡೆದ ಸಹೋದರನನ್ನು ಕರೆದುಕೊಂಡು ಹೋಗುವುದಾದರೆ ಆಕೆ ಮುಸುಕು ಹಾಕಬೇಕು. ಅದರಲ್ಲಿ ಯಾವುದೇ ಸಂಶಯವಿಲ್ಲ. ಸಹೋದರನೊಬ್ಬನು ನಿರ್ವಹಿಸಬೇಕಾದ ಜವಾಬ್ದಾರಿಯನ್ನು ಸಹೋದರಿ ನಿರ್ವಹಿಸುತ್ತಿರುವುದರಿಂದ ಮುಸುಕು ಹಾಕಿಕೊಳ್ಳಲೇಬೇಕು. ಹೀಗೆ ಯೆಹೋವ ದೇವರು ಸಭೆಯಲ್ಲಿ ಇಟ್ಟಿರುವ ತಲೆತನದ ಏರ್ಪಾಡಿಗೆ ಅವಳು ಗೌರವ ತೋರಿಸುತ್ತಾಳೆ. (1 ಕೊರಿಂ. 11:
ಒಂದುವೇಳೆ ಸಹೋದರಿ ಕ್ರಮವಾಗಿ ನಡೆಸುತ್ತಿರುವ ಅಧ್ಯಯನಕ್ಕೆ ದೀಕ್ಷಾಸ್ನಾನವಾಗದ ಪ್ರಚಾರಕನೊಂದಿಗೆ ಹೋಗಿರುವುದಾದರೆ? ಆ ಪ್ರಚಾರಕ ಅವಳ ಗಂಡನಾಗಿರುವಲ್ಲಿ ಆಕೆ ಮುಸುಕು ಹಾಕಲೇಬೇಕು. ಬೇರೆ ಪ್ರಚಾರಕನು ಇರುವುದಾದರೆ ಮುಸುಕು ಹಾಕಬೇಕೆಂದು ಬೈಬಲ್ ಹೇಳುವುದಿಲ್ಲ. ಆದರೂ ಸಹೋದರಿಯ ಮನಸ್ಸಾಕ್ಷಿ ಒಪ್ಪದಿರುವಲ್ಲಿ ಮುಸುಕು ಹಾಕಿಕೊಳ್ಳಬಹುದು. ಅದು ಅವಳಿಗೆ ಬಿಟ್ಟದ್ದು.
^ ಪ್ಯಾರ. 2 ಈ ವಿಷಯದ ಕುರಿತ ಮಾಹಿತಿಗಾಗಿ 2000 ಆಗಸ್ಟ್ 8ರ ಎಚ್ಚರ! (ಇಂಗ್ಲಿಷ್) ಪುಟ 8-10ರಲ್ಲಿರುವ “ಸುಗಂಧದ್ರವ್ಯದಿಂದ ತೊಂದರೆಯಾಗುವವರಿಗೆ ನೆರವು” ಎಂಬ ಲೇಖನ ಓದಿ.