ನಂಬಿಕೆ ಅದೇನದು?
ನಂಬಿಕೆ ಅದೇನದು?
ನಂಬಿಕೆಯ ಅರ್ಥವನ್ನು ನೀವು ಹೇಗೆ ವಿವರಿಸುತ್ತೀರಿ? ಕೆಲವರು ಅದನ್ನು ಅಂಧ ವಿಶ್ವಾಸದೊಂದಿಗೆ ಸರಿದೂಗಿಸುತ್ತಾರೆ. ಖ್ಯಾತ ಅಮೆರಿಕನ್ ಪ್ರಬಂಧಕಾರರೂ ಪತ್ರಕರ್ತರೂ ಆದ ಎಚ್. ಎಲ್. ಮೆನ್ಕೆನ್ ಎಂಬವರು ನಂಬಿಕೆಯ ಕುರಿತು ಒಮ್ಮೆ ಅಂದದ್ದು: “ಅಸಂಭವೆನಿಸುವ ಸಂಗತಿಗಳು ಸಂಭವಿಸುವವು ಎಂಬ ತರ್ಕರಹಿತ ವಿಶ್ವಾಸವೇ ಅದು.”
ಇದಕ್ಕೆ ವ್ಯತಿರಿಕ್ತವಾಗಿ, ನಂಬಿಕೆಯನ್ನು ದೇವರ ವಾಕ್ಯವಾದ ಬೈಬಲ್ ಅಂಧ ವಿಶ್ವಾಸವೆಂದಾಗಲಿ ತರ್ಕರಹಿತವೆಂದಾಗಲಿ ವಿವರಿಸುವುದಿಲ್ಲ. ಅದು ಹೇಳುವುದು: “ನಂಬಿಕೆಯು ನಿರೀಕ್ಷಿಸುವ ವಿಷಯಗಳ ನಿಶ್ಚಿತ ಭರವಸೆಯೂ ಕಣ್ಣಿಗೆ ಕಾಣದಿರುವ ನಿಜತ್ವಗಳ ಪ್ರತ್ಯಕ್ಷ ನಿದರ್ಶನವೂ ಆಗಿದೆ.”—ಇಬ್ರಿಯ 11:1.
ನಂಬಿಕೆಯ ಕುರಿತು ಜನರಲ್ಲಿ ಭಿನ್ನಾಭಿಪ್ರಾಯಗಳು ಇರುವುದರಿಂದ, ನಾವೀಗ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರವೇನೆಂದು ಕಂಡುಹಿಡಿಯೋಣ:
• ನಂಬಿಕೆಯ ಕುರಿತು ಬೈಬಲ್ ನೀಡುವ ವಿವರಣೆಯು ಇತರರ ಅಭಿಪ್ರಾಯಗಳಿಗಿಂತ ಹೇಗೆ ಭಿನ್ನವಾಗಿದೆ?
• ಬೈಬಲ್‌ನಲ್ಲಿ ವಿವರಿಸಿರುವಂಥ ರೀತಿಯ ನಂಬಿಕೆಯನ್ನು ನಾವು ಗಳಿಸುವುದು ಏಕೆ ಪ್ರಾಮುಖ್ಯ?
• ದೃಢ ನಂಬಿಕೆಯನ್ನು ಹೇಗೆ ಕಟ್ಟಬಹುದು?
ಹಕ್ಕು ಪತ್ರದಂಥ ದೃಢ ಪುರಾವೆ ಇರಬೇಕು
ಮೇಲೆ ತಿಳಿಸಿದ ಇಬ್ರಿಯ 11:1ರ ವಚನ ನಂಬಿಕೆ ಎಂದರೇನೆಂದು ತಿಳಿಸುತ್ತದೆ. ಇಬ್ರಿಯ ಪುಸ್ತಕವು ಬರೆಯಲ್ಪಟ್ಟ ಸಮಯದಲ್ಲಿ, “ನಿಶ್ಚಿತ ಭರವಸೆ” ಎಂದು ಭಾಷಾಂತರವಾದ ಗ್ರೀಕ್ ಪದವು ಸಾಮಾನ್ಯವಾಗಿ ಬಳಕೆಯಲ್ಲಿತ್ತು. ಆ ಪದವು ಬಿಸಿನೆಸ್ ಡಾಕ್ಯುಮೆಂಟ್‌ಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿತ್ತು. ಭವಿಷ್ಯತ್ತಿನಲ್ಲಿ ಒಂದು ಸ್ವತ್ತಿನ ಒಡೆತನವನ್ನು ನೀವು ಪಡೆಯುತ್ತೀರಿ ಎಂಬ ಗ್ಯಾರಂಟಿಯನ್ನು ಅದು ಕೊಡುತ್ತದೆ. ಆದುದರಿಂದ, ಒಂದು ರೆಫರೆನ್ಸ್ ಪುಸ್ತಕವು ಇಬ್ರಿಯ 11:1ನ್ನು “ನಂಬಿಕೆಯು ನಿರೀಕ್ಷಿಸುವ ವಿಷಯಗಳ ಹಕ್ಕುಪತ್ರವಾಗಿದೆ” ಎಂದೂ ಭಾಷಾಂತರಿಸಬಹುದೆಂದು ಹೇಳಿದೆ.
ಉದಾಹರಣೆಗೆ, ಪ್ರಸಿದ್ಧ ಕಂಪನಿಯೊಂದರಿಂದ ನೀವು ಒಂದು ವಸ್ತುವನ್ನು ಖರೀದಿಸಿದ್ದೀರೆಂದು ನೆನಸಿ. ಅದು ನಿಮ್ಮ ಮನೆಗೆ ಡೆಲಿವರಿಯಾಗುವ ತನಕ ನೀವು ಕಾಯುತ್ತಿದ್ದೀರಿ. ಆಗ ಹಕ್ಕುಪತ್ರದಂಥ ರೀತಿಯ ನಂಬಿಕೆಯಿಂದಲೇ ನೀವು ಕಾಯುತ್ತೀರಿ. ಏಕೆಂದರೆ ಖರೀದಿಸಿದ ವಸ್ತುವಿನ ರಶೀದಿಯು ನಿಮ್ಮ ಕೈಯಲ್ಲಿದೆ. ಕಂಪನಿಯು ಖಂಡಿತವಾಗಿ ನಿಮಗದನ್ನು ತಲಪಿಸುವುದು ಎಂಬ ನಂಬಿಕೆ ನಿಮಗಿದೆ. ಹೀಗೆ ಒಂದರ್ಥದಲ್ಲಿ ಆ ರಶೀದಿಯು ನಿಮ್ಮ ಹಕ್ಕುಪತ್ರ ಅಂದರೆ ನೀವು ಖರೀದಿಸಿದ ವಸ್ತುವನ್ನು ನೀವು ಖಂಡಿತ ಪಡೆಯುವಿರೆಂಬ ಗ್ಯಾರಂಟಿ. ಒಂದು ವೇಳೆ ಆ ರಶೀದಿಯನ್ನು ನೀವು ಕಳಕೊಂಡಲ್ಲಿ ಅಥವಾ ಬಿಸಾಡಿಬಿಟ್ಟಲ್ಲಿ ಆ ವಸ್ತುವಿನ ಒಡೆತನದ ಪುರಾವೆಯನ್ನು ನೀವು ಕಳಕೊಂಡಿರುವಿರಿ. ಅದೇ ರೀತಿ ದೇವರು ತಾನು ಮಾಡಿರುವ ವಾಗ್ದಾನಗಳನ್ನು ನೆರವೇರಿಸುವನೆಂಬ ನಂಬಿಕೆ ಇರುವವರಿಗೆ ತಾವು ನಿರೀಕ್ಷಿಸುವ ವಿಷಯಗಳು ಖಂಡಿತವಾಗಿ ದೊರೆಯುವವೆಂಬ ಗ್ಯಾರಂಟಿ ಇದೆ. ಆದರೆ ಯಾರಿಗೆ ಆ ನಂಬಿಕೆ ಇಲ್ಲವೋ ಅಥವಾ ಆ ನಂಬಿಕೆಯನ್ನು ಕಳಕೊಳ್ಳುತ್ತಾರೋ ಅವರಿಗೆ ದೇವರು ವಾಗ್ದಾನಿಸುವ ವಿಷಯಗಳನ್ನು ಪಡಕೊಳ್ಳುವ ಹಕ್ಕಿಲ್ಲ.—ಯಾಕೋಬ 1:5-8.
ಇಬ್ರಿಯ 11:1ರಲ್ಲಿ “ಪ್ರತ್ಯಕ್ಷ ನಿದರ್ಶನ” ಎಂದು ಭಾಷಾಂತರವಾದ ಇನ್ನೊಂದು ಅಭಿವ್ಯಕ್ತಿಯನ್ನು ಸಹ ಪರಿಗಣಿಸಿರಿ. ಇದು ಈ ಅರ್ಥವನ್ನು ಕೊಡುತ್ತದೆ ಏನೆಂದರೆ, ಕೆಲವೊಮ್ಮೆ ಒಂದು ವಿಷಯವು ನಮ್ಮ ಕಣ್ಣಿಗೆ ನಿಜವೆಂದು ತೋರಬಹುದಾದರೂ ಪುರಾವೆಗನುಸಾರ ವಾಸ್ತವಾಂಶವು ತೀರ ಬೇರೆ. ಉದಾಹರಣೆಗೆ, ಸೂರ್ಯನು ಭೂಮಿಯ ಸುತ್ತ ತಿರುಗುವಂತೆ ನಮ್ಮ ಕಣ್ಣಿಗೆ ತೋರಿಬರುತ್ತದೆ. ಏಕೆಂದರೆ ಅದು ಪೂರ್ವದಲ್ಲಿ ಉದಯಿಸಿ, ಆಕಾಶದಲ್ಲಿ ದಿನವಿಡೀ ಚಲಿಸುತ್ತಾ ಪಶ್ಚಿಮದಲ್ಲಿ ಮುಳುಗುವಂತೆ ಕಾಣುತ್ತದೆ. ಆದರೆ ಖಗೋಳಶಾಸ್ತ್ರ ಮತ್ತು ಗಣಿತಶಾಸ್ತ್ರದ ಪುರಾವೆಗನುಸಾರ ಸೂರ್ಯನು ಭೂಮಿಯ ಸುತ್ತ ತಿರುಗುತ್ತಿಲ್ಲ, ಭೂಮಿ ತಾನೇ ತನ್ನ ಕಕ್ಷೆಯಲ್ಲಿ ತಿರುಗುತ್ತದೆ. ಆದ್ದರಿಂದ ನಮ್ಮ ಕಣ್ಣಿಗೆ ಹೇಗೆಯೇ ತೋರಿಬರಲಿ ನಿಜವಾದ ಪುರಾವೆ ಸಿಕ್ಕಿದಾಗ ಭೂಮಿಯೇ ಸೂರ್ಯನ ಸುತ್ತ ತಿರುಗುತ್ತಿದೆ ಎಂದು ನೀವು ದೃಢವಾಗಿ ನಂಬುವಿರಿ. ಅದು ಕುರುಡು ನಂಬಿಕೆಯಲ್ಲ. ಬದಲಾಗಿ ವಿಷಯಗಳು ನಿಜವಾಗಿಯೂ ಹೇಗಿವೆಯೋ ಅದನ್ನೇ ಅರ್ಥಮಾಡಿಕೊಳ್ಳುವ ಸಾಮರ್ಥ್ಯ. ಇದೇ ನಿಜ ನಂಬಿಕೆಯಾಗಿದೆ.
ದೃಢ ನಂಬಿಕೆ ಪ್ರಾಮುಖ್ಯವೇಕೆ?
ಬೈಬಲ್ ಪ್ರೋತ್ಸಾಹಿಸುವುದು ಇಂಥ ನಂಬಿಕೆಯನ್ನೇ. ಅಂದರೆ ದೃಢವಾದ ಪುರಾವೆಯ ಮೇಲೆ ಆಧಾರಿತವಾದ ಬಲವಾದ ನಂಬಿಕೆ. ಇದಕ್ಕಾಗಿ ನಮ್ಮ ವಿಶ್ವಾಸವನ್ನು ನಾವು ಹೊಂದಿಸಿಕೊಳ್ಳಬೇಕಾದರೂ ಅಂಥ ನಂಬಿಕೆಯು ಅತ್ಯಾವಶ್ಯಕವೂ ಆಗಿದೆ. ಕಾರಣವೇನೆಂದರೆ ಅಪೊಸ್ತಲ ಪೌಲನು ಬರೆದದ್ದು: “ನಂಬಿಕೆಯಿಲ್ಲದೆ ಆತನನ್ನು ಮೆಚ್ಚಿಸುವುದು ಅಸಾಧ್ಯ; ಏಕೆಂದರೆ ದೇವರನ್ನು ಸಮೀಪಿಸುವವನು ಆತನು ಇದ್ದಾನೆ ಎಂದೂ ತನ್ನನ್ನು ಶ್ರದ್ಧಾಪೂರ್ವಕವಾಗಿ ಹುಡುಕುವವರಿಗೆ ಪ್ರತಿಫಲವನ್ನು ಕೊಡುವವನಾಗುತ್ತಾನೆ ಎಂದೂ ನಂಬಬೇಕು.”—ಇಬ್ರಿಯ 11:6.
ದೃಢ ನಂಬಿಕೆಯನ್ನು ಬೆಳೆಸಲು ಅನೇಕ ತಡೆಗಟ್ಟುಗಳಿವೆ. ಆದರೆ ನೀವು ಮುಂದಿನ ಪುಟಗಳಲ್ಲಿ ಚರ್ಚಿಸಲಾದ ನಾಲ್ಕು ಹೆಜ್ಜೆಗಳನ್ನು ತಕ್ಕೊಳ್ಳುವುದಾದರೆ ಆ ತಡೆಗಟ್ಟುಗಳನ್ನು ಯಶಸ್ವಿಯಾಗಿ ನಿವಾರಿಸಬಲ್ಲಿರಿ. (w09 5/1)