ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪೌಲನ ಜೀವಉಳಿಸಿದ ಸೋದರಳಿಯ

ಪೌಲನ ಜೀವಉಳಿಸಿದ ಸೋದರಳಿಯ

ನಿಮ್ಮ ಮಕ್ಕಳಿಗೆ ಕಲಿಸಿರಿ

ಪೌಲನ ಜೀವಉಳಿಸಿದ ಸೋದರಳಿಯ

ಅಪೊಸ್ತಲ ಪೌಲನ ಸಂಬಂಧಿಕರಲ್ಲಿ ಕೆಲವರು ಯೇಸುವಿನ ಹಿಂಬಾಲಕರಾಗಿದ್ದರು ಎಂಬುದು ನಿಮಗೆ ಗೊತ್ತೋ? *— ಅವನ ಸಹೋದರಿ ಮತ್ತು ಅವಳ ಮಗನು ಯೇಸುವಿನ ಶಿಷ್ಯರಾಗಿದ್ದರೆಂದು ಬೈಬಲ್‌ ಸೂಚಿಸುತ್ತದೆ. ಆ ಸೋದರಳಿಯನೇ ಒಂದು ಸಂದರ್ಭದಲ್ಲಿ ಪೌಲನ ಜೀವವನ್ನು ಉಳಿಸಿದನು! ಅವನ ಹೆಸರಾಗಲಿ ಅವನ ತಾಯಿಯ ಹೆಸರಾಗಲಿ ನಮಗೆ ಗೊತ್ತಿಲ್ಲ. ಆದರೂ ಅವನು ಏನು ಮಾಡಿದ್ದನೆಂದು ನಮಗೆ ಗೊತ್ತು. ಅದರ ಕುರಿತು ನೀವು ಕೇಳಲು ಬಯಸುತ್ತೀರೋ?—

ಪೌಲನು ಆವಾಗಲೇ ತನ್ನ ಮೂರನೇ ಮಿಷನೆರಿ ಸಂಚಾರದಿಂದ ಹಿಂದಿರುಗಿ ಯೆರೂಸಲೇಮಿಗೆ ಬಂದಿದ್ದನು. ಅದು ಸುಮಾರು ಕ್ರಿ.ಶ. 56ನೇ ವರ್ಷವಾಗಿದ್ದಿರಬಹುದು. ಪೌಲನು ಬಂದಿಸಲ್ಪಟ್ಟು ವಿಚಾರಣೆಗೆ ಒಳಗಾಗಲಿದ್ದನು. ಆದರೆ ಪೌಲನ ವೈರಿಗಳಿಗೆ ಅವನನ್ನು ವಿಚಾರಣೆಗೆ ಒಳಪಡಿಸುವುದು ಬೇಡವಿತ್ತು. ಅವನು ಸಾಯುವುದೇ ಅವರಿಗೆ ಬೇಕಿತ್ತು! ಆದ್ದರಿಂದ ಅವರು 40 ಮಂದಿಯನ್ನು ಕಳುಹಿಸಿ ಕೈಸರೈಯಕ್ಕೆ ಹೋಗುವ ದಾರಿಯಲ್ಲಿ ಹೊಂಚುಹಾಕಿ ಪೌಲನನ್ನು ಕೊಲ್ಲುವಂತೆ ಯೋಜಿಸಿದರು.

ಪೌಲನ ಸೋದರಳಿಯನಿಗೆ ಹೇಗೋ ಈ ಸಂಚು ತಿಳಿದುಬಂತು. ಅವನು ಏನು ಮಾಡಿದನೆಂದು ನಿಮಗೆ ಗೊತ್ತೋ?— ಅವನು ಸೀದಾ ಹೋಗಿ ಪೌಲನಿಗೆ ಅದನ್ನು ತಿಳಿಸುತ್ತಾನೆ. ಆ ಕೂಡಲೇ ಪೌಲನು ಒಬ್ಬ ಸೇನಾಧಿಕಾರಿಯನ್ನು ಕರೆದು “ಈ ಯೌವನಸ್ಥನನ್ನು ಸಹಸ್ರಾಧಿಪತಿಯ ಬಳಿಗೆ ಕರೆದುಕೊಂಡು ಹೋಗು; ಇವನು ಅವನಿಗೆ ಏನನ್ನೋ ತಿಳಿಸಬೇಕೆಂದಿದ್ದಾನೆ” ಎಂದು ಹೇಳುತ್ತಾನೆ. ಆ ಅಧಿಕಾರಿಯು ಅವನನ್ನು ಸಹಸ್ರಾಧಿಪತಿಯಾದ ಕ್ಲೌದ್ಯ ಲೂಸ್ಯನ ಬಳಿಗೆ ಕರೆದೊಯ್ದು ಈ ಯೌವನಸ್ಥನಲ್ಲಿ ತಿಳಿಸಬೇಕಾದ ಏನೋ ಒಂದು ಸುದ್ದಿಯಿದೆ ಎನ್ನುತ್ತಾನೆ. ಕ್ಲೌದ್ಯನು ಪೌಲನ ಸೋದರಳಿಯನನ್ನು ಸ್ವಲ್ಪ ಆಚೆಗೆ ಕರೆದೊಯ್ದಾಗ ಅವನು ಎಲ್ಲವನ್ನೂ ತಿಳಿಸುತ್ತಾನೆ.

ಕ್ಲೌದ್ಯನು ಪೌಲನ ಸೋದರಳಿಯನನ್ನು ಎಚ್ಚರಿಸುತ್ತಾ “ಈ ವಿಷಯಗಳನ್ನು ನನಗೆ ತಿಳಿಸಿದ್ದೀ ಎಂಬುದನ್ನು ಬಾಯಿತಪ್ಪಿ ಯಾರಿಗೂ ಹೇಳಬೇಡ” ಎಂದು ಹೇಳಿದನು. ಆ ಬಳಿಕ ಅವನು ಇಬ್ಬರು ಸೇನಾಧಿಕಾರಿಗಳನ್ನು ಕರೆದು ಪೌಲನೊಂದಿಗೆ 200 ಮಂದಿ ಸೈನಿಕರನ್ನೂ 70 ಕುದುರೆ ಸವಾರರನ್ನೂ 200 ಭಲ್ಲೆಯರನ್ನೂ ಸಿದ್ಧಮಾಡಿ ಕೈಸರೈಯಕ್ಕೆ ಕಳುಹಿಸುವಂತೆ ಆಜ್ಞಾಪಿಸುತ್ತಾನೆ. ರಾತ್ರಿ ಒಂಬತ್ತು ಗಂಟೆಗೆ ಆ 470 ಮಂದಿ ಸಿಪಾಯಿಗಳು ಹೊರಟು ಪೌಲನನ್ನು ಕೈಸರೈಯದಲ್ಲಿ ರೋಮನ್‌ ರಾಜ್ಯಪಾಲ ಫೆಲಿಕ್ಸನ ಬಳಿಗೆ ಸುರಕ್ಷಿತವಾಗಿ ತಲುಪಿಸುತ್ತಾರೆ. ಪೌಲನನ್ನು ಕೊಲ್ಲಲು ಸಂಚುಹೂಡಲಾಗಿದೆ ಎಂದು ಕ್ಲೌದ್ಯನು ಫೆಲಿಕ್ಸನಿಗೆ ಒಂದು ಪತ್ರದ ಮುಖೇನ ತಿಳಿಸುತ್ತಾನೆ.

ಹೀಗೆ ಯೆಹೂದ್ಯರು ಕೈಸರೈಯದಲ್ಲಿ ಪೌಲನಿಗೆ ಎದುರಾಗಿ ತಮ್ಮ ಆರೋಪಗಳನ್ನು ಹೊರಿಸಲು ನ್ಯಾಯಾಲಯಕ್ಕೆ ಬರುವಂತೆ ಒತ್ತಾಯಿಸಲ್ಪಟ್ಟರು. ಆದರೆ ಪೌಲನು ಯಾವುದೇ ತಪ್ಪನ್ನು ಮಾಡಿದ್ದನೆಂಬುದಕ್ಕೆ ಅವರಲ್ಲಿ ಯಾವ ಪುರಾವೆಯೂ ಇರಲಿಲ್ಲ. ಹಾಗಿದ್ದರೂ ಪೌಲನು ಎರಡು ವರ್ಷಗಳ ವರೆಗೆ ಅನ್ಯಾಯವಾಗಿ ಬಂದಿವಾಸವನ್ನು ಅನುಭವಿಸಿದನು. ಆದಕಾರಣ ಅವನು ವಿಚಾರಣೆಗಾಗಿ ರೋಮ್‌ನ ಕೋರ್ಟಿಗೆ ಅಪ್ಪೀಲು ಮಾಡುತ್ತಾನೆ. ಮತ್ತು ಅವನನ್ನು ಅಲ್ಲಿಗೆ ಕಳುಹಿಸಲಾಯಿತು.—ಅ. ಕಾರ್ಯಗಳು 23:16–24:27; 25:8-12.

ಪೌಲನ ಸೋದರಳಿಯನ ಕುರಿತ ಈ ವೃತ್ತಾಂತದಿಂದ ನಾವು ಏನನ್ನು ಕಲಿಯುತ್ತೇವೆ?— ಯಾವುದು ಸರಿಯೋ ಅದನ್ನು ಎತ್ತಿಹೇಳಲು ಧೈರ್ಯ ಬೇಕು ಮತ್ತು ಹಾಗೆ ಮಾಡಿದ್ದಲ್ಲಿ ನಾವು ಜೀವಗಳನ್ನು ಉಳಿಸಬಲ್ಲೆವು. ಯೇಸು ಹಾಗೆ ಮಾಡಿದನು. ಶತ್ರುಗಳು ಯೇಸುವನ್ನು ‘ಕೊಲ್ಲಲು ಪ್ರಯತ್ನಿಸುತ್ತಿದ್ದಾಗಲೂ’ ಅವನು ದೇವರ ರಾಜ್ಯದ ಕುರಿತಾಗಿ ಜನರಿಗೆ ತಿಳಿಸುತ್ತಾ ಇದ್ದನು. ನಾವು ಕೂಡ ಹಾಗೆ ಮಾಡಬೇಕೆಂದು ಅವನು ಹೇಳಿದ್ದಾನೆ. ನಾವದನ್ನು ಮಾಡುವೆವೋ? ಪೌಲನ ಸೋದರಳಿಯನಂಥ ಧೈರ್ಯ ನಮಗಿದ್ದಲ್ಲಿ ನಾವದನ್ನು ನಿಶ್ಚಯವಾಗಿ ಮಾಡುವೆವು.—ಯೋಹಾನ 7:1; 15:13; ಮತ್ತಾಯ 24:14; 28:18-20.

ಪೌಲನು ತನ್ನ ಯುವ ಮಿತ್ರ ತಿಮೊಥೆಯನಿಗೆ ಅಂದದ್ದು: “ನಿನ್ನ ವಿಷಯದಲ್ಲಿಯೂ ನಿನ್ನ ಬೋಧನೆಯ ವಿಷಯದಲ್ಲಿಯೂ ಸದಾ ಗಮನಕೊಡುವವನಾಗಿರು. ಈ ವಿಷಯಗಳಲ್ಲಿ ನಿರತನಾಗಿರು; ಹೀಗೆ ಮಾಡುವ ಮೂಲಕ ನೀನು ನಿನ್ನನ್ನೂ ನಿನಗೆ ಕಿವಿಗೊಡುವವರನ್ನೂ ರಕ್ಷಿಸುವಿ.” (1 ತಿಮೊಥೆಯ 4:16) ಪೌಲನ ಸೋದರಳಿಯನು ಸಹ ತನ್ನ ಮಾವನ ಇಂಥಾ ಉತ್ತೇಜನವನ್ನು ನಿಶ್ಚಯವಾಗಿ ಅನ್ವಯಿಸಿಕೊಂಡನು. ನೀವು ಅನ್ವಯಿಸುವಿರೋ? (w09 6/1)

[ಪಾದಟಿಪ್ಪಣಿ]

^ ಪ್ಯಾರ. 3 ಈ ಲೇಖನವನ್ನು ನೀವು ಚಿಕ್ಕ ಮಗುವಿಗೆ ಓದಿಹೇಳುತ್ತಿರುವುದಾದರೆ ಅಡ್ಡಗೆರೆ ಇರುವಲ್ಲಿ ಸ್ವಲ್ಪ ನಿಲ್ಲಿಸಿ ಮಗು ಉತ್ತರ ಹೇಳುವಂತೆ ಉತ್ತೇಜಿಸಿರಿ.

ಪ್ರಶ್ನೆಗಳು:

❍ ಪೌಲನ ಕೆಲವು ಸಂಬಂಧಿಕರು ಯಾರಾಗಿದ್ದರು ಮತ್ತು ಅವರ ಕುರಿತು ನಾವು ಏನನ್ನು ಕಲಿತೆವು?

❍ ಪೌಲನ ಜೀವವನ್ನು ಕಾಪಾಡಲಿಕ್ಕಾಗಿ ಅವನ ಸೋದರಳಿಯನು ಏನು ಮಾಡಿದನು?

❍ ಯೇಸುವಿನ ಮಾತಿಗೆ ವಿಧೇಯರಾಗುತ್ತಾ ಇಂದು ಜನರ ಜೀವವನ್ನು ಉಳಿಸಲು ನಾವು ಏನು ಮಾಡಬಲ್ಲೆವು?