ನಂಬಿಕೆಯನ್ನು ಮತ್ತೆ ಕಟ್ಟುವುದು ಹೇಗೆ?
ಸುಖ ಸಂಸಾರಕ್ಕೆ ಸೂತ್ರಗಳು
ನಂಬಿಕೆಯನ್ನು ಮತ್ತೆ ಕಟ್ಟುವುದು ಹೇಗೆ?
ಸ್ಟೀವ್ *: “ನನ್ನ ಹೆಂಡ್ತಿ ಜೂಡಿ ಇನ್ನೊಬ್ಬನ ಜೊತೆ . . . ಹೀಗ್ ಮಾಡ್ತಾಳಂತ ನಾನು ಕನ್ಸಲ್ಲೂ ನೆನಸಿರ್ಲಿಲ್ಲ. ಅವಳ ಮೇಲೆ ಎಷ್ಟು ನಂಬಿಕೆ ಇಟ್ಕೊಂಡಿದ್ದೆ. ಒಂದೇ ಕ್ಷಣದಲ್ಲಿ ಅದೆಲ್ಲ ಸುಟ್ಟು ಭಸ್ಮವಾಯಿತು. ಅವಳು ಮಾಡಿರೋ ದ್ರೋಹನ ಮರೆತು ಅವಳನ್ನು ಮನ್ನಿಸೋದು ತುಂಬ ತುಂಬ ಕಷ್ಟವಾಗಿತ್ತು.”
ಜೂಡಿ: “ಸ್ಟೀವ್ ನನ್ ಮೇಲೆ ನಂಬಿಕೆ ಕಳ್ಕೊಂಡ್ರು. ನಾನ್ ಮಾಡಿರೋ ಕೆಲ್ಸನೇ ಅಂಥದ್ದು. ಅದಕ್ಕಾಗಿ ನಾನ್ ನಿಜ್ವಾಗ್ಲೂ ಪಶ್ಚಾತ್ತಾಪ ಪಟ್ಟಿದ್ದೀನಿ ಅಂತ ಸ್ಟೀವ್ಗೆ ನಂಬಿಕೆ ಬರೋದಕ್ಕೆ ವರ್ಷಗಳೇ ಹಿಡಿತು.”
ಸಂಗಾತಿ ವ್ಯಭಿಚಾರ ಮಾಡಿದರೆ ಅವನಿಗೊ/ಅವಳಿಗೊ ವಿಚ್ಛೇದನ ನೀಡಬಹುದೆಂದು ಬೈಬಲ್ ತಿಳಿಸುತ್ತದೆ. * (ಮತ್ತಾಯ 19:9) ಆದರೂ ಸ್ಟೀವ್ ಜೂಡಿಗೆ ವಿಚ್ಛೇದನ ನೀಡುವ ತೀರ್ಮಾನ ತೆಗೆದುಕೊಳ್ಳಲಿಲ್ಲ. ಅವರ ಸಂಸಾರ ಮತ್ತೆ ಉಸಿರಾಡಬೇಕೆಂಬ ಆಸೆ ಇಬ್ಬರಿಗೂ ಇತ್ತು. ಆದರೆ ಪ್ರತ್ಯೇಕವಾಗದೆ ಇಬ್ಬರೂ ಒಂದೇ ಮನೆಯಲ್ಲಿ ವಾಸ ಮಾಡಿದ ಕೂಡಲೇ ಎಲ್ಲವೂ ಸರಿಹೋಗುವ ಹಾಗಿರಲಿಲ್ಲ. ಏಕೆಂದರೆ ಅವರ ಮಾತುಗಳೇ ಹೇಳುವಂತೆ, ಜೂಡಿ ಮಾಡಿದ ದ್ರೋಹ ಸ್ವೀವ್ನ ವಿಶ್ವಾಸವನ್ನು ನುಂಗಿಹಾಕಿತ್ತು. ಆದರೆ ನಂಬಿಕೆ ಸುಖಸಂಸಾರದ ಜೀವನಾಡಿಯಾದ ಕಾರಣ ಅವರದನ್ನು ಪುನಃ ಕಟ್ಟಬೇಕಿತ್ತು.
ವ್ಯಭಿಚಾರದಂಥ ಗಂಭೀರ ಸಮಸ್ಯೆ ನಿಮ್ಮ ದಾಂಪತ್ಯವನ್ನು ಬಾಧಿಸಿದಾಗ ಅದನ್ನು ಉಳಿಸಿಕೊಳ್ಳಲು ನೀವು, ನಿಮ್ಮ ಸಂಗಾತಿ ಶತಪ್ರಯತ್ನವೇ ನಡೆಸಬೇಕು. ವಿಷಯ ಬಯಲಾದ ಕೆಲವು ತಿಂಗಳಂತೂ ಮನೆಯಲ್ಲಿ ಉಸಿರುಗಟ್ಟಿಸುವ ವಾತಾವರಣ. ಆದರೂ ಚಿಂತಿಸಬೇಡಿ. ನಂಬಿಕೆಯನ್ನು ಮತ್ತೆ ಕಟ್ಟಬಲ್ಲಿರಿ! ಹೇಗೆ? ಬೈಬಲಿನ ಸಹಾಯದಿಂದ. ಅದರಲ್ಲಿ ಜ್ಞಾನದ ನುಡಿಮುತ್ತುಗಳಿವೆ. ಅಂಥ ನಾಲ್ಕು ಸಲಹೆಗಳು ಇಲ್ಲಿವೆ.
1 ಒಬ್ಬರಿಗೊಬ್ಬರು ಪ್ರಾಮಾಣಿಕರಾಗಿರಿ. “ನೀವು ಸುಳ್ಳುತನವನ್ನು ತೆಗೆದುಹಾಕಿರುವುದರಿಂದ ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ನೆರೆಯವನೊಂದಿಗೆ ಸತ್ಯವನ್ನೇ ಆಡಲಿ” ಎಂದನು ಯೇಸುವಿನ ಶಿಷ್ಯನಾದ ಪೌಲ. (ಎಫೆಸ 4:25) ಸುಳ್ಳು, ಅರ್ಧಸತ್ಯ, ಅಷ್ಟೇಕೆ ಮೌನ ಕೂಡ ನಂಬಿಕೆಯನ್ನು ನುಚ್ಚು ನೂರು ಮಾಡಬಲ್ಲದು. ಹಾಗಾಗಿ ನಿಮ್ಮಿಬ್ಬರ ಮಧ್ಯೆ ಮುಕ್ತ, ಪ್ರಾಮಾಣಿಕ ಮಾತುಕತೆ ಇರಬೇಕು.
ನಡೆದಿರುವ ಅನರ್ಥದ ಬಗ್ಗೆ ಮಾತಾಡಲು ನಿಮ್ಮಿಬ್ಬರಿಗೂ ಆರಂಭದಲ್ಲಿ ಕಷ್ಟವಾಗಬಹುದು. ಆದರೂ ಕ್ರಮೇಣ ನಡೆದದ್ದರ
ಬಗ್ಗೆ ಒಂದನ್ನೂ ಮುಚ್ಚಿಡದೆ ಮಾತಾಡಲೇಬೇಕು. ಎಲ್ಲವನ್ನೂ ಸವಿವರವಾಗಿ ಹೇಳಲು ಕಷ್ಟವಾದರೂ ವಿಷಯವನ್ನೇ ಎತ್ತದಿರುವುದು ಜಾಣತನವಲ್ಲ. ಜೂಡಿ ಹೇಳುವುದು: “ನಾನು ಮಾಡಿರೋ ನೀಚ ಕೆಲ್ಸದ ಬಗ್ಗೆ ಮಾತಾಡೋದಕ್ಕೆ ಮೊದ್ಮೊದ್ಲು ತುಂಬ ಕಷ್ಟ ಆಗ್ತಿತ್ತು, ಅಸಹ್ಯ ಅನಿಸ್ತಿತ್ತು. ಯಾವಾಗ್ಲೂ ಅದು ನನ್ನ ಮನಸ್ಸನ್ನು ಕೊರೀತಾಯಿತ್ತು. ಆಗಿದ್ದನ್ನೆಲ್ಲ ಸಂಪೂರ್ಣ ಮರೀಬೇಕು ಅಂತ ಅದ್ರ ಬಗ್ಗೆ ಮಾತೇ ಎತ್ತುತ್ತಿರಲಿಲ್ಲ.” ಆದರೆ ಅದೇ ಸಮಸ್ಯೆಗೆ ಕಾರಣವಾಯಿತು. “ಜೂಡಿ ಆ ವಿಷ್ಯದ ಬಗ್ಗೆ ಏನೂ ಮಾತಾಡ್ದೇ ಇದ್ದದ್ರಿಂದ ನನ್ ಮನ್ಸಲ್ಲಿ ಯಾವಾಗ್ಲೂ ಸಂಶಯ ಇರ್ತಿತ್ತು” ಎನ್ನುತ್ತಾನೆ ಸ್ಟೀವ್. “ಇದ್ರ ಬಗ್ಗೆ ಸ್ಟೀವ್ ಜತೆ ಮಾತಾಡ್ದೆ ಇದ್ದದ್ರಿಂದ ಅವ್ರ ಮನಸ್ಸಿನ ಗಾಯ ಮಾಸೋಕೇ ತುಂಬ ಸಮಯ ಹಿಡಿತು” ಎಂದು ಈಗ ಒಪ್ಪಿಕೊಳ್ಳುತ್ತಾಳೆ ಜೂಡಿ.ವ್ಯಭಿಚಾರದಂಥ ವಿಶ್ವಾಸಘಾತಕ ಕೃತ್ಯದ ಬಗ್ಗೆ ಮಾತಾಡಿದರೆ ಮನಸ್ಸಿಗೆ ನೋವಾಗುವುದು ಖಂಡಿತ. ಪ್ರೇಮ್ ತನ್ನ ಸೆಕ್ರಿಟರಿ ಜತೆ ವ್ಯಭಿಚಾರ ಮಾಡಿದ್ದ. ಇದು ಆತನ ಪತ್ನಿ ದೀಪಿಕಾಗೆ ತಿಳಿದಾಗ ಆಕೆ ಹೇಳಿದ್ದು: “ನನ್ ತಲೆ ತುಂಬ ಪ್ರಶ್ನೆಗಳೇ ಓಡಾಡುತ್ತಿದ್ದವು. ಯಾಕೆ ಹೀಗೆಲ್ಲ ಆಯಿತು? ನಂಗ್ಯಾಕೆ ಹೀಗ್ ಮಾಡಿದ್ರೂ? ಇದನ್ನೆಲ್ಲ ಯೋಚಿಸ್ತಾ ಯೋಚಿಸ್ತಾ ತುಂಬ ಅಳ್ತಿದ್ದೆ. ದಿನಗಳು ಉರುಳುತ್ತಿದ್ದ ಹಾಗೆ ಇನ್ನೂ ಏನೇನೋ ಪ್ರಶ್ನೆಗಳು.” ಪ್ರೇಮ್ ಅನ್ನುವುದು: “ನಾನೂ ದೀಪಿಕಾ ಮನಬಿಚ್ಚಿ ಮಾತಾಡ್ತ ಇದ್ವಿ. ಕೆಲವೊಮ್ಮೆ ಮಾತು ಜಗಳದಲ್ಲಿ ಕೊನೆಯಾಗ್ತಿದ್ದದ್ದೇನೋ ನಿಜ. ಆದ್ರೆ ನಂತರ ಇಬ್ರೂ ಕ್ಷಮೆ ಕೇಳ್ತಿದ್ವಿ. ಈ ರೀತಿ ಪ್ರಾಮಾಣಿಕವಾಗಿ ಇಬ್ರೂ ಮಾತಾಡಿದ್ದೇ ನಮ್ಮಿಬ್ರನ್ನು ಹತ್ರ ಮಾಡ್ತು.”
ಸಂಗಾತಿ ಜತೆ ಬಿಚ್ಚುಮನಸ್ಸಿನಿಂದ ಮಾತಾಡಬೇಕಾದರೆ ಏನನ್ನು ನೆನಪಿನಲ್ಲಿಡಬೇಕು? ನೀವು ಮಾತಾಡುವ ಉದ್ದೇಶ ಅವರನ್ನು ಖಂಡಿಸಲಿಕ್ಕಲ್ಲ. ಬದಲಿಗೆ ನಡೆದಿರುವ ತಪ್ಪಿನಿಂದ ಪಾಠ ಕಲಿತು ದಾಂಪತ್ಯವೆಂಬ ಬಾಂಧವ್ಯವನ್ನು ಬಿಗಿಯಾಗಿಸಲು. ಉದಾಹರಣೆಗೆ, ಚೇತನ್ ಮತ್ತು ಮಾನ್ಸಿ ಎಂಬ ದಂಪತಿಯ ವಿಷಯದಲ್ಲಿ ಇದೇ ಆಯಿತು. ಚೇತನ್ ಪತ್ನಿಗೆ ದ್ರೋಹ ಮಾಡಿದ್ದ. ಇಬ್ಬರೂ ಕುಳಿತು ತಾವೆಲ್ಲಿ ತಪ್ಪಿದ್ದೇವೆ ಎಂದು ಪ್ರಾಮಾಣಿಕವಾಗಿ ಮಾತಾಡಿಕೊಂಡರು. “ನಾನು ನನ್ ಪರ್ಸನಲ್ ವಿಷ್ಯಗಳಲ್ಲೇ ಬ್ಯುಸಿ ಇದ್ದೆ. ಬೇರೆಯವರನ್ನ ಮೆಚ್ಚಿಸೋದರಲ್ಲಿ, ಅವ್ರಿಗೆ ಬೇಕಾದ್ನ ಮಾಡೋದ್ರಲ್ಲಿ ಮುಳುಗೋಗಿದ್ದೆ. ಹೀಗೆ ನನ್ ಸಮಯ, ಗಮನವೆಲ್ಲ ಬೇರೆಯವರಿಗಾಗಿಯೇ ಜಾರಿಹೋಗ್ತಾ ಇತ್ತು. ನನ್ ಹೆಂಡ್ತಿ ಜತೆ ತುಂಬ ಕಡಿಮೆ ಸಮಯ ಕಳೀತಿದ್ದೆ” ಎನ್ನುತ್ತಾನೆ ಚೇತನ್. ಈ ಕೊರತೆಯನ್ನು ಕಂಡುಹಿಡಿದ ಅವರಿಬ್ಬರೂ ಬೇಕಾದ ಹೊಂದಾಣಿಕೆಗಳನ್ನು ಮಾಡಿಕೊಂಡರು. ಸ್ವಲ್ಪ ಸಮಯದಲ್ಲೇ ಅವರ ಬಾಂಧವ್ಯ ಬೆಳಗಿತು.
ಪ್ರಯತ್ನಿಸಿ ನೋಡಿ: ನಿಮ್ಮಿಂದ ತಪ್ಪು ನಡೆದಿರುವಲ್ಲಿ ಅದಕ್ಕೆ ನೆಪಗಳನ್ನು ಕೊಡಬೇಡಿ, ಸಂಗಾತಿಯನ್ನು ದೂರಬೇಡಿ. ನಿಮ್ಮಿಂದ ತಪ್ಪಾಗಿದೆ, ನಿಮ್ಮ ಸಂಗಾತಿಯ ಮನಸ್ಸನ್ನು ನೋಯಿಸಿದಿರಿ ಎಂದು ಒಪ್ಪಿಕೊಳ್ಳಿ. ಒಂದುವೇಳೆ ಸಂಗಾತಿ ನಿಮಗೆ ದ್ರೋಹ ಮಾಡಿರುವಲ್ಲಿ ಅವರ ಮೇಲೆ ಚೀರಾಡಬೇಡಿ, ಕೆಟ್ಟಕೆಟ್ಟ ಭಾಷೆ ಬಳಸಿ ಬಯ್ಯಬೇಡಿ. ಆಗ ಮಾತ್ರ ನಿಮ್ಮ ಸಂಗಾತಿ ಮನಬಿಚ್ಚಿ ಮಾತಾಡಲು ದಾರಿಮಾಡಿಕೊಡುವಿರಿ.—ಎಫೆಸ 4:32.
2 ಒಗ್ಗಟ್ಟಿನಿಂದ ಕೆಲಸಮಾಡಿ. “ಒಬ್ಬನಿಗಿಂತ ಇಬ್ಬರು ಲೇಸು” ಎನ್ನುತ್ತೆ ಬೈಬಲ್. ಏಕೆಂದರೆ “ಅವರ ಪ್ರಯಾಸಕ್ಕೆ ಒಳ್ಳೆಯ ಲಾಭ. ಒಬ್ಬನು ಬಿದ್ದರೆ ಇನ್ನೊಬ್ಬನು ಎತ್ತುವನು.” (ಪ್ರಸಂಗಿ 4:9, 10) ನಿಮ್ಮ ಸಂಸಾರದಲ್ಲಿ ನಂಬಿಕೆಯನ್ನು ಪುನಃ ಕಟ್ಟಲು ಶ್ರಮಿಸುವಾಗ ಮೇಲಿನ ಸೂತ್ರ ಬಹು ಸಹಕಾರಿ.
ನಿಮ್ಮ ಬಾಂಧವ್ಯಕ್ಕೆ ಮುಳುವಾಗಿರುವ ಅಪನಂಬಿಕೆಯನ್ನು ಅಳಿಸಿ ಹಾಕಲು ನೀವಿಬ್ಬರೂ ಸೇರಿ ಕೆಲಸಮಾಡಿ. ನಿಮ್ಮ ದಾಂಪತ್ಯವನ್ನು ಉಳಿಸಿಕೊಳ್ಳುವ ಹಂಬಲ ಇಬ್ಬರಲ್ಲೂ ಇರಬೇಕು. ನಾನೊಬ್ಬನೇ ಸರಿಪಡಿಸ್ತೀನಿ ಅಂತ ಹೊರಟರೆ ಸಮಸ್ಯೆ ದ್ವಿಗುಣ ಆಗಬಹುದು. ಆದ್ದರಿಂದ ಈ ಕೆಲಸದಲ್ಲಿ ಇಬ್ಬರೂ ಕೈಜೋಡಿಸಿ.
ಸ್ಟೀವ್ ಮತ್ತು ಜೂಡಿ ಅದನ್ನರಿತು ಕೆಲಸಮಾಡಿದರು. “ಎಲ್ಲ ಸರಿಯಾಗೋದಕ್ಕೆ ಸಮಯ ತಗೊಳ್ತು. ಸುದೃಢ ಸಂಸಾರ ಕಟ್ಟಲು ಒಗ್ಗಟ್ಟಿನಿಂದ ಇಬ್ರೂ ಶ್ರಮಿಸಿದ್ವಿ. ಇನ್ಯಾವತ್ತೂ ಸ್ಟೀವ್ಗೆ ಈ ರೀತಿ ನೋವು ಮಾಡಲ್ಲ ಅಂತ ದೃಢಸಂಕಲ್ಪ ಮಾಡಿದೆ. ಸ್ಟೀವ್ಗೆ ಎಷ್ಟೇ ನೋವಾಗ್ತಿದ್ರೂ ಸಂಸಾರದ ಕೊಂಡಿ ಕಳಚಿ ಬೀಳಬಾರ್ದು ಎನ್ನೋದೇ ಅವ್ರ ಮನದಾಳದ ಬಯಕೆ ಆಗಿತ್ತು. ಇನ್ನೆಂದೂ ಅವ್ರಿಗೆ ನಾನ್ ಮೋಸ ಮಾಡಲ್ಲ ಅಂತ ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ಭರವಸೆ ಮೂಡಿಸ್ತಿದ್ದೆ. ಅವ್ರೂ ನಂಗೆ ಪ್ರೀತಿ ತೋರಿಸ್ತಾ ಇದ್ರು. ಬದುಕಿರುವ ವರ್ಗೂ ನಾನವರಿಗೆ ಚಿರಋಣಿಯಾಗಿರ್ತೀನಿ” ಎನ್ನುತ್ತಾಳೆ ಜೂಡಿ.
ಪ್ರಯತ್ನಿಸಿ ನೋಡಿ: ನಿಮ್ಮ ದಾಂಪತ್ಯದಲ್ಲಿ ನಂಬಿಕೆಯನ್ನು ಮರಳಿ ಕಟ್ಟಲು ಇಬ್ಬರೂ ಒಟ್ಟಾಗಿ ಶ್ರಮಿಸಿ.
3 ಕೆಟ್ಟ ಚಾಳಿ ಬಿಟ್ಟು ಸದ್ಗುಣಗಳನ್ನು ಬೆಳೆಸಿಕೊಳ್ಳಿ. ವ್ಯಭಿಚಾರದ ಬಗ್ಗೆ ಯೇಸು ತನ್ನ ಶಿಷ್ಯರಿಗೆ ಕಟ್ಟೆಚ್ಚರ ನೀಡಿದ ನಂತರ “ನಿನ್ನ ಬಲಗಣ್ಣು ನಿನ್ನನ್ನು ಎಡವಿಸುತ್ತಿರುವುದಾದರೆ ಅದನ್ನು ಕಿತ್ತು ಬಿಸಾಡು” ಎಂದು ಬುದ್ಧಿಮಾತು ಹೇಳಿದ. (ಮತ್ತಾಯ 5:27-29) ನಿಮ್ಮಿಂದ ತಪ್ಪಾಗಿರುವುದಾದರೆ ನಿಮ್ಮನ್ನು ತಪ್ಪಿಗೆ ನಡೆಸಿರುವಂಥ ಚಾಳಿ ಅಥವಾ ದುರ್ಗುಣ ಯಾವುದೆಂದು ಗುರುತಿಸಿ. ಅದನ್ನು ‘ಕಿತ್ತು ಬಿಸಾಡಿ.’
ನಿಮ್ಮೊಂದಿಗೆ ವ್ಯಭಿಚಾರಗೈದ ವ್ಯಕ್ತಿಯ ಸಂಗವನ್ನು ಸಂಪೂರ್ಣವಾಗಿ ಕಡಿದುಹಾಕಬೇಕು. * (ಜ್ಞಾನೋಕ್ತಿ 6:32; 1 ಕೊರಿಂಥ 15:33) ಪ್ರೇಮ್ ತನ್ನ ಉದ್ಯೋಗದ ಸಮಯವನ್ನು ಮತ್ತು ಮೊಬೈಲ್ ನಂಬರನ್ನು ಬದಲಿಸಿಕೊಂಡ. ಮುಂದೆಂದೂ ಎಲ್ಲೂ ಆ ಮಹಿಳೆ ಭೇಟಿಯಾಗಬಾರದೆಂಬದು ಆತನ ಇಚ್ಛೆಯಾಗಿತ್ತು. ಆದರೂ ಅವನ ಈ ಯತ್ನಗಳು ವಿಫಲವಾದವು. ಆದರೆ ಪ್ರೇಮ್ ಸೋಲೊಪ್ಪಲಿಲ್ಲ. ಅವನಿಗೆ ತನ್ನ ಪತ್ನಿಯ ನಂಬಿಕೆ ಗಳಿಸುವುದು ಮುಖ್ಯವಾಗಿತ್ತು. ಅದಕ್ಕಾಗಿ ಕೆಲಸವನ್ನೇ ಬಿಟ್ಟುಬಿಟ್ಟ. ಮೊಬೈಲನ್ನೂ ಮೂಲೆಗೆಸೆದು ತನ್ನ ಪತ್ನಿಯ ಮೊಬೈಲನ್ನು ಮಾತ್ರ ಬಳಸತೊಡಗಿದ. ಇಷ್ಟೆಲ್ಲ ತೊಂದರೆ ತೊಡಕುಗಳಾದರೂ ಯಶಸ್ಸು ಸಿಕ್ಕಿತೇ? ಹೌದು! “ಆರು ವರ್ಷಗಳಾಯಿತು. ಆ ಹೆಂಗಸು ಎಲ್ಲಿ ಬಂದುಬಿಡುತ್ತಾಳೋ ಅಂತ ಈಗ್ಲೂ ಕೆಲವು ಸಲ ಭಯ ಆಗುತ್ತಾದ್ರೂ ಪ್ರೇಮ್ ಮೇಲೆ ನಂಗೆ ಪೂರ್ಣ ನಂಬಿಕೆ ಇದೆ. ಅವ್ರು ಅದೆಂಥ ಪ್ರಲೋಭನೆ ಬಂದ್ರೂ ಜಯಿಸಿ ಬರ್ತಾರೆ” ಎನ್ನುತ್ತಾಳೆ ದೀಪಿಕಾ.
ತಪ್ಪು ಮಾಡುವಂತೆ ನಿಮ್ಮನ್ನು ನಡೆಸಿರುವ ಸಂಗತಿಗಳು ಯಾವುದೆಂದು ಯೋಚಿಸಿ. ಆ ನಿಟ್ಟಿನಲ್ಲಿ ಬದಲಾವಣೆಗಳನ್ನು ಮಾಡಿ. ನಿಮಗೆ ಚೆಲ್ಲಾಟವಾಡುವ ಸ್ವಭಾವ ಇದೆಯಾ? ಅಥವಾ ಬೇರೆಯವರ ಜೊತೆ ಪ್ರೀತಿ-ಪ್ರಣಯವನ್ನು ಕಲ್ಪಿಸಿಕೊಂಡು ಖುಷಿಪಡುವ ಸ್ವಭಾವ ಇದೆಯಾ? ಇದ್ರೆ ಅಂಥ “ವ್ಯಕ್ತಿತ್ವವನ್ನು ಅದರ ಅಭ್ಯಾಸಗಳೊಂದಿಗೆ ತೆಗೆದುಹಾಕಿರಿ.” ಆ ಜಾಗದಲ್ಲಿ ಒಳ್ಳೇ ಸ್ವಭಾವಗಳನ್ನು ಭರ್ತಿಮಾಡಿ. ಅವು ನಿಮ್ಮ ಸಂಗಾತಿಯ ವಿಶ್ವಾಸ ಗಳಿಸಲು ನೆರವಾಗುವುದು. (ಕೊಲೊಸ್ಸೆ 3:9, 10) ಮನದಲ್ಲಿ ತುಂಬಿದ ಮಮತೆಯನ್ನು ಮಾತುಗಳಿಂದ ವ್ಯಕ್ತಪಡಿಸುವುದು ಕಷ್ಟವೇ? ಅದನ್ನು ರೂಢಿಸಿಕೊಳ್ಳಿ. ಸಂಗಾತಿಯ ಮೇಲೆ ಎಷ್ಟು ಪ್ರೀತಿ, ಭರವಸೆ ಇದೆಯೆಂದು ಮುಕ್ತವಾಗಿ ಹೇಳಿ. ಮೊದಮೊದಲು ನಿಮಗೆ ಮುಜುಗರವಾಗಬಹುದು. ಸ್ವೀವ್ ತನ್ನ ನೆನಪಿನ ಬುತ್ತಿ ಬಿಚ್ಚಿಡುತ್ತಾ “ಜೂಡಿ ಅಕ್ಕರೆಯಿಂದ ನನ್ನನ್ನು ಮುಟ್ಟಿ ‘ರೀ ನಾನ್ ನಿಮ್ಮನ್ ತುಂಬ ಪ್ರೀತಿಸ್ತೀನಿ’ ಅಂತ ಮನದುಂಬಿ ಹೇಳ್ತಿದ್ಳು” ಎನ್ನುತ್ತಾನೆ.
ಇನ್ನೊಂದು ವಿಷ್ಯವನ್ನೂ ಮಾಡಬಹುದು. ದಿನವಿಡೀ ಏನೆಲ್ಲ ಮಾಡಿದಿರಿ ಎಂದು ಏನನ್ನೂ ಮುಚ್ಚಿಡದೆ ಸಂಗಾತಿಗೆ ಹೇಳಿ. “ಪ್ರತಿ ದಿನ ಏನೇನ್ ಮಾಡ್ದೆ ಅಂತ ಚೇತನ್ ಹೇಳ್ತಿದ್ರು. ಚಿಕ್ಕ ಚಿಕ್ಕ ವಿಷ್ಯನೂ ಬಿಡ್ತಾ ಇರ್ಲಿಲ್ಲ. ಹೀಗೆ ತಾನ್ಯಾವುದನ್ನೂ ಮುಚ್ಚಿಡಲ್ಲ ಅಂತ ತೋರಿಸಿಕೊಡ್ತಾ ಇದ್ರು” ಎನ್ನುತ್ತಾಳೆ ಮಾನ್ಸಿ.
ಪ್ರಯತ್ನಿಸಿ ನೋಡಿ: ಏನು ಮಾಡಿದರೆ ನಂಬಿಕೆಯನ್ನು ಪುನಃ ಕಟ್ಟಬಹುದೆಂದು ಒಬ್ಬರನ್ನೊಬ್ಬರು ಕೇಳಿ. ಅವನ್ನೆಲ್ಲ ಜೋಪಾನವಾಗಿ ಬರೆದಿಟ್ಟು ಕಾರ್ಯರೂಪಕ್ಕೆ ಹಾಕಿ. ನಿಮ್ಮಿಬ್ಬರಿಗೂ ಇಷ್ಟವಾಗುವ ಕೆಲಸಗಳನ್ನು ಜೊತೆಯಾಗಿ ಮಾಡಿ.
4 ಸಮಯ ಸಂದಂತೆ ಮುಂದೆ ಸಾಗಿ. ಎಲ್ಲ ಸರಿಹೋಯಿತು ಅಂದುಕೊಂಡು ಮುಂಚಿನಂತೆ ಜೀವನ ನಡೆಸಲು ಆತುರಪಡಬೇಡಿ. “ಆತುರಪಡುವವರಿಗೆಲ್ಲಾ ಕೊರತೆಯೇ” ಎನ್ನುತ್ತೆ ಜ್ಞಾನೋಕ್ತಿ 21:5. ಹಾಗಾಗಿ ಕಮರಿಹೋದ ನಂಬಿಕೆ ಮತ್ತೆ ಮರುಜೀವ ಪಡೆದು ಎಲ್ಲ ಸರಿಹೋಗಲು ಸಮಯ ಹಿಡಿಯುತ್ತೆ, ಬಹುಶಃ ವರ್ಷಗಳೇ ಹಿಡಿಯಬಹುದು.
ತಪ್ಪುಮಾಡಿದ ಸಂಗಾತಿಯನ್ನು ಪೂರ್ಣವಾಗಿ ಕ್ಷಮಿಸಲು ಸಮಯ ಹಿಡಿಯುತ್ತೆ. “ಗಂಡ ತಪ್ಪುಮಾಡಿದಾಗ ಕೆಲವು ಹೆಂಡ್ತಿರು ಕ್ಷಮಿಸೋದಕ್ಕೆ ಯಾಕಪ್ಪಾ ಕಷ್ಟಪಡ್ತಾರೆ ಅಂತ ಆಶ್ಚರ್ಯ ಪಡ್ತಿದ್ದೆ. ಕೆಲವರು ಎಷ್ಟೋ ಕಾಲ ಅವ್ರ ಮೇಲೆ ಕೋಪ ಮಾಡ್ತಾರೆ. ಅದ್ಯಾಕಂತ ಅರ್ಥ ಆಗ್ತಿರ್ಲಿಲ್ಲ. ನನ್ ಗಂಡನಿಂದ ನನ್ಗೆ ಮೋಸ ಆದಾಗ್ಲೆ ಕ್ಷಮಿಸೋದು ಎಷ್ಟು ಕಷ್ಟ ಅಂತ ಅರ್ಥ ಆಯಿತು” ಎನ್ನುತ್ತಾಳೆ ಮಾನ್ಸಿ. ಕ್ಷಮಿಸುವುದಾಗಲಿ ಮುರಿದು ಹೋದ ನಂಬಿಕೆ ಕಟ್ಟುವುದಾಗಲಿ ಅಷ್ಟು ಸುಲಭವಲ್ಲ, ಸಮಯ ಹಿಡಿಯುತ್ತೆ.
ಬೈಬಲ್ ಸಹ ಇದನ್ನೇ ಹೇಳುತ್ತೆ. ಮನಸ್ಸಿಗಾದ ನೋವು ಮಾಸಲು ಅಥವಾ ‘ಸ್ವಸ್ಥವಾಗಲು’ ಸಮಯ ಹಿಡಿಯುತ್ತೆ ಎಂದು ಪ್ರಸಂಗಿ 3:1-3 ತಿಳಿಸುತ್ತೆ. ಹಾಗಂತ, ಕಾಲ ಎಲ್ಲವನ್ನೂ ಮರೆಸುತ್ತೆ ಅಂದುಕೊಂಡು ನಿಮ್ಮ ಸಂಗಾತಿಯಿಂದ ಭಾವನಾತ್ಮಕವಾಗಿ ದೂರವಿರಬೇಡಿ. ಹಾಗೆ ಮಾಡಿದರೆ ನೀವು ಸಂಗಾತಿ ಮೇಲೆ ಕಳೆದುಕೊಂಡಿರುವ ನಂಬಿಕೆ ಮರಳಿ ಬಾರದು. ನಿಮ್ಮ ಮನಸ್ಸಿಗಾದ ಗಾಯ ಮಾಸಬೇಕಾದರೆ ಸಂಗಾತಿಯನ್ನು ಕ್ಷಮಿಸಬೇಕು. ಕ್ಷಮಿಸಿದ್ದೀರಿ ಎನ್ನುವುದನ್ನು ನಿಮ್ಮ ಮನದಾಳದ ಭಾವನೆಗಳನ್ನು, ಯೋಚನೆಗಳನ್ನು ತೋಡಿಕೊಳ್ಳುವ ಮೂಲಕ ತೋರಿಸಿ. ಹಾಗೇ ನಿಮ್ಮ ಸಂಗಾತಿ ತನ್ನ ಸುಖದುಃಖಗಳನ್ನು ಹಂಚಿಕೊಳ್ಳುವಂತೆ ಪ್ರೋತ್ಸಾಹಿಸಿ.
ನಿಮ್ಮ ಸಂಗಾತಿಯಿಂದ ಆಗಿಹೋದ ತಪ್ಪಿನ ಬಗ್ಗೆಯೇ ಯೋಚಿಸುತ್ತಾ ಇರಬೇಡಿ. ಮರೆಯಲು ನಿಮ್ಮಿಂದಾದಷ್ಟು ಪ್ರಯತ್ನಿಸಿ. (ಎಫೆಸ 4:32) ಇದಕ್ಕೆ ದೇವರ ಮಾದರಿಯೇ ನಿಮಗೆ ಸ್ಫೂರ್ತಿಯಾಗಬಲ್ಲದು. ಪ್ರಾಚೀನ ಇಸ್ರೇಲಿನ ಜನರು ಆತನನ್ನು ಬಿಟ್ಟು ಬೇರೆ ದೇವರುಗಳನ್ನು ಆರಾಧಿಸಿ ಆತನನ್ನು ತುಂಬ ನೋಯಿಸಿದರು. ಆಗ ಯೆಹೋವ ದೇವರು ತನ್ನನ್ನು ದಾಂಪತ್ಯ ದ್ರೋಹದ ಕಹಿಯುಂಡ ಪತಿಯಂತೇ ಎಣಿಸಿದನು. (ಯೆರೆಮೀಯ 3:8, 9; 9:2) ಆದರೂ ಆತ ನಿತ್ಯ ನಿರಂತರಕ್ಕೂ ಅವರ ಮೇಲೆ ಕೋಪ ಇಟ್ಟುಕೊಂಡಿರಲಿಲ್ಲ. (ಯೆರೆಮೀಯ 3:12) ಆ ಜನರು ಪಶ್ಚಾತ್ತಾಪಪಟ್ಟಾಗ ಅವರನ್ನು ಕ್ಷಮಿಸಿದನು.
ಬಾಂಧವ್ಯ ಸರಿಪಡಿಸಲು ಬೇಕಾದ ಹೊಂದಾಣಿಕೆಗಳನ್ನೆಲ್ಲ ಮಾಡಿ, ನಿಮ್ಮ ಮಧ್ಯೆ ನಂಬಿಕೆ ಕಟ್ಟಿದ್ದೀರಿ ಎಂದು ನಿಮಗನಿಸುವಾಗಲೇ ಸುಭದ್ರ ಭಾವನೆ ದಾಂಪತ್ಯಕ್ಕೆ ಕಾಲಿಡುವುದು. ಆಗಲೂ ಬರೀ ನಿಮ್ಮ ವೈವಾಹಿಕ ಜೀವನವನ್ನು ಉಳಿಸುವುದಕ್ಕೇ ಗಮನ ಕೊಡಬೇಡಿ. ಬೇರೆ ಗುರಿಗಳನ್ನು ಜೊತೆಯಾಗಿ ಸಾಧಿಸುವುದರತ್ತ ಗಮನಹರಿಸಿ. ಹಾಗಿದ್ದರೂ ಸಂಬಂಧ ದೃಢವಾಗಿದೆಯೇ ಎಂದು ಆಗಾಗ್ಗೆ ಖಚಿತಪಡಿಸಿಕೊಳ್ಳುತ್ತಾ ಇರಿ. ಒಮ್ಮೆ ಸರಿಯಾಯಿತೆಂದ ಮಾತ್ರಕ್ಕೆ ತೃಪ್ತಿಪಟ್ಟು ಸುಮ್ಮನಿದ್ದು ಬಿಡಬೇಡಿ. ಚಿಕ್ಕಪುಟ್ಟ ಸಮಸ್ಯೆಗಳು ಎದ್ದರೂ ಕೂಡಲೇ ಸರಿಪಡಿಸಿ. ಒಬ್ಬರಿಗೊಬ್ಬರು ಕೊಟ್ಟ ಮಾತನ್ನು ನೆನಪಿಸಿಕೊಳ್ಳುತ್ತಾ ಇರಿ.—ಗಲಾತ್ಯ 6:9.
ಪ್ರಯತ್ನಿಸಿ ನೋಡಿ: ನಿಮ್ಮ ಸಂಬಂಧ ಮೊದಲಿದ್ದ ಹಾಗೆ ಆಗಬೇಕು ಎಂದು ಪ್ರಯತ್ನಿಸುತ್ತಲೇ ಇರುವ ಬದಲು ಆಗಿಹೋದದ್ದನ್ನು ಮರೆತು ಹೊಸದಾಗಿ ಆರಂಭಿಸಿ.
ಜಯಪ್ರದರಾಗಬಲ್ಲಿರಿ
ಯಶಸ್ಸು ಮುಗಿಲಮಲ್ಲಿಗೆಯಂತೆ ಕಾಣುವಾಗ ಇದನ್ನು ನೆನಪಿನಲ್ಲಿಡಿ: ವಿವಾಹ ಎಂಬ ಏರ್ಪಾಡಿನ ಜನಕ ಯೆಹೋವ ದೇವರು. (ಮತ್ತಾಯ 19:4-6) ಆತನ ಸಹಾಯಹಸ್ತ ಇದ್ದರೆ ವಿವಾಹಬಂಧ ಶಾಶ್ವತವಾಗಬಲ್ಲದು. ಈ ಲೇಖನದಲ್ಲಿ ತಿಳಿಸಲಾದ ದಂಪತಿಗಳು ಬೈಬಲ್ ಸಲಹೆಗಳನ್ನು ಪಾಲಿಸಿದರು, ತಮ್ಮ ವಿವಾಹ ಬಾಂಧವ್ಯವನ್ನು ಉಳಿಸಿಕೊಂಡರು.
ಸ್ಟೀವ್ ಮತ್ತು ಜೂಡಿಯ ದಾಂಪತ್ಯಕ್ಕೆ ಅನರ್ಥದ ಅಲೆ ಅಪ್ಪಳಿಸಿ 20 ವರ್ಷಗಳು ಸಂದಿವೆ. ಅಂದಿನಿಂದ ಅದನ್ನು ಸರಿಪಡಿಸಲು ಪ್ರಯಾಸಪಡುತ್ತಾ ಸಾಗಿಬಂದ ಹಾದಿಯನ್ನು ಹಿಂದಿರುಗಿ ನೋಡಿ ಸ್ಟೀವ್ ಹೇಳುವುದು: “ನಾವು ಸರಿಯಾಗಿ ಬದ್ಲಾವಣೆ ಮಾಡಕ್ಕೆ ತೊಡಗಿದ್ದೇ ಯೆಹೋವನ ಸಾಕ್ಷಿಗಳಿಂದ ಬೈಬಲ್ ಕಲಿಯಕ್ಕೆ ಶುರುಮಾಡಿದ ಮೇಲೆ. ಅದ್ರಿಂದ ನಮಗೆ ತುಂಬ ತುಂಬ ಪ್ರಯೋಜನ ಸಿಕ್ಕಿತ್ತು. ಹಾಗಾಗಿಯೇ ಆ ಕಷ್ಟಕಾಲವನ್ನು ಜಯಿಸಕ್ಕಾಯಿತು.” ಜೂಡಿ ಹೇಳುವುದು: “ನಮ್ಮನ್ನ ಮುತ್ಕೊಂಡಿದ್ದ ಕಷ್ಟಗಳನ್ನೆಲ್ಲ ಜಯಿಸಿದೆವು ಎಂದು ನೆನ್ಸುವಾಗ ತುಂಬ ಸಂತೋಷವಾಗುತ್ತೆ. ಬೈಬಲನ್ನು ಒಟ್ಟಿಗೆ ಅಧ್ಯಯನ ಮಾಡಿ, ಸಂಸಾರದ ಕೊಂಡಿಯನ್ನ ಬಿಗಿಯಾಗಿಸಲು ಶ್ರಮಿಸಿ ಈಗ ನಾವು ಸುಖ-ನೆಮ್ಮದಿಯ ದಾಂಪತ್ಯ ನಡೆಸುತ್ತಿದ್ದೇವೆ.” (w12-E 05/01)
[ಪಾದಟಿಪ್ಪಣಿಗಳು]
^ ಪ್ಯಾರ. 3 ಹೆಸರುಗಳನ್ನು ಬದಲಿಸಲಾಗಿದೆ.
^ ಪ್ಯಾರ. 5 ಇಂಥ ತೀರ್ಮಾನ ಮಾಡುವಾಗ ಸಲಹೆಗಳಿಗಾಗಿ 1995ರ ಎಚ್ಚರ! ಪತ್ರಿಕೆಯ ಸೆಪ್ಟೆಂಬರ್ 8, ಪುಟ 10-11 ನೋಡಿ.
^ ಪ್ಯಾರ. 17 ಆ ವ್ಯಕ್ತಿಯ ಜತೆ ಕೆಲಸಮಾಡಲೇ ಬೇಕಾದ ಸಂದರ್ಭ ಇರುವಲ್ಲಿ ನಿಮ್ಮ ಮಾತುಕತೆ ಕೆಲಸಕ್ಕೆ ಮಾತ್ರ ಸೀಮಿತವಾಗಿರಲಿ. ಇದನ್ನು ನಿಮ್ಮ ಸಂಗಾತಿಗೂ ತಿಳಿಸಿ. ನಿಮ್ಮ ಕೆಲಸದ ಸ್ಥಳದಲ್ಲಿ ಯಾರೂ ಇಲ್ಲದಿದ್ದಾಗ ಆ ವ್ಯಕ್ತಿಯೊಟ್ಟಿಗೆ ಯಾವ ವ್ಯವಹಾರವೂ ಬೇಡ.
[ಪುಟ 23ರಲ್ಲಿರುವ ಚಿತ್ರ]
ನಿಮ್ಮನ್ನೇ ಕೇಳಿಕೊಳ್ಳಿ...
▪ ನನ್ನ ಸಂಗಾತಿ ದ್ರೋಹ ಮಾಡಿದ್ರೂ ನಾನೇಕೆ ಅವರ/ಆಕೆಯ ಜತೆ ಬಾಳುವ ನಿರ್ಧಾರ ಮಾಡಿದೆ?
▪ ಈಗ ನನ್ನ ಸಂಗಾತಿಯಲ್ಲಿ ಯಾವ್ಯಾವ ಒಳ್ಳೇ ಗುಣಗಳಿವೆ?
▪ ಮದುವೆಗೆ ಮುಂಚೆ ಚಿಕ್ಕಚಿಕ್ಕ ವಿಷ್ಯದಲ್ಲಿ ನನ್ನ ಸಂಗಾತಿಗೆ ಹೇಗೆ ಪ್ರೀತಿ ತೋರಿಸ್ತಿದ್ದೆ? ಅದೇ ರೀತಿ ಈಗ ಹೇಗೆ ತೋರಿಸಬಲ್ಲೆ?