ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರೀತಿ

ಪ್ರೀತಿ

ಪ್ರೀತಿ

ಪ್ರೀತಿ: ಪ್ರೀತಿ ಅಪಾರ ಒಲವಿನ ಅನುಭೂತಿ. ಮನದಾಳದಿಂದ ಉಕ್ಕುವ ಭಾವ. ಪ್ರೀತಿ ನಡೆನುಡಿಯಲ್ಲಿ ತೋರಿಬರುತ್ತೆ. ಏನನ್ನು ಬೇಕಾದರೂ ತ್ಯಾಗ ಮಾಡಲು ಸಿದ್ಧವಿರುತ್ತೆ.

ಮೋಶೆ ಪ್ರೀತಿ ತೋರಿಸಿದ ಪರಿ? ಮೋಶೆಗೆ ದೇವರ ಮೇಲೆ ತುಂಬ ಪ್ರೀತಿ ಇತ್ತು, ಅದನ್ನು ತೋರಿಸಿದರು ಸಹ. ಹೇಗೆ ತೋರಿಸಿದರು? ಬೈಬಲಿನ 1 ಯೋಹಾನ 5:3ರಲ್ಲಿರುವ ಮಾತುಗಳನ್ನು ಸ್ವಲ್ಪ ನೆನಪಿಸಿಕೊಳ್ಳಿ. “ದೇವರ ಮೇಲಣ ಪ್ರೀತಿ ಏನೆಂದರೆ ನಾವು [ದೇವರ] ಆಜ್ಞೆಗಳನ್ನು ಕೈಕೊಂಡು ನಡೆಯುವುದೇ” ಅಂತ ಹೇಳುತ್ತೆ ಆ ವಚನ. ದೇವರ ಆಜ್ಞೆಗಳನ್ನು ಮೋಶೆ ಶಿರಸ್ಸಾವಹಿಸಿ ಪಾಲಿಸಿದರು. ಉದಾ: ದುರಹಂಕಾರಿ ರಾಜನ ಮುಂದೆ ನಿಂತು ಮಾತಾಡುವಂಥ ಕಷ್ಟದ ಕೆಲಸವನ್ನೂ ಧೈರ್ಯದಿಂದ ಮಾಡಿದರು. ಕೆಂಪುಸಮುದ್ರದಲ್ಲಿ ಒಣನೆಲ ಮಾಡೋದಕ್ಕಾಗಿ ಕೈಯಲ್ಲಿದ್ದ ಕೋಲನ್ನು ಬರೀ ಚಾಚುವಂಥ ಚಿಕ್ಕ ಕೆಲಸವನ್ನೂ ಮಾಡಿದರು. ಹೀಗೆ ಆಜ್ಞೆ ದೊಡ್ಡದಿರಲಿ ಚಿಕ್ಕದಿರಲಿ ಕಷ್ಟವಿರಲಿ ಸುಲಭವಿರಲಿ ವಿಧೇಯರಾದರು. “ಆಜ್ಞಾಪಿಸಿದಂತೆಯೇ ಮೋಶೆ ಎಲ್ಲವನ್ನು” ಮಾಡಿದರು.—ವಿಮೋಚನಕಾಂಡ 40:16.

ದೇವರನ್ನು ಮಾತ್ರ ಅಲ್ಲ ಇಸ್ರೇಲಿಗಳನ್ನೂ ಮೋಶೆ ಪ್ರೀತಿಸುತ್ತಿದ್ದರು. ಮೋಶೆ ಜೊತೆ ದೇವರಿದ್ದಾರೆ, ನಮ್ಮನ್ನು ಮಾರ್ಗದರ್ಶಿಸುತ್ತಿದ್ದಾರೆ ಅನ್ನೋದನ್ನು ಗ್ರಹಿಸಿದ ಜನರು ಸಮಸ್ಯೆಗಳ ಪರಿಹಾರಕ್ಕೆ ಮೋಶೆಯ ಬಳಿ ಬರುತ್ತಿದ್ದರು. “ಪ್ರಾತಃಕಾಲ ಮೊದಲುಗೊಂಡು ಸಾಯಂಕಾಲದ ವರೆಗೂ ಜನರು [ಮೋಶೆ] ಹತ್ತಿರ” ನಿಲ್ಲುತ್ತಿದ್ದರು ಎನ್ನುತ್ತೆ ಬೈಬಲ್‌. (ವಿಮೋಚನಕಾಂಡ 18:13-16) ನೀವೇ ಯೋಚಿಸಿ, ಗಂಟೆಗಟ್ಟಲೆ ಒಂದೇಸಮನೆ ಜನರ ಸಮಸ್ಯೆಗಳನ್ನು ಕೇಳಿ ಕೇಳಿ ಕೇಳಿ ಮೋಶೆಗೆಷ್ಟು ಸುಸ್ತಾಗಿರಬಹುದು! ಆದರೂ ತಾನು ಪ್ರೀತಿಸೋ ಜನರಿಗೆ ಸಹಾಯ ಮಾಡುವುದರಲ್ಲೇ ಮೋಶೆ ಸಂತೋಷ ಕಾಣುತ್ತಿದ್ದರು.

ಇದಿಷ್ಟೇ ಅಲ್ಲ ಮೋಶೆ ತನ್ನ ಪ್ರಿಯ ಜನರಿಗೋಸ್ಕರ ಪ್ರಾರ್ಥಿಸುತ್ತಿದ್ದರು. ತನಗೆ ಕೇಡು ಬಗೆಯುತ್ತಿದ್ದ ಜನರಿಗಾಗಿ ಕೂಡ ಪ್ರಾರ್ಥಿಸುತ್ತಿದ್ದರು! ಉದಾ: ಮೋಶೆಯ ಅಕ್ಕ ಮಿರ್‌ಯಾಮಳು ಮೋಶೆಯ ವಿರುದ್ಧ ಮಾತಾಡಿದಾಗ ದೇವರು ಆಕೆಯನ್ನು ಶಿಕ್ಷಿಸಿದರು, ಆಕೆಗೆ ಕುಷ್ಠರೋಗ ಬಂತು. ಆಗ ಮೋಶೆ ಖುಷಿ ಪಡಲಿಲ್ಲ. “ದೇವಾ, ಆಕೆಯನ್ನು ವಾಸಿಮಾಡಬೇಕೆಂದು ಬೇಡುತ್ತೇನೆ ಎಂದು ಮೊರೆಯಿಟ್ಟ”ರು. (ಅರಣ್ಯಕಾಂಡ 12:13) ಇದು ಪ್ರೀತಿಯಲ್ಲದೆ ಮತ್ತೇನು ಹೇಳಿ. . .

ನಾವು ಕಲಿಯುವ ಪಾಠ? ಮೋಶೆ ತರ ನಾವು ಕೂಡ ದೇವರನ್ನು ಹೆಚ್ಚೆಚ್ಚು ಪ್ರೀತಿಸಬೇಕು. ಅಂಥ ಪ್ರೀತಿ ಇದ್ದರೆ ಮಾತ್ರ ನಾವು ‘ಹೃದಯದಿಂದ ದೇವರಿಗೆ ವಿಧೇಯತೆ’ ತೋರಿಸಲು ಸಾಧ್ಯ. (ರೋಮನ್ನರಿಗೆ 6:17) ಇಂಥ ವಿಧೇಯತೆ ದೇವರ ಮನಸ್ಸಿಗೆ ಸಂತೋಷ ತರುತ್ತೆ. (ಜ್ಞಾನೋಕ್ತಿ 27:11) ನಮಗೂ ಪ್ರಯೋಜನ ತರುತ್ತೆ. ಯಥಾರ್ಥ ಪ್ರೀತಿಯಿಂದ ಪ್ರೇರಿತರಾಗಿ ದೇವರ ಸೇವೆಮಾಡುವಾಗ ಮಾತ್ರ ಸರಿಯಾದ ದಾರಿಯಲ್ಲಿ ಸಂತೋಷದಿಂದ ನಡೆಯಲು ಸಾಧ್ಯವಾಗುತ್ತೆ.—ಕೀರ್ತನೆ 100:2.

ನಾವು ಕೂಡ ಜನರಿಗೆ ನಿಸ್ವಾರ್ಥ ಪ್ರೀತಿ ತೋರಿಸಬೇಕು. ಆ ರೀತಿ ಪ್ರೀತಿ ಇದ್ದರೆ ಮಾತ್ರ ಬಂಧುಮಿತ್ರರು ನಮ್ಮ ಹತ್ತಿರ ಸಮಸ್ಯೆಗಳನ್ನು ಹೇಳಿಕೊಳ್ಳುವಾಗ (1) ಮನಸ್ಸು ಕೊಟ್ಟು ಕೇಳ್ತೀವಿ (2) ಅವರ ನೋವನ್ನು ಭಾವನೆಯನ್ನು ಅರ್ಥಮಾಡಿಕೊಳ್ತೀವಿ (3) ಅವರ ಬಗ್ಗೆ ಕಕ್ಕುಲಾತಿ ಇದೆ ಎನ್ನುವ ಭರವಸೆ ನೀಡ್ತೀವಿ.

ಮೋಶೆಯಂತೆ ನಾವೂ ನಮ್ಮ ಪ್ರಿಯರಿಗಾಗಿ ಪ್ರಾರ್ಥಿಸಬೇಕು. ಕೆಲವೊಮ್ಮೆ ಬಂಧುಮಿತ್ರರು ಅವರ ಸಮಸ್ಯೆಯನ್ನು ಹೇಳಿಕೊಳ್ಳುವಾಗ ನಮ್ಮಿಂದ ಸಹಾಯ ಮಾಡಲು ಆಗದೇ ಇರಬಹುದು. “ನಿಮಗೋಸ್ಕರ ನಾನು ಪ್ರಾರ್ಥಿಸಬಹುದು. ಅದನ್ನ ಬಿಟ್ಟರೆ ಬೇರೇನು ಮಾಡಕ್ಕಾಕ್ತಿಲ್ಲ” ಅಂತ ನೀವು ರೋದಿಸಬಹುದು. ಆದರೆ ಬೈಬಲ್‌ ಏನು ಹೇಳುತ್ತೆ ಗೊತ್ತಾ? “ನೀತಿವಂತನ ಅತ್ಯಾಸಕ್ತಿಯುಳ್ಳ ವಿಜ್ಞಾಪನೆಯು ಬಹು ಬಲವಾಗಿದೆ.” (ಯಾಕೋಬ 5:16, ಸತ್ಯವೇದವು) ನಮ್ಮ ಪ್ರಾರ್ಥನೆಯನ್ನು ಕೇಳಿ ಯೆಹೋವ ದೇವರು ಆ ವ್ಯಕ್ತಿಗೆ ಒಳ್ಳೇದನ್ನು ಮಾಡಬಹುದು. ಹಾಗಾದ್ರೆ ನಮ್ಮ ಪ್ರಿಯರಿಗೋಸ್ಕರ ಪ್ರಾರ್ಥಿಸುವುದಕ್ಕಿಂತ ಒಳ್ಳೇ ಕೆಲಸ ಇನ್ನೇನಿದೆ ಹೇಳಿ? *

ಮೋಶೆಯಿಂದ ನಾವು ಕಲಿಯಬೇಕಾದ ಪಾಠಗಳು ತುಂಬ ಇದೆ ಅಂತ ನಿಮಗನಿಸ್ತಿಲ್ವಾ? ಒಬ್ಬ ನರಮನುಷ್ಯ ನಂಬಿಕೆ, ನಮ್ರತೆ, ಪ್ರೀತಿಯ ವಿಷಯದಲ್ಲಿ ಅಸಾಮಾನ್ಯ ಆದರ್ಶವನ್ನಿಟ್ಟಿದ್ದಾರೆ. ಅವರು ಹಾಕಿಕೊಟ್ಟ ದಾರಿಯಲ್ಲಿ ನಾವು ನಡೆಯುವುದರಿಂದ ನಮಗೂ ಇತರರಿಗೂ ಪ್ರಯೋಜನವಾಗುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.—ರೋಮನ್ನರಿಗೆ 15:4. ▪ (w13-E 02/01)

[ಪಾದಟಿಪ್ಪಣಿ]

^ ಪ್ಯಾರ. 8 ದೇವರು ನಮ್ಮ ಪ್ರಾರ್ಥನೆಯನ್ನು ಕೇಳಬೇಕಾದರೆ ದೇವರಿಗಿಷ್ಟವಾಗುವ ರೀತಿಯಲ್ಲೇ ಪ್ರಾರ್ಥಿಸಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಅನ್ನೋ ಪುಸ್ತಕದ 17ನೇ ಅಧ್ಯಾಯ ಓದಿ. ಈ ಪುಸ್ತಕ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

[ಪುಟ 6ರಲ್ಲಿರುವ ಚಿತ್ರ]