ಕಣ್ಣಿಗೆ ಕಾಣದ ದೇವರನ್ನು ನೋಡಲು ಸಾಧ್ಯವೇ?
“ದೇವರು ಆತ್ಮಜೀವಿಯಾಗಿದ್ದಾನೆ,” ಆದ್ದರಿಂದ ಮನುಷ್ಯರು ಆತನನ್ನು ನೋಡಲು ಸಾಧ್ಯವಿಲ್ಲ. (ಯೋಹಾನ 4:24) ಆದರೆ ಕೆಲವು ಜನ ದೇವರನ್ನು ನೋಡಿದ್ದಾರೆ ಅಂತ ಬೈಬಲ್ ಹೇಳುತ್ತದೆ. (ಇಬ್ರಿಯ 11:27) ಅದು ಹೇಗೆ ಸಾಧ್ಯ? ಕಣ್ಣಿಗೆ ಕಾಣದ ದೇವರನ್ನು ನೋಡಲು ಸಾಧ್ಯನಾ?—ಕೊಲೊಸ್ಸೆ 1:15.
ನಮ್ಮನ್ನು ಹುಟ್ಟು ಕುರುಡನಿಗೆ ಹೋಲಿಸಿಕೊಳ್ಳೋಣ. ಒಬ್ಬ ಕುರುಡನಿಗೆ ಕಣ್ಣು ಕಾಣಿಸಲ್ಲ ಅಂದಮಾತ್ರಕ್ಕೆ ಈ ಲೋಕ ಹೇಗಿರುತ್ತೆ ಅಂತ ಸ್ವಲ್ಪನೂ ಗೊತ್ತಿರಲ್ವಾ? ಗೊತ್ತಿರುತ್ತೆ. ಜನರು ಹೇಗಿರುತ್ತಾರೆ, ವಸ್ತುಗಳು ಹೇಗಿರುತ್ತವೆ ಮತ್ತು ತನ್ನ ಸುತ್ತ ಯಾವೆಲ್ಲ ಕೆಲಸಗಳು ನಡೆಯುತ್ತಿವೆ ಅಂತ ಬೇರೆ ಬೇರೆ ವಿಧಗಳಿಂದ ಗ್ರಹಿಸುತ್ತಾನೆ. ಅಂಧನೊಬ್ಬನು ಹೀಗೆ ಹೇಳುತ್ತಾನೆ, “ದೃಷ್ಟಿ ಕಣ್ಣುಗಳಿಗೆ ಸಂಬಂಧಿಸಿದ್ದಲ್ಲ, ಮನಸ್ಸಿಗೆ ಸಂಬಂಧಿಸಿದ್ದು.”
ಅದೇ ರೀತಿ ನೀವು ಅಕ್ಷರಶಃ ಕಣ್ಣುಗಳಿಂದ ದೇವರನ್ನು ನೋಡಲು ಆಗದಿದ್ದರೂ ‘ಹೃದಯದ ಕಣ್ಣುಗಳಿಂದ’ ಆತನನ್ನು ನೋಡಬಹುದು. (ಎಫೆಸ 1:18) ಅದು ಹೇಗೆಂದು ಮುಂದಿನ ಮೂರು ವಿಧಗಳು ತಿಳಿಸುತ್ತವೆ.
‘ಸೃಷ್ಟಿಯಿಂದ ಸ್ಪಷ್ಟವಾಗಿ ಕಂಡುಬರುತ್ತದೆ’
ಕುರುಡರಿಗೆ ಕಿವಿ ಮತ್ತು ಚರ್ಮದಂತಹ ಕೆಲವು ಇಂದ್ರಿಯಗಳು ಹೆಚ್ಚು ಚುರುಕಾಗಿ ಕೆಲಸ ಮಾಡುವುದರಿಂದ, ಕಣ್ಣಿಗೆ ಕಾಣಿಸದೇ ಇರುವವುಗಳನ್ನು ಸಹ ಗ್ರಹಿಸಬಲ್ಲರು. ಅದೇ ರೀತಿ, ನಿಮ್ಮ ಜ್ಞಾನೇಂದ್ರಿಯಗಳ ಸಹಾಯದಿಂದ ಸುತ್ತಲಿನ ಜಗತ್ತನ್ನು ಗಮನಿಸುವಾಗ ಇದನ್ನೆಲ್ಲ ಸೃಷ್ಟಿಸಿದ ದೇವರನ್ನು ನೋಡಬಲ್ಲಿರಿ. “ಆತನ ಅದೃಶ್ಯ ಗುಣಗಳು ಲೋಕವು ಸೃಷ್ಟಿಯಾದಂದಿನಿಂದ ಸ್ಪಷ್ಟವಾಗಿ ಕಂಡುಬರುತ್ತವೆ. ಏಕೆಂದರೆ ಸೃಷ್ಟಿಮಾಡಲ್ಪಟ್ಟವುಗಳಿಂದ ಆತನ ಅನಂತ ಶಕ್ತಿ ಮತ್ತು ದೇವತ್ವವನ್ನು ಸಹ ಗ್ರಹಿಸಲಾಗುತ್ತದೆ.”—ರೋಮನ್ನರಿಗೆ 1:20.
ಉದಾಹರಣೆಗೆ, ಭೂಮಿಯ ಬಗ್ಗೆ ಯೋಚಿಸಿ. ನಾವು ಕೇವಲ ಜೀವಿಸಬೇಕು ಅಂತಲ್ಲ, ಜೀವನವನ್ನು ಆನಂದಿಸಬೇಕು ಅಂತ ಈ ಭೂಮಿಯನ್ನು ಸೃಷ್ಟಿಸಲಾಗಿದೆ. ತಂಗಾಳಿ ನಮ್ಮನ್ನು ತಾಕಿದಾಗ, ಹಿತಕರ ಬಿಸಿಲಿಗೆ ಮೈಯೊಡ್ಡಿದಾಗ, ರಸವತ್ತಾದ ಹಣ್ಣನ್ನು ಸವಿದಾಗ ಅಥವಾ ಹಕ್ಕಿಗಳ ಚಿಲಿಪಿಲಿ ಕೇಳಿದಾಗೆಲ್ಲಾ ನಾವು ಪುಳಕಿತರಾಗುತ್ತೇವೆ. ಈ ಎಲ್ಲ ಉಡುಗೊರೆಗಳು ನಮ್ಮ ಸೃಷ್ಟಿಕರ್ತನಿಗೆ ನಮ್ಮ ಕಡೆ ಇರುವ ಕಾಳಜಿಯನ್ನು, ಬೆಲೆಕಟ್ಟಲಾಗದ ಪ್ರೀತಿಯನ್ನು ಮತ್ತು ಉದಾರತೆಯನ್ನು ತೋರಿಸುತ್ತದಲ್ಲವೇ?
ವಿಶ್ವವನ್ನು ಗಮನಿಸುವುದರಿಂದ ದೇವರ ಬಗ್ಗೆ ಏನನ್ನು ಕಲಿಯಬಹುದು? ಆಕಾಶ ಆತನ ಶಕ್ತಿಯನ್ನು ತಿಳಿಸುತ್ತದೆ. ವಿಶ್ವ ಹಿಂದೆಂದಿಗಿಂತಲೂ ಹೆಚ್ಚಿನ ವೇಗದಲ್ಲಿ ವಿಸ್ತಾರವಾಗುತ್ತಿದೆ! ಎಂದು ಇತ್ತೀಚಿನ ವೈಜ್ಞಾನಿಕ ಸಂಶೋಧನೆಗಳು ಸ್ಪಷ್ಟಪಡಿಸುತ್ತವೆ. ರಾತ್ರಿಯಲ್ಲಿ ಆಕಾಶವನ್ನು ನೋಡುತ್ತಾ ಹೀಗೆ ಕೇಳಿಕೊಳ್ಳಿ: ಇಷ್ಟು ವೇಗವಾಗಿ ವಿಶ್ವವನ್ನು ವಿಸ್ತರಿಸುತ್ತಿರುವ ಆ ಶಕ್ತಿಯ ಮೂಲ ಯಾವುದು? ಸೃಷ್ಟಿಕರ್ತನು ‘ಅತಿ ಬಲಾಢ್ಯನು’ ಎಂದು ಬೈಬಲ್ ತಿಳಿಸುತ್ತದೆ. (ಯೆಶಾಯ 40:26) ದೇವರು “ಸರ್ವಶಕ್ತ” ‘ಪರಾಕ್ರಮಶಾಲಿ’ ಎಂದು ಆತನ ಸೃಷ್ಟಿ ತೋರಿಸುತ್ತದೆ.—ಯೋಬ 37:23.
“ಆತನ ಕುರಿತು ವಿವರಿಸಿದ್ದಾನೆ”
ಇಬ್ಬರು ಅಂಧ ಮಕ್ಕಳ ತಾಯಿ ಹೇಳಿದ್ದು: “ಮಾತೇ ಅವರ ಕಲಿಕೆಯ ಸಾಧನ, ನಿಮಗೆ ಕಾಣುವ ಕೇಳುವ ಎಲ್ಲವನ್ನೂ ಅವರಿಗೆ ವಿವರಿಸುತ್ತಾ ಹೋಗಿ. ನೀವೇ ಅವರ ಕಣ್ಣುಗಳಾಗುತ್ತೀರಿ.” ಒಂದು ರೀತಿಯಲ್ಲಿ ನಾವು ಸಹ ಕುರುಡರೇ. ಏಕೆಂದರೆ ‘ಯಾವ ಮನುಷ್ಯನೂ ಎಂದಿಗೂ ದೇವರನ್ನು ಕಂಡಿಲ್ಲ, ಆದರೆ ದೇವರೊಂದಿಗೆ ಆಪ್ತ ಸ್ಥಾನದಲ್ಲಿರುವ’ ಆತನ ಮಗನಾದ ಯೇಸು “ಆತನ ಕುರಿತು ವಿವರಿಸಿದ್ದಾನೆ.” (ಯೋಹಾನ 1:18) ಹೀಗೆ ದೇವರ ಪ್ರಥಮ ಸೃಷ್ಟಿಯೂ, ಏಕೈಕಜಾತ ಪುತ್ರನೂ ಆದ ಯೇಸು ನಮಗೆ ಕಣ್ಣಿನಂತಿದ್ದು, ಪರಲೋಕದ ವಿಷಯಗಳನ್ನು ನೋಡಲು ಸಹಾಯ ಮಾಡಿದ್ದಾನೆ. ದೇವರ ಬಗ್ಗೆ ಯೇಸುವಿಗಿಂತ ಹೆಚ್ಚು ಬೇರೆ ಯಾರಿಗೂ ತಿಳಿದಿಲ್ಲ.
ತನ್ನ ತಂದೆಯೊಂದಿಗೆ ಯುಗಗಳನ್ನೇ ಕಳೆದ ಯೇಸು ಆತನ ಬಗ್ಗೆ ಹೇಳಿದ ಕೆಲವು ವಿಷಯಗಳನ್ನು ಗಮನಿಸಿ:
-
ದೇವರು ಕಾರ್ಯನಿರತನು. “ನನ್ನ ತಂದೆಯು ಇಂದಿನ ವರೆಗೂ ಕೆಲಸಮಾಡುತ್ತಾ ಇದ್ದಾನೆ.”—ಯೋಹಾನ 5:17.
-
ದೇವರಿಗೆ ನಮ್ಮ ಅಗತ್ಯಗಳು ತಿಳಿದಿವೆ. “ನೀವು ನಿಮ್ಮ ತಂದೆಯಾದ ದೇವರನ್ನು ಕೇಳುವ ಮುಂಚೆಯೇ ನಿಮಗೆ ಯಾವುದರ ಆವಶ್ಯಕತೆ ಇದೆಯೆಂಬುದು ಆತನಿಗೆ ತಿಳಿದಿದೆ.”—ಮತ್ತಾಯ 6:8.
-
ದೇವರು ನಮಗೆ ಉದಾರವಾಗಿ ಒದಗಿಸುತ್ತಾನೆ. “ಸ್ವರ್ಗದಲ್ಲಿರುವ ನಿಮ್ಮ ತಂದೆ . . . ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ಮತ್ತಾಯ 5:45.
ತನ್ನ ಸೂರ್ಯನು ಉದಯಿಸುವಂತೆ ಮಾಡುತ್ತಾನೆ ಮತ್ತು ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆಸುರಿಸುತ್ತಾನೆ.”— -
ದೇವರು ನಮ್ಮಲ್ಲಿ ಪ್ರತಿಯೊಬ್ಬರನ್ನು ಅಮೂಲ್ಯರಾಗಿ ಕಾಣುತ್ತಾನೆ. “ಸಣ್ಣ ಮೌಲ್ಯವಿರುವ ಒಂದು ಕಾಸಿಗೆ ಎರಡು ಗುಬ್ಬಿಗಳು ಮಾರಲ್ಪಡುವುದಿಲ್ಲವೇ? ಹಾಗಿದ್ದರೂ ನಿಮ್ಮ ತಂದೆಗೆ ತಿಳಿಯದೆ ಅವುಗಳಲ್ಲಿ ಒಂದೂ ನೆಲಕ್ಕೆ ಬೀಳುವುದಿಲ್ಲ. ನಿಮ್ಮ ತಲೆಯ ಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಆದುದರಿಂದ ಭಯಪಡಬೇಡಿರಿ; ನೀವು ಅನೇಕ ಗುಬ್ಬಿಗಳಿಗಿಂತ ಹೆಚ್ಚು ಬೆಲೆಯುಳ್ಳವರು.”—ಮತ್ತಾಯ 10:29-31.
ಕಣ್ಣಿಗೆ ಕಾಣದ ದೇವರನ್ನು ಪ್ರತಿಬಿಂಬಿಸಿದವನು
ಕುರುಡರು ವಿಷಯಗಳನ್ನು ಕಣ್ಣು ಕಾಣುವವರಿಗಿಂತ ಭಿನ್ನವಾಗಿ ಅರ್ಥಮಾಡಿಕೊಳ್ಳುತ್ತಾರೆ. ಒಬ್ಬ ಕುರುಡ ವ್ಯಕ್ತಿ, ನೆರಳನ್ನು ಸೂರ್ಯನ ಬೆಳಕಿಲ್ಲದ ಕತ್ತಲೆಯ ಪ್ರದೇಶ ಎಂದಲ್ಲ, ಸೂರ್ಯನ ಬೇಗೆಯಿರದ ತಂಪಾದ ಸ್ಥಳವಾಗಿ ಊಹಿಸಬಹುದು. ಹೇಗೆ ಒಬ್ಬ ಕುರುಡನು ನೆರಳನ್ನು, ಸೂರ್ಯನ ಬೆಳಕನ್ನು ನೋಡಲು ಆಗುವುದಿಲ್ಲವೋ ಅಂತೆಯೇ ದೇವರನ್ನು ನಮ್ಮಷ್ಟಕ್ಕೆ ನಾವೇ ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಆದ್ದರಿಂದಲೇ ದೇವರು ತನ್ನ ವ್ಯಕ್ತಿತ್ವ ಮತ್ತು ಗುಣಗಳನ್ನು ಪ್ರತಿಬಿಂಬಿಸುವಂತಹ ಒಬ್ಬ ಪರಿಪೂರ್ಣ ಮನುಷ್ಯನನ್ನು ಕೊಟ್ಟನು.
ಆ ಮನುಷ್ಯನೇ ಯೇಸು. (ಫಿಲಿಪ್ಪಿ 2:7) ಯೇಸು ಕೇವಲ ತನ್ನ ತಂದೆಯ ಬಗ್ಗೆ ಮಾತಾಡಿದ್ದಷ್ಟೇ ಅಲ್ಲ, ಆತನು ಯಾವ ರೀತಿಯ ವ್ಯಕ್ತಿ ಎಂದೂ ತೋರಿಸಿದನು. ಒಮ್ಮೆ ಯೇಸುವಿನ ಶಿಷ್ಯ ಫಿಲಿಪ್ಪನು, “ಕರ್ತನೇ, ನಮಗೆ ತಂದೆಯನ್ನು ತೋರಿಸು” ಎಂದು ಕೇಳಿದನು. ಅದಕ್ಕೆ ಯೇಸು “ನನ್ನನ್ನು ನೋಡಿದವನು ನನ್ನ ತಂದೆಯನ್ನೂ ನೋಡಿದ್ದಾನೆ” ಎಂದನು. (ಯೋಹಾನ 14:8, 9) ಯೇಸುವಿನ ನಡತೆಯ ಮೂಲಕ ನಾವು ದೇವರ ಬಗ್ಗೆ ಏನನ್ನು ತಿಳಿದುಕೊಳ್ಳಬಹುದು?
ಯೇಸು ದೀನನೂ ಪ್ರೀತಿಭರಿತನೂ ಸ್ನೇಹಪರನೂ ಆಗಿದ್ದನು. (ಮತ್ತಾಯ 11:28-30) ಆತನ ಈ ಮನಮೋಹಕ ವ್ಯಕ್ತಿತ್ವ ಜನರನ್ನು ಆತನೆಡೆಗೆ ಆಕರ್ಷಿಸುತ್ತಿತ್ತು. ಆತನು ಇತರರ ದುಃಖದಲ್ಲಿ ದುಃಖಿಸಿದನು, ಅವರ ಸಂತೋಷದಲ್ಲಿ ಹರ್ಷಿಸಿದನು. (ಲೂಕ 10:17, 21; ಯೋಹಾನ 11:32-35) ಯೇಸುವಿನ ವೃತ್ತಾಂತವನ್ನು ಓದುವಾಗ ಅದರಲ್ಲಿ ತಲ್ಲೀನರಾಗಿ ಮತ್ತು ಅಲ್ಲಿನ ಸನ್ನಿವೇಶಗಳನ್ನು ಚಿತ್ರಿಸಿಕೊಳ್ಳಿ. ಯೇಸು ಜನರೊಂದಿಗೆ ನಡೆದುಕೊಂಡ ರೀತಿಯನ್ನು ನೀವು ಧ್ಯಾನಿಸುವಾಗ ದೇವರ ಅಮೋಘ ವ್ಯಕ್ತಿತ್ವವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತೀರಿ ಮತ್ತು ಆತನಿಗೆ ಹಿಂದೆಂದಿಗಿಂತಲೂ ಹೆಚ್ಚು ಸಮೀಪವಾಗುತ್ತೀರಿ.
ಕಣ್ಣಿಗೆ ಕಾಣದ ದೇವರನ್ನು ನೋಡಲು ಸಾಧ್ಯ!
ಕುರುಡರು ತಮ್ಮ ಸುತ್ತಲಿನ ಜಗತ್ತನ್ನು ಹೇಗೆ ಅರ್ಥಮಾಡಿಕೊಳ್ಳುತ್ತಾರೆ ಎಂದು ಒಬ್ಬ ಲೇಖಕಿ ಹೇಳಿದ್ದು: “ ಕುರುಡರು ಬೇರೆಬೇರೆ ಮೂಲಗಳಿಂದ (ಸ್ಪರ್ಶ, ವಾಸನೆ, ಶಬ್ದ ಇತ್ಯಾದಿ) ತಮಗೆ ಸಿಗುವ ಮಾಹಿತಿಯನ್ನು ಒಟ್ಟು ಸೇರಿಸಿ ಒಂದು ವಿಷಯವನ್ನು ಅರ್ಥಮಾಡಿಕೊಳ್ಳುತ್ತಾರೆ.” ನೀವು ಸಹ ಸುತ್ತಲಿನ ಸೃಷ್ಟಿ ನೋಡುವಾಗ, ಯೇಸು ತನ್ನ ತಂದೆಯ ಬಗ್ಗೆ ವಿವರಿಸಿದ್ದನ್ನು ಓದುವಾಗ ಮತ್ತು ತನ್ನ ತಂದೆಯ ಗುಣಗಳನ್ನು ಪ್ರತಿಬಿಂಬಿಸಿದ್ದನ್ನು ಧ್ಯಾನಿಸುವಾಗ ಯೆಹೋವನ ಸೊಗಸಾದ ಚಿತ್ರಣವೊಂದು ನಿಮ್ಮ ಕಣ್ಣ ಮುಂದೆ ಬರುತ್ತದೆ. ಹೀಗೆ ಕಣ್ಣಿಗೆ ಕಾಣದ ದೇವರನ್ನು ನೀವು ನೋಡುವಿರಿ.
ಪುರಾತನ ಕಾಲದ ಯೋಬನಿಗೆ ಅದೇ ಅನುಭವವಾಯಿತು. ಮೊದಮೊದಲು ದೇವರ ಬಗ್ಗೆ ‘ಗೊತ್ತಿಲ್ಲದೆ ಮಾತಾಡಿದನು.’ (ಯೋಬ 42:3) ಆದರೆ ಜಾಗರೂಕವಾಗಿ ದೇವರ ಅದ್ಭುತ ಸೃಷ್ಟಿಯನ್ನು ಪರಿಶೀಲಿಸಿದ ನಂತರ ಹೀಗೆ ಹೇಳಿದನು: “ಕಿವಿಯಿಂದ ನಿನ್ನ ವಿಷಯವನ್ನು ಕೇಳಿದ್ದೆನು, ಈಗಲಾದರೋ ನಿನ್ನನ್ನೇ ಕಣ್ಣಾರೆ ಕಂಡೆನು.”—ಯೋಬ 42:5.
‘ನೀವು ಯೆಹೋವನನ್ನು ಹುಡುಕುವುದಾದರೆ ಆತನು ನಿಮಗೂ ಸಿಗುವನು’
ಈ ಅನುಭವ ನಿಮಗೂ ಆಗಬಹುದು. ‘ನೀವು ಆತನನ್ನು [ಯೆಹೋವ] ಹುಡುಕುವುದಾದರೆ ಆತನು ನಿಮಗೂ ಸಿಗುವನು.’ (1 ಪೂರ್ವಕಾಲವೃತ್ತಾಂತ 28:9) ಕಣ್ಣಿಗೆ ಕಾಣದ ದೇವರನ್ನು ಹುಡುಕಿ ಕಂಡುಕೊಳ್ಳಲು ಯೆಹೋವನ ಸಾಕ್ಷಿಗಳು ನಿಮಗೆ ಸಹಾಯ ಮಾಡುತ್ತಾರೆ. (w14-E 07/01)