ಬೈಬಲ್ ಕೊಡುವ ಉತ್ತರ
ದೇವರನ್ನು ಪ್ರೀತಿಸುವಂತೆ ಮಕ್ಕಳಿಗೆ ಹೇಗೆ ಕಲಿಸಬಹುದು?
ದೇವರಿದ್ದಾನೆ, ಆತನು ಪ್ರೀತಿಸುತ್ತಾನೆ ಅನ್ನೋದಕ್ಕೆ ಆಧಾರ ಗೊತ್ತಿದ್ದರೆ ಮಾತ್ರ ನಿಮ್ಮ ಮಕ್ಕಳು ದೇವರನ್ನು ಪ್ರೀತಿಸಲು ಕಲಿಯುತ್ತಾರೆ. ಹಾಗೆ ಪ್ರೀತಿಸಬೇಕೆಂದರೆ, ಮೊದಲು ದೇವರ ಬಗ್ಗೆ ಅವರು ಚೆನ್ನಾಗಿ ತಿಳಿದುಕೊಂಡಿರಬೇಕು. (1 ಯೋಹಾನ 4:8) ಉದಾಹರಣೆಗೆ, ದೇವರು ಯಾಕೆ ಮನುಷ್ಯರನ್ನು ಸೃಷ್ಟಿಸಿದನು? ಕಷ್ಟಗಳನ್ನು ಯಾಕೆ ದೇವರು ಹಾಗೆಯೇ ಬಿಟ್ಟಿದ್ದಾನೆ? ಭವಿಷ್ಯದಲ್ಲಿ ದೇವರು ಮನುಷ್ಯರಿಗಾಗಿ ಏನು ಮಾಡಲಿದ್ದಾನೆ? ಇಂಥ ಪ್ರಶ್ನೆಗಳಿಗೆ ಅವರಿಗೆ ಉತ್ತರ ಗೊತ್ತಿರಬೇಕು.—ಫಿಲಿಪ್ಪಿ 1:9 ಓದಿ.
ದೇವರನ್ನು ಪ್ರೀತಿಸಲು ನಿಮ್ಮ ಮಕ್ಕಳಿಗೆ ಸಹಾಯ ಮಾಡಬೇಕೆಂದರೆ ಮೊದಲು ನೀವು ಆತನನ್ನು ಪ್ರೀತಿಸುತ್ತೀರಿ ಅನ್ನೋದನ್ನು ಮಕ್ಕಳಿಗೆ ತೋರಿಸಿಕೊಡಬೇಕು. ಆಗ ನಿಮ್ಮನ್ನು ನೋಡಿ ಮಕ್ಕಳು ಸಹ ಪ್ರೀತಿಸಲು ಕಲಿಯುತ್ತಾರೆ.—ಧರ್ಮೋಪದೇಶಕಾಂಡ 6:5-7; ಜ್ಞಾನೋಕ್ತಿ 22:6 ಓದಿ.
ದೇವರ ವಿಷಯಗಳನ್ನು ಮಕ್ಕಳ ಹೃದಯಕ್ಕೆ ನಾಟಿಸುವುದು ಹೇಗೆ?
ದೇವರ ವಾಕ್ಯಕ್ಕೆ ಶಕ್ತಿಯಿದೆ. (ಇಬ್ರಿಯ 4:12) ಹಾಗಾಗಿ ಮಕ್ಕಳು ಅದರಲ್ಲಿರುವ ಮೂಲಭೂತ ವಿಷಯಗಳ ಬಗ್ಗೆ ಕಲಿಯಲು ನೆರವಾಗಿ. ದೇವರ ವಾಕ್ಯವನ್ನು ಜನರ ಹೃದಯದಲ್ಲಿ ನಾಟಿಸಲು ಯೇಸು ಪ್ರಶ್ನೆಗಳನ್ನು ಕೇಳಿದನು, ಅವರು ಹೇಳುವಾಗ ಕಿವಿಗೊಟ್ಟನು ಮತ್ತು ಬೈಬಲ್ ವಚನಗಳನ್ನು ವಿವರಿಸಿದನು. ನಿಮ್ಮ ಮಕ್ಕಳ ಹೃದಯದಲ್ಲೂ ದೇವರ ವಾಕ್ಯವನ್ನು ನಾಟಿಸಬೇಕೆಂದರೆ ಯೇಸು ಮಾಡಿದಂತೆಯೇ ಮಾಡಿ.—ಲೂಕ 24:15-19, 27, 32 ಓದಿ.
ದೇವರು ಜನರೊಂದಿಗೆ ಹೇಗೆ ನಡೆದುಕೊಳ್ಳುತ್ತಿದ್ದನು ಎಂದು ತಿಳಿಸುವ ಘಟನೆಗಳು ಬೈಬಲಿನಲ್ಲಿವೆ. ಇವುಗಳ ಬಗ್ಗೆ ಮಕ್ಕಳು ತಿಳಿದುಕೊಂಡರೆ ಅವರು ದೇವರನ್ನು ಪ್ರೀತಿಸಲು ಕಲಿಯುತ್ತಾರೆ. ಈ ಘಟನೆಗಳ ಬಗ್ಗೆ ತಿಳಿಸುವ ಸಾಹಿತ್ಯಗಳು www.mr1310.com ವೆಬ್‌ಸೈಟ್‍ನಲ್ಲಿ ಲಭ್ಯ.—2 ತಿಮೊಥೆಯ 3:16 ಓದಿ. (w14-E 12/01)