ಅಧ್ಯಾಯ 3
ಮಹಾ ಜಲಪ್ರಳಯ
ದೇವರು ನೋಹ ಮತ್ತು ಅವನ ಕುಟುಂಬವನ್ನು ಕಾಪಾಡಿ ಸಕಲ ದುಷ್ಟಜನರನ್ನು ನಾಶಮಾಡುತ್ತಾನೆ
ಭೂಮಿಯಲ್ಲಿ ಜನರು ಹೆಚ್ಚಾದಂತೆ, ಪಾಪ ಮತ್ತು ಕೆಟ್ಟತನ ಹೆಚ್ಚಾಗುತ್ತಾ ಬಂತು. ಆ ಸಮಯದಲ್ಲಿದ್ದ ಒಬ್ಬನೇ ಒಬ್ಬ ಪ್ರವಾದಿಯೆಂದರೆ ಹನೋಕ. ದೇವಭಯವಿಲ್ಲದವರನ್ನು ದೇವರು ಒಂದು ದಿನ ನಾಶ ಮಾಡುವನೆಂದು ಅವನು ಜನರಿಗೆ ಎಚ್ಚರಿಕೆ ಕೊಡುತ್ತಾ ಇದ್ದನು. ಆದರೂ ಕೆಟ್ಟತನ ಕಡಿಮೆಯಾಗಲಿಲ್ಲ. ಬದಲಿಗೆ ಇನ್ನಷ್ಟು ಹೆಚ್ಚಾಯಿತು. ಕೆಲವು ದೇವದೂತರು ಸಹ ಯೆಹೋವ ದೇವರ ವಿರುದ್ಧ ದಂಗೆಯೆದ್ದರು. ಅವರು ಸ್ವರ್ಗದಲ್ಲಿನ ತಮ್ಮ ವಾಸಸ್ಥಾನವನ್ನು ಬಿಟ್ಟು ಭೂಮಿಗೆ ಬಂದರು. ಭೂಮಿಯಲ್ಲಿ ಅವರು ಮನುಷ್ಯ ಶರೀರವನ್ನು ಪಡೆದುಕೊಂಡು ಅತ್ಯಾಸೆಯಿಂದ ಸ್ತ್ರೀಯರನ್ನು ಹೆಂಡತಿಯರನ್ನಾಗಿ ಮಾಡಿಕೊಂಡರು. ಸಹಜವಲ್ಲದ ಈ ಸಂಬಂಧದಿಂದಾಗಿ ಮಹಾಶರೀರಿಗಳು ಹುಟ್ಟಿದರು. ನೆಫೀಲಿಯರೆಂದು ಕರೆಯಲ್ಪಡುವ ಈ ಮಹಾಶರೀರಿಗಳು ತುಂಬಾ ಕ್ರೂರಿಗಳಾಗಿದ್ದರು. ಅವರಿಂದಾಗಿ ಲೋಕದಲ್ಲಿ ಹಿಂಸೆ, ಕ್ರೂರತನ ಉಲ್ಬಣಗೊಂಡು ಕೊಲೆ, ರಕ್ತಪಾತ ಹೆಚ್ಚಾಯಿತು. ಭೂಮಿಯ ಮೇಲೆ ತಾನು ಉಂಟುಮಾಡಿದ ಸೃಷ್ಟಿಗಳು ಈ ರೀತಿ ಹಾಳಾಗುವುದನ್ನು ಕಂಡು ದೇವರು ಹೃದಯದಲ್ಲಿ ತುಂಬ ನೊಂದುಕೊಂಡನು.
ಕಾಲಾನಂತರ ಹನೋಕನು ಮೃತಪಟ್ಟನು. ಅವನ ನಂತರ ಆ ಕೆಟ್ಟ ಜನರ ಮಧ್ಯೆ ಇದ್ದ ಒಬ್ಬ ಒಳ್ಳೆಯ ವ್ಯಕ್ತಿಯೇ ನೋಹ. ನೋಹ ಮತ್ತು ಅವನ ಕುಟುಂಬವು ದೇವರಿಗೆ ಮೆಚ್ಚಿಕೆಯಾಗಿರುವುದನ್ನೇ ಮಾಡಲು ಶ್ರಮಿಸುತ್ತಿದ್ದರು. ದೇವರು ದುಷ್ಟ ಜನರನ್ನು ನಾಶಮಾಡಲು ತೀರ್ಮಾನಿಸಿದಾಗ ಈ ನೋಹನನ್ನು ಮತ್ತು ಪ್ರಾಣಿಪಕ್ಷಿಗಳನ್ನು ಉಳಿಸಲು ಇಷ್ಟಪಟ್ಟನು. ಆದುದರಿಂದ, ದೇವರು ನೋಹನಿಗೆ ಆಯತಾಕಾರದ ಪೆಟ್ಟಿಗೆಯಂತಿರುವ ದೊಡ್ಡ ಹಡಗು ಅಥವಾ ನಾವೆಯೊಂದನ್ನು ಕಟ್ಟಲು ಹೇಳಿದನು. ನೋಹ, ಅವನ ಕುಟುಂಬ ಮತ್ತು ಸಕಲ ಜಾತಿಯ ಪ್ರಾಣಿಪಕ್ಷಿಗಳು ಆ ನಾವೆಯೊಳಗೆ ಸೇರಿ ಮುಂದೆ ಬರಲಿದ್ದ ಜಲಪ್ರಳಯವನ್ನು ಪಾರಾಗಲಿದ್ದರು. ದೇವರು ಹೇಳಿದಂತೆಯೇ ನೋಹನು ಮಾಡಿದನು. ಆ ನಾವೆಯನ್ನು ಕಟ್ಟುತ್ತಿದ್ದ ಸಮಯದಲ್ಲಿ ನೋಹನು ಜನರಿಗೆ ‘ನೀತಿಯನ್ನು ಸಾರುವವನಾಗಿದ್ದನು.’ (2 ಪೇತ್ರ 2:5) ಅವನು ಮುಂದೆ ಬರಲಿದ್ದ ಪ್ರಳಯದ ಕುರಿತು ಜನರನ್ನು ಎಚ್ಚರಿಸಿದನು. ಆದರೆ, ಜನರು ಕಿವಿಗೊಡುವ ಗೊಡವೆಗೇ ಹೋಗಲಿಲ್ಲ. ದೇವರು ಜನರನ್ನು ನಾಶಮಾಡುವ ಸಮಯ ಬಂದೇ ಬಿಟ್ಟಿತು. ನೋಹ ಮತ್ತು ಅವನ ಕುಟುಂಬ ಪ್ರಾಣಿಪಕ್ಷಿಗಳೊಂದಿಗೆ ನಾವೆಯೊಳಗೆ ಸೇರಿದರು. ದೇವರು ನಾವೆಯ ಬಾಗಿಲನ್ನು ಮುಚ್ಚಿದನು. ಮಳೆಯು ಸುರಿಯಲು ಪ್ರಾರಂಭಿಸಿತು.
ಆಕಾಶದಿಂದ ಮಳೆ ಪ್ರವಾಹದಂತೆ 40 ದಿನ ಹಗಲಿರುಳು ಧಾರಾಕಾರವಾಗಿ ಸುರಿಯಿತು. ಇಡೀ ಭೂಮಿ ನೀರಿನಲ್ಲಿ ಮುಳುಗಿತು. ದುಷ್ಟರೆಲ್ಲರೂ ನಾಶವಾದರು. ತಿಂಗಳುಗಳು ಉರುಳಿದವು, ನೀರಿನ ಮಟ್ಟ ಕುಸಿದಂತೆ ನಾವೆಯು ಒಂದು ಬೆಟ್ಟದಲ್ಲಿ ಬಂದು ನಿಂತಿತು. ಅದರೊಳಗೆ ಇದ್ದವರು ಈಗ ಸುರಕ್ಷಿತವಾಗಿ ಹೊರಗೆ ಬಂದರು. ಅವರು ಒಂದು ವರ್ಷ ಪೂರ್ತಿ ನಾವೆಯೊಳಗೆ ಇದ್ದರು. ನೋಹನು ಯೆಹೋವನಿಗೆ ಯಜ್ಞವನ್ನು ಅರ್ಪಿಸುವ ಮೂಲಕ ತನ್ನ ಕೃತಜ್ಞತೆಯನ್ನು ಸಲ್ಲಿಸಿದನು. ದೇವರು ಸಹ ತಾನು ಇನ್ನು ಮುಂದೆ ಭೂಮಿಯ ಮೇಲಿರುವ ಸಕಲ ಜೀವರಾಶಿಗಳನ್ನು ನೀರಿನ ಮೂಲಕ ನಾಶಮಾಡುವುದಿಲ್ಲವೆಂದು ನೋಹನಿಗೆ ಮಾತು ಕೊಟ್ಟನು. ಮಾತ್ರವಲ್ಲ, ತನ್ನ ಈ ಮಾತನ್ನು ದೃಢಪಡಿಸಲು ಗುರುತನ್ನಾಗಿ ಮುಗಿಲುಬಿಲ್ಲನ್ನು ಕೊಟ್ಟನು. ಈ ಮುಗಿಲುಬಿಲ್ಲು ಯೆಹೋವನು ಕೊಟ್ಟ ಮಾತನ್ನು ಜನರ ಜ್ಞಾಪಕಕ್ಕೆ ತರುತ್ತಿತ್ತು.
ಪ್ರಳಯಾನಂತರ ದೇವರು ಜನರಿಗೆ ಕೆಲವು ಹೊಸ ನಿಯಮಗಳನ್ನು ಕೊಟ್ಟನು. ಪ್ರಾಣಿಗಳ ಮಾಂಸವನ್ನು ತಿನ್ನಬಹುದೆಂದು ಹೇಳಿದನು, ಆದರೆ ರಕ್ತವನ್ನು ತಿನ್ನಬಾರದೆಂದು ನಿಷೇಧಿಸಿದನು. ಮಾತ್ರವಲ್ಲ, ಭೂಮಿಯಲ್ಲೆಲ್ಲಾ ಚದರುವಂತೆ ನೋಹನ ಸಂತತಿಯವರಿಗೆ ಆಜ್ಞಾಪಿಸಿದನು. ದೇವರ ಆ ಆಜ್ಞೆಗೆ ಕೆಲವರು ವಿಧೇಯರಾಗಲಿಲ್ಲ. ಅವರು ನಿಮ್ರೋದನೆಂಬ ನಾಯಕನ ನೇತೃತ್ವದಲ್ಲಿ ಬಾಬೆಲ್ ಎಂಬ ಪಟ್ಟಣದಲ್ಲಿ ಒಂದು ದೊಡ್ಡ ಗೋಪುರವನ್ನು ಕಟ್ಟಲು ಪ್ರಾರಂಭಿಸಿದರು. ಬಾಬೆಲ್ ಪಟ್ಟಣಕ್ಕೆ ನಂತರ ಬ್ಯಾಬಿಲೋನ್ ಎಂಬ ಹೆಸರು ಬಂತು. ಭೂಮಿಯಲ್ಲೆಲ್ಲಾ ಚದರುವಂತೆ ದೇವರು ಕೊಟ್ಟ ಆಜ್ಞೆಯನ್ನು ಉಲ್ಲಂಘಿಸಿ ಆ ಪಟ್ಟಣದಲ್ಲೇ ವಾಸಿಸುವುದು ಜನರ ಉದ್ದೇಶವಾಗಿತ್ತು. ಆದರೆ ಗೋಪುರ ಕಟ್ಟುವ ಅವರ ಯೋಜನೆಯನ್ನು ದೇವರು ಭಂಗಪಡಿಸಿದನು. ಆತನು ಜನರಿಗಿದ್ದ ಒಂದೇ ಭಾಷೆಯನ್ನು ತಾರುಮಾರು ಮಾಡಿ ಅವರು ವಿವಿಧ ಭಾಷೆಗಳನ್ನಾಡುವಂತೆ ಮಾಡಿದನು. ಆಗ ಒಬ್ಬರು ಮಾತಾಡಿದ್ದು ಇನ್ನೊಬ್ಬರಿಗೆ ಅರ್ಥವಾಗದೇ ಹೋಯಿತು. ಅವರು ಗೋಪುರ ಕಟ್ಟುವ ಕೆಲಸವನ್ನು ನಿಲ್ಲಿಸಿ ಭೂಮಿಯಲ್ಲೆಲ್ಲಾ ಚದರಿಹೋದರು.
—ಆದಿಕಾಂಡ ಅಧ್ಯಾಯ 6ರಿಂದ 11; ಯೂದ 14, 15 ರ ಮೇಲೆ ಆಧಾರಿತವಾಗಿದೆ.