ಪ್ರವಾದನೆಯ ಒಂದು ಗ್ರಂಥ
ಪ್ರವಾದನೆಯ ಒಂದು ಗ್ರಂಥ
ಜನರಿಗೆ ಭವಿಷ್ಯತ್ತಿನಲ್ಲಿ ಆಸಕ್ತಿಯಿದೆ. ಅವರು ಅನೇಕ ವಿಷಯಗಳ ಕುರಿತು, ಹವಾಮಾನ ಮುನ್ಸೂಚನೆಯಿಂದ ಹಿಡಿದು ಆರ್ಥಿಕ ಸೂಚಕಗಳ ತನಕ ವಿಶ್ವಾಸಾರ್ಹ ಭವಿಷ್ಯನುಡಿಗಳಿಗಾಗಿ ಹುಡುಕುತ್ತಾರೆ. ಆದರೆ ಅಂತಹ ಮುನ್ಸೂಚನೆಗಳಿಗನುಸಾರ ಅವರು ವರ್ತಿಸುವಾಗ, ಅನೇಕ ವೇಳೆ ಅವರು ನಿರಾಶೆಗೊಳ್ಳುತ್ತಾರೆ. ಬೈಬಲಿನಲ್ಲಿ ಅನೇಕ ಭವಿಷ್ಯನುಡಿಗಳು ಅಥವಾ ಪ್ರವಾದನೆಗಳಿವೆ. ಅಂತಹ ಪ್ರವಾದನೆಗಳು ಎಷ್ಟು ನಿಷ್ಕೃಷ್ಟವಾಗಿವೆ? ಅವು ಮುಂದಾಗಿ ಬರೆಯಲ್ಪಟ್ಟ ಇತಿಹಾಸವೊ? ಅಥವಾ ಅವು ಪ್ರವಾದನೆಯಾಗಿ ನಟಿಸುವ ಇತಿಹಾಸವೆ?
ರೋಮನ್ ರಾಜ್ಯ ನೀತಿಜ್ಞ ಕೇಟೋ (ಸಾ.ಶ.ಪೂ. 234-149) ಹೀಗೆ ಹೇಳಿದನಂತೆ: “ಒಬ್ಬ ಕಾಲಜ್ಞಾನಿ ಇನ್ನೊಬ್ಬ ಕಾಲಜ್ಞಾನಿಯನ್ನು ನೋಡಿ ನಗದಿರುವುದಕ್ಕೆ ನಾನು ಆಶ್ಚರ್ಯಪಡುತ್ತೇನೆ.”1 ಹೌದು, ಈ ದಿನಗಳ ವರೆಗೂ ಅನೇಕರು ಭವಿಷ್ಯವಾದಿಗಳ, ಜ್ಯೋತಿಷಿಗಳ ಮತ್ತು ಇತರ ಕಾಲಜ್ಞಾನಿಗಳ ವಿಷಯದಲ್ಲಿ ಸಂದೇಹಪಡುವವರಾಗಿದ್ದಾರೆ. ಅನೇಕ ವೇಳೆ ಅವರ ಭವಿಷ್ಯನುಡಿಗಳು ಅನಿಶ್ಚಿತ ಪದಗಳಿಂದ ವ್ಯಕ್ತಪಡಿಸಲ್ಪಟ್ಟಿದ್ದು, ವ್ಯಾಪಕವಾದ ವಿಧದ ಅರ್ಥವಿವರಣೆಗೆ ಒಳಗಾಗುತ್ತವೆ.
ಆದರೆ ಬೈಬಲಿನ ಪ್ರವಾದನೆಗಳ ವಿಷಯವಾಗಿ ಏನು? ಅಲ್ಲಿ ಸಂದೇಹವಾದಕ್ಕೆ ಕಾರಣವಿದೆಯೆ? ಇಲ್ಲವೆ ಭರವಸೆಗೆ ಆಧಾರವಿದೆಯೆ?
ಬರಿಯ ಶಿಕ್ಷಿತ ಊಹೆಗಳಲ್ಲ
ಬುದ್ಧಿವಂತ ಜನರು ಭವಿಷ್ಯದ ಕುರಿತು ನಿಷ್ಕೃಷ್ಟ ಊಹಾಪೋಹಗಳನ್ನು ಮಾಡಲಿಕ್ಕಾಗಿ ಗಮನಿಸಸಾಧ್ಯವಿರುವ ಪ್ರವೃತ್ತಿಗಳನ್ನು ಉಪಯೋಗಿಸಲು ಪ್ರಯತ್ನಿಸಬಹುದಾದರೂ, ಅವರು ಎಲ್ಲ ಸಮಯಗಳಲ್ಲಿ ಯಾವಾಗಲೂ ನಿಷ್ಕೃಷ್ಟವಾಗಿ ಪರಿಣಮಿಸುವುದಿಲ್ಲ. ಭಾವೀ ಆಘಾತ (ಇಂಗ್ಲಿಷ್) ಎಂಬ ಪುಸ್ತಕವು ಗಮನಿಸುವುದು: “ಪ್ರತಿಯೊಂದು ಸಮಾಜವು ಬರಿಯ ಸಂಭವನೀಯ ಭವಿಷ್ಯತ್ತುಗಳ ಸಾಲನ್ನಲ್ಲ, ಶಕ್ಯ ಭವಿಷ್ಯತ್ತುಗಳ ಶ್ರೇಣಿಯನ್ನು ಮತ್ತು ಇಷ್ಟಕರವಾದ ಭವಿಷ್ಯತ್ತುಗಳ ಕುರಿತ ಸಂಘರ್ಷವನ್ನು ಎದುರಿಸುತ್ತದೆ.” ಅದು ಕೂಡಿಸುವುದು: “ನಿಶ್ಚಯವಾಗಿಯೂ ಯಾರೊಬ್ಬರೂ ಪೂರ್ಣಾರ್ಥದಲ್ಲಿ ಭವಿಷ್ಯವನ್ನು ‘ತಿಳಿದುಕೊಳ್ಳಲು’ ಸಾಧ್ಯವಿಲ್ಲ. ನಾವು ನಮ್ಮ ಊಹೆಗಳನ್ನು ಕ್ರಮಪಡಿಸಿಕೊಂಡು, ಅವನ್ನು ಗಾಢವಾಗಿಸಿ, ಅವುಗಳಿಗೆ ಸಂಭವನೀಯತೆಗಳನ್ನು ನೇಮಿಸಲು ಪ್ರಯತ್ನಿಸಬಲ್ಲೆವು ಅಷ್ಟೆ.”2
ಆದರೆ ಬೈಬಲ್ ಲೇಖಕರು ಭವಿಷ್ಯತ್ತಿನ ಕುರಿತ “ಊಹೆ”ಗಳಿಗೆ “ಸಂಭವನೀಯತೆಗಳನ್ನು” ಕೇವಲ “ನೇಮಿಸ”ಲೂ ಇಲ್ಲ, ಅವರ ಭವಿಷ್ಯನುಡಿಗಳು ವ್ಯಾಪಕವಾದ ಅರ್ಥವಿವರಣೆಗಳಿಗೆ ಒಳಗಾಗಸಾಧ್ಯವಿರುವ ಅಸ್ಪಷ್ಟವಾದ ಹೇಳಿಕೆಗಳಾಗಿರುವುದೂ ಇಲ್ಲ. ವ್ಯತಿರಿಕ್ತವಾಗಿ, ಅವರ ಅನೇಕ ಪ್ರವಾದನೆಗಳು ಅಸಾಧಾರಣವಾದ ಸ್ಪಷ್ಟತೆಯಿಂದ ಹೇಳಲ್ಪಟ್ಟು, ಅಸಾಮಾನ್ಯವಾಗಿ ನಿರ್ದಿಷ್ಟವಾದವುಗಳಾಗಿದ್ದವು. ಅನೇಕ ವೇಳೆ, ನಿರೀಕ್ಷಿಸಬಹುದಾಗಿರುವುದಕ್ಕಿಂತ ತೀರ ವಿರುದ್ಧವಾಗಿರುವುದನ್ನು ಅವು ಮುಂತಿಳಿಸಿದವು. ಉದಾಹರಣೆಗೆ, ಪುರಾತನ ಬಾಬೆಲ್ ನಗರದ ಕುರಿತು ಬೈಬಲು ಮುಂದಾಗಿಯೇ ಹೇಳಿರುವುದನ್ನು ತೆಗೆದುಕೊಳ್ಳಿರಿ.
‘ನಾಶನವೆಂಬ ಬರಲಿನಿಂದ ಗುಡಿಸಲ್ಪಡುವುದು’
ಪುರಾತನ ಬಾಬೆಲು “ರಾಜ್ಯಗಳಿಗೆ ಶಿರೋರತ್ನ”ವಾಗಿ ಪರಿಣಮಿಸಿತು. (ಯೆಶಾಯ 13:19) ಈ ವ್ಯಾಪಕವಾದ ನಗರವು ಪರ್ಶಿಯನ್ ಕೊಲ್ಲಿಯಿಂದ ಭೂಮಧ್ಯ ಸಮುದ್ರಕ್ಕೆ ಹೋಗುವ ಮಾರ್ಗದಲ್ಲಿ ಅನುಕೂಲವಾದ ಸ್ಥಳದಲ್ಲಿದ್ದು, ಪೂರ್ವ ಮತ್ತು ಪಶ್ಚಿಮ ದೇಶಗಳ ಮಧ್ಯೆ ನಡೆಯುತ್ತಿದ್ದ ಭೂ ಮತ್ತು ಸಮುದ್ರ ವ್ಯಾಪಾರಕ್ಕೆ ವಾಣಿಜ್ಯಸಂಬಂಧಿತ ಉಗ್ರಾಣವಾಗಿತ್ತು.
ಸಾ.ಶ.ಪೂ. ಏಳನೆಯ ಶತಮಾನದಷ್ಟಕ್ಕೆ, ಬಾಬೆಲು ಬಾಬೆಲ್ ಸಾಮ್ರಾಜ್ಯದ ಅಭೇದ್ಯವೆಂದು ಕಂಡ ರಾಜಧಾನಿಯಾಗಿತ್ತು. ಆ ನಗರವು ಯೂಫ್ರೇಟೀಸ್ ನದಿಯ ಮೇಲೆ ಸವಾರಿಮಾಡುವಂತೆ ಕುಳಿತಿದ್ದು, ನದಿಯ ನೀರನ್ನು ಅಗಲವಾದ ಮತ್ತು ಆಳವಾದ ಒಂದು ಕಂದಕ ಮತ್ತು ಕಾಲುವೆಗಳ ಜಾಲವನ್ನು ರಚಿಸಲು ಉಪಯೋಗಿಸಲಾಗಿತ್ತು. ಇದಕ್ಕೆ ಕೂಡಿಸಿ, ನಗರವು ಸುದೃಢವಾದ ಜೋಡಿಗೋಡೆಗಳ ವ್ಯವಸ್ಥೆಯಿಂದ, ಅನೇಕ ರಕ್ಷಣಾದುರ್ಗಗಳಿಂದ ಆಸರೆ ಪಡೆದು ರಕ್ಷಿಸಲ್ಪಟ್ಟಿತ್ತು. ಅದರ ನಿವಾಸಿಗಳಿಗೆ ತಾವು ಸುಭದ್ರರೆಂಬ ಅನಿಸಿಕೆಯಾದುದರಲ್ಲಿ ಆಶ್ಚರ್ಯವಿಲ್ಲ.
ಆದರೂ, ಬಾಬೆಲು ಅದರ ಮಹಿಮೆಯ ಪರಮಾವಧಿಗೆ ಏರುವ ಮೊದಲು, ಸಾ.ಶ.ಪೂ. ಎಂಟನೆಯ ಶತಮಾನದಲ್ಲಿ, ಪ್ರವಾದಿಯಾದ ಯೆಶಾಯನು, ಬಾಬೆಲು ‘ನಾಶನವೆಂಬ ಬರಲಿನಿಂದ ಗುಡಿಸಲ್ಪಡುವುದು’ ಎಂದು ಮುಂತಿಳಿಸಿದನು. (ಯೆಶಾಯ 13:19; 14:22, 23) ಬಾಬೆಲು ಪತನಗೊಳ್ಳುವ ಸರಿಯಾದ ರೀತಿಯನ್ನೂ ಯೆಶಾಯನು ವರ್ಣಿಸಿದನು. ಆಕ್ರಮಣಕಾರರು ಅದರ ಕಂದಕಸದೃಶ ರಕ್ಷಣಾಸಾಧನದ ಮೂಲವಾದ ನದಿಗಳನ್ನು ‘ಒಣಗಿಸಿ’ ನಗರವನ್ನು ಭೇದ್ಯವಾಗಿಸುವರು. ಯೆಶಾಯನು ಅದರ ವಿಜೇತನ ಹೆಸರನ್ನೂ ಒದಗಿಸಿದನು. “ಯಾವನ ಮುಂದೆ ದ್ವಾರಗಳು ತೆರೆಯಲ್ಪಟ್ಟು ಯಾವ ಬಾಗಿಲುಗಳೂ ಮುಚ್ಚಲ್ಪಡುವುದಿಲ್ಲವೊ” ಆ ಮಹಾ ಪರ್ಷಿಯನ್ ಅರಸನಾದ “ಕೋರೇಷ”ನೇ ಅವನು.—ಯೆಶಾಯ 44:27–45:2, ದ ನ್ಯೂ ಇಂಗ್ಲಿಷ್ ಬೈಬಲ್.
ಇವು ಅನುಮಾನವಿಲ್ಲದ ಭವಿಷ್ಯನುಡಿಗಳು. ಆದರೆ ಅವು ನಿಜವಾಗಿ ಪರಿಣಮಿಸಿದವೊ? ಇತಿಹಾಸವು ಉತ್ತರಕೊಡುತ್ತದೆ.
‘ಕದನವಿಲ್ಲದೆ’
ಯೆಶಾಯನು ತನ್ನ ಪ್ರವಾದನೆಯನ್ನು ದಾಖಲಿಸಿ ಎರಡು ಶತಮಾನಗಳು ಕಳೆದ ಬಳಿಕ, ಸಾ.ಶ.ಪೂ. 539ರ ಅಕ್ಟೋಬರ್ 5ರ ರಾತ್ರಿಯಲ್ಲಿ, ಮಹಾ ಕೋರೇಷನ ಅಧಿಕಾರದ ಕೆಳಗಿದ್ದ ಮೇದ್ಯಪಾರಸಿಯ ಸೈನ್ಯಗಳು ಬಾಬೆಲಿನ ಸಮೀಪ ಪಾಳೆಯಹಾಕಿದ್ದವು. ಆದರೆ ಬಾಬೆಲಿನವರು ದೃಢಭರವಸೆಯಿಂದಿದ್ದರು. ಗ್ರೀಕ್ ಇತಿಹಾಸಕಾರ ಹಿರಾಡಟಸ್ (ಸಾ.ಶ.ಪೂ. ಐದನೆಯ ಶತಮಾನ) ಎಂಬವನಿಗನುಸಾರ, ಅನೇಕ ವರ್ಷಗಳಿಗೆ ಬೇಕಾಗಿದ್ದ ಆಹಾರ ಸರಬರಾಯಿಯನ್ನು ಅವರು ಶೇಖರಿಸಿದ್ದರು.3 ಅವರನ್ನು ಕಾಪಾಡಲು ಯೂಫ್ರೆಟೀಸ್ ನದಿಯೂ ಬಾಬೆಲಿನ ಬಲಾಢ್ಯ ಗೋಡೆಗಳೂ ಇದ್ದವು. ಆದರೂ, ನ್ಯಾಬನೈಡಸ್ ವೃತ್ತಾಂತಕ್ಕನುಸಾರ, ಅದೇ ರಾತ್ರಿ, “ಕೋರೇಷನ ಸೈನ್ಯಗಳು ಕದನವಿಲ್ಲದೆ ಬಾಬೆಲನ್ನು ಪ್ರವೇಶಿಸಿದವು.”4 ಅದು ಹೇಗೆ ಸಾಧ್ಯವಾಯಿತು?
ನಗರದೊಳಗೆ ಜನರು “ಒಂದು ಉತ್ಸವದಲ್ಲಿ ಕುಣಿಯುತ್ತ, ಮಜಾ ಮಾಡುತ್ತ ಇದ್ದರು” ಎಂದು ಹಿರಾಡಟಸ್ ವಿವರಿಸುತ್ತಾನೆ.5 ಆದರೆ ಹೊರಗಡೆ, ಕೋರೇಷನು ಯೂಫ್ರೆಟೀಸ್ ನದಿಯ ನೀರನ್ನು ಬೇರೆ ಕಡೆಗೆ ತಿರುಗಿಸಿದ್ದನು. ನೀರಿನ ಮಟ್ಟವು ಇಳಿದಂತೆ, ಅವನ ಸೈನ್ಯವು ನದೀತಳದಲ್ಲಿ ತೊಡೆಯ ವರೆಗಿನ ನೀರಿನಲ್ಲಿ ಸದ್ದುಮಾಡುತ್ತ ನಡೆದುಹೋಯಿತು. ಅವರು ಆ ಎತ್ತರದ ಗೋಡೆಗಳನ್ನು ದಾಟಿಹೋಗಿ, ಹಿರಾಡಟಸನು ಯಾವುವನ್ನು “ನದಿಯ ಮೇಲೆ ತೆರೆದ ಬಾಗಿಲುಗಳು”—ಅಲಕ್ಷ್ಯಭಾವದಿಂದ ತೆರೆದಿಡಲ್ಪಟ್ಟಿದ್ದ ದ್ವಾರಗಳು—ಎಂದು ಕರೆದನೊ ಅದರ ಮೂಲಕ ನಗರವನ್ನು ಪ್ರವೇಶಿಸಿದರು.6 (ಹೋಲಿಸಿ ದಾನಿಯೇಲ 5:1-4; ಯೆರೆಮೀಯ 50:24; 51:31, 32.) ಸೆನಫನ್ (ಸಾ.ಶ.ಪೂ. ಸುಮಾರು 431-ಸುಮಾರು 352) ಎಂಬವನನ್ನು ಒಳಗೊಂಡಿರುವ ಇತರ ಇತಿಹಾಸಕಾರರು ಹಾಗೂ ಪ್ರಾಕ್ತನಶಾಸ್ತ್ರಜ್ಞರು ಕಂಡುಹಿಡಿದ ಬೆಣೆಲಿಪಿ ಫಲಕಗಳು, ಬಾಬೆಲು ಕೋರೇಷನೆದುರು ಥಟ್ಟನೆ ಪತನಗೊಂಡದ್ದನ್ನು ದೃಢೀಕರಿಸುತ್ತವೆ.7
ಬಾಬೆಲಿನ ಕುರಿತ ಯೆಶಾಯನ ಪ್ರವಾದನೆಯು ಹೀಗೆ ನೆರವೇರಿತು. ಅಥವಾ ಇಲ್ಲವೊ? ಇದು ಭವಿಷ್ಯನುಡಿಯಾಗಿರದೆ, ವಾಸ್ತವವಾಗಿ ಬಾಬೆಲ್ ಪತನಗೊಂಡ ಮೇಲೆ ಬರೆದದ್ದಾಗಿರಸಾಧ್ಯವಿದೆಯೊ? ನಿಜವಾಗಿಯೂ, ಇತರ ಬೈಬಲ್ ಪ್ರವಾದನೆಗಳ ಸಂಬಂಧದಲ್ಲಿಯೂ ಇದನ್ನೇ ಕೇಳಸಾಧ್ಯವಿದೆ.
ಇತಿಹಾಸವು ಪ್ರವಾದನೆಯಂತೆ ನಟಿಸಿತೊ?
ಬೈಬಲ್ ಪ್ರವಾದಿಗಳು—ಯೆಶಾಯನನ್ನೂ ಸೇರಿಸಿ—ಇತಿಹಾಸವನ್ನು ಪ್ರವಾದನೆಯಾಗಿ ತೋರುವಂತೆ ಬರೆದರೆಂದಾದರೆ, ಅವರು ಚತುರ ವಂಚಕರೇ ಹೊರತು ಇನ್ನಾರೂ ಅಲ್ಲ. ಆದರೆ ಅವರ ಇಂತಹ ಕೃತ್ರಿಮ ಕೆಲಸದ ಹೇತು ಏನಾಗಿದ್ದೀತು? ತಾವು ಲಂಚಕ್ಕೆ ಬಲಿಬೀಳುವುದಿಲ್ಲವೆಂದು ಸತ್ಯಪ್ರವಾದಿಗಳು ಸಿದ್ಧಮನಸ್ಸಿನಿಂದ ತಿಳಿಯಪಡಿಸಿದ್ದರು. (1 ಸಮುವೇಲ 12:3; ದಾನಿಯೇಲ 5:17) ಮತ್ತು ಬೈಬಲ್ ಲೇಖಕರು (ಇವರಲ್ಲಿ ಅನೇಕರು ಪ್ರವಾದಿಗಳಾಗಿದ್ದರು) ಭರವಸಾರ್ಹ ಪುರುಷರೆಂಬುದಕ್ಕೆ ಮತ್ತು ತಮ್ಮ ಸ್ವಂತ ನಾಚಿಕೆಗೊಳಪಡಿಸುವ ತಪ್ಪುಗಳನ್ನೂ ತಿಳಿಯಪಡಿಸಲು ಸಿದ್ಧರಾಗಿದ್ದವರೆಂಬುದಕ್ಕೆ ಆಸಕ್ತಿಯನ್ನು ಕೆರಳಿಸುವಂತಹ ಸಾಕ್ಷ್ಯವನ್ನು ನಾವೀಗಾಗಲೆ ಪರಿಗಣಿಸಿದ್ದೇವೆ. ಈ ವಿಧದ ಪುರುಷರು, ಇತಿಹಾಸವನ್ನು ಪ್ರವಾದನೆಯಾಗಿ ವೇಷಾಂತರಗೊಳಿಸಿ ವಿಸ್ತಾರರೂಪದ ವಂಚನೆಗಳನ್ನು ನಡೆಸುವುದು ಅಸಂಭವನೀಯವಾಗಿ ತೋರುತ್ತದೆ.
ಪರಿಗಣಿಸಲು ಇನ್ನಾವುದೋ ವಿಷಯವಿದೆ. ಅನೇಕ ಬೈಬಲ್ ಪ್ರವಾದನೆಗಳಲ್ಲಿ, ಯಾಜಕರು ಮತ್ತು ಪ್ರಭುಗಳು ಸೇರಿದ್ದ ಪ್ರವಾದಿಯ ಸ್ವಂತ ಜನರ ಕುರಿತ ಕಟುವಾದ ಖಂಡನೆಗಳು ಸೇರಿದ್ದವು. ದೃಷ್ಟಾಂತಕ್ಕೆ, ಯೆಶಾಯನು ತನ್ನ ದಿನಗಳ ಇಸ್ರಾಯೇಲ್ಯರ—ಮುಖಂಡರ ಹಾಗೂ ಜನರ—ಶೋಚನೀಯವಾದ ನೈತಿಕ ಸ್ಥಿತಿಯನ್ನು ನಿಂದಿಸಿದನು. (ಯೆಶಾಯ 1:2-10) ಇತರ ಪ್ರವಾದಿಗಳು ಯಾಜಕರ ಪಾಪಗಳನ್ನು ಶಕ್ತಿಯುತವಾಗಿ ಹೊರಗೆಡಹಿದರು. (ಚೆಫನ್ಯ 3:4; ಮಲಾಕಿಯ 2:1-9) ಅವರು ತಮ್ಮ ಸ್ವಂತ ಜನರ ವಿರುದ್ಧ, ಭಾವಿಸಸಾಧ್ಯವಿರುವಷ್ಟು ಕಠಿನವಾದ ಖಂಡನೆಗಳು ಸೇರಿರುವ ಪ್ರವಾದನೆಗಳನ್ನು ಏಕೆ ರಚಿಸುವರು ಮತ್ತು ಅಂತಹ ಒಂದು ಮೋಸದಲ್ಲಿ ಯಾಜಕರು ಏಕೆ ಸಹಕರಿಸುವರು ಎಂದು ಭಾವಿಸುವುದು ಕಷ್ಟಕರ.
ಇದಲ್ಲದೆ, ಪ್ರವಾದಿಗಳು—ಬರಿಯ ವಂಚಕರಾಗಿರುತ್ತಿದ್ದರೆ—ಅಂತಹ ಖೋಟಾವನ್ನು ಹೇಗೆ ನೆರವೇರಿಸಸಾಧ್ಯವಿತ್ತು? ಇಸ್ರಾಯೇಲಿನಲ್ಲಿ ಸಾಕ್ಷರತೆಯನ್ನು ಪ್ರೋತ್ಸಾಹಿಸಲಾಗುತ್ತಿತ್ತು. ಚಿಕ್ಕ ಪ್ರಾಯದಿಂದಲೇ, ಮಕ್ಕಳಿಗೆ ಓದು ಬರಹವನ್ನು ಕಲಿಸಲಾಗುತ್ತಿತ್ತು. (ಧರ್ಮೋಪದೇಶಕಾಂಡ 6:6-9) ಶಾಸ್ತ್ರಗಳ ಖಾಸಗಿ ವಾಚನವನ್ನು ಪ್ರೋತ್ಸಾಹಿಸಲಾಗುತ್ತಿತ್ತು. (ಕೀರ್ತನೆ 1:2) ವಾರದ ಸಬ್ಬತ್ತಿನಲ್ಲಿ ಸಭಾಮಂದಿರಗಳಲ್ಲಿ ಶಾಸ್ತ್ರಗಳ ಬಹಿರಂಗ ವಾಚನ ನಡೆಯುತ್ತಿತ್ತು. (ಅ. ಕೃತ್ಯಗಳು 15:21) ಶಾಸ್ತ್ರದ ಸುಪರಿಚಯವಿದ್ದ ಒಂದು ಇಡೀ ಅಕ್ಷರಸ್ಥ ಜನಾಂಗವು ಅಂತಹ ಒಂದು ಮೋಸದಿಂದ ವಂಚಿಸಲ್ಪಡಸಾಧ್ಯವಿದ್ದದ್ದು ಅಸಂಭವನೀಯವಾಗಿ ಕಾಣುತ್ತದೆ.
ಅಲ್ಲದೆ, ಬಾಬೆಲಿನ ಪತನದ ಕುರಿತ ಯೆಶಾಯನ ಪ್ರವಾದನೆಯಲ್ಲಿ ಇನ್ನೂ ಹೆಚ್ಚು ವಿಷಯವಿದೆ. ಅದರ ನೆರವೇರಿಕೆಯ ಬಳಿಕ ಬರೆಯಲ್ಪಡಲು ಸಾಧ್ಯವೇ ಇಲ್ಲದ ಒಂದು ವಿವರ ಅದರಲ್ಲಿ ಸೇರಿದೆ.
“ಅದು ಎಂದಿಗೂ ನಿವಾಸಸ್ಥಳವಾಗದು”
ಬಾಬೆಲಿನ ಪತನದ ಬಳಿಕ ಅದಕ್ಕೆ ಏನಾಗಲಿತ್ತು? ಯೆಶಾಯನು ಮುಂತಿಳಿಸಿದ್ದು: “ಅದು ಎಂದಿಗೂ ನಿವಾಸಸ್ಥಳವಾಗದು, ತಲತಲಾಂತರಕ್ಕೂ ಅಲ್ಲಿ ಜನರು ಒಕ್ಕಲಿರರು; ಯಾವ ಅರಬಿಯನೂ ಗುಡಾರಹಾಕನು; ಕುರುಬರು ಮಂದೆಗಳನ್ನು ತಂಗಿಸರು.” (ಯೆಶಾಯ 13:20) ಅಷ್ಟು ಅನುಕೂಲಕರವಾದ ಸ್ಥಳದಲ್ಲಿದ್ದ ಒಂದು ನಗರವು ಖಾಯಂ ಅನಿವಾಸಿತವಾಗಿ ಪರಿಣಮಿಸುವುದೆಂದು ಮುಂತಿಳಿಸುವುದು, ಮಿತವಾಗಿ ಹೇಳುವುದಾದರೆ, ವಿಚಿತ್ರವಾಗಿ ಕಂಡುಬಂದಿದ್ದಿರಬಹುದು. ಯೆಶಾಯನ ಈ ಮಾತುಗಳು, ಹಾಳುಬಿದ್ದ ಬಾಬೆಲನ್ನು ಅವನು ನೋಡಿದ ಬಳಿಕ ಬರೆಯಲ್ಪಟ್ಟಿದ್ದಿರಸಾಧ್ಯವಿತ್ತೊ?
ಕೋರೇಷನ ವಶವಾದ ಬಳಿಕ, ನಿವಾಸಿತ ಬಾಬೆಲು—ಕನಿಷ್ಠ ರೀತಿಯದ್ದಾಗಿದ್ದರೂ—ಶತಮಾನಗಳ ವರೆಗೆ ಇರುತ್ತ ಮುಂದುವರಿಯಿತು. ಮೃತ ಸಮುದ್ರ ಸುರುಳಿಗಳಲ್ಲಿ ಸಾ.ಶ.ಪೂ. ಎರಡನೆಯ ಶತಮಾನಕ್ಕೆ ನಿರ್ದೇಶಿಸುವ, ಯೆಶಾಯನ ಪೂರ್ತಿ ಪುಸ್ತಕದ ಒಂದು ಪ್ರತಿಯಿದೆಯೆಂಬುದನ್ನು ಜ್ಞಾಪಿಸಿಕೊಳ್ಳಿರಿ. ಸಾಧಾರಣ ಆ ಸುರುಳಿಯು ನಕಲುಮಾಡಲ್ಪಡುತ್ತಿದ್ದ ಸಮಯಕ್ಕೆ ಬಾಬೆಲು ಪಾರ್ಥಿಯನರ ವಶವಾಯಿತು. ಸಾ.ಶ. ಒಂದನೆಯ ಶತಮಾನದಲ್ಲಿ, ಬಾಬೆಲಿನಲ್ಲಿ ಯೆಹೂದ್ಯರ ನೆಲಸುನಾಡೊಂದು ಅಲ್ಲಿದ್ದು, ಬೈಬಲ್ ಲೇಖಕ ಪೇತ್ರನು ಅಲ್ಲಿ ಭೇಟಿಕೊಟ್ಟನು. (1 ಪೇತ್ರ 5:13) ಆ ಸಮಯದೊಳಗೆ, ಯೆಶಾಯನ ಮೃತ ಸಮುದ್ರ ಸುರುಳಿಯು ಬಹುಮಟ್ಟಿಗೆ ಎರಡು ಶತಮಾನಗಳ ಅಸ್ತಿತ್ವದಲ್ಲಿತ್ತು. ಹೀಗೆ, ಸಾ.ಶ. ಒಂದನೆಯ ಶತಮಾನದಲ್ಲಿ, ಬಾಬೆಲು ಇನ್ನೂ ಪೂರ್ಣವಾಗಿ ನಿರ್ಜನವಾಗಿರಲಿಲ್ಲವಾದರೂ ಯೆಶಾಯನ ಪುಸ್ತಕವು ಅದಕ್ಕಿಂತ ಎಷ್ಟೋ ಮುಂಚೆಯೇ ಮುಗಿಸಲ್ಪಟ್ಟಿತ್ತು. *
ಮುಂತಿಳಿಸಲ್ಪಟ್ಟಂತೆ, ಬಾಬೆಲು ಕೊನೆಗೆ “ಹಾಳುದಿಬ್ಬ” ಆಯಿತು. (ಯೆರೆಮೀಯ 51:37) ಹೀಬ್ರು ವಿದ್ವಾಂಸನಾದ ಜೆರೋಮ್ (ಸಾ.ಶ. ನಾಲ್ಕನೆಯ ಶತಮಾನ) ಎಂಬವನಿಗನುಸಾರ, ಅವನ ದಿನಗಳಲ್ಲಿ ಬಾಬೆಲು “ಪ್ರತಿಯೊಂದು ಜಾತಿಯ ಪ್ರಾಣಿ” ಅಲೆದಾಡುತ್ತಿದ್ದ ಬೇಟೆಯಾಡುವ ಸ್ಥಳವಾಗಿತ್ತು.9 ಬಾಬೆಲ್ ಈ ದಿನದ ವರೆಗೂ ನಿರ್ಜನವಾಗಿ ಉಳಿದಿದೆ.
ಬಾಬೆಲು ನಿರ್ಜನವಾಗುವುದನ್ನು ನೋಡುವಷ್ಟು ಕಾಲ ಯೆಶಾಯನು ಬದುಕಿ ಉಳಿಯಲಿಲ್ಲ. ಆದರೆ ಆಧುನಿಕ ಇರಾಕಿನಲ್ಲಿರುವ ಬಗ್ದಾದ್‌ನಿಂದ ಸುಮಾರು 80 ಕಿಲೊಮೀಟರ್‌ಗಳಷ್ಟು ದಕ್ಷಿಣಕ್ಕಿರುವ, ಒಮ್ಮೆ ಬಲಾಢ್ಯವಾಗಿದ್ದ ಆ ನಗರದ ಅವಶೇಷಗಳು, “ಅದು ಎಂದಿಗೂ ನಿವಾಸಸ್ಥಳವಾಗದು” ಎಂಬ ಅವನ ಮಾತುಗಳ ನೆರವೇರಿಕೆಗೆ ಮೂಕ ಸಾಕ್ಷಿಯನ್ನು ಕೊಡುತ್ತವೆ. ಪ್ರವಾಸಿ ಆಕರ್ಷಣೆಯೋಪಾದಿ ಬಾಬೆಲಿನ ಯಾವುದೇ ಪುನಸ್ಸ್ಥಾಪನೆಯು, ಭೇಟಿಕಾರರನ್ನು ಸೆಳೆಯಬಹುದಾದರೂ, ಬಾಬೆಲಿನ ‘ಜನಶೇಷವೂ ಪುತ್ರಪೌತ್ರರೂ’ ಎಂದೆಂದಿಗೂ ಇಲ್ಲದೆ ಹೋಗಿರುತ್ತಾರೆ.—ಯೆಶಾಯ 13:20; 14:22, 23.
ಹೀಗೆ, ಯಾವುದೇ ಭಾವೀ ಸಂಭವಕ್ಕೆ ಹೊಂದಿಕೊಳ್ಳಸಾಧ್ಯವಿರುವ ಅಸ್ಪಷ್ಟವಾದ ಭವಿಷ್ಯನುಡಿಗಳನ್ನು ಪ್ರವಾದಿ ಯೆಶಾಯನು ನುಡಿಯಲೂ ಇಲ್ಲ, ಪ್ರವಾದನೆಯಾಗಿ ತೋರಿಬರುವಂತೆ ಇತಿಹಾಸವನ್ನು ಅವನು ಪುನಃ ಬರೆಯಲೂ ಇಲ್ಲ. ಯೋಚಿಸಿರಿ: ಯಾವ ವಿಷಯದ ಕುರಿತು—ಬಲಿಷ್ಠ ಬಾಬೆಲು ಎಂದಿಗೂ ನಿವಾಸಿಸಲ್ಪಡದೆ ಹೋಗುವುದು—ತನಗೆ ನಿಶ್ಚಯವಾಗಿ ಯಾವುದೇ ಹಿಡಿತವಿಲ್ಲವೊ ಅದರ ಕುರಿತು ಒಬ್ಬ ಮೋಸಗಾರನು “ಪ್ರವಾದಿಸುವ” ಅಪಾಯಕ್ಕೆ ಏಕೆ ಒಳಗಾಗುವನು?
ಬಾಬೆಲಿನ ಪತನದ ಕುರಿತ ಈ ಪ್ರವಾದನೆಯು ಬೈಬಲಿನ ದೃಷ್ಟಾಂತಗಳಲ್ಲಿ ಕೇವಲ ಒಂದಾಗಿದೆ. * ಅನೇಕ ಜನರು ಬೈಬಲಿನ ಪ್ರವಾದನೆಗಳ ನೆರವೇರಿಕೆಯಲ್ಲಿ, ಬೈಬಲು ಮಾನವ ಮೂಲಕ್ಕಿಂತ ಉನ್ನತವಾದೊಂದು ಮೂಲದಿಂದ ಬಂದಿರುವುದಕ್ಕೆ ಸೂಚನೆಯನ್ನು ಕಾಣುತ್ತಾರೆ. ಪ್ರಾಯಶಃ ಅತಿ ಕಡಮೆಯೆಂದರೆ, ಈ ಪ್ರವಾದನಾ ಗ್ರಂಥವು ಪರೀಕ್ಷಾರ್ಹವಾದರೂ ಆಗಿದೆಯೆಂದು ನೀವು ಒಪ್ಪಿಕೊಳ್ಳಬಹುದು. ಒಂದು ವಿಷಯವು ನಿಶ್ಚಯ: ಆಧುನಿಕ ದಿನಗಳ ಕಾಲಜ್ಞಾನಿಗಳ ಅಸ್ಪಷ್ಟವಾದ ಅಥವಾ ಭಾವೋದ್ರೇಕಕಾರಿಯಾದ ಭವಿಷ್ಯನುಡಿಗಳಿಗೂ ಬೈಬಲಿನ ಸ್ಪಷ್ಟವಾದ, ಗಂಭೀರ ಹಾಗೂ ನಿರ್ದಿಷ್ಟ ಪ್ರವಾದನೆಗಳಿಗೂ ಬಹಳ ವ್ಯತ್ಯಾಸವಿದೆ.
[ಅಧ್ಯಯನ ಪ್ರಶ್ನೆಗಳು]
^ ಪ್ಯಾರ. 24 ಯೆಶಾಯ ಪುಸ್ತಕವನ್ನೂ ಸೇರಿಸಿ, ಹೀಬ್ರು ಶಾಸ್ತ್ರಗಳ ಪುಸ್ತಕಗಳು ಸಾ.ಶ. ಒಂದನೆಯ ಶತಮಾನಕ್ಕಿಂತ ಎಷ್ಟೋ ಮುಂಚೆಯೇ ಬರೆಯಲ್ಪಟ್ಟಿದ್ದವೆಂಬುದಕ್ಕೆ ದೃಢವಾದ ಸಾಕ್ಷ್ಯವಿದೆ. ತನ್ನ ದಿನಗಳಿಗಿಂತ ಎಷ್ಟೋ ಮೊದಲು ಹೀಬ್ರು ಶಾಸ್ತ್ರಗಳ ಅಂಗೀಕೃತ ಪುಸ್ತಕಗಳನ್ನು ನಿರ್ಧರಿಸಲಾಗಿತ್ತೆಂದು ಇತಿಹಾಸಕಾರ ಜೋಸೀಫಸನು (ಸಾ.ಶ. ಒಂದನೆಯ ಶತಮಾನ) ಸೂಚಿಸಿದನು.8 ಇದಕ್ಕೆ ಕೂಡಿಸಿ, ಹೀಬ್ರು ಶಾಸ್ತ್ರಗಳ ಒಂದು ಗ್ರೀಕ್ ಭಾಷಾಂತರವಾದ ಗ್ರೀಕ್ ಸೆಪ್ಟೂಅಜಂಟ್ ಸಾ.ಶ.ಪೂ. ಮೂರನೆಯ ಶತಮಾನದಲ್ಲಿ ಆರಂಭಗೊಂಡು, ಸಾ.ಶ.ಪೂ. ಎರಡನೆಯ ಶತಮಾನದೊಳಗೆ ಅಂತ್ಯಗೊಂಡಿತ್ತು.
^ ಪ್ಯಾರ. 28 ಬೈಬಲ್ ಪ್ರವಾದನೆಗಳ ಮತ್ತು ಅವುಗಳ ನೆರವೇರಿಕೆಗಳನ್ನು ಪ್ರಮಾಣಿಸುತ್ತಿರುವ ಐತಿಹಾಸಿಕ ನಿಜತ್ವಗಳ ಕುರಿತ ಹೆಚ್ಚಿನ ಚರ್ಚೆಗೆ, ವಾಚ್‌ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ, ಬೈಬಲು—ದೇವರ ವಾಕ್ಯವೊ, ಮನುಷ್ಯನದ್ದೊ? (ಇಂಗ್ಲಿಷ್) ಎಂಬ ಪುಸ್ತಕದ 117-33ನೆಯ ಪುಟಗಳನ್ನು ನೋಡಿರಿ.
[ಪುಟ 39 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಬೈಬಲ್ ಲೇಖಕರು ನಿಷ್ಕೃಷ್ಟ ಪ್ರವಾದಿಗಳಾಗಿದ್ದರೊ, ಚತುರ ವಂಚಕರಾಗಿದ್ದರೊ?
[ಪುಟ 30 ರಲ್ಲಿರುವ ಚಿತ್ರ]
ಪುರಾತನ ಬಾಬೆಲಿನ ಅವಶೇಷಗಳು