ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 4

ಹಣ ನಿರ್ವಹಣೆಗೆ ಹೆಜ್ಜೆಗಳು

ಹಣ ನಿರ್ವಹಣೆಗೆ ಹೆಜ್ಜೆಗಳು

“ಯೋಚನೆ ಹೇಳುವವರಿಲ್ಲದೆ ಉದ್ದೇಶಗಳು ನೆರವೇರವು, ಬಹು ಮಂದಿ ಆಲೋಚನಾಪರರಿರುವಲ್ಲಿ ಈಡೇರುವವು.”—ಜ್ಞಾನೋಕ್ತಿ 15:22

ಕುಟುಂಬದ ಅವಶ್ಯಕತೆಗಳನ್ನು ಪೂರೈಸಲು ನಮ್ಮೆಲ್ಲರಿಗೂ ಹಣ ಬೇಕೇ ಬೇಕು. (ಜ್ಞಾನೋಕ್ತಿ 30:8) ಎಷ್ಟೇ ಆದರೂ “ಧನವು . . . ಆಶ್ರಯ.” (ಪ್ರಸಂಗಿ 7:12) ಸಾಮಾನ್ಯವಾಗಿ, ಗಂಡ ಹೆಂಡತಿಗೆ ಹಣದ ಬಗ್ಗೆ ಕೂತು ಮಾತಾಡಲು ಕಷ್ಟವಾಗಬಹುದು. ಹಾಗಂತ, ಅದರ ಬಗ್ಗೆ ಮಾತಾಡದೇ ಇದ್ದರೆ ವಿವಾಹ ಬಂಧದಲ್ಲಿ ಬಿರುಕು ಉಂಟಾಗಬಹುದು. (ಎಫೆಸ 4:32) ಆದ್ದರಿಂದ ಹಣದ ವಿಷಯದಲ್ಲಿ ಪರಸ್ಪರ ನಂಬಿಕೆಯಿಡಿ ಮತ್ತು ಅದನ್ನು ಹೇಗೆ ಖರ್ಚು ಮಾಡಬೇಕೆಂದು ಇಬ್ಬರೂ ಮಾತಾಡಿ ತೀರ್ಮಾನಿಸಿ.

1 ಯೋಚಿಸಿ . . . ಯೋಜಿಸಿ

ಬೈಬಲಿನ ಹಿತವಚನ: “ನಿಮ್ಮಲ್ಲಿ ಯಾವನಾದರೂ ಒಂದು ಬುರುಜನ್ನು ಕಟ್ಟಲು ಬಯಸುವುದಾದರೆ, ಮೊದಲು ಕುಳಿತುಕೊಂಡು ಅದನ್ನು ಕಟ್ಟಿಮುಗಿಸಲು ಸಾಕಾಗುವಷ್ಟು ಹಣ ತನ್ನಲ್ಲಿದೆಯೋ ಎಂದು ಲೆಕ್ಕಮಾಡುವುದಿಲ್ಲವೆ?” (ಲೂಕ 14:28) ನೀವು ಹಣವನ್ನು ಖರ್ಚು ಮಾಡುವ ಮುಂಚೆ ಜೊತೆಯಾಗಿ ಯೋಜಿಸುವುದು ತುಂಬ ಪ್ರಾಮುಖ್ಯ. (ಆಮೋಸ 3:3) ನೀವು ಏನು ಖರೀದಿ ಮಾಡಬೇಕು ಮತ್ತು ಅದಕ್ಕಾಗಿ ನೀವು ಎಷ್ಟನ್ನು ಖರ್ಚು ಮಾಡಲು ಸಿದ್ಧರಿದ್ದೀರೆಂದು ಮೊದಲೇ ನಿರ್ಣಯಿಸಿ. (ಜ್ಞಾನೋಕ್ತಿ 31:16) ನಿಮ್ಮಲ್ಲಿ ಸಾಕಷ್ಟು ಹಣವಿದೆ ಅಂತ ಅದನ್ನು ನೀರಿನಂತೆ ಖರ್ಚು ಮಾಡಬೇಡಿ. ಹಾಸಿಗೆ ಇದ್ದಷ್ಟೇ ಕಾಲು ಚಾಚಿ, ಸಾಲ ಮಾಡಬೇಡಿ.—ಜ್ಞಾನೋಕ್ತಿ 21:5; 22:7.

ಹೀಗೆ ಮಾಡಿ:

  • ತಿಂಗಳ ಕೊನೆಯಲ್ಲಿ ನಿಮ್ಮ ಬಳಿ ಹಣ ಇನ್ನೂ ಉಳಿದಿದ್ದರೆ, ಅದನ್ನು ಏನು ಮಾಡುವುದೆಂದು ಜೊತೆಯಾಗಿ ನಿರ್ಣಯಿಸಿ

  • ನಿಮಗೆ ಹಣದ ಕೊರತೆ ಕಂಡುಬಂದರೆ ನಿಮ್ಮ ಖರ್ಚನ್ನು ಕಡಿಮೆ ಮಾಡಲು ಯೋಜಿಸಿ. ಉದಾಹರಣೆಗೆ, ಹೋಟೆಲ್‌ಗೆ ಹೋಗುವ ಬದಲು ಮನೆಯಲ್ಲೇ ಅಡುಗೆ ಮಾಡಿ

2 ಹಣದ ಬಗ್ಗೆ ಪ್ರಾಮಾಣಿಕ ನೋಟವಿರಲಿ

ಬೈಬಲಿನ ಹಿತವಚನ: ‘ಯೆಹೋವನ ದೃಷ್ಟಿಯಲ್ಲಿ ಮಾತ್ರವಲ್ಲ ಮನುಷ್ಯರ ದೃಷ್ಟಿಯಲ್ಲಿಯೂ ಪ್ರಾಮಾಣಿಕರಾಗಿರಿ.’ (2 ಕೊರಿಂಥ 8:21) ನಿಮ್ಮ ಆದಾಯ ಎಷ್ಟು, ಖರ್ಚು ಎಷ್ಟು ಎಂದು ಮುಚ್ಚುಮರೆಯಿಲ್ಲದೆ ನಿಮ್ಮ ಸಂಗಾತಿಗೆ ಹೇಳಿ.

ಹಣಕಾಸಿನ ವಿಚಾರದಲ್ಲಿ ಪ್ರಾಮುಖ್ಯ ನಿರ್ಣಯಗಳನ್ನು ಮಾಡುವಾಗೆಲ್ಲಾ ನಿಮ್ಮ ಸಂಗಾತಿಯೊಂದಿಗೆ ಮಾತಾಡಿ. (ಜ್ಞಾನೋಕ್ತಿ 13:10) ಹಣ ನಿರ್ವಹಣೆಯ ಬಗ್ಗೆ ನೀವು ಜೊತೆಯಾಗಿ ಮಾತಾಡುವುದು, ನಿಮ್ಮ ವಿವಾಹ ಜೀವನದಲ್ಲಿ ನೆಮ್ಮದಿ ಇರಲು ಸಹಾಯ ಮಾಡುತ್ತದೆ. ನಿಮ್ಮ ಸಂಪಾದನೆಯನ್ನು ನಿಮ್ಮೊಬ್ಬರದ್ದೇ ಹಣ ಅಂತಲ್ಲ, ನಿಮ್ಮ ಕುಟುಂಬದ ಹಣ ಅಂತ ಪರಿಗಣಿಸಿ.—1 ತಿಮೊಥೆಯ 5:8.

ಹೀಗೆ ಮಾಡಿ:

  • ಒಬ್ಬರನ್ನೊಬ್ಬರು ಕೇಳದೆ ವೈಯಕ್ತಿಕವಾಗಿ ಎಷ್ಟು ಹಣ ಖರ್ಚುಮಾಡಬಹುದೆಂದು ಇಬ್ಬರೂ ಜೊತೆಯಾಗಿ ನಿರ್ಧರಿಸಿ

  • ಹಣದ ವಿಷಯದಲ್ಲಿ ಸಮಸ್ಯೆ ಏಳುವ ಮೊದಲೇ ಅದರ ಕುರಿತು ಮಾತಾಡಿ