ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎ1

ಬೈಬಲ್‌ ಭಾಷಾಂತರದ ಹಿಂದಿರೋ ತತ್ವಗಳು

ಬೈಬಲನ್ನ ಮೊದಲು ಹೀಬ್ರು, ಅರಾಮಿಕ್‌ ಮತ್ತು ಗ್ರೀಕ್‌ ಭಾಷೆಯಲ್ಲಿ ಬರೆದ್ರು. ಇವತ್ತು ಬೈಬಲ್‌ ಪೂರ್ತಿಯಾಗಿ ಅಥವಾ ಭಾಗವಾಗಿ 3,000ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಇದೆ. ಹೆಚ್ಚಿನ ಜನ್ರಿಗೆ ಬೈಬಲನ್ನ ಮೊದಲು ಬರೆದ ಭಾಷೆಗಳು ಯಾವುದೂ ಗೊತ್ತಿಲ್ಲದೆ ಇರೋದ್ರಿಂದ ಅವ್ರಿಗೆ ಭಾಷಾಂತರ ಆಗಿರೋ ಬೈಬಲಿನ ಅವಶ್ಯಕತೆ ಇದೆ. ಹಾಗಾದ್ರೆ ಬೈಬಲ್‌ ಭಾಷಾಂತರ ಮಾಡುವಾಗ ಯಾವೆಲ್ಲ ತತ್ವಗಳನ್ನ ಮನಸ್ಸಲ್ಲಿಡಬೇಕು? ಆ ತತ್ವಗಳನ್ನೆಲ್ಲ ಮನಸ್ಸಲ್ಲಿಟ್ಟು ಈ ಹೊಸ ಲೋಕ ಭಾಷಾಂತರದ ಬೈಬಲನ್ನ ಹೇಗೆ ತಯಾರಿಸಲಾಗಿದೆ? ನೋಡೋಣ ಬನ್ನಿ.

ಪದಕ್ಕೆ ಪದ ಅನುವಾದ ಮಾಡಿದ್ರೆ (ಇಂಟರ್‌ಲೀನಿಯರ್‌ ಬೈಬಲ್‌ ತರ) ಬೈಬಲನ್ನ ಮೊದಲು ಬರೆದಾಗ ಇದ್ದ ಮಾಹಿತಿನೇ ಈಗ ನಮಗೆ ಸಿಗುತ್ತೆ ಅಂತ ಕೆಲವರು ಯೋಚಿಸಬಹುದು. ಆದ್ರೆ ಅದು ನಿಜ ಅಲ್ಲ. ಅದಕ್ಕೆ ಕೆಲವು ಉದಾಹರಣೆಗಳನ್ನ ನೋಡಿ:

  • ಒಂದು ಭಾಷೆಯ ವ್ಯಾಕರಣ, ಪದಗಳು, ವಾಕ್ಯಗಳ ರಚನೆ ಇನ್ನೊಂದು ಭಾಷೆ ತರ ಇರಲ್ಲ. ಹೀಬ್ರು ಭಾಷೆಯ ಪ್ರೊಫೆಸರ್‌ ಎಸ್‌.ಆರ್‌. ಡ್ರೈವರ್‌ ಅನ್ನುವವರು ಹೀಗೆ ಹೇಳಿದರು: “ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ವ್ಯಾಕರಣ ಮತ್ತು ಪದಗಳು ಬೇರೆಬೇರೆ ಇರುತ್ತೆ. ಅಷ್ಟೇ ಅಲ್ಲ . . . ಯೋಚನೆ ಮಾಡೋ ರೀತಿ ವಾಕ್ಯಗಳನ್ನ ರಚಿಸಿರೋ ರೀತಿ ಬೇರೆ ಇರುತ್ತೆ.” ಒಂದು ಭಾಷೆಯವರು ಒಂದು ತರ ಯೋಚನೆ ಮಾಡಿದ್ರೆ ಇನ್ನೊಂದು ಭಾಷೆಯವರು ಇನ್ನೊಂದು ತರ ಯೋಚನೆ ಮಾಡ್ತಾರೆ. “ಹೀಗೆ ಯೋಚನೆ ಮಾಡಿದಾಗ ಹುಟ್ಕೊಳ್ಳೋ ವಾಕ್ಯಗಳೂ ಒಂದೊಂದು ಭಾಷೆಯಲ್ಲಿ ಒಂದೊಂದು ತರ ಇರುತ್ತೆ” ಅಂತಾರೆ ಪ್ರೊಫೆಸರ್‌ ಡ್ರೈವರ್‌.

  • ಬೈಬಲನ್ನ ಬರೆದ ಹೀಬ್ರು, ಅರಾಮಿಕ್‌, ಗ್ರೀಕ್‌ ಭಾಷೆಯಲ್ಲಿದ್ದ ಅದೇ ಪದಗಳು ಮತ್ತು ವ್ಯಾಕರಣ ಈಗ ಇರೋ ಯಾವ ಭಾಷೆಗೂ ಇಲ್ಲ. ಹಾಗಾಗಿ ಪದಕ್ಕೆ ಪದ ಅನುವಾದ ಮಾಡಿದ್ರೆ ಏನೂ ಅರ್ಥ ಆಗದೇ ಹೋಗಬಹುದು, ತಪ್ಪಾದ ಅರ್ಥಾನೂ ಬರಬಹುದು.

  • ಒಂದು ಪದಕ್ಕೆ ಬೇರೆಬೇರೆ ಅರ್ಥ ಇರುತ್ತೆ. ಒಂದು ವಾಕ್ಯದಲ್ಲಿ ಒಂದು ಅರ್ಥ ಕೊಟ್ರೆ ಇನ್ನೊಂದು ವಾಕ್ಯದಲ್ಲಿ ಇನ್ನೊಂದು ಅರ್ಥ ಕೊಡುತ್ತೆ.

ಭಾಷಾಂತರ ಮಾಡುವವರು ಕೆಲವು ಕಡೆ ಹೀಬ್ರು ಮತ್ತು ಗ್ರೀಕಿನಲ್ಲಿ ಇರೋ ತರಾನೇ ಪದಕ್ಕೆ ಪದವಾಗಿ ಅನುವಾದ ಮಾಡಬಹುದು. ಆದ್ರೆ ಅವರು ತುಂಬ ಜಾಗ್ರತೆಯಿಂದ ಮಾಡಬೇಕಾಗುತ್ತೆ.

ಪದಕ್ಕೆ ಪದ ಅನುವಾದ ಮಾಡಿದ್ರೆ ಆಗೋ ಅನಾಹುತಗಳಿಗೆ ಕೆಲವು ಉದಾಹರಣೆಗಳನ್ನ ನೋಡಿ:

  • ಬೈಬಲಿನಲ್ಲಿ “ನಿದ್ದೆ”ಯನ್ನ ಬೇರೆಬೇರೆ ಅರ್ಥದಲ್ಲಿ ಬಳಸಲಾಗಿದೆ. ಅದು ನಿಜವಾದ ನಿದ್ದೆ ಇರಬಹುದು. ಇನ್ನು ಕೆಲವು ಕಡೆ ಸಾಯೋದನ್ನೂ ನಿದ್ದೆ ಮಾಡೋದಕ್ಕೆ ಹೋಲಿಸಿದ್ದಾರೆ. (ಮತ್ತಾಯ 28:13; ಕೀರ್ತನೆ 76:​5, 6) ಹಾಗಾಗಿ ಎಲ್ಲೆಲ್ಲಿ ಸಾವನ್ನ ನಿದ್ದೆಗೆ ಹೋಲಿಸಿ ಮಾತಾಡಿದ್ದಾರೋ ಅಲ್ಲೆಲ್ಲ ಭಾಷಾಂತರಕಾರರು ‘ಮರಣದಲ್ಲಿ ನಿದ್ದೆ ಹೋದ್ರೆ’ ಅಥವಾ ‘ಸತ್ತು ಹೋದ್ರೆ’ ಅಂತ ಸರಳವಾಗಿ ಅನುವಾದ ಮಾಡಬೇಕಾಗುತ್ತೆ. ಆಗ ಈಗಿನ ಕಾಲದ ಜನ್ರಿಗೆ ಸುಲಭವಾಗಿ ಅರ್ಥ ಆಗುತ್ತೆ. ಯಾವುದೇ ಗಲಿಬಿಲಿ ಇರಲ್ಲ.​—1 ಕೊರಿಂಥ 7:39; 1 ಥೆಸಲೊನೀಕ 4:13; 2 ಪೇತ್ರ 3:4.

  • ಎಫೆಸ 4:14ರಲ್ಲಿ ಅಪೊಸ್ತಲ ಪೌಲ ಗ್ರೀಕಿನ ಒಂದು ಗಾದೆ ಹೇಳ್ತಾ “ಮನುಷ್ಯರನ್ನೋ ಪಗಡೆ ಆಟ” ಅಂತ ಹೇಳಿದ್ದಾನೆ. ಈ ಹಳೇ ಗಾದೆಯ ಅರ್ಥ ಪಗಡೆ ಆಟ ಆಡುವಾಗ ಬೇರೆಯವ್ರಿಗೆ ಮೋಸ ಮಾಡೋ ರೂಢಿ ಬಗ್ಗೆ ಹೇಳುತ್ತೆ. ಆದ್ರೆ ಹೆಚ್ಚಿನ ಭಾಷೆಗಳಲ್ಲಿ ಈ ಗಾದೆ ಅರ್ಥ ಆಗಲ್ಲ. ಅದ್ರ ಬದಲಿಗೆ ‘ಮೋಸ ಮಾಡೋ ಮನುಷ್ಯರು’ ಅಂತ ಹಾಕಿದ್ರೆ ಸುಲಭವಾಗಿ ಅರ್ಥವಾಗುತ್ತೆ.

  • ಗ್ರೀಕ್‌ ಭಾಷೆಯಲ್ಲಿ ರೋಮನ್ನರಿಗೆ 12:11ರಲ್ಲಿ “ಪವಿತ್ರಶಕ್ತಿ ನಿಮ್ಮಲ್ಲಿ ಕುದಿಯಲಿ” ಅಂತಿದೆ. ಅದನ್ನ ಕನ್ನಡದಲ್ಲಿ ಹಾಗೇ ಇಟ್ರೆ ಏನೂ ಅರ್ಥ ಆಗಲ್ಲ. ಅದಕ್ಕೆ ಈ ಬೈಬಲಲ್ಲಿ “ಪವಿತ್ರಶಕ್ತಿ ನಿಮ್ಮಲ್ಲಿ ಹುರುಪು ತುಂಬಲಿ” ಅಂತ ಅನುವಾದ ಮಾಡಲಾಗಿದೆ.

  • ಮತ್ತಾಯ 5:3

    ಪದಕ್ಕೆ ಪದ ಹಾಕಿದ್ರೆ: “ಆತ್ಮದಲ್ಲಿ ಬಡವರು”

    ಅರ್ಥ: “ದೇವರ ಮಾರ್ಗದರ್ಶನ ಬೇಕಂತ ಅರ್ಥ ಮಾಡ್ಕೊಳ್ಳುವವರು”

    ಯೇಸು ಬೆಟ್ಟದ ಮೇಲೆ ಕೊಟ್ಟ ಪ್ರಸಿದ್ಧ ಭಾಷಣದಲ್ಲಿ “ಆತ್ಮದಲ್ಲಿ ಬಡವರಾಗಿರುವವರು ಧನ್ಯರು” ಅಂತ ಹೇಳಿದ್ದರ ಬಗ್ಗೆ ಇದೆ. (ಮತ್ತಾಯ 5:​3, ಸತ್ಯವೇದ ಬೈಬಲ್‌) ಹೆಚ್ಚಿನ ಭಾಷೆಗಳಲ್ಲಿ ಈ ವಾಕ್ಯ ಏನಂತಾನೇ ಅರ್ಥ ಆಗಲ್ಲ. ಇನ್ನು ಕೆಲವು ಭಾಷೆಗಳಲ್ಲಿ ಅಲ್ಲಿ ಇರೋ ತರಾನೇ “ಆತ್ಮದಲ್ಲಿ ಬಡವರು” ಅಂತ ಹೇಳಿದ್ರೆ ಬುದ್ಧಿಮಾಂಧ್ಯರು ಅಥವಾ ಬಲ-ಛಲ ಇಲ್ಲದವರು ಅನ್ನೋ ಅರ್ಥ ಬಂದುಬಿಡುತ್ತೆ. ಆದ್ರೆ ಯೇಸು ಇಲ್ಲಿ ಏನು ಹೇಳ್ತಾ ಇದ್ದಾನೆಂದ್ರೆ, ಬರೀ ತಿಂದು-ಕುಡಿದ್ರೆ ಸಂತೋಷ ಸಿಗಲ್ಲ, ದೇವರ ಮಾರ್ಗದರ್ಶನ ಬೇಕಂತ ಅರ್ಥಮಾಡ್ಕೊಂಡ್ರೆ ನಿಜವಾದ ಸಂತೋಷ ಸಿಗುತ್ತೆ. (ಲೂಕ 6:20) ಹಾಗಾಗಿ ಜನ್ರಿಗೆ ಚೆನ್ನಾಗಿ ಅರ್ಥ ಆಗಬೇಕಾದ್ರೆ “ದೇವರ ಮಾರ್ಗದರ್ಶನ ಬೇಕಂತ ಅರ್ಥಮಾಡ್ಕೊಳ್ಳುವವರು ಸಂತೋಷವಾಗಿರುತ್ತಾರೆ” ಅಂತ ಅನುವಾದ ಮಾಡಬೇಕಾಗುತ್ತೆ.

  • ಬೈಬಲಲ್ಲಿ ಕಿನಾ ಅನ್ನೋ ಹೀಬ್ರು ಪದ ಬಳಸಲಾಗಿದೆ. ಅದಕ್ಕೆ ಹೆಚ್ಚಾಗಿ ಹೊಟ್ಟೆಕಿಚ್ಚು ಅನ್ನೋ ಅರ್ಥ ಇದೆ. ತುಂಬ ಆಪ್ತ ವ್ಯಕ್ತಿಯೊಬ್ರು ನಂಬಿಕೆದ್ರೋಹ ಮಾಡಿದಾಗ ಬರೋ ಕೋಪ ಅಥವಾ ಬೇರೆಯವ್ರ ಹತ್ರ ಇರೋ ವಸ್ತುಗಳನ್ನ ನೋಡಿದಾಗ ಆಗೋ ಹೊಟ್ಟೆ ಉರಿಗೆ ಈ ಪದ ಬಳಸಲಾಗಿದೆ. (ಜ್ಞಾನೋಕ್ತಿ 6:34; ಯೆಶಾಯ 11:13) ಇದೇ ಹೀಬ್ರು ಪದಕ್ಕೆ ಒಳ್ಳೇ ಅರ್ಥನೂ ಇದೆ. ಯೆಹೋವ ದೇವರು ತನ್ನ ಜನ್ರನ್ನ ಕಾಪಾಡುವಾಗ ತೋರಿಸೋ ಹುರುಪಿಗೂ ‘ತನ್ನನ್ನ ಮಾತ್ರ ಆರಾಧನೆ ಮಾಡಬೇಕು’ ಅಂತ ದೇವರು ಬಯಸುವುದಕ್ಕೂ ಇದೇ ಪದ ಬಳಸಲಾಗಿದೆ. (ವಿಮೋಚನಕಾಂಡ 34:14; 2 ಅರಸು 19:31; ಯೆಹೆಜ್ಕೇಲ 5:13; ಜೆಕರ್ಯ 8:2) ಅಷ್ಟೇ ಅಲ್ಲ ನಂಬಿಗಸ್ತ ಸೇವಕರು ದೇವರ ಬಗ್ಗೆ, ಆತನ ಆರಾಧನೆ ಬಗ್ಗೆ ಉತ್ಸಾಹ ತೋರಿಸುವಾಗ ಮತ್ತು ಯೆಹೋವ ದೇವರನ್ನ ಬಿಟ್ಟು ಬೇರೆಯವ್ರನ್ನ ಆರಾಧಿಸಿದ್ರೆ ಆತನು ಅದನ್ನ ಸಹಿಸ್ಕೊಳ್ಳಲ್ಲ ಅಂತ ವಿವರಿಸಕ್ಕೂ ಈ ಪದ ಬಳಸಲಾಗಿದೆ.​—ಕೀರ್ತನೆ 69:9; 119:139; ಅರಣ್ಯಕಾಂಡ 25:11.

  • ಯದ್‌ ಅನ್ನೋ ಹೀಬ್ರು ಪದದ ಅರ್ಥ “ಕೈ.” ಆದ್ರೆ ಸನ್ನಿವೇಶಕ್ಕೆ ತಕ್ಕಂತೆ “ಅಧಿಕಾರ,” “ಉದಾರತೆ,” “ಶಕ್ತಿ” ಅನ್ನೋ ಅರ್ಥ ಇದೆ

    ‘ಮನುಷ್ಯನ ಕೈ’ ಅನ್ನೋದಕ್ಕೆ ಇರೋ ಹೀಬ್ರು ಪದಕ್ಕೆ ತುಂಬಾ ಅರ್ಥಗಳಿವೆ. ಆ ಪದವನ್ನ ಅಧಿಕಾರ, ಉದಾರತೆ, ಶಕ್ತಿ ಅನ್ನೋ ಅರ್ಥದಲ್ಲಿ ಸನ್ನಿವೇಶಕ್ಕೆ ತಕ್ಕ ಹಾಗೆ ಬಳಸಲಾಗಿದೆ. (2 ಸಮುವೇಲ 8:3; 1 ಅರಸು 10:13; ಜ್ಞಾನೋಕ್ತಿ 18:21) ಹಾಗಾಗಿ ಹೊಸ ಲೋಕ ಭಾಷಾಂತರದಲ್ಲಿ ಈ ಪದವನ್ನ 40ಕ್ಕೂ ಹೆಚ್ಚು ಅರ್ಥಗಳಲ್ಲಿ ​ಅನುವಾದ ಮಾಡಲಾಗಿದೆ.

ಇದನ್ನೆಲ್ಲ ನೋಡುವಾಗ ಹೀಬ್ರು, ಅರಾಮಿಕ್‌, ಗ್ರೀಕಿನಲ್ಲಿ ಇರೋ ಪದಗಳನ್ನೇ ಎಲ್ಲಾ ಕಡೆ ಬಳಸಕ್ಕಾಗಲ್ಲ. ಭಾಷಾಂತರ ಮಾಡುವವರು ಚೆನ್ನಾಗಿ ಯೋಚನೆ ಮಾಡಿ ಸರಿಯಾದ ಅರ್ಥ ಬರೋ ಹಾಗೆ ಪದಗಳನ್ನ ಆರಿಸ್ಕೊಳ್ಳಬೇಕು. ಅಷ್ಟೇ ಅಲ್ಲ ವಾಕ್ಯ ರಚಿಸಬೇಕು. ಅದೇ ಸಮಯದಲ್ಲಿ ಭಾಷೆಯ ವ್ಯಾಕರಣ ಕೂಡ ಮನಸ್ಸಲ್ಲಿಡಬೇಕು. ಓದೋಕೆ ಸುಲಭನೂ ಇರಬೇಕು.

ಅದೇ ಸಮಯದಲ್ಲಿ ಭಾಷಾಂತರ ಮಾಡುವವರು ತಮ್ಮ ಮನಸ್ಸಿಗೆ ಬಂದ ಹಾಗೆ ಅತಿರೇಕವಾಗಿ ಪದಗಳನ್ನ ಬದಲಾಯಿಸಬಾರದು. ಹಾಗೆ ಮನಸ್ಸಿಗೆ ಬಂದ ಹಾಗೆ ಭಾಷಾಂತರ ಮಾಡಿದ್ರೆ ತಪ್ಪಾದ ಅರ್ಥ ಕೊಟ್ಟುಬಿಡುತ್ತೆ. ಅದನ್ನ ಹೇಗೆ ಹೇಳಬಹುದು? ಈ ರೀತಿ ಭಾಷಾಂತರ ಮಾಡುವವರು ತಮ್ಮದೇ ಅಭಿಪ್ರಾಯಗಳನ್ನ ಸೇರಿಸಿಬಿಡಬಹುದು, ಪ್ರಾಮುಖ್ಯವಾದ ಮಾಹಿತಿಯನ್ನ ಬಿಟ್ಟುಬಿಡಬಹುದು. ಮನಸ್ಸಿಗೆ ಬಂದ ಹಾಗೆ ಮಾಡಿರೋ ಭಾಷಾಂತರ ಓದುವವ್ರಿಗೆ ಸುಲಭ ಅಂತ ಅನಿಸಿದ್ರೂ ಅವ್ರಿಗೆ ಬೈಬಲಿನ ಸತ್ಯ ಸಂದೇಶ ಸಿಗದೆ ಹೋಗಬಹುದು.

ಭಾಷಾಂತರ ಮಾಡುವವರ ಧಾರ್ಮಿಕ ನಂಬಿಕೆ ಅವರು ಮಾಡೋ ಅನುವಾದದ ಮೇಲೆ ಪರಿಣಾಮ ಬೀರುತ್ತೆ. ಉದಾಹರಣೆಗೆ “ನಾಶಕ್ಕೆ ಹೋಗೋ ಬಾಗಿಲು ಅಗಲ, ದಾರಿ ವಿಶಾಲ” ಅಂತ ಮತ್ತಾಯ 7:13 ಹೇಳುತ್ತೆ. ಇಲ್ಲಿ “ನಾಶ” ಅನ್ನೋ ಬದಲು “ನರಕ” ಅಂತ ಕೆಲವರು ಭಾಷಾಂತರ ಮಾಡಿದ್ದಾರೆ. ಯಾಕಂದ್ರೆ ಅವರು ನರಕ ಇದೆ ಅಂತ ನಂಬ್ತಿದ್ರು.

ಬೈಬಲನ್ನ ಅನುವಾದ ಮಾಡುವವರು ಇನ್ನೊಂದು ವಿಷ್ಯನೂ ಮನಸ್ಸಲ್ಲಿ ಇಡಬೇಕು. ಅದೇನಂದ್ರೆ ಸಾಮಾನ್ಯ ಜನ್ರು ಅಂದ್ರೆ ರೈತರು, ಕುರುಬರು, ಮೀನು ಹಿಡಿಯೋರು ಮಾತಾಡೋ ಸರಳ ಭಾಷೆಯಲ್ಲಿ ಬೈಬಲನ್ನ ಬರೆದಿದ್ರು. (ನೆಹೆಮೀಯ 8:​8, 12; ಅಪೊಸ್ತಲರ ಕಾರ್ಯ 4:13) ಹಾಗಾಗಿ ಒಳ್ಳೇ ಮನಸ್ಸಿನ ಜನ್ರಿಗೆ ಬೈಬಲ್‌ ಸಂದೇಶ ಅರ್ಥ ಆಗೋ ತರ ಭಾಷಾಂತರ ಮಾಡಿದ್ರೆ ಅದನ್ನ ಒಳ್ಳೇ ಅನುವಾದ ಅಂತ ಹೇಳಬಹುದು. ಅವರು ಯಾವುದೇ ಹಿನ್ನೆಲೆಯಿಂದ ಬಂದಿರಲಿ ಅದು ಅವ್ರಿಗೆ ಅರ್ಥ ಆಗಬೇಕು. ಪದಗಳು ಹೇಗಿರಬೇಕಂದ್ರೆ ಸ್ಪಷ್ಟವಾಗಿ ಇರಬೇಕು, ತುಂಬ ಜನ್ರು ಬಳಸ್ತಿರಬೇಕು, ಓದಿದ ತಕ್ಷಣ ಅರ್ಥ ಆಗಬೇಕು. ಪಂಡಿತರು ಮಾತಾಡೋ ಪದಗಳನ್ನ ಬಳಸಬಾರದು.

ಇವತ್ತು ಬೈಬಲನ್ನ ಭಾಷಾಂತರ ಮಾಡಿರೋ ತುಂಬ ಜನ್ರು ಅತಿರೇಕಕ್ಕೆ ಹೋಗಿ ಒಂದು ದೊಡ್ಡ ತಪ್ಪನ್ನ ಮಾಡಿದ್ದಾರೆ. ಅದೇನಂದ್ರೆ ಯೆಹೋವ ಅನ್ನೋ ದೇವರ ಹೆಸ್ರನ್ನೇ ತೆಗೆದುಹಾಕಿದ್ದಾರೆ. ದೇವರ ಹೆಸ್ರು ಹಳೇ ಹಸ್ತಪ್ರತಿಗಳಲ್ಲಿ ಇದ್ರೂ ಅವರು ತೆಗೆದುಬಿಟ್ಟಿದ್ದಾರೆ. (ಪರಿಶಿಷ್ಟ ಎ4 ನೋಡಿ.) ಯೆಹೋವ ಅನ್ನೋ ಹೆಸ್ರಿನ ಬದಲು “ಕರ್ತನು” “ಸರ್ವೇಶ್ವರ” ಅಂತ ತುಂಬ ಬೈಬಲಲ್ಲಿ ಹಾಕಿದ್ದಾರೆ. ದೇವರಿಗೆ ಒಂದು ಹೆಸ್ರಿದೆ ಅನ್ನೋ ವಿಷ್ಯವನ್ನೇ ಕೆಲವರು ಮುಚ್ಚಿಹಾಕಿದ್ದಾರೆ. ಉದಾಹರಣೆಗೆ ಕೆಲವು ಭಾಷಾಂತರಗಳು ಯೇಸು ಮಾಡಿದ ಪ್ರಾರ್ಥನೆಯಲ್ಲಿ ಏನು ಮಾಡಿದ್ದಾರೆ ನೋಡಿ. ಯೋಹಾನ 17:26ರಲ್ಲಿ “ನಾನು ನಿನ್ನ ಬಗ್ಗೆ ಇವ್ರಿಗೆ ಚೆನ್ನಾಗಿ ಹೇಳ್ಕೊಟ್ಟಿದ್ದೀನಿ” ಮತ್ತು ಯೋಹಾನ 17:6ರಲ್ಲಿ “ನೀನು ನನಗೆ ಕೊಟ್ಟ ಶಿಷ್ಯರಿಗೆ ನಾನು ನಿನ್ನ ಬಗ್ಗೆ ಚೆನ್ನಾಗಿ ಹೇಳ್ಕೊಟ್ಟಿದ್ದೀನಿ” ಅಂತ ಹಾಕಿದ್ದಾರೆ. ಆದ್ರೆ ಯೇಸು ಹೇಳಿದ ಈ ಮಾತುಗಳ ಸರಿಯಾದ ಅನುವಾದ ಏನಂದ್ರೆ “ನಾನು ನಿನ್ನ ಹೆಸ್ರನ್ನ ಇವ್ರಿಗೆ ಚೆನ್ನಾಗಿ ಹೇಳ್ಕೊಟ್ಟಿದ್ದೀನಿ” ಮತ್ತು “ನೀನು ಕೊಟ್ಟ ಶಿಷ್ಯರಿಗೆ ನಾನು ನಿನ್ನ ಹೆಸ್ರನ್ನ ಚೆನ್ನಾಗಿ ಹೇಳ್ಕೊಟ್ಟಿದ್ದೀನಿ.”

ಇಂಗ್ಲಿಷ್‌ ಭಾಷೆಯ ಹೊಸ ಲೋಕ ಭಾಷಾಂತರದ ಮೊದಲನೇ ಆವೃತ್ತಿಯ ಪರಿಚಯದಲ್ಲಿ ಹೀಗಿತ್ತು: “ನಾವು ಮನಸ್ಸಿಗೆ ಬಂದ ಹಾಗೆ ಅನುವಾದ ಮಾಡಿಲ್ಲ. ನಿಖರವಾಗಿ ಅನುವಾದ ಮಾಡೋಕೆ ಆದಷ್ಟು ಪ್ರಯತ್ನ ಮಾಡಿದ್ದೀವಿ. ಅಷ್ಟೇ ಅಲ್ಲ ಹೀಬ್ರು ಮತ್ತು ಗ್ರೀಕಿನ ಗಾದೆಗಳು ಈಗಿನ ಇಂಗ್ಲಿಷ್‌ ಗಾದೆಗಳ ತರ ಇರೋ ಜಾಗದಲ್ಲೆಲ್ಲ ಅದೇ ಗಾದೆಗಳನ್ನ ಬಳಸಿದ್ದೀವಿ. ಆದ್ರೆ ಈ ರೀತಿ ಮಾಡಿದ್ರೆ ಅರ್ಥ ಮಾಡ್ಕೊಳ್ಳೋಕೆ ಕಷ್ಟ ಆಗ್ತಿದೆ ಅಂತ ಅನಿಸಿದ್ದಲ್ಲಿ ಮಾತ್ರ ಪದಕ್ಕೆ ಪದ ಭಾಷಾಂತರ ಮಾಡಿಲ್ಲ.” ಹಾಗಾಗಿ ಹೊಸ ಲೋಕ ಭಾಷಾಂತರ ಕಮಿಟಿ ಹೀಬ್ರು ಮತ್ತು ಗ್ರೀಕಲ್ಲಿರೋ ತರಾನೇ ಪದಗಳನ್ನ, ಶೈಲಿಯನ್ನ ಬಳಸೋಕೆ ಆದಷ್ಟು ಗಮನ ಕೊಟ್ಟಿದ್ದಾರೆ. ಅದೇ ಸಮಯದಲ್ಲಿ ಜನ್ರಿಗೆ ಓದುವಾಗ ಕಷ್ಟ ಆಗಬಾರದು, ಸುಲಭವಾಗಿ ಅರ್ಥ ಆಗಬೇಕು ಅನ್ನೋದನ್ನೂ ಮನಸ್ಸಲ್ಲಿಟ್ಟು ಭಾಷಾಂತರ ಮಾಡಿದ್ದಾರೆ. ಇದ್ರಿಂದಾಗಿ ಜನ್ರು ಬೈಬಲನ್ನ ಸರಾಗವಾಗಿ ಓದಬಹುದು. ಅಷ್ಟೇ ಅಲ್ಲ ದೇವರ ಸಂದೇಶವನ್ನ ಸರಿಯಾಗೇ ಭಾಷಾಂತರ ಮಾಡಿದ್ದಾರೆ ಅನ್ನೋ ನಂಬಿಕೆ ಇಡಬಹುದು.​—1 ಥೆಸಲೊನೀಕ 2:13.