ಯೋಬ 31:1-40
31 ನಾನು ಯಾವ ಹೆಣ್ಣನ್ನೂ ಕೆಟ್ಟ ದೃಷ್ಟಿಯಿಂದ ನೋಡಲ್ಲ ಅಂತ ದೃಢನಿರ್ಧಾರ ಮಾಡಿದ್ದೀನಿ,*+ಹಾಗಾಗಿ ಯುವತಿಯನ್ನ ತಪ್ಪಾದ ದೃಷ್ಟಿಯಿಂದ ಹೇಗೆ ನೋಡ್ಲಿ?+
2 ಹಾಗೆ ನೋಡಿದ್ರೆ ಸ್ವರ್ಗದಲ್ಲಿರೋ ದೇವ್ರಿಂದ ನನಗೇನು ಸಿಗುತ್ತೆ?
ಮೇಲಿರೋ ಸರ್ವಶಕ್ತನಿಂದ ನನಗೇನು ಪಾಲು ಸಿಗುತ್ತೆ?
3 ತಪ್ಪು ಮಾಡಿದವನಿಗೆ ದುರಂತ ಆಗೇ ಆಗುತ್ತೆ?
ಕೆಟ್ಟದು ಮಾಡಿದವನ ಮೇಲೆ ಕಷ್ಟ ಬಂದೇ ಬರುತ್ತೆ.+
4 ದೇವರು ನನ್ನ ನಡತೆ ನೋಡ್ತಾ ಇದ್ದಾನಲ್ವಾ?+
ನಾನಿಡೋ ಒಂದೊಂದು ಹೆಜ್ಜೆಯನ್ನೂ ಗಮನಿಸ್ತಾ ಇದ್ದಾನಲ್ವಾ?
5 ನಾನು ಯಾವತ್ತಾದ್ರೂ ಸುಳ್ಳು ಹೇಳಿದ್ದೀನಾ?*
ಯಾರಿಗಾದ್ರೂ ಮೋಸ ಮಾಡಿದ್ದೀನಾ?*+
6 ದೇವರು ನನ್ನನ್ನ ಸರಿಯಾದ ತಕ್ಕಡಿಯಲ್ಲಿಟ್ಟು ತೂಕ ಮಾಡ್ಲಿ,+ಆಗ ಆತನಿಗೆ ನನ್ನಲ್ಲಿ ಒಂಚೂರೂ ತಪ್ಪಿಲ್ಲ ಅಂತ ಗೊತ್ತಾಗುತ್ತೆ.+
7 ನಾನು ಸರಿ ದಾರಿ ಬಿಟ್ಟು ಆಚೆ ಹೆಜ್ಜೆ ಇಟ್ಟಿದ್ರೆ,+ನನ್ನ ಹೃದಯ ಕಣ್ಣು ನೋಡಿದ್ದರ ಹಿಂದೆ ಹೋಗಿದ್ರೆ,+ನನ್ನ ಕೈಗಳು ಪಾಪ ಮಾಡಿ ಅಶುದ್ಧ ಆಗಿದ್ರೆ
8 ನಾನು ಬೆಳೆಸಿದ್ದನ್ನ ಬೇರೆಯವರು ತಿನ್ನಲಿ,+ನಾನು ನೆಟ್ಟದ್ದನ್ನ ಬೇರೆಯವರು ಕಿತ್ತು ಬಿಸಾಡ್ಲಿ.*
9 ಒಬ್ಬ ಸ್ತ್ರೀಯನ್ನ ನೋಡಿ ಮನಸ್ಸು ಸೋತು+ಅವಳಿಗಾಗಿ ನೆರೆಯವನ ಬಾಗಿಲ ಹತ್ರ ನಾನು ಹೊಂಚುಹಾಕಿದ್ರೆ+
10 ನನ್ನ ಹೆಂಡತಿ ಬೇರೆಯವನ ಮನೇಲಿ ಧಾನ್ಯ ಬೀಸ್ಲಿ,ಬೇರೆ ಗಂಡಸ್ರು ಅವಳ ಜೊತೆ ಮಲಗ್ಲಿ.+
11 ನಾನು ತಪ್ಪು ಮಾಡಿದ್ರೆ ಅದು ನಾಚಿಕೆಗೆಟ್ಟ ಕೆಲಸ,ಆ ಪಾಪಕ್ಕೆ ನ್ಯಾಯಾಧೀಶರು ನನಗೆ ಶಿಕ್ಷೆ ಕೊಡ್ಲೇ ಬೇಕು.+
12 ಎಲ್ಲವನ್ನೂ ಸುಟ್ಟು ಬೂದಿಮಾಡೋ ಬೆಂಕಿ ತರಆ ವ್ಯಭಿಚಾರ ನನ್ನದೆಲ್ಲವನ್ನೂ ಸುಟ್ಟು ಸರ್ವನಾಶ ಮಾಡ್ಲಿ.+
13 ಒಂದುವೇಳೆ ನನ್ನ ಸೇವಕ ಸೇವಕಿಯರಿಗೆ ನನ್ನ ಮೇಲೆ ದೂರು* ಇದ್ದಾಗನಾನು ಅದಕ್ಕೆ ಗಮನ ಕೊಡದಿದ್ರೆ ನ್ಯಾಯ ಕೊಡದೇ ಇದ್ದಿದ್ರೆ
14 ದೇವರು ಅದರ ಬಗ್ಗೆ ಕೇಳಿದಾಗ ನಾನೇನು ಹೇಳಲಿ?
ಲೆಕ್ಕ ಕೇಳಿದಾಗ ನಾನೇನು ಉತ್ತರ ಕೊಡಲಿ?+
15 ನನ್ನ ತಾಯಿ ಹೊಟ್ಟೆಯಲ್ಲಿ ನನ್ನನ್ನ ಸೃಷ್ಟಿ ಮಾಡಿದವನೇ ಅವ್ರನ್ನೂ ಸೃಷ್ಟಿ ಮಾಡಿದ್ದಾನಲ್ವಾ?+
ಹುಟ್ಟೋ ಮುಂಚೆನೇ ನಮ್ಮನ್ನೆಲ್ಲ ರೂಪಿಸಿದವನು ಆತನೇ ಅಲ್ವಾ?+
16 ಬಡವರು ನನ್ನ ಹತ್ರ ಏನಾದ್ರೂ ಕೇಳಿದಾಗ ನಾನು ಕೊಡಲಿಲ್ವಾ?+
ವಿಧವೆಯರಿಗೆ ಸಹಾಯ ಮಾಡದೆ ಅವ್ರ ಮುಖ ಬಾಡಿ ಹೋಗೋ ಹಾಗೆ ಮಾಡಿದ್ದೀನಾ?+
17 ನನ್ನ ಪಾಲಿನ ಊಟನಾ ನಾನೊಬ್ಬನೇ ತಿಂದಿದ್ದೀನಾ?
ಅನಾಥರಿಗೂ ಕೊಟ್ಟಿಲ್ವಾ?+
18 (ಚಿಕ್ಕ ವಯಸ್ಸಿಂದಾನೇ ನಾನು ಆ ಅನಾಥರಿಗೆ ತಂದೆ ತರ ಇದ್ದೆ,ಬಾಲ್ಯದಿಂದಾನೇ* ವಿಧವೆಯರಿಗೆ ಸಹಾಯ ಮಾಡ್ತಾ ಬಂದಿದ್ದೀನಿ.)
19 ಬಟ್ಟೆಯಿಲ್ಲದೆ ಕೊರೆಯೋ ಚಳಿಯಲ್ಲಿ ಇದ್ದವ್ರನ್ನ ಸಾಯಲಿ ಅಂತ ಬಿಟ್ಟಿದ್ದೀನಾ?
ಬಡವನಿಗೆ ಹೊದ್ದುಕೊಳ್ಳೋಕೆ ಏನೂ ಇಲ್ಲದೇ ಇದ್ದಾಗ ನೋಡಿನೂ ನೋಡದ ಹಾಗೆ ಇದ್ದಿದ್ದೀನಾ?+
20 ನನ್ನ ಕುರಿಗಳ ಉಣ್ಣೆಬಟ್ಟೆಯಿಂದ ಅವ್ರನ್ನ ಬೆಚ್ಚಗೆ ಇಟ್ಟಿಲ್ವಾ?
ಆ ಸಹಾಯಕ್ಕಾಗಿ ಅವರು ನನಗೆ ಆಶೀರ್ವಾದ ಮಾಡಿಲ್ವಾ?+
21 ಪಟ್ಟಣದ ಬಾಗಿಲ+ ಹತ್ರ ಅನಾಥರು ನನ್ನ ಸಹಾಯ ಬೇಡಿದಾಗ*+ನಾನು ಕೈ ಎತ್ತಿ ಬೆದರಿಸಿದ್ದೀನಾ?
22 ಹಾಗೆ ಮಾಡಿದ್ರೆ ನನ್ನ ಹೆಗಲಿಂದ ಕೈ ಬಿದ್ದು ಹೋಗ್ಲಿ,ನನ್ನ ಮೊಣಕೈ ಮುರಿದು ಹೋಗ್ಲಿ.
23 ಆದ್ರೆ ನಾನು ಹಾಗೇನೂ ಮಾಡಿಲ್ಲ,ಯಾಕಂದ್ರೆ ದೇವ್ರಿಂದ ಶಿಕ್ಷೆ ಸಿಗುತ್ತೆ ಅನ್ನೋ ಭಯ ನನಗಿದೆ,ಆತನಿಗಿರೋ ಗೌರವದ ಮುಂದೆ ನಿಲ್ಲಕ್ಕಾಗಲ್ಲ ಅಂತ ನಂಗೊತ್ತು.
24 ನಾನು ಬಂಗಾರದಲ್ಲಿ ಭರವಸೆ ಇಟ್ನಾ?
‘ನಿನ್ನಿಂದಾನೇ ನಾನು ಬದುಕಿರೋದು!’ ಅಂತ ಅಪ್ಪಟ ಚಿನ್ನಕ್ಕೆ ಹೇಳಿದ್ದೀನಾ?+
25 ನನಗೆ ಬೇಕಾದಷ್ಟು ಆಸ್ತಿಪಾಸ್ತಿ ಇದ್ದಾಗ+ನಾನು ಸಂತೋಷವಾಗಿ ಇರೋಕೆ ಸಿರಿ-ಸಂಪತ್ತೇ ಕಾರಣ ಅಂತ ಹೇಳಿದ್ದೀನಾ?+
26 ಹೊಳೆಯೋ ಸೂರ್ಯನನ್ನ ನೋಡಿ,ಚಂದ್ರನ ಅಂದಚಂದ ನೋಡಿ+
27 ನನ್ನ ಮನಸ್ಸು ಮರುಳಾಗಿಅವುಗಳನ್ನ ಆರಾಧಿಸೋಕೆ ನನ್ನ ಕೈಗೆ ಮುತ್ತು ಕೊಟ್ಟಿದ್ದೀನಾ?+
28 ನಾನು ಹಾಗೆ ಮಾಡಿದ್ರೆ ಸ್ವರ್ಗದಲ್ಲಿರೋ ಸತ್ಯ ದೇವರನ್ನ ಬೇಡ ಅಂತ ಹೇಳಿದ ಹಾಗಾಗ್ತಿತ್ತು.
ಹಾಗೆ ಮಾಡಿದ್ರೆ ಆ ಪಾಪಕ್ಕೆ ನ್ಯಾಯಾಧೀಶರು ಶಿಕ್ಷೆ ಕೊಡಬೇಕಾಗಿತ್ತು.
29 ನಾನು ಯಾವತ್ತಾದ್ರೂ ನನ್ನ ಶತ್ರು ನಾಶ ಆದಾಗ ಖುಷಿ ಪಟ್ಟಿದ್ದೀನಾ?+
ಅವನಿಗೆ ಕೆಟ್ಟದು ಆದಾಗ ಹಬ್ಬ ಮಾಡಿದ್ದೀನಾ?
30 ಇಲ್ಲ, ‘ಅವನು ಹಾಳಾಗಿ ಹೋಗ್ಲಿ’ ಅಂತ ಶಾಪ ಹಾಕಿಲ್ಲ,ನನ್ನ ಬಾಯಿಂದ ಅಂಥ ಪಾಪವನ್ನ ಯಾವತ್ತೂ ಮಾಡಿಲ್ಲ.+
31 ನನ್ನ ಮನೆಗೆ ಬಂದು ಹೊಟ್ಟೆ ತುಂಬ ಊಟ ಮಾಡದಿರೋ* ವ್ಯಕ್ತಿ ಊರಲ್ಲಿ ಒಬ್ರೂ ಇಲ್ಲ,+ನನ್ನ ಮನೆಯಲ್ಲಿ ಇರೋರೇ ಅದಕ್ಕೆ ಸಾಕ್ಷಿ.
32 ಪ್ರಯಾಣಿಕರಿಗಾಗಿ ನನ್ನ ಮನೆ ಬಾಗಿಲು ಯಾವಾಗ್ಲೂ ತೆರೆದೇ ಇರ್ತಿತ್ತು,ಒಬ್ಬ ಅಪರಿಚಿತ* ಕೂಡ ಬೀದಿಯಲ್ಲಿ ರಾತ್ರಿ ಮಲಗಿಲ್ಲ.+
33 ಬೇರೆಯವ್ರ ಹಾಗೆ ಯಾವತ್ತಾದ್ರೂನನ್ನ ತಪ್ಪನ್ನ ಮುಚ್ಚಿಡೋಕೆ ನೋಡಿದ್ದೀನಾ?+
ನನ್ನ ಜೇಬಲ್ಲಿ ನನ್ನ ಪಾಪವನ್ನ ಬಚ್ಚಿಟ್ಟಿದ್ದೀನಾ?
34 ಅದು ಬೇರೆಯವ್ರಿಗೆ ಗೊತ್ತಾದ್ರೆ ಏನು ಹೇಳಬಹುದು ಅಂತ ಭಯಪಟ್ಟಿದ್ದೀನಾ?
ಬಂಧುಬಳಗಕ್ಕೆ ಗೊತ್ತಾದ್ರೆ ಎಲ್ಲಿ ನನ್ನ ಮರ್ಯಾದೆ ಹೋಗುತ್ತೋ ಅಂತ ಹೆದರಿದ್ದೀನಾ?
ಬಾಯಿಬಿಡದೆ ಸುಮ್ಮನಿದ್ದು, ಮನೆಯಿಂದ ಹೊರಗೆ ಕಾಲಿಡದೆ ಒಳಗೇ ಕೂತಿದ್ದೀನಾ?
35 ಯಾರಾದ್ರೂ ನಾನು ಹೇಳೋದನ್ನ ಸ್ವಲ್ಪ ಕೇಳಿಸ್ಕೊಳ್ಳಿ.+
ನಾನು ಹೇಳಿದ ಒಂದೊಂದು ಮಾತೂ ಸತ್ಯ, ಬೇಕಾದ್ರೆ ಆಣೆ* ಮಾಡ್ತೀನಿ.
ಸರ್ವಶಕ್ತ ನನಗೆ ಉತ್ತರ ಕೊಡ್ಲಿ!+
ನನ್ನ ಮೇಲೆ ಆರೋಪ ಹಾಕಿದವನು ನನ್ನ ತಪ್ಪುಗಳನ್ನ ಬರೆದು ಕೊಟ್ರೆ ಚೆನ್ನಾಗಿತ್ತು!
36 ನಾನದನ್ನ ನನ್ನ ಹೆಗಲ ಮೇಲೆ ಹೊತ್ತುಕೊಳ್ತೀನಿ,ನನ್ನ ತಲೆ ಮೇಲೆ ಕಿರೀಟದ ತರ ಇಟ್ಕೊಳ್ತೀನಿ.
37 ನಾನಿಟ್ಟ ಪ್ರತಿಯೊಂದು ಹೆಜ್ಜೆ ಬಗ್ಗೆ ಆತನಿಗೆ ಲೆಕ್ಕ ಕೊಡ್ತೀನಿ,ಪ್ರಭು ತರ ಧೈರ್ಯವಾಗಿ ಆತನ ಹತ್ರ ಹೋಗ್ತೀನಿ.
38 ನನ್ನ ಜಮೀನು ನನ್ನ ಮೇಲೆ ದೂರು ಹೇಳ್ತಾ?
ನೇಗಿಲ ಸಾಲುಗಳು ಒಟ್ಟೊಟ್ಟಿಗೆ ಕಣ್ಣೀರಿಡ್ತಾ?
39 ಹೊಲದ ಮಾಲೀಕನಿಗೆ ಹಣಕೊಡದೆ ಅವನ ಬೆಳೆಯನ್ನ ತಿಂದ್ನಾ?+
ಅಥವಾ ಬೇರೆಯವ್ರಿಂದ ಹೊಲ ಕಿತ್ಕೊಂಡ್ನಾ?+
40 ಒಂದುವೇಳೆ ನಾನು ಹಾಗೆ ಮಾಡಿದ್ರೆನನ್ನ ಹೊಲದಲ್ಲಿ ಗೋದಿಗೆ ಬದಲಾಗಿ ಮುಳ್ಳುಗಿಡ ಬೆಳೀಲಿ,ಬಾರ್ಲಿ* ಬದ್ಲು ಕೆಟ್ಟ ವಾಸನೆ ಇರೋ ಕಳೆಗಳು ಬೆಳೀಲಿ.”
ಇಲ್ಲಿಗೆ ಯೋಬನ ಮಾತು ಮುಗಿತು.
ಪಾದಟಿಪ್ಪಣಿ
^ ಅಕ್ಷ. “ನನ್ನ ಕಣ್ಣುಗಳ ಜೊತೆ ಒಪ್ಪಂದ ಮಾಡ್ಕೊಂಡಿದ್ದೀನಿ.”
^ ಬಹುಶಃ, “ಸುಳ್ಳು ಹೇಳುವವರ ಜೊತೆ ಸೇರ್ಕೊಂಡಿದ್ದೀನಾ?”
^ ಅಕ್ಷ. “ಮೋಸ ಮಾಡೋಕೆ ಆತುರದಿಂದ ಓಡಿದ್ದೀನಾ?”
^ ಅಥವಾ “ನನ್ನ ವಂಶದವರು ಸರ್ವನಾಶ ಆಗ್ಲಿ.”
^ ಅಥವಾ “ಮೊಕದ್ದಮೆ.”
^ ಅಕ್ಷ. “ತಾಯಿ ಗರ್ಭದಲ್ಲಿ ಇದ್ದಾಗಿಂದಲೂ.”
^ ಬಹುಶಃ, “ಪಟ್ಟಣದ ಬಾಗಿಲ ಹತ್ರ ನನಗೆ ಬೆಂಬಲ ಇದ್ದಾಗ.”
^ ಅಕ್ಷ. “ಮಾಂಸ ತಿನ್ನದಿರೋ.”
^ ಅಥವಾ “ವಿದೇಶಿ.”
^ ಅಥವಾ “ಸಹಿ.”
^ ಅಥವಾ “ಜವೆಗೋದಿ.”